Wednesday, November 5, 2008

ಇಂದಿನ ಇತಿಹಾಸ History Today ನವೆಂಬರ್ 05

ಇಂದಿನ ಇತಿಹಾಸ

ನವೆಂಬರ್ 5

ಜಮ್ಮು ಮತ್ತು ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಚೆನಾಬ್ ಸೇತುವೆ ವಿಶ್ವದಲ್ಲೇ ಅತಿ ಎತ್ತರದ ಸೇತುವೆಯಾಗಲಿದೆ ಎಂದು ಕೊಂಕಣ ರೈಲ್ವೆ ಉಪ ಮುಖ್ಯ ಎಂಜಿನಿಯರ್ ಈಶ್ವರ ಚಂದ್ರ ಹೇಳಿದರು. 359 ಮೀಟರ್ ಎತ್ತರದ ಈ ಸೇತುವೆ ಜಿಲ್ಲೆಯ ಬಕ್ಕಳ್ ಮತ್ತು ಕೌರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ.

2007: ರಾಜ್ಯಪಾಲ ರಾಮೇಶ್ವರ ಠಾಕೂರ್ ಮತ್ತು ಬಿಜೆಪಿ- ಜೆಡಿ ಎಸ್ ಶಾಸಕರು ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ತೆರಳುವುದರೊಂದಿಗೆ ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ರಚನೆ ಸಂಬಂಧ ನಡೆದ ರಾಜಕೀಯ ಕಸರತ್ತು ಹಾಗೂ ಚಟುವಟಿಕೆಗಳು ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿ ದೆಹಲಿಗೆ ಸ್ಥಳಾಂತರಗೊಂಡವು.

2007: ತುರ್ತು ಪರಿಸ್ಥಿತಿ ಹೇರಿಕೆಯ ವಿರುದ್ಧ ಪಾಕಿಸ್ಥಾನದ ವಿವಿಧ ಕಡೆ ವ್ಯಾಪಕ ಪ್ರತಿಭಟನೆ ಕಂಡು ಬಂದಿತು. ಈ ಪ್ರತಿಭಟನೆಗಳನ್ನು ನಿಯಂತ್ರಿಸುವ ಸಲುವಾಗಿ ಹಲವು ಕಡೆ ಪೊಲೀಸರು ಬಲ ಪ್ರಯೋಗ ನಡೆಸಿ ನೂರಾರು ಮಂದಿಯನ್ನು ಬಂಧಿಸಿದರು. ಪೇಶಾವರ, ಕರಾಚಿ, ರಾವಲ್ಪಿಂಡಿ ಸೇರಿದಂತೆ ಪಾಕಿಸ್ಥಾನದ ಮುಖ್ಯ ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಪೊಲೀಸರ ಲಾಠಿ- ಬೂಟಿನ ಸದ್ದು, ಪ್ರತಿಭಟನಕಾರರ ಮುಗಿಲು ಮುಟ್ಟುವ ಘೋಷಣೆಗಳು, ಬೀದಿಗಿಳಿದ ವಕೀಲರ ಕಪ್ಪು ದಿನಾಚರಣೆ ಮತ್ತು ನ್ಯಾಯಾಂಗ ಕಲಾಪ ಬಹಿಷ್ಕಾರ ಪ್ರತಿಭಟನೆಯ ಅಬ್ಬರ ಸಾಮಾನ್ಯ ದೃಶ್ಯವಾಗಿತ್ತು.

 2007: ತಮ್ಮನ್ನು ಹತ್ಯೆ ಮಾಡಲು `ಚಿಕ್ಕ ಮಗುವೊಂದನ್ನು ಆತ್ಮಹತ್ಯಾ ದಾಳಿಕೋರ'ನನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಬಹಿರಂಗಪಡಿಸಿದರು. ಬಾಂಬು ಸ್ಫೋಟ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಭೇಟಿ ಮಾಡಿದಾಗ ತಮ್ಮನ್ನು ಹತ್ಯೆ ಮಾಡಲು ಚಿಕ್ಕ ಮಗುವೊಂದನ್ನು ಬಳಸಿರುವ ವಿಷಯ ತಿಳಿದುಬಂತು ಎಂದು ಬೆನಜೀರ್ ಸಿಎನ್ನೆನ್ ಗೆ ಬರೆದ ಪತ್ರದಲ್ಲಿ ತಿಳಿಸಿದರು. `ಭಯೋತ್ಪಾದಕರು ನನ್ನ ಪಕ್ಷದ ಧ್ವಜವನ್ನು ಈ ಮಗುವಿನ ಮೇಲೆ ಹೊದಿಸಿ ನನ್ನ ಬಳಿ ಕರೆತಂದಿದ್ದರು. ಆದರೆ ಬಾಂಬ್ ಸಿಡಿಸಲು ವಿಫಲರಾದ ಅವರು ನಂತರ ನನ್ನ ವಾಹನದ ಬಳಿ ಮಗುವನ್ನು ಬಿಟ್ಟು ಹೋದರು. ಕೆಲ ಸಮಯದ ನಂತರ ವಾಹನ ಸ್ಫೋಟಗೊಂಡಿತು. ಆಗ ನಾನು ಅಲ್ಲಿರಲಿಲ್ಲ' ಎಂದು ಬೆನಜೀರ್ ನ್ಯೂಯಾರ್ಕಿನಲ್ಲಿ ಹೇಳಿದರು. ಎಂಟು ವರ್ಷಗಳ ನಂತರ ಬೆನಜೀರ್ ಸ್ವದೇಶಕ್ಕೆ ವಾಪಸಾದ ಅಕ್ಟೋಬರ್ 18 ರಂದು ಬೆನಜೀರ್ ಅವರ ಪಕ್ಷದ ಕಾರ್ಯಕರ್ತರು ಭಾರಿ ರ್ಯಾಲಿ ನಡೆಸಿದಾಗ ಭಯೋತ್ಪಾದಕರು ಹಲವೆಡೆ ಬಾಂಬುಗಳನ್ನು ಸಿಡಿಸಿ, 140ಕ್ಕೂ ಹೆಚ್ಚು ಜನರ ಮಾರಣಹೋಮ ಗೈದಿದ್ದರು.

2007: ಜಮ್ಮು ಮತ್ತು ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಚೆನಾಬ್ ಸೇತುವೆ ವಿಶ್ವದಲ್ಲೇ ಅತಿ ಎತ್ತರದ ಸೇತುವೆಯಾಗಲಿದೆ ಎಂದು ಕೊಂಕಣ ರೈಲ್ವೆ ಉಪ ಮುಖ್ಯ ಎಂಜಿನಿಯರ್ ಈಶ್ವರ ಚಂದ್ರ ಹೇಳಿದರು. 359 ಮೀಟರ್ ಎತ್ತರದ ಈ ಸೇತುವೆ ಜಿಲ್ಲೆಯ ಬಕ್ಕಳ್ ಮತ್ತು ಕೌರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರಸ್ತುತ ವಿಶ್ವದ ಅತಿ ಎತ್ತರದ ಸೇತುವೆಯ ಪಟ್ಟಿಯಲ್ಲಿ ದಕ್ಷಿಣಫ್ರಾನ್ಸಿನ 323 ಮೀಟರ್ ಎತ್ತರದ  ಮಿಲ್ಲಾವ್ ಸೇತುವೆ ಇದ್ದು, ಚೆನಾಬ್ ಸೇತುವೆ ನಿರ್ಮಾಣಗೊಂಡ ನಂತರ ಆ ಸ್ಥಾನ ಈ ಸೇತುವೆಗೆ ಲಭ್ಯವಾಗಲಿದೆ. ಭಾರತವು ಐರೋಪ್ಯ ದೇಶಗಳ ಸಹಭಾಗಿತ್ವದಲ್ಲಿ ಕೊಂಕಣ ರೈಲ್ವೆ ಫ್ಲಾಗ್ ಶಿಪ್ ಯೋಜನೆಯಡಿಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. 

2007: ಈಶಾನ್ಯ ಅರ್ಜೆಂಟೀನಾದ ಬ್ಯೂನಸ್ ಏರಿಸ್ ನಗರದ ಕಾರಾಗೃಹದಲ್ಲಿ ಕೈದಿಗಳ ಪರಸ್ಪರ ಕಾದಾಟದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಕನಿಷ್ಠ 29 ಜನರು ಸಾವಿಗೀಡಾದರು.

2007: ಹನ್ನೆರಡು ದಿನಗಳ ಹಿಂದೆ ಗಗನಕ್ಕೆ ಉಡಾಯಿಸಲಾಗಿದ್ದ ಮಾನವ ರಹಿತ ಉಪಗ್ರಹ `ಚಾಂಗ್' ಈದಿನ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ತಲುಪಿತು. ಇದು ಚೀನಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಯಿತು.

2007: ವೀಕ್ಷಕರ ಕುತೂಹಲ ಕೆರಳಿಸಿದ್ದ ಝೀ ಕನ್ನಡದ `ಶ್ರೀಮತಿ ಕರ್ನಾಟಕ' ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶಾಂತಾ ವೆಂಕಟೇಶ್ ವಿಜೇತರಾದರು.

2006: ಮಾನವೀಯತೆ ವಿರುದ್ಧ ಎಸಗಿದ ಅಪರಾಧಕ್ಕಾಗಿ ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ (69) ಅವರಿಗೆ, ಅಮೆರಿಕ ಬೆಂಬಲಿತ ಉನ್ನತ ನ್ಯಾಯಮಂಡಳಿಯು ಬಾಗ್ದಾದಿನಲ್ಲಿ ಮರಣದಂಡನೆ ವಿಧಿಸಿತು. 1982ರ ಜುಲೈ 8ರಂದು ಸದ್ದಾಂ ಹತ್ಯೆಗೆ ವಿಫಲ ಯತ್ನ ನಡೆಸಿದ ದುಜೈಲಿನ ಶಿಯಾ ಜನಾಂಗಕ್ಕೆ ಸೇರಿದ 148 ಜನರನ್ನು ಪ್ರತೀಕಾರಕ್ಕಾಗಿ ಬರ್ಬರವಾಗಿ ಕೊಂದ ಆರೋಪ ಸದ್ದಾಂ ಮತ್ತು ಏಳು ಮಂದಿ ಸಹಚರರ ಮೇಲೆ ಇತ್ತು. ಇರಾಕಿನ ಮಾಜಿ ಮುಖ್ಯ ನ್ಯಾಯಾಧೀಶ ಅವದ್ ಅಹ್ಮದ್ ಅಲ್ ಬಂದರ್ ಮತ್ತು ಸದ್ದಾಂ ಮಲ ಸೋದರನಾಗಿರುವ ಬೇಹುಗಾರಿಕೆ ಪಡೆ ಮುಖಾಬಾರತ್ ನ ಮಾಜಿ ಮುಖ್ಯಸ್ಥ ಬರ್ಜಾನ್ ಇಬ್ರಾಹಿಂ ಅಲ್ ಟಿಕ್ರಿತಿ ಅವರಿಗೂ ಮರಣ ದಂಡನೆ ವಿಧಿಸಿದ ನ್ಯಾಯಾಲಯ, ಇರಾಕಿನ ಮಾಜಿ ಉಪಾಧ್ಯಕ್ಷ ತಹಾ ಯಾಸಿನ್ ರಮ್ದಾನ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು.

2006: ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಸೂರ್ಯಾಸ್ತದ ವೇಳೆಯಲ್ಲಿ ಅವಳಿ ಬಾಂಬ್ ಸ್ಫೋಟಗಳಿಂದ 10 ಮಂದಿ ಸತ್ತು 52ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ವಾಣಿಜ್ಯ ಪ್ರದೇಶವಾದ ಫ್ಯಾನ್ಸಿ ಬಜಾರ್ ಮತ್ತು ನೂನ್ಮತಿ ಪ್ರದೇಶಗಳಲ್ಲಿ ಈ ಬಾಂಬ್ ಸ್ಫೋಟಗಳು ಸಂಭವಿಸಿದವು.

2006: ಮುಂಬೈಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ  ಮೊದಲ ಬಾರಿಗೆ `ಚಾಂಪಿಯನ್ಸ್ ಟ್ರೋಫಿ' ಗೆಲ್ಲುವಲ್ಲಿ ಯಶಸ್ಸು ಸಾಧಿಸಿ, ಕ್ರಿಕೆಟ್ ವಿಶ್ವದಲ್ಲಿ ತನ್ನ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತು ಪಡಿಸಿತು.

2005: ಪಾಕಿಸ್ಥಾನದ ಈಶಾನ್ಯ ಭಾಗದಲ್ಲಿ ಸಿಂಧೂನದಿಯಲ್ಲಿ ದೋಣಿ ಮುಳುಗಿ ಅದರಲ್ಲಿದ್ದ 70 ಮಂದಿ ಜಲ ಸಮಾಧಿಯಾದರು. ಅವರೆಲ್ಲರೂ ಸಂಬಂಧಿಯೊಬ್ಬನ ಅಂತ್ಯಕ್ರಿಯೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿತು.

1999: ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್ ಪೆನ್ ಫೀಲ್ಡ್ ಅವರು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಒಂದು `ಏಕಸ್ವಾಮ್ಯ' ಸಂಸ್ಥೆ ಎಂದು ಘೋಷಿಸಿದರು. ಈ ಸಾಫ್ಟ್ ವೇರ್ ದೈತ್ಯ ಸಂಸ್ಥೆಯ `ಆಕ್ರಮಣಕಾರಿ' ಕ್ರಮಗಳು ಸಂಶೋಧನೆಗಳಿಗೆ ಅಡ್ಡಿ ಉಂಟು ಮಾಡುತ್ತಿವೆ ಹಾಗೂ ಗ್ರಾಹಕರನ್ನು ನೋಯಿಸುತ್ತಿವೆ ಎಂದು ಅವರು ಹೇಳಿದರು.

1994: ಲಾಸ್ ವೆಗಾಸಿನಲ್ಲಿ ನಡೆದ ಜಾಗತಿಕ ಬಾಕ್ಸಿಂಗ್ ಅಸೋಸಿಯೇಶನ್ (ಡಬ್ಲ್ಯೂಬಿಎ ) ಕ್ರೀಡಾಕೂಟದ 10ನೇ ಸುತ್ತಿನಲ್ಲಿ ಎದುರಾಳಿ ಮೈಕೆಲ್ ಮೂರರ್ ಅವರನ್ನು ಕೆಳಕ್ಕೆ ಕೆಡಹುವ ಮೂಲಕ 45 ವರ್ಷ ವಯಸ್ಸಿನ ಜಾರ್ಜ್ ಫೋರ್ಮನ್ ಬಾಕ್ಸಿಂಗಿನ ಅತ್ಯಂತ ಹಿರಿಯ ಹೆವಿವೇಯ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಅಂತಾರಾಜ್ಯ ಸಂಪರ್ಕ ಸಾಮ್ರಾಜ್ಯ ಕಟ್ಟಿದ ಜೆಕೊಸ್ಲೋವೇಕಿಯಾ ಸಂಜಾತ ಬ್ರಿಟಿಷ್ ಪ್ರಕಾಶನಕಾರ ರಾಬರ್ಟ್ ಮ್ಯಾಕ್ಸ್ ವೆಲ್ (1923-1991) ಕ್ಯಾನರಿ ದ್ವೀಪಗಳ ಬಳಿ ಸಮುದ್ರದಲ್ಲಿಮುಳುಗಿ ಆತ್ಮಹತ್ಯೆ ಮಾಡಿಕೊಂಡರು. 

1978: ಜಿ.ಪಿ. ದೇಶಪಾಂಡೆ ಅವರ ನಾಟಕ `ಉಧ್ವಸ್ತ ಧರ್ಮಶಾಲಾ' ನಾಟಕ ಪ್ರದರ್ಶನದೊಂದಿಗೆ ಬಾಂಬೆಯಲ್ಲಿ (ಈಗಿನ ಮುಂಬೈ) `ಪೃಥ್ವಿ ಥಿಯೇಟರ್' (ಪೃಥ್ವಿ ರಂಗಭೂಮಿ) ಉದ್ಘಾಟನೆಗೊಂಡಿತು. ಪೃಥ್ವಿರಾಜ್ ಕಪೂರ್ ಸ್ಮಾರಕ ಟ್ರಸ್ಟ್ ಈ ಥಿಯೇಟರನ್ನು ನಿರ್ಮಿಸಿತು. ಶಶಿ ಮತ್ತು ಜೆನ್ನಿಫರ್ ಕಪೂರ್ ಅವರು ಪೃಥ್ವಿರಾಜ್ ಕಪೂರ್ ಅವರ `ಪ್ರತ್ಯೇಕ ರಂಗಭೂಮಿ'ಯ ಕನಸನ್ನು ನನಸುಗೊಳಿಸಿದರು. (1944ರಲ್ಲಿ ಪೃಥ್ವಿರಾಜ್ ಕಪೂರ್ `ಪೃಥ್ವಿ ಥಿಯೇಟರ್ಸ್' ಹೆಸರಿನಲ್ಲಿ ಹಿಂದಿ ಥಿಯೇಟರ್ ಕಂಪೆನಿಯನ್ನು ಸ್ಥಾಪಿಸಿ ಭಾರತದಾದ್ಯಂತ ಈ ತಂಡದೊಂದಿಗೆ ಪ್ರವಾಸ ಮಾಡಿದ್ದರು. ಅವರು ಈ ತಂಡದ ನಟ-ನಿರ್ವಾಹಕರಾಗಿದ್ದರು.)

1977: ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು.

1961: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮೊತ್ತ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದರು.

1951: ಬಾಂಬೆ- ಬರೋಡ, ಸೆಂಟ್ರಲ್ ಇಂಡಿಯಾ ರೈಲ್ವೇ, ಸೌರಾಷ್ಟ್ರ, ರಾಜಸ್ಥಾನ ಮತ್ತು ಜೈಪುರ ರೈಲ್ವೇಗಳು ವಿಲೀನಗೊಂಡು `ವೆಸ್ಟರ್ನ್ ರೈಲ್ವೇ' ಪಶ್ಚಿಮ ರೈಲ್ವೇ ರಚನೆಯಾಯಿತು. ಇದೇ ದಿನ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಮತ್ತು ಇತರ ರೈಲ್ವೇಗಳ ಮರು ವರ್ಗೀಕರಣ ನಡೆದು ಸೆಂಟ್ರಲ್ ರೈಲ್ವೆ ರಚನೆಯಾಯಿತು.

1915: ಭಾರತದ ರಾಜಕೀಯ ನಾಯಕ, ಬಾಂಬೆ ಮುನಿಸಿಪಲ್ ಪ್ಲಾನರ್ ಯೋಜಕ ಹಾಗೂ `ಬಾಂಬೆ ಕ್ರಾನಿಕಲ್' (1913) ಪತ್ರಿಕೆಯ ಸ್ಥಾಪಕ ಫಿರೋಜ್ ಶಹಾ ಮೆಹ್ತಾ ತಮ್ಮ 70ನೇ ವಯಸ್ಸಿನಲ್ಲಿ ಮೃತರಾದರು.

1904: ಇತಿಹಾಸ ಸಂಶೋಧಕ, ಸಾಹಿತ್ಯಾಸಕ್ತ ಶ್ರೀಕಂಠಶಾಸ್ತ್ರಿ (5-11-1904ರಿಂದ 7-5-1974) ಅವರು ರಾಮಸ್ವಾಮಿ ಶಾಸ್ತ್ರಿ- ಶೇಷಮ್ಮ ದಂಪತಿಯ ಮಗನಾಗಿ ನೆಲಮಂಗಲ ತಾಲ್ಲೂಕಿನ ಸೊಂಡೆಕೊಪ್ಪದಲ್ಲಿ ಜನಿಸಿದರು.

1870: ಭಾರತೀಯ ವಕೀಲ, ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಬಂಗಾಳದ ಸ್ವರಾಜ್ ಪಕ್ಷದ ಧುರೀಣರಾಗಿದ್ದ ಚಿತ್ತರಂಜನ್ ದಾಸ್ ಜನ್ಮದಿನ. ಅಲಿಪುರ ಬಾಂಬ್ ಪ್ರಕರಣದ ವಿಚಾರಣೆ ಕಾಲದಲ್ಲಿ ಅವರು ಅರವಿಂದ ಘೋಷ್ ಅವರ ವಕೀಲರಾಗಿದ್ದರು.

1556: ಪಾಣಿಪತ್ತದಲ್ಲಿ ನಡೆದ ಎರಡನೇ ಕದನದಲ್ಲಿ ಅಕ್ಬರನು ಹಿಂದು ಜನರಲ್ ಹೇಮುವನ್ನು ಕೊಂದು ಹಾಕಿದ. ಇದು ಭಾರತದಲ್ಲಿ ಮೊಘಲ ಅಧಿಕಾರದ ಮರುಸ್ಥಾಪನೆ ಹಾಗೂ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ವಿಸ್ತರಣೆಗೆ ಅಡಿಪಾಯವಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement