My Blog List

Monday, April 19, 2010

ಇಂದಿನ ಇತಿಹಾಸ History Today ಏಪ್ರಿಲ್ 19

ಇಂದಿನ ಇತಿಹಾಸ

ಏಪ್ರಿಲ್ 19

ಟಿಬೆಟ್‌ಗೆ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು. ಟಿಬೆಟ್‌ಗೆ ಸ್ವಾಯತ್ತತೆ ಕಲ್ಪಿಸಲು ಹೋರಾಡಿದವರಿಗೆ ನಮನ ಸಲ್ಲಿಸಲು ಅವರು ಇಂಡಿಯಾನಾದಿಂದ ನ್ಯೂಯಾರ್ಕ್‌ವರೆಗೆ ಈ ಯಾತ್ರೆ ಕೈಗೊಂಡರು. ಟಿಬೆಟ್‌ಗೆ ಸ್ವಾಯತ್ತತೆ ಕಲ್ಪಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಕಳೆದ ಸೆಪ್ಟೆಂಬರ 5 ರಂದು ಕೊನೆಯುಸಿರೆಳೆದ ಟಕಸ್ಟರ್ ರಿಂಪೊಚೆ ಅವರ ಮಗನೇ ಈ ಜಿಗ್ಮೆ ನೊಬ್ರು.

2009: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಅಕಾಲಿಕ ಮಳೆಯಿಂದ ಒಟ್ಟು 7 ಜನ ಮೃತರಾದರು. ಆಸ್ತಿಪಾಸ್ತಿಗೆ ಅಪಾರ ಹಾನಿ ಸಂಭವಿಸಿತು. ಬೆಂಗಳೂರಿನ ಯಲಹಂಕದಲ್ಲಿ ನಾಲ್ವರು ಮೃತರಾದರು. ಸಿಡಿಲು ಬಡಿದು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಇಬ್ಬರು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ಒಬ್ಬ ರೈತ ಮೃತರಾದರು.

2009: ಕೊಲೆ ಯತ್ನ ಪ್ರಕರಣದ ಆರೋಪಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಪ್ತಾಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತೋಪುಡುರ್ತಿ ಪ್ರಕಾಶ್ ರೆಡ್ಡಿ (30) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದರು. ಪ್ರಕಾಶ್ ರೆಡ್ಡಿ ತನ್ನ ಒಂಬತ್ತು ಮಂದಿ ಸಹಚರರ ಜತೆ ಸೇರಿ 1997ರಲ್ಲಿ ಪೀಣ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಮೂರ್ತಿ ಎಂಬವರ ಮೇಲೆ ಹಲ್ಲೆ ನಡೆಸಿ ಆಸಿಡ್ ಎರಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದರು. ಪ್ರಕರಣದಲ್ಲಿ ಬಂಧಿತನಾಗಿ ಎರಡನೇ ತ್ವರಿತ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆತ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಆತನನ್ನು ಬಂಧಿಸುವಂತೆ ಮತ್ತು ಆಸ್ತಿ ಜಫ್ತಿ ಮಾಡುವಂತೆ (ಪ್ರೊಕ್ಷಮೇಷನ್) ನ್ಯಾಯಾಲಯ 2004ರಲ್ಲಿ ಆದೇಶ ನೀಡಿತ್ತು.

2009: ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಾಲ ನಟಿ ರುಬಿನಾ ಅಲಿ ಖುರೇಷಿಯನ್ನು ಆಕೆಯ ತಂದೆ ದುಬೈ ಶೇಖ್‌ರಿಗೆ 2 ಲಕ್ಷ ಪೌಂಡ್‌ಗಳಿಗೆ (ಅಂದಾಜು ರೂ 1.4 ಕೋಟಿ ) ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ಲಂಡನ್‌ ಪತ್ರಿಕೆಯೊಂದು ವರದಿ ಮಾಡಿತು. ಒಂಬತ್ತು ವರ್ಷದ ರುಬಿನಾ ನಟಿಸಿದ 'ಸ್ಲಂಡಾಗ್..' ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸಿದೆ. ಚಿತ್ರದ ಬಾಲನಟಿ ರುಬಿನಾ ತಂದೆ ರಫಿಖ್ ಖುರೇಷಿ ಕಾನೂನು ಬಾಹಿರವಾಗಿ ಮಗಳನ್ನು ದತ್ತು ನೀಡುವ ಮೂಲಕ ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ಪತ್ರಿಕೆ ವರದಿ ಮಾಡಿತು. ಇಂಗ್ಲೆಂಡ್ ಮೂಲದ ಅಂತರ್‌ಜಾಲ ತಾಣ 'ನ್ಯೂಸ್ ಆಫ್ ದ ವರ್ಲ್ಡ್' ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಸಂಗತಿ ಬಹಿರಂಗಗೊಂಡಿತು.. ಸಿನಿಮಾ ನಿರ್ಮಾಪಕರಿಂದ ತಮ್ಮ ಕುಟುಂಬಕ್ಕೆ ಯಾವುದೇ ಸಂಭಾವನೆ ದೊರೆತಿಲ್ಲ. ಅನಿವಾರ್ಯ ಕಾರಣದಿಂದ ಮಗಳನ್ನು ತಾನು 2 ಲಕ್ಷ ಪೌಂಡ್‌ಗೆ ಮಾರಾಟ ಮಾಡಲು ಮನಸ್ಸು ಮಾಡಿರುವುದಾಗಿ ಆತ ರಹಸ್ಯ ಕಾರ್ಯಾಚರಣೆ ನಡೆಸಿದ ಮಾರುವೇಷದ ವರದಿಗಾರರಿಗೆ ಹೇಳಿದ್ದ. ದುಬೈನ ನಕಲಿ ಶೇಖ್‌ರ ವೇಷದಲ್ಲಿ ಪತ್ರಕರ್ತರು ಈ ಕಾರ್ಯಾಚರಣೆ ನಡೆಸಿದ್ದರು. ರುಬಿನಾಳ ಭವಿಷ್ಯ ಹಾಗೂ ತನಗೆ ಯಾವ ರೀತಿಯ ಹಣಕಾಸಿನ ಅನುಕೂಲವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ತಾನು ಈ ತೀರ್ಮಾನಕ್ಕೆ ಬಂದಿರುವುದಾಗಿ ಖುರೇಷಿ ತಿಳಿಸಿದ್ದ.

2009: ಟಿಬೆಟ್‌ಗೆ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು. ಟಿಬೆಟ್‌ಗೆ ಸ್ವಾಯತ್ತತೆ ಕಲ್ಪಿಸಲು ಹೋರಾಡಿದವರಿಗೆ ನಮನ ಸಲ್ಲಿಸಲು ಅವರು ಇಂಡಿಯಾನಾದಿಂದ ನ್ಯೂಯಾರ್ಕ್‌ವರೆಗೆ ಈ ಯಾತ್ರೆ ಕೈಗೊಂಡರು. ಟಿಬೆಟ್‌ಗೆ ಸ್ವಾಯತ್ತತೆ ಕಲ್ಪಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಕಳೆದ ಸೆಪ್ಟೆಂಬರ 5 ರಂದು ಕೊನೆಯುಸಿರೆಳೆದ ಟಕಸ್ಟರ್ ರಿಂಪೊಚೆ ಅವರ ಮಗನೇ ಈ ಜಿಗ್ಮೆ ನೊಬ್ರು. ನ್ಯೂಯಾರ್ಕ್‌ನಲ್ಲಿರುವ ಚೀನಾ ದೂತಾವಾಸದ ಕಚೇರಿ ಮುಂದೆ ಸ್ವಾಯತ್ತತೆಗೆ ಆಗ್ರಹಿಸಿ ಕೈಗೊಂಡಿದ್ದ ರಾಲಿಯ 50ನೇ ವರ್ಷಾಚರಣೆ ಸವಿನೆನಪಿಗಾಗಿ ಮಾರ್ಚ್ 10 ರಂದು ನೊಬ್ರು ಈ ನಡಿಗೆ ಆರಂಭಿಸಿದ್ದರು.

2009: ಪ್ರಧಾನಿ ಮನಮೋಹನ್ ಸಿಂಗ್, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ, ಉದ್ಯಮಪತಿಗಳಾದ ಮುಖೇಶ್ - ಅನಿಲ್ ಅಂಬಾನಿ, ಕಾರ್ಪೊರೇಟ್ ದೊರೆ ರತನ್ ಟಾಟಾ ಹಾಗೂ ತಾರಾ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನ್ನು ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ 'ಬಿಸಿನೆಸ್ ವೀಕ್' ಪತ್ರಿಕೆ ಸೇರಿಸಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಹಾಗೂ ಭಾರತ ಸೆಕ್ಯುರಿಟಿ ಹಾಗೂ ವಿನಿಮಯ ಮಂಡಳಿ (ಸೆಬಿ) ಅಧ್ಯಕ್ಷ ಸಿ ಬಿ ಭಾವೆ ಅವರೂ ಈ 50 ಮಂದಿಯ ಪಟ್ಟಿಗೆ ಸೇರ್ಪಡೆಯಾದರು.

2009: ವಿದೇಶಿ ಪ್ರಶಸ್ತಿ ಸ್ವೀಕರಿಸಿದ್ದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆಯೂ ಆದ ಸೋನಿಯಾ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ಧತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಲ್ಲಿ ಭಿನ್ನಮತ ಕಂಡು ಬಂದಿತು. ಅಂತಿಮವಾಗಿ ಬಹುಮತದ ಆಧಾರದ ಮೇಲೆ ಆ ಕೋರಿಕೆ ತಿರಸ್ಕೃತವಾಯಿತು. ಮೂವರು ಸದಸ್ಯರ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಈ ಬಗ್ಗೆ ಇನ್ನಷ್ಟು ವಿವರವಾದ ತನಿಖೆ ನಡೆಯುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರೆ, ನವೀನ್ ಚಾವ್ಲಾ ಮತ್ತು ಇನ್ನೊಬ್ಬ ಸದಸ್ಯ ಎಸ್.ವೈ.ಖುರೇಷಿ ಅವರು, ಎಲ್ಲಾ ತನಿಖೆಯೂ ಮುಗಿದಿದ್ದು, ಮತ್ತೆ ಯಾವ ವಿವರವೂ ಬೇಕಿಲ್ಲವೆಂದು ಅಭಿಪ್ರಾಯಪಟ್ಟರು. ಅಂತಿಮವಾಗಿ 2-1ರ ಬಹುಮತದ ಆಧಾರದಲ್ಲಿ ಸೋನಿಯಾ ಸದಸ್ಯತ್ವ ರದ್ಧತಿ ಆಗ್ರಹ ತಿರಸ್ಕೃತಗೊಂಡಿತು. ಸೋನಿಯಾ 2006ರ ನವೆಂಬರಿನಲ್ಲಿ ಬೆಲ್ಜಿಯಂಗೆ ಭೇಟಿ ನೀಡಿದ್ದಾಗ ಅಲ್ಲಿನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ಲಿಯೋಪೋಲ್ಡ್'ನ್ನು ಸ್ವೀಕರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇರಳದ ವಕೀಲರೊಬ್ಬರು, ಆ ಆಧಾರದ ಮೇಲೆ ಸೋನಿಯಾ ಸದಸ್ಯತ್ವ ರದ್ದು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

2009: ನ್ಯೂಯಾರ್ಕಿನ ವ್ಯಾಪಾರಿಯೊಬ್ಬ ತನ್ನ ಹೆಸರಿನಲ್ಲಿ 100 ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ ಖ್ಯಾತಿಗೆ ಭಾಜನರಾದರು. ಅಶ್ರಿತ ಫೋರ್ಮನ್ (54) ತನ್ನ ಹೆಸರಿನಲ್ಲಿ 100 ದಾಖಲೆಗಳನ್ನು ಹೊಂದಿರುವ ಮೊದಲ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆ ದೃಢಪಡಿಸಿತು. 30 ವರ್ಷಗಳ ಹಿಂದೆ, 27,000 ನೆಗೆತಗಳನ್ನು ಕೇವಲ 5 ಗಂಟೆಗಳಲ್ಲಿ ಪೂರ್ಣಗೊಳಿಸುವ ಮೂಲಕ ಇವರು ದಾಖಲೆ ನಿರ್ಮಿಸಿ, ಮೊದಲ ಬಾರಿಗೆ ಹೆಸರು ದಾಖಲಿಸಿದ್ದರು. ಕ್ವೀನ್ಸ್‌ನಲ್ಲಿ ಆಹಾರ ಮಳಿಗೆ ಇಟ್ಟುಕೊಂಡ ಇವರು 'ನಾನು ಸುಮಾರು 230 ದಾಖಲೆಗಳನ್ನು ಸಾಧಿಸಿದ್ದೇನೆ. ಆದರೆ ಅವುಗಳೆಲ್ಲ ದಾಖಲಾಗಲಿಲ್ಲ. ಈಗ ಅಧಿಕೃತವಾಗಿ ನನ್ನ ಹೆಸರಿನಲ್ಲಿ 100 ದಾಖಲೆ ಹೊಂದಿದ್ದೇನೆ' ಎಂದರು. ಜುಲು ಮತ್ತು ರಿಯಿಟೊ ರೊಮೆನಿಕ್ ಭಾಷೆ ಸೇರಿದಂತೆ ಪದ್ಯವೊಂದನ್ನು110 ಭಾಷೆಗಳಲ್ಲಿ ಓದುವ ಮೂಲಕ ಇವರು 100 ನೇ ದಾಖಲೆ ಮಾಡಿದರು.

2008: ಒಂದೆಡೆ ಕಡಲ ದಂಡೆಯಲ್ಲಿ ಹೆಚ್ಚುತ್ತಿರುವ ಕಸದ ರಾಶಿ ಆತಂಕ ಮೂಡಿಸಿದ್ದರೆ, ಇನ್ನೊಂದಡೆ ತ್ಯಾಜ್ಯ ಸರಕುಗಳ ಮರು ಬಳಕೆಯೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸುದ್ದಿ ಪ್ರಕಟಗೊಂಡಿತು. ತ್ಯಾಜ್ಯ ಸರಕಿನ ಮರು ಬಳಕೆಯು ಪರಿಸರಕ್ಕೆ ಒಳಿತನ್ನು ಮಾಡುವುದಕ್ಕಿಂತ ಹಾನಿ ಮಾಡುವುದೇ ಹೆಚ್ಚು ಎಂದು ಪರಿಣತರು ಅಭಿಪ್ರಾಯಪಟ್ಟರು. ವಿದ್ಯುನ್ಮಾನ ಸಲಕರಣೆಗಳಾದ ಮೊಬೈಲ್, ಟಿವಿ, ಕಂಪ್ಯೂಟರ್ ಮತ್ತಿತರ ಬಳಸಿ ಬಿಟ್ಟ ಸಲಕರಣೆಗಳ ಮರು ಬಳಕೆಯು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಮೆಲ್ಬೋರ್ನಿನ ಪರಿಸರ ತಜ್ಞ ಟಿಮ್ ಗ್ರ್ಯಾಂಟ್ ಹೇಳಿದರು. ಪ್ಲ್ಯಾಸ್ಟಿಕ್ ಮತ್ತು ಗಾಜಿನ ಬಾಟಲಿಯಂತಹ ತ್ಯಾಜ್ಯವನ್ನು ಮರು ಬಳಕೆ ಮಾಡುವುದು, ಅವುಗಳನ್ನು ಬಳಸದೆ ಬೀಸಾಕುವುದಕ್ಕಿಂತ ಮತ್ತು ಸುಡುವುದಕ್ಕಿಂತ ಕಡಿಮೆ ಅಪಾಯಕಾರಿ ಎನ್ನುವುದನ್ನು ಬಹುತೇಕ ಪರಿಣತರು ಒಪ್ಪಿಕೊಳ್ಳುತ್ತಾರೆ. ಆದರೆ ಘನ ತ್ಯಾಜ್ಯದ ಮರು ಬಳಕೆ ತಂತ್ರಜ್ಞಾನವೂ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು ತಜ್ಞರ ಅಭಿಮತ.

2008: ಹನ್ನೊಂದು ದಿನಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನೆಗೆದಿದ್ದ ರಷ್ಯದ ಗಗನನೌಕೆ `ಸೂಯುಜ್' ಕಜಕಿಸ್ಥಾನದ ನಿಗದಿತ ಸ್ಥಳದ ಬದಲಿಗೆ 420 ಕಿ.ಮೀ. ಉತ್ತರದ ಪ್ರದೇಶವೊಂದರಲ್ಲಿ ಸುರಕ್ಷಿತವಾಗಿ ಬಂದು ಇಳಿಯಿತು. `ಸೂಯುಜ್ ಟಿಎಂಎ-11' ಗಗನನೌಕೆ ಅತ್ಯಂತ ಚಿಕ್ಕ ಆಕಾರದ ನೌಕೆಯಾಗಿದ್ದು, ಯಾವುದೇ ಸ್ಥಳದಲ್ಲೂ ಬಂದು ಇಳಿಯಬಹುದು. ನಿಗದಿತ ಸ್ಥಳದ ಬದಲು ಬೇರೆ ಕಡೆ ಇಳಿದರೆ ಅದನ್ನು ಪತ್ತೆಹಚ್ಚುವುದು ಕಷ್ಟ ಎಂಬ ಭಯ ಮೊದಲು ಕಾಡಿತ್ತು. ಆದರೆ ನೌಕೆಯನ್ನು ಪತ್ತೆಹಚ್ಚುವುದು ಕಷ್ಟವಾಗಲಿಲ್ಲ. ಗಗನನೌಕೆಯಲ್ಲಿದ್ದ ದಕ್ಷಿಣ ಕೊರಿಯಾದ ಪ್ರಥಮ ಮಹಿಳಾ ಗಗನಯಾತ್ರಿ ಯಿ ಸೊಯೀನ್, ರಷ್ಯದ ಯೂರಿ ಮಲೆಂಚೆಂಕೊ, ಅಮೆರಿಕದ ಪೆಗ್ಗಿ ವೈಟ್ಸನ್ ಅವರು ಸುರಕ್ಷಿತವಾಗಿದ್ದಾರೆ ಎಂದು ರಷ್ಯದ ಬಾಹ್ಯಾಕಾಶ ಇಲಾಖೆಯ ಅಧಿಕಾರಿಗಳು ತಿಳಿಸಿದರು. ವೈಟ್ಸನ್ ಅವರು ಒಟ್ಟು 377 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದರು. ಈ ಮೂಲಕ ಅಲ್ಲಿ ಅತ್ಯಂತ ದೀರ್ಘ ಅವಧಿಯ ತನಕ ಇದ್ದ ಅಮೆರಿಕದ ಗಗನಯಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೆ ಮೂರು ಗಂಟೆ ಮೊದಲು ಬಾಹ್ಯಾಕಾಶ ನಿಲ್ದಾಣದಿಂದ ಗಗನ ಯಾನಿಗಳು ಬೀಳ್ಕೊಡುವ ದೃಶ್ಯವನ್ನು ಸೂಯುಜಿನ ಕ್ಯಾಮರಾ ಸೆರೆಹಿಡಿದು ಭೂಮಿಗೆ ರವಾನಿಸಿತ್ತು.

2008: ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಲಿಂಪಿಕ್ ಜಿಮ್ನಾಸ್ಟ್ ಅಲಿನಾ ಕಬಯೇವಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ಗಾಳಿಸುದ್ದಿ ಪ್ರಕಟಿಸಿದ `ಮಾಸ್ಕೊವಿಸ್ಕಿ ಕರೆಸ್ಪಾಂಡೆಂಟ್' ಟ್ಯಾಬ್ಲಾಯ್ಡಿನ ಪ್ರಕಾಶಕರು ಪತ್ರಿಕೆಯ ಮುದ್ರಣವನ್ನು ಸ್ಥಗಿತಗೊಳಿಸಿದರು. ಸಂಪಾದಕ ಗ್ರಿಗೊರಿ ನೆಖೊರೊಶೆವ್ ಅವರು ರಾಜೀನಾಮೆ ನೀಡಿದರು. ಗಾಳಿ ಸುದ್ದಿ ಪ್ರಕಟಿಸಿದ್ದಕ್ಕೆ ಪತ್ರಿಕೆಯು ಹಿಂದಿನ ದಿನ ಕ್ಷಮೆ ಯಾಚಿಸಿತ್ತು.

2008: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ (ಒ ಎನ್ ಜಿ ಸಿ)ದ ಮುಂಬೈ ಹೈ ಘಟಕದ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ರೂ 6,339 ಕೋಟಿ ವೆಚ್ಚದಲ್ಲಿ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಐದು ವರ್ಷದಲ್ಲಿ ಕಾಮಗಾರಿ ಪೂರ್ಣವಾದರೆ ಪ್ರತಿದಿನಕ್ಕೆ 1,80,000 ಕಚ್ಚಾತೈಲ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಅದು ಹೊಂದಲಿದೆ. ಪ್ರಸ್ತುತ 1,50,000 ಬ್ಯಾರೆಲ್ ಉತ್ಪಾದನಾ ಸಾಮರ್ಥ್ಯವನ್ನು ಮುಂಬೈ ಹೈ ಘಟಕ ಹೊಂದಿದೆ.

2008: ಧರ್ಮಸ್ಥಳದಲ್ಲಿ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ 1,02,700 ಚದರ ಅಡಿ ವಿಸ್ತೀರ್ಣದ `ಶ್ರೀಮುಡಿ' ಎಂಬ ಹರಕೆ ಮುಡಿ (ತಲೆಕೂದಲು) ಅರ್ಪಿಸುವ ನೂತನ ಕಟ್ಟಡಕ್ಕೆ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಶಿಲಾನ್ಯಾಸ ನೆರವೇರಿಸಿದರು. ಭಕ್ತಾದಿಗಳ ಅನುಕೂಲತೆಗಾಗಿ, ನೂತನ ಕಟ್ಟಡದಲ್ಲಿ 6000 ಮಂದಿಗೆ ಸರದಿಯಲ್ಲಿ ನಿಲ್ಲುವ ಅವಕಾಶವಿದ್ದು, 150 ಕ್ಷೌರಿಕರು 600 ಮಂದಿಯ ಮುಡಿಯನ್ನು ಏಕಕಾಲದಲ್ಲಿ ತೆಗೆಯಲು ಸೌಲಭ್ಯ ಕಲ್ಪಿಸಲಾಗಿದೆ. ವ್ಯವಸ್ಥಿತವಾಗಿ ಮುಡಿ ಅರ್ಪಿಸಲು ನಿರ್ಮಿಸಲಾಗುವ ಕಟ್ಟಡದಲ್ಲಿ ಭಕ್ತಾದಿಗಳು ಸರದಿಯಲ್ಲಿ ನಿಲ್ಲುವ ವ್ಯವಸ್ಥೆ, ವಾಹನ ನಿಲುಗಡೆ, ಉಪಾಹಾರ ಗೃಹ, ಶೌಚಾಲಯ, ವಿಶ್ರಾಂತಿ ಕೋಣೆ ಮೊದಲಾದ ಸವಲತ್ತುಗಳನ್ನು ಒದಗಿಸಲಾಗಿದೆ. ಮುಂದಿನ 25 ವರ್ಷಗಳ ಬೆಳವಣಿಗೆ ಮತ್ತು ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟಡದ ವಿನ್ಯಾಸ ರೂಪಿಸಲಾಗಿದೆ ಎಂದು ಡಾ. ಹೆಗ್ಗಡೆ ತಿಳಿಸಿದರು.

2008: ಸಿಪಿಎಂ ಕಾರ್ಯಕರ್ತರು ಎಂದು ಆರೋಪಿಸಲಾದ ಕೆಲವು ದುಷ್ಕರ್ಮಿಗಳು ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ನಂದಿಗ್ರಾಮದ ಗೋಕುಲ್ ನಗರದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಇನ್ನೊಬ್ಬ ಮಹಿಳೆಯ ಮೇಲೆ ಕೂಡ ಇದೇ ರೀತಿ ಅತ್ಯಾಚಾರ ನಡೆದಿದೆ ಎಂದು ಬಿಯುಪಿಸಿ ಸಂಘಟನೆಯು ಆರೋಪಿಸಿತು.

2008: ಇತ್ತೀಚೆಗಷ್ಟೆ ಸ್ವಯಂ ನಿವೃತ್ತಿ ಪಡೆದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಾ. ಸುಭಾಶ್ ಭರಣಿ ಬೆಂಗಳೂರಿನಲ್ಲಿ ಬಿಜೆಪಿ ಸೇರಿದರು.

2008: ಎರಡು ಸಾವಿರ ಕಿ.ಮೀ. ದೂರ ಕ್ರಮಿಸಬಲ್ಲ ಹಾಗೂ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಶಹೀನ್-2 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಪಾಕಿಸ್ಥಾನದಲ್ಲಿ ನಡೆಯಿತು. ಪಾಕಿಸ್ಥಾನದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಪ್ರಥಮ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಇದಾಗಿದ್ದು, ಪ್ರಧಾನಿ ಯೂಸುಫ್ ರಝಾ ಜಿಲಾನಿ, ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಕ್ತಾರ್ ಸಹಿತ ಇತರರು ಪರೀಕ್ಷೆಯನ್ನು ವೀಕ್ಷಿಸಿದರು.

2008: ದಕ್ಷಿಣ ಅಮೆರಿಕದ ಉಡಾವಣಾ ಕೇಂದ್ರವೊಂದರಿಂದ ತನ್ನ ಪ್ರಥಮ ಉಪಗ್ರಹ ಉಡಾವಣೆ ಮಾಡುವ ಮೂಲಕ ವಿಯೆಟ್ನಾಂ ವಿಶ್ವದಲ್ಲಿ ಉಪಗ್ರಹ ಸಂಪರ್ಕ ಹೊಂದಿದ ದೇಶಗಳ ಪಟ್ಟಿಗೆ ಸೇರ್ಪಡೆಯಾಯಿತು.

2007: ನಿವೃತ್ತ ಎಂಜಿನಿಯರ್, ತುಂಗಾ ಮೇಲ್ದಂಡೆ ಹೋರಾಟ ಸಮಿತಿಯ ಸಂಚಾಲಕ ಎಫ್. ಕೆ. ಬಿದರಿ (69) ನಿಧನರಾದರು. ಕರ್ನಾಟಕ ಭೂ ಸೇನಾ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಅವರು ರಾಣೆಬೆನ್ನೂರು ಭಾಗದಲ್ಲಿ ರೈತ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

2007: ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ವಿಶೇಷ ಮೇಲ್ಮನವಿ ಮತ್ತು ಮೂಲ ದಾವೆ ಹೂಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿತು. ಈ ಮೇಲ್ಮನವಿಗಳ ಕರಡು ಪ್ರತಿಗಳಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತು.

2007: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಾಣ ಬೆದರಿಕೆ ಒಡ್ಡಿದ ಆರೋಪ ಹೊತ್ತ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ಹೈಕೋರ್ಟ್ ಆರೋಪ ಮುಕ್ತಗೊಳಿಸಿತು. ಇವರಿಬ್ಬರ ವಿರುದ್ಧ ಸುಳ್ಳು ಆರೋಪ ಹೊರಿಸಿರುವ ಬಗ್ಗೆ ಹೈಕೋರ್ಟಿನ ರಿಜಿಸ್ಟ್ರಾರ್ (ತನಿಖಾದಳ) ನೀಡಿದ ವರದಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದ ವಿಭಾಗೀಯ ಪೀಠವು ವಿವಾದ ಕುರಿತ ಪ್ರಕರಣವನ್ನು ಇತ್ಯರ್ಥ ಮಾಡಿತು.

2006: ಆಸ್ಟ್ರೇಲಿಯಾದ ಜೆಸನ್ ಗ್ಲಿಲೆಸ್ಪಿ ಅವರು ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗಿನಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನೈಟ್ ವಾಚ್ ಮನ್ ಆಗಿ ಅತಿ ಹೆಚ್ಚು ರನ್ ಅಂದರೆ ಅಜೇಯ 201 ರನ್ ಗಳಿಸಿ ತಮ್ಮದೇ ದೇಶದ ಟೋನಿಮನ್ ದಾಖಲೆಯನ್ನು ಮುರಿದು ಹಾಕಿದರು. ಟೋನಿಮನ್ ಅವರು 1977ರಲ್ಲಿ ಭಾರತದ ವಿರುದ್ಧ 105 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು.

2006: ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇವಾಲಯ ಸಂಕೀರ್ಣದಲ್ಲಿ ಖ್ಯಾತ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ ಬಚ್ಚನ್ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಆದರೆ ಇದು ನಿಜ ಮದುವೆಯಲ್ಲ. ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಗುರು ಚಿತ್ರಕ್ಕಾಗಿ ನಡೆದ ಚಿತ್ರೀಕರಣದ ಮದುವೆ ಇದು. ಬಾದಾಮಿಯ ಪುರೋಹಿತರು, ನಾಗರಿಕರು ಸೇರಿದಂತೆ 200ಕ್ಕೂ ಹೆಚ್ಚು ಜನ ಈ `ಮದುವೆ'ಯಲ್ಲಿ ಪಾಲ್ಗೊಂಡ್ದಿದರು.

2006: ಒಂದು ಕಾಲದಲ್ಲಿ ಪ್ರಜಾಪ್ರಭುತ್ವ ಪರ ಹೋರಾಟದಲ್ಲಿ ಸೆರೆಮನೆವಾಸ ಅನುಭವಿಸಿದ್ದ ಮಾಜಿ ಸಾಮಾಜಿಕ ಕಾರ್ಯಕರ್ತೆ ಹ್ಯಾನ್ ಮೈಯಾಂಗ್- ಸೂಕ್ ಅವರನ್ನು ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ದಕ್ಷಿಣ ಕೊರಿಯಾ ಸಂಸತ್ ಒಪ್ಪಿಕೊಂಡಿತು.

2006: ಭಾರತದ ಕೃಷಿ ವಲಯವನ್ನು ಆಹಾರ ಸ್ವಾವಲಂಬನೆಯಿಂದ ಹೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಪರಿವರ್ತಿಸಲು ಅನುವಾಗುವಂತೆ ವಿಶ್ವಬ್ಯಾಂಕ್ ಭಾರತದ ರಾಷ್ಟ್ರೀಯ ಕೃಷಿ ಪುನಶ್ಚೇತನ ಯೋಜನೆಗೆ ಒಟ್ಟು 200 ಕೋಟಿ ಅಮೆರಿಕನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿತು.

2006: ಸಾಮಾಜಿಕ, ಶೈಕ್ಷಣಿಕ ಯೋಜನೆಗಳಿಗಾಗಿ ಹಾಗೂ ದತ್ತಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವೆಸ್ಟ್ ಮಿನ್ ಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಾಗರೋತ್ತರ ಬ್ರಿಟಿಷ್ ವ್ಯವಹಾರಗಳ ರಾಯಭಾರಿ ಭಾರತೀಯ ಮೂಲದ ಲಾರ್ಡ್ ಸ್ವರಾಜ್ ಪಾಲ್ ಅವರಿಗೆ 2006ನೇ ಸಾಲಿನ ಬ್ರಿಟನ್ನಿನ ಈಸ್ಟರ್ನ್ ಐ ಕಮ್ಯೂನಿಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈಸ್ಟರ್ನ್ ಐ ಎಂಬುದು ಬ್ರಿಟನ್ನಿನಲ್ಲಿ ಅತ್ಯಧಿಕ ಮಾರಾಟವಾಗುವ ಏಷ್ಯಾದ ವೃತ್ತಪತ್ರಿಕೆಯಾಗಿದ್ದು, ಪತ್ರಿಕಾ ಸಂಸ್ಥೆಯು ಈ ಪ್ರಶಸ್ತಿ ನೀಡುತ್ತದೆ.

2005: ವ್ಯಾಟಿಕನ್ ಸಿಟಿಯ ರೋಮನ್ ಕ್ಯಾಥೊಲಿಕ್ ಚರ್ಚಿನ 265ನೇ ಪೋಪ್ ಆಗಿ ಜರ್ಮನಿಯ ರಜಿಂಗರ್ ಆಯ್ಕೆಯಾಗಿದ್ದು, ಕುತೂಹಲ ಕೆರಳಿಸಿದ್ದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆಗೆ ಅಂತಿಮ ತೆರೆ ಬಿತ್ತು. 78 ವರ್ಷದ ರಜಿಂಗರ್ ಅವರು ಈದಿನದಿಂದ `ಪೋಪ್ 16ನೇ ಬೆನೆಡಿಕ್ಟ್' ಆದರು. ಈ ಶತಮಾನದಲ್ಲಿ ಪೋಪ್ ಸ್ಥಾನಕ್ಕೆ ಆಯ್ಕೆಯಾದವರಲ್ಲಿ ರಜಿಂಗರ್ ಅತ್ಯಂತ ಹಿರಿಯ ವ್ಯಕ್ತಿ ಮತ್ತು ಎರಡನೇ ಪೋಪ್ ಜಾನ್ ಪಾಲ್ ಅವರ ನಿಕಟವರ್ತಿ.

1995: ರಸಗೊಬ್ಬರ ಮತ್ತು ತೈಲ ತುಂಬಿದ್ದ ಟ್ರಕ್ ಬಾಂಬ್ ಒಕ್ಲಹಾಮಾ ನಗರದ ಅಲ್ ಫ್ರೆಡ್ ಪಿ. ಮುರ್ರಾ ಫೆಡರಲ್ ಕಟ್ಟಡದ ಸಮೀಪ ಸ್ಫೋಟಗೊಂಡಿತು. ಈ ಘಟನೆಯಲ್ಲಿ 168 ಜನ ಮೃತರಾಗಿ 500 ಮಂದಿ ಗಾಯಗೊಂಡರು. ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11 ರ ಘಟನೆಗೆ ಮುಂಚಿನ ಅತಿ ಭೀಕರ ಭಯೋತ್ಪಾದಕ ದಾಳಿ ಇದು. ಪರ್ಷಿಯನ್ ಕೊಲ್ಲಿ ಯುದ್ಧದ ನಾಯಕ ಟಿಮೋಥಿ ಮೆಕ್ ವೀಗ್ ಮತ್ತು ಟೆರ್ರಿ ನಿಕೋಲಸ್ ಈ ದಾಳಿಯನ್ನು ರೂಪಿಸಿದ್ದರು..

1951: ಲಂಡನ್ನಿನ ಸ್ಟ್ರ್ಯಾಂಡ್ನ ಲೈಸಿಯಂ ಬಾಲ್ ರೂಮಿನಲ್ಲಿ ಮೊತ್ತ ಮೊದಲ `ಮಿಸ್ ವರ್ಲ್ಡ್ಡ್' ಸ್ಪರ್ಧೆ ನಡೆಯಿತು. ಮಿಸ್ ಸ್ವೀಡನ್ ಕಿಕಿ ಹಾಕೋನ್ಸನ್ ಸ್ಪರ್ಧೆಯಲ್ಲಿ ವಿಜೇತರಾದರು.

1950: ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತದ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

1939: ಕಲಾವಿದ ಐರೋಡಿ ವೈಕುಂಠ ಹೆಬ್ಬಾರ್ ಜನನ.

1913: ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಜಿ. ಚನ್ನಮ್ಮ (19-4-1913ರಿಂದ 20-1-1986) ಅವರು ಸ್ವಾತಂತ್ರ್ಯ ಹೋರಾಟಗಾರ ಗೌಡಗೆರೆ ಮಡಿವಾಳಯ್ಯ ಗುರು ಬಸವಯ್ಯ- ವೀಣಾ ವಾದಕಿ ರಾಜಮ್ಮ ದಂಪತಿಯ ಮಗಳಾಗಿ ತುಮಕೂರಿನಲ್ಲಿ ಜನಿಸಿದರು.

1845: ಭಾರತದಲ್ಲಿ ರೈಲ್ವೇ ಆರಂಭಿಸುವ ಬಗ್ಗೆ ಚರ್ಚಿಸುತ್ತಿದ್ದ ಮುಂಬೈಯ ಪ್ರಮುಖ ಗಣ್ಯರು ಇಂಡಿಯನ್ ರೈಲ್ವೇ ಅಸೋಸಿಯೇಷನ್ ಹುಟ್ಟು ಹಾಕಿದರು. ಭಾರತದಲ್ಲಿ ರೈಲ್ವೇ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಲು ಆಗಮಿಸಿದ ಇಂಗ್ಲೆಂಡಿನ ಎಂಜಿನಿಯರ್ ಜಿ.ಟಿ. ಕ್ಲಾರ್ಕ್ ನೀಡಿದ ಮುಂಬೈ- ಠಾಣೆ ರೈಲುಮಾರ್ಗ ಪ್ರಸ್ತಾವಕ್ಕೆ ಈ ಗಣ್ಯರು ಅನುಮೋದನೆ ನೀಡಿದರು.

No comments:

Advertisement