Saturday, December 27, 2008

ಇಂದಿನ ಇತಿಹಾಸ History Today ಡಿಸೆಂಬರ್ 26

ಇಂದಿನ ಇತಿಹಾಸ

ಡಿಸೆಂಬರ್ 26

2007: ಖ್ಯಾತ ಧಾರ್ಮಿಕ ಯಾತ್ರಾ ಸ್ಥಳವಾದ ದೆಹಲಿಯ ಅಕ್ಷರಧಾಮ ದೇವಾಲಯವು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಗಿನ್ನೆಸ್ ಪುಸ್ತಕ ವಿಭಾಗದ ಹಿರಿಯ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಇದಕ್ಕೆ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ದೇವಾಲಯದ ಪ್ರಮುಖರಿಗೆ ನೀಡಿದರು. 86,342 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ದೇವಾಲಯದ ಉದ್ದ 356 ಅಡಿಗಳಾಗಿದ್ದು, ಅಗಲ 316 ಅಡಿಗಳು. ಇದರ ಎತ್ತರ 141 ಅಡಿಗಳು.  

2011:: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ, ಹಿಂದುಳಿದ ವರ್ಗಗಳ ನಾಯಕ, ಹಿರಿಯ ರಾಜಕಾರಣಿ ಸಾರೇಕೊಪ್ಪ ಬಂಗಾರಪ್ಪ (79 ) ಅವರು ಈದಿನ (ಡಿ.26) ನಸುಕಿನ ವೇಳೆ 12.45ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಮೂತ್ರಪಿಂಡ ವೈಫಲ್ಯ ಕಾರಣ ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಬಂಗಾರಪ್ಪ ಅವರು ಪತ್ನಿ ಶಕುಂತಲಾ, ಪುತ್ರರಾದ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದರು. 1932ರ ಅಕ್ಟೋಬರ್ 26ರಂದು ಶಿವಮೊಗ್ಗ ಜಿಲ್ಲೆಯ ಕುಬತೂರಿನಲ್ಲಿ ದಿವಂಗತ ಕಲಪ್ಲ್ಪ ಮತ್ತು ಕಲಮ್ಲ್ಮ ದಂಪತಿಯ ಪುತ್ರರಾಗಿ ಜನಿಸಿದ ಬಂಗಾರಪ್ಪ ಕರ್ನಾಟಕದ ವರ್ಣರಂಜಿತ ರಾಜಕಾರಣಿ. ನೇರ ನಡೆ ನುಡಿಯ ವ್ಯಕ್ತಿಯಾಗಿ ಜನಪ್ರಿಯರಾಗಿದ್ದರು. 1990ರಿಂದ 1992ರ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅವರು 14ನೇ ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ರಾಜಕಾರಣದಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಸಾಗುವುದಕ್ಕೆ ಹೆಸರಾದ ಬಂಗಾರಪ್ಪ ಕಾಂಗ್ರೆಸ್ಸಿಗೆ ವಿರುದ್ಧವಾಗಿ ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷಗಳನ್ನು ಕಟ್ಟಿದ್ದರು. 1967ರಿಂದ 1996ರವರೆಗೆ ರಾಜ್ಯವಿಧಾನಸಭೆಯ ಸದಸ್ಯರಾಗಿದ್ದ ಬಂಗಾರಪ್ಪ, ಸುದೀರ್ಘ ರಾಜಕಾರಣದ ಅವಧಿಯಲ್ಲಿ ಗೃಹ ರಾಜ್ಯ ಸಚಿವ, ಲೋಕೋಪಯೋಗಿ ಸಚಿವ, ಕಂದಾಯ, ಕೃಷಿ ತೋಟಗಾರಿಕಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1985-87ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅವರು 1996ರಲ್ಲಿ 11ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಬಿಜೆಪಿಯ ಅಯನೂರು ಮಂಜುನಾಥ್ ವಿರುದ್ಧ ಸೋತಿದ್ದರು. 1999ರಲ್ಲಿ 12ನೇ ಲೋಕಸಭೆಗೆ ಮತ್ತೆ ಆಯ್ಕೆಯಾಗಿದ್ದ ಅವರು 2003ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. 2005ರಲ್ಲಿ ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷವನ್ನು ಸೇರಿ ಲೋಕಸಭೆಗೆ ರಾಜೀನಾಮೆ ನೀಡಿದ್ದರು. ನಂತರ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೂಲಕ ಪುನಃ ಲೋಕಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಸಮಾಜವಾದಿ ಪಕ್ಷ ತ್ಯಜಿಸಿ ಲೋಕಸಭೆಗೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ ಚುನಾವಣೆಗೆ ನಿಂತಿದ್ದರು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ಎಸ್. ರಾಘವೇಂದ್ರ ಅವರಿಂದ ಪರಾಜಿತರಾಗಿದ್ದರು. ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ತ್ಯಜಿಸಿ ಜನತಾದಳವನ್ನು ಸೇರಿದ್ದ ಬಂಗಾರಪ್ಪ ತಾವು ಮತ್ತು ದೇವೇಗೌಡರು ರಾಜಕೀಯದಿಂದ ನಿವೃತ್ತರಾಗುವುದೇ ಇಲ್ಲ ಎಂದು ಘೋಷಿಸಿದ್ದರು.

2011: ರಾಷ್ಟ್ರೀಯ ಗಣಿತ ವರ್ಷ'ವಾಗಿ 2012ನೇ ಇಸವಿಯನ್ನು ಘೋಷಿಸುವ ಮೂಲಕ 'ಗಣಿತ ಮಾಂತ್ರಿಕ' ಶ್ರೀನಿವಾಸ ರಾಮಾನುಜಂ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಈದಿನ  ತಮಿಳುನಾಡಿನ ಚೆನ್ನೈಯಲ್ಲಿ ಗೌರವ ಸಲ್ಲಿಸಿದರು. ರಾಮಾನುಜಂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಂಗ್ ರಾಮಾನುಜಂ ಅವರ ಜನ್ಮದಿನವಾದ ಡಿಸೆಂಬರ್ 22ನ್ನು 'ರಾಷ್ಟ್ರೀಯ ಗಣಿತ ದಿನ' ವಾಗಿ ಆಚರಿಸಲಾಗುವುದು ಎಂದೂ ಘೋಷಿಸಿದರು.

2007: ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ) ಅವರು ತಮ್ಮ `ಅರಮನೆ' ಕಾದಂಬರಿಗೆ 2007ನೇ  ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೋ ಕಲೆಕ್ಟರ್ ಆಗಿದ್ದ ದಿನಗಳಲ್ಲಿ ಬಳ್ಳಾರಿ, ಕಡಪ, ಅನಂತಪುರ ಪ್ರದೇಶಗಳಲ್ಲಿ ನಡೆದ ಸಾಮಾಜಿಕ ಮತ್ತು ರಾಜಕೀಯ ಘಟನಾವಳಿಗಳನ್ನು ಆಧರಿಸಿದ `ಅರಮನೆ' ಕಾದಂಬರಿ ಕುಂವೀ ಅವರ 35ನೇ ಕೃತಿ. `ಕಪ್ಪು' ಮತ್ತು `ಶಾಮಣ್ಣ' ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕುಂವೀ  ಅವರ ಹದಿನಾಲ್ಕು ಕಾದಂಬರಿ ಮತ್ತು ಎಂಟು ಕಥಾ ಸಂಕಲನಗಳು ಪ್ರಕಟಗೊಂಡಿವೆ. `ಅರಮನೆ' ನನ್ನ ಹದಿನೈದು ವರ್ಷಗಳ ಸಂಶೋಧನೆಯ ಫಲ. ಸುಮಾರು 30 ಸಾವಿರ ಪುಟಗಳಷ್ಟಿದ್ದ ಮೂಲ ಬರಹವನ್ನು ಆರು ಬಾರಿ ತಿದ್ದಿ ಆರುನೂರು ಪುಟಗಳಿಗೆ ಇಳಿಸಲಾಗಿದೆ. ಹಿರಿಯ ಸಾಹಿತಿಗಳಾದ ಸಿ.ಎನ್. ರಾಮಚಂದ್ರನ್ ಮತ್ತು ಎಚ್. ಎಸ್. ರಾಘವೇಂದ್ರರಾವ್ ಅವರ ಮಾರ್ಗದರ್ಶನ ಮರೆಯಲಾಗದ್ದು ಎಂದು ಈ ಸಂದರ್ಭದಲ್ಲಿ ಕುಂವೀ ಸ್ಮರಿಸಿದರು.

2007: ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಿರಣ್ ಬೇಡಿ ಅವರ ಸ್ವಯಂ ನಿವೃತ್ತಿಯ ಮನವಿಯನ್ನು ಭಾರತ ಸರ್ಕಾರ ಕೊನೆಗೂ ಅಂಗೀಕರಿಸಿತು. ಪ್ರಸ್ತುತ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ದೆಹಲಿ ಘಟಕದ ಮಹಾ ನಿರ್ದೇಶಕರಾಗಿರುವ ಕಿರಣ್ ಬೇಡಿಯವರು ಆ ಸ್ಥಾನದಿಂದ ಮುಕ್ತಗೊಳ್ಳುವರು. ದೆಹಲಿ ಪೊಲೀಸ್ ಆಯುಕ್ತ ಸ್ಥಾನವನ್ನು ತಮಗಿಂತ ಎರಡು ವರ್ಷ ಕಿರಿಯ ಅಧಿಕಾರಿಗೆ ನೀಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದ ಕಿರಣ್ ಬೇಡಿ ನವೆಂಬರ್ 15ರಂದು ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಆಸಕ್ತಿ ಇರುವ ಕಾರಣ, ಅದಕ್ಕೆ ಅನುಕೂಲ ಮಾಡಿಕೊಳ್ಳುವುದಕ್ಕಾಗಿ ಈ ಸ್ವಯಂ ನಿವೃತ್ತಿ ಬಯಸಿದ್ದೇನೆಂದೂ ಅವರು ಸರ್ಕಾರಕ್ಕೆ ತಿಳಿಸಿದ್ದರು.  ಅರ್ಜಿಯ ಅಂಗೀಕಾರಕ್ಕಾಗಿ ಒತ್ತಡ ತರುವ ಸಲುವಾಗಿ ಅವರು ಫೆಬ್ರವರಿ 15ರ ವರೆಗೆ ದೀರ್ಘ ರಜೆಗೂ ಮನವಿ ಸಲ್ಲಿಸಿದ್ದರು. ಅಮೃತಸರದಲ್ಲಿ ಹುಟ್ಟಿದ ಕಿರಣ್ ಬೇಡಿ ತಮ್ಮ ಪೊಲೀಸ್ ಸೇವಾವಧಿಯಲ್ಲಿ ಹಲವು ಅತ್ಯುತ್ತಮ ಕೆಲಸಗಳನ್ನು ಮಾಡಿರುವುದರ ಜೊತೆಗೇ ವಿವಾದಗಳಲ್ಲೂ ಸಿಲುಕಿದ್ದರು. ಮೂರು ದಶಕಗಳ ಹಿಂದೆ ದೆಹಲಿಯ ಸಂಚಾರಿ ಪೊಲೀಸ್ ವಿಭಾಗದಲ್ಲಿದ್ದಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡದ್ದರಿಂದ `ಕ್ರೇನ್ ಬೇಡಿ' ಎಂದೇ ಜನಜನಿತರಾಗಿದ್ದರು. ತಿಹಾರ್ ಜೈಲಿನ ಮುಖ್ಯಸ್ಥೆಯಾಗಿದ್ದಾಗ ಅಲ್ಲಿ ತಂದ ಸುಧಾರಣೆಗಳು ಎಲ್ಲೆಡೆ ಸುದ್ದಿಯಾಗಿದ್ದವು. ಹಿಂದೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಪೊಲೀಸ್ ಸಲಹೆಗಾರ್ತಿಯಾಗಿದ್ದ ಕಿರಣ್ ಬೇಡಿಗೆ ಅತ್ಯುನ್ನತ ಸೇವೆಗಾಗಿ ವಿಶ್ವಸಂಸ್ಥೆಯ ಪದಕವೂ ಸಿಕ್ಕಿತ್ತು. ಮ್ಯಾಗ್ಸೆಸೆ ಪ್ರಶಸ್ತಿಯೂ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.

2007: ಬೆಂಗಳೂರಿನ ಪ್ರೆಸ್ ಕ್ಲಬ್ `ವರ್ಷದ ವ್ಯಕ್ತಿ' ಪ್ರಶಸ್ತಿಗೆ ಖ್ಯಾತ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಆಯ್ಕೆಯಾದರು. ಈ ಬಾರಿಯ `ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ'ಗೆ ಹಿರಿಯ ಪತ್ರಕರ್ತ ಕೆ.ಶ್ರೀಧರ ಆಚಾರ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಡಿ.ಬಾಬುರಾಜ್ ಆಯ್ಕೆಯಾದರು.

2007: ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಧಾರಾಕಾರ ಮಳೆ ಸುರಿದು, ಭೂಕುಸಿತದ ಘಟನೆಗಳು ಸಂಭವಿಸಿ 61 ಮಂದಿ ಅಸು ನೀಗಿದರು. ನೂರಾರು ಮಂದಿ ಕಾಣೆಯಾದರು. 

2007: ಅಲೆಕ್ಸಾಂಡರಿಯಾ ರೋಸ್ ನಗರದಲ್ಲಿ 14 ಮಹಡಿಗಳ ಕಟ್ಟಡ ಕುಸಿದು ಸಂಭವಿಸಿದ ಅನಾಹುತದಲ್ಲಿ ಮಡಿದವರ ಸಂಖ್ಯೆ 14ಕ್ಕೆ ಏರಿತು.

2007: ಪಶ್ಚಿಮ ನೇಪಾಳದಲ್ಲಿ ಸೇತುವೆ ಕುಸಿದ ಪರಿಣಾಮವಾಗಿ ವಾಹನವೊಂದು ನದಿಗೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿತು.

2007: `ಕಂದಾಯ ಇಲಾಖೆ  ಹಾಗೂ ನ್ಯಾಯಾಲಯದ ದಾಖಲೆಗಳ ಆಧಾರದ ಪ್ರಕಾರ ಚಿಕ್ಕಮಗಳೂರು ಸಮೀಪದ ದತ್ತಪೀಠವು ಹಿಂದೂಗಳಿಗೆ ಸೇರಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಪ್ರತಿಪಾದಿಸಿದರು. `ದತ್ತಪೀಠ ಸಂವರ್ಧನ ಸಮಿತಿ ಕಾರ್ಯದರ್ಶಿ ಬಿ.ಎಸ್.ವಿಠಲರಾವ್, ಸಮಾಜ ಸೇವಕ ಬಿ.ಎಸ್.ಮಂಜುನಾಥಸ್ವಾಮಿ ಜೊತೆಗೆ ಪೀಠಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಲಾಗಿದೆ. ಇದರ ಪ್ರಕಾರ ದತ್ತಪೀಠ ಹಿಂದುಗಳಿಗೆ ಸೇರಬೇಕು. ರಾಜ್ಯ ಸರ್ಕಾರ ಹಾಗೂ ಕೋಮು ಸೌಹಾರ್ದ ವೇದಿಕೆಗೆ ವಸ್ತುಸ್ಥಿತಿ ಗೊತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಅನಗತ್ಯ ವಿವಾದ ಮಾಡಲಾಗುತ್ತಿದೆ' ಎಂದು ಚಿಮೂ ಆರೋಪಿಸಿದರು.

2006: ಖ್ಯಾಗ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾದ ಶೇನ್ ವಾರ್ನ್ ಟೆಸ್ಟಿನಲ್ಲಿ 700 ವಿಕೆಟುಗಳ ಗಡಿ ದಾಟಿ, ಕ್ರಿಕೆಟ್ ಜಗತಿನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದರು. ಮೆಲ್ಬೋರ್ನಿನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆ್ಯಂಡ್ರ್ಯೂ ಸ್ಪ್ರಾಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 700ನೇ ವಿಕೆಟ್ ಪಡೆಯುವ ಮೂಲಕ ಅವರು ಈ ಸಾಧನೆ ಮೆರೆದರು. ಪಂದ್ಯದಲ್ಲಿ ಅವರು ಪಡೆದ ವಿಕೆಕಟುಗಳ ಸಂಖ್ಯೆ 704ಕ್ಕೆ ಮುಟ್ಟಿತು.

2006: ನೈಜೀರಿಯಾದ ಅತ್ಯಂತ ದೊಡ್ಡ ನಗರವಾದ ಲಾಗೋಸ್ನಲ್ಲಿ ಸಂಭವಿಸಿದ ಭಾರಿ ಪೈಪ್ ಲೈನ್ ಸ್ಫೋಟದಲ್ಲಿ 700ಕ್ಕೂ ಹೆಚ್ಚು ಜನ ಭೀಕರವಾಗಿ ಸಾವನ್ನಪ್ಪಿದರು. ತೈಲ ಪೈಪ್ ಲೈನ್ ಸ್ಫೋಟಗೊಂಡಿರುವ ಸ್ಥಳದಲ್ಲಿ ಗುರುತು ಹಚ್ಚಲೂ ಸಾಧ್ಯವಾಗದಷ್ಟು ಸುಟ್ಟು ಹೋಗಿರುವ 500ಕ್ಕೂ ಹೆಚ್ಚು ಮಂದಿಯ ಶವಗಳನ್ನು ಎಣಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಜನನಿಬಿಡ ಅಬುಲೆ ಎಗ್ಬಾದಲ್ಲಿ ರಾತ್ರಿ ಕಳ್ಳರು ಈ ಪೈಪ್ ಲೈನನ್ನು ತೂತು ಮಾಡಿದ್ದು, ಅದರಿಂದ ಹರಿದು ಬಂದ ತೈಲವನ್ನು ಸಂಗ್ರಹಿಸಲು ನೂರಾರು ಮಂದಿ ಮುಗಿಬಿದ್ದರು. ಈ ಸಂದರ್ಭದಲ್ಲಿ ಬೆಂಕಿಹೊತ್ತಿಕೊಂಡು ಸ್ಫೋಟ ಸಂಭವಿಸಿತು. 

2006: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮಾಡಿದ್ದಕ್ಕಾಗಿ ಎರಡು ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಗುರಿಯಾಗಿರುವ ಮಾಜಿ ಮಿಲಿಟರಿ ಆಡಳಿತಗಾರ ಹಾಗೂ ಜತಿಯಾ ಪಕ್ಷ (ಜೆಪಿ)ದ ಅಧ್ಯಕ್ಷ ಜನರಲ್ ಹುಸೇನ್ ಮೊಹಮ್ಮದ್ ಇರ್ಷಾದ್ ಅವರಿಗೆ, ಕೆಳಹಂತದ ನ್ಯಾಯಾಲಯಕ್ಕೆ ಶರಣಾಗುವಂತೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ತಾಕೀತು ಮಾಡಿತು. ರಜಾಕಾಲೀನ ನ್ಯಾಯಮೂರ್ತಿ ಎಂ.ಜಾಯನುಲ್ ಅಬೆದಿನ್ ಅವರು ಇರ್ಷಾದ್ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿ ಈ ಆದೇಶ ಹೊರಡಿಸಿದರು. ಇರ್ಷಾದ್ ಅವರು 1990ರಲ್ಲಿ ರಕ್ತರಹಿತ ಸೇನಾ ಕ್ರಾಂತಿ ಮೂಲಕ ಆಡಳಿತ ಸೂತ್ರ ಹಿಡಿದು, ಅನಂತರ ಒಂಬತ್ತು ವರ್ಷ ಆಡಳಿತ ನಡೆಸಿದ್ದರು. ಆದರೆ ಇದಕ್ಕೂ ಮುಂಚೆಯೇ ಅಪರಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರುವರ್ಷ ಸೆರೆವಾಸ ಅನುಭವಿಸಿದ್ದರು. ಈಗ, ಜಪಾನ್ ನಿರ್ಮಿತ 520 ದೋಣಿ ಮತ್ತು 10 ಜಲಶುದ್ಧೀಕರಣ ಯಂತ್ರಗಳ ಖರೀದಿಯಲ್ಲಿ ಇರ್ಷಾದ್ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ದೇಶದ ಭ್ರಷ್ಟಾಚಾರ ವಿರೋಧ ದಳದವರು 1991ರಲ್ಲಿಯೇ ಮೊಕದ್ದಮೆಯೊಂದನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇರ್ಷಾದ್ ತಪ್ಪಿತಸ್ಥರು ಎಂದು ವಿಭಾಗೀಯ ವಿಶೇಷ ಸೆಷನ್ಸ್ ನ್ಯಾಯಾಲಯ 1995ರ ಜುಲೈ 6ರಂದು ತೀರ್ಪು ನೀಡಿತ್ತು.

2006: ಸಣ್ಣ ಪ್ರಮಾಣದ ತೀವ್ರತೆಯ ಭೂಕಂಪಗಳಿಗೂ ತಾಳಿಕೆ ಬಾರದ ಕಟ್ಟಡ ನಿರ್ಮಿಸಲು ತಪ್ಪು ನಕಾಶೆ ಸಿದ್ಧಪಡಿಸಿದ ಟೋಕಿಯೋದ  ವಾಸ್ತುಶಿಲ್ಪಿ  ಹಿದೆತ್ಸುಗು ಅನೆಹ್ ಗೆ (49) ಟೋಕಿಯೋದ ಸ್ಥಳೀಯ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಆದರೆ, ಶಿಕ್ಷೆಯ ಜಾರಿಯನ್ನು ಅಮಾನತಿನಲ್ಲಿ ಇಟ್ಟಿತು. ದೊಡ್ಡ ಪ್ರಮಾಣದ ಬಹುಮಹಡಿ ಕಟ್ಟಡಗಳು ಮತ್ತು ಹೋಟೆಲುಗಳ ನಿರ್ಮಾಣ ಸಂದರ್ಭದಲ್ಲಿ ಭೂಕಂಪಗಳನ್ನು ತಾಳಿಕೊಳ್ಳಲು ಬೇಕಾದಂತಹ ಸಾಮಗ್ರಿಗಳನ್ನು ಹಾಕಲಾಗಿದೆ ಎನ್ನುವ ತಪ್ಪು ಅಂಕಿ-ಅಂಶಗಳನ್ನು ಆತ ನೀಡಿದ್ದರಿಂದ ಕೋರ್ಟ್ ಈ ಶಿಕ್ಷೆಗೆ ಗುರಿಮಾಡಿತು. ಕಟ್ಟಡ ನಿರ್ಮಾಣ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ, ಪರಿವೀಕ್ಷಣಾಧಿಕಾರಿಗಳಿಗೂ ಅಮಾನತು ಶಿಕ್ಷೆಯನ್ನು ನೀಡಲಾಯಿತು.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇರಾಕಿ ನ್ಯಾಯಾಧೀಶರ ಮಂಡಳಿ ಎತ್ತಿ ಹಿಡಿಯಿತು. ಈ ನಿರ್ಧಾರದ ಪ್ರಕಾರ ಸದ್ದಾಂ ಹುಸೇನ್ ಅವರನ್ನು 30 ದಿನಗಳ ಒಳಗಾಗಿ ಗಲ್ಲಿಗೆ ಏರಿಸಬೇಕಾಗುತ್ತದೆ. 1982 ರಲ್ಲಿ ದುಜೈಲ್ ಪಟ್ಟಣದಲ್ಲಿ ತಮ್ಮ ಕೊಲೆ ಯತ್ನದ ವಿರುದ್ಧ ನಡೆದ ಸೇಡಿನ ಕಾರ್ಯಾಚರಣೆಯಲ್ಲಿ 148 ಮಂದಿ ಶಿಯಾಗಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಾಂ ಹುಸೇನ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

2006: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿರುವ ಕೆಸಮುಡಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಯುವಕ ಕುತ್ಲೂರು ದಿನಕರ ಮೃತನಾದ. ಇದರಿಂದಾಗಿ ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈವರೆಗೆ ಪ್ರಾಣತೆತ್ತವರ ಸಂಖ್ಯೆ 8ಕ್ಕೆ ಏರಿತು.

2005: ಬೆಂಗಳೂರು ಸೇರಿದಂತೆ ದೇಶದ ಹಲವು ನಗರ, ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಬಾಂಗ್ಲಾದೇಶದ ಹರ್ಕತ್ ಉಲ್ ಜಿಹಾದ್ ಸಂಘಟನೆಯ ಮೂವರು ಉಗ್ರಗಾಮಿಗಳನ್ನು ದೆಹಲಿ ಪೊಲೀಸರು ಬಂಧಿಸಿದರು. ಹರ್ಕತ್ ಉಲ್ ಸಂಘಟನೆಯ ಸದಸ್ಯ ಬಂಧಿತ ಹಿಲಾಲುದ್ದೀನ್ ಹೈದರಾಬಾದಿನಲ್ಲಿ ಅಕ್ಟೋಬರ್ 12ರಂದು ಎಸ್ ಟಿ ಎಫ್ ಕಚೇರಿ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿ.

2005: ಏಕದಿನ ಕ್ರಿಕೆಟ್ ಪಂದ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸಿದ ಆಸ್ಟ್ರೇಲಿಯಾದ ಮಾಧ್ಯಮ ಜಗತ್ತಿನ ದಿಗ್ಗಜ ಕೆರ್ರಿ ಪ್ಯಾಕರ್ (68) ಸಿಡ್ನಿಯ ತಮ್ಮ ನಿವಾಸದಲ್ಲಿ ನಿಧನರಾದರು. 1937ರ ಡಿಸೆಂಬರ್ 17ರಂದು ಸರ್ ಫ್ರಾಂಕ್ ಹಾಗೂ ಗ್ರೆಟೆಲ್ ಅವರ ಪುತ್ರನಾಗಿ ಜನಿಸಿದ ಕೆರ್ರಿ ಬಾಲ್ಯದಲ್ಲಿಯೇ ಲಘು ಪಾರ್ಶ್ವವಾಯುನಿಂದ ಬಳಲಿದ್ದರು. 9 ತಿಂಗಳು ಆಸ್ಪತ್ರೆಯಲ್ಲಿ ಕಳೆದ ಪರಿಣಾಮವಾಗಿ ಸಮವಯಸ್ಕರಿಗಿಂತ ಶಿಕ್ಷಣದಲ್ಲಿ ಹಿಂದುಳಿದಿದ್ದರು. ಕಲಿಕಾ ಸಾಮರ್ಥ್ಯವೂ ಕುಗ್ಗಿತ್ತು. ಆದರೆ ಕ್ರೀಡೆಯಲ್ಲಿ ಭಾರಿ ಆಸಕ್ತಿ ಬೆಳೆಸಿಕೊಂಡ ಅವರು 1956ರಲ್ಲಿ ತಂದೆಯ ಆಸ್ಟ್ರೇಲಿಯನ್ ಕನ್ನಾಲಿ ಡೇಟೆಡ್ ಪ್ರೆಸ್ (ಎಸಿಪಿ) ಸೇರಿಕೊಂಡಿದ್ದರು. 1974ರಲ್ಲಿ ತಂದೆ ಸಾಯುವ ಹೊತ್ತಿಗೆ ಕೆರ್ರಿ ಮಾಧ್ಯಮ ವಲಯದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿದ್ದರು. 1982ರ ವೇಳೆಗೆ ಎಸಿಪಿ ಮೇಲೆ ಪೂರ್ಣ ಸ್ವಾಮ್ಯ ಹೊಂದಿದ್ದರು. ಮಾಧ್ಯಮ ಜಗತ್ತಿನ `ಬಾದಶಹ' ಆಗಿ ಮೆರೆದ ಕೆರ್ರಿ ಕಾಂಗರೂಗಳ ನಾಡಿನಲ್ಲಿ ಟೆಲಿವಿಷನ್ ಜಾಲವನ್ನೂ ಹರಡಿದ್ದಲ್ಲದೆ, ಪತ್ರಿಕಾರಂಗದಲ್ಲಿ ತಮ್ಮ ಛಾಪು ಮೂಡಿಸಿದರು. 1970ರಲ್ಲಿ ಕ್ರಿಕೆಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲು ಕೆರ್ರಿ ಅವರೇ ಕಾರಣ. ವಿಶ್ವ ಕ್ರಿಕೆಟ್ ಸರಣಿ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದ್ದು, 1977ರಲ್ಲಿ ವಿಶ್ವ ಸರಣಿ ನಡೆಸಲು ಆರ್ಥಿಕ ನೆರವು ನೀಡಿದ್ದು ಕೆರ್ರಿ ಪ್ಯಾಕರ್ ಅವರೇ. ಪ್ಯಾಕರ್ ಮುದ್ರಣ ಹಾಗೂ ಪ್ರಸಾರ ಸಂಸ್ಥೆ (ಪಿಬಿಎಲ್) ಆಸ್ಟ್ರೇಲಿಯಾದಲ್ಲಿ ಪ್ರಮುಖ ಚಾನೆಲ್ ಹಾಗೂ ನಿಯತಕಾಲಿಕಗಳನ್ನು ಹೊಂದಿದೆ. 1990ರಲ್ಲಿ ಪ್ಯಾಕರ್ ಪೋಲೋ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದರು. ಆಗ ಕೆಲವು ಕ್ಷಣ ಅವರ ಹೃದಯ ಬಡಿತವೇ ಸ್ಥಬ್ದಗೊಂಡಿತ್ತು. ಆಗ ಸಾವಿನ ದವಡೆಯಿಂದ ಪಾರಾಗಿದ್ದರು. 2000ದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಹೆಲಿಕಾಪ್ಟರ್ ಚಾಲಕನೊಬ್ಬ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ. 2003ರಲ್ಲಿ ಮೂತ್ರಕೋಶದಲ್ಲಿ ತೊಂದರೆ ಕಾಣಿಸಿಕೊಂಡು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 

2004: ಇಂಡೋನೇಷ್ಯ, ಶ್ರೀಲಂಕಾ, ಭಾರತ, ಥಾಯ್ಲೆಂಡ್, ಪೂರ್ವ ಆಫ್ರಿಕ, ಮಾಲ್ದೀವ್ಸ್, ಮಲೇಷ್ಯ, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿದಂತೆ 13 ರಾಷ್ಟ್ರಗಳ ಕರಾವಳಿ ಪ್ರದೇಶಗಳನ್ನು ಹಿಂದೂ ಮಹಾಸಾಗರದ ಆಳದಿಂದ  ಹೊರಟ ದೈತ್ಯ 'ಸುನಾಮಿ' ಅಲೆಗಳು ನುಂಗಿ ನೀರು ಕುಡಿದವು. ಒಟ್ಟು 2.30 ಲಕ್ಷ ಮಂದಿ ಮೃತರಾದರು. ಅವರಲ್ಲಿ ಅಸುನೀಗಿದವರು 1.85 ಲಕ್ಷಕ್ಕೂ ಹೆಚ್ಚು ಮಂದಿಯಾದರೆ, ಕಣ್ಮರೆಯಾದವರ ಸಂಖ್ಯೆ ಸುಮಾರು 44 ಸಾವಿರ. ಇಂಡೋನೇಷ್ಯ ಒಂದರಲ್ಲೇ ಮೃತರಾದವರ ಸಂಖ್ಯೆ 1.69 ಲಕ್ಷ, ಶ್ರೀಲಂಕೆಯಲ್ಲಿ ಸತ್ತವರು 35,000, ಭಾರತದಲ್ಲಿ 16,000. ಮನುಕುಲದ ಅಚ್ಚಳಿಯದ ದುರಂತವಾಗಿ ನೆನಪಿನಲ್ಲಿ ಉಳಿದ ಈ ಸುನಾಮಿ ಭಾರತದ ಅಂಡಮಾನ್ ದ್ವೀಪವನ್ನು ಸಂಪೂರ್ಣವಾಗಿ ನಾಶ ಮಾಡಿತು. ತಮಿಳುನಾಡಿನ ತೀರಪ್ರದೇಶಗಳೂ ಹಾನಿಗೊಂಡವು. ಸುಮಾತ್ರ, ಇಂಡೋನೇಷ್ಯಗಳ ಕರಾವಳಿಗಳೂ ನೆಲಕಚ್ಚಿದವು. ಯಾವುದೇ ಸುಳಿವು ಕೂಡಾ ಇಲ್ಲದೆ ಬಂದೆರಗಿದ ದುರಂತವಾದ್ದರಂದ ಜನರಿಗೆ ತಪ್ಪಿಸಿಕೊಳ್ಳಲು ದಾರಿಯೇ ಉಳಿಯಲಿಲ್ಲ.

1999: ಭಾರತದ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ (1918-1999) ಅವರು ನವದೆಹಲಿಯಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು. 

1985: ಅಮೆರಿಕಾದ ನಿಸರ್ಗ ಚಿಂತಕ, ಪ್ರಾಣಿ ತಜ್ಞ ಡಯನ್ ಫಾಸ್ಸಿ (1932-1985) ಅವರು ರ್ವಾಂಡಾದ ಕರಿಸೋಕೆ ರೀಸರ್ಚ್ ಸೆಂಟರಿನಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಇವರು ಕಾಡಿನಲ್ಲಿ ಗೊರಿಲ್ಲಾಗಳ ಬಗ್ಗೆ ಅಧ್ಯಯನ ನಡೆಸಿದ್ದರು.

1982: `ಟೈಮ್' ಮ್ಯಾಗಜಿನ್ ಮೊತ್ತ ಮೊದಲ ಬಾರಿಗೆ `ವರ್ಷದ ಮನುಷ್ಯ'ನಾಗಿ ಮನುಷ್ಯೇತರ ವಸ್ತುವನ್ನು ಆಯ್ಕೆ ಮಾಡಿತು. 1982ರಲ್ಲಿ ಈ ಗೌರವಕ್ಕೆ ಪಾತ್ರವಾದದ್ದು `ಒಂದು ಕಂಪ್ಯೂಟರ್'!.

1950: ಸಾಹಿತಿ, ಪ್ರಾಧ್ಯಾಪಕಿ ಮಾಲತಿ ಪಟ್ಟಣಶೆಟ್ಟಿ ಅವರು ಶಾಂತೇಶ ಬಸವಣ್ಣೆಪ್ಪ ಕೋಟೂರ- ಶಿವಗಂಗಾ ದಂಪತಿಯ ಮಗಳಾಗಿ ಕೊಲ್ಹಾಪುರದಲ್ಲಿ ಜನಿಸಿದರು.

1941: ವಿನ್ ಸ್ಟನ್ ಚರ್ಚಿಲ್ ಅವರು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ಸಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊತ್ತ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1929: ಮಲಯಾಳಂ ಚಿತ್ರನಟ ಪ್ರೇಮ್ ನಜೀರ್ (1929-1989) ಹುಟ್ಟಿದ ದಿನ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನ ಪಾತ್ರ ವಹಿಸುವ ಮೂಲಕ ಇವರು ದಾಖಲೆ ಸ್ಥಾಪಿಸಿದ್ದಾರೆ.

1914: ಸಾಹಿತಿ ಟಿ.ಎನ್. ಮಹಾದೇವಯ್ಯ ಜನನ.

1898: ಮೇರಿ ಮತ್ತು ಪಿಯರೇ ಕ್ಯೂರಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಲ್ಲಿ `ರೇಡಿಯಂ' ಸಂಶೋಧನೆಯನ್ನು ಪ್ರಕಟಿಸಿದರು. ಮಿನರಲ್ ಯುರಿನೈಟ್ನ ಒಂದು ವಿಧವಾದ `ಪಿಚ್ಬ್ಲೆಂಡೆ' ಬಲವಾದ `ರೇಡಿಯೊ ಆಕ್ಟಿವ್' ವಸ್ತುವನ್ನು ಹೊಂದಿದೆ ಎಂದು ಅವರು ಹೇಳಿದರು. 1906ರಲ್ಲಿ ಅಪಘಾತವೊಂದರಲ್ಲಿ ಅಸು ನೀಗಿದ ಪಿಯರೆ ಕ್ಯೂರಿ ಅವರ ಗೌರವಾರ್ಥ ಈ ರೇಡಿಯೊ ಆಕ್ಟಿವಿಟಿಗೆ `ಕ್ಯೂರಿ' ಎಂಬುದಾಗಿ ಹೆಸರಿಡಲಾಯಿತು. ಮೇರಿ ಅವರು `ರೇಡಿಯೊ-ಆಕ್ಟಿವಿಟಿ' ಶಬ್ದವನ್ನು ಚಾಲ್ತಿಗೆ ತಂದರು. ಲ್ಯಾಟಿನ್ನಿನ `ರೇಡಿಯಸ್'ನಿಂದ ರೇಡಿಯಂ ಬಂದಿದ್ದು ಅದರ ಅರ್ಥ `ರೇ' ಅಂದರೆ `ಕಿರಣ' ಎಂದು.

1893: ಚೀನಾದ ಮುತ್ಸದ್ದಿ ಮಾವೋ-ತ್ಸೆ-ತುಂಗ್ (1893-1976) ಹುಟ್ಟಿದ ದಿನ. ಚೀನಾದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯ ನಾಯಕತ್ವ ವಹಿಸಿದ ಇವರು ಅಲ್ಲಿನ ಮೊತ್ತ ಮೊದಲ ಕಮ್ಯೂನಿಸ್ಟ್ ಧುರೀಣ.

1530: ಭಾರತದಲ್ಲಿ ಮೊಘಲ್ ರಾಜವಂಶವನ್ನು ಸ್ಥಾಪಿಸಿದ ಬಾಬರ್ (1483-1530) ಆಗ್ರಾದಲ್ಲಿ ಮೃತನಾದ. ಈತ 1526-30ರ ಅವಧಿಯಲ್ಲಿ ಚಕ್ರವರ್ತಿಯಾಗಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement