ಗ್ರಾಹಕರ ಸುಖ-ದುಃಖ

My Blog List

Thursday, February 12, 2009

ಇಂದಿನ ಇತಿಹಾಸ History Today ಫೆಬ್ರುವರಿ 11

ಇಂದಿನ ಇತಿಹಾಸ

ಫೆಬ್ರುವರಿ 11

ಫೆಬ್ರುವರಿ ತಿಂಗಳ 18ಕ್ಕೆ ನಿಗದಿಯಾಗಿದ್ದ `ಮುಂಗಾರು ಮಳೆ' ಖ್ಯಾತಿಯ ಚಲನಚಿತ್ರ ನಟ ಗಣೇಶ್ ಅವರ ವಿವಾಹ ಈದಿನ ತಡರಾತ್ರಿ 9ರಿಂದ 11.30ರ ಅವಧಿಯಲ್ಲಿ ಮಂಗಳೂರಿನ ಶಿಲ್ಪಾ ಅವರೊಂದಿಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ವಧುವಿನ ನಿವಾಸದಲ್ಲಿ ದಿಢೀರನೆ ನಡೆಯಿತು

2008: ಬ್ರಿಟನ್ನಿನ ಧನ ಸಹಾಯದಿಂದ ಪಶ್ಚಿಮ ಬಂಗಾಳದ ಸುಂದರಬನ ಸಂರಕ್ಷಿತ ಅರಣ್ಯ ವಲಯವನ್ನು ಕಾಪಾಡುವುಕ್ಕಾಗಿ 40ಲಕ್ಷ ಮ್ಯಾಂಗ್ರೋವ್ (ಕಾಂಡ್ಲಾಕಾಡು) ಸಸಿಗಳನ್ನು ನೆಡುವ ಯೋಜನೆ  ಮಥುರಾಕಾಂಡ ದ್ವೀಪದಲ್ಲಿ ಆರಂಭವಾಯಿತು. ಕಾಂಡ್ಲಾ ಸಸಿಯನ್ನು ನೆಡುವುದರ ಮೂಲಕ ಈ ಯೋಜನೆಗೆ ಚಾಲನೆ ನೀಡಿದ ಬ್ರಿಟಿಷ್ ಹೈಕಮೀಷನರ್ ಸರ್ ರಿಚರ್ಡ್ ಸ್ಟಾಗ್, `ಪ್ರಕೃತಿ ನಿರ್ಮಿತ ಅರಣ್ಯ ವಲಯವನ್ನು ಕಾಪಾಡುವುದಕ್ಕಾಗಿಯೇ ತಯಾರಾದ ಒಂದು ಮಾದರಿ ಯೋಜನೆ ಇದಾಗಿದೆ. ಇದನ್ನು ಬೇರೆಯವರೂ ಅನುಕರಿಸಬಹುದು ' ಎಂದು ಹೇಳಿದರು. ಕಾಂಡ್ಲಾಕಾಡುಗಳು ಅಣೆಕಟ್ಟುಗಳ ಏರಿ ಒಡೆಯದಂತೆ ಕಾಪಾಡುವುದಲ್ಲದೆ, ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ವೇಗವನ್ನೂ ನಿಯಂತ್ರಿಸುತ್ತವೆ. ಕೋಲ್ಕತ ಮೂಲದ ನೈಸರ್ಗಿಕ ಪರಿಸರ ಮತ್ತು ವನ್ಯಜೀವಿ ಸಂಘ (ನ್ಯೂಸ್) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.  ಬ್ರಿಟನ್ ಸರ್ಕಾರ ಈ ಯೋಜನೆಗೆ 60,000 ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಕೋಲ್ಕತ ವಿವಿಯ ವಿಜ್ಞಾನಿ ಪ್ರೊ. ಅವಜಿತ್ ಮಿತ್ರಾ, ಬ್ರಿಟಿಷ್ ಡೆಪ್ಯುಟಿ ಹೈಕಮೀಷನರ್ ಸಿಮೊನ್ ವಿಲ್ಸನ್ ಉಪಸ್ಥಿತರಿದ್ದರು. 

2008: ಫೆಬ್ರುವರಿ ತಿಂಗಳ 18ಕ್ಕೆ ನಿಗದಿಯಾಗಿದ್ದ `ಮುಂಗಾರು ಮಳೆ' ಖ್ಯಾತಿಯ ಚಲನಚಿತ್ರ ನಟ ಗಣೇಶ್ ಅವರ ವಿವಾಹ ಈದಿನ ತಡರಾತ್ರಿ 9ರಿಂದ 11.30ರ ಅವಧಿಯಲ್ಲಿ ಮಂಗಳೂರಿನ ಶಿಲ್ಪಾ ಅವರೊಂದಿಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ವಧುವಿನ ನಿವಾಸದಲ್ಲಿ ದಿಢೀರನೆ ನಡೆಯಿತು. ಗಣೇಶ್ ಅವರ ವಿವಾಹವನ್ನು ಉಡುಪಿ ಜಿಲ್ಲೆಯ ಬಾರಕೂರಿಗೆ ಸಮೀಪದ ಹನೇಹಳ್ಳಿ ಸಂಕಮ್ಮ ತಾಯಿ ರೆಸಾರ್ಟಿನಲ್ಲಿ ನಡೆಸಲು ಈ ಹಿಂದೆ ನಿಶ್ಚಯಿಸಲಾಗಿತ್ತು. ಈ ವಿವಾಹದಲ್ಲಿ ಗಣೇಶ್ ಮತ್ತು ಶಿಲ್ಪಾ ಕುಟುಂಬ ವರ್ಗದವರು, ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕೆ. ಮಂಜು ಹಾಗೂ ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್ ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು ಭಾಗವಹಿಸಿದ್ದರು. ಶಿವರಾಮ ಮತ್ತು ಶಕುಂತಳಾ ಶೆಟ್ಟಿಗಾರ್ ದಂಪತಿಯ ಪುತ್ರಿ ಶಿಲ್ಪಾ ಬೆಂಗಳೂರಿನಲ್ಲಿ ಒಳಾಂಗಣ ವಿನ್ಯಾಸಗಾರ್ತಿ. ಶಿವರಾಮ ಶೆಟ್ಟಿಗಾರರು ಬಹಳ ಹಿಂದೆಯೇ ತಮ್ಮ ಸ್ವಂತ ಊರಾದ ಬಾರಕೂರನ್ನು ತೊರೆದು ಮುಂಬೈಗೆ ಹೋಗಿ ವ್ಯಾಪಾರದಲ್ಲಿ ತೊಡಗಿದ್ದು, ನಂತರ ಬೆಂಗಳೂರಿಗೆ ಬಂದು ನೆಲೆಸಿದವರು. ಶಿಲ್ಪಾ ಅವರ ಕಿರಿಯ ಸೋದರ ಶರಣ್ ಆಸ್ಟ್ರೇಲಿಯಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ಬಾರಕೂರಿನಲ್ಲಿ ಶಿಲ್ಪಾ ಅವರ ದೊಡ್ಡಪ್ಪನ ಮನೆ ಇದೆ.

2008: ಚಿತ್ರನಟ ಸಂಜಯ್ ದತ್ ಹಾಗೂ ಅವರ ಪ್ರೇಯಸಿ ಮಾನ್ಯತಾ ಮುಂಬೈಯಲ್ಲಿ ಹಿಂದೂ ವಿಧಿಗಳ ಅನ್ವಯ ವಿವಾಹ ಬಂಧನಕ್ಕೆ ಒಳಗಾದರು. ಮುಂಬೈ ಹೊರವಲಯದ ವರ್ಸೋವಾದಲ್ಲಿ ಮಾನ್ಯತಾ ಅವರ ನಿವಾಸದಲ್ಲಿ ವಿವಾಹ ನೆರವೇರಿತು. ಇದಕ್ಕೆ ಮೊದಲೇ ದತ್ ಮತ್ತು ಮಾನ್ಯತಾ ಗೋವಾದ ಪಂಚತಾರಾ ಹೋಟೆಲಿನಲ್ಲಿ ವಿಶೇಷ ಮದುವೆ ಕಾಯ್ದೆ ಅಡಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಫೆಬ್ರುವರಿ 7ರಂದು ಈ ಮದುವೆ ನಡೆದಿತ್ತು ಎನ್ನಲಾಗಿದೆ. ದತ್ ಹಾಗೂ ಮಾನ್ಯತಾ ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಮಧ್ಯೆ ಸಂಜಯದತ್ ಹಾಗೂ ಮಾನ್ಯತಾ ಅಲಿಯಾಸ್ ದಿಲ್ನಾಶೀನ್ ಅಮೀರ್ ಅಹ್ಮದ್ ಶೇಖ್ ನಡುವಿನ ವಿವಾಹ ಈ ಇಬ್ಬರೂ ಪ್ರಮಾಣಪತ್ರಕ್ಕೆ ಸಹಿ ಹಾಕಿದ ನಂತರವೇ ಅಧಿಕೃತವಾಗಲಿದೆ ಎಂದು ಗೋವಾದ ನೋಂದಣಿ ಅಧಿಕಾರಿಗಳು ತಿಳಿಸಿದರು. ಫೆಬ್ರುವರಿ 7ರಂದು ಪ್ರಮಾಣಪತ್ರ ಸಲ್ಲಿಸಿದ್ದರೂ ಅದಕ್ಕೆ ಉಭಯರ ಸಹಿ ಬಿದ್ದಿಲ್ಲ ಎಂದು ಅಧಿಕಾರಿಗಳು ಹೇಳಿದರು.

2008: ಮಾರ್ಚ್ 28ರಂದು ಮೊದಲ ವಿಮಾನ ಹಾರಾಟ ನಡೆಸಲು ಸಜ್ಜಾಗಿ ನಿಂತ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಎಚ್ ಎ ಎಲ್ ವಿಮಾನನಿಲ್ದಾಣದ ಬದಲಿಗೆ ಎಲ್ಲ ವಿಮಾನಗಳು ಹೊಸ ವಿಮಾನನಿಲ್ದಾಣದ  ಮೂಲಕವೇ ಹಾರಾಟ ನಡೆಸಲಿರುವುದನ್ನು ವಕೀಲ ಜಿ.ಆರ್.ಮೋಹನ್ ಪ್ರಶ್ನಿಸಿದರು.

2008: ಕಿಡ್ನಿ ಕಸಿ ಹಗರಣದ ಸೂತ್ರಧಾರ ಅಮಿತ್ ಕುಮಾರನ ಪ್ರಮುಖ ಸಹಚರ ಡಾ. ಸರಾಜ್ ಗುಡಗಾಂವಿನ ನ್ಯಾಯಾಲಯದಲ್ಲಿ ಶರಣಾಗತನಾದ. ದೆಹಲಿಯ ಶಾಹದಾರಾ ನಿವಾಸಿ ಡಾ. ಸರಾಜ್ ಜನವರಿ 24ರಂದು ಅಮಿತ್ ಕುಮಾರನ ಗುಡಗಾಂವ್ ಆಸ್ಪತ್ರೆ ಮೇಲೆ ದಾಳಿ ನಡೆದಾಗಿನಿಂದ ನಾಪತ್ತೆಯಾಗಿದ್ದ. ಗುಡಗಾಂವಿನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ರಂಜನಾ ಅಗರವಾಲ್ ಅವರ ಮುಂದೆ ಆತ ಶರಣಾಗತನಾದ.

2008: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ ಐ ಐ) ಹಾಗೂ ದೇಸಿ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುವುದನ್ನು ತೀವ್ರಗೊಳಿಸಿದ್ದರ ಪರಿಣಾಮವಾಗಿ, ಕರಡಿ ಮೇಲುಗೈಯಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ದಿನದಂತ್ಯದ ವಹಿವಾಟಿನಲ್ಲಿ 833 ಅಂಶಗಳಷ್ಟು ಇಳಿಕೆಯನ್ನು ದಾಖಲಿಸಿತು. ಈ ಮೂಲಕ ಷೇರುಪೇಟೆ ಸೂಚ್ಯಂಕವು 17 ಸಾವಿರ ಗಡಿಯಿಂದ  ಜಾರಿತು.

2008: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸಂಗ್ರಹದ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದ್ದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಪವರ್ ಕಂಪೆನಿಯು, ಷೇರುಪೇಟೆ ವ್ಯವಹಾರವನ್ನು ನಿರಾಶೆಯೊಂದಿಗೆ ಆರಂಭಿಸಿತು. ರೂ 450ಕ್ಕೆ ದರಪಟ್ಟಿಯನ್ನು ನಿಗದಿ ಪಡಿಸಿದ್ದ ರಿಲಯನ್ಸ್ ಪವರ್, ಷೇರು ವಹಿವಾಟು ಆರಂಭದ ದಿನವೇ ಶೇ 32 ರಷ್ಟು ಕುಸಿತವನ್ನು ದಾಖಲಿಸಿತು. ಇದರಿಂದ ಷೇರು ಹೂಡಿಕೆದಾರರು ಹೊಂದಿದ್ದ ಆಶಾಗೋಪುರದ ಕನಸು ನೆಲಕ್ಕೆ ಅಪ್ಪಿಳಿಸಿದಂತಾಯಿತು. ದಿನದ ಷೇರುಪೇಟೆ ವಹಿವಾಟು ಅಂತ್ಯಗೊಂಡಾಗ ರೂ 372.50ಕ್ಕೆ ರಿಲಯನ್ಸ್ ಪವರ್ ಷೇರು ದರ ಇಳಿಕೆಯನ್ನು ದಾಖಲಿಸಿತು. ಇದೇ ವೇಳೆ, ಶತಕೋಟಿ ಡಾಲರ್ ಬಂಡವಾಳದ ಕಂಪೆನಿಗಳ ಒಟ್ಟಾರೆ ಶೇ 40 ಷೇರುಗಳು ಕುಸಿತ ಕಂಡವು.

2008: ದೊಡ್ಡ ಗಾತ್ರದ ಮೂಗು ಹೊಂದಿರುವವರು ಹೆಚ್ಚು ದುಡ್ಡು ಗಳಿಸುತ್ತಾರೆ ಮತ್ತು ಅಗಲ ಮೂಗಿನವರು ಪ್ರಬಲ ಲೈಂಗಿಕ ಆಸಕ್ತಿ ಹೊಂದಿರುತ್ತಾರಂತೆ! ಮೂಗು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸಬಲ್ಲುದು. ಅದು, ಆತನ ಅಥವಾ ಆಕೆಯ ಮನೋಭಾವ, ನಡವಳಿಕೆ, ಲೈಂಗಿಕ ಆಸಕ್ತಿ ಹೀಗೆ ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ ಎಂದು ಅಮೆರಿಕದ ಮಾನವ ಶಾಸ್ತ್ರಜ್ಞರಾದ ಜೇಮ್ಸ್ ಕ್ಯಾರಿ ಮತ್ತು ಎ.ಟಿ.ಸ್ಟೆಗ್ಮನ್ ಬಹಿರಂಗಪಡಿಸಿದರು. ಇವರ ಪ್ರಕಾರ ಉದ್ದ ಮತ್ತು ಕಿರಿದಾದ ಮೂಗುಳ್ಳವರು ಹಾಸ್ಯ ಪ್ರವೃತ್ತಿಯವರು ಮತ್ತು ಬುದ್ಧಿವಂತರಾಗಿರುತ್ತಾರೆ. ಸಣ್ಣ ಮೂಗುಳ್ಳವರು ಹಣಕ್ಕೆ ಪ್ರಾಧಾನ್ಯ ನೀಡುವವರಲ್ಲ. ಅಗಲ ಮೂಗಿನ ಹೊಳ್ಳೆ ಇರುವವರು ಹೆಚ್ಚು ಖರ್ಚು ಮಾಡುವವರು. ಮೂಗಿನ ಹೊಳ್ಳೆಗಳ ಅಗಲ ಕಣ್ಣುಗಳ ಮಧ್ಯದ ಅಳತೆಗಿಂತ ಹೆಚ್ಚಿರಬಾರದು. ಇವರು ಪ್ರಾಮಾಣಿಕರು, ಸತ್ಯವಂತರಾಗಿರುತ್ತಾರೆ, ಅಲ್ಲದೆ ನಮ್ಮ ಪೂರ್ವಜರು ಎಲ್ಲಿಂದ ಬಂದವರು ಎಂಬುದನ್ನೂ ಮೂಗು ಹೇಳಬಲ್ಲುದು ಎನ್ನುತ್ತಾರೆ ಈ  ವಿಜ್ಞಾನಿಗಳು.

 2008: ಅತೀಂದ್ರಿಯ ಧ್ಯಾನವನ್ನು ಜನಸಮೂಹಕ್ಕೆ ಪರಿಚಯಿಸಿದ ಮಹರ್ಷಿ ಮಹೇಶ ಯೋಗಿ ಅವರ ಪಾರ್ಥಿವ ಶರೀರ ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಪಂಚಭೂತಗಳಲ್ಲಿ ಲೀನವಾಯಿತು. ಫೆಬ್ರುವರಿ 6ರಂದು ಹಾಲೆಂಡಿನಲ್ಲಿ ಮಹರ್ಷಿ ದೈವಾಧೀನರಾಗಿದ್ದರು. ಮೂರು ದಿನಗಳ ನಂತರ ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲಾಗಿತ್ತು.

2008: ಮರಳಿನಲ್ಲಿ ಕಪ್ಪೆಗೂಡು, ಗುಬ್ಬಚ್ಚಿಮನೆ, ನಾಯಿ ಮನೆ ಕಟ್ಟುವುದು ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಸಮುದ್ರ ತೀರ, ನದಿ ದಂಡೆಯಲ್ಲೇಕೆ ಮಕ್ಕಳು ಮನೆಕಟ್ಟುವ ಆಟವಾಡುತ್ತಾರೆ? ಏಕೆಂದರೆ ಮರಳಿನ ಜೊತೆ ಹದವಾಗಿ ನೀರು ಬೆರೆತಿರುತ್ತದೆ. ಹಾಗಿರುವುದರಿಂದಲೇ ಮಕ್ಕಳು ಕಟ್ಟಿದ ಗೂಡುಗಳು ಗಟ್ಟಿಯಾಗಿ ನಿಲ್ಲುತ್ತವೆ! ಎಂದು ಆಸ್ಟ್ರೇಲಿಯಾ ಮತ್ತು ಜರ್ಮನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯೊಂದು ಬಹಿರಂಗಪಡಿಸಿತು.  ಮರಳಿನ ಕಣಗಳನ್ನು ನೀರು  ಜೋಡಿಸುತ್ತದೆ. ಈ ಸಂಬಂಧವನ್ನು ಕಣ-ದ್ರವ-ಗಾಳಿಯ ಅಂತರ್ ಸಂಪರ್ಕ ಎಂದು ಸಂಶೋಧನೆ ಹೇಳಿತು.

2008: ದಕ್ಷಿಣ ಕೊರಿಯಾದ ಮಹತ್ವದ ಐತಿಹಾಸಿಕ ಕುರುಹಾಗಿದ್ದ 600 ವರ್ಷಗಳಷ್ಟು ಹಳೆಯ ವುಡನ್ ಬಿಲ್ಡಿಂಗ್ (`ಮರದ ಕಟ್ಟಡ') ಬೆಂಕಿಗೆ ಆಹುತಿಯಾಯಿತು.

2008: ಹಾಲಿವುಡ್ಡಿನ ಪ್ರಸಿದ್ಧ ಚಿತ್ರ `ಜಾಜ್'ನಲ್ಲಿನ ನಟನೆಯಿಂದ ಮನೆಮಾತಾಗಿದ್ದ, ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಸೂಚಿತರಾಗಿದ್ದ ಹಾಲಿವುಡ್ ನಟ ರಾಯ್ ಶೀಡರ್ (75) ಅವರು ಲಿಟಲ್ ರಾಕಿನಲ್ಲಿರುವ ಅರ್ಕನಾಸಾಸ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಕಾಲೇಜಿನ ಆಸ್ಪತ್ರೆಯಲ್ಲಿ ನಿಧನರಾದರು. 1971ರಲ್ಲಿ `ದಿ ಫ್ರೆಂಚ್ ಕನೆಕ್ಷನ್' ಚಿತ್ರದಲ್ಲಿ ಪೋಷಕ ನಟ ಪಾತ್ರಕ್ಕಾಗಿ ಹಾಗೂ 1979ರಲ್ಲಿ `ಆಲ್ ದಟ್ ಜಾಜ್' ಚಿತ್ರದಲ್ಲಿನ ನಟನೆಗಾಗಿ ಶೀಡರ್  ಹೆಸರು ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ಸೂಚಿತವಾಗಿತ್ತು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮವಾಗಿ ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಮತ್ತು ಇತರರು ಸುಮಾರು 31 ತಾಸುಗಳ ಕಾಲ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಈ ಅವಧಿಯಲ್ಲಿ ಅವರ ಭೂಮಿ ಜೊತೆಗಿನ ಸಂಪರ್ಕ ಕಡಿದುಹೋಗಿತ್ತು.

2007: ಅರಬ್ಬರ ವಿರೋಧವನ್ನು ಲೆಕ್ಕಿಸದೆ ಜೆರುಸಲೇಂನ ಹೊರಭಾಗದ ಅತ್ಯಂತ ವಿವಾದಾತ್ಮಕ ಧಾರ್ಮಿಕ ತಾಣದಲ್ಲಿಉತ್ಖನನ ಮುಂದುವರೆಸಲು ಇಸ್ರೇಲ್ ಸಚಿವ ಸಂಪುಟ ನಿರ್ಧರಿಸಿತು. ಉದ್ದೇಶಿತ ಚೌಕಟ್ಟಿನ ಮಿತಿಯಲ್ಲೇ ಒಳಗೆ ಮುಘ್ರಾಬಿ ಗೇಟಿಗೆ ಸಂಪರ್ಕ ಮಾರ್ಗ ನಿರ್ಮಾಣದ ಕಾರ್ಯದ ಮುಂದುವರಿಕೆಗೂ ಸರ್ಕಾರ ಮಂಜೂರಾತಿ ನೀಡಿತು. ಮುಸ್ಲಿಮರು `ಅಲ್-ಹರಮ್-ಅಲ್-ಷರೀಫ್' ಎಂಬದಾಗಿ ನಂಬುವ ಈ ಕಟ್ಟಡವನ್ನು ಯಹೂದಿಗಳು ತಮ್ಮ `ಮೌಂಟ್ ಮಂದಿರ' ಎಂಬುದಾಗಿ ನಂಬುತ್ತಾರೆ.

2007: ಭಾರತದ ಪ್ರಮುಖ ಮೊಬೈಲ್ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ಹಚ್- ಎಸ್ಸಾರ್ ಕಂಪೆನಿಯನ್ನು ಬ್ರಿಟನ್ನಿನ ಪ್ರಮುಖ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ವಡಾಫೋನ್ 19.3 ಬಿಲಿಯನ್ ಡಾಲರುಗಳಿಗೆ (1930ಕೋಟಿ ಡಾಲರ್) ಖರೀದಿಸಿತು.

2007: ಬೆಂಗಳೂರಿನ ಯಲಹಂಕದಲ್ಲಿ ಐದು ದಿನಗಳಿಂದ ವಿಮಾನಾಸಕ್ತರ ಕುತೂಹಲ ಕೆರಳಿಸಿ, ಜಗತ್ತಿನ ಗಮನ ಸೆಳೆದಿದ್ದ ಆರನೇ ಏರ್ ಇಂಡಿಯಾ -2007 ವೈಮಾನಿಕ ಪ್ರದರ್ಶನಕ್ಕೆ ತೆರೆಬಿತ್ತು. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈ ಪ್ರದರ್ಶನ ವೀಕ್ಷಿಸಿದರು.

2007: ವಾರ್ಷಿಕ ಪ್ರೇಮಿಗಳ ದಿನಾಚರಣೆ ಅಂಗವಾಗಿ ಫಿಲಿಪ್ಪೀನ್ಸಿನ ಮನಿಲಾದಲ್ಲಿ ಏರ್ಪಡಿಸಲಾಗಿದ್ದ `ಮುತ್ತಿನ ಹಬ್ಬ'ದಲ್ಲಿ 6214 ಜೋಡಿಗಳು ಪಾಲ್ಗೊಂಡು `ಮುತ್ತಿನ ದಾಖಲೆ' ನಿರ್ಮಿಸಿದವು. 2005ರಲ್ಲಿ ಬುಡಾಪೆಸ್ಟಿನಲ್ಲಿ 5875 ಜೋಡಿಗಳು ನಿರ್ಮಿಸಿದ್ದ ಮುತ್ತಿನ ದಾಖಲೆಯನ್ನು ಈ ಜೋಡಿಗಳು ಅಳಿಸಿ ಹಾಕಿದವು.

2007: ಉತ್ತರ ಪ್ರದೇಶದ ಬುಲಂದಶಹರಿನ ರಾಜಘಾಟಿನಲ್ಲಿ ಖಾಸಗಿ ಬಸ್ಸೊಂದು ಗಂಗಾನದಿ ಕಾಲುವೆಗೆ ಉರುಳಿ ಬಿದ್ದು 45 ಜನ ಮೃತರಾದರು.

2007: ನದಿಯ ನೀರಿನ ಮೇಲೆ ರಸ್ತೆಯಲ್ಲಿ ಚಲಿಸುವಂತೆಯೇ ತೇಲುತ್ತಾ ಚಲಿಸಬಲ್ಲ ತನ್ನ ಹೊಸ ಸಂಶೋಧಿತ ಕಾರನ್ನು ಕೇರಳದ ತಿರುವನಂತಪುರದ 28ರ ಹರೆಯದ ತರುಣ ಮೆಕ್ಯಾನಿಕ್ ಪಿ.ಎಸ್. ವಿನೋದ್ ತಿರುವಲ್ಲಂ ಸರೋವರದಲ್ಲಿ ಎರಡನೇ ಬಾರಿಗೆ ಯಶಸ್ವಿಯಾಗಿ ಪ್ರದರ್ಶಿಸಿದರು. ಈ ಕಾರು ಪ್ರೊಫೆಲ್ಲರ್ ಹೊಂದಿದ್ದು, ನೀರನ್ನು ಪ್ರವೇಶಿಸಿದ ಬಳಿಕ ಇದು ಚಾಲೂ ಆಗುತ್ತದೆ. ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಬಳಸಿ ಈ ಪ್ರೊಫೆಲ್ಲರನ್ನು ಚಲಾಯಿಸಬಹುದು. ಈ ಕಾರು 1985ರ ಮಾಡೆಲ್ಲಿನ ಮಾರುತಿ ಕಾರಿನ ಚಾಸಿಸ್ ಮತ್ತು ಎಂಜಿನ್ ಹಾಗೂ ಪಾಲೆಯೋದ ಹೆಡ್ ಲೈಟ್, ಸ್ಕಾರ್ಪಿಯೋದ ಹಿಂಭಾಗವನ್ನು ಹೊಂದಿದೆ. ಇದನ್ನು ನಿರ್ಮಿಸಲು ವಿನೋದ್ ಗೆ 8.5 ಲಕ್ಷ ರೂಪಾಯಿ ವೆಚ್ಚ ತಗುಲಿದೆ.

2006: ಔಷಧಗಳ ಮೇಲೆ ಎಲ್ಲ ತೆರಿಗೆಗಳೂ ಸೇರಿದಂತೆ ಗರಿಷ್ಠ ಮಾರಾಟ ದರ (ಎಂ ಆರ್ ಪಿ) ನಮೂದಿಸುವುದನ್ನು ಏಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ರಾಮ್ ವಿಲಾಸ ಪಾಸ್ವಾನ್ ಪ್ರಕಟಿಸಿದರು.

1993: ಭಾರತದ ಖ್ಯಾತ ಚಿತ್ರ ನಿರ್ದೇಶಕ ಕಮಲ್ ಅಮ್ರೋಹಿ (1918-1993) ಈ ದಿನ ನಿಧನರಾದರು. ಇವರು ನಟಿ ಮೀನಾಕುಮಾರಿ ಅವರ ಪತಿ. 

1990: ದಕ್ಷಿಣ ಆಫ್ರಿಕಾದ ಕರಿಯ ರಾಷ್ಟ್ರೀಯ ನಾಯಕ ನೆಲ್ಸನ್ ಮಂಡೇಲಾ ಅವರನ್ನು 27 ವರ್ಷಗಳ ಸುದೀರ್ಘ ಸೆರೆವಾಸದಿಂದ ಬಿಡುಗಡೆ ಮಾಡಲಾಯಿತು.

1980: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888- 1980) ನಿಧನರಾದರು.

 1977: ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ (1905-1977) ಅವರು ನಿಧನರಾದರು. ರಾಷ್ಟ್ರಪತಿಯಾಗಿದ್ದಾಗಲೇ ನಿಧನರಾದ ಭಾರತದ ಎರಡನೇ ರಾಷ್ಟ್ರಪತಿ ಇವರು. 

1975: ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ರಾಜಕೀಯ ಪಕ್ಷವೊಂದರ ಮೊತ್ತ ಮೊದಲ ಮಹಿಳಾ ನಾಯಕಿಯಾದರು.

1963: ಶಿಲ್ಪ ಕಲೆಗೆ ಹೊಸ ಆಯಾಮ ನೀಡಿ ಹೊಸ ಹೊಸ ಸಂಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದ ಗಣೇಶ ಎಲ್. ಭಟ್ ಅವರು ಲಕ್ಷ್ಮೀನಾರಾಯಣ ಭಟ್ಟ - ಮಂಗಳಾ ಭಟ್ ದಂಪತಿಯ ಮಗನಾಗಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೇಲಿನ ಇಡಗುಂಜಿಯಲ್ಲಿ ಜನಿಸಿದರು. 600ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ರಚಿಸಿ ಭಾರತ ಮತ್ತು ಇಂಗ್ಲೆಂಡಿನಲ್ಲಿ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ಸಂಘಟಿಸಿರುವ ಗಣೇಶ ಭಟ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರಗಳು ಲಭಿಸಿವೆ. ಮರಳು, ಮರಳುಮಿಶ್ರಿತ ಕೆಂಪುಕಲ್ಲು, ಶೆಲ್ ಸ್ಟೋನ್, ಫ್ರೆಂಚ್ ಸ್ಟೋನ್, ಶಿಂಪ್ಲಿ ಸ್ಟೋನ್, ಬಾತ್ ಸ್ಟೋನ್ ಇತ್ಯಾದಿಗಳನ್ನು ಬಳಸಿ ಶಿಲ್ಪಕಲಾಕೃತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಗಣೇಶ ಭಟ್ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಾಕೃತಿ ರಚನೆ ಬಗ್ಗೆ ತರಬೇತಿ ನೀಡಿದ್ದಾರೆ.

1945: ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಧುರೀಣ ಜೋಸೆಫ್ ಸ್ಟಾಲಿನ್ ಅವರು ಎರಡನೇ ಜಾಗತಿಕ ಸಮರ ಕಾಲದ ಯಾಲ್ಟಾ ಒಪ್ಪಂದಕ್ಕೆ ಸಹಿ ಹಾಕಿದರು. ನಾಝಿ ಜರ್ಮನಿಯನನ್ನು ಅಂತಿಮವಾಗಿ ಪರಾಭವಗೊಳಿಸುವ ಬಗೆ ಹಾಗೂ ಪರಾಜಿತ ಪೂರ್ವ ಯುರೋಪ್ ರಾಷ್ಟ್ರಗಳ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಈ ಮೂವರು ಚರ್ಚಿಸಿದರು.

1942: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ಜಮ್ನಾಲಾಲ್ ಬಜಾಜ್ (1889-1942) ನಿಧನರಾದರು.

1847: ಥಾಮಸ್ ಆಲ್ವಾ ಎಡಿಸನ್ (1847-1931) ಹುಟ್ಟಿದ. ಖ್ಯಾತ ಸಂಶೋಧಕನಾದ ಈತ 1000ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿದ್ದ ವ್ಯಕ್ತಿ. 1973ರಲ್ಲಿ ಈತನ 126ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್ ನ್ನು ಸ್ಥಾಪಿಸಲಾಯಿತು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement