My Blog List

Monday, January 18, 2010

ಇಂದಿನ ಇತಿಹಾಸ History Today ಡಿಸೆಂಬರ್ 20

ಇಂದಿನ ಇತಿಹಾಸ

ಡಿಸೆಂಬರ್ 20

ನಂದಿತಾ ದಾಸ್ ನಿರ್ದೇಶನದ 'ಫಿರಾಕ್' ಮತ್ತು ದೀಪಾ ಮೆಹ್ತಾ ಅವರ 'ಹೆವನ್ ಆನ್ ಅರ್ಥ್' ಚಿತ್ರಗಳು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡವು. ಏಷ್ಯಾ-ಆಫ್ರಿಕಾ ವಿಭಾಗದಲ್ಲಿಯ ಸ್ಪರ್ಧೆಗೆ ಈ ಪ್ರಶಸ್ತಿ ಲಭಿಸಿದ್ದು, ಫಿರಾಕ್ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿ ದೊರಕಿತು.

2008: ಗಣಿಗಾರಿಕೆ ಅಕ್ರಮಗಳ ಕುರಿತು ಲೋಕಾಯುಕ್ತರು ನೀಡಿರುವ ವರದಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬಹುದು ಎಂಬುದನ್ನು ಸೂಚಿಸಲು ಮೂರು ಮಂದಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಲ್ಲಿ ಪ್ರಕಟಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಅವರು ನುಡಿದರು.

2008: ತಾವು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಆಕಸ್ಮಿಕದಲ್ಲಿ ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಅರ್ಜುನ ಮುಂಡಾ ಹಾಗೂ ಬಿಜೆಪಿಯ ಇನ್ನಿಬ್ಬರು ಹಿರಿಯ ಮುಖಂಡರು ಜೀವಾಪಾಯದಿಂದ ಪಾರಾದರು. ಡಿ.29ರ ವಿಧಾನಸಭಾ ಉಪಚುನಾವಣೆ ಸಂಬಂಧ ತಮರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ವಾಪಸ್ಸಾಗುತ್ತಿದ್ದಾಗ ದುರಂತ ಸಂಭವಿಸಿತು.

2008: ನಂದಿತಾ ದಾಸ್ ನಿರ್ದೇಶನದ 'ಫಿರಾಕ್' ಮತ್ತು ದೀಪಾ ಮೆಹ್ತಾ ಅವರ 'ಹೆವನ್ ಆನ್ ಅರ್ಥ್' ಚಿತ್ರಗಳು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡವು. ಏಷ್ಯಾ-ಆಫ್ರಿಕಾ ವಿಭಾಗದಲ್ಲಿಯ ಸ್ಪರ್ಧೆಗೆ ಈ ಪ್ರಶಸ್ತಿ ಲಭಿಸಿದ್ದು, ಫಿರಾಕ್ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿ ದೊರಕಿತು.

2008: ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಎಎಸ್‌ಆರ್) ಉಪ ನ್ಯಾಸಕಿ ಡಾ. ರಮಾ ಗೋವಿಂದರಾಜನ್ ಸೇರಿದಂತೆ ಬೆಂಗ ಳೂರಿನ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ 7 ವಿಜ್ಞಾನಿಗಳಿಗೆ 2007ರ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ ಲಭಿಸಿತು. ಡಾ. ರಮಾ ಗೋವಿಂದರಾಜನ್ (ಎಂಜಿನಿಯರಿಂಗ್ ವಿಜ್ಞಾನ), ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಡಾ. ನಾರಾಯಣಸ್ವಾಮಿ ಶ್ರೀನಿವಾಸನ್, ರಾಷ್ಟ್ರೀಯ ಜೀವಶಾಸ್ತ್ರ ವಿಜ್ಞಾನಗಳ ಸಂಸ್ಥೆಯ (ಎನ್‌ಸಿಬಿಎಸ್) ಡಾ. ಉಪಿಂದರ್ ಸಿಂಗ್ ಭಲ್ಲಾ ಜೀವಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ಐಎಸ್‌ಐ) ಉಪನ್ಯಾಸಕ ಡಾ. ಬಿ.ವಿ. ರಾಜಾರಾಮ ಭಟ್ (ಗಣಿತ ವಿಜ್ಞಾನ), ಐಐಎಸ್‌ಸಿಯ ಉಪನ್ಯಾಸಕ ಡಾ. ಪುಂಡಿ ನರಸಿಂಹನ್ ರಂಗರಾಜನ್ (ವೈದ್ಯಕೀಯ ವಿಜ್ಞಾನ), ಜೆಎನ್‌ಸಿಎಎಸ್‌ಆರ್ ಸಂಸ್ಥೆ ಉಪನ್ಯಾಸಕ ಡಾ. ಶ್ರೀಕಾಂತ್ ಶಾಸ್ತ್ರಿ (ಭೌತಿಕ ವಿಜ್ಞಾನ) ಮತ್ತು ಐಐಎಸ್‌ಸಿ ಸಂಸ್ಥೆಯ ಡಾ. ಪಿ.ಎನ್. ವಿನಯ್ ಚಂದ್ರನ್ (ಭೂಮಿ, ಪರಿಸರ, ಸಮುದ್ರ ಮತ್ತು ಗ್ರಹ ವಿಜ್ಞಾನ) ಪ್ರಶಸ್ತಿಗೆ ಪಾತ್ರರಾದರು.

2008: ಹಿಜಡಾಗಳ ಕುತಂತ್ರಕ್ಕೆ ಬಲಿಯಾಗಿ ಹೆಣ್ಣಾಗಿದ್ದ ಬೆಂಗಳೂರಿನ ಟಿ.ದಾಸರಹಳ್ಳಿಯ ಚಂದ್ರಶೇಖರ್ (17) ಎಂಬಾತನಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಅಪೊಲೋ ಆಸ್ಪತ್ರೆ ವೈದ್ಯರು ಆತನನ್ನು ಪುನಃ ಬಾಲಕನನ್ನಾಗಿ ಪರಿವರ್ತಿಸಿದರು. ಎರಡು ಹಂತದಲ್ಲಿ ಒಟ್ಟು 17 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಆತನನ್ನು ಮೊದಲಿನಂತೆ ಮಾಡುವಲ್ಲಿ ಯಶಸ್ವಿಯಾದರು. ಚಂದ್ರಶೇಖರ್ ಮೂತ್ರ ವಿಸರ್ಜನೆ ಮಾಡಬಲ್ಲ. ಕೆಲ ದಿನಗಳ ನಂತರ ಲೈಂಗಿಕ ಕ್ರಿಯೆ ಸಹ ನಡೆಸಬಲ್ಲ ಎಂದು ವೈದ್ಯರು ತಿಳಿಸಿದರು. 'ಬಾಲಕನಿಗೆ ಪುನರ್‌ನಿರ್ಮಾಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ, ತೋಳಿನ ಮಾಂಸಖಂಡಗಳನ್ನು ಬಳಸಿ ಆತನ ಜನನೇಂದ್ರಿಯವನ್ನು ನಿರ್ಮಿಸಲಾಗಿದೆ. ಸರ್ಜಿಕಲ್ ಮೈಕ್ರೋಸ್ಕೋಪ್ ಬಳಸಿ ನರಗಳನ್ನು ಜೋಡಿಸಲಾಗಿದೆ. ಆತನ ತೊಡೆಯ ಮೇಲಿದ್ದ ನಾಡಿಯನ್ನು ಸೀಳಿ ಕಾಲಿನ ನರಗಳಿಗೆ ಜೋಡಿಸಲಾಗಿದೆ. ಜನನೇಂದ್ರಿಯಕ್ಕೆ ರಕ್ತ ಪೂರೈಕೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ವೈದ್ಯರು ಹೇಳಿದರು. ಒಟ್ಟು 8 ಮಂದಿ ವೈದ್ಯರು ಮತ್ತು ಐದು ಮಂದಿ ಆಸ್ಪತ್ರೆ ಸಿಬ್ಬಂದಿಯ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿತು.. ಶಸ್ತ್ರಚಿಕಿತ್ಸೆಗೆ ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚವಾಗಿದ್ದು ಇದನ್ನು ಆಸ್ಪತ್ರೆಯೇ ಭರಿಸಿತು.

2007: ಹಿಂದೂಗಳ ಭಾವನೆಗಳಿಗೆ ಗೌರವ ನೀಡುವ ಸಲುವಾಗಿ ಬಕ್ರೀದ್ ಹಬ್ಬದಲ್ಲಿ ಗೋವುಗಳ ಹತ್ಯೆ ಮಾಡಬಾರದು ಎಂದು ಧಾರ್ಮಿಕ ತರಬೇತಿ ಸಂಸ್ಥೆ `ದಾರುಲ್ ಉಲೂಮ್ ದೇವಬಂದ್' ಮುಸ್ಲಿಮ್ ಬಾಂಧವರನ್ನು ಕೋರಿತು. ಈ ಸಂಬಂಧ ಕಿರುಹೊತ್ತಿಗೆಯೊಂದನ್ನು ಹೊರತಂದ ಧಾರ್ಮಿಕ ತರಬೇತಿ ಸಂಸ್ಥೆ, ಅದರಲ್ಲಿ ಧಾರ್ಮಿಕ ಬಲಿ `ಕುರ್ಬಾನಿ' ಕುರಿತು ಮಾಹಿತಿಯನ್ನು ಪ್ರಕಟಿಸಿತು.

2007: ಯಾವುದೇ ಕಾರಣಕ್ಕೂ ಕೋಲ್ಕತ್ತಕ್ಕೆ ತೆರಳದೇ ದೆಹಲಿಯ `ಅಜ್ಞಾತ ಸ್ಥಳ'ದಲ್ಲೇ ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ತಾಕೀತು ಮಾಡಿತು.
ಇದಕ್ಕೆ ಪ್ರತಿಯಾಗಿ ಕೋಲ್ಕತದಲ್ಲಿ ವಾಸಿಸಲು ಅವಕಾಶ ನೀಡದಿದ್ದರೆ ಭಾರತವನ್ನು ತೊರೆಯುವುದಾಗಿ ತಸ್ಲಿಮಾ ಸ್ಪಷ್ಟಪಡಿಸಿದರು. ಕೋಲ್ಕತದಲ್ಲಿ ಕಳೆದ ನವೆಂಬರಿನಲ್ಲಿ ನಡೆದ ಘರ್ಷಣೆಯ ಬಳಿಕ ತಸ್ಲಿಮಾ ದೆಹಲಿಯ ಗುಪ್ತ ಸ್ಥಳಕ್ಕೆ ತೆರಳಿದ್ದರು.

2007: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ವೊಕಾರ್ಡ್ ಆಸ್ಪತ್ರೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವಿವೇಕ್ ಜವಳಿ ನೇತೃತ್ವದ ಎಂಟು ಮಂದಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ನಡೆಸಿತು.

2007: ಜೈಪುರದ ಕೊರಾಪುಟ್ ನ 60 ವರ್ಷದ ಟೈಲರ್ ಎ.ವಿ.ಗಿರಿ ಬೃಹತ್ ಗಾತ್ರದ ಒಳಉಡುಪು (ಚಡ್ಡಿ) ಹೊಲಿಯುವ ಮೂಲಕ `ಗಿನ್ನೆಸ್ ಬುಕ್' ನಲ್ಲಿ ತಮ್ಮ ಹೆಸರು ದಾಖಲಿಸಲು ಮುಂದಾದರು. ಐದು ದಿನಗಳ ಕಾಲ ನಿರಂತರ ಶ್ರಮಿಸಿ 38 ಅಡಿ 10 ಅಂಗುಲ ಉದ್ದ ಮತ್ತು 50.3 ಅಡಿ ಸೊಂಟದ ಸುತ್ತಳತೆಯ ಈ ಉಡುಪು ಸಿದ್ಧಪಡಿಸಿದರು. ಈ ಭಾಗದಲ್ಲಿ ಖ್ಯಾತ ಟೈಲರ್ ಎಂದು ಹೆಸರು ಮಾಡಿದ ಗಿರಿ ಅವರು ಈ ಒಳಉಡುಪು ಹೊಲಿಯಲು 450 ಮೀಟರ್ ಬಟ್ಟೆ ಬಳಸಿದರು. ಸಿದ್ದ ಪಡಿಸಿದ ಈ ಒಳಉಡುಪನ್ನು ಮುಂದಿನ ಪರೀಕ್ಷೆಗಾಗಿ ಲಂಡನ್ನಿನ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕೊರಿಯರ್ ಮೂಲಕ ಕಳುಹಿಸಲಾಗುವುದು ಎಂದು ಗಿರಿ ಹೇಳಿದರು. ಗಿರಿ ಅವರು ಈ ಹಿಂದೆ ಥರ್ಮಾಕೋಲಿನಲ್ಲಿ `ಸರಪಳಿ' ರಚಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲಿಸಿ, ಸುದ್ದಿಯಾಗಿದ್ದರು.

2007: ಮೂವರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡ ಧರ್ಮಪುರಿ ಬಸ್ಸಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಒಳಗಾದ ಮೂವರು ಎಐಎಡಿಎಂಕೆಯ ಅಂದಿನ ಧರ್ಮಪುರಿ ಘಟಕದ ಕಾರ್ಯದರ್ಶಿನೆಡುಂಚೆಳಿಯನ್, ಎಂಜಿಆರ್ ಫೋರಂನ ಮಧಿ ಅಲಿಯಾಸ್ ರವಿಚಂದ್ರನ್ ಮತ್ತು ಮಾಜಿ ಪಂಚಾಯತ್ ಅಧ್ಯಕ್ಷ ಪಿ. ಮುನಿಯಪ್ಪನ್ ಅವರನ್ನು 2008ರ ಜನವರಿ 10ರಂದು ಗಲ್ಲಿಗೆ ಏರಿಸಬೇಕು ಎಂದು ಸೇಲಂನ ಪ್ರಥಮ ದರ್ಜೆ ನ್ಯಾಯಾಲಯ ಆದೇಶ ನೀಡಿತು. ಮರಣದಂಡನೆಯ ವಿರುದ್ಧ ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದ್ದರಿಂದ ನ್ಯಾಯಾಲಯ ಈ ಆದೇಶ ಹೊರಡಿಸಿತು. ಜನವರಿ 10ರಂದು ಬೆಳಿಗ್ಗೆ 6 ಗಂಟೆಗೆ ಮರಣದಂಡನೆ ಜಾರಿಗೊಳಿಸಬೇಕೆಂದು ನ್ಯಾಯಾಧೀಶ ಮಾಣಿಕಂ ಜೈಲು ಅಧಿಕಾರಿಗಳಿಗೆ ಸೂಚಿಸಿದರು. 2000ದ ಫೆಬ್ರುವರಿ ಎರಡರಂದು ಧರ್ಮಪುರಿಯಲ್ಲಿ ವಿದ್ಯಾರ್ಥಿಗಳಿದ್ದ ಬಸ್ಸಿಗೆ ಎಐಎಡಿಎಂಕೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದರಿಂದ ಮೂವರು ವಿದ್ಯಾರ್ಥಿನಿಯರು ಸುಟ್ಟು ಕರಕಲಾಗಿದ್ದರು. ಇದನ್ನು ಅತ್ಯಂತ ಕ್ರೂರ ಹತ್ಯೆ ಎಂದು ಬಣ್ಣಿಸಿದ್ದ ಸೇಲಂ ಕೋರ್ಟಿನ ನ್ಯಾಯಾಧೀಶ ಮಾಣಿಕಂ ಅವರು ಕಳೆದ ಫೆಬ್ರುವರಿ 16ರಂದು ಮೂವರಿಗೆ ಮರಣ ದಂಡನೆ ವಿಧಿಸಿದ್ದರು. ಇತರ 25 ಮಂದಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಪರಾಧಿಗಳು ಇದರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ಯ ವಿಚಾರಣೆ ನಡೆಸಿದ ಹೈಕೋರ್ಟ್ `ಇಂಥ ಹೀನಾಯ ಕೃತ್ಯಕ್ಕೆ ಮರಣದಂಡನೆಗಿಂತ ಕಡಿಮೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ' ಎಂದು ಕಟುವಾಗಿ ಹೇಳಿತ್ತು.

2007: ವಿವಾದಿತ ಭದ್ರತಾ ಕಾಯ್ದೆಯಡಿ ಮಲೇಷ್ಯಾದಲ್ಲಿ ಭಾರತೀಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಧ್ವನಿ ಎತ್ತಿದ್ದಕ್ಕಾಗಿ ಬಂಧನಕ್ಕೆ ಒಳಗಾದ ಹಿಂದೂ ಹಕ್ಕುಗಳ ಕ್ರಿಯಾ ವೇದಿಕೆಯ (ಹಿಂಡ್ರಾಫ್) ಐವರು ನಾಯಕರನ್ನು ತಕ್ಷಣ ಬಿಡುಗಡೆಗೊಳಿಸಲು ಆಗ್ರಹಿಸಿ ಭಾರತೀಯ ಮೂಲದವರು ಕ್ವಾಲಾಲಂಪುರದಲ್ಲಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು.

2007: ಮದ್ಯದ ದೊರೆ ವಿಜಯ್ ಮಲ್ಯ ನೇತೃತ್ವದ ಕಿಂಗ್ಫಿಶರ್ ಮತ್ತು ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ವಿಲೀನಗೊಳ್ಳಲು ನಿರ್ಧರಿಸಿದವು. ಬೆಂಗಳೂರಿನಲ್ಲಿ ನಡೆದ ಎರಡೂ ಕಂಪೆನಿಗಳ ಆಡಳಿತ ಮಂಡಳಿಗಳ ಜಂಟಿ ಸಭೆಯಲ್ಲಿ ವಿಲೀನ ಸಂಬಂಧ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಯಿತು.

2006: ಐದು ವರ್ಷಗಳ ಹಿಂದೆ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿ ಅಪಹೃತ ವಿಮಾನಗಳ ಮೂಲಕ ಧ್ವಂಸಗೊಳಿಸಿದ್ದ ನ್ಯೂಯಾಕರ್ಿನ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡ ಸ್ಥಳದಲ್ಲಿ ಸ್ವಾತಂತ್ರ್ಯ ಗೋಪುರ (ಫ್ರೀಡಂ ಟವರ್) ಸ್ಮಾರಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಇಲ್ಲಿ ಉಕ್ಕಿನ ಮೂರು ಗೋಪುರಗಳನ್ನು ನಿರ್ಮಿಸಿ ಅದರಲ್ಲಿ ಒಂದಕ್ಕೆ `ಫ್ರೀಡಂ ಟವರ್' ಎಂಬುದಾಗಿ ನಾಮಕರಣ ಮಾಡಲಾಗುವುದು. ಉಳಿದೆರಡು ಗೋಪುರಗಳಲ್ಲಿ ದುರಂತದ ಬಗ್ಗೆ ಸಾರ್ವಜನಿಕರು ನೀಡಿದ ಶೋಕ ಸಂದೇಶಗಳು ಇರುತ್ತವೆ. 2001ರ ಸೆಪ್ಟೆಂಬರ್ 11ರ ದಾಳಿಯಲ್ಲಿ 2,749 ಜನ ಮೃತರಾಗಿದ್ದರು.

2006: ಡಿಸ್ಕವರಿ ನೌಕೆಯ ಗಗನಯಾತ್ರಿಗಳು 13 ದಿನಗಳ ಬಾಹ್ಯಾಕಾಶ ವಾಸ್ತವ್ಯ ಪೂರೈಸಿ ಭೂಮಿಯೆಡೆಗೆ ಮರುಪಯಣ ಆರಂಭಿಸಿದರು. ಈ ಸಲ ಗಗನಯಾತ್ರೆ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರು ಮುಂದಿನ ಆರು ತಿಂಗಳ ಕಾಲ ಬಾಹ್ಯಾಕಾಶದ ಅಟ್ಟಣಿಗೆಯಲ್ಲಿ ಉಳಿಯಲಿದ್ದು, ಕಳೆದ 6 ತಿಂಗಳಿಂದ ಬಾಹ್ಯಾಕಾಶದಲ್ಲಿದ್ದ ಜರ್ಮನಿಯ ಥಾಮಸ್ ರೈಟರ್ ಭೂಮಿಯತ್ತ ಹೊರಟರು. ಸುನೀತಾ ಅವರು ತಮ್ಮ ತಲೆಗೂದಲನ್ನು ಕೂದಲು ಕಳೆದುಕೊಂಡಿರುವ ರೋಪೀಡಿತ ವ್ಯಕ್ತಿಗೆ `ವಿಗ್' ಮಾಡಿಸಲು ಬಾಹ್ಯಾಕಾಶದಿಂದ ಭೂಮಿಗೆ ಕೊಡುಗೆಯಾಗಿ ಕಳುಹಿಸಿದರು. ಗಗನಯಾತ್ರಿ ಜಾನ್ ಹಿಗ್ಗಿಮ್ ಬಾತಮ್ ಮತ್ತು ಮತ್ತೊಬ್ಬ ಮಹಿಳಾ ಗಗನಯಾತ್ರಿ ಸುನೀತಾಗೆ ಬಾಹ್ಯಾಕಾಶದಲ್ಲಿ ಕೇಶಮುಂಡನ ಮಾಡಿದ್ದರು.

2006: ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನು ಶರ್ಮಾಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ನ್ಯಾಯಮೂರ್ತಿ ಆರ್. ಎಸ್. ಸೋಧಿ ಮತ್ತು ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಶಿಕ್ಷೆಯ ಸ್ವರೂಪವನ್ನು ಕಿಕ್ಕಿರಿದ ನ್ಯಾಯಾಲಯದಲ್ಲಿ ಪ್ರಕಟಿಸಿದರು.

2006: ಕರ್ನಾಟಕದಲ್ಲಿ ಪೆಪ್ಸಿ ಕೋಲಾ ಸಹಿತ ರಾಸಾಯನಿಕ ಅಂಶಗಳಿರುವ ತಂಪು ಪಾನೀಯಗಳನ್ನು ಶಾಲಾ- ಕಾಲೇಜು, ವಸತಿಗೃಹ ಮತ್ತು ಆಸ್ಪತ್ರೆ ಆವರಣಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಡಿಸೆಂಬರ್ 18ರಿಂದಲೇ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2006: ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರಿಗೆ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಎಂ.ಪಿ. ಪ್ರಕಾಶ್ ಅವರು ಟಿಯೆಸ್ಸಾರ್ ಪ್ರಶಸ್ತಿ ಪ್ರದಾನ ಮಾಡಿದರು.

2006: ಗುಜರಾತಿನ ನದಿಯಾಡ್ ಪಟ್ಟಣದ ಅನಾಥ ಬಾಲಕಿ ಆಶಾಳನ್ನು ಅಮೆರಿಕ ಉಟಾ ರಾಜ್ಯದ ಗವರ್ನರ್ ಹಂಟ್ಸ್ ಮ್ಯಾನ್ ಮತ್ತು ಪತ್ನಿ ಮೇರಿ ಕಾಯ್ನೆ ಅವರು ಅಹಮದಾಬಾದಿನಲ್ಲಿ ದತ್ತು ಪಡೆದುಕೊಂಡರು.

2005: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಪ್ರತಿಷ್ಠಿತ ಜಾಯದ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅನ್ನಾನ್ ಅವರು ನೀಡಿರುವ ಕೊಡುಗೆ ಗಮನಿಸಿ ನೀಡಲಾಗಿರುವ ಈ `ಜಾಗತಿಕ ನಾಯಕತ್ವಕ್ಕಾಗಿ ಜಾಯದ್ ಅಂತಾರಾಷ್ಟ್ರೀಯ ಪ್ರಶಸ್ತಿ'ಯು ಒಂದು ಲಕ್ಷ ಡಾಲರ್ ನಗದು ಮೊತ್ತವನ್ನು ಒಳಗೊಂಡಿದೆ.

2005: ಆಪರೇಷನ್ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಲೋಕಸಭೆಯ ಐವರು ಸದಸ್ಯರ ವಿರುದ್ಧ ತನಿಖೆಗೆ ಆದೇಶಿಸಿದ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಇದಕ್ಕಾಗಿ ಪವನಕುಮಾರ್ ಬನ್ಸಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು. ತಪ್ಪಿತಸ್ಥರಲ್ಲ ಎಂದು ಸಾಬೀತಾಗದ ಹೊರತು ಸದನಕ್ಕೆ ಬರಬೇಡಿ ಎಂದೂ ಕಳಂಕಿತ ಸದಸ್ಯರಿಗೆ ಸಭಾಧ್ಯಕ್ಷರು ತಾಕೀತು ಮಾಡಿದರು. ರಾಜ್ಯಸಭೆಯಲ್ಲಿ ಇಬ್ಬರು ಕಳಂಕಿತ ಸದಸ್ಯರ ನಡವಳಿಕೆಯನ್ನು ಸಭಾಪತಿ ಭೈರೋನ್ಸಿಂಗ್ ಶೆಖಾವತ್ ನೀತಿ ಸಂಹಿತೆ ಸಮಿತಿಗೆ ಒಪ್ಪಿಸಿದರು.

2000: ಅಮಿತಾಭ್ ಬಚ್ಚನ್ ಅವರು ಲಂಡನ್ನಿನ ಮ್ಯಾಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಮ್ಮಿನಲ್ಲಿ ತಮ್ಮದೇ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ರೀತಿ ಗೌರವಿತರಾದ ಭಾರತದ ಐದನೆಯ ವ್ಯಕ್ತಿ ಹಾಗೂ ಇಂತಹ ಗೌರವಕ್ಕೆ ಪಾತ್ರರಾದ ಭಾರತೀಯ ಚಿತ್ರರಂಗದ ಮೊದಲಿಗರು ಇವರು. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಪಿವಿ ನರಸಿಂಹರಾವ್ ಅವರ ಪ್ರತಿಮೆಗಳು ಅಲ್ಲಿ ಇವೆ.

1998: ಖ್ಯಾತ ಜ್ಯೋತಿಷಿ ಬಿ.ವಿ. ರಾಮನ್ ಬೆಂಗಳೂರಿನಲ್ಲಿ ನಿಧನರಾದರು.

1996: ಖಗೋಳ ವಿಜ್ಞಾನಿ, ಕಾದಂಬರಿಕಾರ ಕಾರ್ಲ್ ಸಾಗನ್ ಅವರು ತಮ್ಮ 62ನೇ ವಯಸ್ಸಿನಲ್ಲಿ ಸಿಯಾಟೆಲ್ನಲ್ಲಿ ಮೃತರಾದರು.

1989: ಅಮೆರಿಕಾವು `ಆಪರೇಷನ್ ಜಸ್ಟ್ ಕಾಸ್' ಆರಂಭಿಸಿತು. ಈ ಕಾರ್ಯಾಚರಣೆಯನ್ವಯ ಜನರಲ್ ಮ್ಯಾನ್ಯುಯೆಲ್ ನೊರಿಯೇಗಾ ಸರ್ಕಾರವನ್ನು ಉರುಳಿಸುವ ಸಲುವಾಗಿ ಪಡೆಗಳನ್ನು ಪನಾಮಾಕ್ಕೆ ಕಳುಹಿಸಿತು.

1987: ಫಿಲಿಪ್ಪೀನ್ಸ್ ದ್ವೀಪದ ಸಮೀಪ ಪ್ರಯಾಣಿಕರ ಹಡಗೊಂದು `ಫೆರಿ' ತೈಲ ತುಂಬಿಸಿಕೊಂಡು ಬರುತ್ತಿದ್ದ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಸಂಭಸಿದ ಭೀಕರ ದುರಂತದಲ್ಲಿ 3000ಕ್ಕೂ ಹೆಚ್ಚು ಮಂದಿ ಮೃತರಾದರು. 657ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತು. ಹೆಚ್ಚಿನ ಮಂದಿ ಕಣ್ಮರೆಯಾದರು. ಸಮುದ್ರದಲ್ಲಿ ಎದ್ದ ಹಠಾತ್ ಚಂಡಮಾರುತ ಹಾಗೂ ಸಾಮರ್ಥ್ಯಕ್ಕಿಂತ 614 ಮಂದಿ ಹೆಚ್ಚು ಪ್ರಯಾಣಿಕರು ಹಡಗಿನಲ್ಲಿ ಇದ್ದುದು ಈ ಭೀಕರ ಅವಘಡಕ್ಕೆ ಕಾರಣ ಎಂದು ಮನಿಲಾ ನೌಕಾಪಡೆ ವರದಿ ತಿಳಿಸಿತು.

1959: ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಜಸುಭಾಯಿ ಪಟೇಲ್ ಅವರು 69 ರನ್ನುಗಳಿಗೆ 9 ವಿಕೆಟುಗಳನ್ನು ಉರುಳಿಸಿ ದಾಖಲೆ ಸೃಷ್ಟಿಸಿದರು. 1999ರವರೆಗೂ ಇದು ಭಾರತೀಯನೊಬ್ಬರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿ ಉಳಿಯಿತು. 1999ರಲ್ಲಿ ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಈ ದಾಖಲೆಯನ್ನು ಮುರಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement