Monday, December 1, 2008

ಭಯೋತ್ಪಾದನೆಯ 'ಪೆಡಂಭೂತ': ವಾಸ್ತವದ ಮರೆವು ಮುಳುವಾಯಿತೇ?

ಭಯೋತ್ಪಾದನೆಯ 'ಪೆಡಂಭೂತ':

ವಾಸ್ತವದ ಮರೆವು ಮುಳುವಾಯಿತೇ?


ಭಯೋತ್ಪಾದನೆ ಯಾರಿಂದಲೇ ನಡೆಯಲಿ ಅದನ್ನು ಮಟ್ಟಹಾಕುವ ರಾಜಕೀಯ ಇಚ್ಛಾಶಕ್ತಿ ನಮ್ಮ ನಾಯಕರಿಗೆ ಬರಬೇಕು. ಏಕೆಂದರೆ ಭಯೋತ್ಪಾದನೆಯ ಹಾವಳಿಗೆ ನಲುಗಿರುವ ಭಾರತ ಏನೂ ತಪ್ಪು ಮಾಡದ ಸಹಸ್ರಾರು ಮಂದಿ ಮುಗ್ಧರ ಜೊತೆಗೆ ಒಬ್ಬ ಪ್ರಧಾನಿ ಹಾಗೂ ಮಾಜಿ ಪ್ರಧಾನಿಯನ್ನೂ ಕಳೆದುಕೊಂಡಿದೆ ಎಂಬುದನ್ನು ಎಂದೂ ಮರೆಯುವಂತಿಲ್ಲ. ಭಯೋತ್ಪಾದಕ ಕೃತ್ಯಗಳ ಹಿಂದಿನ ವಾಸ್ತವ ವಿಚಾರ ಮರೆತು 'ಭ್ರಾಮಕ' ಜಗತ್ತಿನತ್ತ ಅತಿಪ್ರಚಾರಕ್ಕೆ ಹೊರಟದ್ದೇ ಮುಂಬೈ 'ಉಗ್ರ ತಾಂಡವ'ಕ್ಕೆ ಸ್ಫೂರ್ತಿಯಾಗಿರಬಹುದೇ?


ನೆತ್ರಕೆರೆ ಉದಯಶಂಕರ

ಇದನ್ನು ಬೇರೆ ಯಾವುದೇ ರೀತಿಯಲ್ಲೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ನೈಜ ಸ್ಥಿತಿ ಏನು ಎಂಬುದನ್ನು ಮರೆತ ಆ ಒಂದು ಕ್ಷಣವೇ ಇಂತಹ ಆಘಾತಕಾರಿ ಪರಿಸ್ಥಿತಿಗೆ ನಾಂದಿಯಾಯಿತು ಎನಿಸಿದರೆ ಬಹುಶಃ ಅತಿಶಯೋಕ್ತಿ ಆಗಲಾರದು..!

ಏಕೆಂದರೆ ಇದೇ ವರ್ಷ ಮೇ ತಿಂಗಳಲ್ಲಿ ಜೈಪುರದಲ್ಲಿ 8 ಕಡೆ ಸ್ಫೋಟ ಸಂಭವಿಸಿ 65ಕ್ಕೂ ಹೆಚ್ಚು ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ ಆಗಿತ್ತು. ಜುಲೈ 25ರಂದು ಬೆಂಗಳೂರಿನಲ್ಲಿ 9 ಸ್ಫೋಟ ಸಂಭವಿಸಿ ಇಬ್ಬರು ಸತ್ತು 12ಕ್ಕೂ ಹೆಚ್ಚು ಮಂದಿ ಗಾಯಗೊಂಡು ನಗರ ಗಡ ಗಡ ನಡುಗಿತ್ತು. ಅದರ ಮರುದಿನ ಗುಜರಾತಿನ ಅಹಮದಾಬಾದಿನಲ್ಲಿ ಅದೇ ಮಾದರಿಯ ಸರಣಿ ಬಾಂಬ್ ಸ್ಫೋಟಗಳು ಅಂದಾಜು 50 ಮಂದಿಯನ್ನು ಬಲಿ ತೆಗೆದುಕೊಂಡು ನೂರಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದವು. ನಂತರ ಬಂದ ವರದಿಗಳ ಪ್ರಕಾರ ಸೂರತ್ನಲ್ಲಿ 18ಕ್ಕೂ ಹೆಚ್ಚು ಜೀವಂತ ಬಾಂಬ್ ಪತ್ತೆಯಾದವು. ಇವುಗಳೆಲ್ಲ ಸ್ಪೋಟಗೊಂಡಿದ್ದರೆ? ಸೂರತ್ನಲ್ಲೂ ರಕ್ತದ ಓಕುಳಿಯಾಗಿ ಬಿಡುತ್ತಿತ್ತು.

ಸೆಪ್ಟೆಂಬರಿನಲ್ಲಿ ರಾಜಧಾನಿ ದೆಹಲಿಯಲ್ಲಿ 6 ಕಡೆ ಸ್ಪೋಟ ಸಂಭವಿಸಿ 15 ಜನ ಸತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಬೆನ್ನಲ್ಲೇ ಅಕ್ಟೋಬರ್ 30ರಂದು ಅಸ್ಸಾಮಿನ ಗುವಾಹಟಿ, ಕೋಕ್ರಝಾರ್ ಹಾಗೂ ಬೋಂಗಿಯಾಗಾಂವ್ ಜಿಲ್ಲೆಗಳಲ್ಲಿ ಏಕಕಾಲದಲ್ಲಿ 13 ಸ್ಫೋಟ ಸಂಭವಿಸಿ 77ಕ್ಕೂ ಹೆಚ್ಚು ಜನ ಸತ್ತು 350ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಬಿಜೆಪಿಯ ಮಾತು ಬಿಡಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ರೂಪಿಸಿದ್ದ ವಿಶೇಷ ಪೋಟಾ ಕಾಯ್ದೆ ರದ್ದಾದ ಲಾಗಾಯ್ತಿನಿಂದಲೂ ಕೇಂದ್ರದ ಯುಪಿಎ ಸರ್ಕಾರದ ಬಳಿ ಭಯೋತ್ಪಾದನೆ ಬಗ್ಗೆ ಬಡಿಯಲು ಸಮರ್ಥ ಅಸ್ತ್ರವೇ ಇಲ್ಲ ಎಂದು ಟೀಕಿಸುತ್ತಲೇ ಇದೆ. ಅದರದ್ದು ರಾಜಕೀಯವೇ ಇರಬಹುದು. ಆದರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥ ವೀರಪ್ಪ ಮೊಯಿಲಿ ಅವರ ಸಲಹೆ ಕೂಡಾ ರಾಜಕೀಯವೇ?

ಭಯೋತ್ಪಾದನೆ ಬಗ್ಗು ಬಡಿಯಲು ವಿಶೇಷ ಕಾನೂನು ರೂಪಿಸಬೇಕಾದ ಅಗತ್ಯ ಇದೆ ಎಂದು ಕೇಂದ್ರ ಸರ್ಕಾರಕ್ಕೆ  ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ 'ಆಡಳಿತ ಸುಧಾರಣೆ'ಗಾಗಿ ಕೊಟ್ಟ ವರದಿಯಲ್ಲಿ ವೀರಪ್ಪ ಮೊಯಿಲಿ ಶಿಫಾರಸು ಮಾಡಿದರು.

ಆ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಭಯೋತ್ಪಾದನೆ ಬಗ್ಗು ಬಡಿಯಲು ಅಗತ್ಯ ಕ್ರಮಗಳ ಬಗ್ಗೆ ಚರ್ಚೆ, ಘೋಷಣೆ, ವಾದವಿವಾದ ಎಲ್ಲ ನಡೆಯಿತು. ಅಷ್ಟೆ. ಕೇಂದ್ರ ಸರ್ಕಾರ ಮತ್ತೆ ಬಂದದ್ದು ಮಾತ್ರ ಅಂತಹ ವಿಶೇಷ ಕಾನೂನಿನ ಅಗತ್ಯವೇನೂ ಇಲ್ಲ. ಇರುವ ಕಾನೂನನ್ನೇ ಬಿಗಿ ಗೊಳಿಸಿದರೆ ಸಾಕು ಎಂಬ ತೀರ್ಮಾನಕ್ಕೆ.

ಅಸ್ಸಾಂನಲ್ಲಿ ಸಂಭವಿಸಿದ ಸ್ಫೋಟ ಘಟನೆಗಳ ನಂತರ ಒಂದು ತಿಂಗಳೂ ಸರಿಯಾಗಿ ಕಳೆದಿಲ್ಲ. ನವೆಂಬರ್ 26ರ ರಾತ್ರಿ ಮುಂಬೈಯ 'ಮುಕುಟ' ಹೋಟೆಲ್ ತಾಜ್ ಜೊತೆಗೆ ಟ್ರೈಡೆಂಟ್ ಹೋಟೆಲ್ ಮತ್ತು ನಾರಿಮನ್ ಹೌಸಿಗೆ ಭಯೋತ್ಪಾದಕರು ನುಗ್ಗಿದರು.

ಭಾರತ ಹಿಂದೆಂದೂ ಕಾಣದಂತಹ ಭೀಕರ ಭಯೋತ್ಪಾದನೆ ಇದು. ಇಡೀ ಮುಂಬೈ ಮಹಾನಗರಕ್ಕೇ ಒತ್ತೆ ಸೆರೆ ಅನುಭವ. ಗ್ರೆನೇಡ್ ಎಸೆತ, ಎಕೆ-47 ಮಾತ್ರವೇ ಅಲ್ಲ, ಅದಕ್ಕಿಂತಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ, ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡದ್ದು, ಪೊಲೀಸರ ವಾಹನವನ್ನೇ ಬಳಸಿಕೊಂಡು ಗುಂಡಿನ ಸುರಿಮಳೆಗರೆದದ್ದು ಎಲ್ಲವೂ ಭಯೋತ್ಪಾದಕರಿಂದ ಬಳಕೆಯಾದ ಹೊಸ ಹೊಸ ವಿಧಾನಗಳು!

ಅಮೆರಿಕದಲ್ಲಿ 'ಟ್ರೇಡ್ ಸೆಂಟರ್' ಮೇಲೆ ನಡೆದ ದಾಳಿ ಮಾದರಿಯಲೇ ಭಾರತದಲ್ಲೂ ತಾಜ್ ಹೋಟೆಲನ್ನು ಉರುಳಿಸಿ, ಕಮ್ಮಿಯೆಂದರೂ 5000 ಜನರನ್ನು ಕೊಲೆಗೈಯಬೇಕೆಂಬ ಷಡ್ಯಂತ್ರ ಅವರದ್ದಾಗಿತ್ತು ಎಂಬುದು ನಮ್ಮ ರಾಷ್ಟ್ರೀಯ ಭದ್ರತಾ ಪಡೆ 'ಎನ್ ಎಸ್ ಜಿ' ಯೋಧರು 62 ಗಂಟೆಗಳ ನಿರಂತರ ಧೀರೋಧಾತ್ತ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರನ್ನು ಬಗ್ಗು ಬಡಿದು ಹಾಕುವ ಹೊತ್ತಿಗೆ ಬೆಳಕಿಗೆ ಬಂತು.

ಈ 'ಉಗ್ರ ತಾಂಡವ'ದಲ್ಲಿ 141 ಮಂದಿ ನಾಗರಿಕರು, 22 ಮಂದಿ ವಿದೇಶೀಯರು, ಇಬ್ಬರು ಎನ್ ಎಸ್ ಜಿ ಕಮಾಂಡೋ, 15 ಪೊಲೀಸರು, ಒಬ್ಬ ಆರ್ ಪಿ ಎಫ್ ಪೇದೆ, ಇಬ್ಬರು ಹೋಂಗಾರ್ಡ್ಗಳು ಸೇರಿ ಒಟ್ಟು 195 ಜನರ ಬಲಿದಾನವಾಯಿತು. 321 ಮಂದಿ ಗಾಯಗೊಂಡರು. 11 ಭಯೋತ್ಪಾದಕರು ಹತರಾದರೆ ಒಬ್ಬನೇ ಒಬ್ಬ ಭಯೋತ್ಪಾದಕ ಜೀವಂತವಾಗಿ ಸೆರೆ ಸಿಕ್ಕಿದ. ನವೆಂಬರ್ 26ರ ರಾತ್ರಿಯಿಂದ ನವೆಂಬರ್ 29ರ ಮುಂಜಾನೆವರೆಗಿನ ಈ ಅವಧಿಯಲ್ಲಿ ಮುಂಬೈಗಾದ ಒಟ್ಟು ನಷ್ಟ 4000 ಕೋಟಿ ರೂಪಾಯಿಗಳಿಗೂ ಹೆಚ್ಚು.

ಬಿಜೆಪಿಯ ಸಲಹೆ ಬಿಡಿ, ಕಾಂಗ್ರೆಸ್ ಧುರೀಣರೇ ಆದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವೀರಪ್ಪ ಮೊಯಿಲಿ ಅವರ ಶಿಫಾರಸಿಗಾದರೂ ಮನ್ನಣೆ ಕೊಟ್ಟು ಎಚ್ಚೆತ್ತುಕೊಂಡಿದ್ದರೆ? 

ರಾಜಕೀಯ ಪಕ್ಷಗಳು 'ರಾಜಕೀಯ' ನಡೆಸುವುದಕ್ಕೂ ಒಂದು ಮಿತಿ ಇರಬೇಕು. ಭಾರತದಲ್ಲಿ ಸಂಭವಿಸಿದ ನೂರಾರು ಭಯೋತ್ಪಾದಕ ಕೃತ್ಯಗಳಲ್ಲಿ ಜೆಹಾದಿ ಉಗ್ರಗಾಮಿಗಳು ಸೇರಿದಂತೆ ವಿದೇಶೀ ಪ್ರೇರಿತ ಭಯೋತ್ಪಾದಕರ ಕೈವಾಡ ಕಂಡು ಬಂದಿರುವುದು ಹೆಚ್ಚು ಎಂಬುದು ಮತ್ತೆ ಮತ್ತೆ ನಡೆದ ತನಿಖೆಗಳಿಂದ ಬೆಳಕಿಗೆ ಬಂದಿದೆ. ಯಾವತ್ತೂ 'ಹಿಂದೂ ಭಯೋತ್ಪಾದನೆ' ಎಂಬುದು ಕಂಡು ಬಂದ ಉದಾಹರಣೆಯೇ ಇಲ್ಲ. ಆದರೆ ಹೆಚ್ಚು ಕಡಿಮೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಡೀ ದೇಶದ ದಿಕ್ಕನ್ನೇ ತಪ್ಪಿಸುವಂತೆ 'ಅಭಿನವ ಭಾರತ' ಎಂಬ ಸಂಘಟನೆಯೊಂದರ 'ಹಿಂದೂ ಭಯೋತ್ಪಾದನೆ'ಗೆ ಸರ್ಕಾರ ಕೊಟ್ಟ ಮಹತ್ವ ಅಚ್ಚರಿ ಮೂಡಿಸುವಂತಹುದು.

ಸಹಸ್ರಾರು ಮಂದಿಯ ಸಾವಿಗೆ ಕಾರಣರಾದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಹಾಕಿಕೊಂಡವರ ವಿಚಾರಣೆಗೆ ನೀಡದ ಮಹತ್ವವನ್ನು ಈ ಹೊಸ ಸಂಘಟನೆಯ ಕೆಲವೇ ಕೆಲವು ಕಾರ್ಯಕರ್ತರೆನ್ನಲಾದವರ ವಿಚಾರಣೆಗೆ ಕೊಟ್ಟದ್ದು, ಇತರ ಭಯೋತ್ಪಾದಕ ದಾಳಿಗಳ ಸಾವು- ನೋವಿಗೆ ಹೋಲಿಸಿದರೆ 'ಅಜ-ಗಜ' (ಆಡು-ಆನೆ) ಅಂತರದಷ್ಟು ಕ್ಷುಲ್ಲಕ ಎನಿಸುವಂತಹ ಪರಿಣಾಮ ಉಂಟು ಮಾಡಿದ 'ಮಾಲೆಗಾಂವ್ ಸ್ಫೋಟ'ದ ತನಿಖೆಯ ಪ್ರಗತಿ ಬಗ್ಗೆ ತನಿಖಾ ಸಂಸ್ಥೆಗಳು ಬೆನ್ನು ತಟ್ಟಿಕೊಳ್ಳುತ್ತಾ ಹೇಳಿಕೊಂಡದ್ದು, ಇತರ ಭಯೋತ್ಪಾದಕರನ್ನು ಮುಖಕ್ಕೆ ಬಟ್ಟೆ ಮುಚ್ಚಿ ಕರೆದೊಯ್ದರೆ, ಈ 'ಉಗ್ರರನ್ನು' ಎಲ್ಲರಿಗೂ ಕಾಣುವಂತೆ 'ಪ್ರದರ್ಶಿಸುತ್ತಾ' ನ್ಯಾಯಾಲಯಕ್ಕೆ ಒಯ್ದದ್ದು..... ಇವನ್ನೆಲ್ಲ ಕಂಡವರಿಗೆ ನಮ್ಮ ತನಿಖಾ ಸಂಸ್ಥೆಗಳು, ಗುಪ್ತಚರ ಸಂಸ್ಥೆಗಳು 'ಭಯೋತ್ಪಾದನೆ'ಯ ವಾಸ್ತವ ಜಗತ್ತನ್ನು ಬಿಟ್ಟು ಭ್ರಾಮಕ ಜಗತ್ತಿನತ್ತ ಹೊರಳುತ್ತಿವೆಯೇ ಎಂಬ ಶಂಕೆ ಮೂಡಿದ್ದು ಸುಳ್ಳಲ್ಲ. (ಅಧಿಕಾರಸ್ಥ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ತನಿಖಾ ಅಧಿಕಾರಿಗಳ ಮೇಲೆ ಅಂತಹ ಒತ್ತಡ ತಂದಿದ್ದಿರಲೂ ಬಹುದು!) ಅಂತಹ ಶಂಕೆ ಸಂಪೂರ್ಣ ಆಧಾರರಹಿತವಲ್ಲ ಎಂಬುದನ್ನು ಇದೀಗ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಎತ್ತಿ ತೋರಿಸಿದೆ. 

ಭಯೋತ್ಪಾದನೆ ಎಂಬ 'ಪೆಡಂಭೂತ' ಭಾರತವನ್ನು ಯಾವ ರೀತಿ ಕಾಡುತ್ತಾ ಬಂದಿದೆ ಎಂಬ ಬಗ್ಗೆ ಸರಿಯಾಗಿ ಲಕ್ಷ್ಯ ಹರಿಸದೇ ಇದ್ದರೆ ಇದನ್ನು ಬೇರು ಸಹಿತವಾಗಿ ಕಿತ್ತು ಹಾಕುವುದು ಸುಲಭವಲ್ಲ.

ಭಾರತವನ್ನು ಕಾಡುತ್ತಿರುವ ಈ ಪೆಡಂಭೂತ ಬಗ್ಗೆ ಒಂದಿಷ್ಟು ಗಮನಿಸೋಣ:

ವಾಸವ್ತವಾಗಿ ಇಂತಹ ಭಯೋತ್ಪಾದನೆಗಳೆಲ್ಲ ವಿದೇಶಗಳಿಂದ ವರದಿಯಾಗುತ್ತಿದ್ದುದೇ ಹೆಚ್ಚು. ಕ್ರೈಸ್ತರು ಮತ್ತು ಮುಸ್ಲಿಮರ ನಡುವಣ ತಿಕ್ಕಾಟಗಳ ಪರಿಣಾಮವಾಗಿ ಹುಟ್ಟಿದ ಪೆಡಂಭೂತ ಈ ಭಯೋತ್ಪಾದನೆ. ಈಗ ಅದು ಜಗತ್ತಿನೆಲ್ಲಡೆ ಹರಡಿದ್ದು, ಭಾರತಕ್ಕೂ ವ್ಯಾಪಕ ತಲೆನೋವಾಗಿ ಪರಿಣಮಿಸಿದೆ.

ಭಾರತದಲ್ಲಿ ಭಯೋತ್ಪಾದನೆಯ ಮೂಲ ಹುಡುಕಿದರೆ ಅದರ ಬೇರು ಕಾಣುವುದು ಗಡಿ ಪ್ರದೇಶಗಳಲ್ಲಿ. ದೀರ್ಘಕಾಲದಿಂದ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಾ ಬಂದಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಭಾರತದ `ಸಪ್ತ ಸಹೋದರಿ ರಾಜ್ಯಗಳು' ಎಂದೇ ಹೆಸರು ಪಡೆದಿರುವ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ. ಅಸ್ಸಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ, ಮಿಜೋರಂ, ಮಣಿಪುರ ಮತ್ತು ನಾಗಾಲ್ಯಾಂಡ್ ಪ್ರಾದೇಶಿಕ ಸ್ವಾಯತ್ತತೆ ಹೆಸರಿನಲ್ಲಿ ಹುಟ್ಟಿಕೊಂಡ ಭಯೋತ್ಪಾದನೆಗೆ ನಲುಗಿದ್ದವು. ಹಾಗೆಯೇ ಮಧ್ಯ ಭಾರತದ ಬಿಹಾರ, ಒರಿಸ್ಸಾ ಮತ್ತು ಆಂಧ್ರಪ್ರದೇಶವನ್ನು ಕಾಡಿದ ನಕ್ಸಲೀಯ ಭಯೋತ್ಪಾದನೆ ಈಗಿನ ದಿನಗಳಲ್ಲಿ ಕರ್ನಾಟಕವನ್ನೂ ಕಾಡುತ್ತಿದೆ.

ಭಾರತವನ್ನು ಅದೇ ರೀತಿ ಪ್ರಬಲವಾಗಿ ಕಾಡಿದ್ದ ಇನ್ನೊಂದು ಭಯೋತ್ಪಾದನೆ ಸಿಖ್ ಉಗ್ರಗಾಮಿಗಳದ್ದು. ಪಂಜಾಬ್ ರಾಜ್ಯವನ್ನು ತನ್ನ ಆಡುಂಬೊಲವನ್ನಾಗಿ ಮಾಡಿಕೊಂಡ ಸಿಖ್ ಭಯೋತ್ಪಾದನೆ ಭಾರತ ಆಗಿನ ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ ಸಹಸ್ರಾರು ಮುಗ್ಧರನ್ನು ಬಲಿ ತೆಗೆದುಕೊಂಡಿತು. ಇದರ ಪರಿಣಾಮವಾಗಿಯೇ 1984ರಲ್ಲಿ ದೆಹಲಿಯು ಸಿಖ್ ವಿರೋಧಿ ದಂಗೆಗಳನ್ನು ಕಂಡಿತು. ಹಾಗೆಯೇ ಎಲ್ಟಿಟಿಇ ಭಯೋತ್ಪಾದನೆ ನಿಗ್ರಹಿಸಲು ಶ್ರೀಲಂಕೆಗೆ ನೆರವೀಯಲು ಹೋದ ಪರಿಣಾಮವಾಗಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್ಟಿಟಿಇ ಬಾಂಬಿಗೆ ಬಲಿಯಾಗಬೇಕಾಯಿತು.  

ಭಾರತದಲ್ಲಿ ಬಹುಶಃ ಮೊತ್ತ ಮೊದಲನೆಯ ಭಯೋತ್ಪಾದಕ ದಂಗೆ 1950ರಷ್ಟು ಹಳೆಯದು. ಅದು ಆರಂಭವಾದದ್ದು ನಾಗಾಲ್ಯಾಂಡಿನಲ್ಲಿ. ನೂರಾರು ಮಂದಿಯನ್ನು ಬಲಿ ಪಡೆದ ಬಳಿಕ 2001ರಲ್ಲಿ ಭಾರತ ಸರ್ಕಾರ ಮತ್ತು ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಐಸಾಕ್ ಮುಯಿವಾ (ಎನ್ಎಸ್ ಸಿ ಎನ್- ಐಎಂ) ನಡುವಣ ಒಪ್ಪಂದದೊಂದಿಗೆ ಇದಕ್ಕೆ ತೆರೆ ಬಿತ್ತು.

1992ರಿಂದ 2000ದ ನಡುವಣ ಅವಧಿಯಲ್ಲಿ ಈ ದಂಗೆ- ಹಿಂಸಾಚಾರಗಳಿಗೆ 599 ನಾಗರಿಕರು, 235 ಭದ್ರತಾ ಸಿಬ್ಬಂದಿ, 862 ಭಯೋತ್ಪಾದಕರು ಬಲಿಯಾದರು ಎಂಬುದು ಸರ್ಕಾರಿ ಲೆಕ್ಕಾಚಾರ.

ಭಾರತದಲ್ಲಿ ನಂತರ ಹಿಂಸಾಚಾರಕ್ಕೆ ನಲುಗಿದ್ದು ಅಸ್ಸಾಂ. 1979ರ ಸುಮಾರಿನಲ್ಲಿ ಅಸ್ಸಾಮಿನ ಮೂಲ ನಿವಾಸಿಗಳು ಬಾಂಗ್ಲಾದೇಶದಿಂದ ಬಂದ ಅತಿಕ್ರಮಣಕಾರರ ವಿರುದ್ಧ ಸಿಡಿದೆದ್ದರು. ಈ ಅತಿಕ್ರಮಣಕಾರರು ತಮ್ಮೆಲ್ಲ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆತಂಕ ಅವರದು. ಅತಿಕ್ರಮಣಗಾರರನ್ನು ಪತ್ತೆ ಹಚ್ಚಿ ಬಾಂಗ್ಲಾಕ್ಕೆ ಹಿಂದೆ ಕಳುಹಿಸಬೇಕೆಂಬ ಆಗ್ರಹದೊಂದಿಗೆ ಅಹಿಂಸಾತ್ಮಕವಾಗಿಯೇ ಆರಂಭವಾಗಿದ್ದ ಹೋರಾಟ ಪೊಲೀಸರ ದಮನ ಕ್ರಮಗಳಿಂದ ಹಿಂಸೆಗೆ ತಿರುಗಿ, ಚುನಾವಣೆ ಕಾಲದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ನಾಂದಿಯಾಯಿತು. ಕೊನೆಗೆ 1985ರಲ್ಲಿ ಕೇಂದ್ರ ಸರ್ಕಾರ ಮತ್ತು ಚಳವಳಿ ನಾಯಕರ ಮಧ್ಯ `ಅಸ್ಸಾಂ ಒಪ್ಪಂದ' ರೂಪುಗೊಂಡು ಈ ಚಳವಳಿ ಅಂತ್ಯಗೊಂಡಿತು.

ಒಪ್ಪಂದದ ಪ್ರಕಾರ 1961-71ರ ನಡುವೆ ಅಸ್ಸಾಮಿಗೆ ಬಂದವರಿಗೆ ಅಲ್ಲಿನ ನಿವಾಸಿಗಳಾಗಲು ಅವಕಾಶ ಕಲ್ಪಿಸಿ 1971ರ ಬಳಿಕ ಬಂದವರನ್ನು ಗುರುತಿಸಿ ಹಿಂದಕ್ಕೆ ಕಳುಹಿಸುವ ತೀರ್ಮಾನಕ್ಕೆ ಬರಲಾಯಿತು. 1971ರ ಬಳಿಕ ಅಸ್ತಿತ್ವಕ್ಕೆ ಬಂದ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ `ಉಲ್ಫಾ' ಇತ್ಯಾದಿ ಸಂಘಟನೆಗಳು ಮಾತ್ರ ಈಗಲೂ ಸ್ವತಂತ್ರ ಅಸ್ಸಾಂ ಘೋಷಣೆ ಹಾಕುತ್ತಾ ಆಗೀಗ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿವೆ.

ತ್ರಿಪುರದಲ್ಲೂ ನಡೆದ ಇದೇ ಮಾದರಿ ಚಟುವಟಿಕೆಗಳು `ತ್ರಿಪುರಾ ಗುಡ್ಡಗಾಡು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿ' ರಚನೆಯ ಬಳಿಕ ಹದ್ದುಬಸ್ತಿಗೆ ಬಂದವು. ಮಣಿಪುರದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ, ಮಿಜೋರಮ್ಮಿನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮತ್ತಿತರ ಸಂಘಟನೆಗಳು ಸ್ವಾಯತ್ತತೆಯ ಬೇಡಿಕೆ ಇಟ್ಟು ಹೋರಾಟಕ್ಕೆ ಇಳಿದ್ದಿದರೂ ಈಗ ಅವುಗಳ ಪ್ರಭಾವ ಅಷ್ಟಾಗಿ ಇಲ್ಲ.
ನಕ್ಸಲೀಯ ಭಯೋತ್ಪಾದನೆ:

ಬಿಹಾರ, ಒರಿಸ್ಸಾ ಮತ್ತು ಆಂಧ್ರಪ್ರದೇಶವನ್ನು ಬಹುಮಟ್ಟಿಗೆ ನಡುಗಿಸಿದ್ದು ನಕ್ಸಲೀಯ ಭಯೋತ್ಪಾದನೆ. ಸಿಪಿಐ -ಎಂಎಲ್, ಪೀಪಲ್ಸ್ ವಾರ್, ಎಂಸಿಸಿ, ರಣವೀರ ಸೇನಾ ಹಾಗೂ ಮತ್ತು ಬಲಬೀರ್ ಸೇನೆಗಳ ಭಯೋತ್ಪಾದಕ ಚಟುವಟಕೆಗಳ ಪರಿಣಾಮವಾಗಿ ಬಿಹಾರ ಹಲವಾರು ಹತ್ಯಾಕಾಂಡಗಳನ್ನು ಕಂಡಿತು. ಈ ಜಾತಿ ಸಂಘಟನೆಗಳು ಮಕ್ಕಳು, ಮಹಿಳೆಯರು ಮುದುಕರು ಎನ್ನದೆ ಎಲ್ಲೆಂದರಲ್ಲಿ ನಡೆಸುತ್ತಿದ್ದ ದಾಳಿಗಳಿಂದಾಗಿ ರಕ್ತಪಾತದ ಯುಗವನ್ನೇ ಕಂಡ ಬಿಹಾರ ಈ ಸಂಘಟನೆಗಳ ಉನ್ನತ ನಾಯಕರ ಬಂಧನದ ಬಳಿಕ ಇತ್ತೀಚೆಗೆ ನಿರಾತಂಕದ ಉಸಿರಾಡುತ್ತಿದೆ. ಆಂಧ್ರಪ್ರದೇಶದಲ್ಲಂತೂ ನಕ್ಸಲೀಯ ಗುಂಪುಗಳು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ದಾಳಿ ಮಾಡುವವರೆಗೂ ಮುಂದುವರೆದ್ದಿದವು. ನಕ್ಸಲೀಯ ಭಯೋತ್ಪಾದನೆಯ ಜಾಲಕ್ಕೆ ಇತ್ತೀಚಿನ ಹೊಸ ಸೇರ್ಪಡೆ ಕರ್ನಾಟಕ.

1970-80ರ ಅವಧಿಯಲ್ಲಿ ಖಾಲಿಸ್ಥಾನ ರಚನೆಯ ಗುರಿಯೊಂದಿಗೆ ಆರಂಭವಾದ ಪ್ರತ್ಯೇಕತಾ ಚಳವಳಿ ಪಂಜಾಬ್ ರಾಜ್ಯವನ್ನೇ ರಣಾಂಗಣವನ್ನಾಗಿ ಮಾಡಿ ಬಿಟ್ಟಿತ್ತು. ಸಂತ ಭಿಂದ್ರನ್ ವಾಲೆಯ ನೇತೃತ್ವದ ಈ ಸಿಖ್ ಉಗ್ರಗಾಮಿಗಳಿಗೆ ನೆರೆಯ ಪಾಕಿಸ್ಥಾನದಿಂದ ಯಥೇಚ್ಛ ನೆರವು ಲಬಿಸಿದ್ದರಿಂದ ಎಲ್ಲೆಂದರಲ್ಲಿ ಹಿಂಸಾಚಾರ ವಿಜೃಂಭಿಸಿತು. ಕಡೆಗೆ 1984ರಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆ ಮೂಲಕ ಅಮೃತಸರದ ಸ್ವರ್ಣದೇಗುಲಕ್ಕೆ ಸೇನೆ ನುಗ್ಗಿಸಿ ಭಿಂದ್ರನ್ವಾಲೆ ಸಹಿತವಾಗಿ ಉಗ್ರರನ್ನು ಮಟ್ಟ ಹಾಕಬೇಕಾಯಿತು. ಸರ್ಕಾರಿ ಲೆಕ್ಕಾಚಾರದ ಪ್ರಕಾರ ಈ ಸಂದರ್ಭದಲ್ಲಿ ಸತ್ತವರ ಸಂಖ್ಯೆ 1000ದ ಒಳಗಿದ್ದರೂ, ಮಾನವ ಹಕ್ಕು ಸಂಘಟನೆಗಳ ಪ್ರಕಾರ ಸತ್ತವರ ಸಂಖ್ಯೆ ಅಂದಾಜು 5000. 

ಇವೆಲ್ಲಕ್ಕಿಂತ ಹೆಚ್ಚಾಗಿ ಭಾರತವನ್ನು ತೀವ್ರವಾಗಿ ವ್ಯಾಪಿಸಿಕೊಂಡು ಕಾಡುತ್ತಿರುವುದು ಜೆಹಾದಿ ಭಯೋತ್ಪಾದನೆ. ಜೆಹಾದಿ ಭಯೋತ್ಪಾದನೆಯ ಮೂಲ ಜಮ್ಮು ಮತ್ತು ಕಾಶ್ಮೀರ ವಿವಾದ. ಪಾಕಿಸ್ಥಾನದ ಐ ಎಸ್ ಐ ಬೆಂಬಲದೊಂದಿಗೆ ನಿರಂತರ ಹಿಂಸಾಚಾರ- ಭಯೋತ್ಪಾದನೆಯ ಕೃತ್ಯಗಳನ್ನು ಎಸಗುತ್ತಿರುವ ಸಂಘಟನೆಗಳು ಒಂದೆರಡಲ್ಲ- ಜೈಶ್ ಎ ಮೊಹಮ್ಮದ್, ಹಿಜ್ ಬುಲ್ ಮುಜಾಹಿದೀನ್, ಲಷ್ಕರ್ ಇ ತೊಯ್ಬಾ, ಹಿಜ್ಬುಲ್ ಮುಜಾಹಿದೀನ್, ಅಲ್ ಖೈದಾ, ಸಿಮಿ ಇತ್ಯಾದಿ. ಬೆಂಗಳೂರು, ಅಹಮದಾಬಾದ್ ಸರಣಿ ಸ್ಫೋಟದ ಬಳಿಕ ಈ ಪಟ್ಟಿಗೆ `ಇಂಡಿಯನ್ ಮುಜಾಹಿದೀನ್' ಎಂಬ ಹೊಸ ಸಂಘಟನೆ ಸೇರ್ಪಡೆಯಾದರೆ, ಈಗ ಮುಂಬೈ ದಾಳಿ ಬಳಿಕ ಕೇಳಿ ಬಂದಿರುವ ಹೊಸ ಹೆಸರು 'ಡೆಕ್ಕನ್ ಮುಜಾಹಿದೀನ್'. ನಿಷೇಧಿತ `ಸಿಮಿ'ಯ ಹೊಸ ಮುಖವಾಡಗಳು ಇವು ಆಗಿರಬಹುದು ಎಂಬುದು ಪೊಲೀಸರ ಗುಮಾನಿ.

ಕಾಶ್ಮೀರ ವಿಚಾರ ಬಿಟ್ಟರೆ ಜೆಹಾದಿ ಉಗ್ರಗಾಮಿಗಳ ಸಿಟ್ಟಿಗೆ ಇರುವ ಕಾರಣಗಳು ಎಂದರೆ ವಿವಾದಿತ ಬಾಬರಿ ಮಸೀದಿ- ರಾಮಜನ್ಮಭೂಮಿ ಸಂಕೀರ್ಣದ ನಾಶ ಹಾಗೂ ಗುಜರಾತಿನಲ್ಲಿ ಗೋಧ್ರಾ ನಂತರ ನಡೆದ ಹಿಂಸಾಚಾರ.

ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾದ ಬಳಿಕ ಅದನ್ನು ಪಾಕಿಸ್ಥಾನಕ್ಕೆ ಸೇರಿಸುವ ಯತ್ನವಾಗಿ ಪಾಕಿಸ್ಥಾನ ನೀರೆರೆಯುತ್ತಾ ಬಂದದ್ದರ ಫಲವಾಗಿ ಕಾಶ್ಮೀರದಲ್ಲಿ ವಿಜೃಂಭಿಸಿದ ಜೆಹಾದಿ ಭಯೋತ್ಪಾದನೆಗೆ ಅಸುನೀಗಿದವರು ಸಹಸ್ರಾರು ಮಂದಿ. ಅಲ್ಲಿ ಹಿಂಸಾಚಾರ ಬಹುತೇಕ ನಿಗ್ರಹಗೊಳ್ಳುತ್ತಿದ್ದಂತೆಯೇ ದೇಶದ ಇತರ ಕಡೆಗಳಿಗೆ ಅದು ತನ್ನ ಕಬಂಧ ಬಾಹುವನ್ನು ಚಾಚಿತು.

ಅದರ ವ್ಯಾಪಕತೆಯತ್ತ ಒಮ್ಮೆ ದೃಷ್ಟಿ ಹರಿಸಿ: 1993 ಮೇ 12 ಮುಂಬೈ ಬಾಂಬ್ ಸ್ಫೋಟದಲ್ಲಿ 257 ಸಾವು, 1998 ಕೊಯಮತ್ತೂರು ಬಾಂಬ್ ಸ್ಫೋಟದಲ್ಲಿ 46 ಸಾವು, 2001 ಅಕ್ಟೋಬರ್ 1 ಜಮ್ಮು ಕಾಶ್ಮೀರ ಅಸೆಂಬ್ಲಿ ಸಂಕೀರ್ಣಕ್ಕೆ ಬಾಂಬ್ 35 ಸಾವು, 2001 ಡಿಸೆಂಬರ್ 13 ದೆಹಲಿಯಲ್ಲಿ ಸಂಸತ್ ಭವನದ ಮೇಲೆ ದಾಳಿ- ರಕ್ಷಣಾ ಸಿಬ್ಬಂದಿ ಸಹಿತ 14 ಸಾವು, 2002 ಸೆಪ್ಟೆಂಬರ್ 24 ಗುಜರಾತ್ ಅಕ್ಷರಧಾಮ ದೇಗುಲ ಮೇಲೆ ದಾಳಿ-31 ಸಾವು, 2003 ಮೇ 14 ಜಮ್ಮು ಸಮೀಪ ಸೇನಾ ನೆಲೆ ಮೇಲೆ ದಾಳಿ 30 ಸಾವು, 2003 ಆಗಸ್ಟ್ 25 ಮುಂಬೈಯಲ್ಲಿ ಕಾರುಬಾಂಬ್ ಸ್ಫೋಟ 52 ಸಾವು, 2005 ಜುಲೈ 5 ಅಯೋಧ್ಯಾ ರಾಮಜನ್ಮಭೂಮಿ ಮೇಲೆ ದಾಳಿ, 2005 ಅಕ್ಟೋಬರ್ 29 ದೆಹಲಿ ಸರಣಿ ಬಾಂಬ್ ಸ್ಫೋಟ-70 ಸಾವು, 2006 ಮೇ 7 ವಾರಣಾಸಿ ಬಾಂಬ್ ದಾಳಿ -21 ಸಾವು, 2006 ಮುಂಬೈ 7 ರೈಲುಗಳಲ್ಲಿ ಬಾಂಬ್ 200 ಸಾವು, 2006 ಸೆಪ್ಟೆಂಬರ್ 8 ಮಹಾರಾಷ್ಟ್ರದ ಮಾಲೆಗಾಂವ್ ಮಸೀದಿ ಬಳಿ ಸ್ಫೋಟ 37 ಸಾವು, 2007 ಫೆಬ್ರುವರಿ 18 ಭಾರತ ಮತ್ತು ಪಾಕಿಸ್ಥಾನದ ನಡುವೆ ಸಂಚರಿಸುವ ಸಂಜೌತಾ ಎಕ್ಸ್ ಪ್ರೆಸ್ ಸ್ಫೋಟ- 68 ಪ್ರಯಾಣಿಕರ ಸಾವು, 2007 ಮೇ 18 ಹೈದರಾಬಾದ್ ಮೆಕ್ಕಾ ಮಸೀದಿ ಬಳಿ ಸ್ಫೋಟ 13 ಸಾವು, 2007 ಆಗಸ್ಟ್ 25  ಹೈದರಾಬಾದ್ ಸ್ಫೋಟ 44 ಸಾವು, 2008 ಮೇ 13 ಜೈಪುರ ಸರಣಿ ಸ್ಫೋಟ- 65 ಸಾವು - ಇವು ಬೆಂಗಳೂರು- ಅಹಮದಾಬಾದ್ ಸ್ಫೋಟಗಳಿಗೆ ಮುಂಚಿನ ಪ್ರಮುಖ ಭಯೋತ್ಪಾದಕ ದಾಳಿಗಳು.    

ಭಯೋತ್ಪಾದಕ ದಾಳಿಗಳಿಗೆ ಬಲಿಯಾಗುವವರಲ್ಲಿ ಜಾತಿ, ಧರ್ಮದ ಬೇಧವಿಲ್ಲ. ಮಾಲೆಗಾಂವ್, ಹೈದರಾಬಾದ್ ಮಸೀದಿಗಳ ಬಳಿ ಹಾಗೂ ಸಂಜೌತಾ ಎಕ್ಸ್ ಪ್ರೆಸ್ ಮೇಲಿನ ದಾಳಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವಿಗೆ ತುತ್ತಾದದ್ದು ಮುಸ್ಲಿಮರು.
ಭಯೋತ್ಪಾದಕರ ಗುರಿ ಒಂದೇ ಅಪಾರ ಪ್ರಮಾಣದಲ್ಲಿ ಸಾವು - ನೋವು ಉಂಟು ಮಾಡಿ ವಿಕೃತ ವಿಕೃತ ಸುಖ ಪಡುವುದು. ಗುರಿ ಸಾಧನೆಗಾಗಿ ಸಮುದಾಯಗಳನ್ನು ಒಡೆಯುವುದು ಅವರ ಕಾರ್ಯ ವೈಖರಿ.

ಇದನ್ನು ಅರ್ಥ ಮಾಡಿಕೊಂಡೇ 2008ರ ಫೆಬ್ರುವರಿಯಲ್ಲಿ ಮತ್ತು ತೀರಾ  ಇತ್ತೀಚೆಗೆ ಕೂಡಾ ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ 435ಕಿ.ಮೀ. ದೂರದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಪ್ರಭಾವಶಾಲಿಯಾದ ದಾರುಲ್- ಉಲೂಮ್ ದೇವಬಂದ್ ನಲ್ಲಿ ಸಭೆ ಸೇರಿದ್ದ ಸುಮಾರು 20,000 ಮುಸ್ಲಿಂ ವಿದ್ವಾಂಸರು ಭಯೋತ್ಪಾದನೆ ಮುಸ್ಲಿಂ ವಿರೋಧಿ ಎಂಬ ನಿರ್ಣಯ ಸ್ವೀಕರಿಸಿ ಭಯೋತ್ಪಾದನೆಯನ್ನು ಖಂಡಿಸಿದರು. 2008 ಜೂನ್ 2ರಂದು ಭಯೋತ್ಪಾದನೆ ವಿರುದ್ಧ `ಫತ್ವಾ'ವನ್ನು ಕೂಡಾ ದಾರುಲ್ -ಉಲೂಮ್- ದೇವಬಂದ್ ಹೊರಡಿಸಿತ್ತು.

ಕಾಕತಾಳೀಯವೋ ಅಥವಾ ಅದೃಷ್ಟವೋ? ಇದರ ನಂತರ ಸಂಭವಿಸಿದ 2008ರ ಜುಲೈ 25-26ರ ಬೆಂಗಳೂರು, ಅಹಮದಾಬಾದ್ ಮತ್ತು ಈ ವಾರವಷ್ಟೇ ಮುಂಬೈಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ-ದಾಳಿಗಳ ಸಂದರ್ಭದಲ್ಲಿ ಸಮುದಾಯಗಳನ್ನು ಒಡೆಯುವ ಭಯೋತ್ಪಾದಕರ ಆಶಯ ಕೈಗೂಡಲಿಲ್ಲ ಎಂಬುದು ಸಂತಸದ ವಿಷಯ.

ಆದರೆ ನಮ್ಮ ರಾಜಕೀಯ ಧುರೀಣರು ಮಾತ್ರ 'ಓಟಿನ ಆಸೆ'ಗಾಗಿ 'ಭಯೋತ್ಪಾದನೆ'ಯಂತಹ ಕುಕೃತ್ಯಕ್ಕೂ 'ಬಣ್ಣ' ಹಚ್ಚುವ ಯತ್ನ ಮಾಡುತ್ತಿರುವುದು ಮಾತ್ರ ದುರದೃಷ್ಟದ ಸಂಗತಿ.

No comments:

Advertisement