My Blog List

Friday, November 28, 2008

ಇಂದಿನ ಇತಿಹಾಸ History Today ನವೆಂಬರ್ 27

ಇಂದಿನ ಇತಿಹಾಸ

ನವೆಂಬರ್ 27

ಜಗತ್ತಿನ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವು ನಾರ್ವೆಯ ರಾಜಧಾನಿ ಓಸ್ಲೋದಿಂದ ವಾಯವ್ಯಕ್ಕೆ 300 ಕಿಮೀ ದೂರದ ಲಾಯೆರ್ಡಾಲಿನಲ್ಲಿ ಸಂಚಾರಕ್ಕೆ ಮುಕ್ತವಾಯಿತು. ಇದರ ಉದ್ದ 24.5 ಕಿ.ಮೀ.ಗಳು. 16.9 ಕಿ.ಮೀ. ಉದ್ದದ ಸ್ವಿಸ್ ಆಲ್ಪ್ಸ್ ನ ಸೇಂಟ್ ಗೊಥಾರ್ಡ್ ಸುರಂಗವನ್ನು ಇದು ಮೀರಿಸಿತು.

2007: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸುವುದು ಗಂಭೀರ ಅಪರಾಧ ಎಂದು ಅಭಿಪ್ರಾಯಪಟ್ಟ ದೆಹಲಿ ಹೈಕೋರ್ಟ್, ಈ ಹಗರಣದಲ್ಲಿ ಆರೋಪ ಎದುರಿಸುತ್ತಿರುವ 11 ಸಂಸದರ ಪಾತ್ರ ಅರಿಯಲು ತನಿಖೆ ಆರಂಭಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿತು. ಪ್ರಶ್ನೆ ಕೇಳಲು ಲಂಚ ಪಡೆಯುವ ಮೂಲಕ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವವರು ಮತ್ತು ದಲ್ಲಾಳಿಗಳ  ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಮೂರ್ತಿ ಎಸ್.ಎನ್.ಧಿಂಗ್ರಾ ಆದೇಶಿಸಿದರು. ಮಧ್ಯವರ್ತಿಗಳ ಮೂಲಕ ಮೂಲಕ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ವಿಚಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಹೇಳಿತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯಾಗಿ ಯೆರವಾಡ  ಜೈಲಿನಲ್ಲಿದ್ದ ಬಾಲಿವುಡ್ ನಟ ಸಂಜಯ ದತ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ವಿಶೇಷ ಟಾಡಾ ನ್ಯಾಯಾಲಯವು ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯಡಿ ದತ್ ಅವರಿಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ದತ್ ಅವರಲ್ಲದೆ ಇತರ 17 ಮಂದಿಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.

2007: ಉಗ್ರವಾದಿಗಳ ವಶದಲ್ಲಿದ್ದ ಪಾಕಿಸ್ಥಾನದ ವಾಯವ್ಯ ಭಾಗದ ಸ್ವಾತ್ ಕಣಿವೆ ಪ್ರದೇಶದಲ್ಲಿ ಅಕ್ರಮವಾಗಿ ಪ್ರಸರಣ ಮಾಡುತ್ತಿದ್ದ ಎಫ್ ಎಂ ವಾಹಿನಿ ಮುಲ್ಲಾ ರೇಡಿಯೋ ಕೇಂದ್ರವನ್ನು ಪಾಕಿಸ್ಥಾನಿ ಸೇನಾಪಡೆ ವಶಪಡಿಸಿಕೊಂಡಿತು. ತಾಲಿಬಾನ್ ಪರವಾದ ಸಾಹಿತ್ಯವನ್ನು ಪ್ರಸಾರ ಮಾಡುತ್ತಿದ್ದ ಈ ವಾಹಿನಿಯನ್ನು ಮೌಲಾನ ಫಾಜ್ಲುಲ್ಲ ನಡೆಸುತ್ತಿದ್ದ. ಈತ ಈ ವಾಹಿನಿಯಲ್ಲಿ ಜೆಹಾದ್ ಪರವಾದ ನಿಲುವನ್ನು ಪ್ರಸಾರ ಮಾಡುತ್ತಿದ್ದ. ಈದಿನ ಕೂಡಾ ಅದರಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸುವ ಬಗ್ಗೆ  ರೇಡಿಯೋ ಪ್ರಸಾರ ಮಾಡಿತ್ತು.

2007: 1992ರಲ್ಲಿ ಅಧಿಕಾರ ಪಡೆಯಲು ಸಂವಿಧಾನವನ್ನು ಮೂಲೆ ಗುಂಪು ಮಾಡಿ ಫ್ಯೂಜಿಮೊ ಅವರಿಗೆ ನೆರವಾದ ಹತ್ತು ಮಂದಿ ಸಚಿವರಿಗೆ ಪೆರುವಿನ ಉಚ್ಚನ್ಯಾಯಾಲಯ ಶಿಕ್ಷೆ ವಿಧಿಸಿತು. ಆಂತರಿಕ ವ್ಯವಹಾರಗಳ ಮಾಜಿ ಸಚಿವ ಜಾನ್ ಬ್ರಿಯೊನ್ಸ್ ಡಾವಿಲ್ಲಾ ಅವರಿಗೆ 10 ವರ್ಷಗಳ ಸೆರೆವಾಸ, ಉಳಿದ ಒಂಬತ್ತು ಮಂದಿ ಸಚಿವರಿಗೆ ತಲಾ 4 ವರ್ಷಗಳ ಸೆರೆವಾಸದ ವಾಸದ ಶಿಕ್ಷೆಯನ್ನು ಉಚ್ಚ ನ್ಯಾಯಾಲಯ ವಿಧಿಸಿತು.

2007: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಈದಿನ ರಾತ್ರಿ ದೆಹಲಿಯಿಂದ  ಬಿಗಿ ಭದ್ರತೆಯ ನಡುವೆ ಅಜ್ಞಾತ ಸ್ಥಳಕ್ಕೆ ತೆರಳಿದರು. ಕೇಂದ್ರ ಸಚಿವ ಸಂಪುಟ ಸಭೆಯ ತರುವಾಯ ಕೆಲವೇ ಕ್ಷಣಗಳಲ್ಲಿ ನಸ್ರೀನ್ ಅವರಿಗೆ ಬಿಗಿ ಭದ್ರತೆ ಒದಗಿಸುವ ತೀರ್ಮಾನ ಸರ್ಕಾರದಿಂದ ಹೊರಬಿತ್ತು. ನಸ್ರೀನ್ ಮೂರು ವರ್ಷಗಳಿಂದ ಕೋಲ್ಕತ್ತದಲ್ಲಿ ನೆಲೆಸಿದ್ದರು. ಆದರೆ ಮುಸ್ಲಿಂ ಸಮುದಾಯದ ವಿರೋಧದ ಕಾರಣ ಅಲ್ಲಿನ ಸರ್ಕಾರ ನಸ್ರೀನ್ ಅವರನ್ನು ಜೈಪುರಕ್ಕೆ ಕಳುಹಿಸಿತ್ತು. ಅಲ್ಲಿಯೂ ಅವರ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದಾಗ ಅವರ ವಾಸ್ತವ್ಯ ಅಲ್ಲಿಂದ ದೆಹಲಿಗೆ ವರ್ಗಾವಣೆಗೊಂಡಿತ್ತು.

2007: ಗೃಹೋಪಯೋಗಿ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಯಲ್ಲಿ ಇರುವ ವಿಡಿಯೊಕಾನ್,  `ಜಾಗತಿಕ ಸ್ಯಾಪ್ ಏಸ್-2007' ಪ್ರಶಸ್ತಿಗೆ ಭಾಜನವಾಯಿತು. ವಿಡಿಯೊಕಾನ್ ಅನೇಕ ಗ್ರಾಹಕ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಂಡಿರುವ ದೇಶದ ಪ್ರಥಮ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿದ್ದ ಒಟ್ಟು 120 ದೇಶಗಳ 34,600 ಸಂಸ್ಥೆಗಳ ತೀವ್ರ ಸ್ಪರ್ಧೆಯಲ್ಲಿ ಈ  ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

2007: ಜಾಗತಿಕ ವಾಣಿಜ್ಯ ಪತ್ರಿಕೆ  `ಫಾರ್ಚೂನ್' ಪಟ್ಟಿ ಮಾಡಿದ ವಿಶ್ವದ ಅತಿ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ಟಾಟಾ ಸಮೂಹದ ಉದ್ದಿಮೆಗಳ ಮುಖ್ಯಸ್ಥರಾದ ರತನ್ ಟಾಟಾ, ಭಾರತೀಯ ಮೂಲದ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್, ಪೆಪ್ಸಿ ಕಂಪೆನಿ ಸಿಇಒ ಇಂದ್ರಾ ನೂಯಿ ಸಹ ಜಾಗ ಗಿಟ್ಟಿಸಿದರು. ಮತ್ತೊಂದು ಜಾಗತಿಕ ವಾಣಿಜ್ಯ ಪತ್ರಿಕೆ `ಫೋರ್ಬ್ಸ್' ಈ ತಿಂಗಳ ಆರಂಭದಲ್ಲಿ ಭಾರತೀಯ ಶತಕೋಟ್ಯಧಿಪತಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ `ಫಾರ್ಚೂನ್' ಹೊಸ ಪಟ್ಟಿ ಬಿಡುಗಡೆ ಮಾಡಿತು.

2006: ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ-2' ಕ್ಷಿಪಣಿಯನ್ನು ಒರಿಸ್ಸಾ ಕಡಲ ತೀರದ ಎರಡು ಪ್ರತ್ಯೇಕ ಉಡಾವಣಾ ವಲಯದಿಂದ ಯಶಸ್ವಿಯಾಗಿ ಪ್ರಯೋಗಿಸುವಲ್ಲಿ ವಿಜ್ಞಾನಿಗಳು ಸಫಲರಾದರು. ಪ್ರಥಮ ಗುರಿ ನಿರ್ದೇಶಿತ ಚಂಡಿಪುರದ ಉಡಾವಣಾ ಪ್ರದೇಶದಿಂದ ಬೆಳಗ್ಗೆ 10.15ಕ್ಕೆ ಪ್ರಯೋಗಿಸಿದರೆ, ಈ ಕ್ಷಿಪಣಿಯನ್ನು ಆಕಾಶಮಾರ್ಗದಲ್ಲಿಯೇ ತಡೆದು ನಾಶಗೊಳಿಸುವ ಉದ್ಧೇಶದ ಇನ್ನೊಂದು ಕ್ಷಿಪಣಿಯನ್ನು 60 ಕ್ಷಣಗಳ ಬಳಿಕ ಬಂಗಾಳಕೊಲ್ಲಿ ಸಮುದ್ರದಲ್ಲಿನ ಉಡಾವಣಾ ಕೇಂದ್ರದಿಂದ ಹಾರಿಸಲಾಯಿತು. ಆಕಾಶ ಮಾರ್ಗದಲ್ಲಿಯೇ ದಾಳಿ ಉದ್ದೇಶದ ಕ್ಷಿಪಣಿಯನ್ನು ಈ ಕ್ಷಿಪಣಿಯು ನಿಖರವಾಗಿ ಗುರುತಿಸಿ ನಾಶಪಡಿಸಿತು. ಇದರೊಂದಿಗೆ ಮಾರ್ಗ ಮಧ್ಯದಲ್ಲಿಯೇ ಕ್ಷಿಪಣಿ ನಡೆಯ ಪ್ರಯೋಗದಲ್ಲಿ ಭಾರತ ಯಶಸ್ಸು ಸಾಧಿಸಿತು.

 2006: ಬಾಲಿವುಡ್ಡಿನ  ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯ ರೈ ಮದುವೆ ಆಗಿದ್ದಾರೆಂಬ ಗಾಳಿ ಸುದ್ದಿಗಳ ಮಧ್ಯೆ ಇವರಿಬ್ಬರೂ ಈದಿನ `ಬ್ರಾಹ್ಮೀ ಮುಹೂರ್ತ'ದಲ್ಲಿ ವಾರಣಾಸಿಯಲ್ಲಿ ಕಾಶಿ ವಿಶ್ವನಾಥನಿಗೆ ಜೊತೆಯಾಗಿ ಪೂಜೆ ಸಲ್ಲಿಸಿದರು. ಕುಟುಂಬ ಸದಸ್ಯರ ಜೊತೆಗೆ ಸಂಕಟಮೋಚನ ದೇವಾಲಯ ಹಾಗೂ ಹನುಮಾನ್ ದೇವಾಲಯದಲ್ಲೂ ಅವರು ಪೂಜೆ ಸಲ್ಲಿಸಿದರು. ಈ ಜೋಡಿಯ ವಿವಾಹ ಬಂಧನಕ್ಕೆ ಐಶ್ವರ್ಯ ರೈ ಜಾತಕದ `ಕುಜ ದೋಷ'ದಿಂದ ಇದೆಯೆನ್ನಲಾದ ವಿಘ್ನ ನಿವಾರಣೆಗೆ ಈ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಲಾಯಿತು.

2006: ಬೆಂಗಳೂರು ರೈಲು ನಿಲ್ದಾಣದಲ್ಲಿ 50 ಪೈಸೆ, ಒಂದು ಹಾಗೂ ಎರಡು ರೂಪಾಯಿ ಮತ್ತು 5 ರೂಪಾಯಿ ನಾಣ್ಯಗಳನ್ನು ಹಾಕಿ ಪ್ಲಾಟ್ ಫಾರಂ ಟಿಕೆಟ್ ಪಡೆಯುವ ವಿಶೇಷ ಯಂತ್ರಗಳನ್ನು ಅಳವಡಿಸಲಾಯಿತು. ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಮಹೇಶ ಮಂಗಲ್ ಈ ಯಂತ್ರಗಳನ್ನು ಉದ್ಘಾಟಿಸಿದರು.

2006: ಮಹದಾಯಿ ಜಲವಿವಾದ ಇತ್ಯರ್ಥಕ್ಕೆ ನ್ಯಾಯ ಮಂಡಳಿ ರಚಿಸಲು ಕೇಂದ್ರ ಜಲ ಸಂಪನ್ಮೂಲಕ ಇಲಾಖೆ ನಿರ್ಧರಿಸಿದೆ ಎಂದು  ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ. ವೋಹ್ರಾ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದರು. ಇದರಿಂದ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಹೊರಟ ಕರ್ನಾಟಕದ ಪ್ರಯತ್ನಕ್ಕೆ ಹಿನ್ನಡೆಯಾಯಿತು.

2006: ಟೆಹರಾನಿನ ಮೆಹರಾಬಾದ್ ವಿಮಾನ ನಿಲ್ದಾಣದಲ್ಲಿ ಗಗನಕ್ಕೆ ಏರಿದ ಇರಾನ್ ಸೇನಾ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 38 ಮಂದಿ ಮೃತರಾದರು.

2005: ಫ್ರಾನ್ಸ್ ದೇಶದ ಪ್ಯಾರಿಸ್ಸಿನ ಎಮೈನ್ಸ್ ವಿಶ್ವವಿದ್ಯಾಲಯದಲ್ಲಿ ವಿಶ್ವದ ಮೊತ್ತ ಮೊದಲ ಮುಖಕಸಿ ನಡೆಯಿತು. 1998ರಲ್ಲಿ ವಿಶ್ವದ ಮೊತ್ತ ಮೊದಲ ಕೈ ಕಸಿ ಮಾಡಿದ್ದ ಜೀನ್ ಮೈಕಲ್ ಡುಬರ್ನಾರ್ಡ್ ಹಾಗೂ ಮುಖ ಶಸ್ತ್ರಚಿಕಿತ್ಸಕ ಬರ್ನಾರ್ಡ್ ದೆವಾವುಚೆಲ್ಲೆ ಮಹಿಳೆಯೊಬ್ಬಳಿಗೆ ಮುಖಕಸಿ ಶಸ್ತ್ರಚಿಕಿತ್ಸೆ ನಡೆಸಿದರು. ನಾಯಿ ಕಚ್ಚಿದ್ದರಿಂದ ಮೂಗು, ತುಟಿ ಹರಿದು ಹೋಗಿದ್ದ ಮಹಿಳೆಗೆ ವೈದ್ಯರ ತಂಡ ಆಗಷ್ಟೇ ಮೃತನಾಗಿದ್ದ ವ್ಯಕ್ತಿಯೊಬ್ಬನ ಮುಖದ ಭಾಗವನ್ನು ತೆಗೆದು ಕಸಿ ಮಾಡಿತು. 

2005: ಎರಡನೇ ಜಾಗತಿಕ ಯುದ್ಧದ ಕಾಲದಲ್ಲಿ ಸ್ಫೋಟಗೊಳ್ಳದೇ ಉಳಿದಿದ್ದ ಭಾರಿ ಬಾಂಬ್ ಜಪಾನಿನ ಟೋಕಿಯೋದ ಜನವಸತಿ ಪ್ರದೇಶ ಕಾತ್ಸುಶಿಕಾದಲ್ಲಿ ಪತ್ತೆಯಾಯಿತು. ಯುದ್ಧಕಾಲದಲ್ಲಿ ಅಮೆರಿಕ ಎಸೆದಿತ್ತು ಎನ್ನಲಾಗಿರುವ ಈ ಬಾಂಬ್ 250 ಕಿಲೋ ಗ್ರಾಂ ಭಾರ, 36 ಸೆಂ.ಮೀ ವ್ಯಾಸ ಹಾಗೂ 120 ಸೆಂ.ಮೀ ಉದ್ದವಿತ್ತು. ಈ ಬಾಂಬ್ ತೆರವುಗೊಳಿಸುವ ಸಲುವಾಗಿ 4000 ಜನರನ್ನು ಸ್ಥಳಾಂತರಿಸಲಾಯಿತು.

2005: ಚೀನಾದ ಹರ್ಬಿನ್ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟದಲ್ಲಿ 88 ಜನ ಮೃತರಾಗಿ 36ಕ್ಕೂ ಹೆಚ್ಚು ಜನ ಗಾಯಗೊಂಡರು. 

2000: ಜಗತ್ತಿನ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗವು ನಾರ್ವೆಯ ರಾಜಧಾನಿ ಓಸ್ಲೋದಿಂದ ವಾಯವ್ಯಕ್ಕೆ 300 ಕಿಮೀ ದೂರದ ಲಾಯೆರ್ಡಾಲಿನಲ್ಲಿ ಸಂಚಾರಕ್ಕೆ ಮುಕ್ತವಾಯಿತು. ಇದರ ಉದ್ದ 24.5 ಕಿ.ಮೀ.ಗಳು. 16.9 ಕಿ.ಮೀ. ಉದ್ದದ ಸ್ವಿಸ್ ಆಲ್ಪ್ಸ್ ನ ಸೇಂಟ್ ಗೊಥಾರ್ಡ್ ಸುರಂಗವನ್ನು ಇದು ಮೀರಿಸಿತು.

1981: ಆಡಳಿತ ಭಾಷೆಯಾಗಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಗೋಕಾಕ್ ನೇತೃತ್ವದ ಸಮಿತಿಯ ವರದಿಯನ್ನು ಯಥಾವತ್ತಾಗಿ ರಾಜ್ಯ ಸರ್ಕಾರವು ಅಂಗೀಕರಿಸಿತು. ವರದಿಯ ಶಿಫಾರಸು ಪ್ರಕಾರ ರಾಜ್ಯದಲ್ಲಿ ಪ್ರೌಢಶಾಲೆಗಳಲ್ಲಿ ಕನ್ನಡವು ಪ್ರಥಮ ಕಡ್ಡಾಯ ಕಲಿಕೆ ಭಾಷೆ ಆಗಲಿದೆ.

1979: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊತ್ತ ಮೊದಲ ಅಧಿಕೃತ ಏಕದಿನ ಅಂತಾರಾಷ್ಟ್ರೀಯ ಪಂದ್ಯವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ವಿಶ್ವ ಕ್ರಿಕೆಟ್ ಸರಣಿ ವಿಭಜನೆಗೊಂಡ ಬಳಿಕ ಮತ್ತೆ ಒಗ್ಗೂಡಿದ ಆಸ್ಟ್ರೇಲಿಯಾ ಪಾಲಿನ ಮೊತ್ತ ಮೊದಲಿನ ಪಂದ್ಯ ಇದು.

1958: ಸಾಹಿತಿ ಪ್ರೇಮಮಯಿ ಜನನ.

1954: ಸಾಹಿತಿ ಕೊಂಡಜ್ಜಿ ವೆಂಕಟೇಶ ಜನನ.

1953: ಅಮೆರಿಕನ್ ನಾಟಕಕಾರ ಯುಗೇನ್ ಒ'ನೀಲ್ ಅವರು ಬೋಸ್ಟನ್ನಿನಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಮೃತರಾದರು. ನ್ಯೂಯಾರ್ಕ್ ನಗರದ ಬ್ರಾಡ್ವೇಯ ಹೊಟೇಲ್ ಒಂದರ ಕೊಠಡಿಯಲ್ಲಿ ಹುಟ್ಟಿದ ನೀಲ್ ಸತ್ತದ್ದು ಕೂಡಾ ಬೋಸ್ಟನ್ನಿನ ಹೊಟೇಲಿನಲ್ಲಿಯೇ!

1940: ಮಾರ್ಷಲ್ ಆರ್ಟ್ಸ್ ನಿಪುಣ ಹಾಗೂ ನಟ ಬ್ರೂಸ್ ಲೀ (1940-1973) ಹುಟ್ಟಿದ ದಿನ. `ಎಂಟರ್ ದಿ ಡ್ರ್ಯಾಗನ್' ಚಿತ್ರ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1932: ಫಿಲಿಪ್ಪೈನ್ಸಿನ ಬಿ.ಎಸ್. ಅಕ್ವಿನೊ ಜ್ಯೂನಿಯರ್ (1932-1983) ಹುಟ್ಟಿದ ದಿನ. ಅಧ್ಯಕ್ಷ ಫರ್ಡಿನಾಂಡ್ ಇ. ಮಾರ್ಕೋಸ್ ನೇತೃತ್ವದಲ್ಲಿ ಫಿಲಿಪ್ಪೈನ್ಸಿನಲ್ಲಿ ಮಾರ್ಷಲ್ ಲಾ ಆಡಳಿತ ಇದ್ದಾಗ ಇವರು ಮುಖ್ಯ ವಿರೋಧಿ ನಾಯಕರಾಗಿದ್ದರು. 1983ರಲ್ಲಿ ಇವರ ಹತ್ಯೆ ನಡೆಯಿತು.

1915: ಜೈನ ಸಾಹಿತ್ಯ ಭೂಷಣ, ಸಿದ್ಧಾಂತ ಶಿರೋಮಣಿ ಪದ್ಮನಾಭ ಶರ್ಮ ಅವರು ದೇವಚಂದ್ರ ಜೋಯಿಸರು- ಚಂದ್ರಮತಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿಯಲ್ಲಿ ಜನಿಸಿದರು.

1871: ಇಟಲಿಯ ಭೌತತಜ್ಞ ಗಿಯೋವನ್ನಿ ಗಿಯೋರ್ಗಿ (1871-1950) ಹುಟ್ಟಿದ ದಿನ. ಇವರು `ಗಿಯೋರ್ಗಿ ಇಂಟರ್ ನ್ಯಾಷನಲ್ ಸಿಸ್ಟಮ್ ಆಫ್ ಮೆಷರ್ ಮೆಂಟ್ (ಇದಕ್ಕೆ ಮೆಕ್ಸ ಸಿಸ್ಟಮ್ ಎಂಬ ಹೆಸರೂ ಇದೆ) ಮೂಲಕ ಖ್ಯಾತರಾಗಿದ್ದಾರೆ. ಮೀಟರ್, ಕಿಲೋಗ್ರಾಂ, ಸೆಕಂಡ್ ಮತ್ತು ಜೂಲ್ಸ್ ಇವುಗಳನ್ನು ಒಳಗೊಂಡ ವೈಜ್ಞಾನಿಕ ಮಾಪಕ ಯುನಿಟ್ಟುಗಳೆಂದು ಪರಿಗಣಿಸಲಾದ ಈ ಸಿಸ್ಟಮನ್ನು 1960ರಲ್ಲಿ ತೂಕ ಮತ್ತು ಅಳತೆಯ ಸಾಮಾನ್ಯ ಸಮ್ಮೇಳನ ಅನುಮೋದಿಸಿತು. 

1701: ಖಗೋಳ ತಜ್ಞ ಆಂಡರ್ಸ್ ಸೆಲ್ಸಿಯಸ್ (1701-1744) ಹುಟ್ಟಿದ ದಿನ. ಈತ ಸೆಲ್ಸಿಯಸ್ ಥರ್ಮಾಮೀಟರ್ ಸ್ಕೇಲ್ ಸಂಶೋಧಿಸಿದ ವ್ಯಕ್ತಿ. ಈ ಮಾಪಕವನ್ನು `ಸೆಂಟಿಗ್ರೇಡ್ ಸ್ಕೇಲ್' ಎಂಬುದಾಗಿಯೂ ಕರೆಯಲಾಗುತ್ತದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement