My Blog List

Tuesday, July 7, 2009

ಇಂದಿನ ಇತಿಹಾಸ History Today ಜುಲೈ 05

ಇಂದಿನ ಇತಿಹಾಸ

ಜುಲೈ 05
ವರದಕ್ಷಿಣೆ ಹಿಂಸೆಯ ದೂರನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದನ್ನು ಪ್ರತಿಭಟಿಸಿ ರಾಜಕೋಟ್ನ ಪೂಜಾ ಚೌಹಾನ್ ನವದೆಹಲಿಯಲ್ಲಿ ಅರೆಬೆತ್ತಲೆ ನಡಿಗೆ ನಡೆಸಿದರು. ಪೂಜಾ ನೆರವಿಗೆ ಬಂದ ರಾಷ್ಟ್ರೀಯ ಮಹಿಳಾ ಆಯೋಗವು ಆಕೆ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿತು.

2008: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಾ. ಕೆ.ಜಿ. ಬಾಲಕೃಷ್ಣನ್ ಅವರು ಗುಲ್ಬರ್ಗದ ಸಂಚಾರಿ ಹೈಕೋರ್ಟ್ ಪೀಠವನ್ನು ಉದ್ಘಾಟಿಸಿ ಈ ಭಾಗದ ಜನರ ಐದು ದಶಕಗಳ ಕನಸನ್ನು ನನಸು ಮಾಡಿದರು. ರಾಜ್ಯ ಹೈಕೋರ್ಟ್ ಕಟ್ಟಡದ ಮಾದರಿಯಲ್ಲೇ ನಿರ್ಮಾಣಗೊಂಡಿರುವ ಸಂಚಾರಿ ಹೈಕೋರ್ಟ್ ಪೀಠ ಉದ್ಘಾಟನೆಯನ್ನು ಗುಲ್ಬರ್ಗ, ಬೀದರ್, ವಿಜಾಪುರ ಮತ್ತು ರಾಯಚೂರು ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ವೀಕ್ಷಿಸಿದರು.

2007: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿಯ ಹುಲುಗಾರುಬೈಲಿನ ಕೃಷಿಕ ಕೇಶವ ಹೆಗ್ಡೆ ಅವರ ಮನೆಯಲ್ಲಿ ಈದಿನ ಪ್ರತ್ಯಕ್ಷರಾದ ಶಸ್ತ್ರಸಜ್ಜಿತ ನಕ್ಸಲೀಯರ ತಂಡವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ದರೋಡೆ ನಡೆಸಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ಹೆಗ್ಡೆ ಅವರ ಒಂಟಿ ಮನೆ ಬಳಿ ರಾತ್ರಿ 9.30ರ ವೇಳೆಗೆ ದಿಢೀರನೆ ಪ್ರತ್ಯಕ್ಷವಾದ ನಕ್ಸಲೀಯರ ಗುಂಪು ಮನೆಯಲ್ಲಿದ್ದ ಒಂದು ತೋಟಾ ಕೋವಿ, ಬಂದೂಕಿಗೆ ಬಳಸುವ ಎರಡು ತೋಟಾ, 55 ಸಾವಿರ ನಗದು ಹಣವನ್ನು ಅಪಹರಿಸಿತು.

2007: ವರದಕ್ಷಿಣೆ ಹಿಂಸೆಯ ದೂರನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದನ್ನು ಪ್ರತಿಭಟಿಸಿ ರಾಜಕೋಟ್ನ ಪೂಜಾ ಚೌಹಾನ್ ನವದೆಹಲಿಯಲ್ಲಿ ಅರೆಬೆತ್ತಲೆ ನಡಿಗೆ ನಡೆಸಿದರು. ಪೂಜಾ ನೆರವಿಗೆ ಬಂದ ರಾಷ್ಟ್ರೀಯ ಮಹಿಳಾ ಆಯೋಗವು ಆಕೆ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿತು.

2007: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಹಾಲಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅಧಿಕಾರಾವಧಿ ಆ.18ಕ್ಕೆ ಮುಕ್ತಾಯಗೊಳ್ಳುವುದು.

2007: ಅಮೆರಿಕದ ಪರಮಾಣು ವಿದ್ಯುತ್ ಚಾಲಿತ ನಿಮಿಜ್ ಯುದ್ಧ ವಿಮಾನಗಳನ್ನು ಹೊತ್ತ ನೌಕೆ ಈದಿನ ಮುಂಜಾನೆ ಚೆನ್ನೈ ಬಂದರಿನಿಂದ ನಿರ್ಗಮಿಸಿತು. ಜುಲೈ 2ರಂದು `ನಿಮಿಜ್' ಇಲ್ಲಿಗೆ ಆಗಮಿಸಿದಾಗ ಪರಿಸರ ಪ್ರೇಮಿಗಳು ಅದನ್ನು ವಿರೋಧಿಸಿದ್ದರು. ಅದರಲ್ಲಿರುವ ಪರಮಾಣು ವಿಕಿರಣಗಳು ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಆದ್ದರಿಂದ ನೌಕೆಗೆ ಲಂಗರು ಹಾಕಲು ಅವಕಾಶ ನೀಡಬಾರದೆಂದು ಪರಸರ ಪ್ರೇಮಿಗಳು ವಾದಿಸಿದ್ದರು. ಇಷ್ಟೆಲ್ಲ ವಿರೋಧದ ಮಧ್ಯೆಯೂ ನೌಕೆಯ ಸಿಬ್ಬಂದಿ ನಾಲ್ಕು ದಿನ ಚೆನ್ನೈಯಲ್ಲಿ ಶಾಪಿಂಗ್, ವಿಹಾರ ಮುಗಿಸಿಕೊಂಡು ಕೊಲ್ಲಿ ದೇಶಗಳತ್ತ ಸಂಚಾರ ಮುಂದುವರೆಸಿದರು.

2007: ಮೆಕ್ಸಿಕೊದ ಪುಯೆಬ್ಲಾ ಪ್ರಾಂತ್ಯದ ಪರ್ವತ ಬಳಿ ಈದಿನ ರಾತ್ರಿ ಭೂ ಕುಸಿತ ಉಂಟಾಗಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ಭೂಮಿಯಲ್ಲಿ ಹುದುಗಿ ಸುಮಾರು 60 ಪ್ರಯಾಣಿಕರು ಸಾವನ್ನಪ್ಪಿದರು.

2007: ಚೀನಾದ ಲಿಯೊನಿಂಗ್ ಪ್ರಾಂತ್ಯದ ಬೆಂಕ್ಸಿ ಪಟ್ಟಣದ ರಾತ್ರಿ ಕ್ಲಬ್ ಒಂದರಲ್ಲಿ ಸ್ಪೋಟ ಸಂಭವಿಸಿ 25 ಜನರು ಸಾವನ್ನಪ್ಪಿದರು. 33 ಮಂದಿ ಗಾಯಗೊಂಡರು.

2007: ರಷ್ಯದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ವಿಶೇಷ ಆಸಕ್ತಿಯ ಪರಿಣಾಮವಾಗಿ 2014ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವು ಇದೇ ಮೊದಲ ಬಾರಿ ರಷ್ಯಾದ ಪಾಲಾಯಿತು. ಚಳಿಗಾಲದ ಒಲಿಂಪಿಕ್ ಸೋಚಿಯ ಬ್ಲಾಕ್ ಸೀ ರೆಸಾರ್ಟಿನಲ್ಲಿ ನಡೆಯುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಜಾಕ್ ರಾಂಗ್ ಗ್ವಾಟೆಮಾಲಾ ಸಿಟಿಯಲ್ಲಿ ಪ್ರಕಟಿಸಿದರು.

2006: ವಿವಾದಿತ ಎನ್ರಾನ್ ವಿದ್ಯುತ್ ಸಂಸ್ಥೆಯ ಸ್ಥಾಪಕ ಕೆನಿತ್ (64) ಹೃದಯಾಘಾತದಿಂದ ಹ್ಯೂಸ್ಟನ್ನಿನಲ್ಲಿ ನಿಧನರಾದರು. ಕೋಟ್ಯಂತರ ರೂಪಾಯಿಗಳ ಮೊತ್ತದ ಎನ್ರಾನ್ ಅವ್ಯವಹಾರ ಹಗರಣದಲ್ಲಿ ವಿಚಾರಣೆ ಎದುರಿಸಿದ್ದ ಎನ್ರಾನ್ ಅವರ ವಿರುದ್ಧ ಮಾಡಲಾಗಿದ್ದ ಆರೋಪಗಳು ಸಾಬೀತಾಗಿದ್ದವು. ಪರಿಣಾಮವಾಗಿ ಅವರು 45 ವರ್ಷಗಳ ಕಠಿಣ ಸೆರೆವಾಸದ ಶಿಕ್ಷೆಗೆ ಗುರಿಯಾಗಬೇಕಿತ್ತು.

2006: ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಆರ್. ಸಿ. ಭೂಸನೂರಮಠ (84) ಬೆಂಗಳೂರಿನಲ್ಲಿ ನಿಧನರಾದರು.

2006: ಮುಂಬೈಯಲ್ಲಿ ಮಹಾಮಳೆಯ ಆರ್ಭಟ ಮುಂದುವರೆದು, ಮಹಾರಾಷ್ಟ್ರದ್ಲಲಿ ಮತ್ತೆ 24 ಮಂದಿ ಅಸು ನೀಗಿದರು.

2006: ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಉತ್ತರ ಕೊರಿಯಾ 6 ಕ್ಷಿಪಣಿಗಳ ಪರೀಕ್ಷೆ ನಡೆಸಿತು.

1940: ಜ್ಞಾನಾನಂದ ಜನನ.

1939: ಎಂ. ರಾಮಚಂದ್ರ ಜನನ.

1938: ಶೇಖರಪ್ಪ ಹುಲಗೇರಿ ಜನನ.

1930: ಪಳಕಳ ಸೀತಾರಾಮಭಟ್ಟ ಜನನ.

1916: ಸಾಹಿತಿ ಅರ್ಚಿಕ ವೆಂಕಟೇಶ್ ಅವರು ಗೋಪಾಲಕೃಷ್ಣಾಚಾರ್ಯ- ರಾಧಾಬಾಯಿ ದಂಪತಿಯ ಪುತ್ರನಾಗಿ ಧಾರವಾಡದಲ್ಲಿ ಈದಿನ ಜನಿಸಿದರು. ಪೂರ್ವೀಕರು ಅರ್ಚಕ ವೃತ್ತಿಯನ್ನು ನಡೆಸಿಕೊಂಡು ಬಂದದ್ದರಿಂದ ಅವರ ಹೆಸರಿಗೆ `ಅರ್ಚಿಕ' ಅನ್ವರ್ಥನಾಮವಾಗಿ ಸೇರಿಕೊಂಡಿತು. ಪತ್ರಕರ್ತ, ಸಾಹಿತಿಯಾಗಿ ಹಲವಾರು ಕೃತಿಗಳನ್ನು ರಚಿಸಿದ ಅವರು 1997ರ ಡಿಸೆಂಬರ್ 20ರಂದು ತಿರುಚೆಂಡೂರಿನಲ್ಲಿ ಅಕಾಲ ಮೃತ್ಯುವಿಗೀಡಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement