ಸಮುದ್ರ ಮಥನ 16:
ಆತ್ಮ ಸಂಯಮ, ಇಂದ್ರಿಯ ನಿಗ್ರಹ
ಆತ್ಮ ಸಂಯಮ, ಇಂದ್ರಿಯ ನಿಗ್ರಹ
ಹಲವರ ಮಧ್ಯದಲ್ಲಿ ಕೆಲವರು ಮಾತ್ರ ಶ್ರೀಮಂತರಾಗುತ್ತಾ, ಉಳಿದವರೆಲ್ಲ ಹಾಗೆಯೇ ಅಥವಾ ಬಡವರಾಗುತ್ತಿದ್ದರೆ, ಅಂತಹ ಶ್ರೀಮಂತರ ಶ್ರೀಮಂತಿಕೆ ಹೆಚ್ಚು ಕಾಲ ಬಾಳುವುದಿಲ್ಲ. ಅಲ್ಲಿ ಶ್ರೀಮಂತರಾದವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿದರೆ, ಶ್ರೀಮಂತರಿಗೂ ಸೇರಿದಂತೆ ಎಲ್ಲರಿಗೂ ಶ್ರೇಯಸ್ಕರ.
ಗೆಲ್ಲುವ ಆಸೆ ಇರುವವರಿಗೆ ಆತ್ಮ ಸಂಯಮ, ಇಂದ್ರಿಯ ನಿಗ್ರಹದ ಬಗೆಗಿನ ಮಾತು ಬಲು ಪ್ರಿಯ.
ಆ ಬಗ್ಗೆ ಒಂದಷ್ಟು ಹೇಳಬೇಕು. ಸಂಯಮ, ನಿಗ್ರಹ ಎಂದೆಲ್ಲ ಅಂದುಕೊಳ್ಳುವಾಗ ಆಸೆ-ಆಕಾಂಕ್ಷೆಗಳಿದ್ದು, ಮೇಲ್ನೋಟದಲ್ಲಿ ಸಾಧನೆಗೆ ಪೂರಕ-ಪ್ರೇರಕ ಎನಿಸದಿದ್ದರೆ ಅವುಗಳನ್ನು ಹತ್ತಿಕ್ಕುವ ಪ್ರಯೋಗ ನಡೆಯುತ್ತದೆ. ಆಸೆಗಳನ್ನು ಅದುಮಿಡುವ, ಮುಚ್ಚಿಡುವ ಕ್ರಿಯೆ ಸಾಗುತ್ತಾ ಹೋಗುತ್ತದೆ. ಒಂದೊಮ್ಮೆ ಅದರ ಒತ್ತಡ ಹೆಚ್ಚಾಗಿ ವಿಸ್ಫೋಟಗೊಂಡಾಗ ಹೀಗಾದದ್ದೇಕೆ, ಆದ ತಪ್ಪಾದರೂ ಏನು, ತಿದ್ದಿಕೊಳ್ಳಲು ಸಾಧ್ಯವೇ ಎಂದು ಎಡೆಬಿಡದೇ ಕೊರೆಯುತ್ತದೆ.
ಇದನ್ನೇ ಮಂಡೋದರಿ ತನ್ನ ಪತಿ ರಾವಣನ ಕಳೇಬರದ ಮುಂದಿದ್ದಾಗ "ನೀನು ಮೊದಲು ಇಂದ್ರಿಯಗಳನ್ನು ಗೆದ್ದು ತಪಸ್ಸು ಮಾಡಿದೆ. ಆಮೇಲೆ ಇಂದ್ರಿಯಗಳ ಆಕಾಂಕ್ಷೆ ಭುಗಿಲೆದ್ದು ಸೀತೆಯ ಚೆಲುವಿಗೆ ಸೋತೆ. ಅದರ ಫಲ ಏನಾಯಿತು? ಸರ್ವನಾಶದ ಹೊರತಾಗಿ ಬೇರೇನೂ ಅಲ್ಲ".
ಇಲ್ಲಿ ನೋಡಬೇಕು. ರಾವಣ ತನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ಗಟ್ಟಿಯಾಗಿ ಅದುಮಿಟ್ಟುಕೊಂಡು ತಪಸ್ಸು ಮಾಡಿದ. ತಪಸ್ಸಿನ ಕಾರಣದಿಂದ ಅಪಾರವಾದ ಬಲ ಬಂದಿತು. ಅದರಿಂದ ಹದಿನಾಲ್ಕು ಲೋಕಗಳನ್ನೂ ಗೆದ್ದ. ಇನ್ನೊಂದೆಡೆ ಆಂತರ್ಯದಲ್ಲಿ ಅದುಮಿಟ್ಟಿದ್ದ ಆಸೆಯ ಒತ್ತಡ ಏರುತ್ತಾ ಹೋಯಿತು. ಸೀತೆಯ ಚೆಲುವನ್ನು ಕಂಡು ಆಸೆಯ ಕಟ್ಟೆಯೊಡೆಯಿತು. ನಂತರ ಬುದ್ಧಿ-ವಿವೇಕಗಳನ್ನು ಗಾಳಿಗೆ ತೂರಿ ಅವಳನ್ನು ಅಪಹರಿಸಿ, ರಾಮನೊಂದಿಗೆ ಯುದ್ಧಕ್ಕಿಳಿದು, ಸಾವನ್ನಪ್ಪಿದ.
ಇದನ್ನೆಲ್ಲ ನೋಡಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಏನೋ ಮಹಾನ್ ಕಾರ್ಯವನ್ನು ಸಾಧಿಸುವ ಭರದಲ್ಲಿ ನಾವೇನು, ನಮ್ಮಿಂದ ಏನೇನು ಸಾಧ್ಯ, ನಮ್ಮ ಬಯಕೆಗಳೇನು, ಅವುಗಳಲ್ಲಿ ಪೂರಕವೆಷ್ಟು, ಮಾರಕವೆಷ್ಟು, ಸಾಧನೆಯ ಸಾಧ್ಯತೆ ಸಾರ್ಥಕವೇ, ಕಾಲ-ದೇಶಗಳಿಗೆ ಪ್ರಸ್ತುತವೇ ಎಂಬೆಲ್ಲ ಪ್ರಶ್ನೆಗಳಿಗೆ ತರ್ಕಬದ್ಧ ಉತ್ತರವನ್ನು ಕಂಡುಕೊಳ್ಳುವ ಕಾಳಜಿ ವಹಿಸುವುದಿಲ್ಲ. ನಮ್ಮದೊಂದೇ, ಸಾಧಿಸಬೇಕು ಎಂದು ಅನ್ನಿಸಿದೆ. ಅದು ಆಗಿಯೇ ತೀರಬೇಕು. ಯಾರಿಗೆ ಏನಾದರೆ ನಮಗೇನು, ಉಳಿದೆಲ್ಲ ಸಂಗತಿಗಳ ಬಗೆಗೆ ಅನಂತರದಲ್ಲಿ ತೀರ್ಮಾನಿಸುವ ಎನ್ನುವ ಮನೋಭಾವ ಘನವಾಗಿ ಮೂಡುತ್ತದೆ.
ಇಲ್ಲೇ ತಪ್ಪುತ್ತೇವೆ ಎನಿಸುತ್ತದೆ. ಹಲವರ ಮಧ್ಯದಲ್ಲಿ ಕೆಲವರು ಮಾತ್ರ ಶ್ರೀಮಂತರಾಗುತ್ತಾ, ಉಳಿದವರೆಲ್ಲ ಹಾಗೆಯೇ ಅಥವಾ ಬಡವರಾಗುತ್ತಿದ್ದರೆ, ಅಂತಹ ಶ್ರೀಮಂತರ ಶ್ರೀಮಂತಿಕೆ ಹೆಚ್ಚು ಕಾಲ ಬಾಳುವುದಿಲ್ಲ. ಅಲ್ಲಿ ಶ್ರೀಮಂತರಾದವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿದರೆ, ಶ್ರೀಮಂತರಿಗೂ ಸೇರಿದಂತೆ ಎಲ್ಲರಿಗೂ ಶ್ರೇಯಸ್ಕರ.
ಅಂತೆಯೇ, ನಮ್ಮ ಮನಸ್ಸು, ಇಂದ್ರಿಯಗಳ ವ್ಯಾಪಾರಗಳು ಇರುವುದರಿಂದ ಯುಕ್ತಾಯುಕ್ತ ವಿವೇಚನೆಯೊಂದಿಗೆ ಅವುಗಳನ್ನು ತೃಪ್ತಿಪಡಿಸುವುದು ಬಾಳಿಗೆ ಶ್ರೇಯಸ್ಕರ.
ಹಾಗಾಗಿ, ಸಂಯಮ, ನಿಗ್ರಹ ಎಂದರೆ ಬಯಕೆಗಳನ್ನು ಹತ್ತಿಕ್ಕಿದರೆ ಮುಗಿಯಿತು ಎಂದು ಭಾವಿಸಬೇಡಿ. ಅವುಗಳನ್ನು ಅರ್ಥಮಾಡಿಕೊಳ್ಳಿ, ಸಾರ್ಥಕ ಹೆಜ್ಜೆಗಳನ್ನಿಡಿ. ಒಳ್ಳೆಯದಾಗಲಿ.
1 comment:
ಒಳ್ಳೆಯ ಪ್ರವಚನ :-)
Post a Comment