Tuesday, November 4, 2008

ಇಂದಿನ ಇತಿಹಾಸ History Today ನವೆಂಬರ್ 04

ಇಂದಿನ ಇತಿಹಾಸ

ನವೆಂಬರ್ 4

ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಹುಟ್ಟಿದ ದಿನ. 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ ಒಂದು ನಿಮಿಷಕ್ಕೂ ಹೆಚ್ಚು ಸಮಯವನ್ನು ತೆಗೆದುಕೊಂಡಿತು.

2007: ಪಾಕಿಸ್ಥಾನದ ಪ್ರತಿಪಕ್ಷಗಳ ಪ್ರಮುಖ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಗೃಹ ಬಂಧನದಿಂದ ತಪ್ಪಿಸಿಕೊಂಡರು. ಈ 
ಸಂಗತಿಯನ್ನು ಅವರ ಸಂಬಂಧಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಇಮ್ರಾನ್ ಖಾನ್ ಮತ್ತು ಅವರ ಎಂಟು ಜನ ಬೆಂಬಲಿಗರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. 

2007: ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಕಳುಹಿಸಿಕೊಡುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಭರವಸೆ ನೀಡಿದ ಮೇಲೆ ಭಾರತೀಯ ಜನತಾ ಪಕ್ಷವು ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಆರಂಬಿಸಿದ್ದ  ಧರಣಿಯನ್ನು ಈದಿನ ಸಂಜೆ ಮುಕ್ತಾಯಗೊಳಿಸಿತು. ಜೊತೆಗೆ ರಥಯಾತ್ರೆ ಸೇರಿದಂತೆ ತನ್ನೆಲ್ಲ ಹೋರಾಟದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿತು. ಬಿ.ಎಸ್. ಯಡಿಯೂರಪ್ಪ ತಮ್ಮ ಎರಡು ದಿನಗಳ ಮೌನವನ್ನು ಮುರಿದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೌನದ ಮೊರೆ ಹೊಕ್ಕರು. ಚುನಾವಣೆ ಒಂದೇ ಪರಿಹಾರ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮರು ಮೈತ್ರಿ ವಿರುದ್ಧ ಜನಾಂದೋಲನ ಕಾರ್ಯಕ್ರಮದ ಸಿದ್ಧತೆಗೆ ತೊಡಗಿತು.

2007: ವಿಮಾ ಕಂಪೆನಿಗಳ ಕಾನೂನನ್ನು ಪಾಲಿಸಿರುವಾಗ, ಇತರ ಕಾನೂನು ಉಲ್ಲಂಘನೆಗಳನ್ನು ನೆಪವಾಗಿಟ್ಟುಕೊಂಡು ಗ್ರಾಹಕರಿಗೆ ವಿಮೆ ಹಣ ನೀಡದೇ ಇರುವುದು ತಪ್ಪು ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ (ರಾಷ್ಟ್ರೀಯ ಗ್ರಾಹಕ ವಿವಾದಗಳ ನಿವಾರಣಾ ಆಯೋಗ) ತೀರ್ಪು ನೀಡಿತು. `ವಿಮೆ ಎಂಬುದು ಕಂಪೆನಿ ಮತ್ತು ಪಾಲಿಸಿದಾರರ ನಡುವಿನ ಒಪ್ಪಂದ. ಪಾಲಿಸಿದಾರ ವಿಮಾ ಕಂಪೆನಿಯ ನೀತಿ ನಿಯಮಗಳನ್ನು ಉಲ್ಲಂಘಿಸದೇ ಇರುವಾಗ ವಿಮಾ ಹಣವನ್ನು ನೀಡಲು ನಿರಾಕರಿಸಬಾರದು' ಎಂದು ನ್ಯಾಯಮೂರ್ತಿ ಎಂ.ಬಿ. ಷಾ, ಸದಸ್ಯರಾದ ರಾಜ್ಯ ಲಕ್ಷ್ಮಿ ರಾವ್ ಮತ್ತು ಕೆ.ಎಸ್. ಗುಪ್ತಾ ಅವರ ನೇತೃತ್ವದ ಪೀಠ ಹೇಳಿತು. ತಮಿಳುನಾಡಿನಲ್ಲಿ ಅಪಘಾತ ಮಾಡಿದ ಕಾರಿನ ಮಾಲೀಕನ ಬಳಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ಅಗತ್ಯವಾಗಿ ಇರಬೇಕಾದ `ಅರ್ಹತೆ ಪ್ರಮಾಣ ಪತ್ರ'ದ ಅವಧಿ ಮುಗಿದುಹೋಗಿತ್ತು ಎಂಬ ನೆಪ ನೀಡಿ ಯುನೈಟೆಡ್ ಇನ್ಶೂರೆನ್ಸ್ ಸಂಸ್ಥೆ ವಿಮಾ ಪರಿಹಾರದ ಹಣ ನೀಡಲು ನಿರಾಕರಿಸಿತ್ತು. ಈ ಸಂಬಂಧ ತಮಿಳುನಾಡಿನ ರಾಜ್ಯ ಗ್ರಾಹಕ ನ್ಯಾಯಾಲಯ, ವಿಮಾ ಪಾಲಿಸಿಗಳು ಶಾಸನಬದ್ಧ ಒಪ್ಪಂದಗಳಲ್ಲ ಎಂದು ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಕ್ಕೆ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಗೂ ವಿಮಾ ಕಂಪೆನಿಯ ನಿಯಮಾವಳಿಗಳಿಗೂ ಸಂಬಂಧವಿಲ್ಲ ಎಂದು ತೀರ್ಮಾನಿಸಿದ ಆಯೋಗ ವ್ಯಕ್ತಿ, ಕಾರಿಗೆ ಮಾಡಿಸಿದ್ದ ವಿಮಾ ಹಣ ನೀಡುವಂತೆ ಆದೇಶಿತು.

2007: ಮೊಬೈಲ್ ಚಾರ್ಜರುಗಳು ಇನ್ನು ಮುಂದೆ ಹಳೆಯ ಸರಕಾಗಲಿವೆ. ನೋಟುಗಳ ಸಹಾಯದಿಂದ ಮೊಬೈಲ್ ರೀಚಾರ್ಜು ಮಾಡಲು ಸಾಧ್ಯ ಎಂಬುದನ್ನು ಪುರಿ ನಗರದ ಯುವಕನೊಬ್ಬ ಕಂಡುಹಿಡಿದ. ಎಲೆಕ್ಟ್ರಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 20 ವರ್ಷದ ತಪನ್ ಕುಮಾರ್ ಪತ್ರ, ಬಹಳ ದಿನಗಳಿಂದ ತಾನು ಪ್ರಯೋಗಿಸುತ್ತಿದ್ದ ಕರೆನ್ಸಿ ನೋಟುಗಳ ಮೂಲಕ ಒಂದೇ ನಿಮಿಷದಲ್ಲಿ ನೋಕಿಯಾ ಮೊಬೈಲಿನ ಬ್ಯಾಟರಿಯನ್ನು ರೀಚಾರ್ಜ್ ಮಾಡುವ ತನ್ನ ಸಂಶೋಧನೆಯನ್ನು ಪ್ರದರ್ಶಿಸಿ ತೋರಿಸಿದ.

2007: `ಸಮಾಜದಲ್ಲಿ ಈಗ ಭಾವನೆಗಳೇ ಸತ್ತಿವೆ. ಪ್ರತಿಯೊಬ್ಬರೂ ವ್ಯಾವಹಾರಿಕವಾಗಿಯೇ ಜೀವಿಸುತ್ತಿದ್ದಾರೆ. ಹೀಗಾಗಿ ಭಾವನೆಗಳ ಜಾಗೃತಿಯಾಗಬೇಕು' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಹೇಳಿದರು. ಗೋ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದ ಅವರು ಗೋವುಗಳೆಂದರೆ  ಕಾಮಧೇನು. ಎಲ್ಲರೂ ಗೋ ಸಂರಕ್ಷಣೆ ಮಾಡಬೇಕು. ಅದು ಶ್ರೇಷ್ಠ ಕಾರ್ಯ. ಕವಿಗಳು ಸಾಹಿತಿಗಳು ಕೂಡ ಗೋವುಗಳ ಮಹತ್ವದ ಬಗ್ಗೆ ಸಾಹಿತ್ಯ ರಚಿಸಬೇಕು ಎಂದು ಸಲಹೆ ಮಾಡಿದರು. ಹಿರಿಯ ಕವಿಗಳಾದ ಸುಮತೀಂದ್ರ ನಾಡಿಗ್ ಹಾಗೂ ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಮಾಜಿ ಸಚಿವ ಆರ್. ಅಶೋಕ್ ಮಾತನಾಡಿದರು. 

2007: ಮೈಸೂರು ನಗರದ ಬೆಮೆಲ್ ನಲ್ಲಿ ತಂತ್ರಜ್ಞರಾಗಿರುವ ರಾಜೀವ ಸರಳಾಯ ಅವರು ಕನ್ನಡದಲ್ಲೇ ಪರೀಕ್ಷೆ ಎದುರಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ ಪಡೆದರು. ಕನ್ನಡದಲ್ಲೇ ಪರೀಕ್ಷೆ ಎದುರಿಸಲು ಅವರಿಗೆ ಅನುಮತಿ ನೀಡಲು ಮೂರು ವರ್ಷಗಳ ಹಿಂದೆ ಮುಕ್ತ ವಿಶ್ವವಿದ್ಯಾಲಯ ನಿರಾಕರಿಸಿತ್ತು. ನಂತರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಸ.ರ.ಸುದರ್ಶನ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಬಿ.ವಿಶ್ವನಾಥ್ ಮನವಿ ಮತ್ತು ಮಧ್ಯಪ್ರವೇಶದಿಂದ ಅನುಮತಿ ದೊರೆತಿತ್ತು. ಇಂಗ್ಲಿಷಿನ ಪಠ್ಯ ಸಾಮಗ್ರಿ-ಪ್ರಶ್ನೆಪತ್ರಿಕೆಗಳನ್ನು ತಾನೇ ಅನುವಾದ ಮಾಡಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಮುಕ್ತ ವಿ.ವಿ ಅವರಿಗೆ ಕನ್ನಡದಲ್ಲಿ ಉತ್ತರ ಬರೆಯಲು ಅನುಮತಿ ನೀಡಿತ್ತು. `ಅದನ್ನು ಸವಾಲಾಗಿ ಸ್ವೀಕರಿಸಿದ ಸರಳಾಯ ಅವರು, ಶೇ. 60ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದರು.

2007: ಅಮೆರಿಕದ ಮ್ಯಾರಥಾನ್ ಸ್ಪರ್ಧಿ ರಯಾನ್ ಶೇ (28) ಈದಿನ ನ್ಯೂಯಾರ್ಕಿನಲ್ಲಿ ಓಟದಲ್ಲಿ ನಿರತರಾಗಿದ್ದ ವೇಳೆ ಕುಸಿದು ಬಿದ್ದು ಮೃತರಾದರು. ಐದೂವರೆ ಮೈಲುಗಳಷ್ಟು ದೂರ ಕ್ರಮಿಸಿದಾಗ ಅವರು ಕುಸಿದು ಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಯಾನ್ ಅವರು ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ಐದು ಪ್ರಮುಖ ಮ್ಯಾರಥಾನ್ ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

2006: ದೆಹಲಿ ವಿಶ್ವವಿದ್ಯಾಲಯವು 60ರ ದಶಕದಲ್ಲಿ ತನ್ನಿಂದಲೇ ಪದವಿ ಪಡೆದಿದ್ದ ಅಮಿತಾಭ್ ಬಚ್ಚನ್ ಅವರಿಗೆ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾಕ್ಟರೇಟ್ ಗೌರವವನ್ನು ನೀಡಿತು. ಖ್ಯಾತ ವಿಜ್ಞಾನಿ ಸಿ.ಎನ್. ಆರ್. ರಾವ್, ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೂ ಈ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

2006: ಕೇವಲ ಏಳನೇ ತರಗತಿವರೆಗೆ ಓದಿದ ಬೆಂಗಳೂರಿನ ಯುವಕ ಕೆ. ಬಾಲಕೃಷ್ಣ ಅವರು ನಿಧಾನವಾಗಿ ಹರಿಯುವ ಕೊಳಚೆ ನೀರಿನಿಂದ ವಿದ್ಯುತ್ ತಯಾರಿಸಬಹುದಾದ `ಹೈಡ್ರೋ ಪವರ್ ಜನರೇಟಿಂಗ್ ಡಿವೈಸ್ ಬೈ ಸ್ಲೋ ಫ್ಲೋ ಆಫ್ ವಾಟರ್' ಎಂಬ ಯಂತ್ರ ತಯಾರಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಒಂದು ಯಂತ್ರದಿಂದ 10 ಕಿ.ವಿ. ವಿದ್ಯುತ್ ಉತ್ಪಾದಿಸಬಹುದು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೊಳಚೆ ನೀರಿಗೆ ಅಳವಡಿಸಿದರೆ ಒಟ್ಟು ಬೇಡಿಕೆಯ ಶೇಕಡಾ  25ರಷ್ಟು ವಿದ್ಯುತ್ ಉತ್ಪಾದಿಸಬಹುದು ಎಂಬುದು ಅವರ ಅಭಿಪ್ರಾಯ.

2005: `ಶಹನಾಯಿ ಮಾಂತ್ರಿಕ' ಬಿಸ್ಮಿಲ್ಲಾ ಖಾನ್ ಅವರಿಗೆ ಹೈದರಾಬಾದಿನಲ್ಲಿ ಆಂಧ್ರಪ್ರದೇಶ ಕಲಾ ವೇದಿಕೆ ಆಶ್ರಯದಲ್ಲಿ `ಭಾರತದ ಹೆಮ್ಮೆಯ ಪುತ್ರ' (ಪ್ರೈಡ್ ಆಫ್ ಇಂಡಿಯಾ) ಪ್ರಶಸ್ತಿಯನ್ನು ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಪ್ರದಾನ ಮಾಡಿದರು.

2001: ಜೆ.ಕೆ. ರೌಲಿಂಗ್ಸ್ ಅವರ ಪುಸ್ತಕ ಆಧಾರಿತ `ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಚಲನಚಿತ್ರ ಲಂಡನ್ನಿನ ಲೀಸ್ಟರ್ ಚೌಕದ ಓಡಿಯಾನ್ ಥಿಯೇಟರಿನಲ್ಲಿ ಪ್ರದರ್ಶನಗೊಂಡಿತು.

1998: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಸಾಲ್ಟ್ ಲೇಕ್ ಸ್ಟೇಡಿಯಮ್ಮಿನಲ್ಲಿ ನಡೆದ 38ನೇ ಓಪನ್ ನ್ಯಾಷನಲ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ 45.7 ಸೆಕೆಂಡುಗಳಲ್ಲಿ 400 ಮೀಟರ್ ಓಡುವ ಮೂಲಕ ಪಂಜಾಬ್ ಪೊಲೀಸ್ ಪರಮಜಿತ್ ಸಿಂಗ್ ಅವರು ಮಿಲ್ಕಾಸಿಂಗ್ ದಾಖಲೆಯನ್ನು ಮುರಿದರು. ಮಿಲ್ಖಾಸಿಂಗ್ 1960ರ ರೋಮ್ ಒಲಿಂಪಿಕ್ಸ್ ನಲ್ಲಿ 45.73 ಸೆಕೆಂಡುಗಳಲ್ಲಿ ಓಡಿ ಈ ದಾಖಲೆ ನಿರ್ಮಿಸಿದ್ದರು. ತಮ್ಮ ದಾಖಲೆಯನ್ನು ಮುರಿಯುವ ಯಾವನೇ ಭಾರತೀಯನಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಮಿಲ್ಖಾ ಸಿಂಗ್ ಸವಾಲು ಹಾಕಿದ್ದರು. ಆದರೆ ಪರಮಜಿತ್ ಸಿಂಗ್ ಗೆ ಈ ಹಣ ನೀಡಲು ಮಿಲ್ಖಾಸಿಂಗ್ ನಿರಾಕರಿಸಿದರು. ತಮ್ಮ ಓಟದ ಎಲೆಕ್ಟ್ರಾನಿಕ್ ಅವಧಿ (45.73 ಸೆಕೆಂಡ್) ಅನಧಿಕೃತವಾಗಿದ್ದು, ಕೈಗಡಿಯಾರ ಪ್ರಕಾರ ತಾವು ಓಡಿದ್ದು 45.6 ಸೆಕೆಂಡಿನಲ್ಲಿ. ಈ ದಾಖಲೆಗಿಂತ ಪರಮಜಿತ್ ದಾಖಲೆ ಕೆಳಗಿದೆ ಎಂಬುದು ತಮ್ಮ ನಿರಾಕರಣೆಗೆ ಅವರು ನೀಡಿದ ಕಾರಣ. `ದಾಖಲೆ ವಿದೇಶಿ ನೆಲದಲ್ಲಿ ಆಗಬೇಕು' ಎಂಬ ಹೊಸ ಷರತ್ತನ್ನು ನಂತರ ಮಿಲ್ಖಾಸಿಂಗ್ ತಮ್ಮ ಸವಾಲಿಗೆ ಸೇರಿಸಿದರು.

1995: ಇಸ್ರೇಲಿ ಪ್ರಧಾನಿ ಯಿಟ್ಜ್ ಹಾಕ್ ರಾಬಿನ್ (73) ಅವರನ್ನು ಶಾಂತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಬಲಪಂಥೀಯ ಇಸ್ರೇಲಿಗಳು ಕೊಲೆಗೈದರು.

1945: ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊವನ್ನು (ವಿಶ್ವಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನ) ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿ ಪ್ಯಾರಿಸ್ಸಿನಲ್ಲಿದೆ. ಪ್ರಸ್ತುತ 191 ದೇಶಗಳು ಇದರ ಸದಸ್ಯತ್ವ ಹೊಂದಿವೆ.

1936: ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಹುಟ್ಟಿದ ದಿನ. 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ ಒಂದು ನಿಮಿಷಕ್ಕೂ ಹೆಚ್ಚು ಸಮಯವನ್ನು ತೆಗೆದುಕೊಂಡಿತು.

1934: ರಣಜಿ ಟ್ರೋಫಿಯ ಉದ್ಘಾಟನಾ ಪಂದ್ಯವು ಮದ್ರಾಸ್ ಮತ್ತು ಮೈಸೂರು ತಂಡಗಳ ಮಧ್ಯೆ ಮದ್ರಾಸಿನ ಚೀಪಾಕ್ ಸ್ಟೇಡಿಯಮ್ಮಿನಲ್ಲಿ ನಡೆಯಿತು. ಬಾಂಬೆಯಲ್ಲಿ (ಈಗಿನ ಮುಂಬೈ) 1935ರ ಮಾರ್ಚಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಉತ್ತರ ಭಾರತ ತಂಡವನ್ನು ಸೋಲಿಸಿ ಬಾಂಬೆ ತಂಡವು ಆ ವರ್ಷದ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು. 67 ವರ್ಷಗಳಲ್ಲಿ ಬಾಂಬೆ ತಂಡವು 33 ಸಲ ರಣಜಿ ಟ್ರೋಫಿಯನ್ನು ಗೆದ್ದಿತು. ಅದರಲ್ಲಿ 1959ರಿಂದ 73ರವರೆಗೆ ಅದು ನಿರಂತರ ವಿಜಯ ಸಾಧಿಸಿತ್ತು.

1916: ಸಾಹಿತಿ ಕುಮಾರ ವೆಂಕಣ್ಣ ಜನನ.

1893: ಸಾಹಿತಿ ಪತ್ರಿಕೋದ್ಯಮಿ ರಾಜಕಾರಣಿ ಸೀತಾರಾಮ ಶಾಸ್ತ್ರಿ (4-11-1893ರಿಂದ 7-1-1971) ಅವರು ನಾಗೇಶ ಶಾಸ್ತ್ರಿ- ಪಾರ್ವತಮ್ಮ ದಂಪತಿಯ ಮಗನಾಗಿ ನಂಜನಗೂಡಿನಲ್ಲಿ ಜನಿಸಿದರು.

1889: ಭಾರತೀಯ ಸ್ವಾತಂತ್ರ್ಯ ಯೋಧ, ಕೈಗಾರಿಕೋದ್ಯಮಿ ಹಾಗೂ ದಾನಿ  ಜಮ್ನಾಲಾಲ್ ಬಜಾಜ್ (1889-1942) ಜನ್ಮದಿನ.

1845: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ವಾಸುದೇವ ಬಲವಂತ ಫಡ್ಕೆ (1845-83) ಹುಟ್ಟಿದ ದಿನ. ಇವರು ತಮ್ಮ ಗೆರಿಲ್ಲಾ ಯುದ್ಧ ತಂತ್ರಗಳಿಂದ ಖ್ಯಾತಿ ಪಡೆದರು 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement