ಗ್ರಾಹಕರ ಸುಖ-ದುಃಖ

My Blog List

Sunday, February 4, 2024

ಇಂದಿನ ಇತಿಹಾಸ History Today ಫೆಬ್ರುವರಿ 04

ಇಂದಿನ ಇತಿಹಾಸ
ಫೆಬ್ರುವರಿ 04

2024:ಡೆಹ್ರಾಡೂನ್:‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ 2024 ಫೆಬ್ರುವರಿ 4ರಂದು ನಡೆದ ಸಂಪುಟ ಸಭೆಯಲ್ಲಿ ಉತ್ತರಾಖಂಡ ಸಚಿವ ಸಂಪುಟವು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವರದಿಯನ್ನು ಅನುಮೋದಿಸಿತು. ಇದರೊಂದಿಗೆ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿರುವ ದೇಶದ ಮೊತ್ತ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಭಾಜನವಾಗಲಿದೆ. ಸಂಪುಟದ ಅನುಮೋದನೆ ಪಡೆದಿರುವ ಯುಸಿಸಿ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ್ ಅಸೆಂಬ್ಲಿ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಉತ್ತರಾಖಂಡ ವಿಧಾನಸಭೆಯ ವಿಶೇಷ ನಾಲ್ಕು ದಿನಗಳ ಅಧಿವೇಶನವನ್ನು ಫೆಬ್ರವರಿ 5ರಿಂದ 8ರವರೆಗೆ ಈಗಾಗಲೇ ಕರೆಯಲಾಗಿದೆ.

2009: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ 'ಸಿದ್ಧಗಂಗಾಶ್ರೀ' ಪ್ರಶಸ್ತಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಕೊಡುಗೆಯಾದ ಪ್ರಶಸ್ತಿಯನ್ನು ಮಠದ ಹಳೆಯ ವಿದ್ಯಾರ್ಥಿಯೂ ಆದ ಕವಿ ಶಿವರುದ್ರಪ್ಪ ಅವರಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರದಾನ ಮಾಡಿ, ಆಶೀರ್ವದಿಸಿದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಶಿವರುದ್ರಪ್ಪ ಅವರು ತೆಗೆದುಕೊಳ್ಳದೆ ಮಠದ ದಾಸೋಹ ನಿಧಿಗೆ ಅರ್ಪಿಸಿದರು.

2009: ಹಲವು ಔಷಧೀಯ ಗುಣಗಳ ಆಗರವಾಗಿರುವ 'ತುಳಸಿ' ಸಸ್ಯವನ್ನು ಅದ್ಭುತ ಪ್ರೇಮಸೌಧ 'ತಾಜ್ ಮಹಲ್' ರಕ್ಷಣೆಗಾಗಿ ಈಗ ಬಳಸಿಕೊಳ್ಳಲಾಗುತ್ತಿದೆ ಎಂದು 'ಆರ್ಗ್ಯಾನಿಕ್ ಇಂಡಿಯಾ'ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣನ್ ಗುಪ್ತಾ ಲಖನೌದಲ್ಲಿ ಪ್ರಕಟಿಸಿದರು. 'ತಾಜ್ ಮಹಲ್' ಅನ್ನು ವಾಯು ಮಾಲಿನ್ಯದಿಂದ ರಕ್ಷಿಸಲು ಉತ್ತರಪ್ರದೇಶದ ಅರಣ್ಯ ಇಲಾಖೆ ಹಾಗೂ ಲಖನೌ ಮೂಲದ ಆರ್ಗ್ಯಾನಿಕ್ ಇಂಡಿಯಾ ಕಂಪೆನಿ ಜಂಟಿಯಾಗಿ ಹತ್ತು ಲಕ್ಷ ತುಳಸಿ ಗಿಡಗಳನ್ನು ನೆಡಲು ನಿರ್ಧರಿಸಿವೆ ಎಂದು ಅವರು ಹೇಳಿದರು. ಈಗಾಗಲೇ 20 ಸಾವಿರ ತುಳಸಿ ಗಿಡಗಳನ್ನು ನೆಡಲಾಗಿದೆ. ತಾಜಮಹಲ್ ಸುತ್ತಲಿನ ಪಾರ್ಕ್‌ಗಳು ಹಾಗೂ ಆಗ್ರಾದಾದ್ಯಂತ ಇನ್ನಷ್ಟು ಸಸಿಗಳನ್ನು ನೆಡಲಾಗುವುದು ಎಂದು ಕೃಷ್ಣನ್ ಗುಪ್ತಾ ತಿಳಿಸಿದರು. ತುಳಸಿ ಪರಿಸರವನ್ನು ಶುದ್ಧೀಕರಿಸಲು ಅತ್ಯಂತ ಸೂಕ್ತ ಸಸ್ಯ. ಈ ಸಸ್ಯ ಅತಿ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಕೈಗಾರಿಕೆಗಳು ಹಾಗೂ ಸಂಸ್ಕರಣಾ ಘಟಕಗಳಿಂದ ಹೊರಸೂಸುವ ಮಲಿನ ವಾಯುವನ್ನು ಶುದ್ಧೀಕರಿಸುತ್ತದೆ ಎಂದು ನುಡಿದರು. ಆಗ್ರಾದ ಸುತ್ತಲೂ ಬೃಹತ್ ಪ್ರಮಾಣದಲ್ಲಿ ತುಳಸಿ ಗಿಡ ನೆಡುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕೆಲಸದಲ್ಲಿ ಕೈಜೋಡಿಸುವಂತೆ ಗ್ರಾಮ ಪಂಚಾಯಿತಿಗಳು ಹಾಗೂ ಶಾಲೆಗಳನ್ನು ಕೇಳಿಕೊಳ್ಳಲಾಗಿದೆ ಎಂದು ಆಗ್ರಾದ ವಲಯ ಅರಣ್ಯಾಧಿಕಾರಿ ಆರ್.ಪಿ. ಭಾರ್ತಿ ಹೇಳಿದರು.

2009: ಶ್ರೀಲಂಕಾದ ಕದನ ನಿರತ ಉತ್ತರ ವನ್ನೀ ಪ್ರಾಂತ್ಯದಲ್ಲಿ ಶೆಲ್ ದಾಳಿಯಿಂದ ಕನಿಷ್ಠ 52 ನಾಗರಿಕರು ಮೃತರಾದರು. ಆಸ್ಪತ್ರೆಯೊಂದಕ್ಕೆ ಬಾಂಬ್ ಬಿದ್ದಿತು. ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯ ಪೂರೈಸುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಆಸ್ಪತ್ರೆಯ ಮೇಲೆ ಸರಣಿ ಬಾಂಬ್‌ಗಳನ್ನು ಹಾಕಲಾಯಿತು.

2009: ದೇವನಹಳ್ಳಿ ತಾಲ್ಲೂಕಿನ ಎಂಟು ಮರಳು ಫಿಲ್ಟರ್ ಘಟಕಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಅಕ್ರಮದಲ್ಲಿ ತೊಡಗಿದ್ದ ಮೂರು ಮಂದಿಯನ್ನು ಬಂಧಿಸಿ, 18 ಲಾರಿ, ಐದು ಟ್ರಾಕ್ಟರ್, ಐದು ಜೆಸಿಬಿ ಮತ್ತು 34 ಬೃಹತ್ ಪಂಪ್‌ಗಳನ್ನು ವಶಪಡಿಸಿಕೊಂಡರು. ತಾಲ್ಲೂಕಿನ ಚಿಕ್ಕಗೊಲ್ಲಹಳ್ಳಿ, ಗೊಲ್ಲಹಳ್ಳಿ, ಕಾರಹಳ್ಳಿ, ಮಾಯಸಂದ್ರ, ತೈಲಗಿರಿ, ಮಿಸ್ಕನಹಳ್ಳಿ, ಬ್ಯಾಡರಹಳ್ಳಿ, ಗುಡ್‌ರಿಚ್ ಗ್ರಾಮಗಳಲ್ಲಿ ಮರಳು ದಂಧೆ ನಡೆಯುತ್ತಿತ್ತು. ಸರ್ಕಾರ ಭೂ ರಹಿತರಿಗೆ ಮಂಜೂರು ಮಾಡುವ ಜಮೀನಿನಲ್ಲಿ ಮರಳು ಫಿಲ್ಟರ್ ಮಾಡಲಾಗುತ್ತಿತ್ತು. ನಿಯಮ ಪ್ರಕಾರ ಈ ಭೂಮಿಯನ್ನು ಕೃಷಿಗೆ ಬಿಟ್ಟು ಬೇರೆ ಯಾವುದೇ ಉದ್ಧೇಶಕ್ಕೂ ಬಳಸುವಂತಿಲ್ಲ. ಆದರೆ ಈ ಜಮೀನನ್ನು ಮರಳು ಫಿಲ್ಟರ್ ದಂಧೆಗೆ ಗುತ್ತಿಗೆ ನೀಡಲಾಗಿತ್ತು.

2008: ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗಿದ್ದ ಪುತ್ತಿಗೆ ಪರ್ಯಾಯ ವಿವಾದ ಬಗೆಹರಿಯಿತು. ಈದಿನ ಜರುಗಿದ ನಾಟಕೀಯ ಬೆಳವಣಿಗೆಯೊಂದರಲ್ಲಿ ಪುತ್ತಿಗೆ ಪರ್ಯಾಯ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದು, ಭಯೋತ್ಪಾದಕರ ಬೆದರಿಕೆಯ ಮಧ್ಯೆಯೂ ಕೃಷ್ಣಮಠದ ಪರಿಸರದಲ್ಲಿ ಹೊಸ ಸಂಚಲನ ಆರಂಭಗೊಂಡಿತು. ಪುತ್ತಿಗೆ ಪರ್ಯಾಯ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಹೇಳಿಕೆ ನೀಡಿದರು. ಅದನ್ನು `ತಾತ್ವಿಕ'ವಾಗಿ ಬೆಂಬಲಿಸಿರುವ ವಿರೋಧಿ ಯತಿಗಳು ಕೃಷ್ಣ ಪೂಜೆ ವಿಚಾರದಲ್ಲಿ `ಷರತ್ತುಬದ್ಧ' ಒಪ್ಪಿಗೆ ಸೂಚಿಸಿದರು. ಇದರ ಬೆನ್ನಲ್ಲೇ ಪುತ್ತಿಗೆ ಶ್ರೀಗಳೂ `ಸುಖಾಂತ್ಯಕ್ಕೆ ಸಮ್ಮತಿ ಇದೆ' ಎಂದು ತಿಳಿಸಿದರು. ಇದರೊಂದಿಗೆ ವಿವಾದ ಬಗೆಹರಿದದ್ದು ಖಚಿತವಾಯಿತು. ಅಷ್ಟಮಠದ ಆರು ಯತಿಗಳು ವಿಧಿಸಿದ್ದ ಷರತ್ತಿನಲ್ಲಿ 'ಕೃಷ್ಣಪೂಜೆ' ಪ್ರಮುಖವಾಗಿತ್ತು. ಪುತ್ತಿಗೆ ಶ್ರೀಗಳು ಕೃಷ್ಣಪೂಜೆಯನ್ನು ಸ್ವತಃ ಮಾಡುವ ಬದಲು ಶೀರೂರು ಮಠಾಧೀಶರಿಗೆ ವಹಿಸಿದ್ದರು. ಶೀರೂರು ಮಠಾಧೀಶರು ಅಸ್ವಸ್ಥತೆ ಕಾರಣ ಈದಿನ ಕೃಷ್ಣಪೂಜೆ ಮಾಡಲಾಗದೇ ಹೋದಾಗ ಪೇಜಾವರ ಶ್ರೀಗಳ ಜೊತೆ ನಡೆದ ಮಾತುಕತೆಯಿಂದ ವಿವಾದ ಬಗೆಹರಿಯಿತು. ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಈವರೆಗೆ ಗರ್ಭಗುಡಿಯಲ್ಲಿರುವ ಕಡೆಗೋಲು ಕೃಷ್ಣನ ಮೂಲ ಬಿಂಬವನ್ನು ಸ್ಪರ್ಶಿಸಿಲ್ಲ. ಅವರು ಮುಂದಿನ ದಿನಗಳಲ್ಲೂ ಅದನ್ನು ಸ್ಪರ್ಶಿಸಬಾರದು. ಅವರು ಎಲ್ಲಿಯವರೆಗೆ ಸ್ಪರ್ಶಿಸುವುದಿಲ್ಲವೋ, ಅಲ್ಲಿಯವರೆಗೆ ಕೃಷ್ಣಪೂಜಾ ವಿಷಯದಲ್ಲಿ ಷರತ್ತುಬದ್ಧ ಬೆಂಬಲ ನೀಡುತ್ತೇವೆ ಎಂದು ಇತರ ಯತಿಗಳು ಸ್ಪಷ್ಟ ಪಡಿಸಿದರು.

2008: ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಎನ್. ಆರ್. ನಾರಾಯಣ ಮೂರ್ತಿ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಸಮ್ಮುಖದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸಿ. ಕೆ. ಠಕ್ಕರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿ, `ಇದೊಂದು ಪ್ರಚಾರ ತಂತ್ರ. ಘಟನೆಯ ಬಗ್ಗೆ ನಾರಾಯಣಮೂರ್ತಿ ಅವರು ಈಗಾಗಲೇ ಕ್ಷಮೆ ಕೋರಿದ್ದಾರೆ, ಈ ಅರ್ಜಿಯನ್ನು ಪುರಸ್ಕರಿಸಲಾಗದು' ಎಂದು ಹೇಳಿತು. ಕನ್ನಡ ರಕ್ಷಣಾ ವಕೀಲರ ವೇದಿಕೆ ಈ ಸಂಬಂಧ ಅರ್ಜಿ ಸಲ್ಲಿಸಿ, ರಾಷ್ಟ್ರಪತಿ ಡಾ. ಕಲಾಂ ಪಾಲ್ಗೊಂಡ್ದಿದ ಕಾರ್ಯಕ್ರಮದಲ್ಲಿ ಅಧಿಕೃತ ಶಿಷ್ಟಾಚಾರದ ಹಾಡಿನ ರೂಪದ ರಾಷ್ಟ್ರಗೀತೆ ಹಾಡಿಸದೆ ನಾರಾಯಣಮೂರ್ತಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ' ಎಂದು ಆಪಾದಿಸಿತ್ತು.

2008: ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಿಂದ (ಸಿಎಂಎಚ್) 100 ಅಡಿ ರಸ್ತೆಯವರೆಗಿನ ಮರಗಳನ್ನು ಕಡಿಯುವುದಕ್ಕೆ ತಡೆ ನೀಡಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿ ಎಂ ಆರ್ ಸಿ) ಹೈಕೋರ್ಟ್ ಆದೇಶಿಸಿತು. ಮರ ಕಡಿಯುತ್ತಿರುವುದನ್ನು ಪ್ರಶ್ನಿಸಿ `ಸಿಎಂಎಚ್ ರಸ್ತೆ ವ್ಯಾಪಾರಸ್ಥರು ಮತ್ತು ನಾಗರಿಕರ ಕ್ಷೇಮಾಭಿವೃದ್ಧಿ ಸಂಘ' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿ, ವಿಚಾರಣೆ ಮುಂದೂಡಿದರು.

2008: ಚಲಿಸುವ ರೈಲಿಗೆ ಸಿಕ್ಕಿ ಹಾಕಿಕೊಂಡು ಗರ್ಭಣಿ ಆನೆ ಸೇರಿದಂತೆ ಮೂರು ಆನೆಗಳು ಸ್ಥಳದಲ್ಲೇ ಸತ್ತುಹೋದ ಕರುಳು ಹಿಂಡುವ ದುರ್ಘಟನೆ ಈದಿನ ಬೆಳಗಿನ ಜಾವ ಕೊಯಮತ್ತೂರು ಸಮೀಪ ಘಟಿಸಿತು. ವರ್ಕ್ ಶಾಪಿನಲ್ಲಿ `ಸರ್ವೀಸಿಂಗ್' ಮುಗಿದ ಮೇಲೆ ಮೂರು ಬೋಗಿಗಳ ಖಾಲಿ ರೈಲು ನಿಲ್ದಾಣಕ್ಕೆ ವಾಪಸ್ಸು ಹೋಗುತ್ತಿದ್ದಾಗ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತು.

2008: ಬೆಂಗಳೂರಿನ ರಾಜರಾಜೇಶ್ವರಿ ನಗರದ ಆಂಧ್ರ ಬ್ಯಾಂಕಿಗೆ ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ದರೋಡೆಕೋರರು ವ್ಯವಸ್ಥಾಪಕರನ್ನು ಥಳಿಸಿ, ಸುಮಾರು 2.50 ಲಕ್ಷ ರೂಪಾಯಿ ನಗದು ದೋಚಿಕೊಂಡು ಪರಾರಿಯಾದರು. ಮಧ್ಯಾಹ್ನ 1.50ರ ಸುಮಾರಿಗೆ ಐವರು ಮುಸುಕುಧಾರಿಗಳು ಬಿಇಎಂಎಲ್ ಮೂರನೇ ಹಂತದ ಎ ಎನ್ ಎಸ್ ರಸ್ತೆಯಲ್ಲಿನ ಬ್ಯಾಂಕಿಗೆ ನುಗ್ಗಿ ಈ ದುಷ್ಕೃತ್ಯ ಎಸಗಿದರು.

2008: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹರಿಯುವ ಕೃಷ್ಣಾ- ಗೋದಾವರಿ ಸೇರಿದಂತೆ ಮೂರು ಅಂತಾರಾಜ್ಯ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

2008: ಕಥಕ್ಕಳಿ ನೃತ್ಯ ಪ್ರಕಾರದ ಹೆಸರಾಂತ ಕಲಾವಿದ ಗಿರಿಸನ್ (46) ತಿರುವನಂತಪುರದಲ್ಲಿ ಹೃದಯಾಘಾತದಿಂದ ನಿಧನರಾದರು. ರೆಸಾರ್ಟ್ ಒಂದರಲ್ಲಿ ಈದಿನ ರಾತ್ರಿ ನೃತ್ಯ ಪ್ರದರ್ಶನ ನೀಡಿದ ನಂತರ ಗಿರಿಸನ್ ನೆರೆದ ವಿದೇಶಿ ಪ್ರವಾಸಿಗರ ಜತೆ ಛಾಯಾಚಿತ್ರಕ್ಕೆ ಪೋಜು ನೀಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಮುಖದ ಮೇಲಿನ ಮೇಕಪ್, ಆಭರಣಗಳು ಮತ್ತು ಕಾಸ್ಟ್ಯೂಮ್ ಹಾಗೇ ಇದ್ದವು.

2008: ಪೂರ್ವ ನೇಪಾಳದ ಬಿರಾಟ್ ನಗರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ರೇಡಿಯೋ ಕೇಂದ್ರವೊಂದು ಅಸ್ತಿತ್ವಕ್ಕೆ ಬಂದಿತು. ಈ `ಪೂರ್ವಾಂಚಲ' ಎಫ್ ಎಂ ಕೇಂದ್ರ ನೇಪಾಳದಲ್ಲಿ ಸಮುದಾಯದಿಂದಲೇ ನಿರ್ವಹಿಸಲ್ಪಡುವ ಮೊದಲ ಎಫ್ ಎಂ ಕೇಂದ್ರವಾಗಿದ್ದು, ದಿನಕ್ಕೆ ಎಂಟು ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರ ಮಾಡುವುದು. ಅಂಗರಕ್ಷಕ ಸಿಬ್ಬಂದಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯವರೆಗೆ 24 ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2007: ವಿಶ್ವದ ಮಾಜಿ ಅಗ್ರ ರಾಂಕಿಂಗ್ ಆಟಗಾರ್ತಿ ಸ್ವಿಟ್ಜಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಅವರು ಟೋಕಿಯೋದಲ್ಲಿ ನಡೆದ ಪಾನ್ ಫೆಸಿಫಿಕ್ ಓಪನ್ ಟೆನಿಸ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿಯ ಕಿರೀಟವನ್ನು ಮುಡಿಗೆ ಏರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಹಿಂಗಿಸ್ ರಷ್ಯಾದ ಅನಾ ಇವಾನೋವಿಕ್ ಅವರನ್ನು ಮಣಿಸಿದರು. 1997, 1999, 2000 ಮತ್ತು 2002ರಲ್ಲಿಯೂ ಹಿಂಗಿಸ್ ಅವರು ಪಾನ್ ಫೆಸಿಫಿಕ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕಳೆದ ವರ್ಷ ಮಾತ್ರ ಎಲೆನಾ ಡೆಮೆಂಟೀವಾ ಎದರು ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು.

2007: ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ `ಬ್ರಹ್ಮೋಸ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ಚಂಡಿಪುರದ ಆಂತರಿಕ ಪರೀಕ್ಷಾ ವಲಯದಲ್ಲಿ ಮಧ್ಯಾಹ್ನ 12.15ರ ವೇಳೆಗೆ ಯಶಸ್ವಿಯಾಗಿ ನಡೆಸಲಾಯಿತು. 9.2 ಮೀಟರ್ ಉದ್ದದ ಈ ಕ್ಷಿಪಣಿ 290 ಕಿ.ಮೀ. ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದ್ದಿದು 200 ಕಿಲೋ ತೂಕದ ಸಿಡಿತಲೆಗಳನ್ನು ಒಯ್ಯಬಲ್ಲುದು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಮೈಕೆಲ್ ಲೋಪೆಜ್ ಅವರ ಜೊತೆಗೆ ತಮ್ಮ ಎರಡನೇ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡರು. ಅಂದಾಜು ಆರೂವರೆ ಗಂಟೆಗಳ ಕಾಲದ ಈ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ತಂಪುಗೊಳಿಸುವ ವ್ಯವಸ್ಥೆಯ ದುರಸ್ತಿ ಕಾರ್ಯ ಕೈಗೊಂಡರು.

2007: ಕನ್ನಡ ಸಿನೆಮಾ ಮತ್ತು ರಂಗಭೂಮಿಯ ಹಿರಿಯ ನಟ ಶಿವಮೊಗ್ಗ ವೆಂಕಟೇಶ್ (60) ಶಿವಮೊಗ್ಗದಲ್ಲಿ ನಿಧನರಾದರು. 70ರ ದಶಕದಲ್ಲಿ ಅಭಿನಯ ತಂಡ ಕಟ್ಟುವ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಪ್ರಭುತ್ವ ಲೊಳಲೊಟ್ಟೆ, ನಮ್ಮೊಳಗೊಬ್ಬ ನಾಜೂಕಯ್ಯ, ಹಯವದನ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು ರಾಜ್ಯಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದರು. ಕನ್ನೇಶ್ವರ ರಾಮ, ಸಂತ ಶಿಶುನಾಳ ಶರೀಫ, ಆಸ್ಫೋಟ, ಚೋಮನ ದುಡಿ, ಆಕ್ಸಿಡೆಂಟ್ ಸೇರಿದಂತೆ ಇತ್ತೀಚಿನ ಮುನ್ನುಡಿ ಚಿತ್ರದವರೆಗೂ ವಿವಿಧ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

2006: ಫಿಲಿಪ್ಪೀನ್ಸಿನ ಮನಿಲಾಕ್ಕೆ 15 ಕಿ.ಮೀ. ದೂರದ ಪಾಸಿಗ್ ಎಂಬಲ್ಲಿನ ಕ್ರೀಡಾಂಗಣ ಒಂದರಲ್ಲಿ ಆಯೋಜಿಸಲಾಗಿದ್ದ ಕೌನ್ ಬನೇಗಾ ಕರೋಡಪತಿ ಮಾದರಿಯ ವೊವೊವಿ ಹೆಸರಿನ ಟೆಲಿವಿಷನ್ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಗುಂಪಿನಲ್ಲಿ ಉಂಟಾದ ನೂಕುನುಗ್ಗಲಿಗೆ 88 ಜನ ಬಲಿಯಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ನಡುವೆಯೂ ಪರಮಾಣು ಕಾರ್ಯಕ್ರಮ ಮುಂದುವರೆಸಿದ ಇರಾನ್ ಪ್ರಕರಣವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಿಫಾರಸು ಮಾಡಲಾಯಿತು. ಇರಾನ್ ಹಣೆಬರಹ ನಿರ್ಧರಿಸುವ ನಿಟ್ಟಿನಲ್ಲಿ ಈ ದಿನ ನಡೆದ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ನಡೆಸಿದ ಚುನಾವಣೆಯಲ್ಲಿ ಭಾರತ ಸೇರಿದಂತೆ 27 ರಾಷ್ಟ್ರಗಳು ಇರಾನ್ ವಿರುದ್ಧ ಮತ ಚಲಾಯಿಸಿದವು. ಪರವಾಗಿ 3 ಮತಗಳು ಚಲಾವಣೆಗೊಂಡವು.

1990: ಕೇರಳದ ಎರ್ನಾಕುಲಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲಾಯಿತು.

1983: ಅಮೆರಿಕನ್ ಗಾಯಕಿ ಕರೇನ್ ಕಾರ್ಪೆಂಟರ್ ಮೃತರಾದರು. ಇವರ ಸಹೋದರ ಕೂಡಾ ಗಾಯಕನಾಗಿದ್ದು ಇವರಿಬ್ಬರ ಜೋಡಿ `ಕಾರ್ಪೆಂಟರ್ ದ್ವಯರ ಜೋಡಿ' ಎಂದೇ ಖ್ಯಾತಿ ಪಡೆದಿತ್ತು.

1977: ಕಲಾವಿದ ಮನು ಚಕ್ರವರ್ತಿ ಜನನ.

1974: ಕಲಾವಿದ ಗಣೇಶ ರಾಮಣ್ಣ ಮರೂರ ಜನನ.

1974: ಭಾರತದ ಗಣಿತ ತಜ್ಞ ಹಾಗೂ ಭೌತ ತಜ್ಞ ಸತ್ಯೇಂದ್ರನಾಥ ಬೋಸ್ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

1958: ಕಲಾವಿದೆ ಮೀರಾ ಎಚ್. ಎನ್. ಜನನ.

1945: ಮಿತ್ರ ಪಡೆಗಳ ಧುರೀಣರಾದ ರೂಸ್ ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್ ಕ್ರೀಮಿಯಾದ ಯಾಲ್ಟಾದಲ್ಲಿ ಸಭೆ ಸೇರಿದರು. ಪೋಲಿಶ್ ಸಮಸ್ಯೆ ಕುರಿತು ಚರ್ಚಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು.

1942: ಕಲಾವಿದ ಸದಾಶಿವಗೌಡ ಸಿದ್ದಗೌಡ ಜನನ.

1938: ಬಿರ್ಜು ಮಹಾರಾಜ್ ಹುಟ್ಟಿದ ದಿನ. ಕಥಕ್ ನೃತ್ಯ ಪಟು ಹಾಗೂ ನೃತ್ಯ ಸಂಯೋಜಕರಾದ ಇವರು ಕಥಕ್ ಕಲೆಯನ್ನು ನೃತ್ಯರೂಪದಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

1938: ರಂಗಭೂಮಿಯ ಹಿರಿಯ ಕಲಾವಿದೆ, ದೂರದರ್ಸನ ಧಾರಾವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದೇ ಖ್ಯಾತರಾದ ಭಾರ್ಗವಿ ನಾರಾಯಣ್ ಅವರು ಡಾ. ಎಂ. ರಾಮಸ್ವಾಮಿ- ನಾಮಗಿರಿಯಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ಸಾಹಿತಿ, ಸಮಾಜ ಸೇವಕ ಮಾ.ಭ. ಪೆರ್ಲ ಹುಟ್ಟಿದ ದಿನ. ಕಾಸರಗೋಡು ಜಿಲ್ಲೆಯ ಸೆಟ್ಟಬೈಲು ಗ್ರಾಮ ಇವರ ಹುಟ್ಟೂರು. ತಂದೆ ಗುರು ವೆಂಕಟೇಶ ಭಟ್ಟರು, ತಾಯಿ ಲಕ್ಷ್ಮಿ. ಕಥೆ, ಲೇಖನ, ಕಾದಂಬರಿ, ಸಂದರ್ಶನ ಸೇರಿದಂತೆ 25ಕ್ಕೂ ಹೆಚ್ಚು ಕೃತಿ ರಚಿಸಿದ ಇವರು ರಾಯಚೂರಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಸೇವಾ ಭಾರತಿ ಟ್ರಸ್ಟ್ ಮೂಲಕ ಪ್ರೇರಣಾ ಬುದ್ದಿಮಾಂದ್ಯ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಪೆರ್ಲಕ್ಕೆ ವಾಪಸಾದ ಬಳಿಕವೂ ಬಾಲಮಂದಿರ, ಬಾಲಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ಆರಂಭಿಸಿದವರು. ಸಮುದಾಯ ಪತ್ರಿಕೆ ಕರಾಡ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು.

1926: ಕಲಾವಿದ ವೆಂ.ಮು. ಜೋಶಿ ಜನನ.

1924: ಮಾಜಿ ರಾಷ್ಟ್ರಪತಿ ದಿವಂಗತ ಕೆ.ಆರ್. ನಾರಾಯಣನ್ ಅವರು ಈದಿನ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಅವರು 1997ರ ಜುಲೈ 25ರಿಂದ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ದಲಿತ ಹಾಗೂ ಮಲಯಾಳಿ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದು.

1922: ಪಂಡಿತ್ ಭೀಮಸೇನ್ ಜೋಶಿ ಹುಟ್ಟಿದ ದಿನ. ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರು.

1920: ಕಲಾವಿದ ಕೆ.ಬಿ. ಕುಲಕರ್ಣಿ ಜನನ.

1920: ಕಲಾವಿದ ಕೆ.ಬಿ. ಕಾಳೆ ಜನನ.

1917: ಪಾಕಿಸ್ಥಾನಿ ಸೇನಾಪಡೆಗಳ ಮುಖ್ಯ ಸೇನಾಧಿಕಾರಿ ಆಗಾ ಮಹಮ್ಮದ್ ಯಾಹ್ಯಾ ಖಾನ್ (1917-1980) ಹುಟ್ಟಿದರು.

1969-71ರ ಅವಧಿಯಲ್ಲಿ ಇವರು ಪಾಕಿಸ್ಥಾನದಲ್ಲಿ ಅಧ್ಯಕ್ಷರಾಗಿದ್ದರು.

1913: ಅಮೆರಿಕಾದ ಕರಿಯ ಮಹಿಳೆ ರೋಸಾ ಪಾರ್ಕ್ಸ್ (1913-2005) ಹುಟ್ಟಿದರು. ಬಸ್ಸಿನಲ್ಲಿ ಬಿಳಿಯ ವ್ಯಕ್ತಿಯೊಬ್ಬನಿಗೆ ಆಸನ ಬಿಟ್ಟುಕೊಡಲು ಈಕೆ ನಿರಾಕರಿಸಿದ ಘಟನೆ 1955ರಲ್ಲಿ ಅಲಬಾಮಾದ ಮಾಂಟ್ಗೊಮೆರಿಯಲ್ಲಿ ಬಸ್ಸು ಬಹಿಷ್ಕಾರ ಚಳವಳಿಯೊಂದಿಗೆ ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ನಾಂದಿಯಾಯಿತು.

1902: ಲಿಂಡ್ ಬರ್ಗ್ (1902-1974) ಹುಟ್ಟಿದ ದಿನ. ಇವರು 1927ರ ಮೇ ತಿಂಗಳಲ್ಲಿ ನ್ಯೂಯಾರ್ಕಿನಿಂದ ಪ್ಯಾರಿಸ್ಸಿಗೆ ಮೊತ್ತ ಮೊದಲ ಬಾರಿಗೆ ಅಟ್ಲಾಂಟಿಕ್ ಸಾಗರದ ಮೇಲಿನಿಂದ ಎಲ್ಲೂ ನಿಲ್ಲದೆ ಸತತವಾಗಿ ಏಕವ್ಯಕ್ತಿ ವಿಮಾನ ಹಾರಾಟ ನಡೆಸಿ ದಾಖಲೆ ನಿರ್ಮಿಸಿದರು.

1861: ಅಲಬಾಮಾದ ಮಾಂಟ್ಗೊಮೆರಿಯಲ್ಲಿ ದಕ್ಷಿಣ ಅಮೆರಿಕಾದ ಏಳು ಪ್ರತ್ಯೇಕತಾವಾದಿ ರಾಜ್ಯಗಳು ಒಟ್ಟುಗೂಡಿ `ಕನ್ಫೆಡರೇಟ್ ಸ್ಟೇಟ್ ಆಫ್ ಅಮೆರಿಕಾ' ಸ್ಥಾಪನೆ ಮಾಡಿದವು.

No comments:

Advertisement