ಗ್ರಾಹಕರ ಸುಖ-ದುಃಖ

My Blog List

Wednesday, October 1, 2008

ಇಂದಿನ ಇತಿಹಾಸ History Today ಅಕ್ಟೋಬರ್ 01

ಇಂದಿನ ಇತಿಹಾಸ

ಅಕ್ಟೋಬರ್ 1

ಬ್ರಿಟಿಷ್ ಸಮಾಜ ಸುಧಾರಕಿ ಹಾಗೂ ಭಾರತ ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರಾದ ಅನ್ನೀ ಬೆಸೆಂಟ್ (1847-1933) ಜನ್ಮದಿನ.

ವಿಶ್ವ ಹಿರಿಯರ ದಿನ. ಬಾಳಿನ ಮುಸ್ಸಂಜೆಯಲ್ಲಿ ಹೆಜ್ಜೆ ಹಾಕುತ್ತಿರುವ ಹಿರಿಯರಿಗೆ ಗೌರವ ಸಲ್ಲಿಸುವ  ದಿನವಿದು. ಹಿರಿಯರ ಸಮಸ್ಯೆಗಳಿಗೆ ಹಾಗೂ ಅವರನ್ನು ನಿರ್ಲಕ್ಷಿಸುವುದರಿಂದ ಉದ್ಭವಿಸುವ ಸಮಸ್ಯೆಗಳಿಗೆ ಉತ್ತರ ಕಂಡು ಕೊಳ್ಳುವ ಯತ್ನವನ್ನು ಈದಿನ ವಿಶ್ವಾದ್ಯಂತ ಮಾಡಲಾಗುತ್ತದೆ.

2007: ಆಡಳಿತಾರೂಢ ಡಿಎಂಕೆ ಹಾಗೂ ಡಿಪಿಎ ಸರ್ಕಾರದ ಕರೆಯ ಮೇರೆಗೆ ಸೇತು ಸಮುದ್ರಂ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಮಿಳ್ನಾಡು ರಾಜ್ಯದ ಬಹುತೇಕ ಕಡೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಜೊತೆಗೇ ಅಂಗಡಿಗಳು ಬಂದ್ ಆಚರಿಸಿದವು. ಈ ಸಂದರ್ಭದಲ್ಲಿ ಉಪವಾಸ ಕುಳಿತದ್ದಕ್ಕಾಗಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಈ ಛೀಮಾರಿ ಪರಿಣಾಮವಾಗಿ ಕರುಣಾನಿಧಿ ಉಪವಾಸವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದರು. ರಾಜ್ಯದೆಲ್ಲೆಡೆ `ಅಘೋಷಿತ ಬಂದ್' ಸ್ಥಿತಿ ಕಂಡುಬಂದಿತು. ಸುಪ್ರೀಂಕೋರ್ಟ್ ಛೀಮಾರಿ ಹಿನ್ನೆಲೆಯಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

 2007: ಭಾರತೀಯ ಭೂಗರ್ಭ ಸರ್ವೇಕ್ಷಣಾಲಯದ `ಸಮುದ್ರಮಂಥನ' ಹಡಗಿನ ಬದಲಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಸಮುದ್ರ ತಳ ಸಮೀಕ್ಷೆ ಮತ್ತು ಸಂಶೋಧನೆಗೆ ನೆರವಾಗುವ ಹೊಸ  ಹಡಗನ್ನು ಭೂಗರ್ಭ ಸರ್ವೇಕ್ಷಣಾಲಯಕ್ಕೆ ನೀಡಲಾಗುವುದು ಎಂದು ಕೇಂದ್ರ ಸಕರ್ಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ಮುನ್ಷಿ ಪ್ರಕಟಿಸಿದರು. ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಹೆಚ್ಚು ಕಾರ್ಯಕ್ಷಮತೆಯ ಹೊಸ ಸಂಶೋಧನಾ ಹಡಗಿನ ವೆಚ್ಚ 448ಕೋಟಿ. ರೂಪಾಯಿಗಳು.

2007: ರಾಷ್ಟ್ರದಲ್ಲಿಯೇ ಮೊತ್ತ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಮಡಿಲು' ಯೋಜನೆಗೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡುವ ಉದ್ದೇಶಕ್ಕಾಗಿ ರೂಪಿಸಲಾದ ಈ ಯೋಜನೆಯಡಿಯಲ್ಲಿ ಸಾಂಕೇತಿಕವಾಗಿ ಬೆಂಗಳೂರು ಸುತ್ತ ಮುತ್ತಲಿನ 26 ಮಹಿಳೆಯರಿಗೆ 'ಉಚಿತ ಆರೈಕೆ ಕಿಟ್' ವಿತರಿಸಲಾಯಿತು. ಯೋಜನೆಯಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಮಹಿಳೆಯರಿಗೆ ಅಗತ್ಯವಸ್ತುಗಳ ಕಿಟ್ ನೀಡಲಾಗುವುದು. ರಾಜ್ಯದ 6.5 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ.

2007: ಅಕ್ಟೋಬರ್ 2ರ ಸಂಜೆ ಒಳಗಾಗಿ ಅಧಿಕಾರ ಹಸ್ತಾಂತರ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಸಚಿವ ರಾಮಚಂದ್ರಗೌಡ ಅವರ ಮನೆಯಲ್ಲಿ ಈದಿನ ನಡೆದ ಸಭೆಯಲ್ಲಿ ಬಿಜೆಪಿಯ ಎಲ್ಲ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಈ ಪತ್ರಗಳನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಮ್ಮಿಶ್ರ ಸರ್ಕಾರ ಮುಂದುವರಿಯಲು ಕುಮಾರ ಸ್ವಾಮಿ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಜನತಾದಳ ಪಟ್ಟು ಹಿಡಿಯಿತು.

2007: ಹಬ್ಬ-ಹರಿದಿನಗಳ ಪೂರ್ವಭಾವಿಯಾಗಿ ನೀಡುವ ಬೋನಸ್ಸಿಗೆ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ದೇಶದ ಕೈಗಾರಿಕೆಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಇದರಿಂದ ಲಾಭವಾಗುವುದು. ಈ ತಿದ್ದುಪಡಿಯಿಂದಾಗಿ ಮಾಸಿಕ 10,000 ರೂಪಾಯಿಗಳವರೆಗೆ ವೇತನ ಪಡೆಯುವ ಉದ್ಯೋಗಿಗಳು ಸಹ ಬೋನಸ್ ಪಡೆಯಲು ಅರ್ಹರಾಗುವರು. ಈ ಹಿಂದೆ, ಮಾಸಿಕ 3,500 ರೂಪಾಯಿಗಳ ತನಕ ವೇತನ ಪಡೆಯುತ್ತಿದ್ದ ಕಾರ್ಮಿಕರು ಮಾತ್ರ ಈ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದರು.

2007: ಹನ್ನೊಂದು ವರ್ಷಗಳ ಹಿಂದೆ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣಯ್ಯ ಅವರನ್ನು ಹತ್ಯೆಗೈದಿದ್ದ ಆರೋಪದ ಮೇಲೆ ಮಾಜಿ ಸಂಸತ್ ಸದಸ್ಯ ಆನಂದ್ ಮೋಹನ್, ಆತನ ಪತ್ನಿ ಲವ್ಲಿ ಆನಂದ್ ಮತ್ತು ಅವರ ಐವರು ಸಹಚರರಿಗೆ ಪಟ್ನಾ ನ್ಯಾಯಾಲಯ 11 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಡಿಸೆಂಬರ್ 5, 1994ರಂದು ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಕೃಷ್ಣಯ್ಯ ಅವರನ್ನು ಗುಂಪೊಂದು ಹತ್ಯೆಗೈದಿತ್ತು. ಆ ಗುಂಪಿಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಶಿಯೋಹಾರ್ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಆನಂದ್ ಮೋಹನ್, ಸಂಸತ್ತಿನಲ್ಲಿ ವೈಶಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರ ಹೆಂಡತಿ ಲವ್ಲಿ ಆನಂದ್ ಅವರಿಗೆ ಶಿಕ್ಷೆ ವಿಧಿಸಲಾಯಿತು.

