Saturday, August 1, 2009

ಇಂದಿನ ಇತಿಹಾಸ History Today ಜುಲೈ 28

ಇಂದಿನ ಇತಿಹಾಸ

ಜುಲೈ 28

ಟೊರಾಂಟೊದಲ್ಲಿನ ಶಿಯಾಮಕ್ ದಾವರ್ ಶಿಕ್ಷಣ ಸಂಸ್ಥೆಯ ನೃತ್ಯ ನಿರ್ದೇಶಕಿ ಗುಜರಾತ್ ಮೂಲದ ರುಪಾಲ್ ಲಖಾನಿ (21) `ಮಿಸ್ ಭಾರತ-ಕೆನಡಾ'ಆಗಿ ಆಯ್ಕೆಯಾದರು.

2008: ಟೊರಾಂಟೊದಲ್ಲಿನ ಶಿಯಾಮಕ್ ದಾವರ್ ಶಿಕ್ಷಣ ಸಂಸ್ಥೆಯ ನೃತ್ಯ ನಿರ್ದೇಶಕಿ ಗುಜರಾತ್ ಮೂಲದ ರುಪಾಲ್ ಲಖಾನಿ (21) `ಮಿಸ್ ಭಾರತ-ಕೆನಡಾ'ಆಗಿ ಆಯ್ಕೆಯಾದರು.

2007: ಭಾರತೀಯ ವೈದ್ಯ ಮೊಹಮ್ಮದ್ ಹನೀಫ್ ಮೇಲಿದ್ದ ಭಯೋತ್ಪಾದನೆ ಆರೋಪವನ್ನು ಆಸ್ಟ್ರೇಲಿಯಾ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಹನೀಫ್ ಅವರು ಈದಿನ ಮಧ್ಯರಾತ್ರಿ 12.25ಕ್ಕೆ (ಭಾರತೀಯ ಕಾಲಮಾನ ರಾತ್ರಿ 7.55) ಆಸ್ಟ್ರೇಲಿಯದ ಬ್ರಿಸ್ಬೇನ್ ವಿಮಾನ ನಿಲ್ದಾಣದಿಂದ ಥಾಯ್ ಏರ್ ವೇಸ್ ವಿಮಾನದಲ್ಲಿ ಬ್ಯಾಂಕಾಕ್ ಮೂಲಕ ಬೆಂಗಳೂರಿಗೆ ಹೊರಟರು. ಆಸ್ಟ್ರೇಲಿಯ ಸರ್ಕಾರವು ಹನೀಫ್ ಗೆ ದೇಶದಿಂದ ಹೊರಗೆ ತೆರಳಲು ಅವಕಾಶ ನೀಡಿತು. ಆದರೆ ಉದ್ಯೋಗದ ವೀಸಾ ನೀಡಲು ನಿರಾಕರಿಸಿತು.

2007: ನೈಸ್ ಸಂಸ್ಥೆಯನ್ನು ಕಿತ್ತೊಗೆದು, ಬೆಂಗಳೂರು-ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆ ಗುತ್ತಿಗೆಯನ್ನು 25000 ಕೋಟಿ ಡಾಲರ್ ವ್ಯವಹಾರದ `ಗ್ಲೋಬಲ್ ಇನ್ ಫ್ರಾಸ್ಟ್ರಕ್ಚರ್ ಕನಸೋರ್ಟಿಯಮ್' (ಜಿಐಸಿ)ಗೆ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಾಲಯದ ಅನುಮತಿ ಕೋರಿತು. ಆದರೆ ಯಾವುದೇ ಕಾರಣಕ್ಕೂ ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ, ಸರ್ಕಾರದ ವಿರುದ್ಧ ಕಾನೂನು ಸಮರ ಮುಂದುವರೆಯುವುದು ಎಂದು ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಸ್ಪಷ್ಟಪಡಿಸಿದರು. ಅಮೆರಿಕಾದ ಇಂಡಸ್ ಕ್ಯಾಪಿಟಲ್, ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಫಂಡ್, ಅವೆನ್ಯೂ ಕ್ಯಾಪಿಟಲ್ ಮತ್ತು ಐಆರ್ಇಒ ಫಂಡ್ ಹಾಗೂ ಮುಂಬೈನ ಸ್ಕಿಲ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳನ್ನು ಒಳಗೊಂಡಿರುವ ಜಿಐಸಿ ಮುಂಬೈ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿತ್ತು. ಜಿಐಸಿ ನೀಡಿರುವ ಪ್ರಸ್ತಾವಕ್ಕೆ ಲೇಖಿರಾಜ್ ಜೈನ್ ಎಂಬವರು ಸಹಿ ಹಾಕಿದ್ದರು. ಮೂಲಚೌಕಟ್ಟು ಒಪ್ಪಂದವನ್ನು ಮೀರಿ ಸುಮಾರು 30000 ಕೋಟಿ ರೂಪಾಯಿ ಬೆಲೆಬಾಳುವ 2289 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿದೆ, ಇದಕ್ಕಾಗಿ ಸರ್ಕಾರದ ಕೆಲವು ಅಧಿಕಾರಿಗಳನ್ನು ಕೈವಶಮಾಡಿಕೊಂಡು ದಾಖಲೆಗಳನ್ನು ಕೂಡಾ ತಿರುಚಿದೆ ಎನ್ನುವುದು ರಾಜ್ಯಸರ್ಕಾರದ ಪ್ರಮುಖ ಆರೋಪ. ಇದೇ ಆರೋಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವರ್ಷಗಳ ಹಿಂದೆ ರಾಜ್ಯ ಹೈಕೋರ್ಟ್ ವಜಾ ಮಾಡಿ ಯೋಜನೆಗೆ ಹಸಿರು ನಿಶಾನೆ ತೋರಿತ್ತು. ನ್ಯಾಯಾಲಯಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಹಾಗೂ ದಾಖಲೆಗಳನ್ನು ಮರೆಮಾಚಿದ ಆರೋಪದ ಮೇಲೆ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಮತ್ತು ಇನ್ನೊಬ್ಬ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಒಂದು ವರ್ಷದ ನಂತರ ಸುಪ್ರೀಂಕೋರ್ಟ್ ಕೂಡಾ ರಾಜ್ಯ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಯೋಜನೆಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರು `ಕುಲ್ಲಕ ಮತ್ತು ದುರುದ್ದೇಶದಿಂದ ಕೂಡಿದೆ' ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ ಬಿಎಂಐಸಿ ಯೋಜನೆ ಜಾರಿಗೊಳಿಸುತ್ತಿರುವ ನೈಸ್ ಸಂಸ್ಥೆಗೆ ವೆಚ್ಚದ ರೂಪದಲ್ಲಿ ನಾಲ್ಕು ವಾರದಲ್ಲಿ 5 ಲಕ್ಷ ರೂ. ನೀಡಬೇಕು ಎಂದು ಆದೇಶ ನೀಡಿತ್ತು. ಇದರ ನಂತರ ಬಿಎಂಐಸಿ ಯೋಜನೆ ಬಗ್ಗೆ ವಿಚಾರಣೆ ನಡೆಸಲು ರಾಜ್ಯಸರ್ಕಾರ ಬಿ.ಸಿ.ಪಟೇಲ್ ತನಿಖಾ ಆಯೋಗ ರಚಿಸಿದಾಗಲೂ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ತನಿಖೆ ನಡೆಸುವುದಿಲ್ಲ ಎಂದು ಮೊದಲು ಒಪ್ಪಿಕೊಂಡರೂ ರಾಜ್ಯ ಸರ್ಕಾರ ಹತ್ತುತಿಂಗಳ ನಂತರ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿ ತನಿಖಾ ಆಯೋಗ ರಚನೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

2007: ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ ಮುದಿಗೊಂಡ ಗ್ರಾಮದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಮೃತರಾದರು. ಎಡಪಕ್ಷಗಳು ಕರೆ ನೀಡಿದ್ದ ಆಂಧ್ರಪ್ರದೇಶ ಬಂದ್ ಹಿಂಸಾಚಾರಕ್ಕೆ ತಿರುಗಿದಾಗ ಈ ಘಟನೆ ಸಂಭವಿಸಿತು.

2007: ಭಾರತ-ಶ್ರೀಲಂಕಾವನ್ನು ಸಂಪರ್ಕಿಸುವ `ರಾಮರ್ ಸೇತು ಅಥವಾ ಆಡಮ್ ಬ್ರಿಡ್ಜ್ ಮಾನವ ನಿರ್ಮಿತ ರಚನೆ ಅಲ್ಲ ಎಂದು ಬಾಹ್ಯಾಕಾಶದಿಂದ ತೆಗೆದಿರುವ ಭೂಮಿಯ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಭಾಗ ಅರ್ ್ಥ ವೆಬ್ ಹೇಳಿರುವುದಾಗಿ ಚೆನ್ನೈಯ ಸೇತು ಸಮುದ್ರಂ ಕಾರ್ಪೊರೇಷನ್ ಪ್ರಕಟಿಸಿತು. ಕಾರ್ಪೊರೇಷನ್ ಎರಡು ದಿನದ ಹಿಂದೆ ನಾಸಾಗೆ ಇ ಮೇಲ್ ಮೂಲಕ `ರಾಮರ್ ಸೇತುವೆ ಮಾನವ ನಿರ್ಮಿತವೇ?' ಎಂಬ ಪ್ರಶ್ನೆಯನ್ನು ಕಳುಹಿಸಿತ್ತು. ಅದಕ್ಕೆ ಉತ್ತರಿಸಿರುವ ನಾಸಾದ ಅರ್ಥ್ ವೆಬ್ ವಿಭಾಗ, `ಇದು, ಸಾವಿರಾರು ವರ್ಷಗಳಿಂದ ಅಲೆಗಳಿಂದಾಗಿ ನಿರ್ಮಾಣವಾದ ಮರಳಿನ ಸ್ವಾಭಾವಿಕ ರಚನೆ. ಹಾಗಾಗಿ ಇದು ಮಾನವ ನಿರ್ಮಿತ ಅಲ್ಲ ಎಂದು ಸ್ಪಷ್ಟ ಪಡಿಸಿದೆ' ಎಂದು ಕಾರ್ಪೊರೇಷನ್ ಹೇಳಿತು. ನಾಸಾ ಕಳುಹಿಸಿದ ಉತ್ತರವನ್ನು ಪತ್ರಿಕಾಗೋಷ್ಠಿಯಲ್ಲಿ ಸೇತು ಸಮುದ್ರಂ ಕಾರ್ಪೊರೇಷನ್ ಮತ್ತು ತೂತ್ತುಕುಡಿ ಬಂದರು ಮಂಡಳಿ ಅಧ್ಯಕ್ಷ ಎನ್. ರಘುಪತಿ ವಿವರಿಸಿದರು. ಸೇತು ಸಮುದ್ರಂ ಜಲಮಾರ್ಗ ಯೋಜನೆ ಶೇ 50 ರಷ್ಟು ಪೂರ್ಣಗೊಂಡಿದೆ. ಈವರೆಗೆ 231 ಲಕ್ಷ ಘನ ಅಡಿ ಹೂಳು ಎತ್ತಲಾಗಿದೆ ಎಂದು ರಘುಪತಿ ಹೇಳಿದರು.

2007: ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಕೆನಡಾದ ಮ್ಯಾಂಟ್ರಿಯಲ್ನಲ್ಲಿ ನಡೆದ ಮಾಂಟ್ರಿಯಲ್ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ನ ಎಂಟನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದು, ಪೂರ್ಣ ಪಾಯಿಂಟ್ ಸಂಗ್ರಹಿಸಿದರು.

2007: ಭಾರತದಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳದಂತೆ ಶ್ರೀಲಂಕಾ ನಿಷೇಧ ಹೇರಿತು. ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಪಕ್ಷಿಜ್ವರ (ಕೋಳಿಜ್ವರ) ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಭಾರತದ ಕೋಳಿ ಸೇರಿದಂತೆ ಯಾವುದೇ ಪಕ್ಷಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ವಿಧಿಸಿತು.

2007: ಭಾರತ ಹಾಗೂ ಭೂತಾನ್ ರೂ 3,500 ಕೋಟಿಗಳ ವೆಚ್ಚದ ಮಹತ್ವಾಕಾಂಕ್ಷಿ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಈದಿನ ಭೂತಾನಿನ ಥಿಂಪುವಿನಲ್ಲಿ ಸಹಿ ಹಾಕುವ ಮೂಲಕ ಉಭಯ ದೇಶಗಳು ಆರ್ಥಿಕ ಸಹಕಾರದಲ್ಲಿ ಹೊಸ ಹೆಜ್ಜೆ ಇಟ್ಟವು. 1095 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಭೂತಾನ್ ವಿದೇಶಾಂಗ ಸಚಿವ ಲೊಂಪೊ ಕಾಂಡು ವಾಂಗ್ ಚುಕ್ ಅವರು ಸಹಿ ಹಾಕಿದರು. ಭಾರತದ ಸಹಕಾರದೊಂದಿಗೆ ಭೂತಾನಿನಲ್ಲಿ ನಿರ್ಮಾಣವಾಗುವ ಅತಿದೊಡ್ಡ ಜಲವಿದ್ಯುತ್ ಯೋಜನೆ ಇದು. ಭಾರತದ ಸಹಕಾರದೊಂದಿಗೆ ಭೂತಾನ್ ಕೈಗೆತ್ತಿಕೊಂಡ ಹಲವು ಜಲ ವಿದ್ಯುತ್ ಯೋಜನೆಗಳಲ್ಲಿ ಚುಖಾ, ಹರಿಚಾ, ಢಾಲಾ ಹಾಗೂ ಪುನತ್ ಸಂಘಚುವಾನ್ ಯೋಜನೆಗಳು ಮುಖ್ಯವಾದವು. ಈ ಯೋಜನೆಗಳಲ್ಲಿ ಭಾರತ 5,000 ಕೋಟಿ ರೂ. ಬಂಡವಾಳ ಹೂಡಿದೆ.

2007: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹಿನ್ನೆಲೆ ಗಾಯನಕ್ಕೆ ಕಾಲಿರಿಸಿ ಐವತ್ತು ವರ್ಷ ಸಂದ ಸಂದರ್ಭದಲ್ಲಿ ರಮ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರಿನ ಶಿಕ್ಷಕರ ಭವನದಲ್ಲಿ `ಗೌರವಾಭಿನಂದನೆ' ಕಾರ್ಯಕ್ರಮ ಏರ್ಪಡಿಸಿತ್ತು. ಜಾನಕಿ ಅವರು ಸಮಾರಂಭದಲ್ಲಿ ಹೃದಯತುಂಬಿ ಹಾಡಿದರು. ಈ ಸನ್ಮಾನ ಸಮಾರಂಭದಲ್ಲಿ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್, ಸಂಗೀತ ನಿರ್ದೇಶಕರಾದ ಜಯಗೋಪಾಲನ್, ರಾಜನ್, ಹಿರಿಯ ನಟಿಯರಾದ ಹರಿಣಿ, ಜಯಂತಿ, ಡಾ. ಬಿ. ಸರೋಜಾದೇವಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಪಾಲ್ಗೊಂಡಿದ್ದರು. `ಸುರಭಿ ಪ್ರಕಾಶನ' ಹೊರತಂದ ಆರ್. ಶ್ರೀನಾಥ್ ಅವರ `ನಾದ ದೇವತೆ-ಎಸ್. ಜಾನಕಿ' ಪುಸ್ತಕವನ್ನು ಇದೇ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಬಿಡುಗಡೆ ಮಾಡಿದರು.

2006: ಪಾಂಡಿಚೇರಿಯನ್ನು `ಪುದುಚೇರಿ' ಎಂಬುದಾಗಿ ನಾಮಕರಣ ಮಾಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಂಡಿಸಿದರು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಮೀಸಲಾತಿ ನೀತಿ ರೂಪಿಸುವ ಸಂಬಂಧ ರಚಿಸಲಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತು.

2006: ದೀರ್ಘ ಕಾಲದ ಸಮರದ ಬಳಿಕ ಕಡೆಗೂ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರು ರಂಜನಾ ಝಾ ಅವರನ್ನು ತಮ್ಮ ಪತ್ನಿ ಎಂಬುದಾಗಿ ಬಿಹಾರಿನ ಮಹಿಳಾ ಆಯೋಗದ ಮುಂದೆ ಅಂಗೀಕರಿಸಿದರು. ರಂಜನಾ ಅವರನ್ನು ತಮ್ಮ ಮೊದಲ ಪತ್ನಿ ಎಂಬುದಾಗಿ ಒಪ್ಪಿಕೊಂಡು ಅವರಿಗೆ ಪತ್ನಿಯ ಸ್ಥಾನಮಾನ ನೀಡಲು ಉದಿತ್ ಅವರು ಒಪ್ಪಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಮಂಜು ಪ್ರಕಾಶ್ ಈದಿನ ಪ್ರಕಟಿಸಿದರು.

1943: ಇಟಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸೋಲಿನಿ ಈದಿನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. 10 ವರ್ಷಗಳ ಕಾಲ ನಿರಂಕುಶ ಆಡಳಿತ ನಡೆಸಿದ ಈತ 1936-1939ರ ನಡುವಣ ಸ್ಪಾನಿಷ್ ಜತೆಗಿನ ಯುದ್ಧದಲ್ಲಿ ಹಿಟ್ಲರ್ ಜೊತೆಗೆ ಕೈಜೋಡಿಸಿದ.

1935: ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರು ವರಕವಿ ದ.ರಾ. ಬೇಂದ್ರೆ- ಲಕ್ಷ್ಮೀಬಾಯಿ ದಂಪತಿಯ ಪುತ್ರನಾಗಿ ಹಾವೇರಿ ಜಿಲ್ಲೆಯ (ಹಿಂದಿನ ಧಾರವಾಡ ಜಿಲ್ಲೆ) ರಾಣೆಬೆನ್ನೂರಿನಲ್ಲಿ ಜನಿಸಿದರು. ಶಾಲೆಯಲ್ಲಿ ಇದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಅವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ವಾಮನ ಬೇಂದ್ರೆ ಅವರು ಪ್ರಬಂಧ, ಕವನ, ನಾಟಕ, ಅನುವಾದ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದವರು.

1909: ರಾಜಕಾರಣಿ ಬ್ರಹ್ಮಾನಂದರೆಡ್ಡಿ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement