My Blog List

Saturday, February 7, 2009

ಇಂದು 'ಮಕ್ಕಳ ಮಂಟಪ' ಸಂಭ್ರಮ

ಇಂದು 'ಮಕ್ಕಳ ಮಂಟಪ' ಸಂಭ್ರಮ


ಆಶ್ರಯ ರಹಿತ ಗಂಡು ಮಕ್ಕಳಿಗೆ ಆಶ್ರಯ, ವಿದ್ಯೆ, ಸಂಸ್ಕೃತಿ ನೀಡುವ ಸಲುವಾಗಿಯೇ 14 ಮಕ್ಕಳೊಂದಿಗೆ ಆರಂಭವಾದ 'ನೆಲೆ' ಇಂದು ಹೆಣ್ಣುಮಕ್ಕಳೂ ಸೇರಿದಂತೆ 225ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿದೆ.

ಆಟೋಟ, ರಸಪ್ರಶ್ನೆ, ಗಾಯನ, ಜಾನಪದ ನೃತ್ಯ ಮತ್ತಿತರ ಸ್ಪರ್ಧೆಗಳು. ಬೆಳಗಿನಿಂದ ಸಂಜೆಯವರೆಗೂ ಪುಟಿಯುವ ಉತ್ಸಾಹ. ಪುಟ್ಟ ಪುಟ್ಟ ನೂರಾರು ಮಕ್ಕಳಿಗೆ ಸಂಭ್ರಮವೋ ಸಂಭ್ರಮ.

ಬೆಂಗಳೂರಿನ ನಾಗವಾರದ ಡಾ. ಅಂಬೇಡ್ಕರ್ ಆಟದ ಮೈದಾನದಲ್ಲಿ ಇಂತಹದೊಂದು ಸಡಗರದ ಕಾರ್ಯಕ್ರಮ ಪ್ರತಿವರ್ಷವೂ ನಡೆಯುತ್ತದೆ.

ನಾಗವಾರ, ಥಣಿಸಂದ್ರ, ಕಮ್ಮನಹಳ್ಳಿ, ಎಚ್.ಬಿ.ಆರ್. ಲೇಔಟ್, ರಾಮಕೃಷ್ಣ ಹೆಗಡೆ ನಗರ, ಶ್ರೀರಾಮಪುರ, ಯಲಹಂಕ - ಹೀಗೆ ಆಸುಪಾಸಿನ ಹತ್ತಾರು ಶಾಲೆಗಳ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಭ್ರಮದೊಂದಿಗೆ ನಕ್ಕು ನಲಿಯುತ್ತಾರೆ.
ಈ ಮಕ್ಕಳೆಲ್ಲ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳೇ ಹೆಚ್ಚಾಗಿ ಹಾಜರಾಗುವ ಸರ್ಕಾರಿ ಶಾಲೆಗಳು ಹಾಗೂ ಇತರ ಸಣ್ಣ ಪುಟ್ಟ ಖಾಸಗಿ ಶಾಲೆಗಳ ಮಕ್ಕಳು.

ಈ ಮಕ್ಕಳಿಗೆ ವರ್ಷಪೂರ್ತಿ ತಮ್ಮ ಶಾಲೆ, ಮನೆ, ಮನೆಕೆಲಸಗಳನ್ನು ಬಿಟ್ಟರೆ ಇಂತಹ ಆಟೋಟಗಳು, ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಮರೀಚಿಕೆಯೇ. ಇವರಿಗಾಗಿ ನಾಗವಾರದಲ್ಲಿ ಪ್ರತಿವರ್ಷ 'ಮಕ್ಕಳ ಮಂಟಪ' ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದು ಎಚ್.ಬಿ.ಆರ್. ಐದನೇ ಬ್ಲಾಕಿನ ಪ್ರಕೃತಿ ಬಡಾವಣೆಯಲ್ಲಿರುವ 'ನೆಲೆ - ನಮ್ಮ ಮನೆ'. 
ವಾಸ್ತವವಾಗಿ 'ನೆಲೆ- ನಮ್ಮ ಮನೆ' ಸ್ಥಿತಿವಂತ ಸಂಘಟನೆಯೇನೂ ಅಲ್ಲ. ಇದು ಹಿಂದೂ ಸೇವಾ ಪ್ರತಿಷ್ಠಾನದ ಮೂಲಕ ಬೀದಿ ಮಕ್ಕಳಿಗಾಗಿ ರೂಪುಗೊಂಡಿರುವ ಒಂದು ವಸತಿ ವ್ಯವಸ್ಥೆ ಅಷ್ಟೆ. 

ಆಶ್ರಯ ರಹಿತ ಗಂಡು ಮಕ್ಕಳಿಗೆ ಆಶ್ರಯ, ವಿದ್ಯೆ, ಸಂಸ್ಕೃತಿ ನೀಡುವ ಸಲುವಾಗಿಯೇ 14 ಮಕ್ಕಳೊಂದಿಗೆ ಆರಂಭವಾದ 'ನೆಲೆ' ಇಂದು ಹೆಣ್ಣುಮಕ್ಕಳೂ ಸೇರಿದಂತೆ 225ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿದೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧೆಡೆಗಳಲ್ಲಿ ನೆಲೆಯ ಒಟ್ಟು ಆರು ಶಾಖೆಗಳು ಅನಾಥ ಮಕ್ಕಳಿಗೆ ಆಶ್ರಯ ಒದಗಿಸಿವೆ.

ಈ ಜಗತ್ತಿನಲ್ಲಿ ಯಾರೂ ಸಣ್ಣವರಲ್ಲ, ದುರ್ಬಲರಲ್ಲ, ಅಯೋಗ್ಯರಲ್ಲ. ದೀನದಲಿತರಲ್ಲೂ ಅಗಾಧ ಪ್ರತಿಭೆ, ಸಾಮರ್ಥ್ಯ ಸುಪ್ತವಾಗಿ ಇದೆ. ಅದನ್ನು ಹೊರತರುವ ಕೆಲಸ ಆಗಬೇಕಾಗಿದೆ ಎಂಬ ನಂಬಿಕೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ 'ನೆಲೆ'  ತನ್ನ ಆಶ್ರಯತಾಣಗಳಲ್ಲಿ ಇರುವ ಮಕ್ಕಳಿಗೆ ಮಾತ್ರವೇ ಅಲ್ಲ, ಆಸುಪಾಸಿನ ಶಾಲೆಗಳು, ಕೊಳೆಗೇರಿಗಳಲ್ಲಿ ಇರುವಂತಹ ಬಡ, ದುರ್ಬಲ ಮಕ್ಕಳಿಗೂ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಒದಗಿಸುವ ಹೆಬ್ಬಯಕೆ ಇಟ್ಟುಕೊಂಡಿದೆ.

ಇದಕ್ಕಾಗಿಯೇ ಅದು 'ಮಕ್ಕಳ ಮಂಟಪ'ದಲ್ಲಿ ಆಸುಪಾಸಿನ ಸರ್ಕಾರಿ ಮತ್ತಿತರ ಶಾಲಾ ಮಕ್ಕಳಿಗೆ ಆಟೋಟ, ನೃತ್ಯ, ಸಂಗೀತ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಸಂಘಟಿಸುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಕೊಳೆಗೇರಿ ಮಕ್ಕಳಿಗೂ ಅವಕಾಶ ಕಲ್ಪಿಸುತ್ತದೆ ಎನ್ನುತ್ತಾರೆ ನೆಲೆ- ನಮ್ಮ ಮನೆಯ ರಾಜಗೋಪಾಲ ಮತ್ತು ಎನ್.ಆರ್. ವೆಂಕಟರಾಮು.

ಇಡೀ ದಿನ ನಡೆಯುವ ಈ ಕಾರ್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಮಾತ್ರವೇ ಅಲ್ಲ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಬಹುಮಾನಗಳನ್ನು ನೆಲೆ ನಮ್ಮ ಮನೆ ವತಿಯಿಂದ ನೀಡಲಾಗುತ್ತದೆ. ಪ್ರತಿಭೆ ಹೊರಗೆಳೆಯುವ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ನೀಡುವುದು ಇದರ ಉದ್ದೇಶ ಎಂದು ಅವರು ವಿವರಿಸುತ್ತಾರೆ.

ಈ ವರ್ಷದ 'ಮಕ್ಕಳ ಮಂಟಪ-2009' ಅಂಬೇಡ್ಕರ್ ಮೈದಾನದಲ್ಲಿ ಫೆಬ್ರುವರಿ 7ರ ಶನಿವಾರ ಬೆಳಗ್ಗೆ 9.30ರಿಂದ ಸಂಜೆಯವರೆಗೆ ನಡೆಯುತ್ತದೆ. ಬೆಳಗ್ಗೆ ಕರ್ನಲ್ ಎಚ್.ಎಂ.ಎಸ್. ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಚಾಲಕ ಕೃಷ್ಣಮೂರ್ತಿ, ಪತ್ರಕರ್ತ ನೆತ್ರಕೆರೆ ಉದಯಶಂಕರ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಜೆ 4.30ಕ್ಕೆ ಇಂಡೋ ಏಷಿಯಾ ಎಜುಕೇಶನ್ ಟ್ರಸ್ಟಿನ ಪ್ರೊ. ಟಿ. ಏಕಾಂಬರಂ ನಾಯ್ಡು ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಕೃಷ್ಣ ಭೈರೇಗೌಡ, ನಂದೀಶ ರೆಡ್ಡಿ, ಹಿಂದು ಸೇವಾ ಪ್ರತಿಷ್ಠಾನದ ಡಿ.ಎಂ. ಕಿರಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
 

No comments:

Advertisement