2007: ಗೋವುಗಳು ಮನುಷ್ಯರಿಗೆ ಎಲ್ಲ ರೀತಿಯಲ್ಲೂ ನೆರವಿಗೆ ಬರುವುದರಿಂದ ನಶಿಸುತ್ತಿರುವ ಗೋವುಗಳ ಸಾಕಣೆಗೆ ಒಲವು ತೋರಿಸಿ ರಕ್ಷಣೆಗೆ ಶ್ರಮಿಸಬೇಕು ಎಂದು ಕೃಷಿತಜ್ಞ ಡಾ. ನಾರಾಯಣರೆಡ್ಡಿ ಕೃಷ್ಣರಾಜಪುರದಲ್ಲಿ ವರ್ತೂರು ವಲಯ ಸಮಿತಿಯು ಏರ್ಪಡಿಸಿದ್ದ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ದೇವಸಂದ್ರ ರಾಮಕೃಷ್ಣಸ್ವಾಮಿ ವಿವೇಕಾನಂದ ಸಾಧನ ಕೇಂದ್ರದ ಸ್ಥಾಪಕ ಅಧ್ಯಕ್ಷ ಚಂದ್ರೇಶಾನಂದಜಿ ಸ್ವಾಮೀಜಿ, ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಹಾಗೂ ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.

1997: ವಿಶ್ವದ ಅತೀ ಕುಬ್ಜ ಮನುಷ್ಯ ಗುಲ್ ಮೊಹಮ್ಮದ್ (36) ನಿಧನ. 56.16 ಸೆಂ.ಮೀ. ಎತ್ತರವಿದ್ದ ಗುಲ್ ಮೊಹಮ್ಮದ್ ಈ ವಿಶೇಷತೆಯಿಂದಾಗಿಯೇ 1992ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದರು.

1995: ಖ್ಯಾತ ಕೈಗಾರಿಕೋದ್ಯಮಿ ಆದಿತ್ಯ ಬಿರ್ಲಾ ನಿಧನ.

1982: ಹೆಲ್ಮಟ್ ಕೊಹ್ಲ್ ಅವರು ಪಶ್ಚಿಮ ಜರ್ಮನಿಯ ಚಾನ್ಸಲರ್ ಆದರು.

1977: ಸಾಕರ್ ದಂತಕತೆಯಾದ ಬ್ರೆಝಿಲಿನ ಪೀಲೆ ಅವರು 1363 ಆಟಗಳಲ್ಲಿ 1281 ಗೋಲುಗಳನ್ನು ಪಡೆದ ಬಳಿಕ ಸ್ಪರ್ಧಾತ್ಮಕ ಫುಟ್ಬಾಲ್ ನಿಂದ ನಿವೃತ್ತರಾದರು.

1972: ಕೀನ್ಯಾದ ಪುರಾತತ್ವ ತಜ್ಞ ಹಾಗೂ ಮಾನವ ಜನಾಂಗದ ಅಧ್ಯಯನಕಾರ ಲೂಯಿ ಲೀಕಿ (1903-1972) ತಮ್ಮ 69ನೇ ವಯಸ್ಸಿನಲ್ಲಿ ಮೃತರಾದರು. ಅವರು ಪೂರ್ವ ಆಫ್ರಿಕಾದಲ್ಲಿಪಳೆಯುಳಿಕೆಗಳ ಕುರಿತು ನಡೆಸಿದ ಸಂಶೋಧನೆಗಳು ಮಾನವ ವಂಶದ ಹುಟ್ಟು ಹಿಂದೆ ನಂಬಿದ್ದಕ್ಕಿಂತಲೂ ಪುರಾತನವಾದದ್ದು ಹಾಗೂ ಮಾನವ ಅಭಿವೃದ್ಧಿ ಏಷ್ಯಾಕ್ಕೂ ಹೆಚ್ಚಾಗಿ ಆಫ್ರಿಕಾದಲ್ಲೇ ಕೇಂದ್ರೀಕೃತವಾಗಿತ್ತು ಎಂದೂ ಸಾಬೀತು ಮಾಡಿದವು.

1971: ಫ್ಲಾರಿಡಾದ ಓರ್ಲೆಂಡೋದಲ್ಲಿ `ವಾಲ್ಟ್ ಡಿಸ್ನಿ ವರ್ಡ್' ಆರಂಭವಾಯಿತು.

1953: ಆಂಧ್ರಪ್ರದೇಶ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಟಿ. ಪ್ರಕಾಶಂ ಮೊದಲ ಮುಖ್ಯಮಂತ್ರಿಯಾದರು. ಮದ್ರಾಸ್ ರಾಜ್ಯದ 11 ಜಿಲ್ಲೆಗಳನ್ನು ಸೇರಿಸಿ ರಚಿಸಲಾದ ಈ ರಾಜ್ಯಕ್ಕೆ ಕರ್ನೂಲ್ ರಾಜಧಾನಿಯಾಯಿತು. ಒಂದು ಜಿಲ್ಲೆಗೆ ಪ್ರಕಾಶಂ ಜಿಲ್ಲೆ ಎಂದೇ ಹೆಸರಿಡಲಾಯಿತು. ನಂತರ 1956ರ ನವೆಂಬರ್ 1ರಂದು ರಾಜ್ಯಗಳ ಪುನರ್ ವಿಂಗಡಣಾ ಸಮಿತಿಯ ಶಿಫಾರಸಿನಂತೆ ಹಿಂದಿನ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ 9 ಜಿಲ್ಲೆಗಳನ್ನು ಸೇರಿಸಿ ಆಂಧ್ರಪ್ರದೇಶವನ್ನು ವಿಸ್ತರಿಸಲಾಯಿತು. ಹೈದರಾಬಾದ್ ಅದರ ಹೊಸ ರಾಜಧಾನಿಯಾಯಿತು.

1953: ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ) ಜನನ.

 1947: ಸಾಹಿತಿ ಮಲೆಯೂರು ಗುರುಸ್ವಾಮಿ ಜನನ.

1938: ಮೈಕೆಲ್ ಫರೇರಾ ಜನ್ಮದಿನ. ಭಾರತದ ಖ್ಯಾತ ಬಿಲಿಯರ್ಡ್  ಆಟಗಾರರಾದ ಇವರು ಬಿಲಿಯರ್ಡಿನ `ವರ್ಲ್ಡ್ ಅಮೆಚೂರ್ ಪ್ರಶಸ್ತಿ'ಯನ್ನು ಮೂರು ಬಾರಿ ಗೆದ್ದಿದ್ದರು.

1931: ಸಾಹಿತಿ ಬಿ.ಆರ್. ನಾಗೇಶ್ ಜನನ.

1930: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ (1930-2000) ಜನ್ಮದಿನ.

1927: ಖ್ಯಾತ ತಮಿಳು ಚಿತ್ರ ನಟ ಶಿವಾಜಿ ಗಣೇಶನ್ (1927-2001) ಜನ್ಮದಿನ. ಇವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1912: ಸಾಹಿತಿ ವಿ.ಎಂ. ಇನಾಂದಾರ್ ಜನನ.

1912: ಸಾಹಿತಿ ಗೌರಮ್ಮ ಜನನ.

1895: ಪಾಕಿಸ್ಥಾನದ ಪ್ರಥಮ ಪ್ರಧಾನಿ ಲಿಯಾಖತ್ ಅಲಿ ಖಾನ್ (1895-1956) ಜನ್ಮದಿನ.

1885: ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರು ಎಂದೇ ಖ್ಯಾತರಾಗಿದ್ದ ಟಿ.ಎಸ್. ವೆಂಕಣ್ಣಯ್ಯ (1-10-1885ರಿಂದ 24-2-1939) ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಜನಿಸಿದರು.

1880: ಎಡಿಸನ್ ಲ್ಯಾಂಪ್ ವರ್ಕ್ಸ್ ನ್ಯೂಜೆರ್ಸಿಯಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ಬಲ್ಬ್ ತಯಾರಿ ಕಾರ್ಯವನ್ನು ಆರಂಭಿಸಿತು.

1854: ಭಾರತದಲ್ಲಿ ಮೊದಲ ಬಾರಿಗೆ ಅಂಚೆ ಚೀಟಿ ಪರಿಚಯ. ಅರ್ಧ ಮತ್ತು ಒಂದು ಆಣೆಯ ಈ ಅಂಚೆ ಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಭಾವಚಿತ್ರ ಮುದ್ರಿಸಲಾಗಿತ್ತು.

1847: ಬ್ರಿಟಿಷ್ ಸಮಾಜ ಸುಧಾರಕಿ ಹಾಗೂ ಭಾರತ ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರಾದ ಅನ್ನೀ ಬೆಸೆಂಟ್ (1847-1933) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement