Wednesday, April 22, 2009

ಇಂದಿನ ಇತಿಹಾಸ History Today ಏಪ್ರಿಲ್ 21

ಇಂದಿನ ಇತಿಹಾಸ

ಏಪ್ರಿಲ್ 21

96 ವರ್ಷಗಳ ಹಿಂದೆ ತನ್ನ ಚೊಚ್ಚಲ ಯಾನ ಕಾಲದಲ್ಲೇ ಸಮುದ್ರದಲ್ಲಿ ಮುಳುಗಿ ಹೋದ `ಟೈಟಾನಿಕ್' ದುರಂತ ನೌಕೆಯ ಟಿಕೆಟ್ ಒಂದು ಈದಿನ ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 33,000 ಪೌಂಡುಗಳಿಗೆ ಮಾರಾಟವಾಯಿತು. ಟೈಟಾನಿಕ್ ದುರಂತ ಸಮಯದಲ್ಲಿ ಬದುಕಿ ಉಳಿದಿದ್ದ ಲಿಲಿಯನ್ (ಆ)ಏಸ್ಪ್ಲಂಡ್ ಅವರ ಸಂಗ್ರಹದಲ್ಲಿ ಇದ್ದ ಟಿಕೆಟ್ ಇದು. ಲಿಲಿಯನ್ `ಟೈಟಾನಿಕ್' ಹಡಗಿನಲ್ಲಿ ತನ್ನ ತಂದೆ ತಾಯಿ ಹಾಗೂ ಸಹೋದರರ ಜೊತೆಗಿದ್ದಳು.

2008: 96 ವರ್ಷಗಳ ಹಿಂದೆ ತನ್ನ ಚೊಚ್ಚಲ ಯಾನ ಕಾಲದಲ್ಲೇ ಸಮುದ್ರದಲ್ಲಿ ಮುಳುಗಿ ಹೋದ `ಟೈಟಾನಿಕ್' ದುರಂತ ನೌಕೆಯ ಟಿಕೆಟ್ ಒಂದು ಈದಿನ ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 33,000 ಪೌಂಡುಗಳಿಗೆ ಮಾರಾಟವಾಯಿತು. ಟೈಟಾನಿಕ್ ದುರಂತ ಸಮಯದಲ್ಲಿ ಬದುಕಿ ಉಳಿದಿದ್ದ ಲಿಲಿಯನ್ (ಆ)ಏಸ್ಪ್ಲಂಡ್ ಅವರ ಸಂಗ್ರಹದಲ್ಲಿ ಇದ್ದ ಟಿಕೆಟ್ ಇದು. ಲಿಲಿಯನ್ `ಟೈಟಾನಿಕ್' ಹಡಗಿನಲ್ಲಿ ತನ್ನ ತಂದೆ ತಾಯಿ ಹಾಗೂ ಸಹೋದರರ ಜೊತೆಗಿದ್ದಳು. ಆಕೆಯ ವಯಸ್ಸು ಆಗ ಕೇವಲ ಐದು ವರ್ಷ.  ಹೆನ್ರಿ ಅಲ್ಡ್ರಿಜ್ ಮತ್ತು  ಅವರ ಮಗ ಡೆವಿಝೆಸ್ ಅವರಿಗೆ ಸೇರಿದ ಹರಾಜು ಸಂಸ್ಥೆಯು ಈ ಟಿಕೆಟ್ಟನ್ನು ಹರಾಜಿಗಿಟ್ಟಿತ್ತು. ಸ್ವೀಡಿಷ್ ಸಂಗ್ರಾಹಕರೊಬ್ಬರು ಈ ಟಿಕೆಟ್ ಖರೀದಿಸಿದರು ಎಂದು ಹರಾಜು ಸಂಸ್ಥೆ ತಿಳಿಸಿತು. ಟೈಟಾನಿಕ್  ಟಿಕೆಟ್ ಬಗ್ಗೆ  ಕಂಡು ಬಂದಂತಹ ಕುತೂಹಲ ಹರಾಜು ಸಂಘಟಕರನ್ನೇ ದಂಗುಬಡಿಸಿತು. `ಚೀನಾ, ಅಮೆರಿಕ, ಸ್ವೀಡನ್, ಐರ್ಲೆಂಡ್ ಮತ್ತು  ಇಂಗ್ಲೆಂಡಿನಿಂದ ಜನ ಹರಾಜು ಕೂಗಲು ಮುಂದೆ ಬಂದರು. ಹರಾಜು ನಡೆದ ಸ್ಥಳ ಜನ ಕೂರಲು ತುಂಬಾ  ಕಿರಿದಾಗಿ, ನಾವು ಇನ್ನಷ್ಟು ಆಸನಗಳನ್ನು ಒದಗಿಸಬೇಕಾಯಿತು' ಎಂದು ಹರಾಜು ಸಂಸ್ಥೆಯನ್ನು  ನಡೆಸುತ್ತಿರುವ ಆಂಡ್ರ್ಯೂ ಆಲ್ಡ್ರಿಜ್ ಹೇಳಿದರು. ಆ(ಏ)ಸ್ಪ್ಲಂಡ್ ಸಂಗ್ರಹಗಳು ಒಟ್ಟು  100,000 ಪೌಂಡುಗಳಿಗೂ ಹೆಚ್ಚಿನ ದರಕ್ಕೆ ಮಾರಾಟವಾದವು ಎಂದು ಅವರು ನುಡಿದರು. ಆ(ಏ)ಸ್ಪ್ಲಂಡ್ ಅವರು ತಮ್ಮ 99ನೇ  ವಯಸ್ಸಿನಲ್ಲಿ 2006ರ ಮೇ 6ರಂದು ನಿಧನರಾಗಿದ್ದರು. ಆಕೆ ತಮ್ಮ ಟಿಕೆಟ್ಟನ್ನು ಅಮೆರಿಕದಲ್ಲಿನ ತನ್ನ ಮನೆಯ ಶೂ ಬಾಕ್ಸಿನಲ್ಲಿ ಇಟ್ಟಿದ್ದರು. ನಂತರ ತಮ್ಮ ಸಂಗ್ರಹಗಳನ್ನು ಸಹೋದರ ಸಂಬಂಧಿಗೆ ನೀಡಿದ್ದರು. ಸಹೋದರ ಸಂಬಂಧಿ ಅದನ್ನು  ಮಾರಾಟ ಮಾಡಿದರು. ಸ್ವೀಡನ್ನಿನಿಂದ ಅಮೆರಿಕಕ್ಕೆ  ವಲಸೆ ಹೋಗುವ ಸಲುವಾಗಿ  ಆ(ಏ)ಸ್ಪ್ಲಂಡ್ ಅವರು ಐದು ವರ್ಷದವಳಿದ್ದಾಗ ತನ್ನ ಕುಟುಂಬದ ಸದಸ್ಯರ ಜೊತೆಗೆ ಟೈಟಾನಿಕ್ ನೌಕೆ ಏರಿದ್ದರು.

2008: ಬೆಲೆ ಏರಿಕೆ ಹಾಗೂ ಪಕ್ಷದ ನಾಯಕಿ  ಮಮತಾ ಬ್ಯಾನರ್ಜಿ ವಿರುದ್ಧ ನಡೆದ `ಹಲ್ಲೆ'ಯನ್ನು ಪ್ರತಿಭಟಿಸಲು ತೃಣಮೂಲ ಕಾಂಗ್ರೆಸ್ ಹಾಗೂ ಎಸ್ ಯು ಸಿ ಐ ಕರೆಯ ಮೇರೆಗೆ ನಡೆದ 12 ಗಂಟೆಗಳ `ಬಂದ್' ಪರಿಣಾಮವಾಗಿ ಜನಜೀವನ  ಹಾಗೂ ರೈಲು ಸೇವೆ ಅಸ್ತವ್ಯಸ್ತಗೊಂಡಿತು. ಬಂದ್ ಬೆಂಬಲಿಗರು ವಿವಿಧ ನಿಲ್ದಾಣಗಳಲ್ಲಿ ರೈಲುಗಾಡಿಗಳ  ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದರಿಂದ ಹೌರಾ ಮತ್ತು ಸಿಯಾಲ್ಡಾ ವಿಭಾಗಗಳಲ್ಲಿ ರೈಲುಸೇವೆ ಅಸ್ತವ್ಯಸ್ತಗೊಂಡಿತು ಎಂದ ರೈಲ್ವೆ ಮೂಲಗಳು ತಿಳಿಸಿದವು.

2008: ಬಿಜೆಪಿ  ನಾಯಕ ಗೋಪಿನಾಥ ಮುಂಡೆ ಅವರು ಹಠಾತ್ತನೆ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿ ಬಿಜೆಪಿಗೆ  ಮಂಡೆಬಿಸಿಯಾಗುವಂತೆ ಮಾಡಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮಹಾರಾಷ್ಟ್ರ ಘಟಕದ ಭಿನ್ನಾಭಿಪ್ರಾಯಗಳನ್ನು  ನಿವಾರಿಸುವ  ಸಲುವಾಗಿ  ತತ್ ಕ್ಷಣ ದೆಹಲಿಗೆ ಬರುವಂತೆ ಮುಂಡೆ ಹಾಗೂ ರಾಜ್ಯ ಘಟಕ ಮುಖ್ಯಸ್ಥ ನಿತಿನ್ ಗಡ್ಕರಿ ಅವರಿಗೆ ವರಿಷ್ಠರು ಸೂಚಿಸಿದರು.

2008: ವಿಶ್ವ ಭೂಮಿ ದಿನದ ಸ್ಮರಣಾರ್ಥ ವಿಶೇಷ ಸಂಗೀತ ವಿಡಿಯೋ ಒಂದನ್ನು ಹೊರತಂದ ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲಿನ ಮನೋಭಾವಕ್ಕೆ ತಕ್ಕಂತಹ ಸಂಗೀತ ನೀಡಿದ ಹೆಗ್ಗಳಿಕೆಗೆ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಕನ್ನಡಿಗ ಸಂದೀಪ ಚೌಟ ಪಾತ್ರರಾದರು. ಈ ವಿಡಿಯೊ ಸಂಗೀತಕ್ಕೆ `ಬೆಂಗಳೂರು ಬ್ಯಾಂಡ್ ಕರ್ಮಾ 6' ತಂಡದ ಪ್ರತಿಭಾನ್ವಿತ ಗಾಯಕರು ಧ್ವನಿಗೂಡಿಸಿದ್ದರು. `ಅಥರ್್-ಎ ಸಾಂಗ್ ಫಾರ್ ಲೈಫ್' ಎಂಬ ಹೆಸರಿನ ಈ ವಿಡಿಯೋದ ಗುರಿ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಿ, ಪರಿಸರ ಸಂರಕ್ಷಣೆಗೆ ಸ್ವಯಂ ಪ್ರೇರಣೆಯಿಂದ ಕಾರ್ಯಪ್ರವೃತ್ತವಾಗಲು ಪ್ರೇರೇಪಣೆ ನೀಡುವುದು. ಸಮೀರ್ ಅವರು ಸಾಹಿತ್ಯ ಒದಗಿಸಿದ್ದರು. ಚಾನೆಲಿನ ತಿತಿತಿ.ಟಿಚಿಣರಜಠಣತ.ಛಿಠ.ಟಿ  ಈ ವೆಬ್ಸೈಟಿನಿಂದ ಆಸಕ್ತರು ಹಾಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

2008: ರಾಜೀವ್ ಗಾಂಧಿ ಹತ್ಯೆಯ ಆರೋಪದ ಮೇರೆಗೆ ಅಜೀವ ಕಾರಾಗೃಹ ಶಿಕ್ಷೆಗೆ ಗುರಿಯಾದ ಮುರುಗನ್ ಮತ್ತು ಆತನ ಪತ್ನಿ ನಳಿನಿ ಅವರ ಬಾಂಧವ್ಯ ಈಚೆಗೆ ಪ್ರಿಯಾಂಕಾ ಗಾಂಧಿ ಅವರ ಜೈಲು ಭೇಟಿಯ ಬಳಿಕ ಹಳಸಿದ್ದು ಬೆಳಕಿಗೆ ಬಂತು. ಜೈಲಿನ ನಿಯಮದಂತೆ ಮುರುಗನ್ ಮತ್ತು ನಳಿನಿ ಪ್ರತಿ 15 ದಿನಗಳಿಗೊಮ್ಮೆ ನಿರ್ದಿಷ್ಟ ಸಮಯ ಪರಸ್ಪರರನ್ನು ಭೇಟಿ ಮಾಡಬಹುದಿತ್ತು. ಏಪ್ರಿಲ್ 19ರಂದು ಸಹ ಇಂತಹ ಭೇಟಿಯ ದಿನವಾಗಿತ್ತು. ಆದರೆ ಪತಿಯನ್ನು ಭೇಟಿ ಮಾಡಲು ನಳಿನಿ ನಿರಾಕರಿಸಿದಳು. ಪ್ರಿಯಾಂಕಾ ಅವರು ನಳಿನಿಯನ್ನು ಮಾರ್ಚ್ 19ರಂದು ಭೇಟಿಯಾಗಿದ್ದರು. ಈ ವಿಷಯದಲ್ಲಿ ಮುರುಗನ್ ತೀವ್ರ ಸಿಟ್ಟು ಮಾಡಿಕೊಂಡು ಪತ್ನಿಯೊಂದಿಗೆ ತಗಾದೆ ತೆಗೆದಿದ್ದ. ಸಮಯ ಮೀರಿದ್ದರಿಂದ ಮುಂದಿನ ಭೇಟಿಯಲ್ಲಿ ಮಾತನಾಡುವೆ ಎಂದೂ ಅವನು ಹೇಳಿದ್ದ. ಆದರೆ ಪತ್ನಿಯ ಮೇಲಿನ ಸಿಟ್ಟಿನ ಕಾರಣಕ್ಕೆ ಏಪ್ರಿಲ್ 5ರಂದು ಆತ ಪತ್ನಿಯನ್ನು ಭೇಟಿ ಮಾಡಲಿಲ್ಲ. ಇದಕ್ಕೆ ಪ್ರತಿಯಾಗಿ ನಳಿನಿಯೂ ಏಪ್ರಿಲ್ 19ರಂದು ಪತಿಯನ್ನು ಭೇಟಿ ಮಾಡಲು ನಿರಾಕರಿಸಿದಳು. ಇದಕ್ಕೆ ಮೊದಲು ಏಪ್ರಿಲ್ 15ರಂದು ಲಂಡನ್ನಿನಿಂದ ಆಗಮಿಸಿದ್ದ ಮುರುಗನ್ ತಾಯಿ ಮತ್ತು ಸಹೋದರರನ್ನು ಸಹ ಭೇಟಿ ಮಾಡಲು ನಳಿನಿ ನಿರಾಕರಿಸಿದ್ದಳು.

2008: ದೇಶದ ಮೊತ್ತ ಮೊದಲ ಸಂಘಟಿತ ಸ್ವರೂಪದ ಚಿನ್ನದ ವಹಿವಾಟಿಗೆ ಮುಂಬೈಯಲ್ಲಿ ಚಾಲನೆ ನೀಡಲಾಯಿತು. ನಗದು ಹಣಕ್ಕೆ ಖರೀದಿಸುತ್ತಿದ್ದತೆ ಸ್ಥಳದಲ್ಲಿಯೇ ಚಿನ್ನ ವಿತರಿಸುವ (ಸ್ಪಾಟ್ ಮಾರ್ಕೆಟ್) ಈ ವಹಿವಾಟನ್ನು ಮುಂಬೈ ಷೇರುಪೇಟೆ, ಮುಂಬೈ ಚಿನ್ನದ ವ್ಯಾಪಾರಿಗಳ ಸಂಘ ಮತ್ತು ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಮನಿ ಸಹಯೋಗದಲ್ಲಿ ಆರಂಭಿಸಲಾಯಿತು. ಸದ್ಯಕ್ಕೆ ದೇಶದ ಚಿನ್ನಾಭರಣ ವರ್ತಕರು ಮತ್ತು ಖರೀದಿದಾರರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಏರಿಳಿತ ಆಧರಿಸಿ ಖರೀದಿ ವಹಿವಾಟು ನಡೆಸುತ್ತಾರೆ. 

2008: ಪಾಕಿಸ್ಥಾನವು ಅಣ್ವಸ್ತ್ರ ಸಿಡಿಸಬಲ್ಲ `ಹತ್ಫ್-6' (ಶಾಹೀನ್-2) ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯನ್ನು 2ನೇ ಬಾರಿ ನಡೆಸಿತು. ನೌಕಾದಳದ ಮುಖ್ಯಸ್ಥ ಮೊಹಮ್ಮದ್ ಅಫ್ಜಲ್ ತಾಹೀರ್, ಸೇನಾಧಿಕಾರಿಗಳು ಮತ್ತು ತಂತ್ರಜ್ಞರು ಹತ್ಫ್ ಪ್ರಾಯೋಗಿಕ ಪರೀಕ್ಷೆಗೆ ಸಾಕ್ಷಿಯಾದರು. ಪಾಕಿಸ್ಥಾನವು 1998ರಿಂದ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ. ಗಾವ್ರಿ-1 ಅದರ ಮೊತ್ತ ಮೊದಲ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯಾಗಿತ್ತು. ಆನಂತರ ಶಾಹೀನ್, ಘಜ್ನವೀ ಮತ್ತು ಅಬೀದಲೀ ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಹತ್ಫ್-3 (ಘಜ್ನವೀ), ಹತ್ಫ್-5 (ಗಾವ್ರಿ) ಮತ್ತು ಹತ್ಫ್-4 (ಶಾಹೀನ್-1) ಈಗಾಗಲೇ ಪಾಕಿಸ್ಥಾನ ಸೇನೆಯ ಬತ್ತಳಿಕೆ ಸೇರಿಕೊಂಡಿವೆ. ಅತ್ಯಂತ ದೂರ ಹಾಗೂ ನಿಗದಿತ ಪ್ರದೇಶಕ್ಕೆ ಅಣ್ವಸ್ತ್ರಗಳನ್ನು ಚಿಮ್ಮಿಸಬಲ್ಲ ಶಾಹೀನ್-1 ಕ್ಷಿಪಣಿಯ ಮಾದರಿಯಲ್ಲೇ ಹತ್ಫ್-6 ಸಹ ಇದೆ. ಆದರೆ ಇದರ ದೂರ ಸಾಮರ್ಥ್ಯ ಅತ್ಯಂತ ಹೆಚ್ಚು (ಸುಮಾರು ಎರಡು ಸಾವಿರ ಕಿಲೋ ಮೀಟರ್). ಈ ಕ್ಷಿಪಣಿ ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡನ್ನೂ ಸಮರ್ಥವಾಗಿ ಚಿಮ್ಮಿಸಬ್ಲಲುದು ಎಂದು ಪಾಕ್ ಸೇನಾ ಪ್ರಕಟಣೆ ತಿಳಿಸಿತು.

2008: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾಗಿ ಎಚ್. ಎಸ್.ಸುಧೀಂದ್ರ ಕುಮಾರ್ (ಅಧ್ಯಕ್ಷ), ಮಂಡಿಬೆಲೆ ರಾಜಣ್ಣ (ಉಪಾಧ್ಯಕ್ಷ), ಗಂಗಾಧರ ಮೊದಲಿಯಾರ್ (ಪ್ರಧಾನ ಕಾರ್ಯದರ್ಶಿ), ಎಂ.ಯೂಸೂಫ್  ಪಟೇಲ್, ಅಶೋಕ ಕಾಶೆಟ್ಟಿ ಹಾಗೂ ಯಲ್ಲಪ್ಪ ತಳವಾರ್ (ಕಾರ್ಯದರ್ಶಿ) ಜಿ.ಸಿ.ಲೋಕೇಶ್ (ಖಜಾಂಚಿ) ಆಯ್ಕೆಯಾದರು.  

2007: ಧರೆಯ ಮೇಲಿನ ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಗೋವಿನ ತಳಿಗಳ ಸಂರಕ್ಷಣೆಗಾಗಿ ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ಆರಂಭವಾದ ವೈಶಿಷ್ಟ್ಯಪೂರ್ಣವಾದ 10 ದಿನಗಳ ಸಡಗರದ ವಿಶ್ವ ಗೋ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ದೇಸೀ ಜಾನುವಾರುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಗೋ ಬ್ಯಾಂಕುಗಳನ್ನು ಸ್ಥಾಪಿಸುವ ಬಗ್ಗೆ ಆಲೋಚಿಸಲಾಗುವುದು ಎಂದು ಅವರು ನುಡಿದರು.

2007: ಬಿಜೆಪಿ ಸಂಸತ್ ಸದಸ್ಯ ಬಾಬುಭಾಯಿ ಕಟಾರ ಶಾಷಾಮೀಲಾದ ಮಾನವ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟಾರ ಅವರ ಆಪ್ತ ಸಹಾಯಕ ಮತ್ತು ಒಬ್ಬ ಮಹಿಳೆ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಯಿತು.

2007: ಹ್ಯೂಸ್ಟನ್ನಿನ `ನಾಸಾ' ಜಾನ್ ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಲಿಯಂ ಫಿಲಿಪ್ಸ್ ಎಂಬ ಎಂಜಿನಿಯರನೊಬ್ಬ ಸಿನಿಮೀಯ ರೀತಿಯಲ್ಲಿ ತನ್ನ ಸಹೋದ್ಯೋಗಿ ಡೇವಿಡ್ ಬೆವರ್ಲಿ ಅವರನ್ನು ಗುಂಡು ಹಾರಿಸಿ ಕೊಂದು ತಾನು ಸ್ವತಃ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ. `ನಾಸಾ'ಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಜಾಕೋಬ್ ಎಂಜಿನಿಯರಿಂಗಿನ ಉದ್ಯೋಗಿಯಾದ ವಿಲಿಯಂ ಫಿಲಿಪ್ಸ್ ಕಳೆದ 12-13 ವರ್ಷದಿಂದ ನಾಸಾಕ್ಕಾಗಿ ಕೆಲಸ ಮಾಡುತ್ತಿದ್ದ..

2007: ವಿಶ್ವಸುಂದರಿ, ಅಭಿನೇತ್ರಿ ಐಶ್ವರ್ಯ ರೈ ಬಚ್ಚನ್ ಅವರು ಬಚ್ಚನ್ ಪರಿವಾರ ಸೇರಿಕೊಳ್ಳುವ ಮುನ್ನ ವಿವಾಹದ ಬಳಿಕ ನಡೆಯುವ ಸಾಂಪ್ರದಾಯಿಕ ಬೀಳ್ಕೊಡುಗೆ `ಬಿದಾಯಿ' ಕಾರ್ಯಕ್ರಮದ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಳಿಸಿ ಅಳುತ್ತಾ ತವರಿಗೆ ವಿದಾಯ ಹೇಳಿದರು. ನಂತರ ಸಾಂಪ್ರದಾಯಿಕ ದೊಲಿ (ಪಲುಂಕ್ವಿನ್) ಉಡುಪಿನಲ್ಲಿ ಹೊರಗೆ ಬಂದ ಐಶ್ ಅಲಂಕೃತ ಕಾರಿನಲ್ಲಿ ಅಭಿಷೇಕ್ ಜೊತೆ ಕುಳಿತು ಮಾಧ್ಯಮದವರಿಗೆ ಸಿಗದೆ ಗಂಡನ ಮನೆಗೆ ತೆರಳಿದರು.

2007: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರಿನ ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯವು ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಘೋಷಿಸಿತು. ನೂರಕ್ಕೂ ಹೆಚ್ಚು ಪುಟಗಳ ತೀರ್ಪನ್ನು ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು 6 ಗಂಟೆಗಳ ಕಾಲ ಓದಿದರು. ಅನೀಸ್ ಖಾನ್, ಬದ್ರುದ್ದೀನ್, ಇಲಿಯಾಸ್ ಅಹಮದ್, ವಜೀರ್ ಅಹಮದ್ ಸಾಲಿಕ್ ಯಾನೆ ಎಂ.ಎಚ್. ಸಾಲಿಕ್ ಅಪರಾಧಿಗಳೆಂದು ಘೋಷಿತರಾದ ಇತರ ಆರೋಪಿಗಳು.

2007: ಐಎಎಸ್ ಅಧಿಕಾರಿಗಳಾದ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ರಾಜೀವ ಚಾವ್ಲಾ ಮತ್ತು ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಆರ್. ಎಸ್. ಪಾಂಡೆ ಅವರಿಗೆ  ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಅತ್ಯುತ್ತಮ ಸಾರ್ವಜನಿಕ ಆಡಳಿತ ಸೇವಾ ಪುರಸ್ಕಾರ ಪ್ರದಾನ ಮಾಡಿದರು.

2007: ಬಾಹ್ಯಾಕಾಶ ಪ್ರವಾಸಿ ಚಾರ್ಸ್ ಸಿಮೊನೀ ಅವರು ಎರಡು ವಾರಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಾಸ್ತವ್ಯದ ಬಳಿಕ ಭೂಮಿಗೆ ವಾಪಸ್ ಹೊರಟರು.

2006: ಅರಾಜಕತೆ ಹಾಗೂ ದೇಶವ್ಯಾಪಿ ಪ್ರತಿಭಟನೆಯಿಂದ ತತ್ತರಿಸಿದ್ದ ನೇಪಾಳದಲ್ಲಿ ದಿಢೀರ್ ಬೆಳವಣಿಗೆ ಸಂಭವಿಸಿ ರಾಜಕೀಯ ಅಧಿಕಾರವನ್ನು ಜನರಿಗೆ ಹಸ್ತಾಂತರಿಸಲು ದೊರೆ ಜ್ಞಾನೇಂದ್ರ ಸಮ್ಮತಿಸಿದರು. ಪ್ರಧಾನಿ ಸ್ಥಾನಕ್ಕೆ ಯಾರನ್ನಾದರೂ ಹೆಸರಿಸುವಂತೆ ಅವರು ಏಳು ಪಕ್ಷಗಳ ರಾಜಕೀಯ ಒಕ್ಕೂಟಕ್ಕೆ ಮನವಿ ಮಾಡಿದರು.

2006: ಸಾಂಸ್ಕತಿಕ ವಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿತು. 2005ರ ಸಾಲಿನ ಪ್ರತಿಷ್ಠಿತ ಟಿ.ಚೌಡಯ್ಯ ಪ್ರಶಸ್ತಿಗೆ ಹಿಂದೂಸ್ಥಾನಿ ತಬಲಾ ವಾದಕ ದತ್ತಾತ್ರೇಯ ಸದಾಶಿವ ಗರುಡ, ಕನಕ ಪುರಂದರ ಪ್ರಶಸ್ತಿಗೆ ಗಮಕ ಕ್ಷೇತ್ರದ ಬಿ. ಎಸ್. ಎಸ್. ಕೌಶಿಕ್, ದಾನಚಿಂತಾಮಣಿ ಪ್ರಶಸ್ತಿಗೆ ಲೇಖಕಿ ಡಾ. ವೀಣಾ ಶಾಂತೇಶ್ವರ, ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ವೃತ್ತಿ ರಂಗಭೂಮಿಯ ರೇಣುಕಮ್ಮ ಮುಳಗೋಡು, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಗಾಯಕ ಈಶ್ವರ ಮಿಣಚಿ, ಜಕಣಾಚಾರಿ ಪ್ರಶಸ್ತಿಗೆ ಸಿದ್ದಲಿಂಗಯ್ಯ, ಶಾಂತಲಾ ನಾಟ್ಯ ಪ್ರಶಸ್ತಿಗೆ ಲೀಲಾ ರಾಮನಾಥನ್ ಆಯ್ಕೆಯಾದರು.

2006: ಅಂಗವಿಕಲ ವ್ಯಕ್ತಿಗಳು ಸ್ವತಂತ್ರವಾಗಿ ಚಲಾಯಿಸಬಹುದಾದ ಕಾರಿನ ಮಾದರಿಯೊಂದನ್ನು ಅಭಿವೃದ್ಧಿ ಪಡಿಸಿರುವುದಾಗಿ ಬೆಳಗಾವಿಯ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾದ ಡೇನಿಯಲ್ ಸುನಾಥ ಮತ್ತು ಪ್ರದೀಪ ಸರಪುರ ಬಹಿರಂಗ ಪಡಿಸಿದರು.

2006: ಮುಸ್ಲಿಂ ಸಮುದಾಯದಲ್ಲಿ ಪತಿ ಮೂರುಬಾರಿ ತಲಾಖ್ ಹೇಳಿದ ಮಾತ್ರಕ್ಕೆ ಗಂಡ- ಹೆಂಡತಿ ಬೇರೆ ಬೇರೆಯಾಗಿ ಬದುಕಬೇಕು ಎಂದು ಒತ್ತಾಯಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಒರಿಸ್ಸಾದ ಮುಸ್ಲಿಂ ಸಮುದಾಯವು ಷರಿಯತ್ ಹೆಸರಿನಲ್ಲಿ ತಮ್ಮ ಪತಿಯ ಜೊತೆ ಬದುಕಲು ತಮಗೆ ಅನುಮತಿ ನಿರಾಕರಿಸಿದ ಸಂಬಂಧ ನಜ್ಮಾ ಬೀವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಚಾರಣಾ ಪೀಠ ಈ ತೀರ್ಪು ನೀಡಿತು.

 1946: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಎಸ್. ವೆಂಕಟರಾಘವನ್ ಜನ್ಮದಿನ. ಇವರು ಜಗತ್ತಿನ ಅತ್ಯುತ್ತಮ ಕ್ರಿಕೆಟ್ ಅಂಪೈರುಗಳಲ್ಲಿ ಒಬ್ಬರು ಎಂಬ ಖ್ಯಾತಿ ಪಡೆದವರು.

1926: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ ಜನ್ಮದಿನ.

1920: ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯ ಚಳವಳಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿದ್ದ ತ.ರಾ. ಸುಬ್ಬರಾಯ (ತ.ರಾ.ಸು) (21-4-1920 ರಿಂದ 10-4-1984) ಹುಟ್ಟಿದ ದಿನ. ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ರಾಮಸ್ವಾಮಯ್ಯ- ಸೀತಮ್ಮ ದಂಪತಿಯ ಪುತ್ರರಾಗಿ ತ.ರಾ.ಸು. ಜನಿಸಿದರು.

1920: ಸುಗಮ ಸಂಗೀತ ಕ್ಷೇತ್ರದ ಹರಿಕಾರ ಎ.ವಿ. ಕೃಷ್ಣಮಾಚಾರ್ಯ (ಪದ್ಮಚರಣ್) (21-4-1920ರಿಂದ 22-7-2002) ಅವರು ಅಸೂರಿ ವೀರ ರಾಘವಾಚಾರ್ಯ- ಜಾನಕಮ್ಮ ದಂಪತಿಯ ಮಗನಾಗಿ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಬಡಿಕಾಯಲಪಲ್ಲೆ ಗ್ರಾಮದ `ಗುತ್ತಿ' ಎಂಬಲ್ಲಿ ಜನಿಸಿದರು.

1910: ಮಾರ್ಕ್ ಟ್ವೇನ್ ಎಂದೇ ಖ್ಯಾತನಾಗಿದ್ದ ಬರಹಗಾರ ಸ್ಯಾಮುಯೆಲ್ ಲಾಂಗ್ಹೋರ್ಮ್ ಕ್ಲೆಮೆನ್ಸ್ 74ನೇ ವಯಸ್ಸಿನಲ್ಲಿ ಮೃತನಾದ. 1835ರಲ್ಲಿ ಹುಟ್ಟಿದ ಆತನ ಬದುಕಿನಲ್ಲಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಹ್ಯಾಲಿ ಧೂಮಕೇತು ಭಾರೀ ಪರಿಣಾಮ ಬೀರಿತ್ತು. `ಹ್ಯಾಲಿಯನ್ನು ಕಾಣದೆ ಸತ್ತರೆ ನನಗೆ ಭ್ರಮನಿರಸನವಾಗುತ್ತದೆ' ಎಂದು ಆತ ಬರೆದಿದ್ದ. ಆತನಿಗೆ ಭ್ರಮನಿರಸನವಾಗಲಿಲ್ಲ..  ಹ್ಯಾಲಿ ಕಾಣಿಸಿದ ನಂತರ ಆತ ಮೃತನಾದ. 

1619: ಡಚ್ ಸರ್ಜನ್ ಜಾನ್ ವ್ಯಾನ್ ರೀಬೀಕ್ ಜನ್ಮದಿನ. ಈತ 1652ರಲ್ಲಿ ಕೇಪ್ ಟೌನನ್ನು ಸ್ಥಾಪಿಸಿದ. 

1526: ಮೊದಲನೆಯ ಪಾಣಿಪತ್ ಯುದ್ಧದಲ್ಲಿ ಮೊಘಲ್ ದೊರೆ ಬಾಬರ್, ಲೋದಿಯ ಆಡಳಿತಗಾರ ಇಬ್ರಾಹಿಂ ಲೋದಿಯನ್ನು ಸೋಲಿಸಿ ಕೊಲೆಗೈದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement