Wednesday, January 21, 2026

ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಶೇ.75ರಷ್ಟು ರಿಯಾಯ್ತಿ

ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಶೇ.75ರಷ್ಟು ರಿಯಾಯ್ತಿ

ಬೆಂಗಳೂರು: ಹಿರಿಯ ಪತ್ರಕರ್ತರಿಗೆ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಶೇಕಡಾ 75ರಷ್ಟು ರಿಯಾಯಿತಿ ನೀಡಲಾಗುವುದು, ಉಳಿದ ಅಲ್ಪ ವೆಚ್ಚವನ್ನು ಹಿರಿಯ ಪತ್ರಕರ್ತರು ಪಾವತಿಸಿದರೆ ಸಾಕು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್.‌ ಪಾಟೀಲ್‌ ಪ್ರಕಟಿಸಿದರು.

ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಯ ಸಭಾಂಗಣದಲ್ಲಿ 2026 ಜನವರಿ 21ರ ಬುಧವಾರ ಹಿರಿಯ ಪತ್ರಕರ್ತರ ವೇದಿಕೆಯ ಸದಸ್ಯರಿಗೆ ʼಗುರುತಿನ ಚೀಟಿʼ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಚಿವರು ʼಸಮಾಜವನ್ನು ತಿದ್ದಿ ತೀಡಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ವಿಶೇಷ ಸೌಲಭ್ಯ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಹಿರಿಯ ಪತ್ರಕರ್ತರ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.

ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿ ಇನ್ನುಳಿದ ಶೇ. 25ರಷ್ಟು ಹಣದ ರಿಯಾಯ್ತಿ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು.

ಪತ್ರಕರ್ತರು ನಮ್ಮ ಸರ್ಕಾರದ ಜವಾಬ್ದಾರಿ, ನಿವೃತ್ತರಾದ ಹಿರಿಯರಿಗೆ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಲು ನಾವು ಬದ್ಧರಾಗಿದ್ದೇವೆ. ಸಮಾಜಕ್ಕೆ ಕೊಡುಗೆ ನೀಡಿ ವೃತ್ತಿಯಿಂದ ನಿವೃತ್ತರಾಗಿರುವ ಹಿರಿಯ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತಿದ್ದು, ಇದರ ನಿಯಮಗಳು, ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಪಾಟೀಲ್‌ ತಿಳಿಸಿದರು.

ಹಿರಿಯ ಪತ್ರಕರ್ತರಿಗೂ ಯಶಸ್ವಿನಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲು ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ನುಡಿದರು.

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು, ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್‌, ಹಿರಿಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಆರ್‌.ಪಿ. ಸಾಂಬ ಸದಾಶಿವರೆಡ್ಡಿ, ಹಿರಿಯ ಅಧಿಕಾರಿಗಳು, ಎಂ.ಎ. ಪೊನ್ನಪ್ಪ, ವೆಂಕಟೇಶ್‌ ಪ್ರಸಾದ್‌, ಜಯದೇವ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

No comments:

Advertisement