ಗ್ರಾಹಕರ ಸುಖ-ದುಃಖ

My Blog List

Thursday, August 6, 2009

ಇಂದಿನ ಇತಿಹಾಸ History Today ಆಗಸ್ಟ್ 01

ಇಂದಿನ ಇತಿಹಾಸ

ಆಗಸ್ಟ್ 01

1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಈದಿನ ತೀರ್ಪು ಪ್ರಕಟಿಸಿ, ನಿಷೇಧಿತ ಅಲ್- ಉಮ್ಮಾ ಸಂಘಟನೆಯ ಸ್ಥಾಪಕ ಎಸ್. ಎ. ಬಾಷಾ ತಪ್ಪಿತಸ್ಥ ಎಂದು ಘೋಷಿಸಿತು. ಪ್ರಕರಣದ 166 ಆರೋಪಿಗಳ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶ ಕೆ. ಉತ್ತರಾಪತಿ ಕೇರಳ ಮೂಲದ ಸಂಘಟನೆ ಪಿಡಿಪಿಯ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿಯನ್ನು ಆರೋಪಗಳಿಂದ ಮುಕ್ತಗೊಳಿಸಿದರು. ಬಾಷಾ ಜೊತೆಗೆ ಅಲ್- ಉಮ್ಮಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ, ಬಾಷಾನ ಪುತ್ರ ಸಿದ್ದಿಕ್ ಅಲಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಒಟ್ಟು 166 ಆರೋಪಿಗಳಲ್ಲಿ 71 ಜನರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಸಾಬೀತಾಗಿದ್ದು, ಇತರ 82 ಜನರ ಮೇಲಿನ ಇತರ ಆರೋಪಗಳು ಸಾಬೀತಾದವು. 

2015 ಲಂಡನ್: ಚಿಟ್ಟೆಗಳು ಹಾರುವ ಮುನ್ನ ತಮ್ಮ ‘ಯಾನ ಸ್ನಾಯು’ಗಳನ್ನು 'ವಿ' (V) ಆಕಾರಕ್ಕೆ ತಂದುಕೊಳ್ಳುವುದನ್ನು ಗಮನಿಸಿದ್ದೀರಾ? ಈ ತಂತ್ರವನ್ನು ಬಳಸಿ ಸೌರ ಫಲಕಗಳಿಂದ ಪಡೆಯುವ ವಿದ್ಯುಚ್ಚಕ್ತಿಯನ್ನು ಶೇಕಡಾ 50ರಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಮೂಲದ ವಿಜ್ಞಾನಿ ತಪಸ್ ಮಲಿಕ್ ಪ್ರಕಟಿಸಿದರು. ಸೌರ ಇಂಧನ ಉತ್ಪಾದನೆ ಹೆಚ್ಚಿಸುವ ಈ ನೂತನ ತಂತ್ರಜ್ಞಾನವು ಸೌರವಿದ್ಯುತ್ ಉತ್ಪಾದನೆ ವೆಚ್ಚವನ್ನೂ ಗಣನೀಯ ಪ್ರಮಾಣದಲ್ಲಿ ಇಳಿಸಬಲ್ಲುದು. ಚಿಟ್ಟೆಗಳು ಹಾರುವ ಮುನ್ನ ಬಿಸಿ ಮಾಡಿಕೊಳ್ಳುವ ಸಲುವಾಗಿ ತಮ್ಮ ‘ಯಾನ ಸ್ನಾಯು’ಗಳನ್ನು ‘ವಿ’ ಅಕಾರಕ್ಕೆ ತಂದುಕೊಳ್ಳುತ್ತವೆ.  ‘ಎಂಜಿನಿಯರಿಂಗ್​ನಲ್ಲಿ ಬಯೋಮಿಮಿಕ್ರಿ ಹೊಸದೇನಲ್ಲ. ಆದರೆ ಈ ಸಂಶೋಧನೆಯು ಸೌರ ವಿದ್ಯುತ್ ವೆಚ್ಚವನ್ನು ಈ ಹಿಂದೆಂದೂ ಆಗದ ಪ್ರಮಾಣದಲ್ಲಿ ಇಳಿಸುವಂತಹ ಮಾರ್ಗವನ್ನು ತೋರಿಸಿಕೊಟ್ಟಿದೆ’ ಎಂದು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿದ ಬ್ರಿಟನ್​ನ ವಿಜ್ಞಾನಿ ತಪಸ್ ಮಲಿಕ್ ಹೇಳಿದರು. ಮೋಡಭರಿತ ವಾತಾವರಣದಲ್ಲಿ ’ಕ್ಯಾಬೇಜ್ ಬಿಳಿ ಚಿಟ್ಟೆಗಳು’ ಇತರ ಚಿಟ್ಟೆಗಳಿಗಿಂತ ಮೊದಲೇ ಆಕಾಶದಲ್ಲಿ ಹಾರುತ್ತವೆ. ಹೀಗೆ ಹಾರಲು ಈ ಕೀಟವು ಸೂರ್ಯನ ಬಿಸಿಲಿನಿಂದ ತನ್ನ ’ಯಾನ ಸ್ನಾಯು’ವನ್ನು ಹೆಚ್ಚು ಬಿಸಿಮಾಡಿಕೊಳ್ಳಲು ಈ ತಂತ್ರವನ್ನು ಬಳಸುತ್ತದೆ. ಮೊದಲೇ ಹೆಚ್ಚು ಮೋಡವಿದ್ದಾಗ ಇತರ ಚಿಟ್ಟೆಗಳಿಗಿಂತ ಹೆಚ್ಚು ಬೇಗನೇ ಹಾರುವ ಸಾಮರ್ಥ್ಯ ಈ ಜಾತಿಯ ಚಿಟ್ಟೆಗಳಿಗೆ ಬರುವುದು ಈ ವಿಶಿಷ್ಟ ತಂತ್ರದಿಂದಲೇ ಎಂಬುದನ್ನು ಭಾರತೀಯ ವಿಜ್ಞಾನಿ ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ.  ಚಿಟ್ಟೆಗಳ ದೇಹದ ಭಾಗಗಳ ವಿಶಿಷ್ಟ ವಿನ್ಯಾಸವು ರೆಕ್ಕೆಗಳ ಮೇಲೆ ಬೀಳುವ ಸೂರ್ಯನ ಕಿರಣವು ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಫಲಿಸುವಂತೆ ಮಾಡುತ್ತದೆ. ಇದರಿಂದ ಯಾನ ಸ್ನಾಯುಗಳು ಬಲು ಬೇಗನೇ ಬಿಸಿಯಾಗುತ್ತವೆ. ಸೌರ ಇಂಧನ ಉತ್ಪಾದನೆ ಹೆಚ್ಚಿಸಲು ಚಿಟ್ಟೆಗಳ ರೆಕ್ಕೆಗಳನ್ನೇ ಹೋಲುವಂತಹ ಹೊಸ ಹಗುರವಾದ ಪ್ರತಿಫಲನ ಸಾಮರ್ಥ್ಯ ವಸ್ತುವನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ವಿಜ್ಞಾನಿಗಳ ತಂಡ ಅಧ್ಯಯನ ಮಾಡಿತು. ತನ್ನ ದೇಹದ ಶಾಖವನ್ನು ಹೆಚ್ಚಿಸಿಕೊಳ್ಳಲು ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು 17 ಡಿಗ್ರಿ ಕೋನಕ್ಕೆ ಬಾಗಿಸುತ್ತವೆ. ಇದರಿಂದ ರೆಕ್ಕೆಯನ್ನು ಸಮತೋಲನ ಸ್ಥಿತಿಯಲ್ಲಿ ಇಟ್ಟುಕೊಂಡದ್ದಕ್ಕಿಂತ 7.3 ಡಿಗ್ರಿ ಸೆಂಟಿಗ್ರೇಡ್​ನಷ್ಟು ಹೆಚ್ಚು ಶಾಖ ಚಿಟ್ಟೆಗೆ ಲಭಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ವಿಜ್ಞಾನಿಗಳ ತಂಡದ ಅಧ್ಯಯನವು ಸೈಂಟಿಫಿಕ್ ರಿಪೋರ್ಟ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

2015: ಒಟ್ಟಾವ: ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಕೆನಡಾದ  ಒಟ್ಟಾವ ನಗರದ ಬಾನಂಗಳಲ್ಲಿ, ಪಕ್ಷಿಗಿಂತ ತಾನೇನು ಕಡಿಮೆ ಎನ್ನುವಂತೆ, ಅದೂ ಕೈ ಕೈ ಹಿಡಿದು ಗುಂಪು ಗುಂಪಾಗಿ ಜೇಡನ ಬಲೆಯಂತೆ ತಲೆಕೆಳಗಾಗಿ ‘ಡೈವ್’ ಮಾಡುವ ಮೂಲಕ 164 ಮಂದಿ ಅಂತಾರಾಷ್ಟ್ರೀಯ ಡೈವರ್ ಗಳ ತಂಡ  2015ರ ಜುಲೈ 31ರ ಶುಕ್ರವಾರ ವಿಶ್ವದಾಖಲೆ ನಿರ್ಮಿಸಿತು.ಈ  ಡೈವರ್ ಗಳು  ಬಾನಂಗಳದಿಂದ ಭೂಮಿಯ ಕಡೆಗೆ ತಲೆಕೆಳಗಾಗಿ, ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ಸಾಗುವ ಮೂಲಕ ಅಪೂರ್ವ ಸಾಹಸವನ್ನು ಪ್ರದರ್ಶಿಸಿದರು. ಈ ಮೂಲಕ ಇವರು 2012ರಲ್ಲಿ 138 ಸ್ಕೈ ಡೈವರ್​ಗಳು ಮಾಡಿರುವ ದಾಖಲೆಯನ್ನು ಬದಿಗಟ್ಟಿದರು. ತಂಡ ನೀಡಿರುವ ಮಾಹಿತಿಯ ಪ್ರಕಾರ 19,700 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿ ಈ ಸಾಧನೆ ಮೆರೆದರು. ಇನ್ನೂ ಒಂದು ಅಚ್ಚರಿ ಸಂಗತಿ ಏನೆಂದರೆ ಈ ಮಹಾನುಭಾವರು ಗಂಟೆಗೆ 240 ಕಿಲೋ ಮೀಟರ್ ಸ್ಪೀಡ್​ನಲ್ಲಿ ಭೂಮಿಯತ್ತ ಸಾಗಿದರು.. ಈ ಹಿಂದಿನ ದಾಖಲೆಯನ್ನು ಮುರಿಯಲಿಕ್ಕೆಂದೇ ಈ ಸಾಧಕರು ಹೆಚ್ಚೂ ಕಡಿಮೆ 13 ಭಾರಿ ಇದೇ ರೀತಿ ಜಿಗಿಯುವ ಪ್ರಯತ್ನ ನಡೆಸಿ ಯಶಸ್ವಿಯಾದರು. ಭೂಮಿಗೆ ಬಂದು ನಿಲ್ಲುತ್ತೇವೆ ಎನ್ನುವ ಕ್ಷಣದ 5 ನಿಮಿಷಕ್ಕೂ ಮುನ್ನ ಪ್ಯಾರಾಚೂಟ್ ಮೂಲಕ ವೇಗ ನಿಯಂತ್ರಿಸಿ ಸುರಕ್ಷಿತವಾಗಿ ಭೂಮಿಗಿಳಿದರು. ದಾಖಲೆ ಬ್ರೇಕ್ ಮಾಡಲಿಕ್ಕೆಂದೇ 13 ಭಾರಿ ಈ ಸಾಧನೆ ಮಾಡಿರುವ ತಂಡಕ್ಕೆ ಬೆನ್ನೆಲುಬಾಗಿ ನಿಂತ ಆಯೋಜಕರಲ್ಲಿ ಒಬ್ಬರಾದ ಮಹಾನ್ ಕ್ರೇಜಿ ರೂಕ್ ನೆಲ್ಸನ್. ‘ಯಶಸ್ಸಿನತ್ತ ಮುಖ ಮಾಡಿಕೊಂಡಿರುವ ಸಮರ್ಥ ತಂಡದಿಂದ ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅದನ್ನೀಗ ಈ ತಂಡ ಮಾಡಿದೆ. ಏನನ್ನೂ ಸಾಧಿಸಿ ತೋರಿಸಲು ಸಾಧ್ಯ ಎನ್ನುವುದಕ್ಕೆ ಈ ತಂಡವೇ ಸಾಕ್ಷಿ’ ಎಂದು ಹೇಳಿದರು.  ತಂಡಕ್ಕೆ ಕಂಡ ಕಂಡವರನ್ನೆಲ್ಲ ಸೇರಿಸಿಕೊಂಡಿರಲಿಲ್ಲ. ಇದಕ್ಕೆಂದೇ ಸ್ಪೇನ್, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಸಮರ್ಪಕ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ತರಬೇತಿ ನೀಡಿ, ಬಳಿಕ ಎಲ್ಲಾ ರೀತಿಯಿಂದಲು ಸಮರ್ಥರೆನಿಸುವವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

2015: ಸ್ಯಾಂಟಿಯಾಗೊ: ಮನುಷ್ಯರಲ್ಲಿ ಗಡ್ಡೆ ನಿರೋಧಿ ಸ್ಪಂದನೆಯನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸುವಂತಹ ಹೊಸ ‘ಪ್ರತಿರಕ್ಷಾ ಚಿಕಿತ್ಸೆ’ಯನ್ನು (ಇಮ್ಯೂನೊಲಾಜಿಕಲ್ ಥೆರೆಪಿ) ಚಿಲಿಯ ಸ್ಯಾಂಟಿಯಾಗೊ ನಗರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಶೋಧಕರು ಪ್ರಕಟಿಸಿದರು. ‘ಚಿಕಿತ್ಸೆಯು ಇನ್ನೂ ಕ್ಲಿನಿಕ್​ಪೂರ್ವ ಹಂತದಲ್ಲಿದೆ’ ಎಂದು ಇದನ್ನು ಕಂಡು ಹಿಡಿದಿರುವ ಸ್ಯಾಂಟಿಯಾಗೊ ವಿಶ್ವವಿದ್ಯಾಲಯದ ಸಂಶೋಧಕ ಕ್ಲಾಡಿಯೊ ಅಕ್ಯುನಾ ಹೇಳಿದರು. ಶೀಘ್ರದಲ್ಲೇ ಈ ಚಿಕಿತ್ಸೆಗೆ ಅಮೆರಿಕದಲ್ಲಿ ಪೇಟೆಂಟ್ ಪಡೆಯಲಾಗುವುದು ಎಂದು ಅವರು ಹೇಳಿರುವುದಾಗಿ ಕ್ಷಿನ್​ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು. ‘ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳಿಗಾಗಿ ಲಸಿಕೆ ತಯಾರಿಸುವುದು ಈ ಚಿಕಿತ್ಸೆಯ ಗುರಿ. ಇದು ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳ ಕ್ಯಾನ್ಸರ್ ಗಡ್ಡೆಗಳ ವಿರುದ್ಧ ಪ್ರತಿರಕ್ಷಾ ಸ್ಪಂದನೆಯನ್ನು ವರ್ಧಿಸಲು ಅನುಕೂಲ ಮಾಡಿಕೊಡುತ್ತದೆ. ಕ್ಯಾನ್ಸರ್ ಸ್ಥಿತಿಯಿಂದ ಹಿಂದಕ್ಕೆ ತರಲಾದೀತು ಎಂದು ನಾವು ನಿರೀಕ್ಷಿಸುವುದಿಲ್ಲ ಆದರೆ ಪರ್ಯಾಯದ ಕೊಡುಗೆ ನೀಡುತ್ತಿದ್ದೇವೆ’ ಎಂದು ಅಕ್ಯುನಾ ಹೇಳಿದರು. ‘ಮುಂದಿನ ಹಂತಗಳಿಗೆ ಹೋಗುವ ಮುನ್ನ ನಾವು ಪೇಟೆಂಟ್ ಅನುಮೋದನೆಗಾಗಿ ಕಾಯುವ ಅಗತ್ಯವಿದೆ. ನಮ್ಮ ಯೋಜನೆಯು ದೀರ್ಘಾವಧಿಯಲ್ಲಿ ರೋಗಿಗಳ ಬದುಕಿನ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಿದೆ. ಮತ್ತು ಪರಂಪರಾಗತ ಚಿಕಿತ್ಸೆಗಳಿಗೆ ಪೂರಕವಾದ ಚಿಕಿತ್ಸೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ’ ಎಂದು ಅವರು ನುಡಿದರು. ಈ ಹೊಸ ಚಿಕತ್ಸೆಯು ಇಂತಹ ಇತರ ಚಿಕಿತ್ಸೆಗಳಿಗೆ ಹೋಲಿಸಿದರೆ ಜಾಗತಿಕ ವೈದ್ಯಕೀಯ ವೆಚ್ಚವನ್ನು ಶೇಕಡಾ 70ರಷ್ಟು ಇಳಿಸಲಿದೆ. ‘ಈ ಪ್ರತಿರಕ್ಷಾ ಚಿಕಿತ್ಸೆಯು ಉಲ್ಬಣ ಹಂತಕ್ಕೆ ತಲುಪಿದ ಸ್ತನ, ಚರ್ಮ, ಶ್ವಾಸಕೋಶ, ಗರ್ಭಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ವ್ಯಾಪಕ ಮಟ್ಟದಲ್ಲಿ ಲಭಿಸಲಿದೆ’ ಎಂದು ಅಕ್ಯುನಾ ಹೇಳಿದರು. ‘ಈ ಪ್ರತಿರಕ್ಷಾ ಚಿಕಿತ್ಸೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಒಮ್ಮೆ ಮಾರುಕಟ್ಟೆಗೆ ಬಂದರೆ ಇದರ ಬೆಲೆ 750 ಡಾಲರ್​ಗಳಿಗಿಂತ ಹೆಚ್ಚಾಗದು’ ಎಂದು ಅವರು ನುಡಿದರು. ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯೂಎಚ್​ಒ) ಪ್ರಕಾರ ಜಗತ್ತಿನಲ್ಲಿ ಪ್ರತಿವರ್ಷ 1 ಕೋಟಿ ಜನರಲ್ಲಿ ಹೊಸದಾಗಿ ಕ್ಯಾನ್ಸರ್ ತಗುಲಿದ ಪ್ರಕರಣಗಳು ವರದಿಯಾಗುತ್ತಿವೆ. 2012ರಲ್ಲಿ ಕ್ಯಾನ್ಸರ್ ರೋಗಕ್ಕೆ 82 ಲಕ್ಷ ಮಂದಿ ಬಲಿಯಾಗಿದ್ದಾರೆ.

2015: ಮುಂಬೈ: ಯಾಕುಬ್ ಮೆಮನ್ ಪತ್ನಿಯನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕು ಎಂಬುದಾಗಿ ಒತ್ತಾಯಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಫರೂಖ್ ಘೋಸಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು. ಗಲ್ಲಿಗೇರಿಸಲ್ಪಟ್ಟ 1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ ಯಾಕುಬ್ ಮೆಮನ್ ಪತ್ನಿಯನ್ನು ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಮಾಡಬೇಕು ಎಂಬುದಾಗಿ ಪಕ್ಷಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಆಗ್ರಹಿಸುವ ಮೂಲಕ ಘೋಸಿ ವಿವಾದ ಹುಟ್ಟುಹಾಕಿದ್ದರು. ನಾಗಪುರ ಕೇಂದ್ರೀಯ ಸೆರೆಮನೆಯಲ್ಲಿ ಯಾಕುಬ್​ನನ್ನು ಗಲ್ಲಿಗೇರಿಸಿದ ಎರಡು ದಿನಗಳ ಬಳಿಕ ಈ ಹೇಳಿಕೆ ನೀಡಿದ ಘೋಸಿ ‘ಮೆಮನ್ ಪತ್ನಿ ರಹೀನ್ ಅಸಹಾಯಕಳಾಗಿದ್ದಾಳೆ’ ಎಂದು ಬಣ್ಣಿಸಿದ್ದರು. ‘ರಹೀನ್ ಬಹುವರ್ಷಗಳ ಕಾಲ ಸೆರೆಮನೆಯಲ್ಲಿದ್ದಳು. ಆಕೆ ಅದೆಷ್ಟು ತೊಂದರೆ ಅನುಭವಿಸಿರಬಹುದು. ಇಂದು ರಹೀನ್ ಅಸಹಾಯಕಳಾಗಿದ್ದಾಳೆ. ಇಂತಹ ಹಲವಾರು ಮುಸ್ಲಿಮರು ರಾಷ್ಟ್ರದಲ್ಲಿ ಇದ್ದಾರೆ. ಅವರಿಗಾಗಿ ನಾವು ಹೋರಾಡಬೇಕು. ರಹೀನ್​ಳನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಮೂಲಕ ಆಕೆ ದುರ್ಬಲರು ಮತ್ತು ಅಸಹಾಯಕ ಜನರ ಧ್ವನಿಯಾಗುವಂತೆ ಮಾಡಬೇಕು’ ಎಂದು ಘೋಸಿ ಹೇಳಿದ್ದರು. ಆದರೆ ಈ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ಘೋಸಿ ಪಕ್ಷದ ಜೊತೆ ಸಮಾಲೋಚಿಸಿಲ್ಲ. ತಾವು ಇದರಿಂದ ದೂರ ಉಳಿಯುವುದಾಗಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಬು ಅಸಿಮ್​ಅಜ್ಮಿ ಹೇಳಿದ್ದರು.

2015: ಕೋಲ್ಕತ: ಬಂಗಾಳ ಕೊಲ್ಲಿಯಲ್ಲಿ ಎದ್ದ ‘ಕೊಮೆನ್’ ಚಂಡಮಾರುತದ ಪರಿಣಾಮವಾಗಿ ಹಿಂದಿನ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಕೋಲ್ಕತ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡು, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿತು. ಹಿಂದಿನ ದಿನ ರಾತ್ರಿಯಿಂದ ಈದಿನ ಬೆಳಗಿನ 8.30 ಗಂಟೆಯವರೆಗೆ 117.4 ಮಿ.ಮೀ. ಮಳೆ ಬಿದ್ದಿರುವುದನ್ನು ಹವಾಮಾನ ಕಚೇರಿ ದಾಖಲಿಸಿತು.

2015: ನವದೆಹಲಿ: ಮುಂಬೈ ಸರಣಿ ಸ್ಪೋಟದ ಪಾತಕಿ ಯಾಕುಬ್ ಮೆಮನ್​ನನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಭಾರತದ ಮೇಲೆ ದಾಳಿ ನಡೆಸುವುದಾಗಿ ಭೂಗತಪಾತಕಿ ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ಬಹಿರಂಗ ಬೆದರಿಕೆ ಹಾಕಿರುವುದಾಗಿ ವರದಿಗಳು ತಿಳಿಸಿದವು. ಯಾಕುಬ್ ಕುಣಿಕೆಗೆ ಕೊರಳೊಡ್ಡಿದ ಬಳಿಕ ದೆಹಲಿಯ ಆಂಗ್ಲಪತ್ರಿಕೆಯೊಂದಕ್ಕೆ ಶಕೀಲ್ ಕರೆ ಮಾಡಿ, ಯಾಕುಬ್ ಓರ್ವ ಮುಗ್ಧ. ಆತನ ಸೋದರ ಮಾಡಿದ ಅಪರಾಧಕ್ಕಾಗಿ ನೀವು ಶಿಕ್ಷೆ ನೀಡಿದ್ದನ್ನು ಖಂಡಿಸುತ್ತೇವೆ. ಇದು ಕಾನೂನಿನ ಹತ್ಯೆಯೂ ಹೌದು. ಇದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಎಂದು ವರದಿಗಳು ತಿಳಿಸಿದವು. ಭಾರತದ ಭರವಸೆಯ ಮೇಲೆ ವಿಶ್ವಾಸವಿಟ್ಟು ದಾವೂದ್ ಭಾರತಕ್ಕೆ ಮರಳಿದಲ್ಲಿ ಆತನಿಗೂ ಯಾಕುಬ್​ಗೆ ಆದ ಗತಿಯೇ ಆಗುತ್ತಿತ್ತು. ದಾವೂದ್ ಆಗಲಿ ಅಥವಾ ಇತರೆ ಆರೋಪಿಗಳಾಗಲಿ ಯಾವುದೇ ಕಾರಣಕ್ಕೂ ಭಾರತಕ್ಕೆ ಮರಳುವುದಿಲ್ಲ ಎಂದು ಶಕೀಲ್ ಹೇಳಿದ್ದಾನೆ ಎಂದು ವರದಿ ಹೇಳಿತು.
2015: ಬೊಗೋಟ: ಕೊಲಂಬಿಯಾದಲ್ಲಿ ಸೇನೆಗೆ ಸೇರಿದ ವಿಮಾನವೊಂದು ಪತನಗೊಂಡು 12 ಜನರು ಮೃತರಾದರು. ತಾಂತ್ರಿಕ ಕಾರಣಗಳಿಂದ ವಿಮಾನ ಪತನವಾಗಿದೆ ಎಂದು ಕೊಲಂಬಿಯಾ ಅಧ್ಯಕ್ಷ ಜುವಾನ್ ಮನ್ಯುಯಲ್ ಸಂಟೋಸ್ ತಿಳಿಸಿದರು. ಇದು ಸೇನೆಯ ಸರಕು ಸಾಗಾಟ ವಿಮಾನವಾಗಿದ್ದು, ಎಂಜಿನ್​ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಕಾರಣ ಪತನವಾಗಿದೆ. ಕೊಲಂಬಿಯಾದ ರಾಜಧಾನಿ ಬೊಗೋಟದಿಂದ ಸುಮಾರು 800 ಕಿ.ಮೀ. ಈಶಾನ್ಯಕ್ಕೆ ಲಾಸ್ ಪಲೋಮಾಸ್ ಪ್ರದೇಶದಲ್ಲಿ ಪತನವಾಗಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 12 ಜನರು ಮೃತರಾಗಿದ್ದಾರೆ ಎಂದು ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ತಿಳಿಸಿದರು.

2015: ಇಂಪಾಲ
: ಮ್ಯಾನ್ಮಾರ್ ಗಡಿ ಪ್ರದೇಶವಾದ ಮಣಿಪುರದ ಖೇಂಜಾಯ್ ವಲಯದಲ್ಲಿ ಭೂಕುಸಿತ ಸಂಭವಿಸಿ,ಕನಿಷ್ಠ  21ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಪರ್ವತ ತಪ್ಪಲು ಪ್ರದೇಶಗಳಲ್ಲಿ ವಾಸವಿದ್ದ ಮನೆಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರಿಂದಾಗಿ 21ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಸಾಕಷ್ಟು ಮಂದಿಗೆ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಕಳೆದೊಂದು ವಾರದಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಲೇ ಇದ್ದವು ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿದವು. ಮುಂಬೈ - ಪುಣೆ ಎಕ್ಸ್​ಪ್ರೆಸ್ ಮಾರ್ಗದಲ್ಲಿನ ಖಂಡಾಲ ಸುರಂಗ ಮಾರ್ಗದ ಬಳಿಯೂ ಭೂಕುಸಿತ ಸಂಭವಿಸಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

2015: ನವದೆಹಲಿ: ಭಾರತದ ಜನಪ್ರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ದೇಶದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ನೀಡುವ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ. 2014ರಲ್ಲಿ ನಡೆದ ಇಂಚಾನ್ ಏಷ್ಯನ್ ಗೇಮ್ಸ್​ನಲ್ಲಿ ಸಾನಿಯಾ ಮಿಕ್ಸೆಡ್ ಡಬಲ್ಸ್​ನಲ್ಲಿ ಸಾಕೆತ್ ಮೈನಿ ಜತೆಗೂಡಿ ಆಡುವ ಮೂಲಕ ಸ್ವರ್ಣ ಪದಕವನ್ನೂ, ಮಹಿಳಾ ಡಬಲ್ಸ್​ನಲ್ಲಿ ಪ್ರಾರ್ಥನಾ ಥೋಂಬ್ರೆ ಜತೆಗೂಡಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು. ಅಮೆರಿಕ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯ ಮಿಶ್ರ ಡಬಲ್ಸ್​ನಲ್ಲಿ ಕಳೆದ ವರ್ಷ ಬ್ರುನೊ ಸಾರೆಸ್ ಜತೆಗೂಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅಂತೆಯೇ ಈ ವರ್ಷವೂ ಉತ್ತಮ ಪ್ರದರ್ಶನ ನೀಡುವ ತೋರುವ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ 2004ರಲ್ಲೇ ಅರ್ಜುನ ಪ್ರಶಸ್ತಿಗೂ, 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

2015: ವಾಷಿಂಗ್ಟನ್: ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಡ್ರೋನ್ ಒಂದನ್ನು ಸಾಮಾಜಿಕ ಅಂತರ್ಜಾಲ ತಾಣ ಫೇಸ್​ಬುಕ್ ಅಭಿವೃದ್ಧಿಪಡಿಸಿದ್ದು, ಅಂತರ್ಜಾಲ ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಬಳಸಲು ನಿರ್ಧರಿಸಿದೆ. ಲೇಸರ್ ಕಿರಣಗಳ ಮೂಲಕ ಭೂಮಿಗೆ ಅಂತರ್ಜಾಲವನ್ನು ‘ಅಖಿಲಾ’ ಎಂಬ ಡ್ರೋನ್ ರವಾನಿಸಲಿದೆ. ಇದು ಭೂಮಿಯಿಂದ 60 ಸಾವಿರದಿಂದ 90 ಸಾವಿರ ಅಡಿ ದೂರದಲ್ಲಿ ಹಾರಾಡುತ್ತದೆ. ಹೀಗಾಗಿ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಸೇವೆಯ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಈ ಯೋಜನೆಯನ್ನು ಹಲವು ತಿಂಗಳುಗಳ ಹಿಂದೆಯೇ ಘೋಷಿಸಿದ್ದ ಫೇಸ್​ಬುಕ್, ಈಗ ಡ್ರೋನ್ ನಿರ್ಮಾಣವನ್ನು ಪೂರೈಸಿದೆ. ಈ ವರ್ಷಾಂತ್ಯಕ್ಕೆ ಪ್ರಾಯೋಗಿಕ ಸೇವೆ: ಬೋಯಿಂಗ್ 737 ವಿಮಾನದ ರೀತಿಯ ರೆಕ್ಕೆಗಳನ್ನೇ ಹೊಂದಿರಲಿದ್ದು, ಒಂದು ಕಾರ್​ಗಿಂತಲೂ ಕಡಿಮೆ ತೂಕವಿರಲಿದೆ. ಒಮ್ಮೆ ಹಾರಾಟ ಆರಂಭಿಸಿದರೆ ಮೂರು ತಿಂಗಳು ಸತತವಾಗಿ ಇಂಟರ್​ನೆಟ್ ಸೇವೆ ಒದಗಿಸಲಿದೆ. ಪ್ರತಿ ಸೆಕೆಂಡಿಗೆ 10 ಗಿಗಾಬೈಟ್​ಗಳವರೆಗಿನ ಬ್ಯಾಂಡ್​ವಿಡ್ತ್ ವೇಗದಲ್ಲಿ ದತ್ತಾಂಶ ವರ್ಗಾವಣೆ ಈ ಡ್ರೋನ್ ಮೂಲಕ ಸಾಧ್ಯವಿದೆ. ಇನ್ನೂ ಅಂತರ್ಜಾಲ ಲಭ್ಯವಿಲ್ಲದ ಹಿಂದುಳಿದ ಪ್ರದೇಶಗಳಿಗೆ ಉಚಿತವಾಗಿ ಇಂಟರ್​ನೆಟ್ ಒದಗಿಸುವುದು ಫೇಸ್​ಬುಕ್ ಉದ್ದೇಶವಾಗಿದೆ. ಈ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಡ್ರೋನ್ ಪ್ರಾಯೋಗಿಕ ಹಾರಾಟ ನಡೆಸಲಾಗುತ್ತದೆ.

2008: ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ಈದಿನ ಬೆಳಗಿನ ಜಾವ ಚಲಿಸುತ್ತಿದ್ದ ಸಿಕಂದರಾಬಾದ್-ಕಾಕಿನಾಡ ಗೌತಮಿ ಎಕ್ಸ್ ಪ್ರೆಸ್ಸಿನ ಎಸ್-9 ಮತ್ತು 10 ಬೋಗಿಗಳಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿ ಕನಿಷ್ಠ 32 ಮಂದಿ ಸಜೀವ ದಹನಗೊಂಡರು. ಅನೇಕ ಪ್ರಯಾಣಿಕರು ಗಾಯಗೊಂಡರು.

2007: 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಈದಿನ ತೀರ್ಪು ಪ್ರಕಟಿಸಿ, ನಿಷೇಧಿತ ಅಲ್- ಉಮ್ಮಾ ಸಂಘಟನೆಯ ಸ್ಥಾಪಕ ಎಸ್. ಎ. ಬಾಷಾ ತಪ್ಪಿತಸ್ಥ ಎಂದು ಘೋಷಿಸಿತು. ಪ್ರಕರಣದ 166 ಆರೋಪಿಗಳ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶ ಕೆ. ಉತ್ತರಾಪತಿ ಕೇರಳ ಮೂಲದ ಸಂಘಟನೆ ಪಿಡಿಪಿಯ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿಯನ್ನು ಆರೋಪಗಳಿಂದ ಮುಕ್ತಗೊಳಿಸಿದರು. ಬಾಷಾ ಜೊತೆಗೆ ಅಲ್- ಉಮ್ಮಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ, ಬಾಷಾನ ಪುತ್ರ ಸಿದ್ದಿಕ್ ಅಲಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಒಟ್ಟು 166 ಆರೋಪಿಗಳಲ್ಲಿ 71 ಜನರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಸಾಬೀತಾಗಿದ್ದು, ಇತರ 82 ಜನರ ಮೇಲಿನ ಇತರ ಆರೋಪಗಳು ಸಾಬೀತಾದವು. ಮದನಿ ಮೇಲಿದ್ದ ಕ್ರಿಮಿನಲ್ ಪಿತೂರಿ, ಪ್ರಚೋದನಕಾರಿ ಭಾಷಣ ಮತ್ತು ಕೇರಳದಿಂದ ಕೊಯಮತ್ತೂರಿಗೆ ಸ್ಫೋಟಕಗಳನ್ನು ಸಾಗಿಸಿದ ಆರೋಪಗಳು ಸಾಬೀತಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಫೆಬ್ರುವರಿ 14 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸ್ವಲ್ಪ ಮೊದಲು ಕೊಯಮತ್ತೂರು ನಗರದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. 19 ಕಡೆ ಸಂಭವಿಸಿದ ಸ್ಫೋಟಗಳಲ್ಲಿ 58 ಜನರು ಬಲಿಯಾಗಿ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಡ್ವಾಣಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸಿದ ತಮಿಳುನಾಡಿನ ವಿಶೇಷ ತನಿಖಾ ದಳ ವಾದಿಸಿತ್ತು.

2007: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಬಂದ್ ಗೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ಎಲ್ಲ ಜಿಲ್ಲೆಗಳ ಎಪಿಎಂಸಿ ಯಾರ್ಡ್ಡುಗಳು ಬಂದ್ ಆಚರಿಸಿದವು. ರಾಜ್ಯ ವಿಧಾನ ಮಂಡಲದ ಉಭಯ ಸದನಗಳು ಸೂಕ್ತ ರೀತಿಯಲ್ಲಿ ಚರ್ಚೆ ಮಾಡದೇ ಎಪಿಎಂಸಿ ತಿದ್ದುಪಡಿ ಮಸೂದೆ ಅಂಗೀಕರಿಸಿವೆ. ತಿದ್ದುಪಡಿಯು ರೈತರಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆ ಸಿ ಸಿ ಐ) ಅನಿರ್ದಿಷ್ಟ ಕಾಲದ ಬಂದ್ ಗೆ ಕರೆ ನೀಡಿತ್ತು. ಒಟ್ಟು 144 ಬೃಹತ್ ಮಾರುಕಟ್ಟೆ, 350 ಉಪ ಮಾರುಕಟ್ಟೆ ಮತ್ತು 700ಕ್ಕೂ ಅಧಿಕ ಚಿಲ್ಲರೆ ಮಾರುಕಟ್ಟೆಗಳು ಬಂದ್ ಆಚರಿಸಿದವು.

2007: ಗಣಪತಿಭಟ್ ಹಾಸಣಗಿ, ಬಿ.ಪಿ. ರಾಜಮ್ಮ, ಎಂ.ಎಸ್. ಶೀಲಾ, ಎಂ. ವೆಂಕಟೇಶ ಕುಮಾರ್, ಚಿತ್ರನಟ ಶ್ರೀಧರ್ ಸೇರಿದಂತೆ 17 ಮಂದಿ ಕಲಾವಿದರು ಮತ್ತು ಬೆಂಗಳೂರಿನ ರಾಜಾಜಿನಗರದ ಕುಮಾರವ್ಯಾಸ ಮಂಟಪ ಸಂಸ್ಥೆಯನ್ನು 2007-08ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿ ಅಕಾಡೆಮಿಯ ಅಧ್ಯಕ್ಷ ರಾಜಶೇಖರ ಮನ್ಸೂರ್ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ವಾಷರ್ಿಕ ಪ್ರಶಸ್ತಿಗಳ ವಿಭಾಗಗಳಲ್ಲಿ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಈ ರೀತಿ ಇದೆ: ಕರ್ನಾಟಕ ಸಂಗೀತ: ಡಾ. ರತ್ನಾ ಶಿವಶಂಕರ್, ಬೆಂಗಳೂರು (ಹಾಡುಗಾರಿಕೆ); ಬಿ.ಜಿ. ಶ್ರೀನಿವಾಸ, ಬೆಂಗಳೂರು (ಕೊಳಲು); ಕೆ.ಜೆ. ವೆಂಕಟೇಶಾಚಾರ್, ಮೈಸೂರು (ಪಿಟೀಲು). ಹಿಂದೂಸ್ಥಾನಿ ಸಂಗೀತ: ಗಣಪತಿಭಟ್ ಹಾಸಣಗಿ, ಉತ್ತರಕನ್ನಡ (ಗಾಯನ); ಎಂ. ವೆಂಕಟೇಶ ಕುಮಾರ್, ಧಾರವಾಡ (ಗಾಯನ); ಅಕ್ಕಮಹಾದೇವಿ ಹಿರೇಮಠ, ಧಾರವಾಡ (ಪಿಟೀಲು). `ಭರತನಾಟ್ಯ: ನಿರ್ಮಲಾ ಮಂಜುನಾಥ್ (ಬೆಂಗಳೂರು); ಚಿತ್ರನಟ ಶ್ರೀಧರ್ (ಬೆಂಗಳೂರು); ಕೆ.ಜಿ. ಕುಲಕರ್ಣಿ (ಹಾವೇರಿ); ಕುಮುದಿನಿರಾವ್ (ಧಾರವಾಡ). ಸುಗಮ ಸಂಗೀತ: ನಾರಾಯಣ ಢಗೆ (ರಾಯಚೂರು). ಕಥಾಕೀರ್ತನ: ಬಿ.ಪಿ. ರಾಜಮ್ಮ ಹಾಗೂ ಡಾ. ಎಂ.ಕಿರಣ್ ಕುಮಾರ್ (ಬೆಂಗಳೂರು). ಗಮಕ ವಾಚನ: ಕೆ. ಜಯಮ್ಮ (ಹಾಸನ); ಎಂ.ಆರ್. ಸತ್ಯನಾರಾಯಣ (ಬೆಂಗಳೂರು). ಸಂಘ ಸಂಸ್ಥೆ: ಕುಮಾರವ್ಯಾಸ ಮಂಟಪ, ರಾಜಾಜಿನಗರ ಬೆಂಗಳೂರು.

2007: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ತುತ್ತಾದ ಕರ್ನಾಟಕದ ಕರ್ನಲ್ ವಿ.ವಸಂತ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಬೆಂಗಳೂರಿನಲ್ಲಿ ನೆರವೇರಿತು.

2007: ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಗಡದ ಗುರು ಬಾಬಾ ಗುರ್ಮಿತ್ ರಾಮ್ ಸಿಂಗ್ ಅವರ ವಿರುದ್ಧ ಎರಡು ಕೊಲೆ ಹಾಗೂ ಒಂದು ಮಾನಭಂಗ ಮೊಕದ್ದಮೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿತು. ಡೇರಾದ ವ್ಯವಸ್ಥಾಪಕ ರಂಜಿತ್ ಸಿಂಗ್ ಮತ್ತು ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣ ಹಾಗೂ ಶಿಷ್ಯೆಯೊಬ್ಬಳ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಸಿಬಿಐ ವಕೀಲ ರಾಜನ್ ಗುಪ್ತಾ ಪ್ರಕಟಿಸಿದರು. ಕೆಲ ದಿನಗಳ ಹಿಂದೆ ಡೇರಾ ಗುರು ಅವರು ಸಿಖ್ ಗುರು ಗೋವಿಂದ್ ಸಿಂಗ್ ಅವರಂತೆ ಪೋಷಾಕುಗಳನ್ನು ಧರಿಸಿ ಪ್ರಚಾರ ಗಿಟ್ಟಿಸಿದ್ದರು. ಇದಕ್ಕೆ ಸಿಖ್ ಸಮುದಾಯದವರು ಪ್ರತಿಭಟನೆ ವ್ಯಕ್ತಪಡಿಸಿದ್ದರಿಂದ ಅಲ್ಲಲ್ಲಿ ಗಲಭೆಗಳು ಉಂಟಾಗಿ ಒಬ್ಬ ಸತ್ತು 50 ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸ್ ಡೇರಾ ಗುರುವಿನ ವಿರುದ್ಧ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿತ್ತು.

2007: ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯುವ ಸಲುವಾಗಿ ಒರಿಸ್ಸಾದ `ಭುವನೇಶ್ವರದ ಸ್ಟ್ರಾಂಗ್ ಮ್ಯಾನ್' ಎಂದೇ ಹೆಸರು ಪಡೆದ ಕೇಶವ್ ಸ್ವೇನ್ ಭುವನೇಶ್ವರದಲ್ಲಿ ತನ್ನ ಬಲ ಮೊಣಕೈಯ ಸಹಾಯದಿಂದ ಒಂದು ನಿಮಿಷದಲ್ಲಿ 72 ತೆಂಗಿನಕಾಯಿಗಳನ್ನು ಒಡೆದು ನೂತನ ದಾಖಲೆ ನಿರ್ಮಿಸಿದರು. ಮಣ್ಣು ಮತ್ತು ಸಿಮೆಂಟಿನಿಂದ ನಿರ್ಮಿಸಿದ 3 ಅಡಿ ಎತ್ತರ ಮತ್ತು 20 ಅಡಿ ಉದ್ದದ ಗೋಡೆಯಲ್ಲಿ ಸಾಲಾಗಿ ತೆಂಗಿನಕಾಯಿಗಳನ್ನು ಇರಿಸಲಾಗಿತ್ತು. ಕೇಶವ್ ಒಂದು ನಿಮಿಷದಲ್ಲಿ ಒಟ್ಟು 72 ತೆಂಗಿನಕಾಯಿಗಳನ್ನು ಒಡೆಯುವಲ್ಲಿ ಯಶಸ್ವಿಯಾದರು.

2006: ಅಮೆರಿಕಕ್ಕೆ ಸಡ್ಡು ಹೊಡೆದು ನಿಂತ ಕ್ಯೂಬಾದ ಕಮ್ಯೂನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ 47 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಸಹೋದರ ರೌಲ್ ಅವರಿಗೆ ತಾತ್ಕಾಲಿಕವಾಗಿ ಬಿಟ್ಟುಕೊಟ್ಟರು. ಕರುಳಿನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದರು.

2006: ಅರಿಶಿಣ ಮತ್ತು ಈರುಳ್ಳಿಯ ರಸಾಯನಗಳಿಂದ ಸಿದ್ಧಪಡಿಸಿದ ಗುಳಿಗೆ ಕರುಳು ಕ್ಯಾನ್ಸರ್ ನಿಯಂತ್ರಣಕ್ಕೆ ಉತ್ತಮ ಔಷಧ ಎಂಬುದು ಬೆಳಕಿಗೆ ಬಂದಿದೆ ಎಂದು ಹ್ಯೂಸ್ಟನ್ ಜಾನ್ ಕಾಪ್ ಕಿನ್ಸ್ ವಿಶ್ವವಿದ್ಯಾಲಯ ಔಷಧ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಫ್ರಾನ್ಸಿಸ್ ಪ್ರಕಟಿಸಿದರು. ಈ ಔಷಧವನ್ನು 6 ತಿಂಗಳ ಕಾಲ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ ಎಂದು ಅವರು ಹೇಳಿದರು.

2006: ಮಾಹಿತಿ ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿರುವ ಬೆಂಗಳೂರಿನ ವಿಪ್ರೊ ಸಂಸ್ಥೆಗೆ 2004-05ರ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ರಫ್ತು ಪ್ರಶಸ್ತಿ ಲಭಿಸಿತು.

2001: ಕಲ್ಯಾಣ ಕುಮಾರ್ ನಿಧನ.

1997: `ವಿಮಾನಯಾನ ದೈತ್ಯರು' ಎಂದೇ ಹೆಸರಾಗಿದ್ದ ಬೋಯಿಂಗ್ ಕಂಪೆನಿ ಮತ್ತು ಮೆಕ್ ಡೊನ್ನೆಲ್ ಡಗ್ಲಾಸ್ ಕಾರ್ಪೊರೇಷನ್ನುಗಳು ಪರಸ್ಪರ ವಿಲೀನಗೊಂಡು ಜಗತ್ತಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಿದವು.

1996: ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ 200 ಮೀಟರ್ ಓಟದ ಸ್ವರ್ಣಪದಕವನ್ನು ಅಮೆರಿಕದ ಮೈಕೆಲ್ ಜಾನ್ಸನ್ ಗೆದ್ದುಕೊಂಡರು. ಈ ಸಾಧನೆಯಿಂದ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 200 ಮತ್ತು 400 ಮೀಟರ್ ಓಟಗಳೆರಡರಲ್ಲೂ ಸ್ವರ್ಣಗೆದ್ದ ಪ್ರಪ್ರಥಮ ಅಥ್ಲೆಟ್ ಎಂಬ ಕೀರ್ತಿ ಅವರಿಗೆ ಲಭಿಸಿತು.

1981: ನಡುರಾತ್ರಿ 12.01 ಗಂಟೆಗೆ ಎಮ್ ಟಿವಿ (ಮ್ಯೂಸಿಕ್ ಟೆಲಿವಿಷನ್) ತನ್ನ ಚೊಚ್ಚಲ ಪ್ರಸಾರ ಆರಂಭಿಸಿತು.

1957: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಎಂಬ ಸ್ವತಂತ್ರ ಸಂಸ್ಥೆಯನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಈದಿನ ಉದ್ಘಾಟಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಭಾರತೀಯ ಪ್ರಕಾಶನ ಸಂಸ್ಥೆಯಾಗಿದ್ದು, ಇತರ ಪ್ರಕಾಶಕರ ನಡುವೆ ಸ್ಪರ್ಧೆ ಏರ್ಪಡದಂತೆ ಮಾಡುವ ಸಲುವಾಗಿ ಪ್ರಾರಂಭಗೊಂಡಿತು.

1936: ಅಡಾಲ್ಫ್ ಹಿಟ್ಲರನಿಂದ ಬರ್ಲಿನ್ನಿನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೊಂಡಿತು. ಗ್ರೀಸಿನಿಂದ ಒಲಿಂಪಿಕ್ ಕ್ರೀಡಾಜ್ಯೋತಿಯನ್ನು ತಂದ ಮೊತ್ತ ಮೊದಲ ಒಲಿಂಪಿಕ್ ಕ್ರೀಡಾಕೂಟ ಇದಾಗಿತ್ತು.

1932: ಭಾರತೀಯ ಚಿತ್ರನಟಿ ಮೇಹ್ಜಬೀನ್ ಬಕ್ಸ್ (1932-1972) ಜನ್ಮದಿನ. ಮೀನಾಕುಮಾರಿ ಎಂದೇ ಜನಪ್ರಿಯರಾಗಿದ್ದ ಇವರಿಗೆ `ಪಾಕೀಜಾ' ಸಿನಿಮಾದ ಪಾತ್ರ ಅದ್ಭುತ ಖ್ಯಾತಿಯನ್ನು ತಂದುಕೊಟ್ಟಿತು.

1931: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಹಾತ್ಮಾ ಗಾಂಧೀಜಿಯವರ ರಾಷ್ಟ್ರಧ್ವಜದ ವಿನ್ಯಾಸವನ್ನು ಕೆಲವು ಬದಲಾವಣೆಗಳೊಂದಿಗೆ ಅಂಗೀಕರಿಸಿತು. (ಈ ತ್ರಿವರ್ಣ ಧ್ವಜದ ಕೇಸರಿ ಬಣ್ಣವು ಶೌರ್ಯ ಹಾಗೂ ಬಲಿದಾನ, ಬಿಳಿ ಬಣ್ಣವು ಶಾಂತಿ ಹಾಗೂ ಸತ್ಯ, ಹಸಿರು ಬಣ್ಣವು ವಿಶ್ವಾಸ ಹಾಗೂ ಶಕ್ತಿಯನ್ನು ಮತ್ತು ಚಕ್ರವು ಜನ ಸಮೂಹದ ಕಲ್ಯಾಣವನ್ನು ಸಂಕೇತಿಸುತ್ತವೆ.)

1914: ಖ್ಯಾತ ಕನ್ನಡ ಸಾಹಿತಿ ನಂಜುಂಡಾರಾಧ್ಯ (ಅಮರವಾಣಿ) ಅವರು ಗಂಗಾಧರಯ್ಯ- ವೀರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಗುಂಡ್ಲ ಹಳ್ಳಿಯಲ್ಲಿ ಜನಿಸಿದರು. ಕನ್ನಡ, ಹಿಂದಿ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ನಂಜುಂಡಾರಾಧ್ಯ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

1882: ಭಾರತದ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಪುರುಷೋತ್ತಮದಾಸ್ ಟಂಡನ್ (1882-1962) ಜನ್ಮದಿನ.

1849: ಬ್ರಿಟಿಷ್ ಸಂಸತ್ತು ಕಾನೂನಿನ ಮೂಲಕ `ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ'ಯನ್ನು (ಜಿಐಪಿ) ಸ್ಥಾಪಿಸಿತು. ಈಗ ಇದು `ಸೆಂಟ್ರಲ್ ರೈಲ್ವೇ' ಆಗಿದೆ.

1833: ಇಂಗ್ಲೆಂಡಿನಲ್ಲಿ `ಗುಲಾಮೀ ಪದ್ಧತಿ' ರದ್ದುಗೊಂಡಿತು. ಇದು ವಿಲಿಯಂ ವಿಲ್ಬೆರ್ ಫೋರ್ಸ್ ನಡೆಸಿದ 40 ವರ್ಷಗಳ ಹೋರಾಟದ ಫಲಶ್ರುತಿ.

1790: ಅಮೆರಿಕದ ಮೊದಲ ಜನಗಣತಿ.

1774: ಜೋಸೆಫ್ ಪ್ರೀಸ್ಲೆ ಅವರಿಂದ ಪ್ರಾಣವಾಯು ಆಮ್ಲಜನಕದ ಸಂಶೋಧನೆ

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement