My Blog List

Saturday, October 4, 2008

ನಿಮ್ಮೊಳಗಿನ `ಮಹಾತ್ಮ'ನನ್ನು ಹುಡುಕಿಕೊಳ್ಳಿ..! Find out 'Mahatma' within you..!

Find out 'Mahatma'  within you..!

When October 2 arrives, everybody remembers Mahatma Gandhi and forgets him from the next day itself. Everybody says that Gandhian and principles are more relevant today to find solutions for the present day problems. But is there any way to teach Gandhian principles to our younger generation? ‘Yes, We have' says Gandhi Peace Foundation Chennai. Want more about it?  Some hints are here by Nethrakere Udaya Shankara

ನಿಮ್ಮೊಳಗಿನ `ಮಹಾತ್ಮ'ನನ್ನು

 ಹುಡುಕಿಕೊಳ್ಳಿ..!

ತಮ್ಮೊಳಗಿನ `ಮಹಾತ್ಮ'ನನ್ನು ತಟ್ಟಿ ಎಬ್ಬಿಸಿ ಗಾಂಧೀಜಿ `ಮಹಾತ್ಮ'ರಾದರು. ಅವರು ಅದನ್ನು ಸಾಧಿಸಿದ್ದು ಹೇಗೆ ಎಂದು ಅರಿತುಕೊಂಡರೆ ನೀವು ಮತ್ತು ನಾವೂ `ಮಹಾತ್ಮ'ರಾಗಬಹುದು. ಇಂದಿನ ಜ್ವಲಂತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಗಾಂಧೀಜಿ ಬದುಕು, ಚಿಂತನೆಗಳ ಬಗ್ಗೆ ಅಧ್ಯಯನ ಮಾಡಲು ಈಗ ಕೋರ್ಸುಗಳೂ ಇವೆ....

ನೆತ್ರಕೆರೆ ಉದಯಶಂಕರ

ಅಕ್ಟೋಬರ್ 2. ಮತ್ತೊಂದು ಗಾಂಧಿ ಜಯಂತಿ. ಮತ್ತೊಂದಷ್ಟು ಭಾಷಣ, ಸಮಾರಂಭ. ನಂತರ ಗಾಂಧೀಜಿ ನೆನಪಿನಿಂದ ಆಚೆಗೆ; ಮರೆಗೆ. ಏಕೆ ಹೀಗೆ? ಮಹಾತ್ಮಾ ಗಾಂಧಿಯನ್ನು ನಾವು ಮರೆಯುತ್ತಿದ್ದೇವೆಯೇ? ಹಿಂಸೆ, ಭಯೋತ್ಪಾದನೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಗಾಂಧಿ ಚಿಂತನೆ, ವಿಚಾರಧಾರೆಗಳೆಲ್ಲ ಹೆಚ್ಚು ಪ್ರಸ್ತುತ ಎಂದು ಹೇಳುವುದೆಲ್ಲ ಬರೀ ಸುಳ್ಳೇ? ಸುಳ್ಳು ಅಲ್ಲವಾದರೆ ಇಂದಿನ ಮಕ್ಕಳಿಗೆ, ಯುವ ಜನಾಂಗಕ್ಕೆ ಗಾಂಧಿ `ಮಹಾತ್ಮ'ನಾದದ್ದು ಹೇಗೆ ಎಂದು ಕಲಿಸಿ ಕೊಡುವ ಪ್ರಯತ್ನ, ವ್ಯವಸ್ಥೆ ನಮ್ಮಲ್ಲಿ ಇದೆಯೇ?

ಸರ್ಕಾರದಿಂದ ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಆದರೆ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ (ಗಾಂಧಿ ಪೀಸ್ ಫೌಂಡೇಶನ್) ಉತ್ತರ ಇದೆ. ಗಾಂಧಿ ತತ್ವವನ್ನು ಎಲ್ಲೆಡೆಗೆ, ಅದರಲ್ಲೂವಿಶೇಷವಾಗಿ ವಿದ್ಯಾರ್ಥಿಗಳಿಗೆ ಪಸರಿಸುವ ಕೆಲಸಕ್ಕೆ ಅದು ಟೊಂಕ ಕಟ್ಟಿದೆ. ಈ ಕಾರ್ಯ ಮಾಡುತ್ತಿರುವುದು ಮದ್ರಾಸಿನ ಗಾಂಧಿ ಶಾಂತಿ ಪ್ರತಿಷ್ಠಾನ.

ತಮಿಳುನಾಡಿನ ಚೆನ್ನೈಯಲ್ಲಿ ಇರುವ ಗಾಂಧಿ ಶಾಂತಿ ಪ್ರತಿಷ್ಠಾನ ಮದ್ರಾಸ್ ಆರಂಭವಾದದ್ದು ದೆಹಲಿ ಗಾಂಧಿ ಪ್ರತಿಷ್ಠಾನದ ಶಾಖೆಯಾಗಿ. 1995ರಿಂದ ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸತ್ಯ, ಅಹಿಂಸೆಯನ್ನು ಸಮಾಜ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಗಳಲ್ಲಿ ಅನುಷ್ಠಾನಕ್ಕೆ ತರಲು ಜನರನ್ನು ಪ್ರಚೋದಿಸುವುದು ಇದರ ಗುರಿ. ಸತ್ಯ, ಶಾಂತಿ, ಅಹಿಂಸೆಯ ಮಾರ್ಗದಿಂದ ನ್ಯಾಯ ಗಳಿಸುವ ಗಾಂಧಿ ತತ್ವವನ್ನು ಎಲ್ಲೆಡೆಗೆ ಹರಡುವ ಮೂಲಕ ಈ ಕಾರ್ಯವನ್ನು ಮಾಡಬೇಕು ಎನ್ನುವುದು ಅದರ ಆಶಯ.

`ಮಹಾತ್ಮ' ನಮ್ಮಲ್ಲೇ ಇದ್ದಾನೆ. ಶಾಂತಿ ಜನಕನನ್ನು ನಮ್ಮಲ್ಲೇ ಹುಡುಕಿಕೊಳ್ಳಬೇಕು. ಶಾಂತಿ, ಸೌಹಾರ್ದತೆಯ ಬದುಕು ರೂಪಿಸುವುದಕ್ಕಾಗಿ ಮಾನವೀಯತೆ ಮೈಗೂಡಿಸಿಕೊಂಡ ಹೊಸ ಜನಾಂಗ ಹುಟ್ಟು ಹಾಕಲು ನಮ್ಮೊಂದಿಗೆ ಸೇರಿಕೊಳ್ಳಿ ಎಂಬುದು ಪ್ರತಿಷ್ಠಾನದ ಮನವಿ.

ಹಾಗಾದರೆ ಈ ನಿಟ್ಟಿನಲ್ಲಿ ಪ್ರತಿಷ್ಠಾನ ಏನು ಮಾಡುತ್ತಿದೆ?

ಮುಖ್ಯವಾಗಿ ವಿದ್ಯಾರ್ಥಿಗಳು, ಯುವಕರ ಮನಸ್ಸಿನಲ್ಲಿ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಾದ ಸರಳತೆ, ಪರಸ್ಪರ ನೆರವು, ವಿಶ್ವಾಸ, ಸಹಕಾರ, ಆರೋಗ್ಯಕರವಾದ ಸ್ವಚ್ಛ ಬದುಕಿನ ನಿರ್ವಹಣೆ, ದೈಹಿಕ ಶ್ರಮದ ಗೌರವ, ಪರಿಸರ ರಕ್ಷಣೆ ಹಾಗೂ ನಿರ್ವಹಣೆ- ಇವುಗಳ ಬಗ್ಗೆ  ಆಸಕ್ತಿ ಮೂಡಿಸುವುದು. ಅದಕ್ಕಾಗಿ ಶಿಕ್ಷಣ, ಶಿಬಿರ, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಶಾಂತಿ ಹಾಗೂ ಸಾಮಾಜಿಕ ಸೌಹಾರ್ದಕ್ಕೆ ಇದೇ ಪರಿಣಾಮಕಾರಿ ಮಾರ್ಗ ಎಂಬುದು ಪ್ರತಿಷ್ಠಾನದ ನಂಬಿಕೆ.

ಅದಕ್ಕಾಗಿಯೇ ಶಾಂತಿ, ನೈತಿಕತೆ, ಸಮಾಜ ಕಲ್ಯಾಣ ಮತ್ತಿತರ ವಿಷಯಗಳ ಮೇಲೆ ಇಂಗ್ಲಿಷ್ ಭಾಷೆಯ್ಲಲಿ ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರತಿಷ್ಠಾನ ನಡೆಸುತ್ತಿದೆ.

ತುಟ್ಟಿ ಅಲ್ಲ: 

ಈ ಕೋರ್ಸುಗಳು ತುಟ್ಟಿಯಲ್ಲ. ಇವುಗಳಿಗೆ ಪ್ರತಿಷ್ಠಾನ ನಿಗದಿ ಪಡಿಸಿರುವ ಶುಲ್ಕ ಶಾಲಾ ವಿದ್ಯಾರ್ಥಿಗಳಿಗೆ ತಲಾ 15 ರೂಪಾಯಿ ಮಾತ್ರ. 

ನಾಲ್ಕನೆಯ ತರಗತಿಗೆ `ಮಕ್ಕಳಿಗಾಗಿ ಗಾಂಧಿ', ಐದನೇ ತರಗತಿಗೆ `ಶಾಂತಿಗಾಗಿ ಮಕ್ಕಳು', ಆರನೇ ತರಗತಿಗೆ `ವಿದ್ಯಾರ್ಥಿಯಾಗಿ ಗಾಂಧಿ', 7ನೇ ತರಗತಿಗೆ `ವಕೀಲರಾಗಿ ಗಾಂಧಿ' 8ನೇ ತರಗತಿಗೆ `ಸತ್ಯಾಗ್ರಹಿಯಾಗಿ ಗಾಂಧಿ', 9 ಮತ್ತು 10ನೇ ತರಗತಿಗಳಿಗೆ `ರಚನಾತ್ಮಕ ಕಾರ್ಯಕರ್ತನಾಗಿ ಗಾಂಧಿ' ಹಾಗೂ 11 ಮತ್ತು 12ನೇ ತರಗತಿಗಳಿಗೆ `ವೈದ್ಯರಾಗಿ ಗಾಂಧಿ' ಕೋರುಗಳಿವೆ.

ಜೀವನದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಮೌಲ್ಯಗಳಿಗೆ ಅನುಗುಣವಾಗಿ ಗಾಂಧೀಜಿ ಹೇಗೆ ನಡೆದುಕೊಂಡರು ಎಂಬುದನ್ನು ಈ ಕೋರ್ಸುಗಳು ಪರಿಚಯ ಮಾಡಿ ಕೊಡುತ್ತವೆ.

ಈ ಕೋರ್ಸುಗಳ ಶುಲ್ಕ ಕಾಲೇಜು ವಿದ್ಯಾರ್ಥಿಗಳಿಗೆ ತಲಾ 20 ರೂಪಾಯಿ. ಶಿಕ್ಷಕರೂ ಈ ಕೋರ್ಸುಗಳಿಗೆ ಹಾಜರಾಗಬಹುದು. ಅವರಿಗೆ ಶುಲ್ಕ  ತಲಾ 30 ರೂಪಾಯಿ.

ದಾಖಲಾತಿ ಹೇಗೆ?

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲೆ, ಕಾಲೇಜುಗಳ ಮೂಲಕ ಈ ಕೋರ್ಸುಗಳಿಗೆ ತಮ್ಮ ಹೆಸರು ದಾಖಲು ಮಾಡಬಹುದು. ಪಠ್ಯ ಪುಸ್ತಕ ಮತ್ತು ಇತರ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಯಲ್ಲಿ ಅಂಚೆ ಮೂಲಕ ಪ್ರತಿಷ್ಠಾನ ಕಳುಹಿಸಿಕೊಡುತ್ತದೆ.

ಗಾಂಧಿ ತತ್ವ, ಸಿದ್ಧಾಂತ, ಚಿಂತನೆಗಳನ್ನು ಅರ್ಥವಾಗುವಂತೆ ಮಾಡುವುದು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರಚೋದನೆ ನೀಡುವುದು ಈ ಕೋರ್ಸುಗಳ ಉದ್ದೇಶ.

ಒಳ್ಳೆಯತನ, ಸತ್ಯ, ಏಕತೆ, ಸಾಂಘಿಕ ಬದುಕು ಇವು ಮನುಷ್ಯನ ಮೂಲ ಗುಣಗಳು. ಆದರೆ ಜಗತ್ತಿನ ದಿಕ್ಕು ಈಗ ವಿಭಜನೆ, ಅಸತ್ಯ, ಹಿಂಸೆಗಳತ್ತ ತಿರುಗುತ್ತಿದೆ. ಜಗತ್ತಿನಿಂದ ಹಿಂಸೆ ಮತ್ತು ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಮಾನವನ ಮೂಲಗುಣಗಳಾದ ಒಳ್ಳೆಯತನವನ್ನು ಬಲಪಡಿಸಬೇಕು. ನಮ್ಮೊಳಗಿನ `ಮಹಾತ್ಮ'ನನ್ನು ಎಬ್ಬಿಸಬೇಕು. ಮಕಳಲ್ಲಿ ಇದನ್ನು ಬಲಪಡಿಸಿದ್ದೇ ಆದರೆ ಗಾಂಧಿ ಕನಸಿನ ರಾಮರಾಜ್ಯ ನಿರ್ಮಾಣ ಸುಲಭ ಎನ್ನುತ್ತದೆ ಪ್ರತಿಷ್ಠಾನ.

ಏನಿದ್ದರೂ ಸಕಾರಾತ್ಮಕ ಚಿಂತನೆ ನಮ್ಮದು. ನಕಾರಾತ್ಮಕ ದೃಷ್ಟಿಕೋನ ನಮಗಿಲ್ಲ. ಶಾಂತಿಯುತ ಜಗತ್ತಿನ ನಿರ್ಮಾಣ ಉದ್ದೇಶದ
ಈ ಕಾರ್ಯಕ್ಕೆ ಎಲ್ಲರೂ ಒಟ್ಟಾಗಬೇಕು ಎಂಬುದು ಅದರ ಕರೆ.

ಆಸಕ್ತರು ನಿಗದಿತ ಶುಲ್ಕವನ್ನು, ಅಂಚೆ ವೆಚ್ಚಕ್ಕಾಗಿ 20 ರೂಪಾಯಿಗಳನ್ನು ಸೇರಿಸಿ ಮನಿ ಆರ್ಡರ್ ಅಥವಾ ಡಿಡಿ ರೂಪದಲ್ಲಿ `ಗಾಂಧಿ ಪೀಸ್ ಫೌಂಡೇಶನ್' ಪಾವತಿಯಾಗುವಂತೆ ಕಳುಹಿಸಿ `ಗಾಂಧಿ ವಿಚಾರಧಾರೆ'ಯ ಶಿಕ್ಷಣ ಪಡೆಯಬಹುದು. ನಿಮ್ಮೊಳಗಿನ `ಮಹಾತ್ಮ'ನನ್ನು ಹುಡುಕಿಕೊಳ್ಳಬಹುದು.

ವಿವರಗಳಿಗೆ ಇಮೇಲ್: gpf_madras@yahoo.co.in

ಅಥವಾ  ವೆಬ್ ಸೈಟ್  www.gandhipeacefoundationmadras.org.in   ನೋಡಬಹುದು.
 

No comments:

Advertisement