Saturday, July 4, 2009

ಇಂದಿನ ಇತಿಹಾಸ History Today ಜುಲೈ 01

ಇಂದಿನ ಇತಿಹಾಸ

ಜುಲೈ 01

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ರಿಂದ 4 ಲಕ್ಷ ಜನರಿಗೆ ಚಿಕುನ್ ಗುನ್ಯ ಬಾಧಿಸಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರದ್ಲಾಜೆ ತಿಳಿಸಿದರು. `ಅಧಿಕಾರಿಗಳ ಬಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಚಿಕುನ್ ಗುನ್ಯ ಪೀಡಿತರ ಅಂಕಿಸಂಖ್ಯೆಗಳು ಮಾತ್ರವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವಿವರ ಇಲ್ಲ. ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳಿಗೆ ಭೇಟಿ ನೀಡಿದ ಜ್ವರ ಪೀಡಿತರ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದವರಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ' ಎಂದು ಹೇಳಿದರು

2008: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ರಿಂದ 4 ಲಕ್ಷ ಜನರಿಗೆ ಚಿಕುನ್ ಗುನ್ಯ ಬಾಧಿಸಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರದ್ಲಾಜೆ ತಿಳಿಸಿದರು. ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲಿ ್ಲಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷಿಯಲ್ಲಿ ಮಾತನಾಡಿದ ಅವರು, `ಅಧಿಕಾರಿಗಳ ಬಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಚಿಕುನ್ ಗುನ್ಯ ಪೀಡಿತರ ಅಂಕಿಸಂಖ್ಯೆಗಳು ಮಾತ್ರವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವಿವರ ಇಲ್ಲ. ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳಿಗೆ ಭೇಟಿ ನೀಡಿದ ಜ್ವರ ಪೀಡಿತರ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದವರಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ' ಎಂದು ಹೇಳಿದರು. ಚಿಕುನ್ ಗುನ್ಯ ಮಾತ್ರವಲ್ಲದೆ ಇಲಿ ಜ್ಚರ, ಡೆಂಗ್ಯೂ ಜ್ವರವೂ ಕಾಣಿಸಿಕೊಂಡಿದೆ. ಪಕ್ಕದ ಉಡುಪಿ, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳಿಗೂ ಚಿಕುನ್ ಗುನ್ಯ ಹರಡಿದ್ದು, ರೋಗ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

2008: ರಾಜ್ಯದ ವೈದ್ಯರಾದ ಕೆ.ಎಸ್.ಗೋಪಿನಾಥ್ ಮತ್ತು ಸಿ.ಡಿ.ಐರಿನ್ ಪ್ರತಿಷ್ಠಿತ ಡಾ. ಬಿ.ಸಿ.ರಾಯ್ ಪ್ರಶಸ್ತಿಗೆ ಪಾತ್ರರಾದರು. ನವದೆಹಲಿಯಲ್ಲಿ ಇಬ್ಬರೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಪದವೀಧರ ಡಾ. ಗೋಪಿನಾಥ್, ಮುಂಬೈನ ಜಿ.ಎಸ್.ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಪಾಲಿಕ್ಲಿನಿಕ್ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿರುವ ಡಾ. ಐರಿನ್ ಕೇರಳದ ತ್ರಿಶ್ಯೂರಿನವರು. ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಹಾಗೂ ದೆಹಲಿ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ `ರೋಗಶಾಸ್ತ್ರ'ದಲ್ಲಿ ಸ್ನಾತಕೋತ್ತರ ಪದವೀಧರರು.

2007: ದಕ್ಷಿಣ ಆಫ್ರಿಕದ ಬೆಲ್ಫಾಸ್ಟ್ ಸ್ಟಾರ್ಮಂಟ್ ಸಿವಿಲ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡವು ಜಾಕ್ ಕಾಲಿಸ್ ನೇತೃತ್ವದ ದಕ್ಷಿಣ ಆಫ್ರಿಕ ತಂಡದ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿತು.

2007: ಕರ್ನಾಟಕದ ಆಗುಂಬೆ ಸಮೀಪದ ಹೊಸಗದ್ದೆ ಬಳಿಯ ಗುಬ್ಬಿಗದಲ್ಲಿ ಸಶಸ್ತ್ರರಾಗಿ ಬಂದ ಒಂಬತ್ತು ಮಂದಿ ನಕ್ಸಲೀಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗೆ ಬೆಂಕಿ ಹಚ್ಚಿ, ಸರ್ಕಾರದ ಕ್ರಮಗಳಿಗೆ ಪ್ರತೀಕಾರದ ಎಚ್ಚರಿಕೆ ಹಾಕಿ ಪರಾರಿಯಾದರು. ಬೆಳಿಗ್ಗೆ ಆಗುಂಬೆಯಿಂದ 6.45ಕ್ಕೆ ಹೊರಟ ಈ ಬಸ್ ಹೊಸಗದ್ದೆ ಮಾರ್ಗದ ಗುಬ್ಬಿಗದ ಬಳಿ 7 ಗಂಟೆಗೆ ಬಂದಾಗ ರಸ್ತೆಯಲ್ಲಿ ನಕ್ಸಲೀಯರ ಗುಂಪಿನಲ್ಲಿದ್ದ ಯುವತಿ ಬಸ್ಸನ್ನು ಪ್ರಯಾಣಿಕರ ಸೋಗಿನಲ್ಲಿ ನಿಲ್ಲಿಸಿದಳು. ನಂತರ ಒಂಬತ್ತು ಜನರಿದ್ದ ಬಂದೂಕುಧಾರಿ ಯುವಕರ ತಂಡ ಬಸ್ಸನ್ನು ಸುತ್ತುವರಿದು ಚಾಲಕ ಮತ್ತು ನಿರ್ವಾಹಕರನ್ನು ಬಸ್ಸಿನಿಂದ ಕೆಳಗಿಳಿಸಿ, ಈ ಕೃತ್ಯ ನಡೆಸಿತು.

2007: ಹಿಮಾಚಲ ಪ್ರದೇಶದ ಧರ್ಮಶಾಲಾದ 103 ವರ್ಷದ ಪ್ಯಾರಾಸಿಂಗ್ ಮತ್ತು 101 ವರ್ಷದ ಹಂಸಾದೇವಿ ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಯಶಸ್ವಿ ಜೋಡಿ. 84 ವರ್ಷಕಾಲ ಸುದೀರ್ಘ ದಾಂಪತ್ಯ ನಡೆಸಿದ ಈ ಜೋಡಿಯ ಹೆಸರನ್ನು 'ಗಿನ್ನೆಸ್ ದಾಖಲೆ' ಪುಸ್ತಕದಲ್ಲಿ ದಾಖಲಿಸುವ ಸಲುವಾಗಿ ಇವರ ದಾಂಪತ್ಯ ಮಾಹಿತಿ, ಸಾಕ್ಷ್ಯಾಧಾರಗಳನ್ನು ಜೂನ್ ತಿಂಗಳಲ್ಲಿ ಗಿನ್ನೆಸ್ ದಾಖಲೆ ಕಚೇರಿಗೆ ಕಳುಹಿಸಿರುವುದಾಗಿ ಅವರ ಅವರ ಮಗ ಬಿಷಂಭರ್ ರಾಣಾ ಇಲ್ಲಿ ಈದಿನ ಬಹಿರಂಗಪಡಿಸಿದರು.

2007: ಭುವನೇಶ್ವರದ ರೂರ್ಕೆಲಾ ಪಟ್ಟಣದ ಸರೋಜ್ ಕುಮಾರ್ ರೌತ್ ಅವರು ತಮ್ಮ ಮೂರು ತಿಂಗಳ ಮಗು ಆಯುಷ್ ರಂಜನ್ ರೌತ್ ಆದಾಯ ತೆರಿಗೆ ಪಾನ್ ಕಾರ್ಡ್ ಹೊಂದಿರುವುದನ್ನು ಬಹಿರಂಗಪಡಿಸಿದರು. ರಂಜನ್, ಮುಂದಿನ ವರ್ಷದಿಂದ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ರೂಪದರ್ಶಿಯಾಗಿ ಆಯ್ಕೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಹಣ ಗಳಿಸಿದ್ದಾನೆ. ಹಾಗಾಗಿ ಮುಂದಿನ ವರ್ಷದಿಂದ ಆತನ ಹೆಸರಲ್ಲಿ ತೆರಿಗೆ ಕಟ್ಟಬೇಕಿದ್ದು ಅದಕ್ಕಾಗಿ ಈ ವರ್ಷವೇ ಅವರು ರಂಜನ್ ಹೆಸರಲ್ಲಿ ಪಾನ್ಕಾರ್ಡ್ ಮಾಡಿಸಿದರು. ರಂಜನ್ ಹುಟ್ಟಿದ್ದು 2007ರ ಮಾರ್ಚ್ 26. ಹೀಗಾಗಿ ರಂಜನ್ ಭಾರತದ ಅತ್ಯಂತ ಕಿರಿಯ ಪಾನ್ಕಾರ್ಡ್ ಹೋಲ್ಡರ್ ಎಂಬ ಹೆಗ್ಗಳಿಕೆಗೆ ಪಾತ್ರನಾದ.

2007: ಆಫ್ಘಾನಿಸ್ಥಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಅಮೆರಿಕ ನೇತೃತ್ವದ ಸೇನಾಪಡೆ ತಾಲಿಬಾನ್ ಉಗ್ರರ ಆಶ್ರಯ ತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 62 ಉಗ್ರರು ಹಾಗೂ 45 ನಾಗರಿಕರು ಸಾವಿಗೀಡಾದರು.

2007: ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ಸೇನೆಯ ಮಹಿಳಾ ಅಧಿಕಾರಿ ಕ್ಯಾಪ್ಟನ್ ಮೇಘಾ ರಾಜ್ದನ್ ಅವರು ಜಮ್ಮುವಿನ ಕುಂಜವಾನಿ ಸೇನಾ ಶಿಬಿರದಲ್ಲಿ ತಾವಿದ್ದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

2006: ಚೀನ ಮತ್ತು ಟಿಬೆಟಿಗೆ ಸಂಪರ್ಕ ಕಲ್ಪಿಸುವ ವಿಶ್ವದಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿನ ಕ್ವಿಂಗೈ- ಟಿಬೆಟ್ ರೈಲು ಸಂಚಾರ ಆರಂಭಗೊಂಡಿತು. ಈ ಕ್ವಿಂಗೈ- ಟಿಬೆಟ್ ರೈಲು ಕ್ವಿಂಗೈ ಪ್ರಾಂತ್ಯದ ಜಿನಿಂಗ್ನಿಂದ ಲಾಸಾವರೆಗೆ ಹಾದು ಹೋಗುತ್ತದೆ. 1984ರಲ್ಲಿ ಜೀನಿಂಗ್ನಿಂದ ಗೊಲ್ಮಂಡ್ ವರೆಗಿನ 814 ಕಿ.ಮೀ. ದೂರದ ಯೋಜನೆ ಆರಂಭವಾಯಿತು. 2001ರ ಜೂನ್ 29ರಂದು ಗೊಲ್ಮಂಡ್- ಲಾಸಾ ರೈಲ್ವೆ ನಿರ್ಮಾಣ ಆರಂಭವಾಯಿತು. ಗೊಲ್ಮಂಡ್ ಮತ್ತು ಲಾಸಾ ನಡುವಣ 1142 ಕಿ.ಮೀ. ಕುನ್ಲುನ್ ಮತ್ತು ಟಾಂಗುಲಾ ಪರ್ವತಗಳನ್ನು ಹಾದು ಹೋಗುತ್ತದೆ. ಇದರಲ್ಲಿ 960 ಕಿ.ಮೀ. 4000 ಮೀಟರ್ ಎತ್ತರದಲ್ಲಿ ಹಾದು ಹೋಗುತ್ತದೆ. ಅತಿ ಎತ್ತರದ ಪ್ರದೇಶ 5072 ಮೀಟರ್ ಆಗಿದ್ದು, ಇದು ಪೆರುವಿನಲ್ಲಿರುವ ಅಂಡೆಸ್ ರೈಲ್ವೆಗಿಂತ 200 ಮೀಟರ್ ಎತ್ತರದಲ್ಲಿದೆ.

2006: ಗುಜರಾತಿನ ಅಕ್ಷರಧಾಮದ ಸ್ವಾಮಿನಾರಾಯಣ ದೇವಾಲಯದ ಮೇಲೆ 2002ರ ಸೆಪ್ಟೆಂಬರ್ 24ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಅಹಮದಾಬಾದಿನ ಪೋಟಾ ನ್ಯಾಯಾಲಯ ಮರಣದಂಡನೆ ವಿಧಿಸಿತು. ಈ ದಾಳಿಯಲ್ಲಿ ಇಬ್ಬರು ಎನ್ಎಸ್ಜಿ ಕಮಾಂಡೋಗಳು, ಇಬ್ಬರು ರಾಜ್ಯ ಕಮಾಂಡೋಗಳು ಹಾಗೂ 29 ಮಂದಿ ಸ್ವಾಮಿ ನಾರಾಯಣ ಭಕ್ತರು ಮೃತರಾಗಿ ಇತರ 81 ಜನ ಗಾಯಗೊಂಡಿದ್ದರು.

2006: ಮಹಾರಾಷ್ಟ್ರದ ಬರಪೀಡಿತ ವಿದರ್ಭ ರೈತರನ್ನು ಆತ್ಮಹತ್ಯೆಯ ವಿಷ ವರ್ತುಲದಿಂದ ಪಾರು ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಒಟ್ಟು 3,750 ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯನ್ನು ನಾಗಪುರದಲ್ಲಿ ಪ್ರಕಟಿಸಿದರು.

1964: ಡಾ. ಸಂಗಮನಾಥ ಲೋಕಾಪುರ ಜನನ.

1962: ಮೊಗಳ್ಳಿ ಗಣೇಶ್ ಜನನ.

1961: ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಹರಿಯಾಣದಲ್ಲಿ ಈದಿನ ಜನಿಸಿದರು. ಸಂಶೋಧನಾ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ಕಲ್ಪನಾ 2003ರ ಫೆಬ್ರುವರಿ 1ರಂದು ಕೊಲಂಬಿಯಾ ಗಗನ ನೌಕೆ ಮೂಲಕ ಬಾಹ್ಯಾಕಾಶದಿಂದ ವಾಪಸ್ ಬರುತ್ತಿರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಅಸು ನೀಗಿದರು.

1944: ಸಾಹಿತಿ ವಿಷ್ಣುನಾಯ್ಕ ಅವರು ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ ಜನಿಸಿದರು.

1936: ಕುಂಬಾಸ ಜನನ.

1934: ಎಚ್. ಆರ್. ದಾಸೇಗೌಡ ಜನನ.

1925: ಜಯತೀರ್ಥ ರಾಜಪುರೋಹಿತ ಜನನ.

1925: ಎಚ್. ಕೆ. ರಾಮಚಂದ್ರ ಮೂರ್ತಿ ಜನನ.

1924: ಹಿ.ಮ.ನಾಗಯ್ಯ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement