Thursday, August 13, 2009

ಇಂದಿನ ಇತಿಹಾಸ History Today ಆಗಸ್ಟ್ 13

ಇಂದಿನ ಇತಿಹಾಸ

ಆಗಸ್ಟ್ 13

ಹೆಸರಾಂತ ಸರೋದ್ ವಾದಕ ಪಂಡಿತ್ ಡಾ. ರಾಜೀವ್ ತಾರಾನಾಥ್ ಅವರನ್ನು ಬೆಂಗಳೂರು ಗಾಯನ ಸಮಾಜದಲ್ಲಿ ನಡೆದ 39ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ `ಸಂಗೀತ ಕಲಾರತ್ನ' ಬಿರುದು ನೀಡಿ ಸನ್ಮಾನಿಸಲಾಯಿತು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವ ಎಂ. ವಿ. ರಾಜಶೇಖರನ್ ಅವರು ರಾಜೀವ ತಾರಾನಾಥ್ ಅವರನ್ನು ಸನ್ಮಾನಿಸಿದರು.

ಇಂದು ವಿಶ್ವ ಎಡಚರ ದಿನ.

2008: ಅತಿವೃಷ್ಟಿಯಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿತು. ಮಳೆ ಅನಾಹುತಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬರು ಸೇರಿ ಕರ್ನಾಟಕದಲ್ಲಿ ಒಟ್ಟು 11 ಮಂದಿ ಅಸು ನೀಗಿದರು.

2007: ದೇಶದ ಹಿತಕ್ಕೆ ಮಾರಕವಾಗುವುದೆಂದು ಆತಂಕ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಈ ಒಪ್ಪಂದವನ್ನು ಕೈಬಿಡಬೇಕೆಂದು ಮತ್ತು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಎಡಪಕ್ಷಗಳು ಸತತ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಹಿತದೃಷ್ಟಿಯಿಂದ ಪರಮಾಣು ಪರೀಕ್ಷೆ ನಡೆಸುವ ನಮ್ಮ ಪರಮಾಧಿಕಾರವನ್ನು ಯಾವುದೇ ಕಾರಣಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಸದಸ್ಯರು ಈ ಒಪ್ಪಂದ ಕೈ ಬಿಡುವಂತೆ ಒತ್ತಾಯಿಸಿ ಭಾರಿ ಗದ್ದಲ ಎಬ್ಬಿಸಿ, ಸಭಾಧ್ಯಕ್ಷರ ಪೀಠದ ಮುಂದಿನ ಅಂಗಳದತ್ತ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಧ್ಯಕ್ಷ ಸೋಮನಾಥ ಚಟರ್ಜಿ ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು. ಸಮಾಜವಾದಿ ಪಕ್ಷದ ಸದಸ್ಯರೊಂದಿಗೆ ಬಿಜೆಪಿ ಮತ್ತು ಆಳುವ ರಂಗದ ಅಂಗ ಪಕ್ಷವಾದ ಆರ್ ಜೆಡಿಯ ಸದಸ್ಯರೂ ಗದ್ದಲಕ್ಕೆ ಶಕ್ತ್ಯಾನುಸಾರ ಕೊಡುಗೆ ಸಲ್ಲಿಸಿದರು.

2007: ಹೆಸರಾಂತ ಸರೋದ್ ವಾದಕ ಪಂಡಿತ್ ಡಾ. ರಾಜೀವ್ ತಾರಾನಾಥ್ ಅವರನ್ನು ಬೆಂಗಳೂರು ಗಾಯನ ಸಮಾಜದಲ್ಲಿ ನಡೆದ 39ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ `ಸಂಗೀತ ಕಲಾರತ್ನ' ಬಿರುದು ನೀಡಿ ಸನ್ಮಾನಿಸಲಾಯಿತು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವ ಎಂ. ವಿ. ರಾಜಶೇಖರನ್ ಅವರು ರಾಜೀವ ತಾರಾನಾಥ್ ಅವರನ್ನು ಸನ್ಮಾನಿಸಿದರು.

2007: ಮೊಬೈಲಿನಲ್ಲಿ ಚಾರ್ಜ್ ಕಮ್ಮಿ ಇದೆಯೇ ? ಕೂಡಲೇ ಚಾರ್ಜ್ ಆಗಬೇಕೆ, ಕರೆಂಟ್ ಇಲ್ಲವೇ? ಅಯ್ಯೋ ಚಾರ್ಜರ್ರೂ ಇಲ್ಲವೇ ಯೋಚಿಸಬೇಡಿ. ಒಂದೇ ಒಂದು ಅರಳಿ ಎಲೆ ಕಿತ್ತು ತನ್ನಿ. ತತ್ ಕ್ಷಣವೇ ನಿಮ್ಮ ಮೊಬೈಲಿನಲ್ಲಿ ಭರ್ತಿ ಚಾರ್ಜ್ ಕಾಣಬಹುದು. ಕರ್ನಾಟಕದ ಚಿಕ್ಕನಾಯಕನಹಳ್ಳಿಯಲ್ಲಿ ಈದಿನ ಅನೇಕರು ಇದೇ ಕೆಲಸ ಮಾಡಿದರು. ಚಾರ್ಜ್ ಕಮ್ಮಿ ಇರುವ ಮೊಬೈಲುಗಳನ್ನು ಪಡೆದು ಅದರ ಹಿಂದಿನ ಮುಚ್ಚಳ ತೆಗೆದು ಬ್ಯಾಟರಿಯ ಹಿಂಭಾಗದ ಚಾರ್ಜ್ ಆಗುವ ಮಧ್ಯದ ಪಾಂಯಿಂಟಿಗೆ ಆಗಷ್ಟೇ ಕಿತ್ತ ಬಲಿತ ಅರಳಿ ಎಲೆಯ ತುದಿಯನ್ನು ಸಿಕ್ಕಿಸಿ ಬ್ಯಾಟರಿಯನ್ನು ಅದುಮಿದರು. ನಿಮಿಷಕ್ಕೂ ಮುಂಚೆ ನಿಮ್ಮ ಮೊಬೈಲ್ ಭರ್ತಿ ಚಾರ್ಜ್. ಸದ್ಯಕ್ಕೆ ನೋಕಿಯಾ ಕಂಪನಿಯ ಸೆಟ್ಟುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂಬುದು ಚಿಕ್ಕನಾಯಕನ ಹಳ್ಳಿಯ ಚಿತ್ರಕಲಾ ಶಾಲೆಯೊಂದಕ್ಕೆ ಆಂಧ್ರದಿಂದ ಬಂದಿರುವ ಕಲಾವಿದರೊಬ್ಬರ ಹೇಳಿಕೆ. ಅವರ ಪ್ರಯೋಗ ಯಶಸ್ವಿಯಾದದ್ದೇ ಊರಲ್ಲೆಲ್ಲ ಮೊಬೈಲಿಗೆ ಅರಳಿ ಎಲೆ ಶಕ್ತಿ ತುಂಬುವ ಕಾಯಕ ಶುರು.

2007: ಭಾರತ ತಂಡವು 21 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆದ್ದು ಮತ್ತೊಂದು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಇಂಗ್ಲೆಂಡಿನ ದಿ ಓವೆಲ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಡ್ರಾ ಆಗಿ ಅಂತ್ಯಗೊಳ್ಳುತ್ತಿದ್ದಂತೆಯೇ ಭಾರತವು 1-0 ಗೆಲುವಿನ ಸಾಧನೆಯೊಂದಿಗೆ ಸರಣಿಯನ್ನು ಗೆದ್ದುಕೊಂಡಿತು. ಅನಿಲ್ ಕುಂಬ್ಳೆ ಪಂದ್ಯ ಪುರುಷೋತ್ತಮ ಹೆಗ್ಗಳಿಕೆಗೆ ಪಾತ್ರರಾದರು. ಲಾರ್ಡ್ಸ್ ಟೆಸ್ಟ್ ಡ್ರಾ ಆಗಿ ಅಂತ್ಯಗೊಂಡಿತ್ತು. ಟ್ರೆಂಟ್ ಬ್ರಿಜ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ಜಯಭೇರಿ ಬಾರಿಸಿತ್ತು. 1986ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಗೆದ್ದಿತ್ತು. ಅದಾದ ನಂತರ ಇಲ್ಲಿಯವರೆಗೂ ಇಂತಹ ಸಾಧನೆ ಮಾಡಲು ಭಾರತ ತಂಡಕ್ಕೆ ಆಗಿರಲಿಲ್ಲ. ಈಗ ರಾಹುಲ್ ದ್ರಾವಿಡ್ ನಾಯಕತ್ವದ ತಂಡವು ಅಂಥ ಮಹತ್ವದ ಸರಣಿ ವಿಜಯವನ್ನು ದಾಖಲಿಸಿತು.

2007: ಐದು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮಾರ್ಟಿನಾ ಹಿಂಗಿಸ್ ಅವರನ್ನು ಮಣಿಸಿ ಅಚ್ಚರಿ ಮೂಡಿಸಿದ್ದ ಭಾರತದ ಟೆನಿಸ್ ಕಣ್ಮಣಿ ಸಾನಿಯಾ ಮಿರ್ಜಾ ವಿಶ್ವ ಮಹಿಳಾ ಟೆನಿಸ್ಸಿನಲ್ಲಿ ಮತ್ತೊಂದು ಸ್ಥಾನ ಮೇಲೇರಿದರು. ಈದಿನ ಬಿಡುಗಡೆಯಾದ ಡಬ್ಲ್ಯುಟಿಎ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾ 29ನೇ ಸ್ಥಾನ ಪಡೆದುಕೊಂಡರು. ಕ್ಯಾಲಿಫೋರ್ನಿಯಾದಲ್ಲಿ ನಡೆದ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಸಾನಿಯಾ 12ನೇ ರ್ಯಾಂಕಿನ ಆಟಗಾರ್ತಿ ಹಿಂಗಿಸ್ ಅವರನ್ನು ಸೋಲಿಸಿದ್ದರು.

2007: ಮ್ಯಾರಥಾನ್ ಹುಡುಗ ಬುಧಿಯಾ ಸಿಂಗ್ ಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ತರಬೇತುದಾರ ಬಿರಾಂಚಿ ದಾಸ್ ಅವರನ್ನು ಒರಿಸ್ಸಾದ ಭುವನೇಶ್ವರ ಪೊಲೀಸರು ಬಂಧಿಸಿದರು. `ತರಬೇತುದಾರ ದಾಸ್ ಬುಧಿಯಾನಿಗೆ ಕಿರುಕುಳ ನೀಡಿದ್ದಾರೆ. ಆತನನ್ನು ಬಳಸಿಕೊಂಡು ಹಣ ಮಾಡಿದ್ದಾರೆ' ಎಂದು ಆರೋಪಿಸಿ ಬುಧಿಯಾನ ತಾಯಿ ಸುಕಂತಿ ಸಿಂಗ್, ದಾಸ್ ವಿರುದ್ಧ ಭುವನೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಭಾರತೀಯ ದಂಡ ಸಂಹಿತೆ ಹಾಗೂ ಮಕ್ಕಳ ಹಕ್ಕು ಕಾಯ್ದೆಯ ಪ್ರಕಾರ ದಾಸ್ ಅವರನ್ನು ಬಂಧಿಸಿ ಮೊಕ್ದದಮೆ ದಾಖಲಿಸಲಾಗಿದೆ' ಎಂದು ಬಾರ್ ಘಡ್ ಪೊಲೀಸ್ ಅಧಿಕಾರಿಗಳು ತಿಳಿಸಿದರು.

2006: ಮೂವತ್ತೆರಡು ದಿನಗಳ ಭೀಕರ ಕದನಕ್ಕೆ ತೆರೆ ಎಳೆಯಲು ಇಸ್ರೇಲ್ ಮತ್ತು ಲೆಬನಾನ್ ಒಪ್ಪಿಕೊಂಡವು. ಯುದ್ಧ ನಿಲ್ಲಿಸುವಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಕೈಗೊಂಡ ನಿರ್ಣಯವನ್ನು ಉಭಯ ದೇಶಗಳು ಅಂಗೀಕರಿಸಿದವು. ಈ ಯುದ್ಧದಲ್ಲಿ ಅಂದಾಜು ಸಾವಿರಕ್ಕೂ ಹೆಚ್ಚು ಜನ ಮೃತರಾಗಿ 200 ಕೋಟಿ ಅಮೆರಿಕನ್ ಡಾಲರುಗಳಿಗೂ ಹೆಚ್ಚಿನ ನಷ್ಟ ಸಂಭವಿಸಿತ್ತು.

2006: ನಕಲಿ ಛಾಪಾ ಕಾಗದ ಹಗರಣದ ರೂವಾರಿ ತೆಲಗಿಯ ಮಂಪರು ಪರೀಕ್ಷಾ ಧ್ವನಿ ಸುರುಳಿಗಳು ಬಹಿರಂಗಗೊಂಡವು. ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ಜೊತೆ ಆತ ನಂಟು ಹೊಂದಿದ್ದುದು ಈ ಮಂಪರು ಪರೀಕ್ಷೆಯಿಂದ ಬೆಳಕಿಗೆ ಬಂತು.

2006: ತಿರುನಲ್ವೇಲಿಯ 15 ವರ್ಷದ ಬಾಲಕ ಎಸ್. ಚಂದ್ರಶೇಖರ್ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ ಚೆನ್ನೈ) ಎಂ.ಟೆಕ್. ತರಗತಿಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.

2006: ಕೇರಳದ ಪ್ರಮುಖ ಜವಳಿ ಮಾರಾಟ ಸಂಸ್ಥೆ ಕೊಚ್ಚಿಯ ಸೀಮೆಟ್ಟಿ ಜವಳಿ ಕಂಪೆನಿಯ ವಿಶ್ವದಲ್ಲೇ ಅತಿ ಉದ್ದದ ಸೀರೆ ನಿರ್ಮಿಸುವ ಮೂಲಕ ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗಲು ಸಿದ್ಧವಾಯಿತು. 120 ಮಂದಿ ಕಾರ್ಮಿಕರು, 24 ಗಂಟೆಗಳ ಕಾಲವೂ ದುಡಿದು 80 ದಿನಗಳ ಅವಧಿಯಲ್ಲಿ 57.58 ಕಿ.ಗ್ರಾಂ. ತೂಕ, 1585 ಅಡಿ ಉದ್ದ ಮತ್ತು 4.35 ಅಡಿ ಅಗಲದ ಸೀರೆಯನ್ನು ತಯಾರಿಸಲಾಯಿತು. ಸೆಲ್ವನ್ ಎಂಬವರ ನೇತೃತ್ವದಲ್ಲಿ ಈ ಸೀರೆಯನ್ನು ತಯಾರಿಸಲಾಯಿತು ಎಂದು ಸೀಮೆಟ್ಟಿ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬೀನಾ ಕಣ್ಣನ್ ಪ್ರಕಟಿಸಿದರು. ಈ ಮೊದಲು ಪೊತೀಸ್ ಅವರು ತಯಾರಿಸಿದ್ದ ಸೀರೆ 1276 ಅಡಿ ಉದ್ದವಿತ್ತು.

1963: ಶ್ರೀದೇವಿ ಎಂದೇ ಖ್ಯಾತರಾದ ಹಿಂದಿ ಚಿತ್ರನಟಿ ಶ್ರೀ ಅಮ್ಮಾ ಯಂಗರ್ ಜನ್ಮದಿನ.

1961: ಬರ್ಲಿನ್ ನಗರ ವಿಭಜನೆಗೊಂಡ ದಿನ. ನಿರಾಶ್ರಿತರ ವಲಸೆ ತಡೆಗಟ್ಟುವ ಸಲುವಾಗಿ ಪೂರ್ವ ಜರ್ಮನಿಯು ಬರ್ಲಿನ್ ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಗಡಿಗಳನ್ನು ಮುಚ್ಚಿತು. ಎರಡು ದಿನಗಳ ಬಳಿಕ `ಬರ್ಲಿನ್ ಗೋಡೆ'ಯ ನಿರ್ಮಾಣ ಕಾರ್ಯ ಆರಂಭಗೊಂಡಿತು.

1956: ರಾಷ್ಟ್ರೀಯ ಹೆದ್ದಾರಿಗಳ ಕಾಯ್ದೆಗೆ ಸಂಸತ್ ಒಪ್ಪಿಗೆ.

1954: ಸಾಹಿತಿ ಸ. ರಘುನಾಥ ಜನನ.

1934: ಸಾಹಿತಿ ಎಂ.ಎನ್. ಸುಮಿತ್ರಾ ಜನನ.

1933: ಭಾರತೀಯ ಚಿತ್ರನಟಿ ವೈಜಯಂತಿ ಮಾಲಾ ಬಾಲಿ ಜನ್ಮದಿನ.

1926: ಫಿಡೆಲ್ ಕ್ಯಾಸ್ಟ್ರೋ ಜನ್ಮದಿನ. 1959ರಿಂದ ಕ್ಯೂಬಾದ ರಾಜಕೀಯ ಧುರೀಣರಾಗಿದ್ದ ಇವರು ತಮ್ಮ ರಾಷ್ಟ್ರವನ್ನು ಜಗತ್ತಿನ ಪಶ್ಚಿಮ ಭಾಗದಲ್ಲಿನ ಮೊತ್ತ ಮೊದಲ ಕಮ್ಯೂನಿಸ್ಟ್ ರಾಷ್ಟ್ರವನ್ನಾಗಿ ಪರಿವರ್ತಿಸಿದರು.

1917: ಖ್ಯಾತ ಸಾಹಿತಿ ಡಾ. ವರದರಾಜ ಹುಯಿಲಗೋಳ ಅವರು ರಾಜೇರಾಯ- ಗೋದಾವರಿ ಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.

1866: ಆಟೋಮೋಬೈಲ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಫಿಯೆಟ್ (ಫ್ಯಾಬ್ರಿಕಾ ಇಟಲಿಯಾನಾ ಆಟೋಮೊಬೈಲ್ ಟೊರಿನೊ) ಕಾರಿನ ಕಂಪೆನಿಯ ಸಂಸ್ಥಾಪಕ ಜಿಯೊವನಿ ಅಗ್ನೆಲಿ (1866-1945) ಜನನ. ಫಿಯೆಟ್ ಕಂಪೆನಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರದು.

1848: ಭಾರತೀಯ ರಾಷ್ಟ್ರೀಯವಾದಿ ನಾಯಕ ಹಾಗೂ ಭಾರತೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ರೊಮೇಶ್ ಚಂದ್ರ ದತ್ (1848-1909) ಜನ್ಮದಿನ. ಇವರು ಬರೆದ `ಇಕನಾಮಿಕ್ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ 1757-1837' ಪುಸ್ತಕವು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಅದರ ಲಾಭವನ್ನು ಬ್ರಿಟಿಷರು ಪಡೆದುಕೊಂಡದ್ದನ್ನು ದಾಖಲಿಸಿದೆ.

1796: ಇಂದೂರು ರಾಣಿ ಅಹಲ್ಯಾಬಾಯಿ ಹೋಳ್ಕರ್ ಹುತಾತ್ಮದಿನ.

1784: ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕಾರ ಪಡೆದ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ ಕೇಂದ್ರೀಯ ನಿಯಂತ್ರಣ ಪ್ರಾಧಿಕಾರವಾಗಿ ಈಸ್ಟ್ ಇಂಡಿಯಾ ಕಂಪೆನಿಯ ನೇಮಕ.

1704: ಸ್ಪಾನಿಶ್ ಉತ್ತರಾಧಿಕಾರಕ್ಕಾಗಿ ಬ್ಲೆನ್ಹೀಮ್ ಕದನ ನಡೆದು ಮಾರ್ಲ್ಬೊರೋದ ಮೊದಲನೇ ಡ್ಯೂಕ್ ಜಾನ್ ಚರ್ಚಿಲ್ ನೇತೃತ್ವದಲ್ಲಿ ಇಂಗ್ಲಿಷ್ ಮತ್ತು ಆಸ್ಟ್ರಿಯನ್ ಪಡೆಗಳಿಗೆ ಜಯ ಲಭಿಸಿತು. ಐವತ್ತು ವರ್ಷಗಳಿಗೂ ಹೆಚ್ಚಿನ ಅವದಿಯಲ್ಲಿ ಫ್ರೆಂಚ್ ಸೇನೆಗೆ ಆದ ಮೊದಲ ಭಾರೀ ಸೋಲು ಇದು. ಈ ವಿಜಯವು ವಿಯೆನ್ನಾವನ್ನು ಫ್ರಾಂಕೊ-ಬವೇರಿಯನ್ ಸೇನೆಯ ದಾಳಿಯಿಂದ ರಕ್ಷಿಸಿತು.

1655: ಕ್ಲಾರಿನೆಟ್ನ್ನು ಸಂಶೋಧಿಸಿದ ಜರ್ಮನಿಯ ಸಂಗೀತ ಉಪಕರಣಗಳ ತಯಾರಕ ಜೊಹಾನ್ನ್ ಕ್ರಿಸ್ಟೋಫ್ ಡೆನ್ನರ್ (1655-1707) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement