My Blog List

Monday, January 18, 2010

ಇಂದಿನ ಇತಿಹಾಸ History Today ಡಿಸೆಂಬರ್ 19

ಇಂದಿನ ಇತಿಹಾಸ

ಡಿಸೆಂಬರ್ 19


2014: ಅಹಮದಾಬಾದ್: ಗುಜರಾತಿನಲ್ಲಿ 'ಚುನಿ ಕಾಕಾ' ಎಂದೇ ಖ್ಯಾತರಾಗಿದ್ದ ಹಿರಿಯ ಗಾಂಧಿವಾದಿ ಹಾಗೂ ಭೂಮಿಯ ಹಕ್ಕುಗಳ ಹೋರಾಟಗಾರ ಚುನಿಭಾಯಿ ವೈದ್ಯ (97) ಅವರು ವಯೋಮಾನ ಸಂಬಂಧಿ ಅಸ್ವಸ್ಥತೆ ಕಾರಣ ಈದಿನ ಅಹಮದಾಬಾದಿನಲ್ಲಿ ನಿಧನರಾದರು. ತಮ್ಮ ಮನೆಯಲ್ಲೇ ನಸುಕಿನ ವೇಳೆಯಲ್ಲಿ ಅವರು ಅಸು ನೀಗಿದರು ಎಂದು ಅವರ ನಿಕಟವರ್ತಿಗಳು ತಿಳಿಸಿದರು. ಚುನಿಭಾಯಿ ಅವರು ಪುತ್ರಿ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದರು. ಗಾಂಧಿವಾದಿ ಹಾಗೂ ಸವೋದಯ ನೇತಾರ ಚುನಿಭಾಯಿ ಅವರು ಸ್ವಾತಂತ್ರ್ಯಹೋರಾಟ ಮತ್ತು ವಿನೋಬಾ ಭಾವೆ ಅವರ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅಸ್ಸಾಮಿನಲ್ಲಿ 60ರ ದಶಕದಲ್ಲಿ ಹಿಂಸಾಚಾರ ಸ್ಪೋಟಗೊಂಡಾಗ ಅಲ್ಲಿ 12 ವರ್ಷಗಳ ಕಾಲ ಶಾಂತಿ ಕಾರ್ಯಕರ್ತನಾಗಿ ಅವರು ದುಡಿದಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಮರ ಸಾರಿದ್ದ ಚುನಿಭಾಯಿ ಸೆರೆವಾಸವನ್ನೂ ಎದುರಿಸಿದ್ದರು. ಅವರನ್ನು 'ಸಾಣೆ ಗುರೂಜಿ ನಿರ್ಭಯ ಪತ್ರಕರಿತಾ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಶ್ವ ಗುಜರಾತಿ ಸಮಾಜವು 'ವಿಶ್ವ ಗುಜರಾತಿ ಪ್ರತಿಭಾ' ಪ್ರಶಸ್ತಿಯನ್ನು ನೀಡಿ ಅವರನ್ನು ಪುರಸ್ಕರಿಸಿತ್ತು. ರೈತರ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಚುನಿಭಾಯಿ 1986ರಲ್ಲಿ ಎರಡು ವರ್ಷ ಕಾಲ ಗುಜರಾತಿನಲ್ಲಿ ಬರಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಉತ್ತರ ಗುಜರಾತಿನ ಪಾಟನ್ ಜಿಲ್ಲೆಯಲ್ಲಿ ಹಲವಾರು ತಡೆ ಅಣೆಕಟ್ಟುಗಳನ್ನು (ಚೆಕ್ ಡ್ಯಾಮ್) ನಿರ್ವಿುಸುವ ಮೂಲಕ 12,000 ಹೆಕ್ಟೇರ್ಗಳಿಗೂ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. 2010ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತ್ತು. ಇತರ ಹಲವಾರು ಪ್ರಶಸ್ತಿಗಳೂ ಅವರ ಮುಡಿಗೇರಿದ್ದವು. 'ಗಾಂಧಿ ಹತ್ಯೆ: ವಾಸ್ತವಾಂಶಗಳು ಮತ್ತು ತಪ್ಪು ಕಲ್ಪನೆಗಳು' ಎಂಬ ಅವರ ಗ್ರಂಥ 11ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡು ಪ್ರಕಟಿಸಿಲ್ಪಟ್ಟಿತ್ತು. 2002ರ ಗುಜರಾತ್ ದಂಗೆಗಳ ವಿರುದ್ಧವೂ ಚುನಿಭಾಯಿ ತಮ್ಮ ಸ್ವರ ಎತ್ತಿದ್ದರು. ಚುನಿಭಾಯಿ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 'ಖ್ಯಾತ ಗಾಂಧಿವಾದಿ ಶ್ರೀ ಚುನಿಭಾಯಿ ವೈದ್ಯ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅವರಿಗೆ ಚಿರಶಾಂತಿ ಲಭಿಸಲಿ' ಎಂದು ಟ್ವೀಟ್ ಮಾಡಿದರು. ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ಹಲವಾರು ನಾಯಕರೂ ವೈದ್ಯ ಅವರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.

2014: ನವದೆಹಲಿ/ಬೆಂಗಳೂರು: ನಾಡಿನ ಹಿರಿಯ ವಿಮರ್ಶಕ, ಕವಿ, ಸಾಹಿತಿ ಜಿ.ಹೆಚ್.ನಾಯಕ ಅವರ 'ಉತ್ತರಾರ್ಧ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

 ಮೂಲತಃ ಉತ್ತರಕನ್ನಡದ ಅಂಕೋಲ ತಾಲೂಕಿನವರಾದ ಜಿ.ಹೆಚ್.ನಾಯಕ ಸದ್ಯ ಮೈಸೂರಿನಲ್ಲಿ ನೆಲೆಸಿದ್ದು, ಅವರಿಗೆ 2010ರ ಪಂಪ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು. ಈಗ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರ ಮುಡಿಗೇರಿತು,

 ಅಂಕೋಲದ ಸುರ್ವೆ ಜಿ.ಹೆಚ್. ನಾಯಕರ ಹುಟ್ಟೂರು. ಅವರಿಗೀಗ 79 ವರ್ಷ ವಯಸ್ಸು. ಗೋವಿಂದರಾಯ ಹಮ್ಮಣ್ಣ ನಾಯಕ ಅವರ ಪೂರ್ಣ ಹೆಸರು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಜಿ.ಹೆಚ್. ನಾಯಕರ 'ನಿರಪೇಕ್ಷ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು.

2014: ಜೋಧಪುರ: ಗೋಹತ್ಯೆಯನ್ನು ವಿರೋಧಿಸಿ, ಗೋ ಸಂರಕ್ಷಣೆಯ ಕಾಳಜಿ ಮೆರೆದದ್ದಕ್ಕಾಗಿ ಜೋಧಪುರದ ಮುಸ್ಲಿಂ ಸಂಸ್ಥೆ ಮುಸ್ಲಿಂ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಎಂಸಿಸಿಐ. ಜೋಧಪುರ ಮೂಲದ ಸರ್ಕಾರೇತರ ಸಂಘಟನೆ ನೀಡುವ 'ಆಚಾರ್ಯ ಹಸ್ತಿ ಕರುಣಾರತ್ನ ಪ್ರಶಸ್ತಿ'ಗೆ ಪಾತ್ರವಾಯಿತು. ಆಚಾರ್ಯ ಹಸ್ತಿ ಕರುಣಾರತ್ನ ಪ್ರಶಸ್ತಿಯು ಪ್ರಶಸ್ತಿ ಪತ್ರದ ಜೊತೆಗೆ 50,000 ರೂಪಾಯಿಗಳ ಚೆಕ್ನ್ನು ಹೊಂದಿರುತ್ತದೆ. ಪ್ರಾಣಿಗಳ ಮೇಲೆ ದಯೆ, ಅವುಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಇತ್ಯಾದಿ ಸಮಾಜಸೇವಾ ಕಾರ್ಯಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಥೆಗೆ ಈ ತಿಂಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತದ ಜಾನುವಾರುಗಳು ಅದರಲ್ಲೂ ವಿಶೇಷವಾಗಿ ಗೋವುಗಳ ಸಂಖ್ಯೆ ರಾಷ್ಟ್ರದಲ್ಲಿ ಕುಗ್ಗುತ್ತಿದೆ. ಪರಿಣಾಮವಾಗಿ ಹಾಲಿನ ಕೊರತೆಯನ್ನು ರಾಷ್ಟ್ರ ಎದುರಿಸುತ್ತಿದೆ ಎಂದು ಎಂಸಿಸಿಐ ವಕ್ತಾರರು ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಸುತ್ತಾ ಹೇಳಿದರು. ಹಿಂದುಗಳಿಂದ ಪೂಜಿಸಲ್ಪಡುವ ಗೋವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಅವರು ನುಡಿದರು.

2014: ಇಸ್ಲಾಮಾಬಾದ್: ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ 18-12-2014ರ ಗುರುವಾರ ಜಾಮೀನು ಪಡೆದ ಮುಂಬೈ ದಾಳಿಯ ರೂವಾರಿ ಝುಕಿ-ಉರ್-ರಹಮಾನ್ ಲಖ್ವಿಯನ್ನು ಈದಿನ ಸಾರ್ವಜನಿಕ ಸುವ್ಯವಸ್ಥೆ ಪಾಲನೆ (ಎಂಪಿಒ) ಕಾಯ್ದೆಯ ಅಡಿಯಲ್ಲಿ ಪುನಃ ಬಂಧಿಸಿ ರಾವಲ್ಪಿಂಡಿಯ ಅಡಿಲಾ ಸೆರೆಮನೆಯಲ್ಲಿ ಇರಿಸಲಾಯಿತು. ಆತನನ್ನು ಮೂರು ತಿಂಗಳ ಅವಧಿಗೆ ಸೆರೆಮನೆಯಲ್ಲಿ ಇರಿಸಲು ಸರ್ಕಾರ ನಿರ್ಧರಿಸಿತು ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಲಖ್ವಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರಿ ಮೂಲವೊಂದು 'ಡಾನ್'ಗೆ ತಿಳಿಸಿತು. 2008ರ ನವೆಂಬರ್ 26-29ರ ಅವಧಿಯಲ್ಲಿ 166 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಯೋಜಿಸಿ ನೆರವು ನೀಡಿದ ಆರೋಪವಿದ್ದ ಏಳು ಮಂದಿಯ ಪೈಕಿ ಲಖ್ವಿ ಒಬ್ಬನಾಗಿದ್ದು, ಇಸ್ಲಾಮಾಬಾದಿನ ಭಯೋತ್ಪಾದಕ ನಿಗ್ರಹ ನ್ಯಾಯಾಲಯವು ಈತನಿಗೆ ಜಾಮೀನು ಮಂಜೂರು ಮಾಡಿತ್ತು. ಮುಂಬೈ ದಾಳಿ ಘಟನೆಯಲ್ಲಿ ವಿದೇಶೀಯರೂ ಸೇರಿದಂತೆ 166 ಜನರು ಮೃತರಾಗಿದ್ದುದರ ಜೊತೆಗೆ ಇತರ ನೂರಾರು ಮಂದಿ ಗಾಯಗೊಂಡಿದ್ದರು. ಮುಂಬೈ ದಾಳಿ ಕಾಲದಲ್ಲಿ ಲಖ್ವಿಯು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಕಾರ್ಯಾಚರಣಾ ವಿಭಾಗದ ಮುಖ್ಯಸ್ಥನಾಗಿದ್ದ ಎನ್ನಲಾಗಿದ್ದು, ಈ ಸಂಘಟನೆಯೇ ಈ ದಾಳಿಯನ್ನು ನಡೆಸಿತ್ತು ಎಂದು ಭಾರತ ಆಪಾದಿಸಿತ್ತು.

2014: ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಝುಕಿ-ಉರ್-ರಹಮಾನ್-ಲಖ್ವಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಭಾರತ ಸರ್ಕಾರದ ಕಳವಳ ಮತ್ತು ಜನತೆಯ ತೀವ್ರ ಅಸಮಾಧಾನವನ್ನು ಭಾರತವು ಈದಿನ ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ನವದೆಹಲಿಯಲ್ಲಿ ಹೇಳಿದರು. 'ನಮಗೆ ತಲುಪಿರುವ ಪುನರಪಿ ಭರವಸೆಗಳ ಹೊರತಾಗಿಯೂ ಇಸ್ಲಾಮಾಬಾದಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಷಡ್ಯಂತ್ರದ ವಿಚಾರಣೆ ಅತ್ಯಂತ ನಿಧಾನಗತಿಯಲ್ಲಿ ಮುಂದುವರೆದಿದೆ. ಜೊತೆಗೆ ಝಕೀರ್-ಉರ್-ರಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿದ ಕ್ರಮವು ಈ ವಿಚಾರಣೆಯನ್ನು ಬೇರೆಯೇ ಹಂತಕ್ಕೆ ಒಯ್ದಿದೆ' ಎಂದು ಸೈಯದ್ ಅಕ್ಬರುದ್ದೀನ್ ಹೇಳಿದರು. 'ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಷಯದ ಬಗ್ಗೆ ಪಾಕಿಸ್ತಾನಕ್ಕೆ ನಮ್ಮ ಬಲವಾದ ಆಕ್ಷೇಪ, ಕಳವಳ ಮತ್ತು ಭಾರತೀಯ ಸಮಾಜದ ಭಾವನೆಗಳನ್ನು ಕಳುಹಿಸಿದ್ದೇವೆ. ಈ ಘಟನೆಯು ಭಯೋತ್ಪಾದಕ ಗುಂಪುಗಳ ವಿರುದ್ಧ ಹೋರಾಡುವ ಪಾಕಿಸ್ತಾನದ ಬದ್ಧತೆಯನ್ನೇ ನಗೆಪಾಟಲು ಮಾಡಿದೆ' ಎಂದು ವಕ್ತಾರರು ನುಡಿದರು. 2008ರ ನವೆಂಬರ್ 26ರಂದು 166 ಮಂದಿಯನ್ನು ಬಲಿತೆಗೆದುಕೊಂಡ ಮುಂಬೈ ಮೇಲಿನ ದಾಳಿಯ ಯೋಜನೆ ರೂಪಿಸಿ, ಪ್ರಚೋದಿಸುವ ಷಡ್ಯಂತ್ರವನ್ನು ಹೆಣೆದ 7 ಮಂದಿ ಪಾಕಿಸ್ತಾನೀಯರ ಪೈಕಿ ಲಖ್ವಿ ಒಬ್ಬನಾಗಿದ್ದಾನೆ. ಲಖ್ವಿ ಬಿಡುಗಡೆಗಾಗಿ ಜಾಮೀನು ನೀಡಲಾಗಿರುವುದನ್ನು ಒಪ್ಪಲಾಗದು ಎಂದು 18-12-2014ರಂದೇ ಪಾಕಿಸ್ತಾನಕ್ಕೆ ತಿಳಿಸಿದ್ದ ಭಾರತ ಈ ನಿರ್ಣಯವನ್ನು ತತ್ಕ್ಷಣ ಹಿಂತೆಗೆದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.

2014: ಇಸ್ಲಾಮಾಬಾದ್: ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಆರು ಮಂದಿ ಭಯೋತ್ಪಾದಕರ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅನುಮೋದನೆ ನೀಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. 'ಸೇನಾ ಸಿಬ್ಬಂದಿ ಮುಖ್ಯಸ್ಥರು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಕಾನೂನು ಪ್ರಕಾರ ಶಿಕ್ಷೆ ವಿಧಿಸಿರುವ 6 ಮಂದಿ ಕಟ್ಟಾ ಭಯೋತ್ಪಾದಕರ 'ಡೆತ್ ವಾರಂಟ್'ಗಳಿಗೆ ಈದಿನ ಸಹಿ ಮಾಡಿದ್ದಾರೆ' ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ಪಿಆರ್) ನಿರ್ದೇಶಕ ಜನರಲ್ ಮೇಜರ್ ಅಸಿಮ್ಬಜ್ವಾ ಹಿಂದಿನ ರಾತ್ರಿ ತಡವಾಗಿ ಟ್ವೀಟ್ ಮಾಡಿದರು. ಭಯೋತ್ಪಾದಕರ ಮರಣದಂಡನೆ ಜಾರಿ ಮೇಲಿನ ನಿಷೇಧ ರದ್ದು ಪಡಿಸಲಾಗಿದೆ ಎಂದು ಪ್ರಧಾನಿ ನವಾಜ್ ಷರೀಫ್ ಅವರು ಪ್ರಕಟಿಸಿದ ಒಂದು ದಿನದ ಬಳಿಕ ಈ ಕುರಿತ ಪ್ರಕಟಣೆ ಹೊರ ಬಿದ್ದಿದೆ ಎಂದು 'ಡಾನ್' ಆನ್ಲೈನ್ ವರದಿ ಮಾಡಿತು. ಸೇನೆಯು ಅಪರಾಧಿಗಳ ಹೆಸರುಗಳನ್ನು ತಡೆಹಿಡಿದಿದೆ ಮತ್ತು ಗಲ್ಲು ಶಿಕ್ಷೆ ಜಾರಿ ಪೂರ್ಣಗೊಂಡ ಬಳಿಕ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದು ಹೇಳಿತು. ಆರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಜಾರಿಯ ಶಾಸನ ಸಂಬಂಧಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸೇನಾ ವಕ್ತಾರರು ಹೇಳಿದ್ದನ್ನು ಮಾಧ್ಯಮ ಉಲ್ಲೇಖಿಸಿತು. ಪಾಕಿಸ್ತಾನಿ ಸೇನೆಯ ಕೇಂದ್ರ ಕಚೇರಿ ಮೇಲೆ ನಡೆದ ದಾಳಿ ಮತ್ತು ಚೇನಾಬ್ ನದಿ ತೀರದ ಸೇನಾ ಶಿಬಿರದ ಮೇಲೆ ನಡೆದ ದಾಳಿ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು.

2014: ನವದೆಹಲಿ: ಶ್ವಾಸನಾಳದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೇಹಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಂಡರು. 'ಅವರ ದೇಹಸ್ಥಿತಿ ಸ್ಥಿರವಾಗಿದೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಸರ್. ಗಂಗಾರಾಮ್ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಅಜಯ್ ಸ್ವರೂಪ್ ಹೇಳಿದರು. ಶ್ವಾಸನಾಳದ ಸೋಂಕು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 68ರ ಹರೆಯದ ಕಾಂಗ್ರೆಸ್ ಅಧ್ಯಕ್ಷೆಯನ್ನು ಹಿಂದಿನ ದಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2014: ಶ್ರೀನಗರ: ರಾತ್ರಿ ವೇಳೆಯಲ್ಲಿ ತಾಪಮಾನವು ಶೈತ್ಯಗಟ್ಟುವಿಕೆಯ ಬಿಂದುವಿಗಿಂತಲೂ ಕೆಳಗಿಳಿದ ಪರಿಣಾಮವಾಗಿ ಕಾಶ್ಮೀರ ಕಣಿವೆ ಚಳಿಯಿಂದ ಗಡ ಗಡ ನಡುಗಿತು. ಕಾಶ್ಮೀರ ಕಣಿವೆ ಪ್ರದೇಶದ ಹಾಲಿ ಶೀತಗಾಳಿಯ ಸ್ಥಿತಿ ಇನ್ನೂ ಮೂರುದಿನ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಎಂದು ಹವಾಮಾನ ಕಚೇರಿ ತಿಳಿಸಿತು. ಶ್ರೀನಗರದಲ್ಲಿ ಈದಿನ ಕನಿಷ್ಠ ತಾಪಮಾನ ಮೈನಸ್ 4.2 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗುಲ್ಮಾರ್ಗ್ನಲ್ಲಿ ಮೈನಸ್ 2.6 ಮತ್ತು ಪಹಲ್ಗಾಂವದಲ್ಲಿ ಮೈನಸ್ 7.2 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಹವಾಮಾನ ಕಚೇರಿ ಹೇಳಿತು. ಲಡಾಖ್ ಪ್ರದೇಶದ ಲೆಹ್ ಪಟ್ಟಣದಲ್ಲಿ ಕನಿಷ್ಠ ತಾಪಮಾನ ಮೈನಸ್ 12.5 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕಾರ್ಗಿಲ್ ಪಟ್ಟಣದಲ್ಲಿ ಅದು ಮೈನಸ್ 12.1 ಡಿಗ್ರಿಯಾಗಿತ್ತು. ಜಮ್ಮು ನಗರದಲ್ಲಿ ಹಿಂದಿನ ರಾತ್ರಿಯ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗರಿಷ್ಠ ತಾಪಮಾನ 10.2 ಡಿಗ್ರಿಯಾಗಿತ್ತು.

2014: ನವದೆಹಲಿ: ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಒಡಿಶಾದ ಪೊಲೀಸ್ ಸುಪರಿಂಟೆಂಡೆಂಟ್ ಅವರನ್ನು ಬಂಧಿಸಿದರು. ಚಿಟ್ ಫಂಡ್ ಅವ್ಯವಹಾರ ನಡೆಸಿರುವ ಕಂಪನಿಯಿಂದ ಆರ್ಥಿಕ ನೆರವು ಪಡೆದಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರುವ ಸಿಬಿಐ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಯನ್ನೇ ಬಂಧಿಸಿರುವುದು ಒಡಿಶಾದಲ್ಲಿ ಪ್ರಕರಣದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿತು. ಸಿಬಿಐ ಮೂಲಗಳು ತಿಳಿಸಿರುವಂತೆ ಡಿಎಸ್ಪಿ ಪ್ರಮೋದ್ ಪಾಂಡಾ ಬಂಧನಕ್ಕೊಳಗಾದ ಪೊಲೀಸ್ ಅಧಿಕಾರಿಯಾಗಿದ್ದು, ಅರ್ಥ ತತ್ವ ಗ್ರೂಪ್ನ ಯೋಜನೆಯಡಿ ಹೂಡಿಕೆ ಕೂಡ ಮಾಡಿದ್ದರು ಎನ್ನಲಾಯಿತು..

2008: ಚಿತ್ರದುರ್ಗದಲ್ಲಿ ಜನವರಿ 29ರಿಂದ ನಡೆಯುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಎಲ್.ಬಸವರಾಜು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಪ್ರಕಟಿಸಿದರು.

2008: ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹತ್ಯೆ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ವ್ಯಕ್ತವಾದ ಒಕ್ಕೊರಲ ವಿರೋಧಕ್ಕೆ ಮಣಿದು ಕೇಂದ್ರದ ಅಲ್ಪ ಸಂಖ್ಯಾತ ವ್ಯವಹಾರ ಇಲಾಖೆ ಸಚಿವ ಎ.ಆರ್.ಅಂತುಳೆ ರಾಜೀನಾಮೆ ಸಲ್ಲಿಸಿದರು. ಸ್ವತಃ ಅಂತುಳೆ ತಾವು ರಾಜೀನಾಮೆ ನೀಡಿರುವ ಬಗ್ಗೆ ಖಚಿತ ಪಡಿಸದಿದ್ದರೂ ಅವರು ಕಳುಹಿಸಿದ ಪತ್ರ ಪ್ರಧಾನಿ ಸಿಂಗ್ ಅವರನ್ನು ತಲುಪಿರುವುದನ್ನು ಮೂಲಗಳು ಖಚಿತಪಡಿಸಿದವು.

2008: ಸುಮಾರು 59 ಜನರನ್ನು ಬಲಿತೆಗೆದುಕೊಂಡ 1997 ರ ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಗೋಪಾಲ್ ಹಾಗೂ ಸುಶೀಲ್ ಅನ್ಸಲ್ ಅವರನ್ನು ತಪ್ಪಿತಸ್ಥರೆಂದು ನೀಡಿದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿಯಿತು. ಆದರೆ ಅನ್ಸಲ್ ಸಹೋದರರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿತು. ದೆಹಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅನ್ಸಲ್ ಸಹೋದರರು ಸಲ್ಲಿಸಿದ ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ರವೀಂದ್ರ ಭಟ್ ಅವರು, ತಮ್ಮ ಒಡೆತನದ ಉಪಹಾರ್ ಚಿತ್ರಮಂದಿರದಲ್ಲಿ ಜನರಿಗೆ ಸುರಕ್ಷತೆ ಒದಗಿಸಲು ಅನ್ಸಲ್ ಸಹೋದರರು ವಿಫಲರಾಗಿದ್ದಾರೆ ಎಂದು ಹೇಳಿದರು.

2007: ಇಂಗ್ಲಿಷ್ ಕಾನೂನಿನಲ್ಲಿ ಮಾನವ ಹಕ್ಕುಗಳನ್ನು ವಿವರಿಸಿರುವ ರಾಜಮುದ್ರೆಯುಳ್ಳ 800 ವರ್ಷಗಳಷ್ಟು ಹಳೆಯದಾದ ಅತ್ಯಮೂಲ್ಯ `ಮ್ಯಾಗ್ನಕಾರ್ಟ' ಹಸ್ತಪ್ರತಿ ಈದಿನ ನ್ಯೂಯಾರ್ಕಿನಲ್ಲಿ 2.13 ಕೋಟಿ (21.3 ಮಿಲಿಯನ್) ಡಾಲರುಗಳಿಗೆ ಹರಾಜಾಯಿತು. `ಮಾಗ್ನಕಾರ್ಟ' ಜಗತ್ತಿನಲ್ಲಿ ಉಳಿದಿರುವುದೆನ್ನಲಾದ ಏಕೈಕ ಪ್ರತಿಯಾಗಿರುವ ಈ ಮ್ಯಾಗ್ನಕಾರ್ಟ 1297ರಷ್ಟು ಹಳೆಯದಾಗಿದ್ದು ಒಂದನೇ ದೊರೆ ಎಡ್ವರ್ಡನ ಮೇಣದ ಮೊಹರನ್ನು ಹೊಂದಿದೆ. ಕಳೆದ ಎರಡು ದಶಕಗಳಿಂದ ಇದನ್ನು ವಾಷಿಂಗ್ಟನ್ನಿನ ರಾಷ್ಟ್ರೀಯ ಪುರಾತನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಟೆಲಿಫೋನ್ ಬಿಡ್ಡರ್ ಒಬ್ಬ ಅದನ್ನು ಅಪಹರಿಸಿ ಮಾರಾಟ ಮಾಡಿದ್ದ. ಈ ಹಸ್ತಪ್ರತಿಯನ್ನು ಖರೀದಿಸಿದ ವ್ಯಕ್ತಿಯನ್ನು ಕಾರ್ಲೈಲ್ ಈಕ್ವಿಟಿ ಗುಂಪಿನ ಸ್ಥಾಪಕ ಡೇವಿಡ್ ರುಬೆನ್ ಸ್ಟೀನ್ ಎಂಬುದಾಗಿ ನಂತರ ಪತ್ತೆಹಚ್ಚಲಾಯಿತು. ಇವರು ಅಧ್ಯಕ್ಷ ಕಾರ್ಟರ್ ಅವರ ಗೃಹನೀತಿ ಉಪ ಸಲಹೆಗಾರರೂ ಆಗಿದ್ದರು. ವಿಷಯ ಬಹಿರಂಗಗೊಂಡ ಬಳಿಕ ರುಬೆನ್ ಸ್ಟೀನ್ ಅವರು ಹಸ್ತಪ್ರತಿಯನ್ನು ಮತ್ತೆ ವಾಷಿಂಗ್ಟನ್ನಿನ ರಾಷ್ಟ್ರೀಯ ಪುರಾತನ ವಸ್ತುಗಳ ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡುವುದಾಗಿ ಪ್ರಕಟಿಸಿದ್ದರು.

2007: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಈದಿನ ಬೆಳಗ್ಗೆ ಸಂಭವಿಸಿದ ರೈಲು ಅಪಘಾತದಲ್ಲಿ 58ಕ್ಕೂ ಹೆಚ್ಚು ಜನ ದುರ್ಮರಣಕ್ಕೀಡಾದರು. 120 ಜನರು ಗಾಯಗೊಂಡರು. ಕರಾಚಿಯಿಂದ 300 ಕಿ.ಮೀ ದೂರದಲ್ಲಿರುವ ನೌಶೇರ್ ಫೆರೊಜ್ ಎಂಬಲ್ಲಿ ಕರಾಚಿ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಯಿತು. ವೇಗವಾಗಿ ಚಲಿಸುತ್ತಿದ್ದಾಗ, ರೈಲಿನ ಎಂಜಿನ್ನಿನಿಂದ 15 ಬೋಗಿಗಳು ಪ್ರತ್ಯೇಕಗೊಂಡು ಹಳಿ ತಪ್ಪಿದ ಕಾರಣ ದುರ್ಘಟನೆ ಸಂಭವಿಸಿತು.

2007: ಐಎಎಸ್ ಅಧಿಕಾರಿ ಡಾ.ವಿ. ಚಂದ್ರಶೇಖರ್, ಇಬ್ಬರು ಮುಖ್ಯ ಎಂಜಿನಿಯರುಗಳು, ವಾಣಿಜ್ಯ ತೆರಿಗೆ ಇಲಾಖೆಯ ಒಬ್ಬ ಜಂಟಿ ಆಯುಕ್ತ, ಒಬ್ಬ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 30 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಬೆಂಗಳೂರು ನಗರ, ಗ್ರಾಮಾಂತರ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ 13 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಯಿತು.

2007: ತನ್ನ ಊರಿನ 50 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸಲೇ ಬೇಕು ಎಂದು ಹಠ ಹಿಡಿದ ಯುವಕ ಬಸವರಾಜ ನಂದಿಕೇಶ್ವರ ಎಂಬ ಯುವಕನೊಬ್ಬ ತಲೆಯ ಮೇಲೆ 25 ಕೆ.ಜಿ ಭಾರದ ಕಲ್ಲು ಹೊತ್ತುಕೊಂಡು ವಿಜಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸತತ ಮೂರು ಗಂಟೆಗಳ ಕಾಲ `ಗಾಂಧೀಗಿರಿ' ನಡೆಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಮುದ್ದೇಬಿಹಾಳ ಪಟ್ಟಣದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ನಡೆಸುತ್ತಾ ಬಂದ ನಾಲ್ಕು ವರ್ಷಗಳ ಹೋರಾಟ ಇದರೊಂದಿಗೆ ವಿಶಿಷ್ಟ ಸ್ವರೂಪ ಪಡೆದುಕೊಂಡಿತು.

2007: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಮೂವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡದ ಜತೆ 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. 1991-92ರ ಅವಧಿಯಲ್ಲಿ 6.29 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದ ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿನಯ್ ಕುಮಾರ್ ಸಹಾಯ್ ಅವರು 43 ಜನರು ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಈ ಪೈಕಿ ಜೆ. ಬೆಂಗರಾಜ್, ಡಾ.ಕೃಷ್ಣಮೋಹನ್ ಪ್ರಸಾದ್ ಮತ್ತು ಡಾ.ಕೀರ್ತಿ ನಾರಾಯಣ್ ಝಾ ಅವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡ ಮತ್ತು 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಉಳಿದ 40 ಮಂದಿಗೆ 5 ಲಕ್ಷ ದಿಂದ 45 ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ರಿಂದ 6 ವರ್ಷಗಳ ಶಿಕ್ಷೆ ನೀಡಲಾಯಿತು. ಮೇವು ಹಗರಣದ ಇತರ ಪ್ರಕರಣಗಳಿಗೆ ಹೋಲಿಸಿದರೆ ಈ ತೀರ್ಪು ಅಭೂತಪೂರ್ವ. ಇಲ್ಲಿಯವರೆಗೆ ಮೇವು ಹಗರಣದಲ್ಲಿ ಯಾರಿಗೂ ಇಷ್ಟು ದಂಡ ವಿಧಿಸಿರಲಿಲ್ಲ.

2007: ಅಮೆರಿಕದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ `ಬಿಕಿನಿ ಕೊಲೆಗಾರ' ಚಾರ್ಲ್ಸ್ ಶೋಭರಾಜ್ ಗೆ ವಿಧಿಸಲಾದ ಮರಣ ದಂಡನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲು ನಿರಾಕರಿಸಿದ ನೇಪಾಳದ ಸುಪ್ರೀಂಕೋರ್ಟ್ `ಯಥಾಸ್ಥಿತಿ' ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸುಪ್ರೀಂಕೋರ್ಟ್, ಶೋಭರಾಜ್ ವಿರುದ್ಧದ ಮತ್ತೊಂದು ನಕಲಿ ಪಾಸ್ ಪೋರ್ಟ್ ಪ್ರಕರಣದ ವಿಚಾರಣೆಯನ್ನು ಪುನಃ ಆರಂಭಿಸುವಂತೆ ಆದೇಶ ನೀಡಿತು. ಎರಡೂ ಪ್ರಕರಣಗಳ ವಿಚಾರಣೆಯನ್ನು ಏಕಕಾಲದಲ್ಲಿ ನಡೆಸಲೂ ನ್ಯಾಯಪೀಠ ನಿರ್ಧರಿಸಿತು. ಅಮೆರಿಕದ ಮಹಿಳೆ ಕೊನಿ ಬ್ರೊಂಜಿಕ್ ಅವರ ಕೊಲೆಗೆ ಸಂಬಂಧಿಸಿದಂತೆ ಶೋಭರಾಜ್ ಗೆ ಕಠ್ಮಂಡು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಇದನ್ನು ಶೋಭರಾಜ್ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದ. 1970ರ ದಶಕದಲ್ಲಿ ಭಾರತ, ಥಾಯ್ಲೆಂಡ್, ನೇಪಾಳದಲ್ಲಿ 12ಕ್ಕೂ ಹೆಚ್ಚು ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಶೋಭರಾಜ್ ಮೇಲಿತ್ತು.

2007: ಮೂಡಬಿದಿರೆಯ ಮಿಜಾರಿನ ಶೋಭಾವನದಲ್ಲಿ ನಡೆಯುವ `2008ರ ಆಳ್ವಾಸ್ ವಿರಾಸತ್'ನಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರನ್ನು 'ವಿರಾಸತ್ ಪ್ರಶಸ್ತಿ- 2007' ನೀಡಿ ಗೌರವಿಸಲು ನಿರ್ಧರಿಸಲಾಯಿತು.

2007: ಧಾರವಾಡ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ `ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಈ ವರ್ಷ ದೆಹಲಿಯ ಕರ್ನಾಟಕ ಸಂಘಕ್ಕೆ ನೀಡಲಾಯಿತು.

2006: ವಿಶ್ವಕಪ್ ಚಾಂಪಿಯನ್ ಇಟಲಿ ಫುಟ್ಬಾಲ್ ತಂಡದ ನಾಯಕ ಫ್ಯಾಬಿಯೋ ಕನಾವಾರೋ ಅವರು ಫಿಫಾ `ವರ್ಷದ ಶ್ರೇಷ್ಠ ಆಟಗಾರ' ಪ್ರಶಸ್ತಿ ಗೆದ್ದರು. ಇದರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ರಕ್ಷಣಾ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕನಾವಾರೋ ಅವರು ಈ ಹಾದಿಯಲ್ಲಿ ಫ್ರಾನ್ಸಿನ ಜೆನಡಿನ್ ಜಿಡಾನ್ ಹಾಗೂ ಬ್ರೆಜಿಲಿನ ರೋನಾಲ್ಡಿನೋ ಅವರನ್ನು ಹಿಂದೆ ಹಾಕಿದರು.

2006: ಡಿಸ್ಕವರಿ ಬಾಹ್ಯಾಕಾಶ ನೌಕೆಯ ಸೌರಶಕ್ತಿ ಸಂಗ್ರಹ ಪೆಟ್ಟಿಗೆಯಲ್ಲಿ ಕಾಣಿಸಿಕೊಂಡ ದೋಷವನ್ನು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶ ನಡಿಗೆ ನಡೆಸಿ ಸರಿ ಪಡಿಸಿದರು.

2005: ಖ್ಯಾತ ಗ್ಲೈಡರ್ ಹಾರಾಟಗಾರ ಹಾಗೂ ರೇಮಂಡ್ ಲಿಮಿಟೆಡ್ ಅಧ್ಯಕ್ಷ ವಿಜಯಪಥ್ ಸಿಂಘಾನಿಯಾ ಮುಂಬೈ ಷರೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ಸಿಂಘಾನಿಯಾ ಅವರಿಗೆ ಮುಂಬೈಯ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.

2005: ತಾರ್ ಶಹನಾಯಿ ವಾದಕ ಹಾಗೂ ಭಾರತೀಯ ಅರಣ್ಯಪಡೆ ಸೇವೆಯ ನಿವೃತ್ತ ಅಧಿಕಾರಿ ಎಚ್.ಟಿ. ಕೊಪ್ಪಿಕರ್ (88) ಹೊಸಪೇಟೆಯಲ್ಲಿ ನಿಧನರಾದರು. ಕೊಪ್ಪಿಕರ್ ಮೂಲದವರಾದ ಕೊಪ್ಪಿಕರ್ ಅವರು ತಮ್ಮ ಸಂಬಂಧಿಯೊಬ್ಬರು ಸೃಷ್ಟಿಸ್ದಿದ `ತಾರ್ ಶಹನಾಯಿ' ಎಂಬ ಆಧುನಿಕ ತಂತಿವಾದ್ಯ ಕಂಡು ಆಕರ್ಷಿತರಾಗಿ ಅವರಿಂದ ಒಂದು ಉಪಕರಣ ಮಾಡಿಸಿಕೊಂಡು ಅಭ್ಯಾಸ ಮಾಡಿದರು. ಅದರಲ್ಲೇ ಸಾಧನೆಗೈದು ರಾಷ್ಟ್ರದಲ್ಲಿ ಆಧುನಿಕ ವಾದ್ಯವನ್ನು ಪರಿಚಯಿಸಿ, ಆಕಾಶವಾಣಿ ಸೇರಿದಂತೆ ಹಲವೆಡೆ ಕಾರ್ಯಕ್ರಮವನ್ನೂ ನೀಡಿದರು. ಈ ಸಂಗೀತ ಸಾಧನೆಗೆ ಇವರಿಗೆ ಹಲವು ಸನ್ಮಾನ ಮತ್ತು ಪ್ರಶಸ್ತಿ ಬಂದಿದ್ದವು.

2005: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಓಮರ್ ಅಬ್ದುಲ್ಲಾ ಸತತ ಎರಡನೇ ಬಾರಿಗೆ ಆಯ್ಕೆಯಾದರು.

2005: ಸಂಸದರ ಪ್ರದೇಶಾಭಿವೃದ್ಧಿ ನಿಧಿುಂದ ಹಣ ಮಂಜೂರು ಮಾಡಲು ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರು ರುಷುವತ್ತು ಕೇಳಿದ ಇನ್ನೊಂದು ಸ್ಫೋಟಕ ಸುದ್ದಿಯನ್ನು ಸ್ಟಾರ್ ನ್ಯೂಸ್ ಪ್ರಸಾರ ಮಾಡಿತು. 'ಚಕ್ರವ್ಯೂಹ' ಹೆಸರಿನ ಈ ಕಾರ್ಯಾಚರಣೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾವೊ, ಎನ್ ಡಿ ಎ ಸರ್ಕಾರದಲ್ಲಿ ಸಚಿವರಾಗಿದ್ದ ಫಗನ್ ಸಿಂಗ್ ಕುಲಾಸ್ತೆ ಸೇರಿದಂತೆ 7 ಮಂದಿ ಸಂಸತ್ ಸದಸ್ಯರು ಸಿಕ್ಕಿ ಬಿದ್ದಿರುವುದಾಗಿ ಸ್ಟಾರ್ ನ್ಯೂಸ್ ಪ್ರಕಟಿಸಿತು. ಆರೋಪಿ ಸಂಸದರು: ಅಲೆಮಾವೊ ಚರ್ಚಿಲ್ (ಕಾಂಗ್ರೆಸ್), ಫಗನ್ ಸಿಂಗ್ ಕುಲಾಸ್ತೆ, ರಾಮಸ್ವರೂಪ ಕೋಲಿ, ಚಂದ್ರಪ್ರತಾಪ ಸಿಂಗ್ (ಎಲ್ಲರೂ ಬಿಜೆಪಿ), ಪಾರಸನಾಥ್ ಯಾದವ್ (ಎಸ್ ಪಿ). ರಾಜ್ಯಸಭೆಯಲ್ಲಿ ಆರೋಪಿಗಳು: ಸಾಕ್ಷಿ ಮಹಾರಾಜ್ (ರಾಷ್ಟ್ರೀಯ ಕ್ರಾಂತಿದಳ), ಈಶನ್ ಸಿಂಗ್ (ಬಿ ಎಸ್ ಪಿ).

2001: ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಖ್ಯಾತ ಸೃಷ್ಟಿ `ದಿ ಕಾಮನ್ ಮ್ಯಾನ್' ಪ್ರತಿಮೆಯನ್ನು ಅನಾವರಣಗೊಳಿಸಿದರು. ಪುಣೆಯ ಸಿಂಬಿಯೋಸಿಸ್ ಸೊಸೈಟಿಯ ನೂತನ ಕಟ್ಟಡ ವಿಶ್ವಭವನದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. `ಕಾರ್ಟೂನ್ ವ್ಯಕ್ತಿತ್ವ' ಒಂದರ ಅತ್ಯಂತ ಎತ್ತರದ ಲೋಹದ ಪ್ರತಿಮೆ ಇದು. ಈ ಕಂಚಿನ ಪ್ರತಿಮೆಯ ಎತ್ತರ ಎಂಟು ಅಡಿಗಳು.

1997: ಜೇಮ್ಸ್ ಕ್ಯಾಮೆರೋನ್ ಅವರ `ಟೈಟಾನಿಕ್' ಚಲನಚಿತ್ರ ಅಮೆರಿಕಾದ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಂಡಿತು.

1988: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗುಜರಾತಿ ಸಾಹಿತಿ ಉಮಾಶಂಕರ ಜೋಶಿ ನಿಧನ.

1984: ಹಾಂಕಾಂಗನ್ನು 1997ರ ಜುಲೈ 1ರಂದು ಚೀನೀ ಸಾರ್ವಭೌಮತ್ವಕ್ಕೆ ಹಿಂತಿರುಗಿಸುವ ಒಪ್ಪಂದಕ್ಕೆ ಬ್ರಿಟನ್ ಮತ್ತು ಚೀನಾ ಸಹಿ ಹಾಕಿದವು.

1961: ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾ ಮುಕ್ತಗೊಂಡಿತು. ದಾಮನ್ ಹಾಗೂ ದಿಯು ಕೂಡಾ ಇದೇ ದಿನ ವಿದೇಶೀ ಆಳ್ವಿಕೆಯಿಂದ ವಿಮುಕ್ತಗೊಂಡಿತು. ಮೇಜರ್ ಜನರಲ್ ಜೆ.ಪಿ. ಕ್ಯಾಂಡೆತ್ ಗೋವಾದ ಸೇನಾ ಗವರ್ನರ್ ಆಗಿ ನೇಮಕಗೊಂಡರು.

1956: ವಿನಯಶೀಲರಾದ 48ರ ಹರೆಯದ ಸದಸ್ಯ ಎಸ್. ಆರ್. ಕಂಠಿ ಅವರನ್ನು ಈದಿನ ಆರಂಭಗೊಂಡ ವಿಧಾನಸಭೆಯು ತನ್ನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಚುನಾಯಿಸಿತು.

1952: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಘೋಷಣೆ ಮಾಡಿದರು.

1918: ರಾಬರ್ಟ್ ರಿಪ್ಲೀ ಅವರ ಕಾಮಿಕ್ `ಬಿಲೀವ್ ಇಟ್ ಆರ್ ನಾಟ್!' ನ್ಯೂಯಾರ್ಕ್ ಗ್ಲೋಬ್ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಇದಕ್ಕೆ ಓದುಗರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹೀಗಾಗಿ ಇದು ವಾರಕ್ಕೊಮ್ಮೆ ಹಾಗೂ ನಂತರ ಪ್ರತಿದಿನ ಬರಲು ಆರಂಭವಾಯಿತು.

1916: ಬರ್ಮಾದ (ಈಗಿನ ಮ್ಯಾನ್ಮಾರ್) ಕೊನೆಯ ದೊರೆ ಥೈಬಾ ಅವರು ಭಾರತದ ರತ್ನಗಿರಿ ಕೋಟೆಯಲ್ಲಿ ದೇಶಭ್ರಷ್ಟರಾಗಿದ್ದಾಗ ನಿಧನರಾದರು. ಬ್ರಿಟಿಷರು 1885ರಲ್ಲಿ ಅಪ್ಪರ್ ಬರ್ಮಾ ಮೇಲೆ ದಾಳಿ ನಡೆಸಿ ಥೈಬಾ ಅವರನ್ನು ಪದಚ್ಯುತಿಗೊಳಿಸಿದ್ದರು. ಅಪ್ಪರ್ ಬರ್ಮಾವನ್ನು ಬ್ರಿಟಿಷ್ ಬರ್ಮಾದೊಳಗಿನ ರಾಜ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು.

1906: ಲಿಯೋನಿದ್ ಇಲಿಚ್ ಬ್ರೆಜ್ನೇವ್ (1906-1982) ಹುಟ್ಟಿದ ದಿನ. ಸೋವಿಯತ್ ಮುತ್ಸದ್ದಿ ಹಾಗೂ ಕಮ್ಯೂನಿಸ್ಟ್ ಪಕ್ಷದ ಮುಖ್ಯಸ್ಥರಾಗಿದ್ದ ಇವರು 18 ವರ್ಷಗಳ ಕಾಲ ಸೋವಿಯತ್ ಒಕ್ಕೂಟದ ನಾಯಕರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement