Friday, May 28, 2010

ಇಂದಿನ ಇತಿಹಾಸ History Today ಮೇ 27

ಇಂದಿನ ಇತಿಹಾಸ

ಮೇ 27

ಅಮೆರಿಕದ ಫೋನಿಕ್ಸ್ನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರೆಡ್ ಮಿಲ್‌ನಲ್ಲಿ (ನಡಿಗೆ ಯಂತ್ರ) ಕತ್ತು ಸಿಕ್ಕಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಾಜಿ ಹೇವಿ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೈಕ್ ಟೈಸನ್ ಪುತ್ರಿ ಎಕ್ಸೋಡಸ್ ಟೈಸನ್ (4) ಈದಿನ ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದರು.

2009: ಪಾಕಿಸ್ಥಾನದಲ್ಲಿ ಭಯೋತ್ಪಾದಕರು ಮತ್ತೆ ತಮ್ಮ ಅಟ್ಟಹಾಸ ಮೆರೆದು, ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರಿನಲ್ಲಿ ರಕ್ತದ ಕೋಡಿ ಹರಿಸಿದರು. ಶಂಕಿತ ತಾಲಿಬಾನ್ ಉಗ್ರರು, ಲಾಹೋರ್ ಪ್ರಾಂತ್ಯದ ಐಎಸ್‌ಐ ಕಚೇರಿ ಮೇಲೆ ಈದಿನ ಬೆಳಿಗ್ಗೆ ನಡೆಸಿದ ಭೀಕರ ದಾಳಿಯಲ್ಲಿ ಏಳು ಜನ ಐಎಸ್‌ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಸಿಬ್ಬಂದಿ ಸೇರಿದಂತೆ 35 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. ಎರಡರಿಂದ ನಾಲ್ಕರಷ್ಟಿದ್ದ ಶಸ್ತ್ರಸಜ್ಜಿತ ಉಗ್ರರು ಜನನಿಬಿಡ ರಸ್ತೆಯಲ್ಲಿದ್ದ ಐಎಸ್‌ಐ ಪ್ರಾಂತೀಯ ಕಚೇರಿಯ ಮೇಲೆ ದಾಳಿ ನಡೆಸಲೆಂದೇ ಸಜ್ಜಾಗಿ ಬಂದಿದ್ದರು. ಶಕ್ತಿಶಾಲಿ ಸ್ಫೋಟಕಗಳು ತುಂಬಿದ್ದ ಕಾರನ್ನು ಐಎಸ್‌ಐ ಕಚೇರಿಯೊಳಗೆ ನುಗ್ಗಿಸಲು ಹವಣಿಸಿದರು. ಆದರೆ, ಐಎಸ್‌ಐ ಕಚೇರಿಯ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದಾಗ ವಾಹನದಿಂದ ಕೆಳಗಿಳಿದ ಉಗ್ರರು ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸುತ್ತಾ ವಾಹನ ಸ್ಫೋಟಿಸಿದರು.

2009: ವಿಶ್ವದ 17 ರಾಷ್ಟ್ರಗಳ 22 ಹೊಸ ಮೀಸಲು ವನ್ಯಜೀವಿ ಅಭಯಾರಣ್ಯಗಳನ್ನು ಗುರುತಿಸಿದ ಯುನೆಸ್ಕೊ, ತನ್ನ ವಿಶ್ವವ್ಯಾಪಿ ಜೀವವೈವಿಧ್ಯ ಮೀಸಲು ಅರಣ್ಯದ ಪಟ್ಟಿಯಲ್ಲಿ ಭಾರತದ ಮೂರು ತಾಣಗಳಿಗೆ ಸ್ಥಾನ ಕಲ್ಪಿಸಿತು. ಅದರಲ್ಲಿ ಒರಿಸ್ಸಾದ ಸಿಂಪ್ಲಿಪಾಲ್, ಮೇಘಾಲಯದ ನಾರ್‌ಕೆಕ್, ಮಧ್ಯಪ್ರದೇಶದ ಪಂಚ್‌ಮರ್ಲಿ ಮೀಸಲು ಅರಣ್ಯಗಳು ಹೊಸದಾಗಿ ಸೇರ್ಪಡೆಯಾದವು. ಜಾಗತಿಕ ಜೀವ ಜಗತ್ತಿನ ಮಾಹಿತಿ ಸಂಪರ್ಕ ಕಲ್ಪಿಸುತ್ತಿರುವ ಯುನೆಸ್ಕೊ 107 ರಾಷ್ಟ್ರಗಳ ಮೀಸಲು ಅಭಯಾರಣ್ಯಗಳ ಮಾಹಿತಿ ಹೊಂದಿದೆ.

2009: ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭೂ ಕುಸಿತದ ಭಗ್ನಾವಶೇಷದಿಂದ ಇನ್ನೂ ಐದು ಶವಗಳನ್ನು ಹೊರತೆಗೆಯಲಾಯಿತು., ಇದರೊಂದಿಗೆ ಪಶ್ಚಿಮ ಬಂಗಾಳದ ಚಂಡಮಾರುತದಲ್ಲಿ ಸತ್ತವರ ಸಂಖ್ಯೆ 86ಕ್ಕೆ ಏರಿದಂತಾಯಿತು.

2009: ಮುಂಬೈ ದಾಳಿಯ (26/11) ಬಂಧಿತ ಆರೋಪಿ ಅಜ್ಮಲ್ ಕಸಾಬ್‌ನ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಲಯವು ಪ್ರತ್ಯಕ್ಷ ಸ್ವತಂತ್ರ ಸಾಕ್ಷಿ ಎಂಬ ನೆಲೆಯಲ್ಲಿ ನಾಗರಿಕರೊಬ್ಬರ ಸಾಕ್ಷ್ಯವನ್ನು ದಾಖಲಿಸಿಕೊಂಡಿತು. ಕಸಾಬ್‌ನನ್ನು ಗುರುತಿಸುವಲ್ಲಿ ಪ್ರಸ್ತುತ ಸ್ವತಂತ್ರ ಸಾಕ್ಷಿದಾರ ಯಶಸ್ವಿಯಾದರು. ಹೊಟೇಲ್ ತಾಜ್‌ನಲ್ಲಿ ನೌಕರನಾಗಿದ್ದ ಭರತ್ ತಾಮೋರ್ ಎಂಬವರೇ ಈ ಸಾಕ್ಷಿದಾರ. ನವೆಂಬರ್ 26ರಂದು ದೋಣಿಯ ಮೂಲಕ ನಗರದ ಸಮುದ್ರ ತೀರದಲ್ಲಿರುವ ಮೀನುಗಾರರ ಕಾಲೋನಿಯಲ್ಲಿ ಬಂದಿಳಿದ 10 ಬಂಧೂಕುಧಾರಿ ವ್ಯಕ್ತಿಗಳಲ್ಲಿ ಕಸಾಬ್ ಕೂಡ ಇದ್ದ ಎಂಬುದಾಗಿ ಸಾಕ್ಷಿದಾರ ಗುರುತಿಸಿದರು. ಸಾಕ್ಷಿದಾರ ಸಾಮಾನ್ಯ ನಾಗರಿಕನಾಗಿರುವುದರಿಂದ ಪ್ರಸ್ತುತ ಪುರಾವೆಗಳು ಅತ್ಯಂತ ಮಹತ್ವದ್ದು. ಈ ವ್ಯಕ್ತಿ ಪ್ರಥಮ ಪ್ರತ್ಯಕ್ಷ ಸಾಕ್ಷ್ಯದಾರ ಎಂಬುದಾಗಿ ವಿಶೇಷ ನ್ಯಾಯಾಲಯ ದಾಖಲಿಸಿತು.. ಕಸಾಬ್‌ನನ್ನೊಳಗೊಂಡ ಉಗ್ರರ ತಂಡವನ್ನು ದಾಳಿ ನಡೆಸುವ ಮುನ್ನ ಈ ವ್ಯಕ್ತಿ ನೋಡಿದ್ದರು. ರಾತ್ರಿ 9.15ರ ವೇಳೆಗೆ ನೌಕರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸರ್ಕಾರಿ ಅಭಿಯೋಜಕರು ಉಲ್ಲೇಖಿಸಿದ್ದರು. ದುಷ್ಕರ್ಮಿಗಳಲ್ಲಿ ಇಬ್ಬರು ಭರತ್ ತಾಮೋರ್‌ನೊಂದಿಗೆ ವಾಗ್ವಾದ ನಡೆಸಿದ್ದರು. ತಾಮೋರ್ ಶಸ್ತ್ರಧಾರಿ ತಂಡದವರಲ್ಲಿ ನೀವ್ಯಾರು ಎಂದು ವಿಚಾರಿಸಿದ್ದೇ ಮಾತಿನ ಚಕಮಕಿಗೆ ಕಾರಣ ಎಂದು ನ್ಯಾಯಾಲಯದ ಕಟಕಟೆಯಲ್ಲಿ ಅವರು ಹೇಳಿದರು. ದೋಣಿಯಲ್ಲಿ ಬಂದ 10 ಮಂದಿಯಲ್ಲಿ 8 ಜನರು ಕೆಳಕ್ಕಿಳಿದು ಸಾಗಿದರೆ, ಉಳಿದಿಬ್ಬರು ನಾರಿಮನ್ ಪಾಯಿಂಟ್ ಕಡೆಗೆ ದೋಣಿ ಚಲಾಯಿಸಿದ್ದರು.

2009: ಇಲಿಯೊಂದು ಕಣ್ಣಿಗೆ ಬಿದ್ದಾಕ್ಷಣ ನಿಂತಲ್ಲೇ ಕುಪ್ಪಳಿಸಿ, ಚೀರಾಡಿ, ದಿಗಿಲು ಬೀಳುವವರೇ ಹೆಚ್ಚು. ಆದರೆ, ಅಷ್ಟೇನೂ ದಿಗಿಲು ಬೀಳಬೇಡಿ; ಮನುಷ್ಯರಿಗೂ ಇಲಿಗಳಿಗೂ ಜೈವಿಕವಾಗಿ ಅಷ್ಟೇನೂ ವ್ಯತ್ಯಾಸವಿಲ್ಲ ಎಂದು ವಿಜ್ಞಾನಿಗಳು ಬಹಿರಂಗ ಪಡಿಸಿದರು. ಇಲಿಯ ವಂಶವಾಹಿ ನಕ್ಷೆ ರಹಸ್ಯವನ್ನು ಇದೀಗ ಸಂಪೂರ್ಣ ಬಿಡಿಸುವಲ್ಲಿ ಯಶಸ್ವಿಯಾಗಿರುವ ಬ್ರಿಟನ್, ಅಮೆರಿಕ, ಸ್ವೀಡನ್ ಸಂಶೋಧಕರ ತಂಡ ಈ ಮಾಹಿತಿ ಹೊರಗೆಡಹಿತು. 'ಮನುಷ್ಯರು ಮತ್ತು ಇಲಿಗಳ ವಂಶವಾಹಿ ನಕ್ಷೆಯಲ್ಲಿ ಶೇ 20ರಷ್ಟು ಮಾತ್ರ ವ್ಯತ್ಯಾಸವಿದ್ದರೆ, ಶೇ 80ರಷ್ಟು ಸಾಮ್ಯತೆ ಇದೆ. ಇದು ಖಚಿತವಾಗಿರುವುದರಿಂದ ಮನುಷ್ಯರನ್ನು ಕಾಡುವ ರೋಗಗಳಿಗೆ ಮದ್ದು ಕಂಡುಹಿಡಿದ ಸಂದರ್ಭದಲ್ಲಿ ಇಲಿಗಳ ಮೇಲೆ ಅದನ್ನು ಪ್ರಯೋಗಿಸಬಹುದಾದ ಸಾಧ್ಯತೆ ಇನ್ನಷ್ಟು ಹೆಚ್ಚಾಗಿದೆ' ಎಂದು ಸಂಶೋಧಕರು ವಿವರಿಸಿದರು. ಇಲಿಗಳ ವಂಶವಾಹಿ ನಕ್ಷೆ 90 ದಶಲಕ್ಷ ವರ್ಷಗಳ ವಿಕಾಸ ಅವಧಿಯಲ್ಲಿ ಸಾಕಷ್ಟು ಬದಲಾಗಿದ್ದು, ಕೆಲವು ತಳಿಗುಣಗಳು ಪ್ರಸ್ತುತ ಕ್ಷಿಪ್ರವಾಗಿ ವಿಕಾಸವಾಗುತ್ತಿವೆ ಎಂದೂ ಅವರು ಪ್ರತಿಪಾದಿಸಿದರು. ಸಸ್ತನಿ ವರ್ಗದ ಪ್ರಾಣಿಗಳ ಸಾಮಾನ್ಯ ವಂಶವಾಹಿ ಪತ್ತೆ ಹಚ್ಚಲು, ಇಲಿ- ಮನುಷ್ಯರ ಮಧ್ಯೆ ವ್ಯತ್ಯಾಸಕ್ಕೆ ಕಾರಣವಾದ ವಂಶವಾಹಿಗಳ ಜಾಡು ಹಿಡಿಯಲು ತಮ್ಮ ಅನ್ವೇಷಣೆ ರಹದಾರಿ ಒದಗಿಸುತ್ತದೆ ಎಂಬ ಆಶಾಭಾವದ ಮಿಂಚು ಕೂಡ ವಿಜ್ಞಾನಿಗಳಲ್ಲಿ ಮೂಡಿತು.

2009: ಅಮೆರಿಕದ ಫೋನಿಕ್ಸ್ನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರೆಡ್ ಮಿಲ್‌ನಲ್ಲಿ (ನಡಿಗೆ ಯಂತ್ರ) ಕತ್ತು ಸಿಕ್ಕಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಾಜಿ ಹೇವಿ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೈಕ್ ಟೈಸನ್ ಪುತ್ರಿ ಎಕ್ಸೋಡಸ್ ಟೈಸನ್ (4) ಈದಿನ ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದರು. 7 ವರ್ಷದ ಅಣ್ಣನೊಂದಿಗೆ ಆಟವಾಡುತ್ತಿದ್ದಾಗ ಟ್ರೆಡ್ ಮಿಲ್‌ನ ಕೇಬಲ್‌ಗೆ ಕತ್ತು ಸಿಲುಕಿಕೊಂಡು ತೊಂದರೆಗೊಳಗಾದ ಎಕ್ಸೋಡಸ್‌ಳನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಘಡ ಸಂಭವಿಸಿದಾಗ ಮೈಕ್ ಟೈಸನ್ ಮನೆಯಲ್ಲಿ ಇರಲಿಲ್ಲ.

2008: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 13ನೇ ವಿಧಾನಸಭೆ ರಚನೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂದಕ್ಕೆ ಪಡೆಯುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಒಟ್ಟು 224 ಮಂದಿ ಶಾಸಕರ ಆಯ್ಕೆ ಕುರಿತು ಚುನಾವಣಾ ಆಯೋಗ ರಾಜ್ಯಪತ್ರ (ಗೆಜೆಟ್) ಪ್ರಕಟಿಸಿ, ಅದರ ಪ್ರತಿಯೊಂದನ್ನು ರಾಜ್ಯಪಾಲರಿಗೆ ಸಲ್ಲಿಸಿತು.

2008: ಟೆಂಪೊ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ, ಗುಬ್ಬಿ ಶಾಸಕರನ್ನು ಅಭಿನಂದಿಸಲು ಹೋಗಿದ್ದ ನಾಲ್ವರು ಜೆಡಿಎಸ್ ಕಾರ್ಯಕರ್ತರು ಮೃತರಾಗಿ, ಇತರ 14 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ತುಮಕೂರು ನಗರ ಸಮೀಪದ ಮಲ್ಲಸಂದ್ರದ ಹಾಲಿನ ಡೇರಿ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಭವಿಸಿತು.

2008: ಜರ್ಮನ್ ಪ್ರವಾಸದಲ್ಲಿದ್ದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಐತಿಹಾಸಿಕ ಬರ್ಲಿನ್ ಯುದ್ಧ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಎರಡನೇ ಮಹಾ ಯುದ್ಧದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಎರಡನೇ ಮಹಾಯುದ್ಧದಲ್ಲಿ ಮಡಿದ 50 ಭಾರತೀಯರನ್ನು ಇಲ್ಲಿ ಸಮಾಧಿ ಮಾಡಲಾಗಿತ್ತು.

2008: ತಮಿಳು ಉಗ್ರಗಾಮಿಗಳ ನೆಲೆಗಳ ಮೇಲೆ ಶ್ರೀಲಂಕಾ ವಾಯುಪಡೆ ನಡೆಸಿದ ದಾಳಿಯಲ್ಲಿ 36 ಮಂದಿ ಬಂಡುಕೋರರು ಹತರಾದರು. ಸ್ಫೋಟಕ ತಯಾರಿಕೆಯಲ್ಲಿ ನಿಷ್ಣಾತನಾಗಿದ್ದ ಡೋರಾ ಎಂಬ ಕುಖ್ಯಾತ ಉಗ್ರ ಈ ದಾಳಿಯಲ್ಲಿ ಮೃತನಾದ ಎಂದು ವರದಿಗಳು ತಿಳಿಸಿದವು.

2008: ಪ್ರಸಿದ್ಧ ಪರ್ವತಾರೋಹಿ ಹಾಗೂ ರಾಜತಾಂತ್ರಿಕ ದಿವಂಗತ ಸರ್ ಎಡ್ಮಂಡ್ ಹಿಲರಿ ಅವರಿಗೆ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ಮೆಲ್ಬೋರ್ನಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಾಣಿಜ್ಯ ಸಚಿವ ಕಮಲ್ ನಾಥ್ ಅವರು ಸರ್ ಎಡ್ಮಂಡ್ ಹಿಲರಿ ಅವರ ಪತ್ನಿ ಜೂನ್ ಹಿಲರಿ ಅವರಿಗೆ ಪ್ರದಾನ ಮಾಡಿದರು.

2008: ಕಂಪ್ಯೂಟರ್ ಮುಂದೆ ಕುಳಿತು ಇ-ಮೇಲ್ ಮೂಲಕ ಬೆದರಿಕೆ ಹಾಕುವವರ ಪತ್ತೆಗೆ ಲಖನೌ ಮೂಲದ ಸಂಸ್ಥೆಯೊಂದು ಸಾಫ್ಟ್ವೇರ್ ಒಂದನ್ನು ತಯಾರಿಸಿತು. ಜೈಪುರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳು ಇ-ಮೇಲ್ ತಂತ್ರಜ್ಞಾನವನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಈ ಸಾಫ್ಟ್ವೇರನ್ನು ಅಭಿವೃದ್ಧಿಪಡಿಸಲಾಯಿತು ಎಂದು ಜಿಐ ಬಯೋಮೆಟ್ರಿಕ್ಸ್ನ ನಿರ್ದೇಶಕ ಅಮಿತ್ ಕೌಶಲ್ ತಿಳಿಸಿದರು. ಗ್ರಾಹಕ ನೊಂದಣಿ ಮತ್ತು ಗುರುತಿಸುವಿಕೆ (ಸಿಆರ್ಐಸಿಎಚ್-ಕ್ರಿಷ್) ಎಂಬ ಹೆಸರಿನ ಈ ಸಾಫ್ಟವೇರ್ ಬಳಸಿ ಕಂಪ್ಯೂಟರ್ ಮೂಲಕ ಇ-ಮೇಲ್ ಮಾಡುವವರ ಭಾವಚಿತ್ರ ಮತ್ತು ಬೆರಳಚ್ಚುಗಳನ್ನು ಪತ್ತೆ ಹಚ್ಚಬಹುದು. ಇದು ಆರೋಪಿಗಳ ಪತ್ತೆಗೆ ಬಹುಪಯೋಗಿಯಾಗಲಿದೆ ಎಂಬುದು ಅಮಿತ್ ಕೌಶಲ್ ಹೇಳಿಕೆ.

2008: ಪ್ರಸಿದ್ಧ ಶಬರಿಮಲೈ ದೇವಸ್ಥಾನದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ಭಕ್ತರಿಗೆ ಕಾಣಿಸಿಕೊಳ್ಳುವ `ಮಕರ ಜ್ಯೋತಿ' ಅತೀಂದ್ರಿಯ ಬೆಳಕಲ್ಲ. ಅದು ಮಾನವ ನಿರ್ಮಿತ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಕ್ತಾರ ರಾಹುಲ್ ಈಶ್ವರ್ ತಿಳಿಸಿದರು. ಪೂರ್ವ ಪ್ರದೇಶದ ಪೊನ್ನಂಬಳಮೇಡು ಬೆಟ್ಟದ ನಡುವೆ ಬುಡಕಟ್ಟು ಜನರು ಈ ಬೆಳಕನ್ನು ಹಚ್ಚುತ್ತಾರೆ. ಇದು ಪವಿತ್ರ ಜ್ಯೋತಿ. ಇದನ್ನು ಮೊದಲು ಪರಶುರಾಮ ಆಚರಿಸಿದ ಎಂಬ ದಂತಕತೆಯಿದೆ. ಈ ಸಂದರ್ಭದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಆಗ ಬೆಟ್ಟದಲ್ಲಿನ ಬುಡಕಟ್ಟು ಜನರು ಜ್ಯೋತಿಯನ್ನು ಉರಿಸುತ್ತಾರೆ. ಆದರೆ ಯಾರು ಉರಿಸುತ್ತಾರೆ ಎಂಬುದು ತಮಗೆ ಗೊತ್ತಿಲ್ಲ ಎಂದು ಈಶ್ವರ ವಿವರಿಸಿದರು. ಶಬರಿಮಲೈ ದೇವಸ್ಥಾನವು ಅಸಂಖ್ಯ ಭಕ್ತರು ಭೇಟಿ ನೀಡುವ ಪ್ರಪಂಚದ ಐದು ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಇದು ವಿವಾದಗಳು ಹಾಗೂ ತಪ್ಪು ಮಾಹಿತಿಗಳಿಂದ ಮುಕ್ತವಾಗಿರಬೇಕೆಂಬ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ಹೇಳಿದರು.

2008: ಬಾಲಿವುಡ್ ಮೆಘಾ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕುಟುಂಬದ ಸದಸ್ಯರೊಂದಿಗೆ ಪ್ರಭಾದೇವಿಯಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಅಮಿತಾಭ್ ಅವರು ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಸೊಸೆ ಐಶ್ವರ್ಯ ರೈ ಅವರೊಂದಿಗೆ ಮುಂಬೈನ `ಜಲ್ಸಾ' ನಿವಾಸದಿಂದ ಬೆಳಿಗ್ಗೆ ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಆಗಮಿಸಿ, ಸೂರ್ಯ ಉದಯವಾಗುವ ಮುನ್ನ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ `ಕಾಕಡಾರತಿ'ಯಲ್ಲಿ ಪಾಲ್ಗೊಂಡರು. ಜಯಾಭಾದುರಿ ಅವರು ದೇವಸ್ಥಾನದಲ್ಲಿ ಅವರ ಜೊತೆಯಾದರು.

2008: ರಾಜ್ಯ ರಸ್ತೆ ಸಾರಿಗೆ ನಿಗಮ ಈ ವರ್ಷ ಉತ್ತಮ ಆದಾಯ ಗಳಿಸುವಲ್ಲಿ ದಾಪುಗಾಲು ಹಾಕಿತು. ಹಿಂದಿನ ದಿನ (ಮೇ 26) ಒಂದೇ ದಿನದಲ್ಲಿ 6.67ಕೋಟಿ ಆದಾಯಗಳಿಸಿ ಹೊಸ ದಾಖಲೆ ನಿರ್ಮಿಸಿತು. ಇದು ನಿಗಮದ ಇತಿಹಾಸದಲ್ಲಿಯೇ ಅತ್ಯಧಿಕ ಆದಾಯ ಗಳಿಸಿದ ದಿನವಾಯಿತು. ಇದೇ ಮೇ 19ರಂದು 5.95 ಕೋಟಿ ರೂ. ಹಾಗೂ ಮೇ 12ರಂದು 5.82 ಕೋಟಿ ರೂ. ಆದಾಯವನ್ನು ಗಳಿಸಿ ನಿಗಮ ದಾಖಲೆ ಮಾಡಿತ್ತು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿಬ್ಬಂದಿಯನ್ನು ಹೊತ್ತ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ಬಳಿಯ ಕೆರೆ ಅಂಗಳದಲ್ಲಿ ಇಳಿಯಿತು. ಆದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಿಬ್ಬಂದಿ ಅಪಾಯದಿಂದ ಪಾರಾದರು.

2007: ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಮ್ ಅವರ ಸಹೋದರ ಚಿತ್ರ ನಿರ್ಮಾಪಕ ಜಿ. ಶ್ರೀನಿವಾಸನ್ ಅವರು ಮನಾಲಿಯ ಹಾಲನ್ನಿನಲ್ಲಿ ಟ್ರೆಕ್ಕಿಂಗ್ ನಿರತರಾಗಿದ್ದಾಗ 50 ಅಡಿ ಆಳದ ಕಮರಿಗೆ ಬಿದ್ದು ಅಸು ನೀಗಿದರು. ಶ್ರೀನಿವಾಸನ್ ಅವರು ಗುರು ಚಿತ್ರದ ನಿರ್ಮಾಪಕರಾಗಿದ್ದು ಪತ್ನಿ ಸಂಧ್ಯಾ ಲಕ್ಷ್ಮಣ್, ಪುತ್ರಿ ಶ್ರೇಯಾ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಟ್ರೆಕ್ಕಿಂಗ್ ನಡೆಸುತ್ತಿದ್ದಾಗ ದುರಂತಕ್ಕೆ ತುತ್ತಾದರು.

2007: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 50ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದ ಸುಮಾರು 50,000 ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾಲಕ್ಷ್ಮಿ ರೇಸ್ ಕೋರ್ಸಿನಲ್ಲಿ ಈ ಕಾರ್ಯಕ್ರಮ ನಡೆಯಿತು.

2007: ದೇಶದ ಪ್ರಮುಖ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಅವರು ಭಾರತದ ಏಕೈಕ ಒಂದು ಲಕ್ಷ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಮಲಯಾಳಂ ಚಿತ್ರರಂಗದ ಖ್ಯಾತ ನಟ ಒಡವಿಲ್ ಉನ್ನಿಕೃಷ್ಣನ್ (62) ನಿಧನರಾದರು.

2006: ಸುನಾಮಿ ಏಟಿನಿಂದ ಇನ್ನೂ ಚೇತರಿಸದ ಇಂಡೋನೇಷ್ಯಕ್ಕೆ ಈದಿನ ನಸುಕಿನಲ್ಲಿ ಇನ್ನೊಂದು ಆಘಾತ. ಭಾರಿ ಜನಸಾಂದ್ರತೆ ಇರುವ ಜಾವಾ ಪ್ರಾಂತ್ಯದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ ಒಟ್ಟು 5000ಕ್ಕೂ ಹೆಚ್ಚು ಮಂದಿ ಮೃತರಾದರು. ಸಹಸ್ರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2ರಷ್ಟಿತ್ತು. ಆ ಬಳಿಕ ಭೂಮಿ ಸುಮಾರು 45 ಸಲ ಕಂಪಿಸಿತು.

1999: ಕರ್ನಾಟಕದ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ರಮ ಆರಂಭಿಸಿತು. ಕಂದಾಯ ಸಚಿವ ಸೋಮಶೇಖರ್ ಕಾಲದಲ್ಲಿ ಚಿತ್ರದುರ್ಗ ಹಾಗೂ ಗುಲ್ಬರ್ಗದಲ್ಲಿ ಪ್ರಾಯೋಗಿಕವಾಗಿ ಕೇಂದ್ರ ನೆರವಿನೊಂದಿಗೆ ಈ ಕಾರ್ಯಕ್ರಮ ಆರಂಭಗೊಂಡಿತು. ಸರ್ಕಾರ ಅವಧಿಗೆ ಮುನ್ನ ಬಿದ್ದ ಕಾರಣ ಅದು ಮುಂದುವರೆಯಲಿಲ್ಲ. 2001ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ `ಭೂಮಿ' ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಗೊಳಿಸಿತು. ಪಾರದರ್ಶಕತೆಗೆ ಅವಕಾಶ ಮಾಡಿಕೊಟ್ಟ ಈ ಕಾರ್ಯಕ್ರಮ 2006ರಲ್ಲಿ ವಿಶ್ವಸಂಸ್ಥೆಯ `ಸಾರ್ವಜನಿಕ ಸೇವಾ ಪ್ರಶಸ್ತಿ'ಗೆ ಪಾತ್ರವಾಯಿತು.

1994: ಅಲೆಗ್ಸಾಂಡರ್ ಸೋಲ್ಜೆನಿತ್ಸಿನ್ 20 ವರ್ಷಗಳ ವಿದೇಶವಾಸದ ನಂತರ ರಷ್ಯಕ್ಕೆ ಹಿಂತಿರುಗಿದರು.

1964: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನವದೆಹಲಿಯಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1937: ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯನ್ನು ಸಂಪರ್ಕಿಸಲು ಹೊಸದಾಗಿ ನಿರ್ಮಿಸಲಾದ ಗೋಲ್ಡನ್ ಗೇಟ್ ಬ್ರಿಜ್ಜನ್ನು ಸಾರ್ವಜನಿಕರಿಗೆ ಸಂಚಾರಕ್ಕಾಗಿ ತೆರೆಯಲಾಯಿತು. ಮೊದಲ ದಿನವೇ 2 ಲಕ್ಷ ಮಂದಿ ಸೇತುವೆಯನ್ನು ದಾಟಿದರು. ಈ ಸೇತುವೆಯನ್ನು ಪೂರ್ಣಗೊಳಿಸಲು 4 ವರ್ಷ, 4 ತಿಂಗಳು, 22 ದಿನಗಳು ಬೇಕಾದವು.

1914: ಅಗ್ರಗಣ್ಯ ಪಿಟೀಲು ವಿದ್ವಾಂಸರಲ್ಲಿ ಒಬ್ಬರಾದ ಆರ್. ಆರ್. ಕೇಶವ ಮೂರ್ತಿ (27-5-1914ರಿಂದ 23-10-2006ರ ವರೆಗೆ) ಅವರು ರಾಮಸ್ವಾಮಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಸಂಗೀತ ಕಾಶಿ ಎನಿಸಿದ್ದ ರುದ್ರಪಟ್ಟಣದಲ್ಲಿ ಜನಿಸಿದರು.

1902: ಕಲಾವಿದ ಹಾರಾಡಿ ರಾಮ ಗಾಣಿಗ ಜನನ.

1897: ಸಾಹಿತ್ಯ ಮತ್ತು ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಬಿ. ಪುಟ್ಟಸ್ವಾಮಯ್ಯ (27-5-1897ರಿಂದ 25-1-1984) ಅವರು ಬಸಪ್ಪ - ಮಲ್ಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹಲವಾರು ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಇವರು ಕಥೆ, ಕಾದಂಬರಿ ನಾಟಕಗಳನ್ನು ಬರೆದಿದ್ದು, ಇವರ ಜನಪ್ರಿಯ `ಮಲ್ಲಮ್ಮನ ಪವಾಡ' ಕಾದಂಬರಿ ಚಲನಚಿತ್ರವಾಗಿತ್ತು.

1703: ತ್ಸಾರ್ ದೊರೆ ಪೀಟರ್ ದಿ ಗ್ರೇಟ್ ರಷ್ಯದ ನೂತನ ರಾಜಧಾನಿ ಸೇಂಟ್ ಪೀಟರ್ಸ್ ಬರ್ಗನ್ನು ನಿರ್ಮಿಸಿದ. 1914ರಲ್ಲಿ ಅದನ್ನು ಪೆಟ್ರೋಗ್ರಾಡ್ ಎಂದು ಹೆಸರಿಸಲಾಯಿತು. 1924ರಲ್ಲಿ ಅದಕ್ಕೆ `ಲೆನಿನ್ ಗ್ರಾಡ್' ಎಂದು ಸೋವಿಯತ್ ನಾಯಕ ವ್ಲಾಡಿಮೀರ್ ಲೆನಿನ್ ಹೆಸರನ್ನು ಇಡಲಾಯಿತು. 1991ರಲ್ಲಿ ಮತ್ತೆ ಅದಕ್ಕೆ ಮೂಲ ಹೆಸರನ್ನೇ (ಸೇಂಟ್ ಪೀಟರ್ಸ್ ಬರ್ಗ್) ಇಡಲಾಯಿತು.

1679: ಇಂಗ್ಲೆಂಡಿನ ಸಂಸತ್ತು ಸಾರ್ವಜನಿಕರಿಗೆ ಅನಗತ್ಯ ಬಂಧನದಿಂದ ರಕ್ಷಣೆ ಒದಗಿಸುವ ಸಲುವಾಗಿ ಹೇಬಿಯಸ್ ಕಾರ್ಪಸ್ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಮುಖ್ಯಾಂಶಗಳನ್ನು ನಂತರ ಅಮೆರಿಕದ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಯಿತು.

No comments:

Advertisement