My Blog List

Wednesday, June 24, 2009

ಇಂದಿನ ಇತಿಹಾಸ History Today ಜೂನ್ 23

ಇಂದಿನ ಇತಿಹಾಸ

ಜೂನ್ 23

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಕ ಸದಸ್ಯ ಸುಂದರಸಿಂಗ್ ಭಂಡಾರಿ ನಿಧನ.

2008: ಬ್ರಿಟನ್ನ ಪ್ರಧಾನಿ ಗೋರ್ಡಾನ್ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರು, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಶಿವರಾಜ್ ಪೌಲ್ ಅವರ ಕಿರಿಯ ಮಗಳು ಅಂಬಿಕಾ ಅವರ ನೆನಪಿನ `ಪ್ರಿಥ್ರಿ' (ಪೋಡಿಯಂ ಥ್ರಿ) ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು. ಈ ಅಧ್ಯಯನ ಕೇಂದ್ರ, ಕಲಿಕೆ, ತರಬೇತಿ ನೀಡುತ್ತಾ ಸಂಶೋಧನೆಗಳ ಅನುಷ್ಠಾನಕ್ಕೆ ಪುರಕವಾಗಿ ಉದ್ಯಮಿಗಳು ಮತ್ತು ಶಿಕ್ಷಣವೇತ್ತರಿಗೆ ಒಂದು ಸಮಾನ ವೇದಿಕೆ ಒದಗಿಸುವುದು.

2007: ಕರ್ನಾಟಕದಲ್ಲಿ ಉಗ್ರ ಸ್ವರೂಪ ತಾಳಿದ ಮಳೆ 35 ಜನರನ್ನು ಬಲಿ ತೆಗೆದುಕೊಂಡಿತು.

2007: ನವ ಮಂಗಳೂರು ಬಂದರಿನಿಂದ ಯುಎಇಗೆ ಕಬ್ಬಿಣದ ಅದಿರನ್ನು ಹೊತ್ತು ಹೊರಟ `ಡೆನ್ ಡೆನ್' ಆಫ್ರಿಕನ್ ಹಡಗು ತಾಂತ್ರಿಕ ದೋಷದ ಜೊತೆಗೆ ಭಾರಿ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಮಂಗಳೂರು ಸಮೀಪದ ತಣ್ಣೀರು ಬಾವಿ ಸಮುದ್ರ ದಂಡೆ ಬಳಿ ಸಂಭವಿಸಿದ ದುರಂತದಲ್ಲಿ ಇಬ್ಬರು ಅಸು ನೀಗಿ ಒಬ್ಬರು ಕಣ್ಮರೆಯಾದರು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ - ಎಡಪಕ್ಷಗಳ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿದರು.

2007: ಬಾಹ್ಯಾಕಾಶದಲ್ಲಿ 195 ದಿನಗಳನ್ನು ಕಳೆದು ಭೂಮಿಗೆ ವಾಪಸಾದ ಭಾರತೀಯ ಸಂಜಾತ ಅಮೆರಿಕದ ಗಗನಯಾನಿ ಸುನೀತಾ ವಿಲಿಯಮ್ಸ್ (41) ಅವರನ್ನು ನ್ಯೂಯಾರ್ಕಿನ ಎಬಿಸಿ ಟೆಲಿವಿಷನ್ ನೆಟ್ ವರ್ಕ್ `ವಾರದ ವ್ಯಕ್ತಿ' ಎಂಬುದಾಗಿ ಆಯ್ಕೆ ಮಾಡಿತು.

2006: ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ದಿನದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ `ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ'ಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಲಭಿಸಿತು. ವಿಶ್ವಸಂಸ್ಥೆಯು ಜೂನ್ 23ರ ಈ ದಿನವನ್ನು `ವಿಶ್ವಸಂಸ್ಥೆ ಸಾರ್ವಜನಿಕ ಸೇವಾದಿನ'ವಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸೇರಿದಂತೆ ಜಗತ್ತಿನ ವಿವಿಧ 11 ರಾಷ್ಟ್ರಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರ್ವಜನಿಕ ಸೇವಾ ಸಂಸ್ಥೆ(ಇಲಾಖೆ)ಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು..

2005: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಕ ಸದಸ್ಯ ಸುಂದರಸಿಂಗ್ ಭಂಡಾರಿ ನಿಧನ.

1997: ಜೈನ ಧರ್ಮದ ತೇರಾಪಂಥದ ಸ್ಥಾಪಕ ಆಚಾರ್ಯ ತುಳಸಿ ನಿಧನ.

1995: ವೈದ್ಯಕೀಯ ತಜ್ಞ ಡಾ. ಜಾನ್ ಸಾಲ್ಕ್ ತಮ್ಮ 80ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಲಾಜೊಲ್ಲಾದಲ್ಲಿ ನಿಧನರಾದರು. ಇವರು ಪೋಲಿಯೋ ವಿರುದ್ಧ ಮೊತ್ತ ಮೊದಲಿಗೆ ಲಸಿಕೆ ಅಭಿವೃದ್ಧಿ ಪಡಿಸಿದರು.

1985: ಏರ್ ಇಂಡಿಯಾ 747 `ಎಂಪರರ್ ಕನಿಷ್ಕ' ವಿಮಾನ ಐರಿಷ್ ಕರಾವಳಿಯಲ್ಲಿ ಸ್ಫೋಟಗೊಂಡು ಅದರಲ್ಲಿದ್ದ 329 ಜನ ಅಸುನೀಗಿದರು. ಈ ವಿಮಾನಸ್ಫೋಟಕ್ಕೆ ಸಿಖ್ ಭಯೋತ್ಪಾದಕರು ಕಾರಣ ಎಂದು ಶಂಕಿಸಿ ಖಟ್ಲೆ ಹೂಡಲಾಗಿತ್ತು. ಇದರ ವಿಚಾರಣೆ ಇತ್ತೀಚಿನವರೆಗೂ ನಡೆಯಿತು.

1981: ಪ್ರಮುಖ ಕಾಂಗೈ ನಾಯಕ, ಕೇಂದ್ರದ ಮಾಜಿ ಸಚಿವ ಎಸ್. ಕೆ. ಪಾಟೀಲ ಅವರು ಈದಿನ ನಿಧನರಾದರು.

1980: ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯಗಾಂಧಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1956: ಗಮೆಲ್ ಅಬ್ದುಲ್ ನಾಸ್ಸೇರ್ ಈಜಿಪ್ಟಿನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿತ್ತು. ನಾಸ್ಸೇರ್ ಕಣದಲ್ಲಿ ಇದ್ದ ಏಕೈಕ ಅಭ್ಯರ್ಥಿ.

1955: ಕಲಾವಿದ ಪುಟ್ಟೇಗೌಡ ಎಚ್. ಬಿ. ಜನನ.

1953: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕಾಶ್ಮೀರದ ಸೆರೆಮನೆಯೊಂದರಲ್ಲಿ ಮೃತರಾದರು.

1953: ಕಲಾವಿದೆ ಇಂದೂ ವಿಶ್ವನಾಥ್ ಜನನ.

1941: ಕಲಾವಿದ ಪ್ರಭಾಶಂಕರ್ ಜನನ.

1932: ಕಲಾವಿದ ರಾಜಾರಾಮ್ ಗಿರಿಯನ್ ಜನನ.

1931: ಸಾಹಿತಿ ದೇವಕಿ ಮೂರ್ತಿ ಜನನ.

1920: ಜನತಾ ಪಕ್ಷದ ಹಿರಿಯ ಮುಖಂಡ ಜಗನ್ನಾಥರಾವ್ ಜೋಶಿ ಜನನ.

1912: ಸಾಹಿತಿ ಜಯದೇವಿ ತಾಯಿ ಲಿಗಾಡೆ ಜನನ.

1896: ಕನ್ನಡ ರಂಗಭೂಮಿಯ ಭೀಷ್ಮ ಪಿತಾಮಹರೆನಿಸಿದ್ದ ಆರ್. ನಾಗೇಂದ್ರರಾವ್ ಅವರು ರಟ್ಟಿಹಳ್ಳಿ ಕೃಷ್ಣರಾವ್ - ರುಕ್ಮಿಣಿದೇವಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದರು. ಅಪೂರ್ವ ಸಹೋದರಗಳ್, ಸತಿ ಸುಲೋಚನಾ, ವಸಂತ ಸೇನಾ, ಗಾಳಿ ಗೋಪುರ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳು, ಹಣ್ಣೆಲೆ ಚಿಗುರಿದಾಗ, ಚಂದ್ರಹಾಸ, ಮದುವೆ ಮಾಡಿ ನೋಡು, ವೀರ ಕೇಸರಿ, ಕರುಳಿನ ಕರೆ ಮುಂತಾದ ಚಿತ್ರಗಳಲ್ಲಿ ತಮ್ಮ ಅಚ್ಚಳಿಯದ ಅಭಿನಯದಿಂದ ಜನಮನದಲ್ಲಿ ವಿರಾಜಮಾನರಾದವರು ನಾಗೇಂದ್ರರಾವ್. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿದ್ದವು.

1868: ಕ್ರಿಸ್ಟೋಫರ್ ಲಾಥಮ್ ಶೋಲ್ಸ್ ತಮ್ಮ ಸಂಶೋಧನೆ `ಟೈಪ್ ರೈಟರ್'ಗೆ ಪೇಟೆಂಟ್ ಪಡೆದರು.

1761: ಮರಾಠಾ ದೊರೆ ಪೇಶ್ವಾ ಬಾಲಾಜಿ ಬಾಜಿ ರಾವ್ ಮೂರನೇ ಪಾಣಿಪತ್ ಯುದ್ಧದಲ್ಲಿ ಸೋಲು ಅನುಭವಿಸಿದ ಬಳಿಕ ಅದೇ ದುಃಖದಲ್ಲಿ ಅಸುನೀಗಿದ.

1757: ರಾಬರ್ಟ್ ಕ್ಲೈವನು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್- ಉದ್- ದೌಲನನ್ನು ಸೋಲಿಸಿದ. ಈ ಜಯದಿಂದ ಬ್ರಿಟಿಷರಿಗೆ ಬಂಗಾಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಅನುಕೂಲವಾಯಿತು. ಇದು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೂ ಅಡಿಗಲ್ಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement