My Blog List

Wednesday, June 24, 2009

ಇಂದಿನ ಇತಿಹಾಸ History Today ಜೂನ್ 24

ಇಂದಿನ ಇತಿಹಾಸ

ಜೂನ್ 24

ಕೆನಡಾದಲ್ಲಿ ನೆಲೆಸಿದ ಬೆಂಗಳೂರು ಮೂಲದ ವೈದ್ಯೆ ಡಾ.ಶೀಲಾ ಬಸ್ರೂರು ಅವರನ್ನು, ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರ್ಕಾರವು `ಕೆನಡಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2008: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು. ಪಕ್ಷದ ಹಳೆಯ ಪದಾಧಿಕಾರಿಗಳೊಂದಿಗೆ ಹೊಂದಿಕೊಳ್ಳದೆ ನಿಷ್ಕ್ರಿಯವಾಗಿರುವ ಕಾರಣದಿಂದ ಸಿಂಧ್ಯ ಅವರನ್ನು ಉಚ್ಚಾಟಿಸಲು ನಿರ್ಧರಿಸಲಾಯಿತು ಎಂದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ವೀರ್ಸಿಂಗ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗ ಸೇರಿದಂತೆ 4 ರಾಜ್ಯಗಳಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಒಟ್ಟು 130ಕ್ಕಿಂತಲೂ ಹೆಚ್ಚು ಮಂದಿ ಅಸು ನೀಗಿದರು. ಆಂಧ್ರಪ್ರದೇಶ, ಕೇರಳದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

2007: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರು ಬೆಂಗಳೂರಿನಲ್ಲಿ `ಮಾಸ್ತಿ' ಪ್ರಶಸ್ತಿ ಪ್ರದಾನ ಮಾಡಿದರು.

2007: 1980ರಲ್ಲಿ ತಮ್ಮ ವೈರಿಗಳನ್ನು ಕೊಲ್ಲುವ ಆಂದೋಲನದಲ್ಲಿ 1.80 ಲಕ್ಷ ಕುರ್ದ್ ಜನರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ `ಕೆಮಿಕಲ್ ಅಲಿ' ಎಂದೇ ಕುಖ್ಯಾತಿ ಪಡೆದ ಸದ್ದಾಂ ಹುಸೇನ್ ಸೋದರ ಸಂಬಂಧಿ ಅಲಿ ಹಸನ್ ಅಲ್ ಮಜಿದ್, ಸುಲ್ತಾನ್ ಹಷೀಮ್ ಅಹ್ಮದ್ ಮತ್ತು ಹುಸೇನ್ ರಷೀದ್ ಅಹ್ಮದ್ ಅವರಿಗೆ ನ್ಯಾಯಾಧೀಶ ಮಹಮ್ಮದ್ ಒರೈಬಿ ಅಲ್ - ಖಲೀಫ ಮರಣ ದಂಡನೆ ವಿಧಿಸಿದರು. 140 ಶಿಯಾ ಮುಸ್ಲಿಮರನ್ನು ಕೊಂದ ಮತ್ತು 1982ರ ಹತ್ಯೆಗಳ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿತರಾದ ಸದ್ದಾಂ ಹುಸೇನರನ್ನು 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಗಿತ್ತು.

2007: ಪಾಕಿಸ್ಥಾನದ ಬಂದರು ನಗರ ಕರಾಚಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ತತ್ತರಿಸಿತು. ವಿವಿಧ ರೀತಿಯ ಅನಾಹುತಗಳಿಂದ ಒಟ್ಟು 220 ಮಂದಿ ಮೃತರಾಗಿ, ಹಲವರು ಗಾಯಗೊಂಡರು. ವಿದ್ಯುತ್ ವ್ಯವಸ್ಥೆ, ಜನಜೀವನ ಅಸ್ತವ್ಯಸ್ತಗೊಂಡಿತು.

2007: ಅಂದಾಜು 1.20 ಕೋಟಿ ಯೂರೋ ವೆಚ್ಚದಲ್ಲಿ ನವೀಕರಣಗೊಂಡ ಫ್ರಾನ್ಸಿನ ಪ್ಯಾರಿಸ್ ಸಮೀಪದ `ಹಾಲ್ ಆಫ ಮಿರರ್ಸ್' ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿತು. ಫ್ರೆಂಚ್ ಕಲಾವಿದ ಚಾರ್ಲ್ಸ್ ಲೀ ಬ್ರುನ್ (1619-1690) ಕಲಾಕೃತಿಗಳು ಇಲ್ಲಿವೆ. ಸ್ಥಾಪನೆಯಾಗಿ 300 ವರ್ಷಗಳ ಬಳಿಕ ಫ್ರಾನ್ಸಿನ ಮುಂಚೂಣಿಯ ರಿಯಲ್ ಎಸ್ಟೇಟ್ ಕಂಪೆನಿ ಮಿಂಚಿ `ಹಾಲ್ ಆಫ್ ಮಿರರ್ಸ್' ನವೀಕರಣದ ಹೊಣೆ ಹೊತ್ತಿತ್ತು.

2007: ಕೆನಡಾದಲ್ಲಿ ನೆಲೆಸಿದ ಬೆಂಗಳೂರು ಮೂಲದ ವೈದ್ಯೆ ಡಾ.ಶೀಲಾ ಬಸ್ರೂರು ಅವರನ್ನು, ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರ್ಕಾರವು `ಕೆನಡಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರು `ವಿಜಿಲ್ ಇಂಡಿಯಾ ಮೂವ್ ಮೆಂಟ್' ಸಂಸ್ಥೆಯ `ಎಮ್. ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು 2006' ಪ್ರಶಸ್ತಿಗೆ ಆಯ್ಕೆಯಾದರು. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್(1998), ಮೇಧಾ ಪಾಟ್ಕರ್(1999), ನ್ಯಾಯಮೂರ್ತಿ ವಿ. ಎಂ.ತಾರ್ಕುಂಡೆ (2000) ಇವರು ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ಬೆಂಗಳೂರಿನ ಬಹು ನಿರೀಕ್ಷಿತ, ಮಹತ್ವಾಕಾಂಕ್ಷೆಯ `ನಮ್ಮ ಮೆಟ್ರೋ' ಯೋಜನೆಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈದಿನ ಬೆಂಗಳೂರಿನ ಪೆರೇಡ್ ಮೈದಾನದಲ್ಲಿ ಶಿಲಾನ್ಯಾಸ ನೆರವೇರಿಸಿದರು.

2002: ರಷ್ಯದ ವ್ಲಾಡಿಮೀರ್ ಕ್ರಾಮ್ನಿಕ್ ಅವರು ಲಿಯೋನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ `ಅಡ್ವಾನ್ಸ್ಡ್ ಚೆಸ್' ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಂಡರು. `ಅಡ್ವಾನ್ಸ್ಡ್ ಚೆಸ್' ಎಂಬುದು ಗ್ಯಾರಿ ಕ್ಯಾಸ್ಪರೋವ್ ಅವರ ಸಂಶೋಧನೆಯಾಗಿದ್ದು ಇದರಲ್ಲಿ ಕಂಪ್ಯೂಟರ್ ನೆರವಿನೊಂದಿಗೆ `ಮೋಸ ಮಾಡಲು' ಅಧಿಕೃತವಾಗಿ ಅನುಮತಿ ನೀಡಲಾಗಿದೆ.

1980: ಭಾರತದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಅವರು ತಮ್ಮ 85ನೇ ವಯಸ್ಸಿನಲ್ಲಿ ತಮಿಳ್ನಾಡಿನ ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಿಧನರಾದರು.

1974: ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ 42 ರನ್ ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಇದು ಟೆಸ್ಟ್ ಕ್ರಿಕೆಟಿನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತದ ಇನ್ನಿಂಗ್ಸ್.

1966: ಕಲಾವಿದ ಪ್ರಕಾಶ ಕೆ. ನಾಯ್ಡು ಜನನ.

1949: ಕಲಾವಿದ ಚಂದ್ರಕುಮಾರ ಸಿಂಗ್ ಜನನ.

1935: ಕಲಾವಿದ ಬಳ್ಳಾರಿ ಎಂ. ಶೇಷಗಿರಿ ಆಚಾರ್ಯ ಜನನ.

1924: ಕರ್ನಾಟಕದಲ್ಲಿ ನಶಿಸುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬ ವರ್ಗದವರಲ್ಲಿ ಒಬ್ಬರಾದ ರಥ ಶಿಲ್ಪಿ ಪರಮೇಶ್ವರಾಚಾರ್ಯ ಅವರು ಮಾನಾಚಾರ್ಯರು- ವೀರಮ್ಮ ದಂಪತಿಯ ಮಗನಾಗಿ ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ ಜನಿಸಿದರು.

1915: ಬ್ರಿಟಿಷ್ ಗಣಿತ ಹಾಗೂ ಖಗೋಳ ತಜ್ಞ ಸರ್ ಫ್ರೆಡ್ ಹೊಯ್ಲ್ ಜನ್ಮದಿನ. ಇವರು ತಮ್ಮ `ವಿಶ್ವ ವಿಕಸನ ಸಿದ್ಧಾಂತ'ಕ್ಕಾಗಿ ಖ್ಯಾತಿ ಪಡೆದಿದ್ದಾರೆ. ಇವರ ಸಿದ್ಧಾಂತದ ಪ್ರಕಾರ ವಿಶ್ವವು ವಿಕಸಿಸುತ್ತಿದೆ ಹಾಗೂ ಈ ವಿಕಸನದಿಂದ ಉಂಟಾಗುವ ಶೂನ್ಯವನ್ನು ತುಂಬಿ ಆಕಾಶದಲ್ಲಿನ ದ್ರವ್ಯದ ಸಾಂದ್ರತೆಯನ್ನು ನಿರಂತರವಾಗಿ ಇರಿಸಲು ಹೊಸ ದ್ರವ್ಯ ಸೃಷ್ಟಿಯಾಗುತ್ತಿರುತ್ತದೆ.

1885: ಅಕಾಲಿದಳದ ನಾಯಕ ಮಾಸ್ಟರ್ ತಾರಾಸಿಂಗ್ (1885-1967) ಜನ್ಮದಿನ. ಸಿಖ್ಖರ ರಾಜಕೀಯ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತಹ ಪಂಜಾಬಿ ಭಾಷಿಕರ ರಾಜ್ಯ ಸ್ಥಾಪನೆಯಾಗಬೇಕು ಎಂದು ಚಳವಳಿ ಹೂಡಿದ ಸಿಖ್ ಧುರೀಣರಿವರು. 1966ರಲ್ಲಿ ಈಗಿನ ಪಂಜಾಬ್ ರಾಜ್ಯ ರಚನೆಯೊಂದಿಗೆ ಅವರ ಕನಸು ನನಸಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement