My Blog List

Saturday, February 24, 2024

ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

 ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ

ಬೆಂಗಳೂರು: ಬಿಬಿಎಂಪಿ ಖಾತೆಗಳಿಗಾಗಿ ʼಗಾಂಧಿಗಿರಿʼ ಹೋರಾಟ ನಡೆಸುತ್ತಿದ್ದ ಬೆಂಗಳೂರಿನ ಗುಲಾಬಿ ಗ್ಯಾಂಗ್‌ ಕಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದ ಬಿಡುಗಡೆ ಸಮಾರಂಭವು ಫೆಬ್ರುವರಿ 25ರ ಭಾನುವಾರ ಬೆಳಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.‌ ಸಂತೋಷ ಹೆಗ್ಡೆ ಅವರು ʼಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹʼ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಹಾಗೂ ಲೇಖಕ ಡಾ. ಡಿ.ವಿ. ಗುರುಪ್ರಸಾದ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಾಣಕ್ಯ ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಸದಾನಂದ ಜಾನೆಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಮತ್ತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಈ ಪುಸ್ತಕವನ್ನು ಬರೆದಿದಾರೆ. ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನವು ಸಮಾರಂಭವನ್ನು ಸಂಘಟಿಸಿದೆ.

ಬೆಂಗಳೂರಿನ ಬಡಾವಣೆಯೊಂದರ ಸುಮಾರು 950 ಕುಟುಂಬಗಳ ಸದಸ್ಯರು ಸೂರು ಕಟ್ಟಿಕೊಳ್ಳಲು ಹೊರಟಾಗ ಎದುರಾದ ಸಮಸ್ಯೆಗಳ ಸರಮಾಲೆಯ ಕಥೆಯನ್ನು ಪುಸ್ತಕ ಹೊಂದಿದೆ. ಭೂ ಮಾಫಿಯಾ, ಅಧಿಕಾರಿಗಳು ಮತ್ತು ರಾಜಕಾರಣಿಗಳ ʼಭ್ರಷ್ಟಾಚಾರದ ಚಕ್ರವ್ಯೂಹʼ ಪಡೆ ಹೇಗೆ ಅವರನ್ನು ಕಾಡಿತು ಎಂಬ ವಿವರದ ಜೊತೆಗೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಅನ್ವೇಷಣೆಯೇ ಈ ಪುಸ್ತಕದ ಹೂರಣ ಎಂದು ಪುಸ್ತಕವನ್ನು ಪ್ರಕಟಿಸಿರುವ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

No comments:

Advertisement