ಗ್ರಾಹಕರ ಸುಖ-ದುಃಖ

My Blog List

Saturday, January 10, 2009

ಬೆಳಕಿನೆಡೆಗೆ 'ಮಲ್ಲ ಪ್ರಪಂಚ'...!

ಬೆಳಕಿನೆಡೆಗೆ 'ಮಲ್ಲ ಪ್ರಪಂಚ'...!


'ಪೈಲ್ವಾನರ ಜಗತ್ತಿನಲ್ಲಿ' ಪುಸ್ತಕದ ಲೇಖಕ ನರಸಿಂಹಮೂರ್ತಿ ಅವರ ಪೈಲ್ವಾನರ ಕುರಿತ ಎರಡನೆಯ ಪುಸ್ತಕ 'ಮಲ್ಲ ಪ್ರಪಂಚ'. ಈಗ ಅವರದೇ ಆದ ಮಾಧ್ಯಮ ಕ್ರಿಯೇಶನ್ಸ್ ಮೂಲಕ 2009 ಜನವರಿ 10 ರ ಶನಿವಾರ ಸಂಜೆ ಬೆಂಗಳೂರಿನ ಯವನಿಕಾದಲ್ಲಿ ಬಿಡುಗಡೆಯಾಗಲಿದೆ. ಮಲ್ಲಯುದ್ಧ, ಮಲ್ಲಶಿಲ್ಪ, ಸಿನಿಮಾದಲ್ಲಿ ಕುಸ್ತಿ, ಪೈಲ್ವಾನರ ಜೀವನ, ಪೈಲ್ವಾನರ ದಿನಚರಿ, ಪೈಲ್ವಾನರ ಪಟ್ಟುಗಳು ಇತ್ಯಾದಿಗಳ ಬಗ್ಗೆ ತಾವು ಕಂಡು, ಕೇಳಿದ, ಅಧ್ಯಯನ ಮಾಡಿದ ವಿಚಾರಗಳೆಲ್ಲವನ್ನೂ ಇಲ್ಲಿ ದಾಖಲಿಸಿದ್ದೇನೆ ಎನ್ನುತ್ತಾರೆ ನರಸಿಂಹಮೂರ್ತಿ

ನೆತ್ರಕೆರೆ ಉದಯಶಂಕರ

ಹಿಂದೆಯೂ ಅಷ್ಟೇ ಈಗಲೂ ಅಷ್ಟೇ. ಕದನಕ್ಕೂ ಮನುಷ್ಯನಿಗೂ ಅವಿನಾಭಾವ ಸಂಬಂಧ. ಕದನ ಅಂದರೆ ಮನುಷ್ಯನ ಕುತೂಹಲ ಕೆರಳುತ್ತದೆ. ಟಿವಿ ಇರುವಲ್ಲಿ ಹೋಗಿ ನೋಡಿ. ಮಕ್ಕಳಷ್ಟೇ ಅಲ್ಲ, ಮುದುಕರು ಕೂಡಾ ಕೂತರೆ ಏಳದಂತೆ ಮಾಡುವ ಚಾನೆಲ್ ಡಬ್ಲೂಡಬ್ಲೂಎಫ್. ಇದರಲ್ಲಿ ಬರುವ ಕುಸ್ತಿಯ ಪಟ್ಟುಗಳು ಎಂತಹವರಲ್ಲೂ ರೋಮಗಳನ್ನು ನಿಮಿರಿಸುತ್ತದೆ.

ಭಾರತದಲ್ಲಿ ಮಲ್ಲಯುದ್ದ, ಮುಷ್ಟಿಯುದ್ಧ ಎಂದೇ ಜನಪ್ರಿಯವಾದ ಕುಸ್ತಿಕಲೆ ರಾಜ ಮಹಾರಾಜರ ಪ್ರೋತ್ಸಾಹದಿಂದ ಜನಮನವನ್ನು ರಂಜಿಸುತ್ತಾ ಬಂದ ಅತ್ಯಂತ ಜನಪ್ರಿಯ ಕ್ರೀಡೆ. ಇದು ಕ್ರೀಡೆಯೂ ಹೌದು, ಕಲೆಯೂ ಹೌದು. ಕುಸ್ತಿಪಟುಗಳನ್ನು ಸೃಷ್ಟಿಸುವ ಗರಡಿಮನೆಗಳು 
ನಾಡಿನ ಉದ್ದಗಲಕ್ಕೂ ಹರಡಿದ್ದುದು ಕುಸ್ತಿ ಕಲೆಯ ಜನಪ್ರಿಯತೆಗೆ ಸಾಕ್ಷಿ.

ರಾಮಾಯಣ, ಮಹಾಭಾರತ ಕಾಲದಿಂದಲೂ ಜನಪ್ರಿಯವಾಗಿದ್ದ ಈ ಕುಸ್ತಿ ಈಗ ಮಾತ್ರ ಅಳಿವಿನಂಚಿನತ್ತ ಸಾಗುತ್ತಿದೆ. ಈಗ ಕುಸ್ತಿಗೆ ಜೀವ ಬರುವುದು ಮೈಸೂರು ದಸರಾದಲ್ಲಿ ಮಾತ್ರ ಎಂದರೆ ಉತ್ಪ್ರೇಕ್ಷೆಯೇನೂ ಅಲ್ಲ. ಕೆಂಪೇಗೌಡ, ಒಡೆಯರ್ಗಳು, ಹೈದರಾಲಿ, ಟಿಪ್ಪು ಸುಲ್ತಾನ್, ಬ್ರಿಟಿಷ್ ಕಮೀಷನರುಗಳ ಆಳ್ವಿಕೆಯಲ್ಲಿದ್ದ ಬೆಂಗಳೂರಿನ ಈಗಿನ ಕಾಂಕ್ರೀಟ್ ಕಾಡಿನಲ್ಲಂತೂ ಕುಸ್ತಿ ಸಂಪೂರ್ಣ ಸೊರಗಿದೆ.

ಇಂತಹ ಹೊತ್ತಿನಲ್ಲಿ 'ಕಡ್ಡಿ' ಪೈಲ್ವಾನರೊಬ್ಬರು 'ಜಗ ಜಟ್ಟಿ' ಪೈಲ್ವಾನರ ಜಗತ್ತು ಹೊಕ್ಕಿರುವುದು ಗೊತ್ತುಂಟಾ? ಇಂತಹ ಸಾಹಸಕ್ಕೆ ಇಳಿದ ವ್ಯಕ್ತಿ ಎಂ. ನರಸಿಂಹ ಮೂರ್ತಿ. ಕಾಲೇಜು ದಿನಗಳಿಂದಲೇ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನರಸಿಂಹಮೂರ್ತಿ 13 ವರ್ಷಗಳಷ್ಟು ಹಿಂದೆಯೇ ಪ್ಲಾಸ್ಟಿಕ್, ಪರಿಸರ, ಸೀಸ ಮಾಲಿನ್ಯ, ಅಪಾಯಕಾರಿ ತ್ಯಾಜ್ಯ ವಸ್ತುಗಳು, ಆರ್ಕಿಡ್ ಒಂದು ವಿಸ್ಮಯಕಾರಿ ಸಸ್ಯ ಇತ್ಯಾದಿ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಿ ಸಾಕ್ಷ್ಯಚಿತ್ರ ತಯಾರಿಸಿದವರು. ಪರಿಸರ, ಪರಂಪರೆ, ಇತಿಹಾಸ, ಶಿಲ್ಪಕಲೆ ಮೊದಲಾದ ವಿಷಯಗಳ ಬಗ್ಗೆ ಅನೇಕ ಲೇಖನಗಳನ್ನೂ ಬರೆದವರು.

ಅದು ಹೇಗೋ ಕಳೆದ ಒಂದೆರಡು ವರ್ಷಗಳಿಂದ ಅವರ ತಲೆಯೊಳಗೆ ಪೈಲ್ವಾನರು ನುಗ್ಗಿ ಬಿಟ್ಟಿದ್ದಾರೆ. ಈ ಪೈಲ್ವಾನರ ಬಗ್ಗೆ ಜಾಲಾಡುತ್ತಾ ಕರ್ನಾಟಕದ ಉದ್ದಗಲಕ್ಕೂ ಸುತ್ತಾಡಿದ ಈ ಕಡ್ಡಿ ಪೈಲ್ವಾನ 2007ರಲ್ಲಿ 'ಪೈಲ್ವಾನರ ಜಗತ್ತಿನಲ್ಲಿ' ಎಂಬ ಪುಸ್ತಕ ಬರೆದು ಪ್ರಕಟಿಸಿಯೇ ಬಿಟ್ಟರು. ಈ ಪುಸ್ತಕಕ್ಕೆ ಮುನ್ನುಡಿ ಬರೆದ ಖ್ಯಾತ ಇತಿ
ಹಾಸ ಸಂಶೋಧಕ ಸೂರ್ಯನಾಥ ಕಾಮತ್ ಅವರಿಂದ ಮೊದಲ್ಗೊಂಡು ವಿವಿಧ ಪತ್ರಿಕೆಗಳಲ್ಲಿ ಈ ಪುಸ್ತಕದ ಬಗ್ಗೆ ಬಂದ ಮೆಚ್ಚುಗೆಯ ನುಡಿಗಳು ಪುಸ್ತಕದಲ್ಲಿನ ಅಧ್ಯಯನ ಪೂರ್ಣ ಬರವಣಿಗೆಯ ಆಳಕ್ಕೆ ಕೈಗನ್ನಡಿ.

ಆದರೆ ಲೇಖಕ ನರಸಿಂಹ ಮೂರ್ತಿ ಅವರಿಗೆ ಸಮಾಧಾನ ಇರಲಿಲ್ಲ. ಒಂದು ಪುಸ್ತಕ ಬರೆದಿದ್ದೇನೋ ಹೌದು. ಆದರೆ 'ಪೈಲ್ವಾನರ ಜಗತ್ತಿನಲ್ಲಿ' ತಾನು ಕಂಡದ್ದೆಲ್ಲವನ್ನೂ ಸಮಗ್ರವಾಗಿ ಜನರ ಮುಂದಿಡಲಾಗಲಿಲ್ಲ ಎಂಬ ಅತೃಪ್ತಿ ಅವರನ್ನು ನಿರಂತರ ಕಾಡಿತ್ತು. ಹೀಗಾಗಿ ವರ್ಷ ಉರುಳುವುದರ ಒಳಗೆ ಮತ್ತೊಂದು ಪುಸ್ತಕ ಬರೆದೇ ಬಿಟ್ಟರು.

ಪೈಲ್ವಾನರಿಗೇ ಸಂಬಂಧಿಸಿದ ಅವರ ಎರಡನೆಯ ಪುಸ್ತಕ 'ಮಲ್ಲ ಪ್ರಪಂಚ' ಈಗ ಅವರದೇ ಆದ ಮಾಧ್ಯಮ ಕ್ರಿಯೇಶನ್ಸ್ ಮೂಲಕ 2009 ಜನವರಿ 10 ರ ಶನಿವಾರ ಸಂಜೆ 5.30 ಗಂಟೆಗೆ ಬೆಂಗಳೂರಿನ ಯವನಿಕಾದಲ್ಲಿ ಬಿಡುಗಡೆಯಾಗಲಿದೆ. ಮಲ್ಲಯುದ್ಧ, ಮಲ್ಲಶಿಲ್ಪ, ಸಿನಿಮಾದಲ್ಲಿ ಕುಸ್ತಿ, ಪೈಲ್ವಾನರ ಜೀವನ, ಪೈಲ್ವಾನರ ದಿನಚರಿ, ಪೈಲ್ವಾನರ ಪಟ್ಟುಗಳು ಇತ್ಯಾದಿಗಳ ಬಗ್ಗೆ ತಾವು ಕಂಡು, ಕೇಳಿದ, ಅಧ್ಯಯನ ಮಾಡಿದ ವಿಚಾರಗಳೆಲ್ಲವನ್ನೂ ಇಲ್ಲಿ ದಾಖಲಿಸಿದ್ದೇನೆ ಎನ್ನುತ್ತಾರೆ ನರಸಿಂಹಮೂರ್ತಿ.

'ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ದೇಸೀ ಕಲೆಯ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೇ ಅದನ್ನು ಮರೆಯದಂತೆ ಮಾಡಿ ಪುನಶ್ಚೇತನ ನೀಡಲು ಜನರನ್ನು ಪ್ರೇರಿಸಬೇಕು' ಎಂಬುದು ತಮ್ಮ ಆಶಯ ಎನ್ನುವ ಅವರು ಪುಸ್ತಕ ಬಿಡುಗಡೆ ಸಮಾರಂಭಲ್ಲೂ ಅದಕ್ಕಾಗಿ 'ಕುಸ್ತಿಪಟ್ಟು' ಬಳಸುತ್ತಿದ್ದಾರೆ.

ಅದಕ್ಕಾಗಿಯೇ ಪುಸ್ತಕ ಬಿಡುಗಡೆಯ ಜೊತೆಗೇ ನಾಡಿನ ಸುಮಾರು 25ಕ್ಕೂ ಹೆಚ್ಚು ಕುಸ್ತಿ ಕಲಿಗಳ ಸನ್ಮಾನ ಸಮಾರಂಭವನ್ನಾಗಿಯೂ ಅವರು ಈ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಅಷ್ಟೇ ಅಲ್ಲ ಕಾರ್ಯಕ್ರಮಕ್ಕೆ ಬಂದವರಿಗೆ ವೇದಿಕೆಯಲ್ಲೇ ಭಾರತೀಯ ಕುಸ್ತಿಶೈಲಿ ವೀಕ್ಷಿಸುವ ಅವಕಾಶವನ್ನೂ ಮಾಡಿದ್ದಾರೆ.

ತಮ್ಮ ಈ ಪ್ರಯತ್ನದಿಂದ ಅತ್ಯಂತ ಹಳೆಯದಾದ ಈ ಕಲೆಗೆ ಹೊಸ ರೀತಿಯ ಸ್ಪರ್ಶ ಲಭಿಸಿ, ಅದರ ಅಭಿವೃದ್ಧಿಗೆ ಯತ್ನಗಳು ನಡೆದಲ್ಲಿ ತಮ್ಮ ಯತ್ನ ಸಾರ್ಥಕ ಎನ್ನುತ್ತಾರೆ ನರಸಿಂಹಮೂರ್ತಿ. ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ನೀವೂ ಅವರ ಆಶಯಕ್ಕೆ ದನಿಗೂಡಿಸಬಹುದು. 

ಚಿತ್ರಗಳು:
1) ದೇಸೀ ಕುಸ್ತಿ. 'ಮಲ್ಲ ಪ್ರಪಂಚ'ದ ಒಳಗಿರುವ ಒಂದು ಚಿತ್ರ.

2) 'ಪೈಲ್ವಾನರ ಜಗತ್ತಿನಲ್ಲಿ' - ಜಗ ಜಟ್ಟಿಗಳ ಕುರಿತಾದ ನರಸಿಂಹಮೂರ್ತಿ ಅವರ ಮೊದಲ ಪುಸ್ತಕ 
No comments:

Advertisement