ಇಂದಿನ ಇತಿಹಾಸ
ಮೇ 26
ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.
2009: ಲೋಕಸಭಾ ಚುನಾವಣೆಯ ಬಿಡುವಿನ ಬಳಿಕ ನಡೆದ ಮೊದಲ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸರು ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ರಾಜ್ಯದ ವಿವಿಧೆಡೆ ಏಕಕಾಲಕ್ಕೆ ನಡೆದ ದಾಳಿಯಲ್ಲಿ ಏಳು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದರು. ಬೀದರಿನ ಅಬಕಾರಿ ಉಪ ಆಯುಕ್ತ ಆಸಾದ್ ಅಲಿ, ಹಿರಿಯ ಮೋಟಾರು ವಾಹನ ನಿರೀಕ್ಷಕ ಕೆ.ಎಲ್.ನಾಗರಾಜ್, ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತ ಶೇಖ್ ಸಮೀವುಲ್ಲಾ ಷರೀಫ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಬಸವರಾಜು, ಕಿತ್ತೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಬಸವರೆಡ್ಡಿ ವಿ. ಲಿಂಗದಾಳ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಶಿವರಾಂ ಮತ್ತು ಗುಲ್ಬರ್ಗದ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾಜಿ ಕಾವಲೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿತು.
2009: ಶರಣ ಸಾಹಿತ್ಯದ ವಿಷಯವಾಗಿ ಅಪಾರ ಕೆಲಸ ಮಾಡಿದ ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ವೀರಣ್ಣ ರಾಜೂರ ಅವರಿಗೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 'ಡಾ.ಮೂಜಗಂ' ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂರುಸಾವಿರ ಮಠದ ಹಿಂದಿನ ಪೀಠಾಧಿಪತಿ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
2009: ಪಶ್ಚಿಮ ಬಂಗಾಳದಲ್ಲಿ ಎದ್ದ 'ಐಲಾ' ಚಂಡಮಾರುತದಿಂದ ಸುಮಾರು 67ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.
2009: ಪ್ರಸಾರ ಭಾರತಿಯ ಅಧ್ಯಕ್ಷ ಅರುಣ್ ಭಟ್ನಾಗರ್ ಅವರು ಮಂಡಳಿಯ ಆಡಳಿತ ವೈಖರಿಯಿಂದ ಅಸಮಾಧಾನಗೊಂಡು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.
2009: ಪಶ್ಚಿಮ ಬಂಗಾಳದ ಪರ್ವತಮಯ ಡಾರ್ಜಿಲಿಂಗ್ ಜಿಲ್ಲೆಯ ಹಲವೆಡೆ ಸಂಭವಿಸಿದ ಭೂಕುಸಿತದಲ್ಲಿ 23 ಮಂದಿ ಮೃತರಾಗಿ 6 ಮಂದಿ ನಾಪತ್ತೆಯಾದರು.
2009: ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವದಾದ್ಯಂತ ಕಳವಳ ಹುಟ್ಟಿಸಿದ ಬೆನ್ನಲ್ಲಿಯೇ ಉತ್ತರ ಕೊರಿಯಾ, ತನ್ನ ಪೂರ್ವ ತೀರದಿಂದ ಮತ್ತೆರಡು ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಭೂಮಿಯಿಂದ ನೀರಿನೊಳಗೆ ಹಾಗೂ ಆಕಾಶಕ್ಕೆ ನೆಗೆಯುವ 130 ಕಿ.ಮೀ ದೂರ ಸಾಮರ್ಥ್ಯದ ಎರಡು 'ಸಮೀಪ-ದೂರ' ಕ್ಷಿಪಣಿಗಳನ್ನು ಉತ್ತರ ಕೊರಿಯಾ ಉಡಾವಣೆ ಮಾಡಿದೆ ಎಂದು ಯೋನಾಪ್ ಸುದ್ದಿ ಸಂಸ್ಥೆ ವರದಿ ಮಾಡಿತು.
2009: ಶ್ರೀಲಂಕಾದಲ್ಲಿ ನಡೆದ ಯುದ್ಧದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್‌ನ ಪತ್ನಿ, ಪುತ್ರಿ ಮತ್ತು ಸಂಘಟನೆಯ ಉನ್ನತ ಕಮಾಂಡರ್ ಪೊಟ್ಟು ಅಮ್ಮಾನ್ ಕೂಡ ಹತರಾಗಿದ್ದಾರೆ ಎಂಬುದನ್ನು ಪ್ರಭಾಕರನ್ ಮಾಜಿ ಬಂಟ ಹಾಗೂ ಸರ್ಕಾರದಲ್ಲಿ ಫೆಡರಲ್ ಸಚಿವರಾದ ಕರುಣಾ ಅಮ್ಮನ್ ಖಚಿತಪಡಿಸಿದರು. ಎಲ್‌ಟಿಟಿಇ ಅಂತಾರಾಷ್ಟ್ರೀಯ ಸಂಪರ್ಕ ವ್ಯವಹಾರಗಳ ಮುಖ್ಯಸ್ಥ ಪದ್ಮನಾಭನ್ ಇದನ್ನು ದೃಢಪಡಿಸಿದ್ದಾರೆ ಎಂದು 2004ರವರೆಗೆ ಎಲ್‌ಟಿಟಿಇ ಪೂರ್ವ ಪ್ರಾಂತ್ಯದ ಕಮಾಂಡರ್ ಆಗಿದ್ದು ನಂತರ ಸಂಘಟನೆಯಿಂದ ಸಿಡಿದುಬಂದು ರಾಜಕೀಯ ವಾಹಿನಿ ಪ್ರವೇಶಿಸಿದ ಕರ್ನಲ್ ಕರುಣಾ ಹೇಳಿದರು.
2009: ಪಾಕಿಸ್ಥಾನದ ಮಾಜಿ ಪ್ರಧಾನಿ, ಪಿಎಂಎಲ್-ಎನ್ ಪಕ್ಷದ ಮುಖಂಡ ನವಾಜ್ ಷರೀಫ್ ಹಾಗೂ ಅವರ ಸೋದರ ಶಹಬಾಜ್ ಷರೀಫ್, ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ತಸ್ಸಕ್ ಹುಸೇನ್ ಗಿಲಾನಿ ನೇತೃತ್ವದ ಐವರು ಸದಸ್ಯರ ಪೀಠವು, ಈ ಸಂಬಂಧ ಲಾಹೋರ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿತು. ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಪಟ್ಟ ಷರೀಫ್ ಸೋದರರು ಚುನಾವಣಾ ರಾಜಕೀಯಕ್ಕೆ ಅನರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ನವಾಜ್ ಹಾಗೂ ಶಹಬಾಜ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈದಿನ ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಷರೀಫ್ ಸೋದರರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿತು.
2008: ಹಿಂದೂಗಳ ಪವಿತ್ರ ನಗರ ವಾರಣಾಸಿಯಲ್ಲಿ ಸದಾ ಮೈತುಂಬಿಕೊಂಡು ಜುಳುಜುಳು ಎಂದು ಹರಿಯುತ್ತಿದ್ದ ಗಂಗಾ ನದಿ ಈಗ ಬಡಕಲಾಗಿರುವುದು ಬೆಳಕಿಗೆ ಬಂತು. ಈ ವರ್ಷದ ಬೇಸಿಗೆಯಲ್ಲಿ ಹಿಂದೆಂದೂ ಕಡಿಮೆಯಾಗದಷ್ಟು ನೀರು ಕಡಿಮೆಯಾಗಿ ಮರಳ ದಂಡೆಗಳು ಎದ್ದು ಕಾಣಿಸತೊಡಗಿದವು. ನದಿಯಲ್ಲಿ ನೀರು ಕಡಿಮೆಯಾಗಲು ಅನೇಕ ಅಂಶಗಳು ಕಾರಣ ಎಂಬುದು ತಜ್ಞರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ. ಕಳೆದ ಎರಡು ದಶಕಗಳಲ್ಲಿ ವಾರಣಾಸಿಯಲ್ಲಿ ಗಂಗಾನದಿಯ ನೀರಿನ ಪ್ರಮಾಣ 1.5 ಮೀಟರಿನಿಂದ 2 ಮೀಟರಿನವರೆಗೆ ಕಡಿಮೆಯಾಗಿದೆ ಎಂಬುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನಾ ಪ್ರಯೋಗಾಲಯದ ಪ್ರೊ. ಉದಯಕಾಂತ್ ಚೌಧರಿ ಹೇಳಿಕೆ. 1988ರಲ್ಲಿ 340ರಿಂದ 355 ಮೀಟರ್ ಅಗಲದಲ್ಲಿ ಹರಿಯುತ್ತಿದ್ದ ಗಂಗೆ ಈ ವರ್ಷ 250 ಮೀಟರಿಗೆ ಇಳಿದಳು. ಇದೊಂದು ಆತಂಕಕಾರಿ ಬೆಳವಣಿಗೆಯಾದ್ದರಿಂದ ಸಾರ್ವಜನಿಕರು ಮತ್ತು ಸರ್ಕಾರ ಪವಿತ್ರವಾದ ಗಂಗಾ ನದಿಯನ್ನು ಉಳಿಸಿಕೊಳ್ಳಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂಬುದು ಚೌಧರಿ ಸಲಹೆ. 1988ರಲ್ಲಿ ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಎಂಟು ಸಾವಿರದಿಂದ ಒಂಭತ್ತು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು. ಈಗ ಈ ಪ್ರಮಾಣ ಐದರಿಂದ ಆರು ಸಾವಿರಕ್ಕೆ ಇಳಿದಿದೆ. ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳು ಗಂಗಾ ನದಿಗೆ ಸೇರುತ್ತಿರುವುದರಿಂದ ನೀರಿನ ಮಾಲಿನ್ಯ ಪ್ರಮಾಣವೂ ಹೆಚ್ಚಳವಾಗಿದೆ. ತೆಹರಿ ಅಣೆಕಟ್ಟು ಸೇರಿದಂತೆ ಅನೇಕ ಅಣೆಕಟ್ಟುಗಳ ನಿರ್ಮಾಣ, ನೀರಾವರಿ ಕಾಲುವೆಗಳ ನಿರ್ಮಾಣದಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಹಾಗೂ ವಾರಣಾಸಿಯಲ್ಲಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ ಎಂಬುದು ತಜ್ಞರ ಅಭಿಪ್ರಾಯ.
2008: ಪಕ್ಷೇತರ ಶಾಸಕರ ಒಲವು ಸಂಪಾದಿಸುವ ಪ್ರಯತ್ನದಲ್ಲಿ ಸಫಲವಾದ ಭಾರತೀಯ ಜನತಾ ಪಕ್ಷವು, ನೂತನ ಸರ್ಕಾರ ರಚನೆಗೆ ಈದಿನ ರಾತ್ರಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿತು. ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಜೇಟ್ಲಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಮೊದಲಾದವರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿ 115 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಮನವಿ ಮಾಡಿದರು. ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರವಣಪ್ಪ, ಡಿ.ಸುಧಾಕರ್ ಅವರು ರಾಜ್ಯಪಾಲರ ಮುಂದೆ ಹಾಜರಾಗಿ ಬಿಜೆಪಿಗೆ ಬೆಂಬಲ ಘೋಷಿಸಿದರು. ಇದರೊಂದಿಗೆ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ (113) ಎರಡು ಹೆಚ್ಚು ಸ್ಥಾನಗಳನ್ನು ಬಿಜೆಪಿ ಹೊಂದಿದಂತಾಯಿತು.
2008: ಅಮೆರಿಕದ ಪುಟ್ಟ ಬಾಹ್ಯಾಕಾಶ ನೌಕೆ `ಫೀನಿಕ್ಸ್' ಮಂಗಳ ಗ್ರಹವನ್ನು ತಲುಪಿ, ಉತ್ತರ ಧ್ರುವದಲ್ಲಿ ಇಳಿದ ಎರಡೇ ತಾಸುಗಳಲ್ಲಿ ಅಲ್ಲಿನ ಮಂಜುಗಟ್ಟಿದ ಪರಿಸರದ ಚಿತ್ರಗಳನ್ನು ಕಳುಹಿಸಿತು. ಮೂರು ತಿಂಗಳ ಕಾಲ ಮಂಗಳ ಗ್ರಹದಲ್ಲಿ ಇರಲಿರುವ `ಫೀನಿಕ್ಸ್' ನೌಕೆ, ಅಲ್ಲಿ ನೀರಿನ ಲಭ್ಯತೆ ಮತ್ತು ಜೀವೋತ್ಪತಿಗೆ ಕಾರಣವಾಗುವ ಅಂಶಗಳ ಬಗ್ಗೆ ಹುಡುಕಾಟ ನಡೆಸುವುದು. ಕಳೆದ 10 ತಿಂಗಳ ಅವಧಿಯಲ್ಲಿ 423 ದಶಲಕ್ಷ ಮೈಲು ದೂರ ಕ್ರಮಿಸಿದ ಬಳಿಕ ಈ ನೌಕೆ ಹಿಂದಿನ ದಿನ ರಾತ್ರಿ ಮಂಗಳ ಗ್ರಹವನ್ನು ತಲುಪಿದ್ದು ಅದು ಈಗ ಕಳುಹಿಸಿದ ಚಿತ್ರಗಳಿಂದ ದೃಢಪಟ್ಟದ್ದು ನಾಸಾ ವಿಜ್ಞಾನಿಗಳಿಗೆ ಸಂತಸ ತಂದಿತು. ಸೌರ ಶಕ್ತಿಯನ್ನು ಬಳಸಿ ಮಂಗಳನ ಅಂಗಳಕ್ಕೆ ಇಳಿಯುವ ನೌಕೆಯನ್ನು ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಭಾರತ ಮೂಲದ ಎಂಜಿನಿಯರ್ ಪ್ರಸನ್ನ ದೇಸಾಯಿ, `ಎಲ್ಲವೂ ಅದ್ಭುತವಾಗಿ ನಡೆಯುತ್ತಿದೆ` ಎಂದರು. ಮಂಗಳನ ಅಂಗಳದಲ್ಲಿ ನೌಕೆಯನ್ನು ಇಳಿಸುವುದು ಸವಾಲಿನ ಕಾರ್ಯವಾಗಿತ್ತು. ಗಂಟೆಗೆ 12 ಸಾವಿರ ಮೈಲು ವೇಗದಲ್ಲಿ ಸಂಚರಿಸುತ್ತಿದ್ದ `ಫೀನಿಕ್ಸ್'ನ್ನು ಮೆತ್ತನೆಯ ಹಾಸಿಗೆಯ ಮೇಲೆ ಬೀಳಿಸುವ ಬದಲು ಮೂರು ಕಾಲುಗಳ ಮೇಲೆಯೇ ನಿಲ್ಲಿಸುವ ತಂತ್ರ ಹೆಣೆಯಲಾಗಿತ್ತು. ಮಂಗಳನ ವಾತಾವರಣವನ್ನು ನೌಕೆ ಪ್ರವೇಶಿಸುತ್ತಿದ್ದಂತೆಯೇ ನೌಕೆಯ ಪ್ಯಾರಾಚೂಟ್ ಬಿಚ್ಚಿಕೊಂಡು ಅದರ ವೇಗವನ್ನು ತಗ್ಗಿಸಿತು. ನೌಕೆಯ ಉಷ್ಣ ತಡೆ ಗುರಾಣಿಯೂ ಚಾಚಿಕೊಂಡಿತು. ಜೆಟ್ ರಾಕೆಟ್ ಎಂಜಿನ್ ಉರಿಸಿ ವೇಗವನ್ನು ಕಡಿತಗೊಳಿಸಲಾಯಿತು. ಕೊನೆಗೆ ಮಂಗಳನ ಅಂಗಳಕ್ಕೆ ಇಳಿಯುವ ಹೊತ್ತಿಗೆ `ಫೀನಿಕ್ಸ್'ನ ವೇಗ ಗಂಟೆಗೆ 5 ಮೈಲುಗಳಿಗೆ ಇಳಿಯಿತು. ನೌಕೆ ನೆಲದಲ್ಲಿ ತಳ ಊರುತ್ತಿದ್ದಂತೆಯೇ ದೂಳು ಎದ್ದಿತು. ವಿಜ್ಞಾನಿಗಳ ಪಾಲಿಗೆ ಇದು `ಏಳು ನಿಮಿಷಗಳ ಆತಂಕದ ಕ್ಷಣ'ವಾಗಿತ್ತು. ದೂಳು ಚದುರಿದ ತತ್ ಕ್ಷಣ ನೌಕೆ ತನ್ನ ಸೌರ ಫಲಕವನ್ನು ಬಿಚ್ಚಿಕೊಂಡಿತು. ಕಳೆದ ವರ್ಷ ಆಗಸ್ಟ್ 4ರಂದು `ಫೀನಿಕ್ಸ್'ನ್ನು ಉಡಾಯಿಸಲಾಗಿತ್ತು. 420 ದಶಲಕ್ಷ ಡಾಲರ್ ವೆಚ್ಚದಲ್ಲಿ ಲಾಕ್ ಹೀಡ್ ಮಾರ್ಟಿನ್ ಕಂಪೆನಿಯು ಈ ನೌಕೆಯನ್ನು ನಿರ್ಮಿಸಿತ್ತು. ಮಂಗಳನ ಅಂಗಳಕ್ಕೆ ಇಳಿದು ಸಂಶೋಧನೆ ನಡೆಸುವ ಈ ಮೊದಲಿನ ಹಲವು ಯತ್ನಗಳು ವಿಫಲವಾಗಿದ್ದವು.
2008: ಮಣಿಪುರದ ಕೇಂದ್ರ ಸ್ಥಳ ರಾಜಧಾನಿ ಇಂಫಾಲದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ(ರಿಮ್ಷ್) ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸಿದರು.
2008: 66 ಜನರನ್ನು ಬಲಿ ತೆಗೆದುಕೊಂಡಿದ್ದ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭರತ್ ಪುರ ಜಾಮಾ ಮಸೀದಿಯ ಇಮಾಮ್ ಮೊಹಮ್ಮದ್ ಇಲಯಾಸ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.
2008: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಹುತೇಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೇ ಗೆಲುವು ಸಾಧಿಸಿದರು. ಕಾಂಗ್ರೆಸ್ ಪಕ್ಷ ನೆಲ ಕಚ್ಚಿತು. ಥಾಣೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆ ಜಯಭೇರಿ ಭಾರಿಸಿತು. ಹಿಮಾಚಲ ಪ್ರದೇಶದ ಹಮಿರ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಲಿನ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್, ಮೇಘಾಲಯದ ಟುರಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿ ಪಿ) ಅಭ್ಯರ್ಥಿ ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ, ಹರಿಯಾಣದ ಗೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಜಗಬೀರ್ ಸಿಂಗ್ ಮಲಿಕ್, ಆದಂಪುರ ಕ್ಷೇತ್ರದಲ್ಲಿ ಹರಿಯಾಣ ಜನಹಿತ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್, ಅಮೃತಸರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿ ದಳ- ಬಿಜೆಪಿ ಅಭ್ಯರ್ಥಿ ಇಂದೇರ್ಬಿರ್ ಸಿಂಗ್ ಬೊಲಾರಿಯಾ ಜಯಗಳಿಸಿದರು.
2008: ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನ ಜನರು ಸೇನೆ ರೂಪಿಸಿರುವ ನೂತನ ಸಂವಿಧಾನವನ್ನು ಸ್ವಾಗತಿಸಿದ್ದು, ಜನಮತಗಣನೆಯಲ್ಲಿ ಶೇ 93 ಮಂದಿ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿತು. ನರ್ಗಿಸ್ ಚಂಡಮಾರುತದಿಂದ ತತ್ತರಿಸಿದ ಪ್ರದೇಶದಲ್ಲಿ ಜನಮತಗಣೆ ನಡೆದಿತ್ತು.
2008: ಪತ್ರಿಕೋದ್ಯಮ, ಕಲೆ, ಶಿಕ್ಷಣ ಹಾಗೂ ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತೀಯ ಮೂಲದ ಮಹಿಳೆಯರಿಗೆ ಈ ಸಾಲಿನ `ಏಷ್ಯನ್ ವುಮೆನ್ ಆಫ್ ಅಚೀವ್ಮೆಂಟ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಲ್ಟನ್ನಿನಲ್ಲಿ ನಡೆದ 9 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಐಟಿಎನ್ ಸುದ್ದಿ ಸಂಪಾದಕಿ ಆರತಿ ಲುಖಾ, ನೃತ್ಯ ನಿರ್ದೇಶಕಿ ಶೋಭನಾ ಜಯಸಿಂಗ್ ಹಾಗೂ ವೆಸ್ಟ್ ನಟ್ಟಿಂಗ್ ಹ್ಯಾಮ್ ಶೈರ್ ಕಾಲೇಜಿನ ಆಶಾ ಖೇಮ್ಕಾ ಮತ್ತು ಬಾಲಾ ಠಾಕ್ರಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಹಾಗೂ ಸಮುದಾಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ ಭಾರತೀಯ ಮೂಲದ ಸ್ವಯಂಸೇವಕ ಗೋಪಾಲ್ ದಾಸ್ ಪೋಪಟ್ (85) ಅವರಿಗೆ ಅಂತಾರಾಷ್ಟ್ರೀಯ ಸ್ವಯಂಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2008: ಬಹ್ರೇನ್ ಏರ್ ಸಂಸ್ಥೆಯು ಕೊಚ್ಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಿತು.
2008: ಇರಾಕ್ ಫುಟ್ಬಾಲ್ ತಂಡ ಒಂದು ವರ್ಷದ ಅವಧಿಗೆ ಯಾವುದೇ ರೀತಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರ ಮೇಲೆ ಫಿಫಾ ನಿಷೇಧ ಹೇರಿತು.ಇರಾಕ್ ತಂಡವನ್ನು 12 ತಿಂಗಳುಗಳ ಅವಧಿಗೆ ಅಮಾನತು ಮಾಡಿರುವ ನಿರ್ಧಾರವನ್ನು ಫಿಫಾ ಆಡಳಿತ ಮಂಡಳಿ ಈದಿನ ಪ್ರಕಟಿಸಿತು.
2008: ಕೊಯಮತ್ತೂರಿನ ಉದುಮಲ್ಪೇಟೆ ಸಮೀಪದ ತಿರುಮೂರ್ತಿ ಅಣೆಕಟ್ಟಿನ ಪಂಚಲಿಂಗ ಜಲಪಾತದ ಕ್ಷಿಪ್ರ ಪ್ರವಾಹಕ್ಕೆ ಸಿಲುಕಿ 13 ಮಂದಿ ಪ್ರವಾಸಿಗರು ಅಸು ನೀಗಿದ ಘಟನೆ ಹಿಂದಿನ ದಿನ ನಡೆಯಿತು. ಕೇರಳದ ಮರೈಯೂರಿನಲ್ಲಿ ಬಿದ್ದ ಭಾರಿ ಮಳೆಯೇ ಈ ಪ್ರವಾಹಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದರು.
2008: ಚನ್ನರಾಯಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಗಿರಿಕ್ಷೇತ್ರದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇಗುಲದ ಉದ್ಘಾಟನೆ ವಿಜೃಂಭಣೆಯಿಂದ ನೆರವೇರಿತು.
2007: ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷ ಚಂದ್ರಜಿತ್ ಯಾದವ್ ನವದೆಹಲಿಯಲ್ಲಿ ನಿಧನರಾದರು. ಅವರು ಇಂದಿರಾಗಾಂಧಿ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
2007: ರಾಷ್ಟ್ರದ ಭದ್ರತಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿವಿಧೋದ್ದೇಶ ರಾಷ್ಟ್ರೀಯ ಗುರುತು ಚೀಟಿ ಯೋಜನೆಗೆ ಚಾಲನೆ ನೀಡಿತು. ರಾಜಧಾನಿಯ ನರೇಲಾದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ದೇವೇಂದರ್ ಕುಮಾರ್ ಸಿಕ್ರಿ ಅವರು ವಾಯವ್ಯ ದೆಹಲಿಯ ನರೇಲಾದ ಮಹಿಳೆಯೊಬ್ಬರಿಗೆ ಮೊತ್ತ ಮೊದಲ ರಾಷ್ಟ್ರೀಯ ಗುರುತು ಚೀಟಿ ವಿತರಿಸಿದರು.
2007: ಪಕ್ಷದ ನಿಯಮ ಉಲ್ಲಂಘಿಸಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ಸಿಪಿ ಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರನ್ನು ಸಿಪಿಎಂನ ಉನ್ನತ ನೀತಿ ನಿರೂಪಕ ಸಮಿತಿಯಾದ ಪಾಲಿಟ್ ಬ್ಯೂರೋದಿಂದ ಅಮಾನತುಗೊಳಿಸಲಾಯಿತು.
2007: ಭಾರತೀಯ ಕ್ರಿಕೆಟ್ ತಂಡದ ಅಗ್ರಶ್ರೇಯಾಂಕದ ನಾಲ್ವರು ಆಟಗಾರರು ಢಾಕಾದ ಮೀರ್ ಪುರ ಬೆಂಗಾಲ್ ಜೈತಿಯಾ ಕ್ರೀಡಾಂಗಣದಲ್ಲಿ ಮೊತ್ತ ಮೊದಲ ಬಾರಿಗೆ ಶತಕ ಗಳಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು. ವಾಸಿಂ ಜಾಫರ್ (ಗಾಯಗೊಂಡು ನಿವೃತ್ತಿ 138), ದಿನೇಶ್ ಕಾರ್ತಿಕ್ (129), ರಾಹುಲ್ ದ್ರಾವಿಡ್ (129) ಹಾಗೂ ಸಚಿನ್ ತೆಂಡೂಲ್ಕರ್ (ಔಟಾಗದೇ 122) ಅವರು ಇತಿಹಾಸ ನಿರ್ಮಿಸಿದ ಆಟಗಾರರು.
2007: ಜರ್ಮನಿಯಿಂದ ಅಟ್ಲಾಂಟಾಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಡಾ. ರಾಬರ್ಟ್ ವಿನ್ಸೆಂಟ್ ಮತ್ತು ಡಾ. ಡಿಯೇಟರ್ ಕೆ. ಗುಣ್ ಕಲ್ ಅವರು ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸೂಕ್ತ ವೈದ್ಯೋಪಚಾರ ಮಾಡಿ ಹೆರಿಗೆ ಮಾಡಿಸಿದರು. ಹುಟ್ಟಿದ ಗಂಡು ಮಗು ಉಸಿರಾಡದೇ ಇದ್ದಾಗ ಬಾಯಿಯ ಮೂಲಕ ಉಸಿರೆಳೆದು ಕೃತಕ ಉಸಿರಾಟ ನಡೆಸಿ ಮಗುವನ್ನು ಬದುಕಿಸಿದರು.
2006: ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.
2006: ಮಾವೋವಾದಿ ಹಿಂಸಾಚಾರವನ್ನು ಕೊನೆಗಾಣಿಸಲು ಮುಂದಡಿ ಇಟ್ಟ ನೇಪಾಳ ಸರ್ಕಾರವು ಶಾಂತಿ ಮಾತುಕತೆ ಆರಂಭಿಸುವ ದ್ಯೋತಕವಾಗಿ 467 ಮಾವೋವಾದಿ ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತು.
2002: `ಒಡಿಸ್ಸಿ' ಹೆಸರಿನ ನೌಕೆಯು ಮಂಗಳ ಗ್ರಹದಲ್ಲಿ ಹೆಪ್ಪುಗಟ್ಟಿದ ನೀರಿನ ನಿಕ್ಷೇಪವನ್ನು ಪತ್ತೆ ಮಾಡಿತು.
1999: ಬಟಾಲಿಕ್ನಿಂದ ಲಡಾಖ್ ನ ಡ್ರಾಸ್ ವರೆಗಿನ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿದ್ದ ಪಾಕಿಸ್ಥಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ಧ ಭಾರತ `ಆಪರೇಷನ್ ವಿಜಯ್' ಆರಂಭಿಸಿತು. ಅತಿಕ್ರಮಿಗಳನ್ನು ತೆರವುಗೊಳಿಸುವ ಈ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜುಲೈ 14ರಂದು ಘೋಷಿಸಿದರು.
1976: ಕಲಾವಿದ ವೇಣುಗೋಪಾಲ್ ವಿ.ಜಿ. ಜನನ.
1972: ಯುದ್ಧ ಕ್ಷಿಪಣಿಗಳನ್ನು ನಿಯಂತ್ರಿಸುವ `ಆಯಕಟ್ಟಿನ ಶಸ್ತ್ರಾಸ್ತ್ರ ಮಿತಿ ಒಪ್ಪಂದ'ಕ್ಕೆ (ಸಾಲ್ಟ್ 1) ಅಮೆರಿಕ ಮತ್ತು ಯುಎಸ್ಸೆಸ್ಸಾರ್ ಸಹಿ ಹಾಕಿದವು.
1966: ಬ್ರಿಟಿಷ್ ಗಯಾನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದು ಈ ದಿನದಿಂದ `ಗಯಾನಾ' ಅಷ್ಟೆ.
1951: ಅಮೆರಿಕದ ಮಹಿಳಾ ಗಗನಯಾನಿ ಸ್ಯಾಲ್ಲಿ ರೈಡ್ ಜನ್ಮದಿನ. ಈಕೆ 1983ರಲ್ಲಿ ಬಾಹ್ಯಾಕಾಶ ಷಟ್ಲ್ ನೌಕೆ ಚಾಲೆಂಜರ್ ಮೂಲಕ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊತ್ತ ಮೊದಲ ಮಹಿಳೆ.
1948: ಜಾನಪದ ಕಲಾವಿದರ ಕುಟುಂಬದಿಂದ ಬಂದ ಕಲಾವಿದ ಗುರುರಾಜ ಹೊಸಕೋಟೆ ಅವರು ರುದ್ರಪ್ಪ ಹೊಸಕೋಟೆ ಹಾಗೂ ಹಾಡುಗಾರ್ತಿ ಗೌರಮ್ಮ ದಂಪತಿಯ ಮಗನಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು.
1940: ಕಲಾವಿದ ಚನ್ನವೀರೇಶ ಸಂಪಗಿ ಜನನ.
1926: ಉಜ್ವಲ ರಾಷ್ಟ್ರಪ್ರೇಮಿ, ಚಿಂತಕ, ಬಹುಭಾಷಾ ಕೋವಿದ ಖ್ಯಾತ ಲೇಖಕ ಹೊ.ವೆ. ಶೇಷಾದ್ರಿ (26-5-1926ರಿಂದ 14-8-2005) ಅವರು ಹೊಂಗಸಂದ್ರದಲ್ಲಿ ವೆಂಕಟರಾಮಯ್ಯ- ಪಾರ್ವತಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ 9 ವರ್ಷ ಸೇವೆ ಸಲ್ಲಿಸಿದ ಇವರ ಲೇಖನಿಯಿಂದ ಬಂದ ಗ್ರಂಥಗಳು ಅಸಂಖ್ಯಾತ. ಇವರ ಲಲಿತ ಪ್ರಬಂಧಗಳ ಸಂಕಲನ ತೋರ್ ಬೆರಳುಗೆ 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment