Monday, December 22, 2008

ಇಂದಿನ ಇತಿಹಾಸ History Today ಡಿಸೆಂಬರ್ 22

ಇಂದಿನ ಇತಿಹಾಸ

ಡಿಸೆಂಬರ್ 22

ಭಾರತದ ಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ (1887-1920) ಹುಟ್ಟಿದ ದಿನ. ಫೆಲೋ ಆಫ್ ರಾಯಲ್ ಸೊಸೈಟಿಗೆ ಆಯ್ಕೆಯಾದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಭಾಜನರಾಗಿದ್ದಾರೆ.

2007: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ `ಕಾವ್ಯಾನಂದ ಪುರಸ್ಕಾರ'ವನ್ನು  ಹಿರಿಯ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಪ್ರದಾನ ಮಾಡಿದರು.

2007: ಚುನಾವಣಾ ಪ್ರಚಾರ ಸಮಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ನೋಟಿಸ್ ಪಡೆದಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತನ್ನ ನೋಟಿಸುಗಳಿಗೆ ನೀಡಿರುವ ಸ್ಪಷ್ಟನೆಗಳಿಗೆ ಚುನಾವಣಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. `ಸೊಹ್ರಾಬ್ದುದೀನ್ ಎನ್ಕೌಂಟರ್ ಕುರಿತಂತೆ ಮೋದಿ ನೀಡಿದ ಹೇಳಿಕೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ `ಸಾವಿನ ವ್ಯಾಪಾರಿ' ಶಬ್ದ ಬಳಕೆಯನ್ನು ಒಪ್ಪುವಂತಿಲ್ಲ. ಎಲ್ಲ ವಿವರಗಳನ್ನು ಸಾಕಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಇವರಿಬ್ಬರೂ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಸ್ಪಷ್ಟ' ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿತು.

2007: ಮಂಗಳೂರಿನ ಕಸಬ ಬೆಂಗ್ರೆಯಲ್ಲಿ ನಡೆಸುತ್ತಿದ್ದ ಗೋವಧೆ ತಡೆಯಲು ಹೋದ ಪೊಲೀಸರನ್ನು ಕಲ್ಲೆಸೆದು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಗುಂಪು ಚದುರಿಸಲು ಲಾಠಿಪ್ರಹಾರ ಮಾಡಿದ ಘಟನೆ ಈದಿನ ನಡೆಯಿತು. ಕಸಬ ಬೆಂಗ್ರೆಯಲ್ಲಿ ಸಾರ್ವಜನಿಕವಾಗಿ ಗೋವಧೆ ಮಾಡಲಾಗುತ್ತಿದೆ ಎಂಬ ದೂರವಾಣಿ ಕರೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪಣಂಬೂರು ಪೊಲೀಸರ ಮೇಲೆ ಗುಂಪೊಂದು ಕಲ್ಲುಗಳಿಂದ ಹಲ್ಲೆ ನಡೆಸಿತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬಹಿರಂಗವಾಗಿ ಮಾಡುತ್ತಿದ್ದ ಗೋವಧೆಯನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದೇ ಈ ಅಹಿತಕರ ಘಟನೆ ನಡೆಯಲು ಕಾರಣ ಎನ್ನಲಾಯಿತು. ಸ್ಥಳಕ್ಕೆ ಆಗಮಿಸಿದ ಕೆ ಎಸ್ ಆರ್ ಪಿ ತುಕಡಿ ಕಲ್ಲು ತೂರಿದ ಗುಂಪಿನ ಮೇಲೆ ಬೆತ್ತ ಪ್ರಹಾರ ಮಾಡಿ ಗುಂಪನ್ನು ಚದುರಿಸಿತು. 26 ಮಂದಿಯನ್ನು ಬಂಧಿಸಲಾಯಿತು.

2007:  ಐಸಿಐಸಿಐ ಬ್ಯಾಂಕಿನ ಸಾಲದ ಕಂತು ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ಧರಾಜುವಿನ ಶವಸಂಸ್ಕಾರವು ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶದ ಫಲವಾಗಿ, ಕೊನೆಗೂ ನಾಲ್ಕನೇ ದಿನವಾದ ಈದಿನ ಚಾಮರಾಜ ನಗರ ತಾಲೂಕಿನ ಹರವೆಯಲ್ಲಿ ನಡೆಯಿತು. ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳು ಮೃತನ ಕುಟುಂಬದವರ ಹಾಗೂ ಪ್ರತಿಭಟನೆಕಾರರ ಬೇಡಿಕೆಗಳನ್ನು ಆಲಿಸಿ ಘಟನೆಯ ಬಗ್ಗೆ ತನಿಖೆ ನಡೆಸಿ ಪರಿಹಾರ ನೀಡುವುದಾಗಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರವಷ್ಟೇ ಪ್ರತಿಭಟನಕಾರರು ಶವಸಂಸ್ಕಾರಕ್ಕೆ ಒಪ್ಪಿದರು. ಮೃತ ರೈತ ಸಿದ್ದರಾಜು ಮನೆ ಮುಂದೆ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗಿತ್ತು.

2007: ದೀರ್ಘಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದ ತೇಜಿ ಬಚ್ಚನ್ ಅವರ ಅಂತ್ಯಸಂಸ್ಕಾರ ಈದಿನ ಮುಂಬೈಯ ರುಯಿ ಪಾರ್ಕಿನಲ್ಲಿನ ರುದ್ರಭೂಮಿಯಲ್ಲಿ ನೆರವೇರಿತು. ಪುತ್ರ ಅಮಿತಾಭ್ ಬಚ್ಚನ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

2007: ಭಾರತೀಯ ಅಂತಾರಾಷ್ಟ್ರೀಯ ಕೇಂದ್ರವು ನವವದೆಹಲಿಯಲ್ಲಿ ಸಂಘಟಿಸಿದ, ಖ್ಯಾತ ಕಲಾವಿದ ಎಂ.ಎಫ್. ಹುಸೇನರ ಕಲಾ ಪ್ರದರ್ಶನವನ್ನು ಭಜರಂಗದಳದ ಬೆದರಿಕೆ ಹಿನ್ನೆಲೆಯಲ್ಲಿ ರದ್ದು ಪಡಿಸಲಾಯಿತು.
ಈ ಪ್ರದರ್ಶನದಲ್ಲಿ ಹುಸೇನರ ಮೊಘಲ್ ಇಂಡಿಯಾ ಸರಣಿಯಿಂದ ಆಯ್ದ 20 ವಿವಿಧ ವಿಶಿಷ್ಟ ಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಇದು 19 ವರ್ಶಗಳಲ್ಲೇ  ಹುಸೇನರ ಮೊದಲ ಹಾಗೂ ಬಹುದೊಡ್ಡ ಪ್ರದರ್ಶನವಾಗಿತ್ತು. ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂದು ದೂರಿ ಹಿಂದೂ ಸಂಘಟನೆಗಳು ಬೆದರಿಕೆ  ಹಾಕಿರುವ ಹಿನ್ನೆಲೆಯಲ್ಲಿ ಹುಸೇನ್ ಅವರು ಸ್ವಯಂ ಪ್ರೇರಣೆಯಿಂದ ದುಬೈಯಲ್ಲಿ ವಾಸವಾಗಿದ್ದಾರೆ.

2007: ಪಾಕಿಸ್ಥಾನದ ವಾಯವ್ಯ ಗಡಿಪ್ರಾಂತ್ಯದ ಮಸೀದಿಯಲ್ಲಿ ನಡೆದ  ದಾಳಿಯಲ್ಲಿ 54 ಮಂದಿ ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ಹಜ್ ಯಾತ್ರೆಯ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಉಗ್ರರನ್ನು ಸೌದಿ ಅಧಿಕಾರಿಗಳು ಬಂಧಿಸಿದರು. ಇವರು ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಸ್ಥಳೀಯ ಟಿ.ವಿ ಚಾನೆಲ್ ಒಂದು ವರದಿ ಮಾಡಿತು.

2007: ರಾಜ್ಯದ ವಿವಿಧೆಡೆಗಳಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಮಂಜೂರು ಮಾಡಿದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖಯ್ಯ ಅವರು ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.  ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ 986.72 ಲಕ್ಷ ರೂ.ಗಳಲ್ಲಿ 234.61 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರಿದ್ದರೂ ಅದು ಕಟ್ಟಡ ಕಾಮಗಾರಿಯ ಉಸ್ತುವಾರಿ ವಹಿಸಿದ ಭೂಸೇನಾ ನಿಗಮದ ಕೈ ಸೇರಿಲ್ಲ ಎಂದು ಅವರು ನುಡಿದರು. ಡಿಸೆಂಬರ್ 24ರಂದು ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ. ಪ್ರಕರಣಗಳ ಇತ್ಯರ್ಥದಲ್ಲಿ ರಾಜ್ಯ ವೇದಿಕೆಯು ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಅವರು ವಿವರಿಸಿದರು.

2007: ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿದ ಕರ್ನಾಟಕದ  ರಾಜ್ಯಪಾಲರ ಆಡಳಿತವು ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ನಡುವಿನ ಅತಿ ವೇಗದ ಮೇಲುಪ್ಪರಿಗೆ (ಎಲಿವೇಟೆಡ್) ರೈಲು ಯೋಜನೆಯ ಜಾರಿಗೆ ಅಂತಿಮ ಒಪ್ಪಿಗೆ ನೀಡಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಕ್ಕೆ ಸಮನಾದ ರಾಜ್ಯ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
2006:  ಮೈಸೂರು ಜಿಲ್ಲೆಯ ಕಾಮನಕೆರೆಹುಂಡಿ ಗ್ರಾಮದಲ್ಲಿ ದಲಿತರ ಎಂಟು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಘಟನೆಯ ಬಗ್ಗೆ ಎರಡು ವಾರದ ಒಳಗೆ ವಿವರವಾದ ವರದಿ ಸಲ್ಲಿಸುವಂತೆ ಮೈಸೂರು ಜಿಲ್ಲಾ ಆಡಳಿತಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ನೋಟಿಸ್ ನೀಡಿತು. ಕಳೆದ ಮೂರು ವರ್ಷಗಳಿಂದ ಗ್ರಾಮದ ಸವರ್ಣೀಯರ ಬಹಿಷ್ಕಾರಕ್ಕೆ ಗುರಿಯಾಗಿದ್ದ ಈ ಕುಟುಂಬಗಳು ಕಷ್ಟಕರ ಜೀವನ ಸಾಗಿಸಿದ್ದವು. ಈ ಕುರಿತ ಪತ್ರಿಕಾ ವರದಿಯನ್ನು ಗಮನಿಸಿ ಸ್ವ ಇಚ್ಛೆಯ ಕ್ರಮ ಕೈಗೊಂಡ ಆಯೋಗವು ಇದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಷಯ ಎಂಬುದಾಗಿ ಪರಿಗಣಿಸಬೇಕು ಎಂದು ಹೇಳಿತು. ಸವರ್ಣೀಯರ ಆದೇಶಗಳನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ಈ ಕುಟುಂಬಗಳಿಗೆ ಬಹಿಷ್ಕಾರ ಹಾಕಿ,  ನೀರು, ಅಂಗಡಿಗಳು, ದೂರವಾಣಿ, ಆಸ್ಪತ್ರೆ, ಕೇಬಲ್ ಸೌಲಭ್ಯ ಮತ್ತು ಒಳಚರಂಡಿ ಸವಲತ್ತುಗಳನ್ನು ಕೂಡಾ ನಿರಾಕರಿಸಲಾಗಿತ್ತು. ಈ ಕುಟುಂಬಗಳ ಸದಸ್ಯರನ್ನು ಗ್ರಾಮದ ದೇವಾಲಯ ಪ್ರವೇಶಿಸದಂತೆ ನಿರ್ಬಂಧಿಸಿದ್ದು ಮಾತ್ರವಲ್ಲದೆ, ಸವರ್ಣೀಯರ ಸಮೀಪ ಹಾಗೂ ಅವರ ಹೊಲದ ಬಳಿ ಸುಳಿಯದಂತೆ ಕೂಡಾ ನಿರ್ಬಂಧಿಸಲಾಗಿತ್ತು. ಈ ಎಂಟು ಕುಟುಂಬಗಳ ಸದಸ್ಯರನ್ನು ಯಾವುದೇ ಕೆಲಸಗಳಿಗೆ ಕರೆಯದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿತ್ತು.

2005: ಭವಿಷ್ಯದಲ್ಲಿ ಮನೆಗೆ ನೇರ ಪ್ರಸಾರ (ಡಿಟಿಎಚ್) ಸೇವೆಗೆ ನೆರವಾಗುವ ಉದ್ದೇಶದ ಇನ್ಸಾಟ್ 4ಎ ಉಪಗ್ರಹವನ್ನು ಫ್ರೆಂಚ್ ಗಯಾನದ ಕೌರು ಉಪಗ್ರಹ ಉಡಾವಣಾ ಕೇಂದ್ರದಿಂದ ಏರಿಯನ್ 5ನೇ ಪೀಳಿಗೆಯ ರಾಕೆಟ್ ಮೂಲಕ ನಸುಕಿನ 4.03 ಗಂಟೆಗೆ ಯಶಸ್ವಿಯಾಗಿ ಉಡಾಯಿಸಲಾಯಿತು. ಉಪಗ್ರಹದಿಂದ 4.32ಕ್ಕೆ ಪ್ರಥಮ ಸಂಕೇತ ರವಾನೆಯಾುತು. 12 ವರ್ಷ ಆಯುಸ್ಸಿನ, ಡಿಟಿಎಚ್ ಸಾಮರ್ಥ್ಯ ವೃದ್ಧಿಸುವ ಈ ಉಪಗ್ರಹದ ಉಡಾವಣೆ ವೆಚ್ಚ 225 ಕೋಟಿ ರೂಪಾಯಿಗಳು.

2005: ಅಹಮದಾಬಾದಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟೆಸ್ಟಿನಲ್ಲಿ ಭಾರತಕ್ಕೆ 259 ರನ್ನುಗಳ ಭರ್ಜರಿ ಗೆಲುವಿನೊಂದಿಗೆ 2-0 ಅಂತರದ ಸರಣಿ ಜಯ ಪ್ರಾಪ್ತವಾಯಿತು. ಹರ್ ಭಜನ್ ಸಿಂಗ್ ಪಂದ್ಯಪುರುಷ ಎನಿಸಿದರು.
1989: ರೊಮೇನಿಯಾದ ಜನ ದಂಗೆ ಎದ್ದು ಕಮ್ಯೂನಿಸ್ಟ್ ಆಡಳಿತಗಾರ ನಿಕೋಲೇ ಸಿಯಾಸ್ಕೂ ಅವರನ್ನು ಪದಚ್ಯುತಿಗೊಳಿಸಿದರು.

1989: ಐರಿಷ್ ನಾಟಕಕಾರ ಸ್ಯಾಮ್ಯುಯೆಲ್ ಬೆಕೆಟ್ ತಮ್ಮ 83ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ನಿಧನರಾದರು.

1947: ಭಾರತದ ಮಾಜಿ ಕ್ರಿಕೆಟಿಗ ದಿಲಿಪ್ ದೋಶಿ ಹುಟ್ಟಿದ ದಿನ.

1918: ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಆಶ್ರಮದ ಹಿತೈಷಿಗಳ ವಿಶೇಷ ಸಭೆಯೊಂದರಲ್ಲಿ ಟ್ಯಾಗೋರರ ವಿಶ್ವಭಾರತಿ ವಿಶ್ವವಿದ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಶಾಂತಿ ನಿಕೇತನದ ಮಾವಿನ ತೋಪಿನಲ್ಲಿ ಈ ಸಭೆ ನಡೆಯಿತು. ಮೂರು ವರ್ಷಗಳ ಬಳಿಕ 1921ರಲ್ಲಿ ಇದೇ ದಿನ ವಿಶ್ವಭಾರತಿ ವಿಶ್ವ ವಿದ್ಯಾಲಯವನ್ನು ಔಪಚಾರಿಕವಾಗಿ ಅದರ ಕುಲಪತಿ, ಭಾರತದ ಖ್ಯಾತ ವಿದ್ವಾಂಸ ಭೃಜೇಂದ್ರನಾಥ ಸಿಯಲ್ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

1887: ಭಾರತದ ಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ (1887-1920) ಹುಟ್ಟಿದ ದಿನ. ಫೆಲೋ ಆಫ್ ರಾಯಲ್ ಸೊಸೈಟಿಗೆ ಆಯ್ಕೆಯಾದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಭಾಜನರಾಗಿದ್ದಾರೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement