Tuesday, December 2, 2008

ಇಂದಿನ ಇತಿಹಾಸ History Today ಡಿಸೆಂಬರ್ 02

ಇಂದಿನ ಇತಿಹಾಸ

ಡಿಸೆಂಬರ್ 2

`ಆಜಾ ನಚ್ ಲೇ' ಚಲನಚಿತ್ರ ತನ್ನ ಶೀರ್ಷಿಕೆ ಗೀತೆಯ ಮಾರ್ಪಾಡಿನೊಂದಿಗೆ ಉತ್ತರಪ್ರದೇಶ ಮತ್ತು ಪಂಜಾಬಿನ ಚಿತ್ರ ಮಂದಿರಗಳಿಗೆ ಮರಳಿತು. ಬಾಲಿವುಡ್ಡಿನಲ್ಲಿ ಮಾಧುರಿ ದೀಕ್ಷಿತ್ ಅವರು ಎರಡನೇ ಇನಿಂಗ್ಸ್ ಆರಂಭಿಸಿರುವ ಈ `ಆಜಾ ನಚ್ ಲೇ' ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಹಿಂದುಳಿದ ಜನಾಂಗವೊಂದನ್ನು ಅವಹೇಳನ ಮಾಡಲಾಗಿದೆ ಎಂದು ನಿಷೇಧಿಸಲಾಗಿತ್ತು.

2007: ಸಿತಾರ್ ರತ್ನ ರಹಿಮತ್ ಖಾನ್ ಅವರ ಮೊಮ್ಮಗ ಸಿತಾರ್ ವಾದಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಬಾಲೇಖಾನ್ (65) (28-8-1942ರಿಂದ 2-12-2007) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದೇಶ, ವಿದೇಶಗಳಲ್ಲಿ ಸಿತಾರ್ ವಾದನ ಕಾರ್ಯಕ್ರಮ ನೀಡಿ ಶ್ರೋತೃಗಳ ಮನ ಗೆದ್ದಿದ್ದ ಬಾಲೇಖಾನ್ ಕರ್ನಾಟಕ ಸಂಗೀತ ಅಕಾಡೆಮಿಯ ಸದಸ್ಯರಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದರು. ದಕ್ಷಿಣ ಭಾರತದಲ್ಲಿ ಸಿತಾರ್ ಜನಪ್ರಿಯ ಗೊಳಿಸುವಲ್ಲಿ ಬಾಲೇಖಾನ್ ಅವರ ಕೊಡುಗೆ ಅಪಾರ. ತಮ್ಮ ಅಜ್ಜ ಸಿತಾರರತ್ನ ರಹಿಮತ್ ಖಾನ್ ಅವರಿಂದ ಎರಡು ವಿಶೇಷತೆಗಳನ್ನು ಬಾಲೇಖಾನ್ ಕರಗತ ಮಾಡಿಕೊಂಡಿದ್ದರು. ಏಕಕಾಲಕ್ಕೆ ಎರಡೂ ಕೈಗಳ ಚಲನೆ ಒಂದಾದರೆ, ಮೊಹರಾ ಶೈಲಿ ಇನ್ನೊಂದು. ಮೊಹರಾ ಎಂದರೆ 16 ಮಾತ್ರೆಗಳ ತೀನತಾಲದ ಕೊನೆಗೆ ಎರಡೂವರೆ ಮಾತ್ರೆಗಳಲ್ಲಿ ಹೆಣೆದ ಸುಮಧುರ ಸ್ವರಗುಚ್ಛ. ಇದರಿಂದ ಕಲಾ ರಸಿಕರ ಮನ ತಣಿಯುತ್ತಿತ್ತು. ಸಂಗೀತ ಪರಂಪರೆಯ ಮನೆತನದಲ್ಲಿ 1942ರ ಆಗಸ್ಟ್ 28 ರಂದು ಜನಿಸಿದ ಬಾಲೇಖಾನ್, ಶಾಲೆ ಸೇರುವುದಕ್ಕಿಂತ ಮುಂಚೆಯೆ ಸಂಗೀತ ಕಲಿಯಲಾರಂಭಿಸಿದ್ದರು. ತಂದೆ ಪ್ರೊ. ಎ.ಕರೀಂ ಖಾನ್ ಅವರು ತಮ್ಮ ಒಂಬತ್ತು ಮಕ್ಕಳಲ್ಲಿ ಒಬ್ಬರನ್ನಾದರೂ ಗಾಯಕನನ್ನಾಗಿ ರೂಪಿಸುವ ಬಯಕೆಯಿಂದ ಬಾಲೇಖಾನ್ ಅವರಿಗೆ ಗಾಯನ ಕಲಿಸಲು ಮುಂದಾಗಿ ಒಂದು ದಶಕ ಕಾಲ ಗಾಯನ ಪಾಠ ಮಾಡಿದರು. ಬಾಲೇಖಾನರ ಮೊದಲ ಹೆಸರು ಬಾಬುಖಾನ್. ಇವರನ್ನು ಅಜ್ಜ ರಹಿಮತ್ ಖಾನ್ `ಬಾಲೆ' (ಪುಟ್ಟ) ಎಂದು ಕರೆಯುತ್ತಿದ್ದರು. ಈ ಹೆಸರೇ ಕಾಯಂ ಆಗಿ ಉಳಿಯಿತು. ಹನ್ನೊಂದು ವರ್ಷದವರಿದ್ದಾಗಲೇ ಮಿರಜಿನಲ್ಲಿ ತೋಡಿ ರಾಗ ಹಾಡಿದ್ದರು. ಆದರೆ ಸಿತಾರ್ ವಾದನದ ಗೀಳು ಬಿಡಲಿಲ್ಲ. ಒಂದು ವರ್ಷದ ನಂತರ ಸಿತಾರ್ ರಿಯಾಜ್ ಆರಂಭಿಸಿದರು. ಪುಣೆಯ ರಸಿಕ ವಲಯದಲ್ಲಿ ಇವರ ಮನೆತನ ಸಿತಾರ್ ವಾದಕರ ಮನೆತನ ಎಂದೇ ಪ್ರಸಿದ್ಧಿ ಪಡೆದಿತ್ತು. ಅಜ್ಜ ತೀರಿಕೊಂಡ ಧಾರವಾಡಕ್ಕೆ ಬಂದು ನೆಲೆಸಿದರು. 1968ರಲ್ಲಿ ಆಕಾಶವಾಣಿ ಕಲಾವಿದರಾದ ಬಾಲೇಖಾನ್, 1971ರಲ್ಲಿ ಆಕಾಶವಾಣಿನಿಲಯ ಕಲಾವಿದರಾಗಿ ನಿಯುಕ್ತಿಗೊಂಡರು. ನಂತರ `ಎ' ಶ್ರೇಣಿ ಗಿಟ್ಟಿಸಿ ಕೊಂಡರು. ಪುಣೆ, ಪಣಜಿ, ನಾಗಪುರ, ಔರಂಗಾಬಾದ, ಮಂಗಳೂರು, ಬೆಂಗಳೂರಿನಲ್ಲಿ ಶ್ರೋತೃವೃಂದವನ್ನು ಮಂತ್ರಮುಗ್ಧಗೊಳಿಸಿದವರು ಅವರು. ಲಂಡನ್, ಕಿನ್ಯಾ, ಉಗಾಂಡಾ, ತಾಂಜಾನಿಯಾ, ಮ್ಯಾಂಚೆಸ್ಟರ್, ಪ್ಯಾರಿಸ್ ಮತ್ತಿತರ ಕಡೆಗಳಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡವರು. ಬಾಲೇಖಾನರಿಗೆ 1987ರಲ್ಲಿ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ಹಾಗೂ ಇತ್ತೀಚೆಗೆ ಪಂ. ಪುಟ್ಟರಾಜ ಗವಾಯಿ ಪ್ರಶಸ್ತಿ ದೊರಕಿತ್ತು.

2007: ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದರು. ಕ್ಯಾಂಡಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನ ಮುರಳಿ ಹೊಸ ವಿಕ್ರಮ ಸಾಧಿಸಿದರು. ಇಂಗ್ಲೆಂಡ್ ತಂಡದ ರವಿ ಬೋಪಾರ ಅವರನ್ನು ವಿಕೆಟ್ ಕೀಪರ್ ಪ್ರಸನ್ನ ಜಯವರ್ಧನೆ ಸಹಾಯದಿಂದ ಔಟ್ ಮಾಡಿದ ಮುರಳಿ ತಮ್ಮ ವಿಕೆಟುಗಳ ಸಂಖ್ಯೆಯನ್ನು 708ಕ್ಕೆ ಹೆಚ್ಚಿಸಿದರು. ವಿಶ್ವ ಕಂಡಂತಹ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರೂ 708 ವಿಕೆಟುಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

2007: `ಆಜಾ ನಚ್ ಲೇ' ಚಲನಚಿತ್ರ ತನ್ನ ಶೀರ್ಷಿಕೆ ಗೀತೆಯ ಮಾರ್ಪಾಡಿನೊಂದಿಗೆ ಉತ್ತರಪ್ರದೇಶ ಮತ್ತು ಪಂಜಾಬಿನ ಚಿತ್ರ ಮಂದಿರಗಳಿಗೆ ಮರಳಿತು. ಬಾಲಿವುಡ್ಡಿನಲ್ಲಿ ಮಾಧುರಿ ದೀಕ್ಷಿತ್ ಅವರು ಎರಡನೇ ಇನಿಂಗ್ಸ್ ಆರಂಭಿಸಿರುವ ಈ `ಆಜಾ ನಚ್ ಲೇ' ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಹಿಂದುಳಿದ ಜನಾಂಗವೊಂದನ್ನು ಅವಹೇಳನ ಮಾಡಲಾಗಿದೆ ಎಂದು ನಿಷೇಧಿಸಲಾಗಿತ್ತು. ವಿವಾದಿತ ಸಾಲುಗಳನ್ನು ತೆಗೆದು ಹಾಕಿದ ನಂತರ ಪಂಜಾಬ್ ಸರ್ಕಾರ ಚಿತ್ರವನ್ನು ಪ್ರದರ್ಶಿಸಲು ಹಸಿರು ನಿಶಾನೆ ತೋರಿತು.

2007: `ಯಾವುದೇ ಕಾರಣಕ್ಕೂ ಶ್ರೀಕೃಷ್ಣನ ಪೂಜೆ ಬಿಡುವುದಿಲ್ಲ ಎಂಬ ಸಂಕಲ್ಪ ಮಾಡಿರುವುದಾಗಿ ಹೇಳಿದ್ದೇನೆಯೇ ಹೊರತು, ಪೂಜೆಯನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿಲ್ಲ' ಎನ್ನುವ ಮೂಲಕ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದರು. ಹಂಪಿಯಲ್ಲಿ ನಡೆದ ರಘುನಂದನತೀರ್ಥರ 503ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಸಂದರ್ಭದಲ್ಲಿ ರಘುನಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

 2007: ಭಾರತೀಯ ಸಂಸತ್ತಿನ ಚರಿತ್ರೆಯಲ್ಲಿ `ಮೊದಲ ದಂಪತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೋಕಿಂ ಮತ್ತು ವಯಲೆಟ್ ಆಳ್ವ ಜೋಡಿಯ ಭಾವಚಿತ್ರ 2007ರ ಡಿಸೆಂಬರ್ 5ರಂದು ಲೋಕಸಭೆಯಲ್ಲಿ ಅನಾವರಣಗೊಳ್ಳಲಿದೆ ಎಂದು ಈದಿನ ಪ್ರಕಟಿಸಲಾಯಿತು. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ ಈ `ಜೋಡಿ'ಯ ಬದುಕು ವರ್ಣರಂಜಿತ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಜೋಕಿಂ ಆಳ್ವ ಅವರು ಲೋಕಸಭೆಗೆ ಆಯ್ಕೆಯಾದರೆ, ವಯಲೆಟ್ ಆಳ್ವ ರಾಜ್ಯಸಭೆಗೆ ಆಯ್ಕೆಯಾಗಿ ಸುದ್ದಿಯಾಗಿದ್ದರು. ಇವರಿಬ್ಬರೂ ಆಗಿನ ಮುಂಬೈ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೋಕಿಂ ಆಳ್ವ ಅವರ ಜನ್ಮಶತಾಬ್ಧಿಯ ಪ್ರಯುಕ್ತ ಈ ದಂಪತಿಯ ಭಾವಚಿತ್ರವನ್ನು ಲೋಕಸಭೆಯಲ್ಲಿ ಅನಾವರಣ ಮಾಡಲು ನಿರ್ಧರಿಸಲಾಯಿತು. ಮುಂಬೈ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಜೋಕಿಂ ಆಳ್ವ ಅವರಿಗೆ ಗುಜರಾತಿ ಮೂಲದ ವಯಲೆಟ್ ಎಂಬ ವಿದ್ಯಾರ್ಥಿನಿಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗಲು ನಿರ್ಧರಿಸಿದರು. ಆಗ ಅದೊಂದು ಕ್ರಾಂತಿಕಾರಿ ಹೆಜ್ಜೆ. ಏಕೆಂದರೆ ವಯಲೆಟ್ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದರೆ, ಜೋಕಿಂ ಉಡುಪಿಯ ಕೊಂಕಣಿ ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದವರು. ಈ ಎರಡು ಸಮುದಾಯದ ಮಂದಿ ಪರಸ್ಪರ ಮದುವೆಯಾಗುವುದು ಅಸಾಧ್ಯ ಎಂಬ ಕಟ್ಟುಪಾಡಿನ ದಿನಗಳವು. ವಯಲೆಟ್ ಹರಿ ಅವರು 1937ರ ನವೆಂಬರ್ 20ರಂದು ಜೋಕಿಂ ಆಳ್ವರ ಕೈಹಿಡಿಯುವ ಮೂಲಕ ವಯಲೆಟ್ ಆಳ್ವ ಆದರು. ತಮ್ಮ ಪತಿಯ ಪ್ರೋತ್ಸಾಹದಿಂದಾಗಿ ಇವರು ಸಾರ್ವಜನಿಕ ಜೀವನದಲ್ಲಿ ಯಶಸ್ಸಿನ ಹೆಜ್ಜೆಗಳನ್ನು ಇರಿಸತೊಡಗಿದರು. ಇವರಿಬ್ಬರೂ ಮುಂಬೈನಲ್ಲಿ ಮೊದಲು ವಕೀಲರಾಗಿ, ನಂತರ ಪತ್ರಿಕೋದ್ಯಮದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದರು. 1943ರ ಆಗಸ್ಟ್ 9ರಂದು ಈ ದಂಪತಿ `ಫೋರಂ' ಎಂಬ ರಾಜಕೀಯ ವಾರಪತ್ರಿಕೆ ಆರಂಭಿಸಿದರು. ನಂತರ ವಯಲೆಟ್ ಅವರು `ಬೇಗಮ್' ಎಂಬ ಮಹಿಳಾ ಮಾಸಪತ್ರಿಕೆ ಪ್ರಾರಂಭಿಸಿದರು. ಜೋಕಿಂ ಆಳ್ವ ಅವರು ಉತ್ತರ ಕನ್ನಡ ಜಿಲ್ಲೆಯಿಂದ 1952, 1957 ಮತ್ತು 1962ರಲ್ಲಿ ಲೋಕಸಭೆಗೆ ಆಯ್ಕೆ ಯಾಗಿದ್ದರು. ಉಡುಪಿಯಲ್ಲಿ 1907ರಲ್ಲಿ ಜನಿಸಿದ  ಜೋಕಿಂ ಆಳ್ವ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಕೂಡಾ ಪಾಲ್ಗೊಂಡಿದ್ದರು. ಆ ದಿನಗಳಲ್ಲಿಯೇ ಇವರು ರಾಷ್ಟ್ರೀಯ ಕಿಶ್ಚಿಯನ್ನರ ಪಕ್ಷವನ್ನು ಕಟ್ಟಿ, ಇದರ ಮೂಲಕ ಸ್ವಾತಂತ್ರ್ಯ ಚಳವಳಿಗೆ ಕ್ರಿಶ್ಚಿಯನ್ ಸಮುದಾಯದವರನ್ನು ಆಕರ್ಷಿಸಲು ಯತ್ನಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡದ್ದಕ್ಕಾಗಿ ಮೂರು ವರ್ಷ ಕಾಲ ಸೆರೆವಾಸದ ಶಿಕ್ಷೆಯನ್ನೂ ಅನುಭವಿಸಿದ್ದರು. 32ನೇ ವೈವಾಹಿಕ ವರ್ಷದಂದು ವಯಲೆಟ್ ನಿಧನರಾದರು. ಜೋಕಿಂ 1979ರಲ್ಲಿ ನಿಧನರಾದರು. ದೆಹಲಿಯ ಕಾಂಗ್ರೆಸ್ ವಲಯದಲ್ಲಿ ಪ್ರಭಾವಿ ರಾಜಕಾರಣಿ ಎನಿಸಿದ ಕರ್ನಾಟಕದ ಮಾರ್ಗರೆಟ್ ಆಳ್ವ ಅವರು ಜೋಕಿಂ ಆಳ್ವ ಕುಟುಂಬದ ಸೊಸೆ. ಎರಡು ದಶಕಗಳ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ರೀಡಾ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದ ಮಾರ್ಗರೆಟ್, ಹಿಂದೆ ಉತ್ತರ ಕನ್ನಡ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

2007: ಭೂಮಿಯಿಂದ ಭೂಮಿಗೆ ಚಿಮ್ಮುವ ಪೃಥ್ವಿ- 2 ಕ್ಷಿಪಣಿಯ `ಪೂರ್ವಸಿದ್ಧತಾ' ಪರೀಕ್ಷೆಯನ್ನು ಭಾರತವು ಬಂಗಾಳ ಕೊಲ್ಲಿಯ ಧಮ್ರಾ ಕಡಲ ತಡಿಯ ಬಳಿಯಿರುವ ಚಾಂದಿಪುರ ಹಾಗೂ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ಕೈಗೊಂಡಿತು

2006: ಬಿಹಾರಿನ ಭಾಗಲ್ಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪಾದಚಾರಿ ಮೇಲುಸೇತುವೆಯ ಭಾಗವೊಂದು ಹೌರಾ- ಜಮಾಲ್ ಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕುಸಿದ ಪರಿಣಾಮವಾಗಿ 7 ಮಹಿಳೆಯರು ಸೇರಿ 37 ಜನ ಮೃತರಾಗಿ ಇತರ 55 ಜನ ಗಾಯಗೊಂಡರು. ಬೆಳಗ್ಗೆ 7.50ರ ಸುಮಾರಿಗೆ ರೈಲು ಭಾಗಲ್ಪುರ ನಿಲ್ದಾಣ ಪ್ರವೇಶಿಸುವ ಕೆಲ ಕ್ಷಣ ಮೊದಲು ಈ ದುರಂತ ಸಂಭವಿಸಿತು.

2006: ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಗೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ನಟಿ ಬಿ. ಸರೋಜಾದೇವಿ, ಸಾಮಾಜಿಕ ಕಾರ್ಯಕರ್ತೆ ರುತ್ ಮನೋರಮಾ ಅವರನ್ನು ಆಯ್ಕೆ ಮಾಡಿತು.

2005: ಮದ್ರಸಾಗಳು ಉಗ್ರವಾದಕ್ಕೆ ಕುಮ್ಮಕ್ಕು ನೀಡುವುದು, ಪಂಥಾಭಿಮಾನ ಹಾಗೂ ಧಾರ್ಮಿಕ ದ್ವೇಷವನ್ನು ಪ್ರಚೋದಿಸುವಂತಹ ಬೋಧನೆ ಹಾಗೂ ಸಾಹಿತ್ಯ ಪ್ರಕಟಿಸುವುದನ್ನು ನಿಷೇಧಿಸಿ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಸುಗ್ರೀವಾಜ್ಞೆ ಹೊರಡಿಸಿದರು.

2005: ಇರಾಕಿನ ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಚಿವ ನಟವರ್ ಸಿಂಗ್ ಕಮಿಷನ್ ಪಡೆದಿದ್ದಾರೆ ಎಂಬ ಆರೋಪಗಳನ್ನು ಸಮರ್ಥಿಸಿ ಕ್ರೊಯೇಷಿಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ನೀಡಿದ ಕುತೂಹಲಕರ ಹೇಳಿಕೆ ಭಾರತದ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

1982: ಯುನಿವರ್ಸಿಟಿ ಆಫ್ ಉಟಾಹ್ ಮೆಡಿಕಲ್ ಸೆಂಟರಿನ ವೈದ್ಯರು ಡಾ. ವಿಲಿಯಂ ಡೆ ವ್ರೀಸ್ ನೇತೃತ್ವದಲ್ಲಿ ಕಾಯಂ ಕೃತಕ ಹೃದಯವನ್ನು ನಿವೃತ್ತ ದಂತವೈದ್ಯ ಬಾರ್ನಿ ಕ್ಲಾರ್ಕ್ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿದರು. ಈ ಕೃತಕ ಉಪಕರಣದೊಂದಿಗೆ ಅವರು 112 ದಿನಗಳ ಕಾಲ ಬದುಕಿದ್ದರು. ತಮ್ಮ ಹೃದಯ ಅಪ್ರಯೋಜಕವಾಗಿದ್ದು ತಮಗಿನ್ನು ಸಾವೇ ಖಚಿತ ಎಂಬುದು ದೃಢವಾದುದನ್ನು ಅನುಸರಿಸಿ ಕ್ಲಾರ್ಕ್ ಈ ಪ್ರಯೋಗಕ್ಕೆ ಒಪ್ಪಿಗೆ ನೀಡಿದ್ದರು. `ನನಗೆ ಇದರಿಂದ ಪ್ರಯೋಜನ ಆಗದಿರಲೂ ಬಹುದು. ಆದರೆ ಮುಂದಿನ ರೋಗಿಗಾಗಿ ನಾನು ಈ ಪ್ರಯೋಗಕ್ಕೆ ಒಪ್ಪಿಕೊಳ್ಳುವೆ' ಎಂದು ಅವರು ಹೇಳಿದ್ದರು.

1969: ಬೋಯಿಂಗ್ 747 ಜಂಬೋಜೆಟ್ ತನ್ನ ಚೊಚ್ಚಲ ಪಯಣ ಆರಂಭಿಸಿತು. ವಿಮಾನದಲ್ಲಿ 191 ಜನರಿದ್ದರು. ಅವರಲ್ಲಿ ಹೆಚ್ಚಿನವರು ವರದಿಗಾರರು ಮತ್ತು ಛಾಯಾಗ್ರಾಹಕರು. ವಿಮಾನ ಸಿಯಾಟಲ್ ನಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣ ಬೆಳೆಸಿತು.

1962: ಟಿ.ವಿ. ಧಾರಾವಾಹಿಗಳ ಸಂವೇದನಾಶೀಲ ಬರಹಗಾರ್ತಿ ಗೀತಾ ಬಿ.ಯು. ಅವರು ಎಚ್.ಎಸ್. ಉಪೇಂದ್ರರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1859: ಗುಲಾಮೀ ಪದ್ಧತಿ ವಿರೋಧಿ ಪ್ರಚಾರಕ ಜಾನ್ ಬ್ರೌನ್ ನನ್ನು ವರ್ಜೀನಿಯಾದ ಚಾರ್ಲ್ಸ್ ಟೌನಿನಲ್ಲಿ ಗಲ್ಲಿಗೇರಿಸಲಾಯಿತು. ಇದು ಆತನನ್ನು ಹುತಾತ್ಮನನ್ನಾಗಿ ಮಾಡಿತು. ಅಷ್ಟೇ ಅಲ್ಲ 1861-1865ರಲ್ಲಿ ನಡೆದ ಅಮೆರಿಕದ ಅಂತರ್ ಯುದ್ಧಕ್ಕೆ (ಅಮೆರಿಕನ್ ಸಿವಿಲ್ ವಾರ್) ಮೂಲ ಪ್ರೇರಣೆಯೂ ಆಯಿತು.

1804: ಫ್ರಾನ್ಸಿನ ಚಕ್ರವರ್ತಿಯಾಗಿ ಪ್ಯಾರಿಸ್ಸಿನಲ್ಲಿ ನೆಪೋಲಿಯನ್ ಸಿಂಹಾಸನ ಏರಿದ. ಫ್ರಾನ್ಸಿನ ನೋಟ್ರೆ ಡೇಮ್ ಎಂಬಲ್ಲಿ ನಡೆದ ಸಮಾರಂಭಕ್ಕೆ ಪೋಪ್ 7ನೇ ಪಯಸ್ ಆಗಮಿಸಿದ್ದರು. ಅದರೆ ಕೊನೆಯ ಕ್ಷಣದಲ್ಲಿ ಪೋಪ್ ಕೈಯಲ್ಲಿದ್ದ ಕಿರೀಟವನ್ನು ತಾನು ಸ್ವತಃ ತೆಗೆದುಕೊಂಡು ತನ್ನ ತಲೆಯ ಮೇಲೆ ಇರಿಸಿಕೊಂಡ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement