My Blog List

Tuesday, July 21, 2009

ಇಂದಿನ ಇತಿಹಾಸ History Today ಜುಲೈ 18

ಇಂದಿನ ಇತಿಹಾಸ

ಜುಲೈ 18

ಅಮೆರಿಕದಲ್ಲಿ ಯಶಸ್ವಿ ಪ್ರವಾಸದ ನಂತರ ಈಗ ಬ್ರಿಟನ್ ಗೆ ಬಂದ ಭಾರತದ ಹೆಸರಾಂತ ಯೋಗ ಗುರು ಸ್ವಾಮಿ ರಾಮದೇವ್ ಅವರು ಲಂಡನ್ನಿನ ಕಾಮನ್ಸ್ ಸಭಾಂಗಣದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರು ಮತ್ತು ಗಣ್ಯರಿಗಾಗಿ ವಿಶೇಷ ಯೋಗ ಪ್ರದರ್ಶನ ನೀಡಿದರು. 30 ನಿಮಿಷಗಳ ಅವಧಿಯ ಕಾರ್ಯಕ್ರಮದಲ್ಲಿ ಅವರು ಯೋಗದ ವೈಜ್ಞಾನಿಕ ಮಹತ್ವ ಮತ್ತು ಉಪಯುಕ್ತತೆ, ಸಸ್ಯಹಾರ, ವೇದ ಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.

2008: ನಟ- ನಿರ್ಮಾಪಕ ಎಂ.ಪಿ.ಶಂಕರ್ ಅವರ ಅಂತ್ಯಕ್ರಿಯೆ ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ನಡೆಯಿತು. ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಉಪ ಪೊಲೀಸ್ ಆಯುಕ್ತ ಡಿ'ಸೋಜಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ಗೌರವ ಸಲ್ಲಿಸಿದರು.

2007: 1993ರ ಮುಂಬೈ ಸರಣಿ ಸ್ಫೋಟದ ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು ಮುಂಬೈ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಸ್ಫೋಟಕಗಳನ್ನು ಇರಿಸಿದ್ದ ಮೂವರು ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸಿತು. 1993ರ ಮಾರ್ಚ್ 12ರಂದು ಸ್ಫೋಟಕಗಳು ತುಂಬಿದ್ದ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಕ್ಕಾಗಿ ಅಬ್ದುಲ್ ಗನಿ ಇಸ್ಮಾಯಿಲ್ ಟರ್ಕ್, ಪರ್ವೇಜ್ ಶೇಕ್ ಹಾಗೂ ಮೊಹಮ್ಮದ್ ಮುಷ್ತಾಕ್ ತರಾನಿಗೆ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ಮರಣ ದಂಡನೆ ವಿಧಿಸಿದರು.
ಶಿಕ್ಷಿತರಲ್ಲಿ ಒಬ್ಬನಾದ ಅಬ್ದುಲ್ ಗನಿ ಟರ್ಕ್ ಪ್ರಕರಣದ ಮುಖ್ಯ ಆರೋಪಿ ಟೈಗರ್ ಮೆಮನ್ನ ಉದ್ಯೋಗಿಯಾಗಿದ್ದ. ವರ್ಲಿಯ ಸೆಂಚುರಿ ಬಜಾರಿನಲ್ಲಿ ಆತ ನಿಲ್ಲಿಸಿದ್ದ ಆರ್ಡಿಎಕ್ಸ್ ತುಂಬಿದ ಜೀಪ್ ಸ್ಫೋಟಗೊಂಡಾಗ 113 ಜನ ಮೃತರಾಗಿ, 227 ಜನರಿಗೆ ಗಾಯಗೊಂಡಿದ್ದರು. ಸರಣಿ ಸ್ಫೋಟಕ್ಕಾಗಿ ಸಂಚು ನಡೆಸಲು ದುಬೈ ಹಾಗೂ ಮುಂಬೈಯಲ್ಲಿ ನಡೆದ ಸಭೆಗಳಲ್ಲೂ ಟರ್ಕ್ ಪಾಲ್ಗೊಂಡಿದ್ದ. ಶಸ್ತ್ರಾಸ್ತ್ರಗಳ ಬಳಕೆಗಾಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ಪರ್ವೇಜ್ ಶೇಕ್, ಕಾಥಾ ಬಜಾರಿನಲ್ಲಿ ಆರ್ ಡಿ ಎಕ್ಸ್ ತುಂಬಿದ್ದ ಸ್ಕೂಟರ್ ನಿಲ್ಲಿಸಿದ್ದ. ಇದು ನಾಲ್ಕು ಜನರನ್ನು ಬಲಿ ತೆಗೆದುಕೊಂಡಿತ್ತು. ದಕ್ಷಿಣ ಮುಂಬೈನ ಶೇಖ್ ಮೆಮನ್ ಸ್ಟ್ರೀಟಿನಲ್ಲಿ ಸ್ಫೋಟಕ ತುಂಬಿದ ವಾಹನ ಇರಿಸಿದ್ದಕ್ಕೆ ಹಾಗೂ ಸೆಂಟಾರ್ ಹೋಟೆಲಿನಲ್ಲಿ ಸೂಟ್ಕೇಸ್ ಬಾಂಬ್ ಇರಿಸಿದ್ದಕ್ಕಾಗಿ ಮೊಹಮ್ಮದ್ ಮುಷ್ತಾಕ್ ತರಾನಿಗೆ ಮರಣ ದಂಡನೆ ವಿಧಿಸಲಾಯಿತು. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ 100 ಜನರಲ್ಲಿ ನ್ಯಾಯಾಲಯ ಈವರೆಗೆ 81 ಜನರಿಗೆ ಶಿಕ್ಷೆ ವಿಧಿಸಿತು. ಇವರಲ್ಲಿ 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2007: ಬ್ರೆಜಿಲ್ನ ಅತ್ಯಂತ ದಟ್ಟಣೆಯ ಸಾವೊಪಾಲೊದ ಕೊಂಗೊನ್ಹಾಸ್ ನಿಲ್ದಾಣದ ರನ್ವೇ ಬಳಿ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 200 ಜನ ಮೃತರಾದರು. ಅಸು ನೀಗಿದವರಲ್ಲಿ ಆರು ಜನ ಚಾಲಕ ಸಿಬ್ಬಂದಿ ಮತ್ತು 170 ಪ್ರಯಾಣಿಕರು. ಇನ್ನುಳಿದವರು ರನ್ವೇ ಅಕ್ಕಪಕ್ಕದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದವರು. ಬ್ರೆಜಿಲ್ ನಲ್ಲಿ ಒಂದು ವರ್ಷದಲ್ಲಿ ಇದು ಎರಡನೇ ಅತಿ ದೊಡ್ಡ ವಿಮಾನ ದುರ್ಘಟನೆ. 2006ರ ಸೆಪ್ಟೆಂಬರಿನಲ್ಲಿ ಅಮೆಜಾನ್ ಕಾಡಿನಲ್ಲಿ ಸಣ್ಣ ವಿಮಾನವೊಂದಕ್ಕೆ ಪ್ರಯಾಣಿಕ ವಿಮಾನ ಡಿಕ್ಕಿ ಹೊಡೆದು 154 ಜನ ಮೃತರಾಗಿದ್ದರು.

2007: ಮುಂಬೈ ನಗರದ ಬೊರಿವಲಿ ಪ್ರದೇಶದಲ್ಲಿನ ಏಳು ಮಹಡಿಗಳ ಕಟ್ಟಡವೊಂದು ಕುಸಿದು ಕನಿಷ್ಠ ಏಳು ಜನ ಮೃತರಾಗಿ ಅದರ ಅವಶೇಷದಡಿ ಕನಿಷ್ಠ ನೂರು ಜನ ಸಿಲುಕಿದರು. ವಾಣಿಜ್ಯ ಸಮುಚ್ಛಯವಿರುವ ಈ `ಲಕ್ಷ್ಮಿ ಛಾಯಾ' ಕಟ್ಟಡದಲ್ಲಿ 35 ಮನೆಗಳಿದ್ದವು.

2007: ಬೆಂಗಳೂರಿನ ಬಸವನಗುಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಎರಡನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುಕೆಜಿ ವಿದ್ಯಾರ್ಥಿ ಎ. ಸೋನಿಯಾ ಸಿಂಗ್ (5) ಈದಿನ ರಾತ್ರಿ ಆಸ್ಪತ್ರೆಯಲ್ಲಿ ಮೃತಳಾದಳು. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಎರಡನೇ ಮಹಡಿಯಲ್ಲಿ ಸೋನಿಯಾಳನ್ನು ಆವರಣ ಗೋಡೆಯ ಮೇಲೆ ಕುಳ್ಳಿರಿಸಿ ಮುದ್ದು ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದ ಕಾರಣ ಈ ದುರಂತ ಸಂಭವಿಸಿತ್ತು.

2007: ಎನ್ ಡಿಎ ಕಾಲದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ರೂ.14,500 ಕೋಟಿ ಸಾಲಕ್ಕೆ ಸಂಬಂಧಿಸಿದಂತೆ ಹುಡ್ಕೊ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ದಳ (ಸಿವಿಸಿ) ನೀಡಿದ ವರದಿ ಆಧಾರದಲ್ಲಿ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ತಮ್ಮ ಅಧಿಕಾರ ಮತ್ತು ಇಲಾಖೆಯ ನಿಯಮಾವಳಿಗಳನ್ನು ಮೀರಿ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಸಿವಿಸಿ ವರದಿ ಹೇಳಿತ್ತು. ಆ ಕಾಲದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ವಿಚಾರದಲ್ಲಿ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬಹುದು ಎಂದೂ ಸಿವಿಸಿ ನ್ಯಾಯಾಲಯಕ್ಕೆ ತಿಳಿಸಿತ್ತು. ಹುಡ್ಕೊ ಸುಮಾರು ರೂ.14,500 ಕೋಟಿ ಸಾಲ ನೀಡಿರುವ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕೇಂದ್ರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿವಿಸಿಗೆ ಸೂಚನೆ ನೀಡಿತ್ತು.

2007: ಸಾಂಸ್ಕೃತಿಕ ವೈವಿಧ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಭಾರತೀಯ ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ಲೀಡ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಭಾರತೀಯ ಚಿತ್ರರಂಗದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿರುವ ವಿಶೇಷ ವ್ಯಕ್ತಿಗಳಿಗೆ ನೀಡುವ ಈ ಪದವಿಯನ್ನು ಈ ಬಾರಿ ಮಂಗಳೂರು ಬೆಡಗಿ 32 ವರ್ಷದ ನಟಿ ಶಿಲ್ಪಾಶೆಟ್ಟಿ ಅವರಿಗೆ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ವಕ್ತಾರರು ಪ್ರಕಟಿಸಿದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ನಟಿ ಶಬನಾ ಅಜ್ಮಿ, ನಿರ್ಮಾಪಕ ಯಶ್ಚೋಪ್ರ ಅವರಿಗೆ ಇದೇ ವಿವಿ ಈ ಹಿಂದೆ ಗೌರವ ಡಾಕ್ಟರೇಟ್ ನೀಡಿತ್ತು.

2007: ಅಮೆರಿಕದಲ್ಲಿ ಯಶಸ್ವಿ ಪ್ರವಾಸದ ನಂತರ ಈಗ ಬ್ರಿಟನ್ ಗೆ ಬಂದ ಭಾರತದ ಹೆಸರಾಂತ ಯೋಗ ಗುರು ಸ್ವಾಮಿ ರಾಮದೇವ್ ಅವರು ಲಂಡನ್ನಿನ ಕಾಮನ್ಸ್ ಸಭಾಂಗಣದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರು ಮತ್ತು ಗಣ್ಯರಿಗಾಗಿ ವಿಶೇಷ ಯೋಗ ಪ್ರದರ್ಶನ ನೀಡಿದರು. 30 ನಿಮಿಷಗಳ ಅವಧಿಯ ಕಾರ್ಯಕ್ರಮದಲ್ಲಿ ಅವರು ಯೋಗದ ವೈಜ್ಞಾನಿಕ ಮಹತ್ವ ಮತ್ತು ಉಪಯುಕ್ತತೆ, ಸಸ್ಯಹಾರ, ವೇದ ಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.

2006: ಯಕ್ಷಗಾನದ ಮಹಾನ್ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ (88) ಅವರು ಕಾಸರಗೋಡಿನಲ್ಲಿ ನಿಧನರಾದರು. ಹರಿಕಥೆಯಲ್ಲೂ ಅಗಾಧ ಪಾಂಡಿತ್ಯ ಪ್ರತಿಭೆ ಪ್ರದರ್ಶಿಸಿದ್ದ ಅವರು ಯಕ್ಷಗಾನದಲ್ಲಿ `ಮಾತಿನ ಮಹಾಕವಿ' ಎನಿಸಿದ್ದರು. 1918ರ ಏಪ್ರಿಲ್ 7ರಂದು ಕಾಸರಗೋಡು ಜಿಲ್ಲೆಯ ಬೇಳ ಉಬ್ಬಾನದಲ್ಲಿ ನಾರಾಯಣ ಭಟ್- ಲಕ್ಷ್ಮೀ ಅಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಅವರು ಯಕ್ಷಗಾನ ಬಯಲಾಟ, ತಾಳಮದ್ದಲೆ ಅರ್ಥಧಾರಿ, ಹರಿದಾಸರಾಗಿ ಪ್ರಸಿದ್ಧಿ ಪಡೆದ್ದಿದರು. ಶೇಣಿಯವರ ವಾಲಿ, ರಾವಣ, ಮಾಗಧ, ಬಪ್ಪಬ್ಯಾರಿ, ಮಾಧವ ಭಟ್ಟ, ಚಂದಗೋಪ, ತುಘಲಕ್ ಮುಂತಾದ ಪಾತ್ರಗಳು ಮನೆಮಾತಾಗಿದ್ದವು. 1990ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, 1993ರಲ್ಲಿ ಶ್ರೀ ಶೃಂಗೇರಿ ಜಗದ್ಗುರು ಪೀಠದಿಂದ ಯಕ್ಷಗಾನ ಕಲಾ ತಿಲಕ ಬಿರುದು ಸಹಿತ ಅನೇಕ ಪ್ರಶಸ್ತಿ - ಪುರಸ್ಕಾರಗಳು ಅವರಿಗೆ ಸಂದಿವೆ. ಮಂಗಳೂರು ವಿಶ್ವವಿದ್ಯಾಲಯವು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಕಾಣಿಕೆಗಾಗಿ ಶೇಣಿ ಅವರಿಗೆ 2005ರ ಜನವರಿಯಲ್ಲಿ `ಗೌರವ ಡಾಕ್ಟರೇಟ್' ಪ್ರದಾನ ಮಾಡಿತ್ತು.

2006: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಧಾನಸಭಾಧ್ಯಕ್ಷ ಕೃಷ್ಣ ಅದನ್ನು ತತ್ಕ್ಷಣ ಅಂಗೀಕರಿಸಿದರು.

2006: ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ವಿ.ಪಿ. ಸತ್ಯನ್ ಚೆನ್ನೆ ಹೊರವಲಯದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. 1993ರಲ್ಲಿ ಅವರಿಗೆ ಭಾರತದ ಅತ್ಯುತ್ತಮ ಫುಟ್ಬಾಲ್ ಪಟು ಗೌರವ ಲಭಿಸಿತ್ತು. 1980ರಿಂದ 15 ವರ್ಷಗಳ ಕಾಲ ಭಾರತೀಯ ಫುಟ್ಬಾಲ್ ತಂಡವನ್ನು ಅವರು ಪ್ರತಿನಿಧಿಸಿದ್ದರು.

2006: ರಾಜೀವ್ಗಾಂಧಿ ಕೊಲೆ ಪ್ರಕರಣದ ಅಪರಾಧಿಗಳಾದ ಮುರುಗನ್ ಮತ್ತು ನಳಿನಿ ತಮ್ಮ ಪುತ್ರಿ ಚರಿತ್ರಾಗೆ ಉನ್ನತ ಶಿಕ್ಷಣದ ಸಲುವಾಗಿ ಭಾರತೀಯ ವೀಸಾ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ 24 ದಿನಗಳ ನಿರಶನವನ್ನು ಈ ದಿನ ಅಂತ್ಯಗೊಳಿಸಿದರು.

1980: ಭಾರತದ ಮೊದಲ ಉಪಗ್ರಹ ವಾಹಕ ನೌಕೆ ಎಸ್ ಎಲ್ ವಿ -3 ರೋಹಿಣಿ ಉಪಗ್ರಹವನ್ನು ಗಗನಕ್ಕೆ ಹೊತ್ತೊಯ್ದಿತು.

1971: ರಾಧಾಕೃಷ್ಣ ಬೆಳ್ಳೂರು ಜನನ.

1946: ಶಿಕ್ಷಕಿ, ಮಾರ್ಗದರ್ಶಿ, ಸಾಹಿತಿ ಪ್ರಮೀಳಮ್ಮ ಅವರು ಸಿದ್ದರಾಮಯ್ಯ- ಗುರುಸಿದ್ದಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು.

1936: ಸ್ಪೇನ್ನಲ್ಲಿ ಅಂತರ್ಯುದ್ಧ ಆರಂಭ.

1918: ನೆಲ್ಸನ್ ಮಂಡೇಲಾ ಜನನ.

1829 ಅನ್ವೇಷಕ ಥಾಮಸ್ ಕುಕ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement