Sunday, July 26, 2009

ಇಂದಿನ ಇತಿಹಾಸ History Today ಜುಲೈ 25

ಇಂದಿನ ಇತಿಹಾಸ

ಜುಲೈ 25

ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಎ. ಥಾನು ನಿಧನ.

2008: ಮಳೆ ಬರುವ ಮತ್ತು ಮೋಡ ಕವಿದ ವಾತಾವರಣದಿಂದ ಮಂಕಾಗಿದ್ದ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಒಂಬತ್ತು ಬಾಂಬ್ಗಳು ಸ್ಫೋಟಿಸಿ ನಾಗರಿಕರನ್ನು ಬೆಚ್ಚಿ ಬೀಳಿಸಿದವು. ಸರಣಿ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಳಾಗಿ, ಎಂಟು ಮಂದಿ ಗಾಯಗೊಂಡರು.

2007: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಈದಿನ ಮಧ್ಯಾಹ್ನ ಅಧಿಕಾರ ಸ್ವೀಕರಿಸುವ ಮೂಲಕ 72 ವರ್ಷದ ಪ್ರತಿಭಾ ಪಾಟೀಲ್ ನೂತನ ಇತಿಹಾಸ ಸೃಷ್ಟಿಸಿದರು. ದೆಹಲಿಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಹನ್ನೆರಡನೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಇಂಗ್ಲಿಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರತಿಭಾ ಅವರು ಎಪಿಜೆ ಅಬ್ದುಲ್ ಕಲಾಂ ಜೊತೆ ಕುರ್ಚಿ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ 21 ಕುಶಾಲುತೋಪುಗಳನ್ನು ಹಾರಿಸಲಾಯಿತು.

2007: ಭಾರತ- ಅಮೆರಿಕ ಪರಮಾಣು ಒಪ್ಪಂದವನ್ನು ಜಾರಿಗೆ ತರಲು ಅನುವಾಗುವ 123ನೇ ಒಡಂಬಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ರಾಜಕೀಯ ವ್ಯವಹಾರ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಗಳ ಜಂಟಿ ಸಭೆಯಲ್ಲಿ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಯಿತು. ಹಿಂದಿನ ವಾರ ವಾಷಿಂಗ್ಟನ್ನಿನಲ್ಲಿ ನಡೆದ ಉಭಯ ದೇಶಗಳ ಅಧಿಕಾರಿ ಮಟ್ಟದ ಉನ್ನತ ಸಭೆಯಲ್ಲಿ ಈ ಒಡಂಬಡಿಕೆಯ ಕರಡು ಸಿದ್ಧಪಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಚಿವರಾದ ಎ.ಕೆ. ಆಂಟನಿ, ಪ್ರಣವ್ ಮುಖರ್ಜಿ, ಶಿವರಾಜ ಪಾಟೀಲ್, ಪಿ. ಚಿದಂಬರಂ, ಶರದ್ ಪವಾರ್, ಲಾಲೂ ಪ್ರಸಾದ್ ಮತ್ತು ಟಿ.ಆರ್. ಬಾಲು ಭಾಗವಹಿಸಿದ್ದರು. ಇದರೊಂದಿಗೆ ಭಾರತ ಮತ್ತು ಅಮೆರಿಕ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಗಳಿಗೆ ತೆರೆ ಬಿದ್ದಿತು.

2007: ಬದುಕಿನಲ್ಲಿ ಸರಳವಾದದ್ದೆಲ್ಲವನ್ನೂ ಪ್ರೀತಿಸುವ `ಕ್ಷಿಪಣಿ ಮನುಷ್ಯ' ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಭವ್ಯವಾದ ಬೀಳ್ಕೊಡುಗೆ ನೀಡಲಾಯಿತು. 300 ಕೊಠಡಿಗಳ ಭವ್ಯ ಭವನದಲ್ಲಿ 5 ವರ್ಷ ಕಳೆದ ಕಲಾಂ ಈದಿನ ರಾತ್ರಿ ತಾತ್ಕಾಲಿಕವಾಗಿ ನೀಡಲಾದ 5 ಕೊಠಡಿಗಳ ಸೇನಾ ವಸತಿಗೃಹದಲ್ಲಿ ತಂಗಿದರು. ಅವರ ಕುಟುಂಬದ ನಿಕಟ ಸಂಬಂಧಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.

2007: ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ (69) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹರ್ತಿ ಗ್ರಾಮದ ಯಲ್ಲಪ್ಪ ಹಾಗೂ ತಾಯಮ್ಮ ಅವರ ಪುತ್ರರಾದ ಸ್ವಾಮೀಜಿ ಕೈಲಾಸ ಆಶ್ರಮದ ತಿರುಚ್ಚಿ ಶ್ರೀಗಳ ಶಿಷ್ಯರಾಗಿದ್ದರು. ಎಳೆಯ ವಯಸ್ಸಿ ನಿಂದಲೇ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿವಹಿಸಿದ್ದರು. ಇವರು 1994ರಲ್ಲಿ ಒಂಕಾರ ಆಶ್ರಮ ಸ್ಥಾಪಿಸಿದ್ದರು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ನ ಆಪ್ತ ಸ್ನೇಹಿತನಾಗಿದ್ದ ಫಾರೂಕ್ ಪಾಲ್ವೆ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ದಾದರ್ನ ಶಿವಸೇನಾ ಭವನ ಮತ್ತು ನರಿಮನ್ ಪಾಯಿಂಟ್ ಬಳಿಯ ಏರ್ ಇಂಡಿಯಾ ಕಟ್ಟಡದಲ್ಲಿ ಬಾಂಬ್ ಇರಿಸಿದ್ದ. ಫಾರೂಕ್ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡು 24 ಜನರು ಬಲಿಯಾಗಿ, 79 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷದ ಅಕ್ಟೋಬರ್ 9 ರಂದು ಫಾರೂಕ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತ್ತು. ಟಾಡಾ ನ್ಯಾಯಾಲಯ ಈತನಿಗೆ 2 ಲಕ್ಷ 65 ಸಾವಿರ ರೂಪಾಯಿ ದಂಡ ತೆರುವಂತೆಯೂ ಆದೇಶಿಸಿತು.

2007: ದೇಶದ 12ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ಮರುಗಳಿಗೆಯಲ್ಲೇ ಸೈಬರ್ ಲೋಕದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನಪ್ರಿಯ ವೆಬ್ಸೈಟ್ ಮಾಯವಾಯಿತು. ಕಲಾಂ ಅವರು ಜನತೆಯ ರಾಷ್ಟ್ರಪತಿಯೆಂದೇ ಬಿಂಬಿತವಾಗಲು ಈ ವೆಬ್ಸೈಟ್ ಪ್ರಮುಖ ಪಾತ್ರವಹಿಸಿತ್ತು. ಈದಿನ ಮಧ್ಯಾಹ್ನ 2.30ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲಿನಲ್ಲಿ ಪ್ರತಿಭಾ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಕಲಾಂ ಅವರು `ಮಾಜಿ'ಯಾದರು, ಜತೆಗೆ ಅವರ ವೆಬ್ಸೈಟ್ ಕೂಡ! ಮೂರು ವರ್ಷಗಳಲ್ಲಿ ಡಾ.ಕಲಾಂ ಅವರ ವೆಬ್ಸೈಟ್ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಪ್ರತಿ ಸೆಕೆಂಡ್ಗೆ ಮೂರು ಜನರು ಈ ವೆಬ್ಸೈಟನ್ನು ನೋಡುತ್ತಿದ್ದರು. ಸರಾಸರಿ ದಿನವೊಂದಕ್ಕೆ 2.50 ಲಕ್ಷ ಜನ ಈ ವೆಬ್ಸೈಟಿಗೆ ಭೇಟಿ ನೀಡಿದ್ದಾರೆ. 2004ರ ಆಗಸ್ಟ್ ತಿಂಗಳಿನಲ್ಲಿ ಈ ವೆಬ್ಸೈಟನ್ನು ಮರು ವಿನ್ಯಾಸಗೊಳಿಸಿ ಸರ್ಕಾರಿ ಶೈಲಿಗಿಂತ ವಿಭಿನ್ನವಾದ ಆಕರ್ಷಕ ವೆಬ್ಸೈಟನ್ನಾಗಿ ಪರಿವರ್ತಿಸಲಾಗಿತ್ತು. ಕಲಾಂ ಅವರು ತಾವು ಭಾಗವಹಿಸಿದ ಪ್ರತಿಯೊಂದು ಸಮಾರಂಭದಲ್ಲೂ ಈ ವೆಬ್ಸೈಟ್ ವಿಳಾಸವನ್ನು ಬಹಿರಂಗವಾಗಿ ಸಾರುತ್ತಿದ್ದರು. ದಿನವೊಂದಕ್ಕೆ ಕನಿಷ್ಟ 500 ಇ-ಮೇಲ್ಗಳು ಕಲಾಂ ಅವರಿಗೆ ಬರುತ್ತಿದ್ದವು. ಬಹುತೇಕ ಮೇಲ್ ಗಳನ್ನು ಸ್ವತಃ ಕಲಾಂ ಅವರೇ ಓದಿ ಅವುಗಳಿಗೆ ಉತ್ತರಿಸುತ್ತಿದ್ದರು. ಕೆಲವರನ್ನು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದರು. ಹೀಗಾಗಿಯೇ ರಾಷ್ಟ್ರಪತಿ ಭವನವನ್ನು ಸಾಮಾನ್ಯ ಜನತೆಗೆ ತೆರೆದ ಕೀರ್ತಿ ಅವರಿಗೆ ಲಭಿಸಿತು. ಈ ಸೈಟಿನಲ್ಲಿ ಡಾ. ಕಲಾಂ ಅವರ ಎಲ್ಲ ಭಾಷಣಗಳೂ ಸದಾ ಜನತೆಗೆ ಲಭ್ಯವಾಗುತ್ತಿದ್ದವು.

2007: ವಾಯವ್ಯ ಪಾಕಿಸ್ತಾನದ ಬನ್ನು ನಗರದ ಮೇಲೆ ಅತಿಕ್ರಮಣಕಾರರು ನಸುಕಿನ ಜಾವ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನ ಸತ್ತು, 35ಕ್ಕೂ ಹೆಚ್ಚು ಜನರು ಗಾಯಗೊಂಡರು. ನಾಲ್ಕು ರಾಕೆಟ್ಗಳು ಇಲ್ಲಿನ ಎರಡು ಮನೆ, ಮಸೀದಿ ಮತ್ತು ಅಂಗಡಿಯೊಂದರ ಮೇಲೆ ಅಪ್ಪಳಿಸಿದವು.

2007: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಕನಿಷ್ಠ 60 ಮಂದಿ ಬಲಿಯಾದರು.

2007: ಆಸ್ಟ್ರೇಲಿಯಾದ ನಾರ್ ಫೋಕ್ ದ್ವೀಪದಲ್ಲಿ 2002ರಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕಗ್ಗೊಲೆ ಮಾಡಿದ ಅಪರಾಧಕ್ಕಾಗಿ ನ್ಯೂಜಿಲೆಂಡಿನ ಅಡುಗೆ ಕೆಲಸಗಾರನಿಗೆ ಸ್ಥಳೀಯ ನ್ಯಾಯಾಲಯ ಕನಿಷ್ಠ 18 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಒಂದು ಕಾಲದಲ್ಲಿ ದಕ್ಷಿಣ ಪೆಸಿಫಿಕ್ನ ಬ್ರಿಟಿಷ್ ಕಾಲೋನಿಯಾಗಿದ್ದ ಈ ಪುಟ್ಟ ದ್ವೀಪದಲ್ಲಿ ಕಳೆದ 150 ವರ್ಷಗಳ ಅವಧಿಯಲ್ಲಿ ನಡೆದ ಮೊದಲ ಹತ್ಯೆ ಇದು. ಆರೋಪಿ ಗ್ಲೆನ್ ಮೆಕ್ ನೆಲ್ (29) ಎಂಬಾತನು ಜನೆಲ್ಲಿ ಪ್ಯಾಟನ್ (29) ಎಂಬ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ಇರಿದು ಕೊಂದಿದ್ದ. ಆಗ ಪ್ಯಾಟನ್ ಮೂಳೆ ಮುರಿತ ಮತ್ತು ಹಲವು ಇರಿತ ಸೇರಿದಂತೆ 64 ಕಡೆ ತೀವ್ರತರ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ಲೆನ್ಗೆ ಗರಿಷ್ಠ 24 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ನ್ಯಾಯಾಲಯ ಆದೇಶಿಸಿತು.

2007: ಖ್ಯಾತ ಚಿತ್ರನಟಿ ಜಯಮಾಲಾ (ಜಯಂತಿ) ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ' ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಇವರಿಗೆ `ಕೆಂಪೇಗೌಡ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರ ನಿರ್ದೇಶಕ ಎಂ.ಜಿ.ಕೃಷ್ಣನ್ ಮಾರ್ಗದರ್ಶಕರಾಗಿದ್ದರು. ಮಂಗಳೂರಿನಲ್ಲಿ ಜನಿಸಿದ ಜಯಮಾಲ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಖಜಾಂಚಿಯಾದ ಇವರು ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿರುವವರು. ಹದಿಮೂರು ವರ್ಷದವರಿದ್ದಾಗ `ಕಾಸ್ ದಾಯೆ ಕಂಡನೆ' ಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿ, ಈವರೆಗೆ ದಕ್ಷಿಣ ಭಾರತ ಐದು ಭಾಷೆಗಳಲ್ಲಿ ಒಟ್ಟು 75 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಕೂಡಾ ಇವರದು.

2006: ಕೊಚ್ಚಿಯ ರಾ (ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಮುಖ್ಯಸ್ಥ ಎಚ್. ತಾರಕನ್ ಅವರು ವಿ.ಆರ್. ಕೃಷ್ಣ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದರು.

2006: ಕೊಂಕಣಿ ಕೂಟಮ್ ಬಹರೇನ್ ನೀಡುವ `ಕೊಂಕಣಿ ಕೂಟಮ್ 2006' ಪ್ರಶಸ್ತಿಗೆ ಖ್ಯಾತ ಕೊಂಕಣಿ ಭಾಷಾ ಲೇಖಕ, ಕವಿ, ಸಾಹಿತಿ ಮೆಲ್ವಿನ್ ರಾಡ್ರಿಗಸ್ ಕುಲಶೇಕರ ಅವರು ಆಯ್ಕೆಯಾದರು.

2006: ಕರ್ನಾಟಕದ 865 ಗ್ರಾಮಗಳು ಹಾಗೂ ಬೆಳಗಾವಿ ಸೇರಿದಂತೆ ಆರು ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅಲ್ಲಿನ ಉನ್ನತ ನಿಯೋಗವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿತು.

1970: ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಎ. ಥಾನು ನಿಧನ.

1950: ಖ್ಯಾತ ಚಿಂತಕಿ, ಸ್ತ್ರೀವಾದಿ ಪ್ರಭಾವತಿ ಅವರು ವೆಂಕಟಸುಬ್ಬಯ್ಯ- ರತ್ನಮ್ಮ ದಂಪತಿಯ ಮಗಳಾಗಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಜನಿಸಿದರು.

1938: ಖ್ಯಾತ ಹಿಂದಿ ಕವಿ ಕಾಳಿಚರಣ್ ಜನನ.

1929: ಲೋಕಸಭಾ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement