Tuesday, April 21, 2009

ಇಂದಿನ ಇತಿಹಾಸ History Today ಏಪ್ರಿಲ್ 20

ಇಂದಿನ ಇತಿಹಾಸ

ಏಪ್ರಿಲ್ 20

ಮರಾಠಿಯ ಪ್ರಸಿದ್ಧ ಜಾನಪದ ಮತ್ತು ಶಿಕ್ಷಣತಜ್ಞೆ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಡಾ. ಸರೋಜಿನಿ ಬಾಬರ್ (87) ಅವರು ತಮ್ಮ ದೀರ್ಘ ಅನಾರೋಗ್ಯದಿಂದಾಗಿ ಈದಿನ ತಡರಾತ್ರಿ ಪುಣೆಯಲ್ಲಿ ನಿಧನರಾದರು. ಅವರು ಅವಿವಾಹಿತರಾಗಿದ್ದರು. ಅವರು `ಮರಾಠಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ' ವಿಷಯಕ್ಕೆ ಡಾಕ್ಟರೇಟ್ ಪಡೆದಿದ್ದರು.  ಮರಾಠಿ ಜಾನಪದ ಸಾಹಿತ್ಯ ಮತ್ತು ಸಾಮಾಜಿಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. 

2008: 2008: ಹೊಟ್ಟೆಪಾಡಿಗಾಗಿ ಹಾಗೂ ಔಷಧಿ ಖರ್ಚು ಭರಿಸುವ ಸಲುವಾಗಿ ಖ್ಯಾತ ಹಿಂದಿ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ ವಯೋವೃದ್ಧ ಅಮರ ಕಾಂತ್ (83) ಅವರು 2007ರಲ್ಲಿ ದೊರೆತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ತಮಗೆ ಸಂದ ಪ್ರಶಸ್ತಿ ಪದಕಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ಈ ಹಿಂದೆ ಬಡತನದ ಕಾರಣ ಪುಡಿಗಾಸಿಗಾಗಿ ಅವರು ತಮ್ಮ ಕೃತಿಗಳ ಹಸ್ತಪ್ರತಿಗಳನ್ನು ಮಾರಾಟ ಮಾಡಿದ್ದರು. ಉತ್ತರ ಪ್ರದೇಶ ಬಲಿಯಾ ಪಟ್ಟಣದವರಾದ ಅಮರ ಕಾಂತ್ 1942ರಲ್ಲಿ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ'  (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ಸಾಧನೆಗಾಗಿ ಇವರು ರಾಜ್ಯ ಸರ್ಕಾರದಿಂದ ಮಹಾತ್ಮಗಾಂಧಿ ಪ್ರಶಸ್ತಿ ಹಾಗೂ ಸಾಹಿತ್ಯ ಭೂಷಣ ಪ್ರಶಸ್ತಿಯನ್ನೂ ಪಡೆದಿದ್ದರು.

2008: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ ಉತ್ತರ ಪ್ರದೇಶದ ವಕ್ಫ್ ಸಚಿವ ಶಹಜಲ್ ಇಸ್ಲಾಮ್ ಅನ್ಸಾರಿ ಮತ್ತು ಅವರ ಭದ್ರತಾ ಸಿಬ್ಬಂದಿ 3000 ರೂಪಾಯಿ ದಂಡ ತೆತ್ತ ಘಟನೆ ನಡೆಯಿತು. ಸಚಿವರು ಮತ್ತು ಸಿಬ್ಬಂದಿ ಹಿಂದಿನ ದಿನ ಲಕ್ನೋ- ದೆಹಲಿ ಶತಾಬ್ದಿ ಏಕ್ಸ್ಪ್ರೆಸ್ ರೈಲಿನ  ವಿಶೇಷ ಎಕ್ಸಿಕ್ಯೂಟಿವ್ ವರ್ಗದಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನ ಟಿಕೆಟ್ ಪರೀಕ್ಷಕರು ಟಿಕೆಟ್ ತೋರಿಸುವಂತೆ ಕೇಳಿದಾಗ ಸಚಿವರು ತಮ್ಮ ಬಳಿ ಇದ್ದ ಟಿಕೆಟಿನ ಜೆರಾಕ್ಸ್ ಪ್ರತಿ ತೋರಿಸಿದರು. ಆದರೆ ಮೂಲ ಟಿಕೆಟ್ ತೋರಿಸಲು ವಿಫಲರಾದರು.

2008: ಮರಾಠಿಯ ಪ್ರಸಿದ್ಧ ಜಾನಪದ ಮತ್ತು ಶಿಕ್ಷಣತಜ್ಞೆ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಡಾ. ಸರೋಜಿನಿ ಬಾಬರ್ (87) ಅವರು ತಮ್ಮ ದೀರ್ಘ ಅನಾರೋಗ್ಯದಿಂದಾಗಿ ಈದಿನ ತಡರಾತ್ರಿ ಪುಣೆಯಲ್ಲಿ ನಿಧನರಾದರು. ಅವರು ಅವಿವಾಹಿತರಾಗಿದ್ದರು. ಅವರು `ಮರಾಠಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ' ವಿಷಯಕ್ಕೆ ಡಾಕ್ಟರೇಟ್ ಪಡೆದಿದ್ದರು. ಮರಾಠಿ ಜಾನಪದ ಸಾಹಿತ್ಯ ಮತ್ತು ಸಾಮಾಜಿಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಕಳೆದ 50 ವರ್ಷಗಳಿಂದ ಏಕಾಂಗಿಯಾಗಿ `ಸಮಾಜ್ ಶಿಕ್ಷಣ್ ಮಾಲಾ' ಮಾಸಿಕ ಪತ್ರಿಕೆಯನ್ನು ಅವರು ನಡೆಸುತ್ತಿದ್ದರು. ಎರಡು ಅವಧಿಗೆ  ಮಹಾರಾಷ್ಟ್ರ ವಿಧಾನಸಭೆಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸರೋಜಿನಿ ಅವರ ಜೀವನಸಾಧನೆ ಪರಿಗಣಿಸಿ ಪುಣೆ ವಿಶ್ವವಿದ್ಯಾಲಯ `ಜೀವನ್ ಸಾಧನಾ ಗೌರವ್ ಪುರಸ್ಕಾರ' ನೀಡಿ ಗೌರವಿಸಿತ್ತು. 

2008: ವ್ಯಕ್ತಿಯೊಬ್ಬನ ಉಪನಾಮ (ಸರ್ ನೇಮ್) ಆ ವ್ಯಕ್ತಿಯ ಜಾತಿ ಸೂಚಕ ಎಂದು ಯಾವತ್ತೂ ಪರಿಗಣಿಸುವಂತಿಲ್ಲ ಎಂದು ಮುಂಬೈ ಹೈಕೋರ್ಟ್ ತೀರ್ಪು ನೀಡಿತು. ದೀಪಿಕಾ ನಂದನವರ್ ಎಂಬ ಯುವತಿ ತಾನು `ಹಾಲ್ಬಿ' (ಪರಿಶಿಷ್ಟ ಪಂಗಡ) ಪಂಗಡಕ್ಕೆ ಸೇರಿದವಳಾಗಿದ್ದು, ತನ್ನದೇ ಉಪನಾಮ ಹೊಂದಿದ್ದ ಇತರ 29 ಜನರ ಮೀಸಲಾತಿ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಆದರೆ ತನಗೆ ಈ ಸೌಲಭ್ಯ ಸಿಗಬೇಕು ಎಂದು ಹೇಳಿದ್ದಳು. ಆದರೆ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ರೋಷನ್ ದಲ್ವಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ರೀತಿಯ ಹೋಲಿಕೆ ಮಾಡುವುದನ್ನು ಆಕ್ಷೇಪಿಸಿ, ಈ ಇತರ ನಂದನವರುಗಳು ಯುವತಿಯ ರಕ್ತಸಂಬಂಧಿಗಳು ಅಲ್ಲವಾದ ಕಾರಣ ಈಕೆಯ ಜಾತಿ ನಿರ್ಧಾರದಲ್ಲಿ ಇತರರ ಜಾತಿ ವಿಷಯ ಪ್ರಾಮುಖ್ಯ ಪಡೆಯುವುದ್ಲಿಲ ಎಂದು ಹೇಳಿತು.  

2008: ಬಿಹಾರ ವಿಧಾನ ಸಭೆ ವಿಸರ್ಜಿಸುವಂತೆ ತಾವು ನೀಡಿದ ಆದೇಶ ಅಸಾಂವಿಧಾನಿಕವಾದುದು ಎಂದು ಸುಪ್ರೀಂಕೋರ್ಟ್ 2005ರಲ್ಲಿ ತೀರ್ಪು ನೀಡಿದ್ದಾಗ ರಾಷ್ಟ್ರಪತಿ ಕಲಾಂ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದರು ಎಂಬುದು ಬಹಿರಂಗಗೊಂಡಿತು. ಕಲಾಂ  ರಾಷ್ಟ್ರಪತಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ಪಿ.ಎಂ. ನಾಯರ್ ಈ ಅಂಶವನ್ನು ಬಹಿರಂಗಪಡಿಸಿದರು. ಸುಪ್ರೀಂಕೋರ್ಟ್ ತೀರ್ಪಿನಿಂದ ನೊಂದ ಕಲಾಂ ತಮ್ಮ ರಾಜೀನಾಮೆ ಪತ್ರ ಸಿದ್ಧಪಡಿಸಿದ್ದರೂ ಕೊನೆಗೆ  ಅದನ್ನು ಕೈಬಿಟ್ಟರು ಎಂದು  ನಾಯರ್,  `ಕಲಾಂ ಎಫೆಕ್ಟ್; ಮೈ ಇಯರ್ಸ್ ವಿದ್ ಪ್ರೆಸಿಡೆಂಟ್' ಎಂಬ ತಮ್ಮ ಕೃತಿಯಲ್ಲಿ ಬಹಿರಂಗಪಡಿಸಿದರು.

2008: ನೇಪಾಳದಲ್ಲಿ ಅಸ್ತಿತ್ವಕ್ಕೆ ಬರಲಿರುವ ಸರ್ಕಾರವನ್ನು ತಾವೇ ಮುನ್ನಡೆಸಲಿರುವುದಾಗಿ ಮಾವೋವಾದಿ ನಾಯಕ ಪ್ರಚಂಡ ಕಠ್ಮಂಡುವಿನಲ್ಲಿ ಘೋಷಿಸಿದರು.

2008:  ಕುಡಿದ ಮತ್ತಿನಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಟ್ಯಾಕ್ಸಿ ಚಾಲಕನನ್ನು `ಇರಾಕಿ ಭಯೋತ್ಪಾದಕ' ಎಂದು ನಿಂದಿಸಿ, ಥಳಿಸಿದ ಆರೋಪದ ಹಿನ್ನೆಲೆಯಲ್ಲಿ 21 ವರ್ಷದ ಅಮೆರಿಕದ ಪ್ರಜೆ ಫುಟ್ಬಾಲ್ ತಂಡದಿಂದ ಹೊರಹಾಕಲ್ಪಟ್ಟಿದ್ದ ಲೂಯಿಸ್ ವ್ಯಾಜ್ ಕ್ವೆಜ್ (21) ಅವರಿಗೆ ಸಿಲಿಕಾನ್ ವ್ಯಾಲಿಯ ಸ್ಥಳೀಯ ನ್ಯಾಯಾಲಯ  9 ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿತು.

2008: ಯುದ್ಧ ಪೀಡಿತ ಉತ್ತರ ಶ್ರೀಲಂಕಾದ ಮುಲ್ಲೈತೀವುವಿನಲ್ಲಿ ವಾಯುಪಡೆ ದಾಳಿಗೆ  ಕನಿಷ್ಠ 32 ಎಲ್ ಟಿ ಟಿ ಇ ಬಂಡುಕೋರರು ಹಾಗೂ ಮಾನವ ಹಕ್ಕು ಕಾರ್ಯಕರ್ತನೊಬ್ಬ ಮೃತರಾದರು. ಎಲ್ ಟಿ ಟಿ ಇ ಪ್ರಾಬಲ್ಯದ ವನ್ನಿಯಲ್ಲಿ ಶ್ರೀಲಂಕಾ ಸೇನೆ ನಡೆಸಿದ ಕಾರ್ಯಾಚರಣೆಗೆ ಮಾನವ ಹಕ್ಕು ಕಾರ್ಯಕರ್ತ ಫಾದರ್ ಎಂ.ಎಕ್ಸ್. ಕರುಣಾರತ್ಮಂ ಮೃತಪಟ್ಟರು ಎಂದು ಎಲ್ಟಿಟಿಇ ಪ್ರಕಟಿಸಿತು.

2007:  ಬಾಲಿವುಡ್ಡಿನ ಜನಪ್ರಿಯ ತಾರೆಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರು ಈದಿನ  ಸಂಜೆ ಮುಂಬೈಯಲ್ಲಿ  ನಡೆದ ವರ್ಣರಂಜಿತ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ  ಅಡಿ  ಇಟ್ಟರು. ಇದರೊಂದಿಗೆ ಬಹು ನಿರೀಕ್ಷಿತ, ಭಾರಿ  ಪ್ರಚಾರ ಗಿಟ್ಟಿಸಿಕೊಂಡಿದ್ದ.ಬಾಲಿವುಡ್ ವಲಯದ `ಬಹುದೊಡ್ಡ ಮದುವೆ' ಸಡಗರದೊಂದಿಗೆ ಈಡೇರಿತು. ವರ್ಷದ ಮದುವೆ ಎಂದೇ ಬಿಂಬಿತವಾದ ಈ ಸಮಾರಂಭದಲ್ಲಿ ಅಭಿಷೇಕ್ (31) ಮತ್ತು  ಐಶ್ವರ್ಯ (33) ಉತ್ತರ ಭಾರತದ ಸಂಪ್ರದಾಯದಂತೆ ಪರಸ್ಪರ ಹಾರ ಬದಲಾಯಿಸುವ ಮೂಲಕ ಸತಿ ಪತಿಯಾದರು. ಅಮಿತಾಭ್ ಮತ್ತು  ಜಯಾ ಬಚ್ಚನ್  ಕುಟುಂಬದ ಮನೆ `ಪ್ರತೀಕ್ಷಾ'ದಲ್ಲಿ ಈ ಸಮಾರಂಭ ನೆರವೇರಿತು. ವಾರಣಾಸಿಯಿಂದ ಬಂದ ಅರ್ಚಕರು ವಿವಾಹ ವಿಧಿಗಳನ್ನು  ನೆರವೇರಿಸಿದರು. ಏಪ್ರಿಲ್ 18ರ ರಾತ್ರಿ `ಸಂಗೀತ ಸಮಾರಂಭ'ದೊಂದಿಗೆ ಆರಂಭವಾಗಿ 19ರಂದು ಸಾಂಪ್ರದಾಯಿಕ `ಮೆಹಂದಿ' ಕಾರ್ಯಕ್ರಮದೊಂದಿಗೆ ಮುಂದುವರೆದ ಮದುವೆ ಸಡಗರಕ್ಕೆ `ಅಕ್ಷಯ ತೃತೀಯಾ'ದ ಪವಿತ್ರ ದಿನವಾದ ಈದಿನ ವಿವಾಹ ಸಮಾರಂಭದ ಕ್ಲೈಮಾಕ್ಸಿನೊಂದಿಗೆ, ತೆರೆ ಬಿದ್ದಿತು. (ನೆನಪಿಡಬೇಕಾದ ಸಂಗತಿ: ವರ್ಷದ ಹಿಂದೆ ಏಪ್ರಿಲ್ 19ರಂದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇಗುಲದಲ್ಲಿ `ಗುರು' ಚಿತ್ರಕ್ಕಾಗಿ ಇವರಿಬ್ಬರ ಅದ್ಧೂರಿ ಮದುವೆ ನಡೆದಿತ್ತು!)

2007: ಅಸಾಧಾರಣ ಸಾಹಿತ್ಯ ವ್ಯಕ್ತಿತ್ವ ಎಂದು ಗೌರವಿಸಿ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ `ಎನ್. ಟಿ. ರಾಮರಾವ್ (ಎನ್ ಟಿ ಆರ್) ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲು ಹೈದರಾಬಾದಿನ ಎನ್ ಟಿ ಆರ್ ವಿಜ್ಞಾನ ಟ್ರಸ್ಟ್ ತೀರ್ಮಾನಿಸಿತು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಅಧ್ಯಕ್ಷತೆಯ ಈ ಟ್ರಸ್ಟಿನ ಈ ಚೊಚ್ಚಲ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ.

2007: ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದ ವಿಶ್ವ ಗೋ ಸಮ್ಮೇಳನದ ಆವರಣದಲ್ಲಿ ಎತ್ತಿನಗಾಡಿ ಸವಾರಿ ಮಾಡುವ ಮೂಲಕ ಖ್ಯಾತ ಹಿಂದಿ ಚಿತ್ರನಟ ವಿವೇಕ್ ಒಬೆರಾಯ್ ಎತ್ತಿನಗಾಡಿ ಪರಿಕ್ರಮ ಪಥಕ್ಕೆ ಚಾಲನೆ ನೀಡಿದರು.

2006: ಭಾರತದ ಜಾರ್ಖಂಡಿನ ರಾಂಚಿಯ ಹುಡುಗ ಸ್ಫೋಟಕ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ದೋನಿ ರಾಷ್ಟ್ರೀಯ ಕ್ರಿಕೆಟಿಗೆೆ ಪದಾರ್ಪಣೆ ಮಾಡಿದ ಕೇವಲ 16 ತಿಂಗಳಿನಲ್ಲಿಯೇ ವಿಶ್ವದ ನಂಬರ್ ಒನ್ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತಾರಾಷ್ಟ್ರೀಯ ಕ್ರೆಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಹೊಸದಾದ ಏಕದಿನ  ರ್ಯಾಂಕಿಂಗ್ ಪಟ್ಟಿಯಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದೋನಿ  ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಟಿಂಗ್ ಅವರನ್ನು ಹಿಂದಕ್ಕೆ ತಳ್ಳಿದರು.

2006: ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಬಿಜೆಪಿಗೆ ರಾಜೀನಾಮೆ ಕೊಡುವ ಮೂಲಕ ಆ ಪಕ್ಷದ ಜೊತೆಗಿನ ತಮ್ಮ ಬಾಂಧವ್ಯವನ್ನು ಕಡಿದುಕೊಂಡರು.

2006: ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಗೌರವ ಪ್ರಶಸ್ತಿಗಳು ಪ್ರಕಟಗೊಂಡವು. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ತುಳು ಸಾಹಿತ್ಯ ಮತ್ತು ಸಂಶೋಧನೆ, ವಿ.ಜಿ. ಪಾಲ್ ಅವರು ತುಳು ನಾಟಕ, ಚಲನಚಿತ್ರ, ಐತಪ್ಪ ಮೂರುಪಂಬದ ಅವರು ತುಳು ಜಾನಪದ ಪ್ರಶಸ್ತಿಗೆ ಆಯ್ಕೆಯಾದರು. 

2006: ಸುಮಾರು ಒಂದು ದಶಕದಿಂದ ಕಾನೂನು ತೊಡಕುಗಳಲ್ಲಿ ಸಿಲುಕಿ ಕುಂಟುತ್ತಾ ಸಾಗಿದ್ದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆಯ ಹಾದಿಯನ್ನು ಸುಪ್ರೀಂಕೋರ್ಟ್ ಸುಗಮಗೊಳಿಸಿತು. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದ ಸುಪ್ರೀಂಕೋರ್ಟ್ ನೈಸ್ ಕಂಪೆನಿಯ ವ್ಯಾಜ್ಯವೆಚ್ಚ ಐದು ಲಕ್ಷ ರೂಪಾಯಿಗಳನ್ನು ಭರಿಸಿಕೊಡುವಂತೆಯೂ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತು.

1961: ಕಲಾವಿದ ಮುರಳಿ ವಿ. ಜನನ.

1960: ಏರ್ ಇಂಡಿಯಾ ಸಂಸ್ಥೆಯು ಜೆಟ್ ಯುಗವನ್ನು ಪ್ರವೇಶಿಸಿತು. ಸಂಸ್ಥೆಯ  `ಗೌರಿಶಂಕರ' ಬೋಯಿಂಗ್ 707ರ ಸೇವೆಯನ್ನು ಲಂಡನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಲಾಯಿತು. 

1950: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜನ್ಮದಿನ.

1947: ಕಲಾವಿದೆ ವಸಂತ ಮಾಧವಿ ಜನನ.

1942: ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಹಿರಿತೆರೆಗಳಲ್ಲಿ ತಮ್ಮ ನಟನೆಯಿಂದ ಪ್ರಖ್ಯಾತರಾಗಿರುವ ಎಚ್. ಜಿ. ದತ್ತಾತ್ರೇಯ `ದತ್ತಣ್ಣ' ಅವರು ಹರಿಹರ ಗುಂಡೂರಾಯರು- ವೆಂಕಮ್ಮ ದಂಪತಿಯ ಮಗನಾಗಿ ಚಿತ್ರದುರ್ಗದಲ್ಲಿ ಜನಿಸಿದರು.

1942: ಕಲಾವಿದ ಪುಂಚಿತ್ತಾಯ ಪಿ.ಎಸ್. ಜನನ.

1940: ಕಲಾವಿದ ವಿ. ಕೃಷ್ಣಮೂರ್ತಿ ಜನನ.

1924: ಕಲಾವಿದ ರಾಮಸ್ವಾಮಿ ಎಚ್. ಟಿ. ಜನನ.

1889: ಅಡಾಲ್ಫ್ ಹಿಟ್ಲರ್ ಜನ್ಮದಿನ. ಜರ್ಮನಿಯ ನಾತ್ಸಿ ಸರ್ವಾಧಿಕಾರಿಯಾದ ಈತ ಆಸ್ಟ್ರಿಯಾ- ಹಂಗೆರಿಯ ಬ್ರೌನವು- ಆಮ್- ಇನ್ ಎಂಬ ಸ್ಥಳದಲ್ಲಿ ಹುಟ್ಟಿದ. ಲಕ್ಷಾಂತರ ಯಹೂದಿಗಳ ಕಗ್ಗೊಲೆಗೆ ಕಾರಣನಾದ. ತನ್ನ ರಾಷ್ಟ್ರವನ್ನು ಎರಡನೇ ಜಾಗತಿಕ ಸಮರದತ್ತ ಮುನ್ನಡೆಸಿದ.

 1862: ಲೂಯಿ ಪ್ಯಾಶ್ಚರ್ ಮತ್ತು ಕ್ಲಾರ್ಡ್ ಬರ್ನಾರ್ಡ್ ಪ್ಯಾಶ್ಚರೀಕರಣದ ಮೊದಲ ಪರೀಕ್ಷೆಯನ್ನು ಪೂರ್ಣಗೊಳಿಸಿದರು. 48 ದಿನಗಳ ಕಾಲ ಮುಚ್ಚಿಡಲಾಗಿದ್ದ ಬಾಟಲಿಗಳನ್ನು ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸಭೆಯೊಂದರಲ್ಲಿ ತೆರೆಯಲಾಯಿತು. ಆ ಬಾಟಲಿಗಳಲ್ಲಿ ನಾಯಿಯ ರಕ್ತ ಹಾಗೂ ಮೂತ್ರವನ್ನು ತುಂಬಿಸಿ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಇಡಲಾಗಿತ್ತು. ಈ ಅವಧಿಯಲ್ಲಿ ಅವು ಕೆಟ್ಟಿರಲಿಲ್ಲ. ಇದರಿಂದ ಸೂಕ್ಷ್ಮಜೀವಿಗಳು ಸಾಯುವಷ್ಟು ಉಷ್ಣತೆಯಲ್ಲಿ ಆಹಾರವನ್ನು ಇರಿಸಿ ಕೆಡದಂತೆ ರಕ್ಷಿಸಿ ಇಡುವ ಸಾಧ್ಯತೆ ಪತ್ತೆಯಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement