My Blog List

Thursday, July 23, 2009

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 32: ಮೋಕ್ಷ

ಸಾಧನೆ ದೂರದ ನಾಡಿಗೆ ಹೋದಾಗಲೇ, ಬದುಕಿನ ಅಂತ್ಯ ಸಮೀಪಿಸಿದಾಗಲೇ ಸಾಧ್ಯವಾಗುತ್ತದೆ ಎಂಬ ಅಸಡ್ಡೆ ಬೇಡ. ಬದುಕನ್ನು ಸುಂದರವಾಗಿಸುವ, ಬದುಕಿಗೊಂದು ಅರ್ಥ ಕಲ್ಪಿಸುವ ಸಾಮರ್ಥ್ಯ ಅದಕ್ಕಿದೆ.

ಮೋಕ್ಷಕ್ಕೆ ಎತ್ತರದ ಸ್ಥಾನ. ಮೋಕ್ಷದ ಸಾಧನೆಯ ಮುಂದೆ ಎಲ್ಲವೂ ತೃಣ ಸಮಾನ. ಉಳಿದವುಗಳ ಬಗೆಗೆ ತಾತ್ಸಾರವಿಲ್ಲ. ವಾಸ್ತವದಲ್ಲಿ ಇರುವುದೇ ಹಾಗೆ.

ಅದರ ಸಾಧನೆಗೆ ಎಲ್ಲವನ್ನೂ ಬಿಟ್ಟು ಕಾವಿಯನ್ನೇ ತೊಡಬೇಕು, ಕಾಡಿಗೆ ಹೋಗಲೇಬೇಕು, ಹಿಮಾಲಯವನ್ನು ಹತ್ತದ ವಿನಾ ಸಾಧ್ಯವಿಲ್ಲ ಎಂದೇನೂ ಇಲ್ಲ. ಕೆಲವರಿಗೆ ಕಾವಿಯನ್ನು ತೊಡುವ, ಕಾಡಿಗೆ ಹೋಗಿ, ಹಿಮಾಲಯವನ್ನು ಹತ್ತುವ ಅವಕಾಶ ಸಹಜವಾಗಿ ಒದಗಿ ಬರುತ್ತದೆ ಮತ್ತದು ಅವರ ಶರೀರ ಪ್ರಕೃತಿಗೆ ಹೊಂದಿಕೆಯಾಗುವುದರಿಂದ ಅವರ ಸಾಧನೆ ಸುಲಭವಾಗಿ ಮುನ್ನಡೆಯುತ್ತದೆ.
ಆ ಎಲ್ಲ ಸನ್ನಿವೇಶಗಳು ಒದಗಿಬರದೇ ಕುಟುಂಬ ಜೀವನದಲ್ಲಿ ಆಹ್ಲಾದಕರವಾಗಿ ಬದುಕುವವರಿಗೆ ಮೋಕ್ಷ ಸಾಧ್ಯವಿಲ್ಲವೇ ? ಪ್ರಶ್ನೆ ಬರದಿರದು. ಆಧ್ಯಾತ್ಮ ಎಂದರೆ ಏನೋ ಒಂದು ಭಯಂಕರ ಎಂದು ಬಿಂಬಿಸುವ ಪರಿಸರದಲ್ಲಿ ಪ್ರಶ್ನೆ ಮಾತ್ರ ಅಲ್ಲ ಆತಂಕವೂ ಉಂಟಾಗುತ್ತದೆ. ಜೀವಿತದ ಏರು ಗತಿಯಲ್ಲಿ ಗೊತ್ತಾಗುವುದಿಲ್ಲ. ಬದುಕಿನಲ್ಲಿ ಸೋತಾಗ, ಸಾವಿಗೆ ಹೆದರಿಕೊಂಡಾಗ ಏನೋ ಒಂದೆಂಬ ಅಧ್ಯಾತ್ಮಕ್ಕೆ ದಾಸರಾಗುವುದು ಅನಿವಾರ್ಯವಾಗುತ್ತದೆ.

ಆದರೆ, ಹೆದರದ, ಮೋಕ್ಷವನ್ನೇ ಪ್ರೇಮಿಸುವ ಭಕ್ತನೊಬ್ಬ "ದಿವಿವಾ ಭುವಿವಾ ಮಮಾಸ್ತು ವಾಸಃ - ಸ್ವರ್ಗದಲ್ಲಾಗಲೀ, ಭೂಮಿಯಲ್ಲಾಗಲೀ ; ನರಕೇ ವಾ - ನರಕದಲ್ಲೇ ಆಗಲಿ ; ಅವದೀರಿತ ಶಾರದಾರವಿಂದೌ - ಶರತ್ಕಾಲದ ಕಮಲವನ್ನು ಮೀರಿಸತಕ್ಕಂತಹ ನಿನ್ನ ಪಾದ ಕಮಲಗಳಲ್ಲಿ ನನ್ನ ಭಕ್ತಿ, ಮನಸ್ಸು ಅಚಲವಾಗಿರಲಿ, ನಿನ್ನೊಟ್ಟಿಗೆ ಮೈತ್ರಿ ಎಂದೆಂದಿಗೂ ಇರಲಿ" ಎಂದು ಈ ಪ್ರಕೃತಿ ಮಹಾಶಕ್ತಿಯನ್ನು ಪ್ರಾರ್ಥಿಸುತ್ತಾನೆ.

ಅಂದರೆ ಮೋಕ್ಷವೆಂದರೆ ನಾವೆಲ್ಲಿದ್ದೇವೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ನಮಗೆ ಹೇಗೆ ನೋಡಲು ಬರುತ್ತದೆ, ಆ ನೋಟದ ವ್ಯಾಪಕತೆ ಎಷ್ಟು ಎನ್ನುವುದರ ಮೇಲೆ ಮೋಕ್ಷದ ಜೀವ ನಿಂತಿದೆ.

ಆದ್ದರಿಂದ ಅದರ ಸಾಧನೆ ದೂರದ ನಾಡಿಗೆ ಹೋದಾಗಲೇ, ಬದುಕಿನ ಅಂತ್ಯ ಸಮೀಪಿಸಿದಾಗಲೇ ಸಾಧ್ಯವಾಗುತ್ತದೆ ಎಂಬ ಅಸಡ್ಡೆ ಬೇಡ. ಬದುಕನ್ನು ಸುಂದರವಾಗಿಸುವ, ಬದುಕಿಗೊಂದು ಅರ್ಥ ಕಲ್ಪಿಸುವ ಸಾಮರ್ಥ್ಯ ಅದಕ್ಕಿದೆ. ನಮ್ಮ ಉಸಿರಿನಲ್ಲಿಯೇ ಅದಿದೆ. ಗ್ರಹಿಸೋಣ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ


No comments:

Advertisement