ಇಂದಿನ ಇತಿಹಾಸ
ಆಗಸ್ಟ್ 02
2007ರ ಸಾಲಿನ `ಜಿ.ಆರ್. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ'ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಎಸ್ ಐ ಆರ್ ಭಟ್ನಾಗರ್ ಫೆಲೋ ಆಗಿರುವ ಅವರು, ಸಾವಯವ ಸಮನ್ವಯ ಸಿದ್ಧಾಂತದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ಈ ನೂತನ ಪರಿಕಲ್ಪನೆ ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.
2015: ನವದೆಹಲಿ/ ಕೋಲ್ಕತ: ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಹಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿ 70ಕ್ಕೂ ಹೆಚ್ಚು ಮಂದಿ ಅಸು ನೀಗಿದರು. ಪಶ್ಚಿಮ ಬಂಗಾಳದ 13 ಜಿಲ್ಲೆಗಳು ಜಲಾವೃತಗೊಂಡು 18 ಲಕ್ಷಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡು, 50ಕ್ಕೂ ಹೆಚ್ಚು ಮಂದಿ ಮೃತರಾದರು. ಒಡಿಶಾದಲ್ಲೂ ಪ್ರವಾಹ ಸ್ಥಿತಿ ಉಂಟಾಗಿದ್ದು, ಮಣಿಪುರದಲ್ಲಿ ಭೂಕುಸಿತಗಳಿಗೆ 20 ಮಂದಿ ಬಲಿಯಾದರು. ಗುಜರಾತ್ ಮತ್ತು ರಾಜಸ್ತಾನದಲ್ಲಿ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಸೇನಾ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಹಗಲು ರಾತ್ರಿ ಸುರಿಯುತ್ತಿರುವ ಮಳೆಯ ಜೊತೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದ ಪರಿಣಾಮವಾಗಿ ರಾತ್ರಿ ಇಡೀ ಹೆಚ್ಚುವರಿ ಮಳೆಯೂ ಸುರಿದಿದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಂಡನ್ ಪ್ರವಾಸವನ್ನು ಅರ್ಧಕ್ಕೇ ಸ್ಥಗಿತಗೊಳಿಸಿ ವಾಪಸಾದರು. ಮಣಿಪುರದಲ್ಲಿ ಭೂಕುಸಿತದಲ್ಲಿ ಹಲವಾರು ಮನೆಗಳು, ಸೇತುವೆಗಳು ಹಾನಿಗೊಂಡವು.
2015: ನವದೆಹಲಿ: ಕೂದಲು ಉದುರುವಿಕೆ ತಡೆಯುವ ಚಿಕಿತ್ಸೆಗಾಗಿ ಅರಶಿನ, ದೇವದಾರು ತೊಗಟೆ/ಚಕ್ಕೆ ಮತ್ತು ಹಸಿರು ಚಹಾ ಹೊಂದಿದ ವೈದ್ಯಕೀಯ ಮಿಶ್ರಣಕ್ಕೆ ಪೇಟೆಂಟ್ ಪಡೆಯುವ ಇಂಗ್ಲೆಂಡಿನ ಖ್ಯಾತ ಲ್ಯಾಬೋರೇಟರಿ ಒಂದರ ಯತ್ನವನ್ನು ತಡೆಯುವ ಮೂಲಕ ತನ್ನ ಪರಂಪರಾಗತ ಜ್ಞಾನವನ್ನು ರಕ್ಷಿಸಿಕೊಳ್ಳುವಲ್ಲಿ ಭಾರತ ಮಹತ್ವದ ಯಶಸ್ಸು ಸಾಧಿಸಿದೆ ಎಂದು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್) ಪರಂಪರಾಗತ ಜ್ಞಾನದ ಡಿಜಿಲ್ ಲೈಬ್ರೆರಿ (ಟಿಕೆಡಿಎಲ್) ಪ್ರಕಟಿಸಿತು. ಗಿಡಮೂಲಿಕೆಗಳ ಸಾರ ಹೊಂದಿದ ಮೌತ್ವಾಶ್ ಫಾರ್ಮುಲಾಕ್ಕೆ ಪೇಟೆಂಟ್ ಪಡೆಯಲು ಅಮೆರಿಕ ಮೂಲದ ಗ್ರಾಹಕ ವಸ್ತುಗಳ ದೈತ್ಯ ಕೋಲ್ಗೇಟ್-ಪಾಮೋಲಿವ್ ನಡೆಸಿದ್ದ ಇಂತಹುದೇ ಯತ್ನವನ್ನು ವಿಫಲಗೊಳಿಸಿದ ಬೆನ್ನಲ್ಲೇ ಭಾರತಕ್ಕೆ ಈ ಯಶಸ್ಸು ಪ್ರಾಪ್ತವಾಗಿದೆ. ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್) ಪರಂಪರಾಗತ ಜ್ಞಾನದ ಡಿಜಿಲ್ ಲೈಬ್ರೆರಿ (ಟಿಕೆಡಿಎಲ್) ವಹಿಸಿದ್ದ ನಿರಂತರ ಜಾಗೃತಿಯು ಈ ನಿಟ್ಟಿನಲ್ಲಿ ಭಾರತಕ್ಕೆ ನೆರವಾಗಿದೆ. ಐರೋಪ್ಯ ಪೇಟೆಂಟ್ ಕಚೇರಿಗೆ ಮಂಡಳಿಯು ಸಲ್ಲಿಸಿದ ಪತ್ರವು ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಗಳಾದ ಆಯುರ್ವೆದ ಮತ್ತು ಯುನಾನಿ ಪದ್ಧತಿಗಳಲ್ಲಿ ಪುರಾತನ ಕಾಲದಿಂದಲೇ ಕೂದಲು ನಷ್ಟಕ್ಕೆ ಚಿಕಿತ್ಸೆ ನೀಡಲು ಅರಶಿನ, ದೇವದಾರು ತೊಗಟೆ/ಚಕ್ಕೆ ಮತ್ತು ಹಸಿರು ಚಹಾ ಬಳಸಲಾಗುತ್ತಿತ್ತು ಎಂಬುದನ್ನು ಸಾಬೀತು ಪಡಿಸಿದೆ. ಇಂಗ್ಲೆಂಡ್ ಮೂಲದ ಪಾಂಗೆಯಿಯ ಲ್ಯಾಬೋರೇಟರೀಸ್ ಲಿಮಿಟೆಡ್ 2011ರ ಫೆಬ್ರುವರಿಯಲ್ಲಿ ತನ್ನ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಐರೋಪ್ಯ ಪೇಟೆಂಟ್ ಕಚೇರಿಯ ವೆಬ್ ಸೈಟ್ನಲ್ಲಿ ಪೇಟೆಂಟ್ ಅರ್ಜಿ ಪ್ರಕಟಗೊಂಡ ಬೆನ್ನಲ್ಲೇ ಸಿಎಸ್ಐಆರ್-ಟಿಕೆಡಿಎಲ್ ಘಟಕವು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಲ್ಲದೆ 2014ರ ಜನವರಿ 13ರಂದು ತನ್ನ ಆಕ್ಷೇಪಕ್ಕೆ ಸಾಕ್ಷ್ಯಾರಗಳನ್ನೂ ಸಲ್ಲಿಸಿತ್ತು. ಭಾರತದ ಸಾಕ್ಷ್ಯಾಧಾರವನ್ನು ಆಧರಿಸಿ ಅಂತಿಮವಾಗಿ ಈ ವರ್ಷ ಜೂನ್ 29ರಂದು ಅರ್ಜಿದಾರ ಸಂಸ್ಥೆಯು ತನ್ನ ಪೇಟೆಂಟ್ ಅರ್ಜಿಯನ್ನು ಹಿಂತೆಗೆದುಕೊಂಡಿತು. ಈವರೆಗೆ ಸುಮಾರು 200 ಪ್ರಕರಣಗಳಲ್ಲಿ ಸರ್ಕಾರಿ ಬೊಕ್ಕಸಕ್ಕೆ ಯಾವುದೇ ಹೆಚ್ಚಿನ ವೆಚ್ಚವೂ ಆಗದಂತೆ ಪರಿಸ್ಥಿತಿ ನಿಭಾಯಿಸಿ ಯಶಸ್ಸು ಗಳಿಸಿರುವ ಟಿಕೆಡಿಎಲ್ ಕಿರೀಟಕ್ಕೆ ಕೋಲ್ಗೇಟ್- ಪಾಮೋಲಿವ್ ಮತ್ತು ಪಾಂಗೇಯಿಯ ಲ್ಯಾಬೋರೇಟರೀಸ್ ಲಿಮಿಟೆಡ್ ವಿರುದ್ಧದ ಯಶಸ್ಸು ಇನ್ನೊಂದು ಗರಿ ಮೂಡಿಸಿದೆ. ‘ಜಯಫಲ್’ (ಜಾಯಿಕಾಯಿ) ಸಾರ ಹೊಂದಿದ ಮೌತ್ ವಾಶ್ ಫಾರ್ಮುಲಾಕ್ಕೆ ಪೇಟೆಂಟ್ ಗಳಿಸುವ ಕೋಲ್ಗೇಟ್-ಪಾಮೋಲಿವ್ ಯತ್ನವನ್ನು ಟಿಕೆಡಿಎಲ್ ಇತ್ತೀಚೆಗೆ ವಿಫಲಗೊಳಿಸಿತ್ತು. ಹಿರಿಯ ವಿಜ್ಞಾನಿ ಅರ್ಚನಾ ಶರ್ಮಾ ನೇತೃತ್ವದ ಸಿಎಸ್ಐಆರ್ ನ ಪರಂಪರಾಗತ ಜ್ಞಾನದ ಡಿಜಿಟಲ್ ಲೈಬ್ರೆರಿಯು ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳನ್ನು ಸಾಕ್ಷ್ಯಾಧಾರವಾಗಿ ಸಲ್ಲಿಸಿ, ಈ ಗಿಡಮೂಲಿಕೆಗಳು ಮತ್ತು ಅವುಗಳ ಸಾರವನ್ನು ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ಮೌಖಿಕ ವ್ಯಾಧಿಗಳಿಗೆ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು ಎಂದು ತಿಳಿಸಿತ್ತು ಎಂದು ಟಿಕೆಡಿಎಲ್ ಪ್ರಕಟಣೆ ಹೇಳಿತು. ಆಯುರ್ವೆದ, ಯುನಾನಿ, ಸಿದ್ಧ ಮತ್ತು ಯೋಗ ಇತ್ಯಾದಿ ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದ್ದ 25,000ಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಪಟ್ಟಿ ಮಾಡಿರುವ ಟಿಕೆಡಿಎಲ್, ರಾಷ್ಟ್ರದ ಈ ಪರಂಪಾರಗತ ವೈದ್ಯಕೀಯ ಜ್ಞಾನವು ಅಂತಾರಾಷ್ಟ್ರೀಯ ಪೇಟೆಂಟ್ ಕಚೇರಿಗಳಲ್ಲಿ ದುರುಪಯೋಗವಾಗದಂತೆ ನಿಗಾ ಇಟ್ಟು ಕಾರ್ಯ ನಿರ್ವಹಿಸುತ್ತಿದೆ.
2015: ರಾಝುನ್ (ರಷ್ಯಾ): ರಷ್ಯಾದಲ್ಲಿ ಮೊದಲ ಸೇನಾ ಒಲಿಂಪಿಕ್ಸ್ನಲ್ಲಿ ಸ್ಪರ್ಧೆಯ ಅಂಗವಾಗಿ ರಾಝುನ್ ಸಮೀಪ ನಡೆಸುತ್ತಿದ್ದ ವೈಮಾನಿಕ ಕವಾಯತು ವೇಳೆಯಲ್ಲಿ ಸೇನಾ ಹೆಲಿಕಾಪ್ಟರ್ ಮಿ-28ಎನ್ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಒಬ್ಬ ಪೈಲಟ್ ಸಾವನ್ನಪ್ಪಿದ. ಹೆಲಿಕಾಪ್ಟರ್ ದುರಂತಕ್ಕೆ ಈಡಾಗುವ ವೇಳೆಯಲ್ಲಿ ಹೊರಹಾರಲು ಸಫಲನಾದ ಒಬ್ಬ ಪೈಲಟ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ. ಆದರೆ ಇನ್ನೊಬ್ಬ ಪೈಲಟ್ ಅಸು ನೀಗಿದ್ದಾನೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿತು. ಕವಾಯತಿನ ಕಾಲದಲ್ಲಿ ಸ್ಟಂಟ್ ಪ್ರದರ್ಶಿಸುತ್ತಿದ್ದಾಗ ಬೆರ್ಕುಟಿ ವೈಮಾನಿಕ ಕವಾಯತು ತಂಡಕ್ಕೆ ಸೇರಿದ ಹೆಲಿಕಾಪ್ಟರ್ ಒಂದೇ ಕಡೆಗೆ ವಾಲಿ ನೆಲದತ್ತ ಸಾಗತೊಡಗಿತು. ಹಾಗೆಯೇ ಮುಂದುವರೆದ ವಿಮಾನ ಸ್ವಲ್ಪ ಹೊತ್ತಿನಲ್ಲೇ ನೆಲಕ್ಕೆ ಅಪ್ಪಳಿಸಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತು.
2015: ಮುಂಬೈ: ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಖ್ ಖಾನ್ ವಿರುದ್ಧ ಹೇರಲಾಗಿದ್ದ ನಿಷೇಧವನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಭಾನುವಾರ ರದ್ದು ಪಡಿಸಿತು. 2012ರಲ್ಲಿ ಶಾರುಖ್ ಖಾನ್ ವಿರುದ್ಧ ನಿಷೇಧ ಹೇರಲಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ನ ಅಂತಿಮ ಪಂದ್ಯವು ಮುಂಬೈಗೆ ಸ್ಥಳಾಂತರಗೊಂಡರೆ ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಖ್ ಖಾನ್ ವಿರುದ್ಧ ಹೇರಲಾಗಿದ್ದ ನಿಷೇಧವನ್ನು ರದ್ದು ಪಡಿಸಲು ತಾನು ಸಿದ್ಧ ಎಂದು ಅಸೋಸಿಯೇಶನ್ ಇತ್ತೀಚೆಗೆ ಪ್ರಕಟಿಸಿತ್ತು. ಎಂಸಿಎ ಅಧಿಕಾರಿಗಳ ಜೊತೆಗೆ ಘರ್ಷಣೆ ನಡೆಸಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಶಾರುಖ್ ಖಾನ್ ಅವರಿಗೆ ವಾಖೇಡೆ ಕ್ರೀಡಾಂಗಣ ಪ್ರವೇಶವನ್ನು ನಿಷೇಧಿಸಲಾಗಿತ್ತು.
2015: ಜೋಧಪುರ: ಅತ್ಯಾಚಾರ ಆರೋಪ ಎದುರಿಸುತ್ತಿರುವ ‘ಸ್ವಯಂಘೊಷಿತ ದೇವಮಾನವ’ ಅಸಾರಾಂ ಬಾಪು ಹೆಸರು ರಾಜಸ್ತಾನದ ಜಿಲ್ಲೆಯೊಂದರ ಮೂರನೇ ತರಗತಿಯ ಪಠ್ಯಪುಸ್ತಕವೊಂದರಲ್ಲಿ ಸಂತರಿಗೆ ಸಂಬಂಧಿಸಿದ ಅಧ್ಯಾಯದಲ್ಲಿ ವಿವೇಕಾನಂದ, ಮದರ್ ತೆರೇಸಾ, ಮತ್ತು ರಾಮಕೃಷ್ಣ ಪರಮಹಂಸರ ಹೆಸರುಗಳ ಜೊತೆಗೆ ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿತು. ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಬಳಕೆಯಾಗುತ್ತಿರುವ ’ನಯಾ ಉಜಾಲಾ’ ಸಾಮಾನ್ಯ ಜ್ಞಾನ ಪಠ್ಯಪುಸ್ತಕದಲ್ಲಿ ನೀತಿಪಾಠದಲ್ಲಿರುವ ಸಂತರ ಹೆಸರುಗಳ ಪಟ್ಟಿಯಲ್ಲಿ ಯೋಗಗುರು ರಾಮದೇವ್ ಅವರ ಹೆಸರೂ ಸೇರಿದೆ.ಈ ಅಧ್ಯಾಯದಲ್ಲಿ ಗುರುನಾನಕ್, ಕಬೀರ್, ಮೀರಾಬಾಯಿ ಮತ್ತು ಶಂಕರಾಚಾರ್ಯ ಅವರ ಚಿತ್ರಗಳು ಇವೆ. ಚಿತ್ರದಲ್ಲಿ ಇರುವವರನ್ನು ಗುರುತಿಸುವಂತೆ ಮಕ್ಕಳಿಗೆ ಸೂಚಿಸಲಾಗಿದ್ದು, ಅಸಾರಾಂ ಹೆಸರೂ ಅದರಲ್ಲಿ ಸೇರಿದೆ. ದೆಹಲಿ ಮೂಲದ ಪ್ರಕಾಶಕರಾದ ಗುರುಕುಲ ಎಜುಕೇಷನ್ ಬುಕ್ಸ್ ಈ ಪುಸ್ತಕವನ್ನು ಸರಬರಾಜು ಮಾಡಿದೆ. ‘ಪುಸ್ತಕ ಪ್ರಕಟವಾದಾಗ ಅಸಾರಾಂ ವಿರುದ್ಧ ಯಾವುದೇ ಪ್ರಕರಣವೂ ಇರಲಿಲ್ಲ’ ಎಂದು ಪ್ರಕಾಶಕ ಸಂಸ್ಥೆಯ ಪ್ರತಿನಿಧಿ ಪಠ್ಯ ಪುಸ್ತಕದಲ್ಲಿ ಅಸಾರಾಂ ಹೆಸರು ಸೇರಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದರು. ನಾವು ಈಗ ಮಾರುಕಟ್ಟೆಯಿಂದ ಈ ಪುಸ್ತಕದ ಪ್ರತಿಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ಮತ್ತು ಅಸಾರಾಂ ರಹಿತವಾದ ನೂತನ ಆವೃತ್ತಿಯನ್ನು ಸಿದ್ಧ ಪಡಿಸುತ್ತಿದ್ದೇವೆ’ ಎಂದು ಅವರು ನುಡಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಮಗೆ ಅರಿವು ಇಲ್ಲ ಎಂದು ತಿಳಿಸಿದರು. ಏನಿದ್ದರೂ ಈ ಪುಸ್ತಕವು ಪಠ್ಯದ ಭಾಗವಾಗಿರುವ ಶಾಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು. 16ರ ಹರೆಯದ ಬಾಲಕಿಯೊಬ್ಬಳು ಅಸಾರಾಂ ಅವರ ಜೋಧಪುರ ಆಶ್ರಮದಲ್ಲಿ ಸ್ವಯಂಘೊಷಿತ ದೇವಮಾನವ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿರುವುದಾಗಿ ಆಪಾದಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ 2013ರ ಆಗಸ್ಟ್ ತಿಂಗಳಲ್ಲಿ ಅಸಾರಾಂ ಬಂಧನವಾಗಿದ್ದು ಈಗಲೂ ಸೆರೆವಾಸ ಮುಂದುವರೆದಿದೆ.
2015: ಮುಂಬೈ: ಸದಾ ಒಂದಲ್ಲಾ ಒಂದು ವಿವಾದದಿಂದ ಸುದ್ದಿಯಾಗುತ್ತಲೇ ಇರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ತನ್ನ ಸಹೋದರಿ ಅರ್ಪಿತಾ ಖಾನ್ ಮಾಡಿಕೊಂಡ ಅವಾಂತರದಿಂದ ಸುದ್ದಿಯಾದರು. ಪಾರ್ಟಿ ಹೆಸರಲ್ಲಿ ಎಲ್ಲೆಮೀರುವಂತೆ ಮ್ಯೂಸಿಕ್ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿದ್ದ ಹಿನ್ನೆಲೆಯಲ್ಲಿ ಈದಿನ ನಸುಕಿನಲ್ಲಿ ನೆರೆಹೊರೆಯವರ ದೂರು ಆಧರಿಸಿ ಪೊಲೀಸರು ದಿಢೀರ್ ದಾಳಿ ನಡೆಸಿದರು. ಪಾರ್ಟಿಯಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಪಾರ್ಟಿ ಅರ್ಪಿತಾ ಖಾನ್ ಹೆಸರಲ್ಲಿ ಸಂತೋಷ್ ಮಾನೆ ಎನ್ನುವವರು ಆಯೋಜಿಸಿದ್ದರು ಎನ್ನಲಾಯಿತು. ಈ ಘಟನೆ ನಡೆದಿರುವುದು ತಡರಾತ್ರಿ 2.30ರ ಸುಮಾರಿಗೆ. ಪಾಲಿ ಹಿಲ್ನಲ್ಲಿರುವ ಈ ಮನೆಯಲ್ಲಿ ರಾತ್ರಿಯೆಲ್ಲಾ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಕುಣಿದು ಸದ್ದು ಮಾಡುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ನೆರೆಹೊರೆಯವರು ತಕ್ಷಣ ಸಮೀಪದ ಖಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅರ್ಪಿತಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಪೊಲೀಸರನ್ನು ಕಾಣುತ್ತಿದ್ದಂತೆ ಮ್ಯೂಸಿಕ್ ನಿಲ್ಲಿಸಿದ ಆಯೋಜಕ ಮಾನೆಗೆ ನಿಯಮದಂತೆ 12,500 ರೂಪಾಯಿ ದಂಡ ವಿಧಿಸಲಾಯಿತು. ಅಲ್ಲದೇ ಮಾನೆ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಸೆಕ್ಷನ್ 33 (ಆರ್) (3) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು.
2015: ಕೋಲ್ಕತ್ತಾ: ಎಲ್ಲವೂ ಅಂದುಕೊಂಡಂತೆ ಆದರೆ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿವಾರಣೆಗೆ ಕೆಲವೇ ದಿನಗಳಲ್ಲಿ ಡ್ರೋಣ್ ಬಳಕೆ ಆರಂಭವಾಗಲಿದೆ. ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿಯಂತ್ರಿಸಲು ಡ್ರೋಣ್ ಬಳಕೆ ಮಾಡಲು ಡೆಹ್ರಾಡೋನ್ನ ‘ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ’ ವಿಜ್ಞಾನಿಗಳು ನಿರ್ಧರಿಸಿದರು. ಗ್ರಾಮಗಳಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಗಳ ಪರಿಧಿಯಲ್ಲಿ ಈ ಡ್ರೋಣ್ ಹಾರಿ ಬಿಡಲಾಗುತ್ತದೆ. ಹುಲಿ, ಆನೆಯಂತಹ ಯಾವುದೇ ಅಪಾಯಕಾರಿ ಪ್ರಾಣಿ ಗ್ರಾಮದತ್ತ ಬರುತ್ತಿದ್ದಲ್ಲಿ ಡ್ರೋಣ್ನಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಮೂಲಕ ಪತ್ತೆಯಾಗಲಿದೆ. ತಕ್ಷಣ ಕಾರ್ಯಪ್ರವೃತ್ತರಾಗುವ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮವಹಿಸುತ್ತಾರೆ ಎಂದು ವನ್ಯ ಜೀವಿ ವಿಜ್ಞಾನಿ ಹಾಗೂ ಯೋಜನೆ ಉಸ್ತುವಾರಿ ಕೆ.ರಮೇಶ್ ತಿಳಿಸಿದರು.
2015: ಶ್ರೀನಗರ: ಪಾಕಿಸ್ತಾನ ಪಡೆ ಮತ್ತೆ ಜಮ್ಮು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಯೋಧರು ಮತ್ತು ಪಾಕ್ ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಆರ್ಎಸ್ ಪುರ ಸೆಕ್ಟರ್ ವ್ಯಾಪ್ತಿಯಲ್ಲಿ ಗಡಿ ಒಳಪ್ರವೇಶಕ್ಕೆ ಮುಂದಾದ ಪಾಕ್ ಪಡೆ ಈದಿನ ಬೆಳಗ್ಗೆಯೂ ಬಿಎಸ್ಎಫ್ ಯೋಧರ ಮೇಲೆ ಗುಂಡಿನ ಮಳೆ ಗರೆಯಿತು. ಭಾರತೀಯ ಯೋಧರೂ ತಕ್ಕ ಉತ್ತರ ನೀಡಿದರು. ಕಳೆದೊಂದು ತಿಂಗಳಿಂದ ಪಾಕ್ ಪಡೆ ಭಾರತದೊಳಕ್ಕೆ ನುಸುಳಲು ಪದೇ ಪದೇ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಪಾಕ್ ಪಡೆಯ ದಾಳಿಗೆ ಭಾರತೀಯ ಯೋಧನೋರ್ವ ಅಸುನೀಗಿದ್ದ.
2015: ಜಕಾರ್ತ (ಇಂಡೋನೇಷ್ಯಾ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ಜೊಂಗ್-ಉನ್ ಅವರು ‘ಜಾಗತಿಕ ಮುತ್ಸದ್ಧಿ’ ಪ್ರಶಸ್ತಿಗೆ ಪಾತ್ರರಾದರು. ಬಾಲಿಯ ಸುಕರ್ಣೋ ಕೇಂದ್ರದಲ್ಲಿ ಕಿಮ್ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಇಂಡೋನೇಷ್ಯಾದ ಸ್ಥಾಪಕ ಅಧ್ಯಕ್ಷರ ಪುತ್ರಿ ರಚ್ಮಾವತಿ ಸುಕರ್ಣೋಪುತ್ರಿ ಪ್ರಕಟಿಸಿದರು. ‘ಸಾಮ್ಯಾಜ್ಯ ಶಾಹಿ ವಿರುದ್ಧ ಹೋರಾಡಿದ ಕಿಮ್2 ಸುಂಗ್ ಅವರ ತತ್ವಾದರ್ಶಗಳನ್ನು ಅಧ್ಯಕ್ಷ ಕಿಮ್ಜೊಂಗ್ ಮುಂದಕ್ಕೆ ಒಯ್ಯುತ್ತಿದ್ದಾರಾದ್ದರಿಂದ ಅವರಿಗೆ ನಾವು ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ’ ಎಂದು ಅವರು ನುಡಿದರು. ಈ ಹಿಂದೆ ಮಹಾತ್ಮಾ ಗಾಂಧಿ, ಅಂಗ್ ಸಾನ್ ಸೂ-ಕಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
2015: ಕೋಪೆನ್ ಹೊಗನ್: ಭಾರತದ ಮಹಿಳಾ ರಿಕರ್ವ್ ಅರ್ಚರಿ ತಂಡ ರಷ್ಯಾ ವಿರುದ್ಧದ ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲಿ 4-5ರಿಂದ ಸೋಲನುಭವಿಸಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತದ ಮಹಿಳಾ ರಿಕರ್ವ್ ತಂಡ ಫೈನಲ್ನಲ್ಲಿ ರಷ್ಯಾದೊಂದಿಗೆ ಸಮಬಲ ಹೊಂದಿತ್ತು. ಆದರೆ ಟೈಬ್ರೇಕರ್ನಲ್ಲಿ (27-28) ಕೇವಲ ಒಂದು ಅಂಕದ ವ್ಯತ್ಯಾಸದಲ್ಲಿ ಚಿನ್ನದ ಪದಕವನ್ನು ರಷ್ಯಾ ತಂಡಕ್ಕೆ ಬಿಟ್ಟುಕೊಟ್ಟಿತು.
2015: ನವದೆಹಲಿ: ಭಾರತ ಹಂತ, ಹಂತವಾಗಿ ಜಾಗತಿಕ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ತಾಣವಾಗಿ ಮಾರ್ಪಡುತ್ತಿದೆ. ಇಲ್ಲಿ ಶಸ್ತ್ರಚಿಕಿತ್ಸೆ ಶುಲ್ಕ ಕಡಿಮೆ ಇರುವುದಲ್ಲದೆ, ಗುಣಮಟ್ಟದ ಸೇವೆಗಳು ದೊರೆಯುತ್ತವೆ ಎಂಬುದು ಇದಕ್ಕೆ ಕಾರಣ. ಒಂದು ಮೂಲದ ಪ್ರಕಾರ ಬ್ರಿಟನ್ನಲ್ಲಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ 40 ಲಕ್ಷ ರೂ. ಶುಲ್ಕ ತಗಲುತ್ತದೆ. ಈ ಶಸ್ತ್ರಚಿಕಿತ್ಸೆ ಅಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸೇರ್ಪಡೆಗೊಂಡಿದ್ದು, ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಜನರಿಗೆ ಕೊಡಲಾಗುತ್ತಿದೆ. ಆದರೆ ಈ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಈಗಾಗಲೆ ಲಕ್ಷಾಂತರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಜನರು ನಾಲ್ಕಾರು ವರ್ಷಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಈ ಹಿಂದೆ ಜಾಗತಿಕ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆ ಥಾಯ್ಲೆಂಡ್ನದ್ದಾಗಿತ್ತು. ಅಲ್ಲಿ ಈಗ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗಾಗಿ 7.5 ಲಕ್ಷ ರೂಗಳಿಂದ 11 ಲಕ್ಷ ರೂ.ವರೆಗೆ ಶುಲ್ಕ ಇದೆ. ಇಷ್ಟು ಮೊತ್ತ ಕೊಟ್ಟರೂ ಗುಣಮಟ್ಟದ ಸೇವೆ ಲಭಿಸುವ ಖಾತ್ರಿ ಇಲ್ಲವಾಗಿದೆ. ರಷ್ಯಾದಲ್ಲಿ ಕೂಡ ಶಸ್ತ್ರಚಿಕಿತ್ಸೆ ಶುಲ್ಕ ಕಡಿಮೆ ಇದೆ. ಆದರೆ ಭಾರತದಲ್ಲಿ ದೊರೆಯುವಂತಹ ಗುಣಮಟ್ಟದ ಸೇವೆ ಲಭಿಸುವುದಿಲ್ಲವೆಂಬ ಕಾರಣಕ್ಕಾಗಿ ಅಲ್ಲಿನ ವೈದ್ಯರೇ ತಮ್ಮ ಬಳಿ ಬರುವವರನ್ನು ಭಾರತಕ್ಕೆ ಕಳುಹಿಸಿ ಕೊಡಲಾರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಕುರಿತು ಅಧ್ಯಯನ ನಡೆಸಿರುವ ಕೆಪಿಎಂಜಿ-ಎಫ್ಐಸಿಸಿಐ ಸಂಸ್ಥೆಗಳ ವರದಿ ಪ್ರಕಾರ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಬಯಸಿ ವಿಶ್ವದ ನಾನಾ ಭಾಗಗಳಿಂದ ಸುಮಾರು 32 ಕೋಟಿ ತೃತೀಯ ಲಿಂಗಿಗಳು ಭಾರತಕ್ಕೆ ಬರುವ ಸಾಧ್ಯತೆಯಿದೆ. ಮುಂದೆ ಈ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಹೇಳಲಾಗಿದೆ.2008: ಕೊಲಂಬೋದಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಉತ್ತರ ಶ್ರೀಲಂಕಾದಲ್ಲಿ ಸೇನೆ ಹಾಗೂ ಎಲ್ ಟಿ ಟಿ ಇ ನಡುವಣ ಕಾಳಗದಲ್ಲಿ 52 ಮಂದಿ ಸಾವನ್ನಪ್ಪಿದರು. ಸಾವನ್ನಪ್ಪಿದವರಲ್ಲಿ ಹದಿನಾಲ್ಕು ಮಂದಿ ಸೈನಿಕರು ಹಾಗೂ 38 ಮಂದಿ ಎಲ್ ಟಿ ಟಿ ಐ ಉಗ್ರರು ಎಂದು ಸೇನೆ ಹೇಳಿತು.
2007: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಸ್ಟ್ 30ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿತು. ಚುನಾವಣೆ ನಡೆಯಬೇಕಿದ್ದ 208 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 163 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಈಗ ಚುನಾವಣೆ ನಡೆಯಲಿದೆ ಎಂದು ಆಯೋಗದ ಮುಖ್ಯ ಆಯುಕ್ತ ಎಂ.ಆರ್. ಹೆಗಡೆ ಹಾಗೂ ಅಧೀನ ಕಾರ್ಯದರ್ಶಿ ಎಚ್. ಎಸ್. ಉದಯಶಂಕರ್ ಈದಿನ ಬೆಂಗಳೂರಿನಲ್ಲಿ ಪ್ರಕಟಿಸಿದರು.
2007: ನವದೆಹಲಿಯ ಗುತ್ತಿಗೆದಾರರೊಬ್ಬರಿಂದ ರೂ 5 ಕೋಟಿಗಳನ್ನು ಬಲವಂತವಾಗಿ ವಸೂಲಿ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಭೂಗತ ದೊರೆ ಅಬು ಸಲೇಂನನ್ನು ಈ ಹಿಂದೆ ಹಾಜರುಪಡಿಸಲು ವಿಫಲವಾಗಿರುವ ಮುಂಬೈ ಪೊಲೀಸರಿಗೆ ಈಗ ಆತನನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ವಾರಂಟ್ ಹೊರಡಿಸಿತು. ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಕೌರ್ ಅವರು ಆಗಸ್ಟ್ 21ರಂದು ಅಬು ಸಲೇಂನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳುವಂತೆ ಮುಂಬೈನ ಅರ್ಥರ್ ಕಾರಾಗೃಹ ಆಡಳಿತಕ್ಕೆ ನಿರ್ದೇಶನ ನೀಡಿದರು. ದಕ್ಷಿಣ ದೆಹಲಿಯ ಗುತ್ತಿಗೆದಾರ ಅಶೋಕ್ ಗುಪ್ತ ಎಂಬವರಿಗೆ ಸಲೇಂ ಮತ್ತು ಆತನ ಸಹಚರರು 2002ರಲ್ಲಿ ಬೆದರಿಕೆ ಹಾಕಿರುವ ಆರೋಪವಿತ್ತು.
2007: ಅಮೆರಿಕದ ಮಿನ್ನಿಯಾಪೊಲೀಸ್ ಹೆದ್ದಾರಿಯಲ್ಲಿ ಮಿಸಿಸಿಪ್ಪಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕುಸಿದು ಐವರು ಮೃತಪಟ್ಟು 20 ಜನರು ನಾಪತ್ತೆಯಾದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು ಎಂದು ಅಮೆರಿಕದ ಪೊಲೀಸ್ ಇಲಾಖೆ ಖಚಿತಪಡಿಸಿತು.
2007: ಪತ್ನಿ ಶಕೀರಾ ಅವರನ್ನು ಕೊಲೆ ಮಾಡಿದ ಸ್ವಾಮಿ ಶ್ರದ್ಧಾನಂದ ಅವರಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಪ್ರಕರಣದ ವಿಚಾರಣಾ ಪೀಠದಲ್ಲಿ ಕುಳಿತುಕೊಳ್ಳಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕರ್ನಾಟಕ ಮೂಲದ ಆರ್.ವಿ. ರವೀಂದ್ರನ್ ನಿರಾಕರಿಸಿದರು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಮೂವರು ಸದಸ್ಯರ ಪೀಠದ ಮುಂದೆ ಪ್ರಕರಣ ಬಂದಾಗ, ರವೀಂದ್ರನ್ ಅವರು ತಮ್ಮನ್ನು ವಿಚಾರಣಾ ಪೀಠದಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡರು. ಈ ಬೆಳವಣಿಗೆಯಿಂದಾಗಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳಿರುವ ಮತ್ತೊಂದು ಪೀಠಕ್ಕೆ ವರ್ಗಾಯಿಸಿದರು. ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಬೇಗಂ ಶಕೀರಾ ಅವರ ಅಪಾರ ಪ್ರಮಾಣದ ಆಸ್ತಿ ಲಪಟಾಯಿಸಲು ಶ್ರದ್ಧಾನಂದ 1986ರಲ್ಲಿ ಮದುವೆಯಾಗಿದ್ದರು. ನಂತರ 1991ರಲ್ಲಿ ಶಕೀರಾ ಅವರನ್ನು ಜೀವಂತವಾಗಿ ಬೆಂಗಳೂರಿನಲ್ಲಿರುವ ತಮ್ಮ ಬಂಗ್ಲೆಯ ಆವರಣದಲ್ಲಿಯೇ ಹೂತುಹಾಕಿದ್ದರು. ಸ್ವಯಂ ಘೋಷಿತ ಸ್ವಾಮಿ ಶ್ರದ್ಧಾನಂದ ಅವರು ತಮ್ಮ ಪತ್ನಿಯನ್ನು ಹತ್ಯೆ ಮಾಡಿದರು ಎಂದು ವಿಚಾರಣಾ ನ್ಯಾಯಾಲಯ ತೀರ್ಪುನೀಡಿ, ಮರಣ ದಂಡನೆ ವಿಧಿಸಿತು. ಈ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿಯಿತು. 2005ರಲ್ಲಿ ಹೈಕೋರ್ಟ್ ತೀರ್ಪನ್ನು ಶ್ರದ್ಧಾನಂದ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. 2007ರ ಮೇ 19ರಂದು ಶ್ರದ್ಧಾನಂದ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ ದ್ವಿಸದಸ್ಯ ನ್ಯಾಯಪೀಠ, ಶಿಕ್ಷೆ ಪ್ರಮಾಣ ಪ್ರಕಟಿಸುವಲ್ಲಿ ವಿಭಿನ್ನ ಅಭಿಪ್ರಾಯ ತಾಳಿತು. ನ್ಯಾಯಮೂರ್ತಿ ಎಸ್.ಬಿ. ಸಿನ್ಹಾ ಅವರು ಜೀವಾವಧಿ ಶಿಕ್ಷೆ ನೀಡಿದರೆ, ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಮರಣ ದಂಡನೆಯನ್ನು ಎತ್ತಿ ಹಿಡಿದಿದ್ದರು. ಇದರಿಂದಾಗಿ ಶಿಕ್ಷೆಯ ಪ್ರಮಾಣವನ್ನು ಸ್ಪಷ್ಟಗೊಳಿಸಲು ಉನ್ನತ ಪೀಠಕ್ಕೆ ಪ್ರಕರಣವನ್ನು ರವಾನಿಸಲಾಗಿತ್ತು.
2007: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರವು, ಕೇರಳದಲ್ಲಿರುವ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರವನ್ನು (ಆರ್ ಜಿ ಸಿ ಬಿ) ತನ್ನ ವಶಕ್ಕೆ ತೆಗೆದುಕೊಂಡು ಅದಕ್ಕೆ ಸ್ವಾಯತ್ತತೆ ನೀಡುವ ನಿರ್ಧಾರ ಕೈಗೊಂಡಿತು. ಆರ್ ಜಿ ಸಿ ಬಿ ವಶಕ್ಕೆ ತೆಗೆದುಕೊಳ್ಳುವುದರಿಂದ ರಾಜ್ಯ ಹಾಗೂ ಆ ಪ್ರದೇಶದಲ್ಲಿ ಜೈವಿಕ ತಂತ್ರಜ್ಞಾನದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ವಾರ್ತಾ ಹಾಗೂ ಪ್ರಸಾರ ಸಚಿವ ಪಿ.ಆರ್. ದಾಸ್ ಮುನ್ಷಿ ಸಂಪುಟ ಸಭೆಯ ನಂತರ ಪ್ರಕಟಿಸಿದರು.
2007: ರಷ್ಯದ ಎರಡು ಮಿನಿ ಜಲಾಂತರ್ಗಾಮಿಗಳು 27 ನಿಮಿಷಗಳ ಅಂತರದಲ್ಲಿ ಉತ್ತರ ಧ್ರುವದಲ್ಲಿರುವ ಆರ್ಕ್ಟಿಕ್ ಸಮುದ್ರದ ತಳವನ್ನು ಯಶಸ್ವಿಯಾಗಿ ಮುಟ್ಟಿದವು. ಮೀರ್- 1 ಮತ್ತು ಮೀರ್- 2 ಹೆಸರಿನ ಈ ಜಲಾಂತರ್ಗಾಮಿಗಳಲ್ಲಿ ಸಾಹಸಿ ನಾವಿಕರು 4,300 ಮೀಟರ್ ಆಳಕ್ಕೆ ತೆರಳಿ ತಮ್ಮ ಪಾರಮ್ಯ ಪ್ರದರ್ಶಿಸಿದರು. ಈ ಸಮುದ್ರ ಪ್ರದೇಶ ತನಗೆ ಸೇರಿದ್ದೆಂದು ರಷ್ಯ ಹೇಳುತ್ತ ಬಂದಿದ್ದು, ಕೆಲವು ರಾಷ್ಟ್ರಗಳು ಇದನ್ನು ವಿರೋಧಿಸಿದ್ದವು. ಜಲಾಂತರ್ಗಾಮಿಗಳ ಸಾಹಸದಿಂದಾಗಿ ರಷ್ಯ ಮೊದಲ ಬಾರಿಗೆ ಆರ್ಕ್ಟಿಕ್ ಸಮುದ್ರದ ಮೇಲೆ ತನ್ನ ಹಿಡಿತ ಸಾಧಿಸಿದಂತಾಯಿತು. ಅದರ ನಾವಿಕರು ಸಮುದ್ರದ ಗರ್ಭದೊಳಗೆ ಲೋಹದ ಧ್ವಜ ನೆಟ್ಟು ಬಂದರು. ಆರ್ಕ್ಟಿಕ್ ಸಮುದ್ರದಲ್ಲಿ ವಿಶ್ವದ ಶೇಕಡ 25ರಷ್ಟು ತೈಲ ನಿಕ್ಷೇಪ ಇದೆ ಎಂದು ತಜ್ಞರು ಹೇಳಿದ್ದು ಈ ಪ್ರದೇಶದ ಹಿಡಿತಕ್ಕೆ ಸ್ಪರ್ಧೆ ಆರಂಭಕ್ಕೆ ಕಾರಣವಾಯಿತು.
2007: 2007ರ ಸಾಲಿನ `ಜಿ.ಆರ್. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ'ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಎಸ್ ಐ ಆರ್ ಭಟ್ನಾಗರ್ ಫೆಲೋ ಆಗಿರುವ ಅವರು, ಸಾವಯವ ಸಮನ್ವಯ ಸಿದ್ಧಾಂತದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ಈ ನೂತನ ಪರಿಕಲ್ಪನೆ ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.
2006: ಮೂರು ವರ್ಷಗಳ ಹಿಂದೆ ತಂಪು ಪಾನೀಯಗಳಲ್ಲಿ ಕೀಟನಾಶಕಗಳು ಪತ್ತೆಯಾಗಿ ಎದ್ದಿದ್ದ ಭಾರಿ ವಿವಾದ ತಣ್ಣಗಾಗುವ ಮೊದಲೇ ಕೋಕಾ ಕೋಲಾ ಮತ್ತು ಪೆಪ್ಸಿಯ 11 ಜನಪ್ರಿಯ ಬಾಂಡುಗಳಲ್ಲಿ ಅಪಾಯಕಾರಿ ಮಟ್ಟದ ಕೀಟ ನಾಶಕಗಳ ಅಂಶ ಪತ್ತೆಯಾಗಿರುವುದಾಗಿ ದೆಹಲಿಯ ಸರ್ಕಾರೇತರ ಸಂಸ್ಥೆ (ಎನ್ಜಿಓ) ವಿಜ್ಞಾನ ಮತ್ತು ಪರಿಸರ ಕೇಂದ್ರವು ನವದೆಹಲಿಯಲ್ಲಿ ಪ್ರಕಟಿಸಿತು. ಕೇಂದ್ರವು 25 ಉತ್ಪಾದನಾ ಕೇಂದ್ರಗಳಿಂದ ಸಂಗ್ರಹಿಸಿದ 11 ತಂಪು ಪಾನೀಯಗಳ 57 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 3ರಿಂದ 5 ವಿವಿಧ ಕೀಟನಾಶಕಗಳ ಅಂಶಗಳು ಪತ್ತೆಯಾದವು ಎಂದು ಕೇಂದ್ರದ ನಿರ್ದೇಶಕಿ ಸುನೀತಾ ನಾರಾಯಣ್ ಪ್ರಕಟಿಸಿದರು.
2006: ಚೆನ್ನೈಯ ಎಂಜಿನಿಯರಿಂಗ್ ಪದವೀಧರ ಅಭಿಷೇಕ್ ಕುಮಾರ (22) ಅವರು ಮೈಕ್ರೋಸಾಫ್ಟ್ ಕಂಪೆನಿಯ ರೆಡ್ಮೊಂಡ್ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಮುಖ್ಯ ಶಿಲ್ಪಿ ಬಿಲ್ ಗೇಟ್ಸ್ ಜೊತೆಗೆ ಕೆಲಸ ಮಾಡುವ ಅಪರೂಪದ ಗೌರವ ಪಡೆದರು.
2001: ಕೊಲಂಬೋದಲ್ಲಿ ನಡೆದ ಕೊಕಾ-ಕೋಲಾ ಟ್ರೋಫಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 100 ರನ್ನುಗಳನ್ನು ಗಳಿಸುವ ಮೂಲಕ ವೀರೇಂದ್ರ ಸೆಹ್ ವಾಗ್ ಅವರು ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಎರಡನೇ `ವೇಗದ ಶತಕ' (69 ಬಾಲ್ ಗಳಿಗೆ) ಬಾರಿಸಿದ ಭಾರತೀಯ ಎನಿಸಿದರು.
2006: ಮಾಜಿ ಒಲಿಂಪಿಯನ್, ಫುಟ್ ಬಾಲ್ ಆಟಗಾರ ಬಲರಾಂ ಪರಬ್ ಮುಂಬೈಯಲ್ಲಿ ನಿಧನರಾದರು.
2006: ಸಮಾಜ ಶಾಸ್ತ್ರಜ್ಞೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನಾಡೋಜ ಪ್ರೊ. ಸಿ. ಪಾರ್ವತಮ್ಮ (40) ಮೈಸೂರಿನಲ್ಲಿ ನಿಧನರಾದರು.
1990: ಸದ್ದಾಂ ಹುಸೇನ್ ಕುವೈಟ್ ಮೇಲೆ ದಾಳಿ ನಡೆಸಿದರು.
1990: ಕ್ಯೂಬಾದ ಹೆವಿವೇಯ್ಟ್ ಬಾಕ್ಸರ್ ಟಿಯೋಫಿಲೋ ಸ್ಟೀವನ್ ಸನ್ (ಲೊರೆಂಝೊ) ಅವರು ಒಂದೇ ವಿಭಾಗದಲ್ಲಿ ಸತತವಾಗಿ ಮೂರು ಬಾರಿ ಒಲಿಂಪಿಕ್ ಸ್ವರ್ಣ ಗ್ದೆದ ಪ್ರಥಮ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾದರು. ಈ ಮೊದಲು ಅವರು 1972ರಲ್ಲಿ ಮ್ಯೂನಿಚ್ ಮತ್ತು 1976ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಹೆವಿ ವೇಯ್ಟ್ ಬಾಕ್ಸಿಂಗ್ ಸ್ವರ್ಣ ಗೆದ್ದಿದ್ದರು.
1938: ಡಾ. ಸಿ. ಅಶ್ವತ್ಥ ಜನನ.
1925: ಮನೋಹರ ಬಾಲಚಂದ್ರ ಘಾಣೇಕರ್ ಜನನ.
1923: ಅಮೆರಿಕದ 29ನೇ ಅಧ್ಯಕ್ಷ ವಾರನ್ ಜಿ ಹರ್ಡಿಂಗ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು.
1899: ಡಿ.ಸಿ. ಪಾವಟೆ ಜನನ.
1887: ಹದಿನೆಂಟನೇ ಶತಮಾನದ ಖ್ಯಾತ ಇಂಗ್ಲಿಷ್ ಚಿತ್ರ ಕಲಾವಿದ ಥಾಮಸ್ ಗೇಯಿನ್ಸ್ ಬೊರೊ ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.
1876: `ವೈಲ್ಡ್ಬಿಲ್' ಎಂದೇ ಹೆಸರಾಗಿದ್ದ ಹಿಕ್ ಕಾಕ್ ಅವರು ದಕ್ಷಿಣ ಡಕೋಟಾದ ಡೆಡ್ ವುಡ್ ನ ಸಲೂನ್ ನಲ್ಲಿ ಫೋಕರ್ ಆಡುತ್ತಿದ್ದಾಗ ಗುಂಡೇಟಿನಿಂದ ಸಾವನ್ನಪ್ಪಿದರು.
1858: ಬ್ರಿಟಿಷ್ ಸಂಸತಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಆಡಳಿತವನ್ನು ಹಸ್ತಾಂತರಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ತೀರ್ಮಾನದ ಬಳಿಕ ಭಾರತದ ಆಡಳಿತ ನಿರ್ವಹಣೆಗೆ ವೈಸ್ ರಾಯ್ ಅವರನ್ನು ನೇಮಕ ಮಾಡಲಾಯಿತು.
1852: ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯ (2-8-1852ರಿಂದ 26-12-1943) ಅವರು ಚನ್ನಪಟ್ಟಣದಲ್ಲಿ ಜನಿಸಿದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment