Tuesday, July 14, 2009

ಇಂದಿನ ಇತಿಹಾಸ History Today ಜುಲೈ 13

ಇಂದಿನ ಇತಿಹಾಸ

ಜುಲೈ 13

ತಮ್ಮ ವಿವಾಹ ಏರ್ಪಡಿಸಿದ್ದ ಕಲ್ಯಾಣ ಮಂಟಪಕ್ಕೆ ಸಮೀಪದ ಆಟದ ಮೈದಾನದ ಬಳಿಗೆ ಹೆಲಿಕಾಪ್ಟರಿನಲ್ಲಿ ಬಂದು, ಮೇಲಿನಿಂದ ಪ್ಯಾರಾಚೂಟ್ ಮೂಲಕ 7 ಸಾವಿರ ಅಡಿ ಕೆಳಗೆ ಧುಮುಕಿ ವಧು ಶ್ವೇತ ಪುಸ್ಟಿ ಅವರತ್ತ ಪ್ಯಾರಾಚೂಟಿನಲ್ಲಿ ಧಾವಿಸುವ ಮೂಲಕ ವಾಯುಪಡೆಯಲ್ಲಿ ಅಧಿಕಾರಿಯಾದ ಸಿಸಿರ್ ಭುವನೇಶ್ವರದಲ್ಲಿ 'ಮದುವೆ ಮಾರ್ಗದಲ್ಲಿ ದಾಖಲೆ' ಒಂದನ್ನು ಸೃಷ್ಟಿಸಿದರು.

2008: ತಮ್ಮ ವಿವಾಹ ಏರ್ಪಡಿಸಿದ್ದ ಕಲ್ಯಾಣ ಮಂಟಪಕ್ಕೆ ಸಮೀಪದ ಆಟದ ಮೈದಾನದ ಬಳಿಗೆ ಹೆಲಿಕಾಪ್ಟರಿನಲ್ಲಿ ಬಂದು, ಮೇಲಿನಿಂದ ಪ್ಯಾರಾಚೂಟ್ ಮೂಲಕ 7 ಸಾವಿರ ಅಡಿ ಕೆಳಗೆ ಧುಮುಕಿ ವಧು ಶ್ವೇತ ಪುಸ್ಟಿ ಅವರತ್ತ ಪ್ಯಾರಾಚೂಟಿನಲ್ಲಿ ಧಾವಿಸುವ ಮೂಲಕ ವಾಯುಪಡೆಯಲ್ಲಿ ಅಧಿಕಾರಿಯಾದ ಸಿಸಿರ್ ಭುವನೇಶ್ವರದಲ್ಲಿ 'ಮದುವೆ ಮಾರ್ಗದಲ್ಲಿ ದಾಖಲೆ' ಒಂದನ್ನು ಸೃಷ್ಟಿಸಿದರು. ಅಮೆರಿಕದಲ್ಲಿ ಭಾರತದ ತ್ರಿವರ್ಣ ಧ್ವಜದೊಂದಿಗೆ ಹೆಲಿಕಾಪ್ಟರಿನಿಂದ 15 ಸಾವಿರ ಅಡಿ ಕೆಳಗೆ ಧುಮುಕಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲೂ ಸಿಸಿರ್ ತಮ್ಮ ಹೆಸರು ನಮೂದಿಸಿದ್ದರು. ವಿನೂತನ ರೀತಿಯಲ್ಲಿ ಮದುವೆಯಾಗಬೇಕೆಂಬ ತಮ್ಮ ಬಹುಕಾಲದ ಮನದಾಸೆ ಈಡೇರಿಸಿಕೊಳ್ಳಲು ಸಿಸಿರ್ಗೆ ಖರ್ಚಾದದ್ದು 3 ಲಕ್ಷ ರೂಪಾಯಿ!

2008: ಅಮೆರಿಕದ ಬಿಸಿನೆಸ್ ಮ್ಯಾಗಜೀನ್ `ಫೋಬ್ಸ್' ಪತ್ರಿಕೆ ಸಂಗ್ರಹಿಸಿರುವ ಇತ್ತೀಚಿನ `ಬಿಲಿಯನೇರ್ಗಳ ಪತ್ನಿಯರು' ಪಟ್ಟಿಯಲ್ಲಿ ಉಷಾ ಮಿತ್ತಲ್ ಹಾಗೂ ಟೀನಾ ಅಂಬಾನಿ ಹೆಸರು ದಾಖಲಾಯಿತು. ಉಷಾ ಮಿತ್ತಲ್ ವಿಶ್ವದ ನಾಲ್ಕನೇ ಅತ್ಯಂತ ಶ್ರೀಮಂತ ಹಾಗೂ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಪತ್ನಿ. ಟೀನಾ ಅಂಬಾನಿ ವಿವಾಹವಾಗಿರುವುದು ವಿಶ್ವದ 6ನೇ ಅತ್ಯಂತ ಶ್ರೀಮಂತ ಅನಿಲ್ ಅಂಬಾನಿ ಅವರನ್ನು. `ಶತಕೋಟ್ಯಧಿಪತಿಗಳ ಪತ್ನಿಯರ ಕ್ಲಬ್'ಗೆ ಸದಸ್ಯತ್ವ ಪಡೆಯುವುದೆಂದರೆ ಅದು ಅಷ್ಟೇನೂ ಸುಲಭವಲ್ಲ ಎಂದು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸಿದ ಲೇಖನದಲ್ಲಿ `ಫೋಬ್ಸ್' ತಿಳಿಸಿತು.

2007: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬರೆದ ಪತ್ರವನ್ನು ಹರಾಜು ಹಾಕದಂತೆ ಯಶಸ್ವಿಯಾಗಿ ತಡೆದು ಅವುಗಳನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡ ಕೇವಲ ಹತ್ತು ದಿನಗಳ ಅಂತರದಲ್ಲಿ ಲಂಡನ್ನಿನ ಸೊಥೆಬಿ ಹರಾಜು ಸಂಸ್ಥೆಯು ರಾಷ್ಟ್ರಪಿತನ ಹಸ್ತಾಕ್ಷರ ಇರುವ ಪತ್ರಗಳು ಮತ್ತು ಅವರ ಕೈ ಬರಹದ ಸರಣಿ ಲೇಖನಗಳನ್ನು ಈದಿನ ಹರಾಜು ಹಾಕಿತು. ಇಂಗ್ಲಿಷ್ ಸಾಹಿತ್ಯ ಮತ್ತು ಐತಿಹಾಸಿಕ ದಾಖಲೆಗಳನ್ನು ಹರಾಜು ಮಾಡುವ ತನ್ನ ಯೋಜನೆಯನ್ವಯ ಸಂಸ್ಥೆಯು 1920 ಮತ್ತು 1940ರ ಮಧ್ಯದಲ್ಲಿ ಗಾಂಧೀಜಿ ಅವರು ಬರೆದಿದ್ದ ಸರಣಿ ಲೇಖನ, ಪತ್ರಗಳನ್ನು ಹರಾಜು ಹಾಕಿತು. ಯಂಗ್ ಇಂಡಿಯಾ ಪತ್ರಿಕೆಗಾಗಿ ಬರೆದ ಲೇಖನಗಳ ಸರಣಿ ಹಾಗೂ ಗಾಂಧೀಜಿ ಅವರ ಹಸ್ತಾಕ್ಷರ ಇರುವ 11 ಪತ್ರಗಳು ಸೇರಿದಂತೆ ಒಟ್ಟು 33 ಪುಟಗಳನ್ನು 45,600 (ಅಂದಾಜು 37 ಲಕ್ಷ 40 ಸಾವಿರ ರೂಪಾಯಿ) ಪೌಂಡಿಗೆ ಹರಾಜು ಹಾಕಲಾಯಿತು. 1921ರಲ್ಲಿ ಯಂಗ್ ಇಂಡಿಯಾ ಪತ್ರಿಕೆಗೆ ಬರೆದಿರುವ ಈ ಲೇಖನಗಳಲ್ಲಿ ಗಾಂಧೀಜಿ ಅವರು ದೇಶದ ರಾಜಕೀಯ, ಸಾಂಸ್ಕೃತಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಜಾತಿ ವ್ಯವಸ್ಥೆ, ಖಾದಿ ಜಾಗೃತಿ ಅಭಿಯಾನ, ವಸಾಹತುಶಾಹಿ ಶಿಕ್ಷಣ ವ್ಯವಸ್ಥೆ, ಅಹಿಂಸಾತ್ಮಕ ಚಳವಳಿಯ ಮಹತ್ವ ಸೇರಿದಂತೆ ಹಲವು ಗಂಭೀರ ವಿಷಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಅವರ ಹಸ್ತಾಕ್ಷರ ಇರುವ ಹನ್ನೊಂದು ಪತ್ರಗಳಲ್ಲಿ ಆರು ಪತ್ರಗಳನ್ನು ಯಂಗ್ ಇಂಡಿಯಾ ಪತ್ರಿಕೆಗೆ ಕೆಲಸ ಮಾಡುತ್ತಿದ್ದ ಯುವ ಕಾಂಗ್ರೆಸ್ ನಾಯಕ ಬದ್ರುಲ್ ಹಸನ್ ಅವರಿಗೆ ಬರೆಯಲಾಗಿತ್ತು. ಮೂರು ಪತ್ರಗಳನ್ನು ಬದ್ರುಲ್ ಹಸನ್ ಕುಟುಂಬದ ಇತರ ಸದಸ್ಯರಿಗೆ ಬರೆಯಲಾಗಿತ್ತು. ಒಂದು ಪತ್ರ ಬದ್ರುಲ್ ಸಾವಿನ ಕುರಿತಾದದ್ದು. ಗಾಂಧೀಜಿ ಅವರ ಹತ್ಯೆಗಿಂತ ಕೇವಲ ಹತ್ತೊಂಬತ್ತು ದಿನಗಳ ಮೊದಲು ಬರೆದ ಅವರ ಕೊನೆಯ ಪತ್ರವನ್ನು ಕ್ರಿಸ್ಟಿ ಸಂಸ್ಥೆ ಹರಾಜು ಹಾಕಲು ಮುಂದಾದಾಗ ಕಳೆದ ಜುಲೈ 2 ರಂದು ಭಾರತ ಯಶಸ್ವಿಯಾಗಿ ತಡೆದಿತ್ತು. ಹಲವು ಸುತ್ತಿನ ಚರ್ಚೆಯ ನಂತರ ಇಂಡಿಯಾ ಹೌಸ್ ಆ ಪತ್ರವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. `ಉರ್ದು ಹರಿಜನ್'ಗಾಗಿ ಬರೆದ ಆ ಕೊನೆಯ ಪತ್ರದಲ್ಲಿ ಗಾಂಧೀಜಿ ಅವರು ಪರಧರ್ಮ ಸಹಿಷ್ಣುತೆಯ ಮಹತ್ವದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದರು.

2007: ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈದಿನ ವಾಷಿಂಗ್ಟನ್ನಿನಲ್ಲಿ ಸೆನೆಟ್ ಸಭೆಯನ್ನು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಿಸಲಾಯಿತು. ಕ್ರಿಸ್ತಪೂರ್ವ 1500ರ ಕಾಲದ ಪುರಾತನ ಹಿಂದು ಗ್ರಂಥ ಋಗ್ವೇದಲ್ಲಿನ ಗಾಯತ್ರಿ ಮಂತ್ರವನ್ನು ಭಾರತೀಯ ಮೂಲದ ಅಮೆರಿಕ ಪ್ರಜೆ, ಅರ್ಚಕ ರಾಜನ್ ಜೆಡ್ ಅವರು 1789ರಲ್ಲಿ ಸ್ಥಾಪನೆಯಾಗಿರುವ ಸೆನೆಟ್ ಸಭಾಂಗಣದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಪಠಿಸಿದರು. ಪೆನ್ಸಿಲ್ವೇನಿಯಾದ ಸೆನೆಟರ್ ರಾಬರ್ಟ್ ಕ್ಯಾಸೆ ಅವರು ರಾಜನ್ ಅವರನ್ನು ಪರಿಚಯಿಸಿದ ನಂತರ ಭಾರತದ ಪವಿತ್ರ ಗಂಗಾ ಜಲವನ್ನು ಸಭಾಂಗಣದ ಸುತ್ತ ಸಿಂಪಡಿಸಿ, ಗಾಯತ್ರಿ ಮಂತ್ರ ಪಠಿಸಿದರು.

2007: ರಾಷ್ಟ್ರಪತಿ ಸ್ಥಾನದ ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ ತಮ್ಮ ಹಾಗೂ ಪತ್ನಿಯ ಸ್ಥಿರ ಹಾಗೂ ಚರಾಸ್ತಿ ವಿವರಗಳನ್ನು ಬಹಿರಂಗಪಡಿಸಿದರು. ರಾಷ್ಟ್ರಪತಿ ಸ್ಥಾನದ ಸ್ಪರ್ಧಿಗಳು ಆಸ್ತಿ ವಿವರ ಪ್ರಕಟಿಸುವ ಅನಿವಾರ್ಯತೆ ಇಲ್ಲದಿದ್ದರೂ ಶೆಖಾವತ್ ಈ ಹೆಜ್ಜೆ ಇರಿಸಿದರು.

2007: ಹಿಂದಿ ಭಾಷೆಯನ್ನು ಜನಪ್ರಿಯಗೊಳಿಸುವುದು, ಸಂಯುಕ್ತ ರಾಷ್ಟ್ರ ಸಂಸ್ಥೆಯಿಂದ ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರಕಿಸುವುದು ಮತ್ತು ಭಾರತೀಯ ಸಮುದಾಯದ ಜನರಿರುವ ರಾಷ್ಟ್ರಗಳಲ್ಲಿ ಹಿಂದಿ ಕಲಿಸುವ ಮಹತ್ತರ ಉದ್ದೇಶದ ಮೂರು ದಿನಗಳ ವಿಶ್ವ ಹಿಂದಿ ಸಮ್ಮೇಳನಕ್ಕೆ ನ್ಯೂಯಾರ್ಕಿನಲ್ಲಿ ಈದಿನ ಚಾಲನೆ ನೀಡಲಾಯಿತು.

2006: ಹನ್ನೆರಡು ವರ್ಷಗಳ ಬಳಿಕ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಶ್ರಾವಣಕ್ಕೆ ಮುನ್ನವೇ ಭರ್ತಿಯಾದವು.

2006: ಗಡಿ ಘರ್ಷಣೆ ಸಂದರ್ಭದಲ್ಲಿ ತನ್ನ 8 ಯೋಧರನ್ನು ಕೊಂದು ಇಬ್ಬರು ಯೋಧರನ್ನು ಹಿಜ್ಬುಲ್ಲಾ ಗೆರಿಲ್ಲಾಗಳು ಒತ್ತೆಸೆರೆ ಹಿಡಿದ ಹಿನ್ನೆಲೆಯಲ್ಲಿ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನಿನ 27 ಮಂದಿ ಮೃತರಾದರು.

1995: ಸಿನಿಮಾ ಪತ್ರಕರ್ತೆ ದೇವಯಾನಿ ಚೌಬಾಲ್ ನಿಧನ.

1932: ರಂ.ಶಾ. ಎಂದೇ ಕನ್ನಡ ಸಾಹಿತ್ಯ ವಲಯದಲ್ಲಿ ಖ್ಯಾತರಾಗಿರುವ ರಂಗನಾಥ ಶಾಮಾಚಾರ್ಯ ಲೋಕಾಪುರ ಅವರು ಶಾಮಾಚಾರ್ಯ- ಇಂದಿರಾಬಾಯಿ ದಂಪತಿಯ ಮಗನಾಗಿ ಜಮಖಂಡಿ ತಾಲ್ಲೂಕಿನ ಹುನ್ನೂರಿನಲ್ಲಿ ಜನಿಸಿದರು.

1929: ಇಂಗ್ಲಿಷ್, ಅನುವಾದ ಸಾಹಿತ್ಯ, ಕವಿತೆ, ಭಾಷಾಶಾಸ್ತ್ರ ಮತ್ತು ಜಾನಪದ ಸೇರಿದಂತೆ ಭಾರತೀಯ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಎ.ಕೆ. ರಾಮಾನುಜನ್ ಅವರು ಈದಿನ ಮೈಸೂರಿನಲ್ಲಿ ಜನಿಸಿದರು.

1907: ಸಾಹಿತಿ ಕಡಿದಾಳ್ ಮಂಜಪ್ಪ ಜನನ.

1905: ಖ್ಯಾತ ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರ ಪ್ರೇಮನಾಥ ಬಜಾಜ್ ಜನನ

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement