My Blog List

Saturday, July 25, 2009

ಇಂದಿನ ಇತಿಹಾಸ History Today ಜುಲೈ 23

ಇಂದಿನ ಇತಿಹಾಸ

ಜುಲೈ 23

ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರು. ಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರು. ದೊರೆ ಆಗ ದೇಶದಲ್ಲಿ ಇರಲಿಲ್ಲ. ಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರು. ದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರು.

2008: ಅಣು ಒಪ್ಪಂದ ವಿಷಯದಲ್ಲಿ ಎಡಪಕ್ಷಗಳನ್ನು ಬೆಂಬಲಿಸದೇ ನಿಷ್ಪಕ್ಷಪಾತವಾಗಿ ನಡೆದುಕೊಂಡ ಕಾರಣಕ್ಕೆ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಕೊನೆಗೂ ತಲೆದಂಡ ತೆತ್ತರು. ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಸಿಪಿಎಂ, ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಸುಮಾರು 40 ವರ್ಷಗಳಿಂದ ಸಿಪಿಎಂನಲ್ಲಿದ್ದು, 10 ಬಾರಿ ಸಂಸದರಾಗಿ ಆಯ್ಕೆಯಾದ ಚಟರ್ಜಿ, ತಮ್ಮ 79 ನೇ ಜನ್ಮದಿನ ಆಚರಣೆಗೆ ಎರಡು ದಿನ ಮೊದಲು ಪಕ್ಷದಿಂದ ಉಚ್ಚಾಟಿತರಾದರು.

2007: ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10 ರಂದು ನಡೆಯುವ ಚುನಾವಣೆಗಾಗಿ ಯುಪಿಎ ಹಾಗೂ ಎಡಪಕ್ಷ ಬೆಂಬಲಿತ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಮೊಹ್ಮದ್ ಹಮೀದ್ ಅನ್ಸಾರಿ ಹಾಗೂ ಎನ್ ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಅವರು ನಾಮಪತ್ರ ಸಲ್ಲಿಸಿದರು. ಉಭಯ ಸ್ಪರ್ಧಿಗಳೂ ತಮ್ಮ ತಮ್ಮ ಪಕ್ಷಗಳ ಮುಖಂಡರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿ ಯೋಗೇಂದ್ರ ನಾರಾಯಣ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

2007: ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರು. ಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರು. ದೊರೆ ಆಗ ದೇಶದಲ್ಲಿ ಇರಲಿಲ್ಲ. ಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರು. ದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರು.
ಮತ್ತೆ ಅವರು ದೇಶಕ್ಕೆ ವಾಪಸಾದದ್ದು ತಾಲಿಬಾನ್ ಆಡಳಿತ ಅಂತ್ಯಗೊಂಡ (2001) ಹಲವು ತಿಂಗಳುಗಳ ನಂತರ. ಸುಮಾರು 29 ವರ್ಷಗಳ ನಂತರ ದೇಶಕ್ಕೆ ವಾಪಸಾದ ಅವರನ್ನು ಆಫ್ಘನ್ನಿನ ಹೊಸ ಸರ್ಕಾರ `ರಾಷ್ಟ್ರಪಿತ' ಎಂಬ ಬಿರುದು ನೀಡಿ ಗೌರವಿಸಿತಷ್ಟೆ ಅಲ್ಲ, ದೊರೆ ಆಳಿದ 40 ವರ್ಷಗಳ ಕಾಲ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿತ್ತು ಎಂದು ಬಣ್ಣಿಸಿತು. ದೊರೆ ದೇಶಕ್ಕೆ ವಾಪಸಾದ ಕೆಲ ದಿನಗಳ ನಂತರ 2002ರಲ್ಲಿ ಅವರ ಪತ್ನಿ ಹೊಮೈರಾ ಸಹ ದೇಶಕ್ಕೆ ವಾಪಸಾಗಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ನಿಧನ ಹೊಂದಿದರು.

2007: ಮಾಜಿ ನಟಿ, ಭೂಗತ ದೊರೆ ಅಬು ಸಲೇಮ್ ಪ್ರೇಯಸಿ ಮೋನಿಕಾ ಬೇಡಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತು. ನಕಲಿ ಪಾಸ್ಪೋರ್ಟ್ ಸಂಬಂಧದಲ್ಲಿ ಆಕೆಗೆ ಆಂಧ್ರಪ್ರದೇಶ ಹೈಕೋರ್ಟ್ ಮೂರು ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಆದರೆ ಮುಂಬೈ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ 1999 ಜೂನ್ 24ರಂದು ನೀಡಿದ್ದ ಪಾಸ್ಪೋರ್ಟ್ ಕಳೆದು ಹೋಗಿದೆ. ಹೀಗಾಗಿ ಅದನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಆಕೆಯ ತಂದೆ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಪಾಸ್ಪೋರ್ಟ್ ರದ್ದು ಪಡಿಸಿ, ಜಾಮೀನಿನ ಮೇಲೆ ಬೇಡಿ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

2007: ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ `ಆನು ದೇವಾ ಹೊರಗಣವನು...' ಕೃತಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಎಚ್. ಎಸ್. ಮಹದೇವಪ್ರಸಾದ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ನವದೆಹಲಿಯಲ್ಲಿ ನಡೆದ ಎಂಟನೆಯ ಏಷ್ಯಾ ಸಿನೆಮಾ ಉತ್ಸವದ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ `ಸುದ್ದ' (ತಿಥಿ) ತುಳು ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಕನ್ನಡ ಚಲನ ಚಿತ್ರವು ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡವು.

2006: ಭಾರತದ ಮೊತ್ತ ಮೊದಲ ಬೌದ್ಧಿಕ ಆಸ್ತಿಗಳ ಹಕ್ಕು ಶಾಲೆ (Intellectual Property Right School) ಈದಿನ ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಆರಂಭಗೊಂಡಿತು.

2006: ಆರು ವರ್ಷದ `ಬೆತ್ತಲೆ ರಾಜಕುಮಾರ' ಪ್ರಿನ್ಸ್ ಈದಿನ ಸಂಜೆ 7.45ಕ್ಕೆ ಶ್ವೇತವಸ್ತ್ರ ಸುತ್ತಿಕೊಂಡು ಸೈನಿಕನ ಬೆಚ್ಚನೆಯ ತೋಳಿನ ಮೂಲಕ 60 ಅಡಿ ಆಳದ ಕೊಳವೆಬಾವಿಯ ಒಳಗಿನಿಂದ ಹೊರಕ್ಕೆ ಬಂದ. ಹರಿಯಾಣದ ಕುರುಕ್ಷೇತ್ರ ಬಳಿಯ ಹಲ್ವೇರಿ ಗ್ರಾಮದಲ್ಲಿ ಜುಲೈ 21ರಂದು ಆಕಸ್ಮಿಕವಾಗಿ ಈ ಕೊಳವೆ ಬಾವಿಯೊಳಕ್ಕೆ ಬಿದ್ದ ಪ್ರಿನ್ಸ್ 49 ಗಂಟೆಗಳ ಕಾಲ ಅದರೊಳಗೆ ಜವರಾಯನ ಜೊತೆಗೆ ಹೋರಾಟ ನಡೆಸಿದ್ದ. ಕೊಳವೆ ಬಾವಿಯಿಂದ 10 ಅಡಿ ದೂರದಲ್ಲಿ ಇನ್ನೊಂದು ಬಾವಿ ತೋಡಿ ಅದರ ಮೂಲಕ ಇಳಿದು ಅದಕ್ಕೆ ಅಡ್ಡ ಸುರಂಗ ಕೊರೆದು ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

2006: ಆಂಧ್ರಪ್ರದೇಶದ ಜಲ್ಲಮಲ್ಲ ಅರಣ್ಯದಲ್ಲಿ ಈದಿನ ನಸುಕಿನಲ್ಲಿ ನಡೆದ ಘರ್ಷಣೆಯಲ್ಲಿ ಮಾವೋವಾದಿ ನಕ್ಸಲೀಯರ ಉನ್ನತ ನಾಯಕ ಮಾಧವನನ್ನು ಪೊಲೀಸರು ಕೊಂದು ಹಾಕಿದರು. ಘರ್ಷಣೆಯಲ್ಲಿ ಐವರು ಮಹಿಳೆಯರು ಸೇರಿ 7 ಜನ ಅಸು ನೀಗಿದರು.
1981: ಇಂದಿರಾಗಾಂಧಿ ಅವರು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷವೇ `ನಿಜ'ವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಈದಿನ ಮಾನ್ಯತೆ ನೀಡಿದ ಚುನಾವಣಾ ಆಯೋಗವು ದೇವರಾಜ ಅರಸು ಅಧ್ಯಕ್ಷೆಯ ಪಕ್ಷದ ಮಾನ್ಯತೆಯನ್ನು ರದ್ದು ಮಾಡಿತು.

1948: ಭಾಗೀರಥಿ ಹೆಗಡೆ ಜನನ.

1936: ಸಾಹಿತಿ ವೆಂಕಟೇಶ ಕುಲಕರ್ಣಿ ಜನನ.

1930: ರತ್ನಮ್ಮ ಸುಂದರರಾವ್ ಜನನ.

1908: ನವೋದಯ ಕಾಲದ ಪ್ರತಿಭಾನ್ವಿತ ಕವಿ ಗಣಪತಿ ರಾವ್ ಪಾಂಡೇಶ್ವರ ಅವರು ರಾಮಚಂದ್ರರಾಯ- ಸೀತಮ್ಮ ದಂಪತಿಯ ಪುತ್ರನಾಗಿ ಬ್ರಹ್ಮಾವರದಲ್ಲಿ ಜನಿಸಿದರು. ಮುಳಿಯ ತಿಮ್ಮಪ್ಪಯ್ಯ, ಐರೋಡಿ ಶಿವರಾಮಯ್ಯ ಅವರ ಶಿಷ್ಯರಾಗಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಮೂರೂ ಭಾಷೆಗಳಲ್ಲಿ ಸಮಾನ ವಿದ್ವತ್ ಗಳಿಸಿದ್ದ ಪಾಂಡೇಶ್ವರ 17ರ ಹರೆಯದಲ್ಲೇ `ವಿವೇಕಾನಂದ ಚರಿತಂ' ಕವನ ಬರೆದು ಖ್ಯಾತಿ ಪಡೆದಿದ್ದರು.

1906: ಹದಿಹರೆಯದಲ್ಲೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಮಧ್ಯಪ್ರದೇಶದ ಝಾಬ್ರಾದಲ್ಲಿ ಈದಿನ ಜನಿಸಿದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣತೆತ್ತ ಆಜಾದ್ ಸ್ವಾತಂತ್ರ್ಯ ಕಲಿಗಳಿಗೆ ಆದರ್ಶಪ್ರಾಯರಾದರು.

1856: ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯ ಹಾಕಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಪಂಡಿತ, ಗಣಿತಜ್ಞ, ತತ್ವಜ್ಞಾನಿ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಈ ದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement