My Blog List

Friday, April 3, 2009

ಇಂದಿನ ಇತಿಹಾಸ History Today ಮಾರ್ಚ್ 29

ಇಂದಿನ ಇತಿಹಾಸ

ಮಾರ್ಚ್ 29

ಕನ್ನಡ ಚಲನಚಿತ್ರ ನಿರ್ಮಾಪಕ ಎ.ಜೆ.ನಾಯ್ಡು (38) ನಿಧನರಾದರು. `ಸೈಲೆನ್ಸ್' ಸಿನೆಮಾದ ರಿರೆಕಾರ್ಡಿಂಗಿಗಾಗಿ ಚೆನ್ನೈಗೆ ಹೊರಟಿದ್ದ ಅವರು ನಗರದ ಬಸ್ ನಿಲ್ದಾಣದಲ್ಲೇ  ಹೃದಯಾಘಾತದಿಂದ ಅಸುನೀಗಿದರು. ಕೆಲಸಮಯದ ಹಿಂದೆ ತೆರೆಕಂಡಿದ್ದ ಚಲನಚಿತ್ರ `ವಿದ್ಯಾರ್ಥಿ' ಸಹ ನಾಯ್ಡು ಅವರ ನಿರ್ಮಾಣವೇ ಆಗಿತ್ತು. ಅಂತ್ಯಕ್ರಿಯೆ ಮರುದಿನ ನಡೆಯಿತು.

2008: ಕನ್ನಡ ಚಲನಚಿತ್ರ ನಿರ್ಮಾಪಕ ಎ.ಜೆ.ನಾಯ್ಡು (38) ನಿಧನರಾದರು. `ಸೈಲೆನ್ಸ್' ಸಿನೆಮಾದ ರಿರೆಕಾರ್ಡಿಂಗಿಗಾಗಿ ಚೆನ್ನೈಗೆ ಹೊರಟಿದ್ದ ಅವರು ನಗರದ ಬಸ್ ನಿಲ್ದಾಣದಲ್ಲೇ  ಹೃದಯಾಘಾತದಿಂದ ಅಸುನೀಗಿದರು. ಕೆಲಸಮಯದ ಹಿಂದೆ ತೆರೆಕಂಡಿದ್ದ ಚಲನಚಿತ್ರ `ವಿದ್ಯಾರ್ಥಿ' ಸಹ ನಾಯ್ಡು ಅವರ ನಿರ್ಮಾಣವೇ ಆಗಿತ್ತು. ಅಂತ್ಯಕ್ರಿಯೆ ಮರುದಿನ ನಡೆಯಿತು.

2008: ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಈದಿನ (ಮಾರ್ಚ್ 29) ರಾತ್ರಿ `ಅರ್ಥ್ ಅವರ್' ಆಚರಿಸಲಾಗುವುದು. ಈದಿನ ರಾತ್ರಿ ಒಂದು ಗಂಟೆ ಕಾಲ ವಿಶ್ವದ ದೊಡ್ಡ ನಗರಗಳಲ್ಲಿ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟಿನ ನಾಲ್ಕನೇ ದಿನ  ರಾಹುಲ್ ದ್ರಾವಿಡ್ ಅವರು ಹತ್ತು ಸಾವಿರ ರನ್ ಪೂರೈಸಿ, 25ನೇ ಶತಕ ದಾಖಲಿಸಿದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಿನಲ್ಲಿ 627 ರನ್ ಗಳಿಸಿ ಆಲೌಟಾಯಿತು. 

2008: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪಟ್ಟ ಹಳ್ಳಿಯಲ್ಲಿ ನಡೆಸಿದ ಉತ್ಖನನದಲ್ಲಿ 20 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳನ್ನು ಪತ್ತೆ ಮಾಡಿತು.
ಉತ್ಖನನದ ವೇಳೆ ಕಲ್ಲಿನಿಂದ ತಯಾರಿಸಿದ 200 ಸಣ್ಣಪುಟ್ಟ ಆಯುಧಗಳು ದೊರಕಿದವು. ಇದರಿಂದಾಗಿ ಅತಿ ಪ್ರಾಚೀನ ನಾಗರಿಕತೆಯ ಅಸ್ತಿತ್ವದ ಬಗ್ಗೆ  ಮಹತ್ವದ ಸುಳಿವು ದೊರಕಿತು ಎಂದು ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಅಧೀಕ್ಷಕ ಅಮಲ್ ರಾಯ್ ತಿಳಿಸಿದರು. ಸಂತಲಪಾರಾ ಹಳ್ಳಿಯಲ್ಲಿ ಒಂದು ಸಾವಿರ ಮೀಟರ್ ಕೃಷಿ ಭೂಮಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಉತ್ಖನನ ನಡೆಯುತ್ತಿದ್ದು, 2-3 ಮೀಟರ್ ಆಳದವರೆಗೆ ಅಗೆದಾಗ ಕಲ್ಲಿನ ಆಯುಧಗಳು ಹಾಗೂ ಇತರ ಬಳಕೆಯ ವಸ್ತುಗಳ ಪಳೆಯುಳಿಕೆಗಳು ಪತ್ತೆಯಾದವು. ಪುಣೆಯ ಡೆಕ್ಕನ್ ಕಾಲೇಜಿನ ಭೂಗರ್ಭ -ಪ್ರಾಚ್ಯವಸ್ತು ತಜ್ಞರಾದ ಎಸ್. ಎನ್. ರಾಜಗುರು ಮತ್ತು ಬಿ. ಸಿ. ದೇವಧರ್ ಅವರ ಮಾರ್ಗದರ್ಶನದಲ್ಲಿ ಉತ್ಖನನ ನಡೆಯಿತು.  

2008: ಬೆಂಗಳೂರು, ಪುಣೆ ಹಾಗೂ ಮುಂಬೈ ಸೇರಿದಂತೆ ಮೂರು ಆಯ್ದ ನಗರಗಳಲ್ಲಿ ಜೂನ್ ಅಂತ್ಯದಿಂದ ಆಕರ್ಷಕ ಫೈಬರ್ ಗ್ಲಾಸ್ ಗ್ಯಾಸ್ ಸಿಲಿಂಡರ್ ಒದಗಿಸುವ ಮುಂಚೂಣಿ ಯೋಜನೆಗೆ ಪೆಟ್ರೋಲಿಯಂ ಸಚಿವಾಲಯ  ಅನುಮತಿ ನೀಡಿತು. ಫೈಬರ್ ಸಿಲಿಂಡರ್ ಪರಿಚಯಿಸುವ ಮೂಲಕ ರಾಜ್ಯ ಒಡೆತನದ  ತೈಲ ಮಾರಾಟ ಕಂಪೆನಿಗಳಿಗೆ  (ಒಎಂಸಿ) ತಮ್ಮ ಉದ್ಯಮ ವಿಸ್ತರಿಸಲು ಪೆಟ್ರೋಲಿಯಂ ಸಚಿವಾಲಯ  ತಾತ್ವಿಕ ಅನುಮತಿ ನೀಡಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ  ರಾಜ್ಯ ಸಚಿವ ದಿನ್ಸಾ ಪಟೇಲ್ ಹೇಳಿದರು.

2008: ಲಿಂಗ ಸಂವೇದನಾಶೀಲ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಆಧರಿಸಿ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕಿ ಸಿ.ಜಿ.ಮಂಜುಳಾ ಅವರಿಗೆ ಪಾಪುಲೇಷನ್ ಫಸ್ಟ್ ಸಂಸ್ಥೆಯು `ಯು ಎನ್ ಎಫ್ ಪಿ ಎ-ಲಾಡ್ಲಿ ಮಾಧ್ಯಮ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು. ಚೆನ್ನೈಯ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ ಸಮಾಜ ಕಲ್ಯಾಣ ಸಚಿವೆ ಡಾ.ಪೂಂಗೊದಾಲ್ ಅವರು ಮಂಜುಳಾ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಲಿಂಗ ಸಂವೇದನಾಶೀಲ ಲೇಖನಗಳ ಮೂಲಕ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಿದ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಒಟ್ಟು 18 ಮಂದಿ ಮಾಧ್ಯಮ ವ್ಯಕ್ತಿಗಳನ್ನು ಪಾಪುಲೇಷನ್ ಸಂಸ್ಥೆಯು ಪ್ರಶಸ್ತಿಗೆ  ಆಯ್ಕೆ ಮಾಡಿತ್ತು. ಇದರಲ್ಲಿ ಕರ್ನಾಟಕದಿಂದ ಮಂಜುಳಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು.. ಸಮಾರಂಭದಲ್ಲಿ ಲೇಖಕಿ ಅಮ್ಮು ಜೋಸೆಫ್ ಅವರಿಗೆ `ವಿಶೇಷ ಮಾಧ್ಯಮ ಪ್ರಶಸ್ತಿ' ನೀಡಲಾಯಿತು. 

2008: ರೂಪದರ್ಶಿ ಜೆಸ್ಸಿಕಾಲಾಲ್ ಅವರ ಅತ್ತಿಗೆ ಮೌಸಮಿ (ಸಹೋದರ ರಣಜಿತ್ ಲಾಲ್ ಅವರ ಪತ್ನಿ) ಅವರು ಪತಿಯಿಂದ ಜೀವನಾಂಶ ಕೋರಿ ಹೈಕೋರ್ಟ್ ಮೊರೆ ಹೋದರು. ಪತಿಯಿಂದ ವಂಚನೆಗೆ ಒಳಗಾಗಿ  ಪ್ರತ್ಯೇಕವಾದ ತಮಗೆ ನ್ಯಾಯ ದೊರಕಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ತಮ್ಮ ಕೋರಿಕೆಯನ್ನು ಅನೂರ್ಜಿತಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಅವರು ಮನವಿ ಮಾಡಿದರು.

2008: ಇಪ್ಪತ್ತೆಂಟು ವರ್ಷಗಳ ಕಾಲ ಜಿಂಬಾಬ್ವೆಯನ್ನು ಮುನ್ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ (84) ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಚುನಾವಣೆ ದೇಶದಲ್ಲಿ ನಡೆಯಿತು.  

2008: ಪಾಕಿಸ್ಥಾನದ ಪ್ರಧಾನಿ ಯೂಸುಫ್ ರಝಾ ಜಿಲಾನಿ ಅವರಿಗೆ ಸಂಸತ್ತಿನಲ್ಲಿ ನಿರೀಕ್ಷೆಗೂ ಮೀರಿ `ಸರ್ವಾನುಮತದಿಂದ ವಿಶ್ವಾಸ ಮತ' ದೊರೆಯಿತು.

2007: ಕಡಲ ತಡಿಯಲ್ಲಿರುವ ಬಾಲಸೋರ್ ಜಿಲ್ಲೆಯ ಚಂಡಿಪುರ ಬಳಿ ಅತ್ಯಾಧುನಿಕ `ಅಸ್ತ್ರ' ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ದೇಶಿ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾಪಡೆಯ ಸಂಶೋಧನೆ ಮತ್ತು ಅಭಿವೃದ್ಧಿ  ಪ್ರಯೋಗಾಲಯವು (ಡಿ ಆರ್ ಡಿ ಎಲ್) ನಿರ್ಮಿಸಿದ್ದು, 80.ಕಿಮಿ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. 

2007:  ಐಐಟಿ ಮತ್ತು ಐಐಎಂ ಸೇರಿದಂತೆ ಕೇಂದ್ರಾಡಳಿತದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಕಾಯಿದೆ 2006'ರ ಅನುಷ್ಠಾನವನ್ನು ಮುಂದಿನ ಆದೇಶದ ವರೆಗೆ ಸುಪ್ರೀಂಕೋರ್ಟ್ ತಡೆಹಿಡಿಯಿತು. ಮೀಸಲಾತಿಯ ಫಲಾನುಭವಿಗಳಾದ ಹಿಂದುಳಿದ ಜಾತಿಗಳನ್ನು ಗುರುತಿಸಿದ ವಿಧಾನದ ಬಗ್ಗೆ ಪ್ರಮುಖವಾಗಿ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಎಲ್. ಎಸ್. ಪಂಟಾ, `ಮೀಸಲಾತಿ ನಿರ್ಧರಿಸಲು 1931ರ ಜಾತಿ ಆಧಾರಿತ ಜನಗಣತಿಯೊಂದೇ ಸೂಕ್ತ ಆಧಾರವಾಗಲಾರದು. ಆದ್ದರಿಂದ ಮುಂದಿನ ಆದೇಶದವರೆಗೆ ಈ ಕಾನೂನನ್ನು ಅನುಷ್ಠಾನಗೊಳಿಸಬಾರದು ಎಂದು  36 ಪುಟಗಳ ತೀರ್ಪಿನಲ್ಲಿ ಹೇಳಿದರು.

2007: 1984ರ ಸಿಖ್ ವಿರೋಧಿ ಗಲಭೆಗಳ ಕಾಲದಲ್ಲಿ ಹೆಡ್ ಕಾನ್ಸ್ಟೇಬಲ್ ನಿರಂಜನ ಸಿಂಗ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಹಲ್ಲೆ ನಡೆಸಿ ಕೊಂದು ನಂತರ ಅವರ ಶವಗಳಿಗೆ ಕಿಚ್ಚಿಟ್ಟು ನಾಶಪಡಿಸಿದ ಅಪರಾಧಕ್ಕಾಗಿ ದೆಹಲಿಯ ನ್ಯಾಯಾಲಯವೊಂದು ಮೂವರು ಅಪರಾಧಿಗಳಾದ ಹರಪ್ರಸಾದ ಭಾರಧ್ವಾಜ್, ಆರ್.ಪಿ. ತಿವಾರಿ, ಮತ್ತು ಜಗದೀಶ ಗಿರಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ರೂಪಾಯಿಗಳ ದಂಡ ವಿಧಿಸಿತು.

2006: ಕರ್ನಾಟಕ ಮಾಧ್ಯಮ ಅಕಾಡೆುಯು ವೀಕ್ ಪತ್ರಿಕೆಯ ಸಚ್ಚಿದಾನಂದ ಮೂರ್ತಿ ಅವರಿಗೆ 2005-06ನೇ ಸಾಲಿನ ವಿಶೇಷ ಪ್ರಶಸ್ತಿಯನ್ನೂ ಇತರ 18 ಮಂದಿ ಪತ್ರಕರ್ತರಿಗೆ ವಾರ್ಷಿಕ ಅಕಾಡೆಮಿ ಪ್ರಶಸ್ತಿಯನ್ನೂ ಪ್ರಕಟಿಸಿತು.

2006: ಇಂಟೆಲ್ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಗೆ ಹೊಂದಿಕೊಳ್ಳುವ ನೂತನ ಮಾದರಿಯ ಕಂಪ್ಯೂಟರುಗಳನ್ನು ಬಿಡುಗಡೆ ಮಾಡಿತು. ಗ್ರಾಮೀಣ ಪ್ರದೇಶದ ಮುಖ್ಯ ಸಮಸ್ಯೆಗಳಾದ ಧೂಳು, ವಿದ್ಯುತ್ ವ್ಯತ್ಯಯ ಮತ್ತಿತರ ತೊಂದರೆಗಳಿಗೆ ಈ ಕಂಪ್ಯೂಟರ್ ಪರಿಹಾರವಾಗಬಲ್ಲುದು. ವಿದ್ಯುತ್ ವ್ಯತ್ಯಯವಾದರೂ ಕನಿಷ್ಠ 8ರಿಂದ 10 ಗಂಟೆ ಬಳಸಬಹುದಾದ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ಧೂಳು ಕಂಪ್ಯೂಟರ್ ಒಳ ಸೇರದಂತೆ ಫಿಲ್ಟರ್ ಅಳವಡಿಸಲಾಗಿದೆ. ದರವೂ ಆಕರ್ಷಕವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಬಿಲ್ ಸ್ಯೂ ದೆಹಲಿಯಲ್ಲಿ ಪ್ರಕಟಿಸಿದರು.

2006: ದೇಶದಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಮತ್ತು ತರುಣ್ ಚಟರ್ಜಿ ಅವರನ್ನು ಒಳಗೊಂಡ ಪೀಠವು ನಿರಾಕರಿಸಿತು.

2006: ಉತ್ತರ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಅಮರಸಿಂಗ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಉಳಿಸುವ ಸಲುವಾಗಿ ಮುಲಾಯಂ ಸಿಂಗ್ ಸರ್ಕಾರವು ಮಸೂದೆಯೊಂದನ್ನು ತರಾತುರಿಯಲ್ಲಿ ಅಂಗೀಕರಿಸಿ 2003ರ ಅಕ್ಟೋಬರ್ 15ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ನಿರ್ಧರಿಸಿತು. `ಉತ್ತರ ಪ್ರದೇಶ ಅಭಿವೃದ್ಧಿ ಮಂಡಲಿ ಕಾಯ್ದೆ -2006'ರಲ್ಲಿ ಇಡೀ ಮಂಡಳಿಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಾಂತರಿಸಿ ಅದಕ್ಕೆ ಸ್ಥಳೀಯ ಸಂಸ್ಥೆಗಳ ಮಟ್ಟದ ಅಧಿಕಾರ ನೀಡಲಾಯಿತು.

2006: ಮನುಕುಲದ ಒಳಿತು, ಶಾಂತಿ, ಸಂತಸಕ್ಕಾಗಿ  ನಡೆಸಲಾಗುವ ಶತಮಾನದ ಮೊದಲ `ಅಥೀರತ್ರಮ್' ಯಾಗವು ಕೇರಳದ  ಪುಟ್ಟ ಗ್ರಾಮ ಮೂಲಂಕೋಡ್ನಲ್ಲಿ ಆರಂಭವಾಯಿತು. ಯಾಗದ ವಿಧಿಗಳನ್ನು ನಡೆಸುವ `ಯಜಮಾನನ್' ಕಾವೇರಪ್ರ ಮಾರತ್ ಶಂಕರನಾರಾಯಣನ್ ಸೋಮಯಾಜಿಪ್ಪಾಡ್ ಆಗಮನದೊಂದಿಗೆ ಶ್ರೀಕುರುಂಬ ಭಗವತಿ ದೇವಾಲಯದಲ್ಲಿ 12 ದಿನಗಳ ಯಾಗ ಚಾಲನೆಗೊಂಡಿತು. 72 ಮಂದಿ ವೈದಿಕ ತಜ್ಞರಿಂದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳ ಮಂತ್ರಪಠಣ ನಡೆಯಿತು. ಕೇರಳದಲ್ಲಿ `ಅಗ್ನೀದಾನಮ್', `ಸೋಮಯಾಗಮ್' ಮತ್ತು `ಅಥೀರತ್ರಮ್' ಎಂಬ ಮೂರು ವಿಧದ ಯಾಗಗಳನ್ನು ನಡೆಸಲಾಗುತ್ತದೆ. ಇಡೀ ಯಾಗಶಾಲೆಯನ್ನು ಅಗ್ನಿಗೆ ಆಹುತಿ ನೀಡುವುದರೊಂದಿಗೆ `ಅಥೀರತ್ರಮ್' ಯಾಗ ಕೊನೆಗೊಳ್ಳುತ್ತದೆ.

1982: ತೆಲುಗು ಚಲನಚಿತ್ರ ನಟ ಎನ್.ಟಿ. ರಾಮರಾವ್ ಅವರ ಪ್ರಾದೇಶಿಕ ಪಕ್ಷ `ತೆಲುಗುದೇಶಂ' ಹೈದರಾಬಾದಿನಲ್ಲಿ ಉದಯವಾಯಿತು.

1965: ಸಂಗೀತ ಹಾಗೂ ಮೃದಂಗದಲ್ಲಿ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮ ಅವರು ಖ್ಯಾತ ಸಂಗೀತ ಮನೆತನದ ಆನೂರು ರಾಮಕೃಷ್ಣ- ಶ್ರೀಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1957: ನೂತನ ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯರಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಸರ್ವಾನುಮತದಿಂದ ಆಯ್ಕೆಯಾದರು.

1953: ಕಲಾವಿದ ಉದಯಶಂಕರ ಜನನ.

1949: ಕಲಾವಿದ ಎಂ.ಎಸ್. ಗೋವಿಂದಸ್ವಾಮಿ ಜನನ.

1939: ಕಲಾವಿದ ನಾರಾಯಣ ಢಗೆ ಜನನ.

1929: ಭಾರತದ ಚಿತ್ರನಟ ಉತ್ಪಲ್ ದತ್ (1929-1993) ಹುಟ್ಟಿದ ದಿನ.

1914: ಮದರ್ ಆಫ್ ಅರೋವಿಲ್ ಎಂದೇ ಖ್ಯಾತಳಾಗಿರುವ ಮಿರ್ರಾ ಅಲ್ಫಾಸಾ ಅವರು ಪಾಂಡಿಚೆರಿಯಲ್ಲಿ (ಈಗಿನ ಪುದುಚೆರಿ) ಅರವಿಂದ ಘೋಷ್ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದರು. 

1912: ಜರ್ಮನಿಯ ಖ್ಯಾತ ವಿಮಾನ ಹಾರಾಟಗಾರ್ತಿ ಹನ್ನಾ ರೀಟ್ಸ್ಷ್ ಹುಟ್ಟಿದ ದಿನ. ಆಲ್ಫ್ ಪರ್ವತ ಶ್ರೇಣಿಯ ಮೇಲಿನಿಂದ ಗ್ಲೈಡರ್ ಹಾರಿಸಿದ ಪ್ರಥಮ ವ್ಯಕ್ತಿ ಈಕೆ. ಬರ್ಲಿನ್ನಿನ ಭೂಗತ ಬಂಕರಿನಲ್ಲಿ ಹಿಟ್ಲರನನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳ್ಲಲಿ ಈಕೆ ಕೂಡ ಒಬ್ಬಳು.

1869: ಇಂಗ್ಲಿಷ್ ಶಿಲ್ಪಿ ಎಡ್ವಿನ್ ಲ್ಯೂಟಿನ್ಸ್ (1869-1944) ಜನ್ಮದಿನ. ನವದೆಹಲಿಯ ಯೋಜನೆ ಹಾಗೂ `ವೈಸ್ರಾಯ್ಸ್ ಹೌಸ್'ನ ವಿನ್ಯಾಸ ರೂಪಿಸಿದ ವ್ಯಕ್ತಿ ಈತ. ಈತ ರೂಪಿಸಿದ `ವೈಸ್ರಾಯ್ಸ್ ಹೌಸ್' ಈಗ ರಾಷ್ಟ್ರಪತಿ ಭವನ.

1849: ಲಾರ್ಡ್ ಡಾಲ್ ಹೌಸಿಯು ಪಂಜಾಬ್ನ್ನು ವಶಪಡಿಸಿಕೊಂಡ.

1857: ಯುವ ಸೈನಿಕ ಮಂಗಲಪಾಂಡೆ ಬ್ಯಾರಕ್ ಪುರದಲ್ಲಿ ತನ್ನ ತುಕಡಿಯ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿದ. ಪಾಂಡೆಯನ್ನು ನಿರಾಯುಧನನ್ನಾಗಿ ಮಾಡಿ ನಂತರ ಗಲ್ಲಿಗೇರಿಸಲಾಯಿತು. ಈ ಘಟನೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ (ಸಿಪಾಯಿ ದಂಗ) ಮೂಲವಾಯಿತು.

1815: ಸರ್ ಹೆನ್ರಿ ಬಾರ್ಟಲ್ ಫ್ರೇರ್ (1815-1884) ಹುಟ್ಟಿದ ದಿನ. ಭಾರತದಲ್ಲಿ ಬ್ರಿಟಿಷ್ ವಸಾಹತಿನ ಆಡಳಿತಗಾರನಾಗಿದ್ದ ಈತ ಐದು ವರ್ಷಗಳ ಕಾಲ ಬಾಂಬೆಯ (ಈಗಿನ ಮುಂಬೈ) ಗವರ್ನರ್ ಆಗಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement