Sunday, August 16, 2009

ಇಂದಿನ ಇತಿಹಾಸ History Today ಆಗಸ್ಟ್ 16

ಇಂದಿನ ಇತಿಹಾಸ

ಆಗಸ್ಟ್ 16

ಬೆಂಗಳೂರಿನ ರೆಸಿಡೆನ್ಸಿಯಲ್ಲಿ ನಡೆದ ಮೈಸೂರು ಶಾಸನ ಸಭೆಯ ಕಾಂಗ್ರೆಸ್ ಪಕ್ಷದ ಸಭೆಯು ತಮ್ಮ ನಾಯಕತ್ವಕ್ಕೆ ಕೆ. ಹನುಮಂತಯ್ಯ ಅವರು ನೀಡಿದ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ಹಾಲಿ ಮಂತ್ರಿಮಂಡಳದ ಸಚಿವ ಕಡಿದಾಳ್ ಮಂಜಪ್ಪ ಅವರನ್ನು ಬಹುಮತದೊಂದಿಗೆ ನಾಯಕನನ್ನಾಗಿ ಆರಿಸಿತು.

2008: ಕಾದಂಬರಿ ಆಧಾರಿತ ಚಿತ್ರಗಳ ನಿರ್ದೇಶಕ ಎಂದೇ ಹೆಸರಾದ ಕೆ.ವಿ.ಜಯರಾಂ (58) ಬೆಂಗಳೂರಿನಲ್ಲಿ ನಿಧನರಾದರು. ಮೂವತ್ತಮೂರು ವರ್ಷ ಕನ್ನಡ ಚಿತ್ರರಂಗದಲ್ಲಿ ಜಯರಾಂ ಸಂಕಲನಕಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕೊಡುಗೆ ನೀಡಿದ ಜಯರಾಂ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ 10 ಸಿನಿಮಾಗಳನ್ನು ನಿರ್ಮಿಸಿದ್ದರು.

2007: ಅಮೆರಿಕದಲ್ಲಿ ಉದ್ಭವಿಸಿದ ಸಾಲದ ಬಿಕ್ಕಟ್ಟು ಟೋಕಿಯೊ, ಸಿಡ್ನಿ, ಹಾಂಕಾಂಗ್ ಹಾಗೂ ಮುಂಬೈ ಷೇರುಪೇಟೆ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ 643 ಅಂಶಗಳಷ್ಟು ಕುಸಿತ ದಾಖಲಿಸಿದ್ದರಿಂದ ಹೂಡಿಕೆದಾರರಿಗೆ ಅಂದಾಜು ರೂ 1,70,000 ಕೋಟಿ ರೂಪಾಯಿ ಮೊತ್ತದಷ್ಟು (ಮಾರುಕಟ್ಟೆ ಮೌಲ್ಯ) ನಷ್ಟ ಉಂಟಾಯಿತು. ಸಂವೇದಿ ಸೂಚ್ಯಂಕದ ಈ ಕುಸಿತವು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಅತಿ ದೊಡ್ಡದು. ಕುಸಿತದಲ್ಲಿ ಕೊಚ್ಚಿ ಹೋದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಎರಡನೆ ಅತಿದೊಡ್ಡ ಹಿನ್ನಡೆ.

2007: ಪೆರುವಿನಲ್ಲಿ ಆಗಸ್ಟ್ 15ರ ಸಂಜೆ ಸ್ಥಳೀಯ ಕಾಲಮಾನ ಸಂಜೆ 6.41ಕ್ಕೆ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 337ಕ್ಕೆ ಏರಿದ್ದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸರ್ಕಾರ ದೃಢಪಡಿಸಿತು. ಭೂಕಂಪದ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ರಿಕ್ಟರ್ ಮಾಪಕದಲ್ಲಿ 7.9 ಪ್ರಮಾಣದಲ್ಲಿದ್ದ ಭೂಕಂಪ ಪೆರುವಿನ ಹಲವು ನಗರಗಳನ್ನು ನಡುಗಿಸಿತು. ಎರಡು ಬಾರಿ ಪ್ರಬಲ ಕಂಪನ ಸಂಭವಿಸಿದಾಗ ಹಲವು ಮನೆ ಮತ್ತು ಕಟ್ಟಡಗಳು ಉರುಳಿದವು. ಎರಡೂ ಕಂಪನಗಳು ತಲಾ 20 ಸೆಕೆಂಡುಗಳ ಕಾಲ ನಡೆದವು. ಭಯಭೀತರಾದ ಜನರು ರಾತ್ರಿಯನ್ನು ಬೀದಿಯಲ್ಲೇ ಕಳೆದರು. ಪೆರುವಿನ ದಕ್ಷಿಣ ತೀರದ ನಗರಗಳಾದ ಪಿಸ್ಕೊ, ಚಿಂಚಾ ಹಾಗು ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚಿನ ಹಾನಿಗೆ ಒಳಗಾದವು. ರಾಜಧಾನಿ ಲಿಮಾದಿಂದ 300 ಕಿ.ಮೀ ದೂರದಲ್ಲಿರುವ ಕರಾವಳಿ ನಗರ ಇಕಾದಲ್ಲಿರುವ ಸೆನ್ಸರ್ ಡಿ ಲುರೆನ್ ಇಗರ್ಜಿ (ಚರ್ಚ್) ಕುಸಿದು ಬಿದ್ದಿತು.

2007: ಬಾಹ್ಯಾಕಾಶ ಉಡುಗೆಯಲ್ಲಿ ಸಣ್ಣ ರಂಧ್ರ ಕಾಣಿಸಿಕೊಂಡ ಕಾರಣ ಗಗನಯಾತ್ರಿ ರಿಕ್ ಮಾಸ್ಟ್ರಷಿಯೊ ಬಾಹ್ಯಾಕಾಶ ನಡಿಗೆಯನ್ನು ಅನಿವಾರ್ಯವಾಗಿ ಮೊಟಕುಗೊಳಿಸಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಸೆಸ್) ಹಿಂದಿರುಗಿದರು. ಮೂರು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದ ರಿಕ್ ಮಾಸ್ಟ್ರಷಿಯೊ ಅವರು ಧರಿಸಿದ್ದ ಕೈಗವುಸಿನಲ್ಲಿ ಸಣ್ಣ ರಂಧ್ರ ಕಾಣಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ರಿಕ್ ಐಎಸ್ಸೆಸ್ಸಿಗೆ ಮರಳಿದರು. ಗಗನಯಾತ್ರಿಗಳನ್ನು ಒಳಗೊಂಡ ಎಂಡೆವರ್ ವ್ಯೋಮನೌಕೆ ಐಎಸ್ಸೆಸ್ ತಲುಪಿದ ಬಳಿಕ ಬಳಿಕ ಗಗನಯಾತ್ರಿಗಳು ಮೂರು ಬಾರಿ ವ್ಯೋಮನಡಿಗೆ ಕೈಗೊಂಡರು. ರಿಕ್ ಜೊತೆ ವ್ಯೋಮನಡಿಗೆ ಕೈಗೊಂಡ ಕ್ಲೇ ಆಂಡರ್ ಸನ್ ತಮ್ಮ ಕೆಲಸ ಯಶಸ್ವಿಯಾಗಿ ಪೂರ್ತಿಗೊಳಿಸಿದರು.

2007: ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ತೀರ್ಮಾನಿಸಿದ ಒಂದು ದಿನದ ಬಳಿಕ ಆಸ್ಟ್ರೇಲಿಯಾ ಸರ್ಕಾರವು `ಭಾರತ ಮುಂದೆ ಯಾವುದೇ ಅಣ್ವಸ್ತ್ರ ಪರೀಕ್ಷೆ ನಡೆಸುವುದಿಲ್ಲವೆಂಬ ಅಂತಾರ್ರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ಭರವಸೆ ನೀಡಬೇಕು' ಎಂದು ಹೊಸ ಷರತ್ತು ವಿಧಿಸಿತು.

2007: ಈ ಮೊದಲು ದೇಶಿ ಹೆಲಿಕಾಪ್ಟರಿಗೆ ಅಳವಡಿಸಿದ್ದ ಫ್ರಾನ್ಸ್ ನಿರ್ಮಿತ ಎಂಜಿನ್ನಿಗಿಂತ ಹೆಚ್ಚು ದಕ್ಷತೆಯುಳ್ಳ, ಹೊಸ `ಶಕ್ತಿ' ಎಂಜಿನನ್ನು ಭಾರತ್ ಏರೋನಾಟಿಕ್ಸ್ ಲಿಮಿಡೆಟ್ (ಎಚ್ ಎಎಲ್) ಸಿದ್ಧಪಡಿಸಿರುವುದಾಗಿ ಎಚ್ ಎಎಲ್ ಅಧ್ಯಕ್ಷ ಅಶೋಕ್ ಕೆ. ಬವೇಜಾ ಬೆಂಗಳೂರಿನಲ್ಲಿ ಪ್ರಕಟಿಸಿದರು. ದೇಶಿ ನಿರ್ಮಿತ `ಧ್ರುವ' ಹೆಲಿಕಾಪ್ಟರಿಗೆ ಈ ಮೊದಲು ಫ್ರಾನ್ಸಿನ ಟರ್ಬೊಮಿಕಾ ಕಂಪೆನಿಯ ಎಂಜಿನ್ ಅಳವಡಿಸಲಾಗಿತ್ತು. ಟರ್ಬೊಮಿಕಾ ಕಂಪೆನಿಯ ಸಹಯೋಗದಲ್ಲೇ ಹೊಸ ಎಂಜಿನ್ ಆವಿಷ್ಕರಿಸುವ ಕಾರ್ಯವನ್ನು ಎಚ್ ಎಎಲ್ 2003ರಿಂದ ಕೈಗೊಂಡಿತ್ತು. ಇದರ ಫಲವಾಗಿ ಈ ಹಿಂದೆ ಬಳಸುತ್ತಿದ್ದ ಟಿಎಂ 333-2ಬಿ2 ಎಂಜಿನ್ನಿನಿಂದ ಪಡೆಯುತ್ತಿದ್ದ 800 ಕಿಲೋ ವ್ಯಾಟ್ ಶಕ್ತಿಯ ಬದಲು, ಶಕ್ತಿ ಎಂಜಿನ್ನಿನಿಂದ 1000 ಕಿಲೋ ವ್ಯಾಟ್ ಶಕ್ತಿ ಪಡೆಯಲು ಸಾಧ್ಯವಾಗಿದೆ. ಹೆಲಿಕಾಪ್ಟರ್ ಭೂಮಿಯ ಮೇಲೆ ಎತ್ತರದಲ್ಲಿ ಹಾರುವಾಗ ಹೊಸ ಎಂಜಿನ್ ಮೊದಲಿನ ಎಂಜಿನ್ನಿಗಿಂಗ ಶೇ 150 ಪಟ್ಟು ಅಧಿಕ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿವಿಧ ಪ್ರದೇಶಗಳಲ್ಲಿನ ಹವಾಮಾನ ವೈಪರೀತ್ಯ ಸಂದರ್ಭದಲ್ಲೂ `ಶಕ್ತಿ ಎಂಜಿನ್' ಕಾರ್ಯದಕ್ಷತೆ ಸಮರ್ಪಕವಾಗಿದೆ ಎಂದು ಬವೇಜಾ ತಿಳಿಸಿದರು.

2006: ಇಂಫಾಲದ ಇಸ್ಕಾನ್ (ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ) ದೇಗುಲ ಆವರಣದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು ಕನಿಷ್ಠ ಐವರು ಮೃತರಾಗಿ ಇತರ 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಪದವಿಪೂರ್ವ ಪಠ್ಯಕ್ರಮದಲ್ಲಿ ಅಯೋಧ್ಯೆ ವಿವಾದ, 2002ರ ಗುಜರಾತ್ ಗಲಭೆ ಮತ್ತು 1984ರ ಸಿಖ್ ನರಮೇಧದ ಇತಿಹಾಸವನ್ನು ಸೇರ್ಪಡೆ ಮಾಡಲು ಎನ್ಸಿಇಆರ್ಟಿ ನಿರ್ಧರಿಸಿತು.

2000: ಮೆಲ್ಬೋರ್ನಿನ ಕೊಲೊನಿಯಲ್ ಇಂಡೋರ್ ಸ್ಟೇಡಿಯಮ್ಮಿನಲ್ಲಿ ಮೊತ್ತ ಮೊದಲ ಒಂದು ದಿನದ ಒಳಾಂಗಣ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಿತು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ನಡುವೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ 94 ರನ್ನುಗಳ ಜಯ ಗಳಿಸಿತು.

1965: ಕಾಶ್ಮೀರ ರೇಖೆ ದಾಟಿದ ಭಾರತೀಯ ರಕ್ಷಣಾ ಪಡೆಗಳಿಂದ ಎರಡು ಪಾಕಿಸ್ತಾನಿ ಶಿಬಿರಗಳ ವಶ.

1960: ಸೈಪ್ರಸ್ ಸ್ವತಂತ್ರ ಗಣರಾಜ್ಯವಾಯಿತು. ಆರ್ಚ್ ಬಿಷಪ್ ಮಕಾರಿಯೋಸ್ ಮೊದಲ ಅಧ್ಯಕ್ಷರಾದರು.

1956: ಬೆಂಗಳೂರಿನ ರೆಸಿಡೆನ್ಸಿಯಲ್ಲಿ ನಡೆದ ಮೈಸೂರು ಶಾಸನ ಸಭೆಯ ಕಾಂಗ್ರೆಸ್ ಪಕ್ಷದ ಸಭೆಯು ತಮ್ಮ ನಾಯಕತ್ವಕ್ಕೆ ಕೆ. ಹನುಮಂತಯ್ಯ ಅವರು ನೀಡಿದ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ಹಾಲಿ ಮಂತ್ರಿಮಂಡಳದ ಸಚಿವ ಕಡಿದಾಳ್ ಮಂಜಪ್ಪ ಅವರನ್ನು ಬಹುಮತದೊಂದಿಗೆ ನಾಯಕನನ್ನಾಗಿ ಆರಿಸಿತು. ಮತ್ತೆ ಸ್ಪರ್ಧಿಸಿದ ಮುಖ್ಯಮಂತ್ರಿ ಹನುಮಂತಯ್ಯ ಸೋತರು.

1946: ಕಾಂಗ್ರೆಸ್ ಸದಸ್ಯರನ್ನು ಮಾತ್ರ ಸೇರಿಸಿಕೊಂಡು ತನ್ನ ಎಕ್ಸಿಕ್ಯೂಟಿವ್ ಕೌನ್ಸಿಲನ್ನು ಪುನರ್ರಚಿಸಲು ವೈಸ್ ರಾಯ್ ಕೈಗೊಂಡ ತೀರ್ಮಾನವನ್ನು ಪ್ರತಿಭಟಿಸಲು ಮುಸ್ಲಿಂ ಲೀಗ್ ಭಾರತದಲ್ಲಿ `ನೇರ ಕಾರ್ಯಾಚರಣೆ' ದಿನ ಆಚರಿಸಿತು. ಕ್ಯಾಬಿನೆಟ್ ಮಿಷನ್ ಯೋಜನೆಯ ಪ್ರಸ್ತಾವಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ನೂತನ ಸಂವಿಧಾನ ರಚನೆಯ ಉದ್ದೇಶಕ್ಕಾಗಿ ಸಂವಿಧಾನ ಸಭೆ ಸೇರುವ ಪ್ರಸ್ತಾವ ಮುಂದಿಟ್ಟಿತ್ತು. ಆದರೆ ಕ್ಯಾಬಿನೆಟ್ ಮಿಷನ್ ಯೋಜನೆಯ ಪ್ರಸ್ತಾವಗಳನ್ನು ಅಂಗೀಕರಿಸಿ ವೈಸ್ ರಾಯ್ ಅವರು ಕಾಂಗ್ರೆಸ್ಸನ್ನು ಹೊರತು ಪಡಿಸಿ ಪ್ರಾಂತೀಯ ಸರ್ಕಾರ ರಚಿಸಬೇಕು ಎಂದು ಮುಸ್ಲಿಂ ಲೀಗ್ ಬಯಸಿತು. ಈ ಪ್ರಸ್ತಾವ ಸ್ವೀಕೃತಗೊಳ್ಳದೇ ಹೋದ್ದರಿಂದ ಮುಸ್ಲಿಂಲೀಗ್ ಪ್ರಸ್ತಾವಗಳಿಗೆ ತಾನು ನೀಡಿದ್ದ ಸಮ್ಮತಿಯನ್ನು ಹಿಂತೆಗೆದುಕೊಂಡು `ನೇರ ಕಾರ್ಯಾಚರಣೆ'ಗೆ ಕರೆ ನೀಡಿತು. ಈ ಕಾರ್ಯಾಚರಣೆ ಬಹುತೇಕ ಕಡೆಗಳ್ಲಲಿ ಶಾಂತಿಯುತವಾಗಿ ನಡೆದರೂ ಕಲ್ಕತ್ತದಲ್ಲಿ (ಇಂದಿನ ಕೊಲ್ಕತ್ತಾ) ಕೋಮು ಗಲಭೆಗಳು ಭುಗಿಲೆದ್ದು 5000ಕ್ಕೂ ಹೆಚ್ಚು ಜನ ಸತ್ತು 15,000 ಜನ ಗಾಯಗೊಂಡರು.

1941: ಸಾಹಿತಿ ವೆಂಕಟಪ್ಪ ಬಿ. ಜನನ.

1936: ಬರ್ಲಿನ್ನಿನಲ್ಲಿ 11ನೇ ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯಗೊಂಡಿತು.

1931: ಸಾಹಿತಿ ಮೈ.ಸು.ಶೇ. ಜನನ.

1929: ಆಕಾಶವಾಣಿ ಈರಣ್ಣ ಎಂದೇ ಖ್ಯಾತರಾದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಎ.ಎಸ್. ಮೂರ್ತಿ ಅವರು ಕಲಾ ಮಂದಿರದ ಸ್ಥಾಪಕ ಅ.ನ. ಸುಬ್ಬರಾಯರು- ಗೌರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ನಾಟಕಗಳ ಮೂಲಕವೇ ಜನಪ್ರಿಯತೆ ಗಳಿಸಿದ ಮೂರ್ತಿ ಅವರ ಬಗಲಿಗೆ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಂಗ ನಿರಂತರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ.

1908: ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ 3000 ಮಂದಿ ಭಾರತೀಯರು ಜೊಹಾನ್ನೆಸ್ ಬರ್ಗ್ ನ ಹಮೀದಾ ಮಸೀದಿಯ್ಲಲಿ `ನೋಂದಣಿ ಸರ್ಟಿಫಿಕೇಟು'ಗಳನ್ನು ಸುಟ್ಟು ಹಾಕಿದರು. (ಎಂಟು ವರ್ಷ ಮೇಲ್ಪಟ್ಟ ಪ್ರತಿ ಪುರುಷ, ಮಹಿಳೆ, ಮಗು ಈ ಸರ್ಟಿಫಿಕೇಟ್ ಹೊಂದಿರಬೇಕಾದುದು ಕಡ್ಡಾಯವಾಗಿತ್ತು). ಹೊಸ ವಲಸೆ ಕಾಯ್ದೆಯನ್ನು ಆಗಸ್ಟ್ 16ರ ಒಳಗಾಗಿ ತಿದ್ದುಪಡಿ ಮಾಡದೇ ಇದ್ದರೆ ಭಾರತೀಯರು ಸ್ವಯಂ ಇಚ್ಛೆಯಿಂದ ಪಡೆದ ಈ ಸರ್ಟಿಫಿಕೇಟುಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ಪರಿಣಾಮ ಎದುರಿಸುವರು ಎಂದು ಘೋಷಿಸಿ ಗಾಂಧೀಜಿ ಅವರು ಜನರಲ್ ಜಾನ್. ಸಿ. ಸ್ಮಟ್ಸ್ ಅವರಿಗೆ ಸಂದೇಶ ಕಳುಹಿಸಿದ ಬಳಿಕ ಈ ಘಟನೆ ನಡೆಯಿತು.

1886: ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ 50ನೇ ವಯಸ್ಸಿನಲ್ಲಿ ಕಲ್ಕತ್ತದಲ್ಲಿ ದಿವಂಗತರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement