ಇಂದಿನ ಇತಿಹಾಸ
ಆಗಸ್ಟ್ 14
ದೇಶಕ್ಕಾಗಿ ಪ್ರಾಣತೆತ್ತ ಬೆಂಗಳೂರಿನ ಕರ್ನಲ್ ವಸಂತ್ ವೇಣುಗೋಪಾಲ್ ಅವರಿಗೆ ಕೇಂದ್ರ ಸರ್ಕಾರವು ಈ ಬಾರಿಯ ಮರಣೋತ್ತರ ಅಶೋಕ ಚಕ್ರ ಶೌರ್ಯ ಪ್ರಶಸ್ತಿ ಘೋಷಿಸಿತು. 9 ಮರಾಠಾ ಲೈಟ್ ಇನ್ ಫೆಂಟ್ರಿಯ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿಯಾಗಿದ್ದ ವಸಂತ್ ಕಾಶ್ಮೀರದ ಉರಿ ವಿಭಾಗದಲ್ಲಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದರು.
2008: ಮಂಗಳೂರು ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿ (ಮೂಡುಬಿದಿರೆ ರಸ್ತೆ) ಗುರುಪುರ ಸೇತುವೆ ಬದಿಯ ಉಳಾಯಿಬೆಟ್ಟು ಎಂಬಲ್ಲಿ ಶಾಲಾ ವಾಹನವೊಂದು ಫಲ್ಗುಣಿ ನದಿಗೆ ಉರುಳಿ ಬಿದ್ದು (ಪಲ್ಟಿಯಾಗಿ) ಏಳು ಮಕ್ಕಳೂ ಸೇರಿದಂತೆ 11 ಮಂದಿ ಮೃತರಾದ ದಾರುಣ ಘಟನೆ ನಡೆಯಿತು. ಗ್ರಾಮಸ್ಥರು ಸೇರಿ ವಾಹನದಲ್ಲಿ 36 ಮಂದಿ ಇದ್ದರು. ನದಿಗೆ ಉರುಳಿದ ಶಾಲಾ ವಾಹನದಲ್ಲಿದ್ದ 24 ಮಂದಿಯನ್ನು ರಕ್ಷಿಸಲಾಯಿತು.
2007: ದೇಶಕ್ಕಾಗಿ ಪ್ರಾಣತೆತ್ತ ಬೆಂಗಳೂರಿನ ಕರ್ನಲ್ ವಸಂತ್ ವೇಣುಗೋಪಾಲ್ ಅವರಿಗೆ ಕೇಂದ್ರ ಸರ್ಕಾರವು ಈ ಬಾರಿಯ ಮರಣೋತ್ತರ ಅಶೋಕ ಚಕ್ರ ಶೌರ್ಯ ಪ್ರಶಸ್ತಿ ಘೋಷಿಸಿತು. 9 ಮರಾಠಾ ಲೈಟ್ ಇನ್ ಫೆಂಟ್ರಿಯ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿಯಾಗಿದ್ದ ವಸಂತ್ ಕಾಶ್ಮೀರದ ಉರಿ ವಿಭಾಗದಲ್ಲಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. 2007ರ ಜುಲೈ 31ರಂದು ನಿಯಂತ್ರಣ ರೇಖೆ ಮೂಲಕ ಗಡಿಯೊಳಗೆ ನುಗ್ಗಲೆತ್ನಿಸಿದ ಭಯೋತ್ಪಾದಕರನ್ನು ತಡೆಯಲು ಅವರೇ ಸ್ವತಃ ಸೈನ್ಯದ ನೇತೃತ್ವ ವಹಿಸಿದ್ದರು. ಗಾಯಗೊಂಡರೂ ಲೆಕ್ಕಿಸದೆ ಮೂವರು ಭಯೋತ್ಪಾದಕರನ್ನು ಕೊಂದ ವಸಂತ್ ವೀರಮರಣ ಹೊಂದಿದ್ದರು.
2007: ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಡಪಕ್ಷಗಳನ್ನು ಮನವೊಲಿಸುವ ಕ್ರಮವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ನಡೆಸಿದ ಮಾತುಕತೆ ಫಲಪ್ರದವಾಗಲಿಲ್ಲ. ಭಿನ್ನಾಭಿಪ್ರಾಯ ಪರಿಹರಿಸಲು ಯತ್ನಿಸಲಾಗುವುದು ಎಂದು ಈ ಮುಖಂಡರು ಹೇಳಿದರಾದರೂ ಕೊನೆಯಲ್ಲಿ ಕಾರಟ್ ತಮ್ಮ ನಿಲುವಿಗೇ ಬಲವಾಗಿ ಅಂಟಿಕೊಂಡರು. ಸಭೆಯ ನಂತರ ಸಿಪಿಎಂ ಪಾಲಿಟ್ ಬ್ಯೂರೊ, ಪ್ರಧಾನಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ ಪ್ರತಿಯೊಂದು ಅಂಶವನ್ನೂ ಕಟುವಾಗಿ ಟೀಕಿಸಿತು.
2007: ಇಂಗ್ಲೆಂಡ್ ವಿರುದ್ಧದ ಸರಣಿ ವಿಜಯದೊಂದಿಗೆ ಭಾರತ ಕ್ರಿಕೆಟ್ ತಂಡವು ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಒಮ್ಮೆಲೇ ಎರಡು ಸ್ಥಾನ ಮೇಲೇರಿತು. ಮೂರು ಪಂದ್ಯಗಳ ಸರಣಯಲ್ಲಿ 1-0 ಗೆಲುವು ಪಡೆದ ರಾಹುಲ್ ನೇತೃತ್ವದ ಪಡೆಯು ಎಲ್ ಜಿ ಪ್ರಾಯೋಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಅದು ತನ್ನ ಖಾತೆಯಲ್ಲಿ ಒಟ್ಟು 107 ರ್ಯಾಂಕಿಂಗ್ ಪಾಯಿಂಟುಗಳನ್ನು ಹೊಂದಿತು. ಶ್ರೀಲಂಕಾ ಕೂಡ ಭಾರತದಷ್ಟೇ ಪಾಯಿಂಟುಗಳನ್ನು ಗಳಿಸಿತು. ಐಸಿಸಿ ರೂಪಿಸಿರುವ ರ್ಯಾಂಕಿಂಗ್ ಲೆಕ್ಕಾಚಾರದಲ್ಲಿ ಭಾರತವು ಸಿಂಹಳೀಯರ ನಾಡಿನ ಪಡೆಗಿಂತ ಮೇಲಿನ ಸ್ಥಾನವನ್ನು ಗಿಟ್ಟಿಸಿತು. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.
2007: ಅನಿವಾಸಿ ಭಾರತೀಯ ಕೈಗಾರಿಕೋದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರ ಕಪಾರೊ ಸಂಸ್ಥೆ, ಪಾಲ್ ಅವರ ಹುಟ್ಟೂರು ಜಲಂಧರಿನಲ್ಲಿ ಉತ್ಕೃಷ್ಟ ದರ್ಜೆಯ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿತು. ಉತ್ಪಾದನಾ ಕ್ಷೇತ್ರ, ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ ಮೆಂಟಿಗೆ ಸಂಬಂಧಿಸಿದ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತದೆ.
`ದಿ ಕಪಾರೊ ಸ್ಕೂಲ್ ಆಫ್ ಎಕ್ಸಲೆನ್ಸಿ' ನನ್ನ ಮಗಳು ಅಂಬಿಕಾ ಹೆಸರಿನಲ್ಲಿ ಭಾರತಕ್ಕೆ ನಾನು ನೀಡುತ್ತಿರುವ ಕೊಡುಗೆ. ನನ್ನ ಹುಟ್ಟೂರು ಜಲಂಧರಿಗೆ ನಾನು ಏನನ್ನಾದರೂ ನೀಡಲು ಸಾಧ್ಯವಾಗುತ್ತಿರುವ ಬಗ್ಗೆ ನನಗೆ ಹೆಮ್ಮೆ ಉಂಟಾಗುತ್ತಿದೆ' ಎಂದು ಸ್ವರಾಜ್ ಪಾಲ್ ಪ್ರತಿಕ್ರಿಯಿಸಿದರು. ಜಲಂಧರದಿಂದ 16 ಕಿ.ಮೀ. ದೂರದಲ್ಲಿ ಸ್ಥಾಪನೆಯಾಗಿರುವ `ಸ್ಕೂಲ್ ಆಫ್ ಎಕ್ಸಲೆನ್ಸಿ'ಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡಿನ ಆಯ್ದ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ `ಡ್ರೀಮ್ ಟೀಮ್ ಆಫ್ ಎಂಜಿನಿಯರ್ಸ್' ಎಂಬ ತಂಡವನ್ನು ಕಟ್ಟಲಾಗುವುದು. ಈ ಭಾಗದಲ್ಲಿ ಉತ್ಕೃಷ್ಟ ಮಟ್ಟದ ಎಂಜಿನಿಯರಿಂಗ್ ತಾಂತ್ರಿಕ ಶಿಕ್ಷಣ ನೀಡುವ ಏಕೈಕ ಸಂಸ್ಥೆ ಇದಾಗಿದೆ. ರಕ್ತ ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಯಿಂದ 1968ರಲ್ಲಿ ಮರಣ ಹೊಂದಿದ ಅಂಬಿಕಾ ಪಾಲ್ ಅವರ ಸ್ಮಾರಕಾರ್ಥವಾಗಿ ಈ ಶಿಕ್ಷಣ ಸಂಸ್ಥೆಯನ್ನು ಕಪಾರೊ ಆರಂಭಿಸಿತು.
2007: ಭಾರತವು ತನ್ನ 60ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂಭ್ರಮದಲ್ಲಿದ್ದಾಗ ಅಮೆರಿಕ ಮೂಲದ `ಬ್ಯುಸಿನೆಸ್ ವೀಕ್' ನಿಯತಕಾಲಿಕವು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ, ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತರಬಲ್ಲ ಸಾಮರ್ಥ್ಯವಿರುವ 50 ಪ್ರಭಾವಿ ಭಾರತೀಯ ಗಣ್ಯರನ್ನು ಪಟ್ಟಿ ಮಾಡಿತು. ಈ ಪಟ್ಟಿಯಲ್ಲಿ ಉದ್ಯಮ ದೊರೆಗಳಾದ ರತನ್ ಟಾಟಾ, ಮುಖೇಶ್ ಅಂಬಾನಿ, ಸುನೀಲ್ ಮಿತ್ತಲ್, ಆನಂದ್ ಮಹೀಂದ್ರ, ಅನಿಲ್ ಅಗರವಾಲ್, ಬಿ. ಮುತ್ತುರಾಮನ್, ಎ.ಎಂ. ನಾಯ್ಕ್, ವಾಣಿಜ್ಯ ಸಚಿವ ಕಮಲನಾಥ್, ವಾಯುಯಾನ ಸಚಿವ ಪ್ರಫುಲ್ ಪಟೇಲ್, ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ದೆಹಲಿ ಮೆಟ್ರೋ ಮುಖ್ಯಸ್ಥ ಇ. ಶ್ರೀಧರನ್, ಚಿತ್ರ ನಟರಾದ ಅಮಿತಾಭ್ ಬಚ್ಚನ್, ರಜನಿಕಾಂತ್, ಶಾರೂಖ್ ಖಾನ್, ಐಶ್ವರ್ಯ ರೈ ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್, ಆಟಗಾರ ಸಚಿನ್ ತೆಂಡೂಲ್ಕರ್, ಬ್ಯಾಂಕರುಗಳಾದ ಕೆ.ವಿ. ಕಾಮತ್, ದೀಪಕ್ ಪಾರೇಖ್ ಸೇರ್ಪಡೆಯಾದರು. ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿರುವ ಮಾಹಿತಿ ತಂತ್ರಜ್ಞಾನ ದಿಗ್ಗಜರಾದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಎಸ್. ರಾಮದೊರೈ ಸಹ ಈ ಪಟ್ಟಿಯಲ್ಲಿ ಸೇರ್ಪಡೆಯಾದರು.
2007: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಮುಖ್ಯ ಸಲಹೆಗಾರ ಎನ್. ಆರ್. ನಾರಾಯಣ ಮೂರ್ತಿ ಅವರ ವಿರುದ್ಧ ಕರ್ನಾಟಕ ರಕ್ಷಣಾ ವಕೀಲರ ವೇದಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿತು. ಈ ಸಂಬಂಧ ಬೆಂಗಳೂರು ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೋ ಪಾಲಿಟನ್ ನ್ಯಾಯಾಧೀಶರು (ಎರಡನೇ ಎಸಿಎಂಎಂ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಾರಾಯಣ ಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಕೆ. ಭಕ್ತವತ್ಸಲ ಅವರು, `ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸಲು ಅವಕಾಶವಿಲ್ಲ' ಎಂದು ಆದೇಶಿಸಿ ವಿಚಾರಣೆಯನ್ನು ರದ್ದುಗೊಳಿಸಿದರು. ಮೈಸೂರಿನ ಇನ್ಫೋಸಿಸ್ ಗ್ಲೋಬಲ್ ಟ್ರೈನಿಂಗ್ ಸೆಂಟರಿಗೆ ಆಗಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಬದಲು, ವಾದ್ಯದ ಮೂಲಕ ನುಡಿಸಲಾಗಿತ್ತು. ಇದರಿಂದ ರಾಷ್ಟ್ರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ದೂರಿ ಕರ್ನಾಟಕ ರಕ್ಷಣಾ ವಕೀಲರ ವೇದಿಕೆ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ರಾಷ್ಟ್ರಗೀತೆಯನ್ನು ಹಾಡುವ ಬದಲಾಗಿ, ಸಂಗೀತ ವಾದ್ಯದ ಮೂಲಕ ನುಡಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿತು. `ರಾಷ್ಟ್ರೀಯ ಗೌರವ ಕಾಯ್ದೆ'ಯ ಪ್ರಕಾರ ಹಾಡುವುದು ಅಥವಾ ಸಂಗೀತ ವಾದ್ಯದ ಮೂಲಕ ನುಡಿಸುವುದು ಎರಡಕ್ಕೂ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿ ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
2007: ಕಣ್ಣಿನ ಕೆಳ ಭಾಗದ ಮತ್ತು ಮೂಗಿನ ಪಕ್ಕದಲ್ಲಿರುವ ಮೂಳೆಯೊಂದಿಗೆ ಕೃತಕ ಹಲ್ಲುಗಳನ್ನು ಜೋಡಿಸುವ `ಜೈಗೊಮ್ ಇಂಪ್ಲಾಂಟ್ಸ್' ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಸಾಗರ್ ಅಪೊಲೋದಲ್ಲಿ ನೆರವೇರಿಸಲಾಯಿತು. ಆರು ತಿಂಗಳ ಹಿಂದೆ ಅಮೆರಿಕ, ಫ್ರಾನ್ಸಿನಲ್ಲಿ ಜಾರಿಗೆ ಬಂದ ಈ ವಿಧಾನದ ಈ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ಸರ್ಜನ್ ಡಾ. ಗಿರೀಶ್ ರಾವ್ ಮತ್ತು ಡಾ. ಆನಂದ ಕೃಷ್ಣ ಅವರಿಬ್ಬರ ನೇತೃತ್ವದಲ್ಲಿ ಸತತ ಮೂರು ಗಂಟೆಗಳ ಕಾಲ ಮಾಡಲಾಯಿತು. ಕೆಲ ವರ್ಷಗಳ ಹಿಂದೆ ವಸಡಿನ ಒಳಗಿರುವ ದವಡೆಯ ಮೂಳೆ ಜತೆ ಕೃತಕ ಹಲ್ಲುಗಳನ್ನು ಶಾಶ್ವತವಾಗಿ ಜೋಡಿಸುವ ಚಿಕಿತ್ಸಾ ವಿಧಾನವನ್ನು ಕಂಡು ಹಿಡಿದ ಬಳಿಕ ಕೃತಕ ಹಲ್ಲು ಸೆಟ್ಟುಗಳ ಜೊತೆಗೆ ಆಗುವ ಕಿರಿ ಕಿರಿಗೆ ಬಹುತೇಕ ಪರಿಹಾರ ಸಿಕ್ಕಿತ್ತು. ಆದರೆ ದವಡೆ ಮೂಳೆಯೂ ಸವೆದು ಹೋಗಿರುವವರಿಗೆ ಕೃತಕ ಹಲ್ಲುಗಳನ್ನು ಜೋಡಿಸುವುದು ಸಾಧ್ಯವಿರಲಿಲ್ಲ. ಇದೀಗ 'ಜೈಗೋಮ್ ಇಂಪ್ಲಾಂಟ್' ಮೂಳೆಗೇ ಕೃತಕ ಹಲ್ಲು ಕೂರಿಸುವಲ್ಲಿ ಯಶಸ್ವಿಯಾಗುವ ಮೂಲಕ ಈ ಸಮಸ್ಯೆಗೂ ಪರಿಹಾರ ಲಭಿಸಿದಂತಾಯಿತು.
2006: ಕಾರ್ಪೊರೇಟ್ ವಲಯದ ಬಲಿಷ್ಠ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇಂದ್ರಾ ನೂಯಿ ಅವರು ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ ಪೆಪ್ಸಿಕೊದ ಮುಂದಿನ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡರು. ಭಾರತದ ತಮಿಳುನಾಡಿನ ಚೆನ್ನೈ ಮೂಲದವರಾದ ಪ್ರಸ್ತುತ ಕನೆಕ್ಟಿಕಟ್ ನಲ್ಲಿ ಪತಿ ರಾಜ್ ಹಾಗೂ ಇಬ್ಬರು ಪುತ್ರಿಯರ ಜೊತೆಗೆ ವಾಸವಾಗಿರುವ ನೂಯಿ 41 ವರ್ಷಗಳ ಪೆಪ್ಸಿಕೊ ಇತಿಹಾಸದಲ್ಲಿ 5ನೇ ಸಿಇಓ.
2006: ಸಾರ್ವಜನಿಕ ಪ್ರದೇಶಗಳಾದ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಹಾಗೂ ಆಸ್ಪತ್ರೆಗಳ ಆವರಣಗಳ ಜೊತೆಗೆ ಸರ್ಕಾರಿ ಕಚೇರಿ ಆವರಣದಲ್ಲೂ ತಂಪು ಪಾನೀಯಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತು.
2006: ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಕೊಲಂಬೊ ನಿವಾಸದ ಬಳಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು 7 ಮಂದಿ ಅಸು ನೀಗಿದರು. ಪ್ರವಾಸಿ ಭಾರತದ ಕ್ರಿಕೆಟ್ ತಂಡದ ಸದ್ಯಸ್ಯರಾರಿಗೂ ಯಾವುದೇ ತೊಂದರೆ ಆಗಲಿಲ್ಲ.
2006: ಐದು ವಾರಗಳಿಂದ ನಡೆಯುತ್ತಿದ್ದ ಇಸ್ರೇಲ್- ಲೆಬನಾನ್ ಸಂಘರ್ಷ ಕೊನೆಗೊಳಿಸಲು ವಿಶ್ವಸಂಸ್ಥೆ ರೂಪಿಸಿದ ಕದನ ವಿರಾಮ ಈ ದಿನ ಬೆಳಗ್ಗೆ 5 ಗಂಟೆ (ಭಾರತೀಯ ಕಾಲಮಾನ ಬೆಳಗ್ಗೆ 10.30) ಜಾರಿಗೆ ಬಂದಿತು.
2006: ಹೈಕೋರ್ಟ್ ತೀರ್ಪಿನ ಹಿನ್ನೆಲೆಯ್ಲಲಿ ಕರ್ನಾಟಕದ 250 ಕೇಂದ್ರಗಳಲ್ಲಿ `ಪ್ಲೇವಿನ್' ಲಾಟರಿ ಮಾರಾಟ ಪುನರಾರಂಭಗೊಂಡಿತು.
2006: ಇರಾಕಿನ ರಾಜಧಾನಿ ಬಾಗ್ದಾದಿನ ಆಗ್ನೇಯ ಭಾಗದಲ್ಲಿ ಜನ ದಟ್ಟಣೆಯ ವಾಣಿಜ್ಯ ಸಂಕೀರ್ಣಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 57 ಜನ ಸತ್ತು 150ಕ್ಕೂ ಹೆಚ್ಚು ಜನ ಗಾಯಗೊಂಡರು.
2006: ಉತ್ತರ ಕರ್ನಾಟಕದ ಉದ್ಯಮಶೀಲ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಹುಬ್ಬಳ್ಳಿಯ `ವಿಮೆನ್ ಇನ್ ಬಿಸಿನೆಸ್' ಸಂಸ್ಥೆಯ ಲೀಲಾ ಕರವೀರ ಶೆಟ್ಟರ (42) ನಿಧನರಾದರು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸ್ವತಃ ಹುಟ್ಟು ಹಾಕಿದ `ವಿನ್ ಬಿ' ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರೂ ಸೇರಿದಂತೆ ಮಹಿಳೆಯರಿಗಾಗಿ 400ಕ್ಕೂ ಹೆಚ್ಚು ವಿವಿಧ ತರಬೇತಿ ಶಿಬಿರಗಳನ್ನು ಲೀಲಾ ಸಂಘಟಿಸಿದ್ದರು. ಜೈಂಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಅವರಿಗೆ `ವುಮನ್ ಅಚೀವರ್' ಪ್ರಶಸ್ತಿ ನೀಡಿ ಗೌರವಿಸಿತ್ತು.
1995: ವಿದೇಶ ಸಂಚಾರ ನಿಗಮ ನಿಯಮಿತವು (ವಿಎಸ್ಸೆನ್ನೆಲ್) ಭಾರತದಲ್ಲಿ ತನ್ನ ಇಂಟರ್ ನೆಟ್ ಅಭಿವೃದ್ಧಿ ಸೇವೆಯನ್ನು ಆರಂಭಿಸಿತು.
1953: ಸರಜೂ ಕಾಟ್ಕರ್ ಜನನ.
1951: ವೃತ್ತಪತ್ರಿಕಾ ಪ್ರಕಾಶಕ ವಿಲಿಯಮ್ ರಾಂಡಾಲ್ಫ್ ಹಿಯರೆಸ್ಟ್ ತಮ್ಮ 88ನೇ ವಯಸ್ಸಿನಲ್ಲಿ ಬೆವೆರ್ಲಿ ಹಿಲ್ಸಿನಲ್ಲಿ ಮೃತರಾದರು.
1947: ಭಾರತವು ವಿಭಜನೆಗೊಂಡು, ಪಾಕಿಸ್ತಾನವು ಸ್ವತಂತ್ರ ರಾಷ್ಟ್ರವಾಯಿತು. ಎಂ.ಎ. ಜಿನ್ನಾ ಅವರು ರಾಷ್ಟ್ರದ ಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು.
1945: ಜಪಾನ್ ಬೇಷರತ್ತಾಗಿ ಶರಣಾಗತವಾಗಿದೆ ಎಂದು ಅಧ್ಯಕ್ಷ ಟ್ರೂಮನ್ ಪ್ರಕಟಿಸಿದರು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಔಪಚಾರಿಕ ಶರಣಾಗತಿಯು ಸೆಪ್ಟೆಂಬರ್ 2ರಂದು ಯುಎಸ್ಸೆಸ್ ಮಿಸ್ಸೌರಿಯಲ್ಲಿ ನಡೆಯಿತು.
1941: ಅಧ್ಯಕ್ಷ ರೂಸ್ ವೆಲ್ಟ್ ಮತ್ತು ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಅವರು ಉಭಯ ದೇಶಗಳು ಪರಸ್ಪರ ದಾಳಿ ನಡೆಸದಂತೆ ರೂಪಿಸಲಾದ ನಿಯಮಗಳ `ಅಟ್ಲಾಂಟಿಕ್ ಚಾರ್ಟರ್' ಬಿಡುಗಡೆ ಮಾಡಿದರು.
1931: ಸಾಹಿತಿ ಪಳಕಳ ಸೀತಾರಾಮ ಭಟ್ಟ ಜನನ.
1892: ಸಂಶೋಧಕ, ಗ್ರಂಥ ಸಂಪಾದಕ, ಪತ್ರಕರ್ತ ಕ.ಗಿ. ಕುಂದಣಗಾರ ಅವರು ಗಿರಿಯಪ್ಪ- ಶಾಕಾಂಬರಿ ದಂಪತಿಯ ಮಗನಾಗಿ ಬೆಳಗಾವಿ ಜ್ಲಿಲೆ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ ಜನಿಸಿದರು.
1777: ಡ್ಯಾನಿಷ್ ಭೌತವಿಜ್ಞಾನಿ ಮತ್ತು ರಾಸಾಯನಿಕ ತಜ್ಞ ಹ್ಯಾನ್ಸ್ ಕ್ರಿಸ್ಟಿಯನ್ ಓರ್ ಸ್ಟೆಡ್ (1777-1851) ಜನ್ಮದಿನ. ತಂತಿಯಲ್ಲಿನ (ವಯರ್) ವಿದ್ಯುತ್ ಅಲೆಯು ಆಯಸ್ಕಾಂತೀಯ ಕಂಪಾಸ್ ನ ಸೂಜಿಯನ್ನು ಪಕ್ಕಕ್ಕೆ ಬಾಗಿಸುತ್ತದೆ ಎಂಬುದಾಗಿ ಇವರು ಮಾಡಿದ ಸಂಶೋಧನೆಯು `ಎಲೆಕ್ಟ್ರೋ ಮ್ಯಾಗ್ನಟಿಕ್ ಸಿದ್ಧಾಂತ'ದ ಅಭಿವೃದ್ಧಿಗೆ ಸ್ಫೂರ್ತಿ ನೀಡಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment