My Blog List

Thursday, May 7, 2009

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

ಸಮುದ್ರ ಮಥನ 28:

ತಲ್ಲೀನರಾಗುವ ಮೊದಲು


ತನ್ಮಯತೆಗೆ ಒಡ್ಡಿಕೊಂಡ  ವಸ್ತು-ವಿಷಯದ ಬಗೆಗೆ ಗಮನ ಹರಿಸುವುದು ಒಳ್ಳೆಯದು. ಅಂದರೆ, ಓದುವವನಿಗೆ ಅಕ್ಷರದ ಸಾಲು ಮಾಲೆಗಳೇ ತನ್ಮಯತೆಗೆ ವಿಷಯ. ಅದೇ ಶಿಲ್ಪಿಗೆ ಕೆತ್ತನೆಗೆ ಒಡ್ಡಿಕೊಳ್ಳುವ ಕಲ್ಲೇ ವಿಷಯ. ರೈತನಿಗೆ ಸಸಿಯ ಪೋಷಣೆ, ಅಡಿಗೆ ಭಟ್ಟರಿಗೆ ಆಗಬೇಕಾದ ಅಡಿಗೆ, ಊಟ ಮಾಡುವವನಿಗೆ ಸೇವಿಸಬೇಕಾದ ಪದಾರ್ಥವೇ ವಿಷಯವಾಗಿ ಕಂಗೊಳಿಸುತ್ತದೆ.

ಈ ಪ್ರಪಂಚದಲ್ಲಿ ಸಾಧಿಸಲು 'ತನ್ಮಯತೆ'ಯೂ ಬೇಕು. ಕೈಗೊಂಡ ಕಾರ್ಯದಲ್ಲಿ ಮುಳುಗಲು ಗೊತ್ತಿರಬೇಕು. ಹಾಗಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ.

ಕಳೆದ ಕಾಲದ ಬಗೆಗೆ ಕೊರಗಾಗಲೀ, ಬರುವ ಕಾಲದ ಬಗೆಗೆ ಆತಂಕವಾಗಲೀ ಇದ್ದರೆ ತನ್ಮಯತೆಯನ್ನು ಸಾಧಿಸಿ, ತನ್ಮಯರಾಗಲು ಸಾಧ್ಯವಿಲ್ಲ. ನಿಂತಿರುವ ಮಣ್ಣಿನಲ್ಲಿ, ಒದಗಿರುವ ಕಾಲದಲ್ಲಿ, ಹಿಡಿದ ಕಾರ್ಯವನ್ನು ಮುಗಿಸಿಯೇ ತೀರುವ ಆತಂಕವಿಲ್ಲದೇ, ಪ್ರಸ್ತುತ ಪರಿಸ್ಥಿತಿಯನ್ನು ಆಸ್ವಾದಿಸಿ-ಮುನ್ನಡೆಯಲು ಬಂತು ಎಂದಾದರೆ ಮಾತಿಲ್ಲ, ಕಥೆಯಿಲ್ಲ, ಬರಿ ರೋಮಾಂಚನ. ಸಾಮಾನ್ಯವಾದ ರೋಮಾಂಚನವಲ್ಲ ಅದು. ತನ್ಮಯತೆಯ ರೋಮಾಂಚನ.

ನಂತರದಲ್ಲಿ ತನ್ಮಯತೆಗೆ ಒಡ್ಡಿಕೊಂಡ ವಸ್ತು-ವಿಷಯದ ಬಗೆಗೆ ಗಮನ ಹರಿಸುವುದು ಒಳ್ಳೆಯದು. ಅಂದರೆ, ಓದುವವನಿಗೆ ಅಕ್ಷರದ ಸಾಲು ಮಾಲೆಗಳೇ ತನ್ಮಯತೆಗೆ ವಿಷಯ. ಅದೇ ಶಿಲ್ಪಿಗೆ ಕೆತ್ತನೆಗೆ ಒಡ್ಡಿಕೊಳ್ಳುವ ಕಲ್ಲೇ ವಿಷಯ. ರೈತನಿಗೆ ಸಸಿಯ ಪೋಷಣೆ, ಅಡಿಗೆ ಭಟ್ಟರಿಗೆ ಆಗಬೇಕಾದ ಅಡಿಗೆ, ಊಟ ಮಾಡುವವನಿಗೆ ಸೇವಿಸಬೇಕಾದ ಪದಾರ್ಥವೇ ವಿಷಯವಾಗಿ ಕಂಗೊಳಿಸುತ್ತದೆ.

ಹಾಗೆಯೇ, ಧ್ಯಾನಕ್ಕೆ ಸೃಷ್ಟಿ ಮೂಲದಲ್ಲಿನ ಉತ್ತರದ ಅನುಸಂಧಾನವೇ ವಿಷಯ ವೇದಿಕೆ ಆಗಿರುತ್ತದೆ. ಆಯಾ ವೇದಿಕೆಗಳ ಬಗೆಗೆ ತೋರುವ ನಿಷ್ಠೆ, ತದನಂತರದಲ್ಲಿ ಬೆಳೆಸಿಕೊಳ್ಳುವ ಪ್ರೀತಿ, ಕಂಡುಕೊಳ್ಳುವ ದಾರಿ, ಕಾಣಿಸಿಕೊಳ್ಳುವ ಹೊಳಹು ತಲ್ಲೀನತೆಯ ಮಾರ್ಗವನ್ನು ಹೆದ್ದಾರಿಯಾಗಿಸುತ್ತ ಹೋಗುತ್ತದೆ.

ಸೀಮಿತ ವಿಷಯಗಳ ಮೇಲಿನ ತಲ್ಲೀನತೆ ಅಷ್ಟೇ ಪ್ರಮಾಣದ ತಾದಾತ್ಮ್ಯ ಭಾವವನ್ನು ಸೃಜಿಸುತ್ತದೆ. ಅಂದರೆ, ಓದುವ ವಿಷಯದಲ್ಲಿ ಮಾತ್ರ ತಲ್ಲೀನವಾಗುವುದನ್ನು ರೂಢಿಸಿಕೊಂಡರೆ ಅದು ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಅದು ಊಟಕ್ಕೆ ಬಂದಾಗ ಉಪಯೋಗಕ್ಕೆ ಬರಲೇಬೇಕೆಂಬ ಅನಿವಾರ್ಯತೆ ಇರುವುದಿಲ್ಲ. ಇದನ್ನು ನಿತ್ಯದ ಸನ್ನಿವೇಶಗಳಲ್ಲಿ ಹಂತಹಂತದಲ್ಲಿಯೂ ಗಮನಿಸಬಹುದು.

ಓದಿನಲ್ಲಿ ಬಹಳ ಆಸಕ್ತಿ ಇದ್ದು, ನಂತರ ಸಾಧಿಸಬೇಕು ಎಂದು ಕನಸು ಹೊತ್ತಿರುವವನಿಗೆ ಉಳಿದ ಯಾವುದರ ಮೇಲೂ ಅಷ್ಟಾಗಿ ಆಸಕ್ತಿ, ಕಾಳಜಿ ಯಾವುದೂ ಉಳಿದಿರುವುದಿಲ್ಲ. ಇಪ್ಪತ್ತನಾಲ್ಕು ಗಂಟೆಯೂ ಓದಿನ ಬಗ್ಗೆಯೇ ಧ್ಯಾನ. ಎಷ್ಟೆಂದರೆ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಊಟ, ತಿಂಡಿಯನ್ನೂ ಮರೆಯುವಷ್ಟು ಓದಿನ ಅಮಲು ಅವನನ್ನು ಆವರಿಸಿಕೊಂಡಿರುತ್ತದೆ.

ಅಂತಹ ತಲ್ಲೀನತೆ ಅಷ್ಟು ಉತ್ಕೃಷ್ಟವಲ್ಲ. ಅದು ಪ್ರತಿ ಹಂತದಲ್ಲಿಯೂ ಒಂದೇ ವಿಷಯದ ಬಗ್ಗೆ ಚಿಂತಿಸುತ್ತಾ, ಅದಕ್ಕೆ ಪೂರಕವಾಗಿರುವ ಮತ್ತೊಂದು ಸನ್ನಿವೇಶವನ್ನು ಎದುರಿಸುತ್ತಿರುವಾಗ, ಎದುರಿಸುತ್ತಿರುವ ಸನ್ನಿವೇಶವನ್ನು ಸಂಪೂರ್ಣವಲ್ಲದಿದ್ದರೂ, ಬಹುಭಾಗ ಅಲಕ್ಷಿಸಿಬಿಡುತ್ತದೆ. ಅದು ಯಾವತ್ತಿದ್ದರೂ ಮಾರಕ.

ಓದುವವ ಓದಿನ ಗುಂಗಿನಲ್ಲಿ ಆಗುತ್ತಿರುವ ಹಸಿವೆಯನ್ನೂ, ಶ್ರಮವನ್ನೂ ಒಂದಷ್ಟು ದಿನ ನಿರ್ಲಕ್ಷಿಸಿ, ಅಂದುಕೊಂಡ ಗುರಿಯತ್ತ ಬಹಳ ವೇಗವಾಗಿ ಸಾಗಬಹುದು. ಆ ಒಂದಷ್ಟು ದಿನಗಳು ಕಳೆದ ಅನಂತರದಲ್ಲಿ ಅವೆಲ್ಲ ದಾರುಣ ನಿರ್ಲಕ್ಷ್ಯಗಳನ್ನು ಸಹಿಸದಾದಾಗ ಸರಾಸರಿ ಮಟ್ಟದ ಓದೂ ಸಾಧ್ಯವಾಗದಿರುವುದು ದುರಂತ.

ಅಂತಹ ದುರಂತಮಯ ಅಂತ್ಯಕ್ಕೆ ಗುರಿಯಾಗದಿರಲು ಎದುರಿಸುತ್ತಿರುವ ಸನ್ನಿವೇಶದಲ್ಲಿ ಒಂದಾಗುತ್ತ, ದೊಡ್ಡ ಗುರಿಯ ಉಪಗುರಿಯಾಗಿ ಅದನ್ನು ರೂಪಿಸಿಕೊಳ್ಳುವತ್ತ ಸದಾ ಪ್ರಯತ್ನಶೀಲರಾಗಿರಬೇಕು.

- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
 

No comments:

Advertisement