Friday, July 10, 2009

ಇಂದಿನ ಇತಿಹಾಸ History Today ಜುಲೈ 10

ಇಂದಿನ ಇತಿಹಾಸ

ಜುಲೈ 10

ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಒಂದು ವಾರದಿಂದ ಅವಿತುಕೊಂಡಿದ್ದ ಉಗ್ರಗಾಮಿಗಳ ವಿರುದ್ಧ ಪಾಕಿಸ್ಥಾನ ಸೇನೆ ಈದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಆರಂಭಿಸಿದ ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿ ಸೇರಿದಂತೆ 88 ಉಗ್ರರು ಪ್ರಾಣ ಕಳೆದುಕೊಂಡರು.

2008: ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (ಐಎಇಎ) ನಡುವಿನ ಸುರಕ್ಷತಾ ಒಪ್ಪಂದದ ಕರಡು ಪ್ರತಿಯನ್ನು ಈದಿನ ದಿಢೀರನೆ ಬಹಿರಂಗಪಡಿಸಲಾಯಿತು.

2007: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಮ್ಮಡ್ಲು ಎಂಬಲ್ಲಿ ಈದಿನ ಬೆಳಗ್ಗೆ ನಕ್ಸಲ್ ನಿಗ್ರಹ ಪಡೆ (ಎ ಎನ್ ಎಫ್) ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ನಕ್ಸಲೀಯ, ಮತ್ತು ಅವರಿಗೆ ಆಶ್ರಯ ನೀಡಿದ್ದರೆನ್ನಲಾದ ನಾಲ್ವರು ಸ್ಥಳೀಯರು ಸೇರಿದಂತೆ ಐದು ಮಂದಿ ಗುಂಡೇಟಿಗೆ ಬಲಿಯಾದರು. ಮೃತರನ್ನು ಪೊಲೀಸ್ ಇಲಾಖೆಯ ನಕ್ಸಲೀಯರ ಪಟ್ಟಿಯಲ್ಲಿದ್ದ ಗೌತಮ, ಸ್ಥಳೀಯರಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಕಾರ್ಯದರ್ಶಿ ಅತ್ಯಡ್ಕದ ಪರಮೇಶ್ವರ್, ಗಾಳಿಗಂಡಿ ತೋಟದಮನೆಯ ಸುಂದರೇಶ್, ರಾಮೇಗೌಡ್ಲು (45), ಆತನ ಪತ್ನಿ ಕಾವೇರಮ್ಮ (35) ಎಂದು ಗುರುತಿಸಲಾಯಿತು.

2007: ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಒಂದು ವಾರದಿಂದ ಅವಿತುಕೊಂಡಿದ್ದ ಉಗ್ರಗಾಮಿಗಳ ವಿರುದ್ಧ ಪಾಕಿಸ್ಥಾನ ಸೇನೆ ಈದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಆರಂಭಿಸಿದ ಪೂರ್ಣ ಪ್ರಮಾಣದ ಕಾರ್ಯಾಚರಣೆಯಲ್ಲಿ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿ ಸೇರಿದಂತೆ 88 ಉಗ್ರರು ಪ್ರಾಣ ಕಳೆದುಕೊಂಡರು. ಲಾಲ್ ಮಸೀದಿಯ ಉಪ ಆಡಳಿತಾಧಿಕಾರಿ ಮತ್ತು ಉಗ್ರರ ನೇತಾರನಾಗಿದ್ದ ಅಬ್ದುಲ್ ರಶೀದ್ ಘಾಜಿ ಜತೆ ಪಾಕಿಸ್ಥಾನ ಆಡಳಿತ ನಡೆಸಿದ ಹನ್ನೊಂದು ಗಂಟೆಗಳ ಮಾತುಕತೆ ವಿಫಲವಾದ ಬಳಿಕ `ಆಪರೇಷನ್ ಸೈಲೆನ್ಸ್'ನ್ನು ನಡೆಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ಜನರನ್ನು ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಕಾರ್ಯಾಚರಣೆಯಲ್ಲಿ 12 ಯೋಧರೂ ಹತರಾದರು.

2007: ಛತ್ತೀಸ್ ಗಢದ ದಾಂಟೇವಾಡ ಜಿಲ್ಲೆಯ ಅರಣ್ಯದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ವಿಶೇಷ ಪೊಲೀಸ್ ಪಡೆ ಜತೆ ನಡೆದ ಗುಂಡಿನ ಕಾಳಗದಲ್ಲಿ 20ಕ್ಕೂ ಹೆಚ್ಚು ಮಾವೋವಾದಿ ನಕ್ಸಲೀಯರು ಮತ್ತು 24 ಪೊಲೀಸರು ಸಾವನ್ನಪ್ಪಿದರು. ರಾಯಪುರದಿಂದ 550 ಕಿ.ಮೀ. ದೂರದ ಎಳಾಂಪಟ್ಟಿ- ರಗದ್ ಗಟ್ಟ ವಲಯದ ಅರಣ್ಯದಲ್ಲಿ ಈ ಗುಂಡಿನ ಕಾಳಗ ನಡೆಯಿತು. ಕೇಂದ್ರ ಮೀಸಲು ಪಡೆ ಮತ್ತು ವಿಶೇಷ ಪೊಲೀಸ್ ಪಡೆಯ 115 ಸದಸ್ಯರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

2006: ಅತಿ ದೊಡ್ಡ ರವಿಕೆ ಹೊಲಿಯುವ ಮೂಲಕ ಎಸ್ಸೆಸ್ಸೆಲ್ಸಿ ಓದಿರುವ ಬೆಂಗಳೂರು ರಾಜಾಜಿನಗರದ ಗೃಹಿಣಿ ಕಮಲಾವತಿ ವಾಸುದೇವ `ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಸ್ಥಾನ ಗಿಟ್ಟಿಸಿದರು. 2005ರ ಆಗಸ್ಟ್ 23ರಂದು 60 ಅಂಗುಲದ ಪನ್ನಾದ 83.5 ಮೀಟರ್ ಬಟ್ಟೆ ಹಿಡಿದು ಪಟ್ಟಾಗಿ ಕುಳಿತ ಕಮಲಾವತಿ ಆಗಸ್ಟ್ 25ರ ವೇಳೆಗೆ (3 ದಿನದಲ್ಲಿ) 18 ಅಡಿ ಎತ್ತರ, 10 ಅಡಿ 10 ಅಂಗುಲ ಉದ್ದ ಹಾಗೂ 12 ಅಡಿ 6 ಅಂಗುಲ ಸುತ್ತಳತೆಯ ತೋಳುಗಳು, 72.5 ಅಡಿ ಸುತ್ತಳೆಯ ಎದೆಯ ಗಾತ್ರದ ಭಾರಿ ರವಿಕೆಯನ್ನು ಹೊಲಿದು ಮುಗಿಸಿದ್ದರು. ಹೊಲಿಯಲು ಆಕೆ ಬಳಸಿದ ದಾರ 1250 ಮೀಟರುಗಳು.

2006: ಪಾಕಿಸ್ಥಾನ ಅಂತಾರಾಷ್ಟ್ರೀಯ ಏರ್ ಲೈನ್ಸ್ (ಪಿಐಎ) ವಿಮಾನವೊಂದು ಮುಲ್ತಾನ್ ನಗರದ ವಿಮಾನ ನಿಲ್ದಾಣದಿಂದ ಗಗನಕ್ಕೆ ಏರಿದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿ ಇಬ್ಬರು ಹಿರಿಯ ರಕ್ಷಣಾ ಅಧಿಕಾರಿಗಳ ಸಹಿತ 45 ಜನ ಮೃತರಾದರು.

2006: ಇನ್ಸಾಟ್ 4 ಸಿ ಸಂಪರ್ಕ ಉಪಗ್ರಹವನ್ನು ಅಂತರಿಕ್ಷಕ್ಕೆ ಸಾಗಿಸಬೇಕಾಗಿದ್ದ ಭೂಸ್ಥಿರ ಕಕ್ಷೆ ಉಪಗ್ರಹ ಉಡಾವಣಾ ವಾಹನವು (ಜಿ ಎಸ್ ಎಲ್ ವಿ-ಎಫ್ ಒ2) ನಭಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಆಕಾಶದಲ್ಲಿ ಸ್ಫೋಟಗೊಂಡು ಪಥ ಬದಲಿಸಿ ಬಂಗಾಳಕೊಲ್ಲಿಗೆ ಉರಿದು ಬಿತ್ತು.

1994: ಪರಮವೀರ ಚಕ್ರ ಪುರಸ್ಕೃತ ರಾಮರಾವ್ ರಘೋಬ ರಾಣೆ ನಿಧನ.

1992: ರಾಜ್ಯಸಭೆಯ ಉಪಸಭಾಪತಿಯಾಗಿ ನಜ್ಮಾ ಹೆಪ್ತುಲ್ಲಾ ಆಯ್ಕೆ.

1991: ಖ್ಯಾತ ವಿಜ್ಞಾನಿ ಪದ್ಮಭೂಷಣ ಸಿ.ಜಿ. ಪಂಡಿತ್ ನಿಧನ.

1991: ಹತ್ತನೇ ಲೋಕಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಶಿವರಾಜ ಪಾಟೀಲ್ ಆಯ್ಕೆ.

1962: ಸಾಹಿತಿ ಸಕಲವಾರ ಕಾವೇರಪ್ಪ ಜನನ.

1943: ಸಾಹಿತಿ ಲೀಲಾವತಿ ಎಸ್. ರಾವ್ ಜನನ.

1940: ಸಾಹಿತಿ ಶಾರದಾ ಆರ್. ರಾವ್ ಜನನ.

1927: ಸಮಾಜ ಸುಧಾರಕ ಗಂಗಾರಾಮ್ ನಿಧನ.

1865: ಇತಿಹಾಸ ತಜ್ಞ, ಗೆಜೆಟಿಯರ್, ಪ್ರಸಿದ್ಧ ಬಹುಭಾಷಾ ವಿದ್ವಾಂಸ, ಸಂಘ ಸಂಸ್ಥೆಗಳ ಸ್ಥಾಪಕ, ಜನಪ್ರತಿನಿಧಿ ಹಯವದನರಾವ್

(1865-1946) ಅವರು ತಮಿಳುನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ ರಾಜಾರಾವ್ ಅವರ ಪುತ್ರನಾಗಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement