Saturday, October 4, 2008

ಇಂದಿನ ಇತಿಹಾಸ History Today ಅಕ್ಟೋಬರ್ 04

ಇಂದಿನ ಇತಿಹಾಸ

ಅಕ್ಟೋಬರ್ 4

 ಭಾರತದ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆ ಮಹಾ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗರೆಂಬ ಖ್ಯಾತಿಗೆ ಪಾತ್ರರಾದರು.

2007: ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಗಮನಿಸಿ ದೆಹಲಿ ಮೂಲದ ಕೂಚಿಪುಡಿ ನೃತ್ಯ ಕಲಾವಿದೆ ಯಾಮಿನಿ ರೆಡ್ಡಿ ಅವರನ್ನು ಪ್ರಸಕ್ತ ಸಾಲಿನ `ದೇವದಾಸಿ ರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು.

2007: ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ವಿಶ್ವನಾಥನ್ ಆನಂದ್ ಅವರಿಗೆ ತಮಿಳುನಾಡು ಸರ್ಕಾರವು 25 ಲಕ್ಷ ರೂಪಾಯಿಯ ಬಹುಮಾನವನ್ನು ಪ್ರಕಟಿಸಿತು. ಆನಂದ್ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಕರುಣಾನಿಧಿ ಅವರು 25 ಲಕ್ಷ ರೂಪಾಯಿಯ ನಗದು ಬಹುಮಾನವನ್ನು ಪ್ರಕಟಿಸಿದರು. ಅಲ್ಲದೆ, ಇತರ 28 ಕ್ರೀಡಾಳುಗಳಿಗೆ 96.05 ಲಕ್ಷ ರೂಗಳ ಬಹುಮಾನವನ್ನೂ ಘೋಷಿಸಿದರು.

2006: ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಡಾ. ರಾಣಿ ಅಭಯ್ ಬಾಂಗ್ ಮತ್ತು ರಾಷ್ಟ್ರೀಯ ಯುವಜನ ಯೋಜನೆ ನಿರ್ದೇಶಕ ಡಾ. ಎಸ್. ಎನ್. ಸುಬ್ಬರಾವ್ ಅವರು ಪ್ರಸ್ತುತ ಸಾಲಿನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಗೆ ಆಯ್ಕೆಯಾದರು.

2006: ಮಾನವ ದೇಹದ ವಂಶವಾಹಿಯಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಪ್ರೊಟೀನುಗಳನ್ನು ಉತ್ಪತ್ತಿ ಮಾಡುವ ಜೀವಕೋಶಕ್ಕೆ ಕೂಡಾ ವರ್ಗಾಯಿಸಬಹುದು ಎಂಬ ಮಹತ್ವದ ಸಂಶೋಧನೆ ನಡೆಸಿದ್ದಕ್ಕಾಗಿ ಅಮೆರಿಕದ ರೋಜರ್ ಡಿ. ಕಾರ್ನ್ ಬರ್ಗ್ ಅವರು ರಸಾಯನಶಾಸ್ತ್ರದಲ್ಲಿ ಮಾಡಿದ ಸಂಶೋಧನೆಗೆ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು. ರೋಜರ್ ಅವರ ತಂದೆ ಆರ್ಥರ್ ಕಾರ್ನ್ ಬರ್ಗ್ ಅವರು ಕೂಡಾ 1959ರಲ್ಲಿವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕನಸಿನ ಕೂಸಾದ `ಗರೀಬ್ ರಥ್' ಹವಾನಿಯಂತ್ರಿತ ರೈಲು ಬಿಹಾರಿನ ಸಹರ್ಸಾದಿಂದ ಅಮೃತಸರಕ್ಕೆ ಚೊಚ್ಚಲ ಪಯಣ ನಡೆಸಿತು. ಬಡವರು ಹಾಗೂ ಕೂಲಿ ಕಾರ್ಮಿಕರೂ ಹವಾ ನಿಯಂತ್ರಿತ ರೈಲಿನಲ್ಲಿ ಪಯಣಿಸುವಂತಾಗಬೇಕು ಎಂಬ ಆಶಯದಿಂದ ಲಾಲೂ ಅವರು ಆರಂಭಿಸಿದ ಈ ರೈಲಿನ ಚೊಚ್ಚಲ ಪಯಣದಲ್ಲಿ ಕೇವಲ 25 ಪಯಣಿಗರು ಇದ್ದರು. ರೈಲಿನಲ್ಲಿ 1500 ಆಸನಗಳಿವೆ. ದರ ಅರ್ಧಕ್ಕರ್ಧ ಕಡಿಮೆ.

2006: ಎಲ್ಲ ಉಳಿತಾಯ ಖಾತೆದಾರರಿಗೂ ಪಾಸ್ ಪುಸ್ತಕ ನೀಡಬೇಕಾದ್ದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ವಾಣಿಜ್ಯ ಬ್ಯಾಂಕುಗಳಿಗೆ ತಾಕೀತು ಮಾಡಿತು. ಹಲವಾರು ಬ್ಯಾಂಕುಗಳು ಪಾಸ್ ಪುಸ್ತಕ ನೀಡುವ ಬದಲು 4 ತಿಂಗಳಿಗೊಮ್ಮೆ ಖಾತೆಯ ಸ್ಟೇಟ್ ಮೆಂಟ್ ಮಾತ್ರ ನೀಡುವ ಕ್ರಮ ಕೈಬಿಡಬೇಕು ಎಂದು ಅದು ಸುತ್ತೋಲೆಯಲ್ಲಿ ತಿಳಿಸಿತು.

2006: ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿ ಕನ್ನಡಪರ ಸಂಘಟನೆಗಳು ನೀಡಿದ `ಕರ್ನಾಟಕ ಬಂದ್' ಕರೆಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ಲಭಿಸಿತು. ಇಡಿ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು.

1996: ಪಾಕಿಸ್ತಾನದ ಶಾಹಿದ್ ಆಫ್ರಿದಿ ಅವರು ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಕೇವಲ 37 ಬಾಲ್ ಗಳಿಗೆ ಶತಕ ಬಾರಿಸುವ ಮೂಲಕ ಒಂದು ದಿನದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಅವರು ಮಾಡಿದ್ದ `ಅತಿ ವೇಗದ ಶತಕ' ದಾಖಲೆಯನ್ನು ಮುರಿದರು. ಹಿಂದೆ ದಾಖಲೆ ಮಾಡಿದ್ದ ಜಯಸೂರ್ಯ ಅವರ ಬಾಲಿನಿಂದಲೇ 2 ಓವರುಗಳಲ್ಲಿ 43 ರನ್ನುಗಳನ್ನು ಆಫ್ರಿದಿ ಗಳಿಸಿದರು.

1986: ಭಾರತೀಯ ಹೆಲಿಕಾಪ್ಟರ್ ನಿಗಮ ಅಸ್ತಿತ್ವಕ್ಕೆ ಬಂದಿತು.

1977:  ಭಾರತದ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆ ಮಹಾ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗರೆಂಬ ಖ್ಯಾತಿಗೆ ಪಾತ್ರರಾದರು.

1972: ಫುಟ್ ಬಾಲ್ ಆಟಗಾರ ರಾಮನ್ ವಿಜಯನ್ ಜನನ.

1970: ಅಮೆರಿಕದ ರಾಕ್ ಹಾಡುಗಾರ್ತಿ ಜಾನಿಸ್ ಜೋಪ್ಲಿನ್ ಅವರು ಹಾಲಿವುಡ್ ಹೊಟೇಲ್ ಒಂದರ ಕೊಠಡಿಯಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಹೆರಾಯಿನ್ ಅತಿ ಸೇವನೆಯಿಂದ ಈ ಸಾವು ಸಂಭವಿಸಿತ್ತು. ಆಗ ಆಕೆಯ ವಯಸ್ಸು ಕೇವಲ 27 ವರ್ಷ.

1957: ಸೋವಿಯತ್ ಒಕ್ಕೂಟವು ಮೊತ್ತ ಮೊದಲ ಮಾನವ ನಿರ್ಮಿತ ಉಪಗ್ರಹ `ಸ್ಪುಟ್ನಿಕ್ 1'ನ್ನು ಕಕ್ಷೆಗೆ ಹಾರಿಸುವುದರೊಂದಿಗೆ ಬಾಹ್ಯಾಕಾಶ ಯುಗ ಆರಂಭವಾಯಿತು. ಅದು ಕಕ್ಷೆಯಲ್ಲಿ ಭೂಮಿಗೆ 96 ನಿಮಿಷಗಳಿಗೆ ಒಂದರಂತೆ ಪ್ರದಕ್ಷಿಣೆ ಹಾಕಿತು. ಇದೇ ಸ್ಥಿತಿಯಲ್ಲಿ 1958ರ ಆದಿಯವರೆಗೂ ಅದು ಕಕ್ಷೆಯಲ್ಲಿ ಕಾರ್ಯಾಚರಿಸಿ, ನಂತರ ಉರಿದು ಬಿತ್ತು. `ಲಾಯಿಕಾ' ಎಂಬ ನಾಯಿಯನ್ನು ಹೊತ್ತೊಯ್ದ ಸ್ಪುಟ್ನಿಕ್ 2 ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾಗೂ ಭೂ ಕಕ್ಷೆಗೆ ಜೀವಂತ ಪ್ರಾಣಿಯನ್ನು ಮೊದಲಿಗೆ ಒಯ್ದ ಹೆಗ್ಗಳಿಕೆಗೆ ಪಾತ್ರವಾಯಿತು.

1948: ಸಾಹಿತಿ ಮೇಗರವಳ್ಳಿ ರಮೇಶ್ ಜನನ.

1940: ಅಡಾಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೋಲಿನಿ ಅವರು ಆಲ್ಪ್ಸ್ ಪರ್ವತದ ಬ್ರೆನ್ನರ್ ಕಣಿವಯಲ್ಲಿ ಭೇಟಿಯಾದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಇಟಲಿಯ ನೆರವನ್ನು ಈ ಸಂದರ್ಭದಲ್ಲಿ ನಾಜಿ ನಾಯಕ ಯಾಚಿಸಿದ.

1916: ಸಾಹಿತಿ ರಾಜೇಶ್ವರಿ ನರಸಿಂಹಮೂರ್ತಿ ಜನನ.

1916: ಮಹಾ ಮಾನವತಾವಾದಿ, ಕಣ್ಣಿನ ವೈದ್ಯ ಡಾ. ಎಂ.ಸಿ. ಮೋದಿ (4-10-1916ರಿಂದ 11-11-2005) ವಿಜಾಪುರ ಜಿಲ್ಲೆಯಲ್ಲಿ ಜನಿಸಿದರು. ವೃದ್ಧರ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ದುಬಾರಿಯಾಗಿದ್ದ ಕಾಲದಲ್ಲಿ ಶಿಬಿರಗಳ ಮೂಲಕ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸಾ ಅಭಿಯಾನವನ್ನೇ ಕೈಗೊಂಡ ಮೋದಿ ಜನರ ನೆಚ್ಚಿನ `ನೇತ್ರದಾನಿ' ಆಗಿದ್ದರು.  

1884: ಖ್ಯಾತ ಸಾಹಿತಿ ಹುಯಿಲಗೋಳ ನಾರಾಯಣರಾಯರು (4-10-1884ರಿಂದ 4-7-1971ರವರೆಗೆ) ಕೃಷ್ಣರಾಯರು- ಬಹೆಣಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು.  ಕನ್ನಡಿಗರ ಮೈ ನವಿರೇಳಿಸುವ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯ ಕತೃ ಇವರೇ. 1924ರಲ್ಲಿ ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖ್ಯಾತ ಗಾಯಕ ಸುಬ್ಬರಾಯರು ಈ ಗೀತೆಯನ್ನು ಹಾಡಿದಾಗ ಜನ ಪುಳಕಿತರಾಗಿ ಹರ್ಷೋದ್ಘಾರ ಮಾಡಿದರು.

1857: ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಜಿ ಕೃಷ್ಣವರ್ಮ ಜನನ.

1847: ಮರಾಠ ದೊರೆ ಪ್ರತಾಪ್ ಸಿಂಗ್ ಬೋಸ್ಲೆ ನಿಧನ.

No comments:

Advertisement