Thursday, June 3, 2010

ಇಂದಿನ ಇತಿಹಾಸ History Today ಜೂನ್ 01

ಇಂದಿನ ಇತಿಹಾಸ

ಜೂನ್ 01

ಟೈಟಾನಿಕ್ ಹಡಗು ದುರಂತದಲ್ಲಿ ಪಾರಾಗಿ ಬದುಕುಳಿದಿದ್ದ ಕೊನೆಯ ಮಹಿಳೆ ಮಿಲ್ವಿನಾ ಡೀನ್ ಇಂಗ್ಲೆಂಡಿನ ಪೋಷಣಾ ಗೃಹವೊಂದರಲ್ಲಿ ಕೊನೆಯುಸಿರು ಎಳೆದರು. ಅವರ ಇಬ್ಬರು ಸ್ನೇಹಿತರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ಈ ವರದಿ ಮಾಡಿತು. ಡೀನ್ ಅವರಿಗೆ 97 ವರ್ಷ ವಯಸ್ಸಾಗಿತ್ತು. 1912ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಹಿಮಗಡ್ಡೆಗೆ ಅಪ್ಪಳಿಸಿ ದುರಂತ ಸಂಭವಿಸಿದಾಗ ಡೀನ್ ಎರಡು ತಿಂಗಳ ಮಗುವಾಗಿದ್ದರು.

2009: ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲು ಹಣ, ಹೆಂಡ, ಜಾತಿಯ ಬಳಕೆ ಆಗಿದ್ದು, ಇದರ ಬಗ್ಗೆ ಹಿರಿಯ ಮುಖಂಡರಿಂದ ತನಿಖೆ ನಡೆಸಬೇಕು ಎಂದು ಶಿವಮೊಗ್ಗದಲ್ಲಿ ಆಗ್ರಹ ಪಡಿಸುವುದರೊಂದಿಗೆ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಕತ್ತಿ ಝಳಪಿಪಿಸಿದರು. ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಸಂಸದ ಬಿ.ವೈ. ರಾಘವೇಂದ್ರರಿಗೆ ಚುನಾವಣೆಯಲ್ಲಿ ಈಶ್ವರಪ್ಪನವರ ಕ್ಷೇತ್ರದಲ್ಲಿ ಕಡಿಮೆ ಮತಗಳು ಬಂದ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಈದಿನ ಈಶ್ವರಪ್ಪ, ಮುಖ್ಯಮಂತ್ರಿಗಳ ಈ ಹೇಳಿಕೆಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿ ಬಹುದಿನಗಳಿಂದ ಅದುಮಿಟ್ಟಿದ್ದ ಭಿನ್ನಮತ ಸ್ಫೋಟಿಸಿದರು.

2009: ಬ್ರೆಜಿಲ್‌ನ ರಿಯೊ ಡಿ ಜನೈರೊದಿಂದ ಪ್ಯಾರಿಸ್‌ಗೆ ಹೊರಟಿದ್ದ 228 ಮಂದಿ ಇದ್ದ ಏರ್ ಫ್ರಾನ್ಸ್ ವಿಮಾನ ಹಾರಾಟ ಆರಂಭಿಸಿದ ಕೆಲ ಗಂಟೆಗಳಲ್ಲೇ ಕಣ್ಮರೆಯಾಯಿತು. ಅದು ಅಟ್ಲಾಂಟಿಕ್ ಸಾಗರದಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ನಂಬಲಾಯಿತು. ಬ್ರೆಜಿಲ್ ಕಾಲಮಾನದಂತೆ ಹಿಂದಿನ ಸಂಜೆ 7 ಗಂಟೆಗೆ ಈ ವಿಮಾನ ಹಾರಾಟ ಆರಂಭಿಸಿತು. ರಿಯೊ ಡಿ ಜನೈರೊದಿಂದ ಈಶಾನ್ಯಕ್ಕೆ 1,500 ಮೈಲಿ ದೂರದಲ್ಲಿರುವ ಅಟ್ಲಾಂಟಿಕ್ ಸಾಗರದ ದ್ವೀಪ ಸಮೂಹ ಫರ್ನಾಡೊ ಡಿ ನೊರೊನ್ಹಾ ಬಳಿ ನಾಪತ್ತೆಯಾಯಿತು. ಈ ದ್ವೀಪ ಸಮೂಹ ಬ್ರೆಜಿಲ್‌ನ ಈಶಾನ್ಯ ತುದಿಯ ನಗರ ನಟಾಲ್‌ನಿಂದ 300 ಕಿ.ಮೀ. ದೂರದಲ್ಲಿ ವಿಮಾನ ವಿದ್ಯುತ್ ವೈಫಲ್ಯದಿಂದ ಸಂಪರ್ಕ ಕಡಿದುಕೊಂಡಿತು.

2009: ಜಾಗತಿಕ ಹಿಂಜರಿತ ಮತ್ತು ಬೇಡಿಕೆ ಕುಸಿತದಿಂದಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅಮೆರಿಕದ ಪ್ರಮುಖ ಕಾರು ತಯಾರಿಕಾ ಕಂಪೆನಿ ಜನರಲ್ ಮೋಟಾರ್ಸ್‌ (ಜಿಎಂ), ದಿವಾಳಿ ಆಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿತು. ಕಾರ್ಪೊರೇಟ್ ವಲಯದ ಇತಿಹಾಸದಲ್ಲಿ ದಿವಾಳಿಯಾಗಿರುವ ಕಂಪೆನಿಗಳ ಸಾಲಿನಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ್ದು. ನೂರು ವರ್ಷಗಳ ಹಿನ್ನೆಲೆ ಇರುವ ಜನರಲ್ ಮೋಟಾರ್ಸ್‌, ಷೇರು ಹೂಡಿಕೆದಾರರ ಹಿತಾಸಕ್ತಿಯನ್ನು ಉಳಿಸಿಕೊಳ್ಳಲು ನ್ಯೂಯಾರ್ಕ್‌ನ ದಕ್ಷಿಣ ಭಾಗದಲ್ಲಿರುವ 'ಯುಎಸ್ ಬ್ಯಾಂಕರ್‌ಪ್ಟಸಿ ಕೋರ್ಟ್'ನಲ್ಲಿ ಚಾಪ್ಟರ್ 11ರ ಅಡಿಯಲ್ಲಿ ದಿವಾಳಿಯಾಗಿರುವ ಬಗ್ಗೆ ಅರ್ಜಿ ಸಲ್ಲಿಸಿತು. ಜನರಲ್ ಮೋಟಾರ್ಸ್‌ 1908ರಲ್ಲಿ ಸ್ಥಾಪನೆಯಾಗಿತ್ತು. ಎರಡು ಮಹಾಯುದ್ಧ ಮತ್ತು 1930ರ ಭೀಕರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ದಿವಾಳಿಯಾಗುವುದರಿಂದ ಪಾರಾಗಿತ್ತು. ಆದರೆ, ಪ್ರಸ್ತುತ ಆರ್ಥಿಕ ಹಿಂಜರಿತ ಕಠಿಣ ಸವಾಲಾಗಿ ಪರಿಣಮಿಸಿದೆ ಎನ್ನುವುದು ಈ ಮೂಲಕ ಸಾಬೀತಾಯಿತು. ಜನರಲ್ ಮೋಟಾರ್ಸ್‌ ಕಂಪೆನಿಯಲ್ಲಿ ವಿಶ್ವದಾದ್ಯಂತ 140 ದೇಶಗಳಲ್ಲಿ ಒಟ್ಟು 24.4 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರು.

2009: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮೀರಾ ಕುಮಾರ್ ನಾಮಕರಣಗೊಂಡರು. ಅವರು ಇದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮಿತ್ರಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿದರು. ಜಲ ಸಂಪನ್ಮೂಲ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನಗಳಲ್ಲಿ ಮೀರಾ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮೀರಾ ನಡೆದು ಬಂದ ಹಾದಿ

1945: ಮಾರ್ಚ್ 31ರಂದು ಜನನ
1973: ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆ
1985: ಹುದ್ದೆಗೆ ರಾಜೀನಾಮೆ, ಸಕ್ರಿಯ ರಾಜಕಾರಣಕ್ಕೆ ಪ್ರವೇಶ
ಬಿಂಜೋರ್ ಉಪ ಚುನಾವಣೆಯಲ್ಲಿ ಎದುರಾಳಿ ಆಗಿದ್ದ ಮಾಯಾವತಿ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸೋಲಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆ
1991: ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಕ
1991-92: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
1996: ದೆಹಲಿಯ ಕರೋಲ್ ಬಾಗ್ ಕ್ಷೇತ್ರದಿಂದ ಆಯ್ಕೆ
1998: ಕರೋಲ್ ಬಾಗ್ ಕ್ಷೇತ್ರದಿಂದ ಲೋಕಸಭೆಗೆ ಪುನರಾಯ್ಕೆ
2004: ಜಗಜೀವನ್ ರಾಮ್ ಅವರ ತವರು ಕ್ಷೇತ್ರ ಬಿಹಾರದ ಸಸಾರಾಮ್‌ನಿಂದ ಆಯ್ಕೆ
2004: ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಂಪುಟ ಸಚಿವೆಯಾಗಿ ಸಿಂಗ್ ಮಂತ್ರಿಮಂಡಲಕ್ಕೆ ಸೇರ್ಪಡೆ 2009: ಸಸಾರಾಮ್ ಕ್ಷೇತ್ರದಿಂದ ಪುನರಾಯ್ಕೆ. ಜಲಸಂಪನ್ಮೂಲ ಸಚಿವೆಯಾಗಿ (ಸಂಪುಟ ದರ್ಜೆ) ಪ್ರಮಾಣ ವಚನ ಸ್ವೀಕಾರ.

2009: ಈದಿನ ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಎಲ್.ಕೆ. ಅಡ್ವಾಣಿ (81) ಅವರನ್ನು ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಲೋಕಸಭೆಯಲ್ಲಿ ಅತಿ ದೊಡ್ಡ ವಿರೋಧ ಪಕ್ಷದ ನಾಯಕರಾದ ಕಾರಣ ಸಹಜವಾಗಿಯೇ ವಿರೋಧ ಪಕ್ಷದ ನಾಯಕನ ಹೊಣೆ ಅವರ ಕೊರಳಿಗೆ ಬಿದ್ದಿತು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಎರಡೂ ಸದನಗಳ ಉಪ ನಾಯಕರು ಹಾಗೂ ಮುಖ್ಯ ಸಚೇತಕರನ್ನು ನೇಮಕ ಮಾಡುವ ಅಧಿಕಾರವನ್ನು ಈ ಸಭೆಯಲ್ಲಿ ಅವರಿಗೆ ನೀಡಲಾಯಿತು.

2009: ಟೈಟಾನಿಕ್ ಹಡಗು ದುರಂತದಲ್ಲಿ ಪಾರಾಗಿ ಬದುಕುಳಿದಿದ್ದ ಕೊನೆಯ ಮಹಿಳೆ ಮಿಲ್ವಿನಾ ಡೀನ್ ಇಂಗ್ಲೆಂಡಿನ ಪೋಷಣಾ ಗೃಹವೊಂದರಲ್ಲಿ ಕೊನೆಯುಸಿರು ಎಳೆದರು. ಅವರ ಇಬ್ಬರು ಸ್ನೇಹಿತರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ಈ ವರದಿ ಮಾಡಿತು. ಡೀನ್ ಅವರಿಗೆ 97 ವರ್ಷ ವಯಸ್ಸಾಗಿತ್ತು. 1912ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಹಿಮಗಡ್ಡೆಗೆ ಅಪ್ಪಳಿಸಿ ದುರಂತ ಸಂಭವಿಸಿದಾಗ ಡೀನ್ ಎರಡು ತಿಂಗಳ ಮಗುವಾಗಿದ್ದರು. ಆ ಸಂದರ್ಭದಲ್ಲಿ ಅವರ ಕುಟುಂಬ ಅಮೆರಿಕದ ಕನ್ಸಾಸ್‌ಗೆ ವಲಸೆ ಹೊರಟಿತ್ತು. ದುರಂತ ಸಂಭವಿಸಿದಾಗ ಡೀನ್ ಅವರನ್ನು ಚೀಲದಲ್ಲಿಟ್ಟು ರಕ್ಷಿಸಲಾಗಿತ್ತು. ಅವರ ಸಹೋದರ ಹಾಗೂ ತಾಯಿ ಕೂಡ ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.. ಆದರೆ ತಂದೆ ಮಾತ್ರ ಪ್ರಾಣ ಕಳೆದುಕೊಂಡ 1,500 ಪ್ರಯಾಣಿಕರ ಹಾಗೂ ಸಿಬ್ಬಂದಿ ಜೊತೆಯಲ್ಲಿ ಸೇರಿದ್ದರು. ದಕ್ಷಿಣ ಇಂಗ್ಲೆಂಡಿನಲ್ಲಿರುವ ಹ್ಯಾಂಪಶೈರ್‌ನ ಪೋಷಣಾ ಗೃಹವೊಂದರಲ್ಲಿ ಡೀನ್ ಮೃತರಾದರು ಎಂದು ಹೆಸರು ಹೇಳದ ಮಿಲ್ವಿನಾ ಡೀನ್ ಅವರ ಇಬ್ಬರು ಸ್ನೇಹಿತೆಯರು ಬಿಬಿಸಿಗೆ ತಿಳಿಸಿದರು. ಜೀವನದ ಹೆಚ್ಚು ಅವಧಿಯನ್ನು ಹಾಂಪ್ಟನ್ ಕೌಂಟಿಯ ಸೌತಾಂಪ್ಟನ್‌ನಲ್ಲಿ ಕಳೆದಿದ್ದ ಡೀನ್ ಪೋಷಣಾ ಗೃಹದ ವೆಚ್ಚವನ್ನು ಭರಿಸಲು ಕಷ್ಟ ಪಡುತ್ತಿದ್ದರು. 2008ರ ಅಕ್ಟೋಬರ್‌ನಲ್ಲಿ ಹಡಗಿನ ಸಾಮಾಗ್ರಿಗಳನ್ನು ಹರಾಜು ಹಾಕುವ ಮೂಲಕ 53,900 ಅಮೆರಿಕನ್ ಡಾಲರ್‌ಗಳನ್ನು ಸಂಗ್ರಹಿಸಲಾಗಿತ್ತು. ದುರಂತದಲ್ಲಿ ಪಾರಾಗಿ ನ್ಯೂಯಾರ್ಕ್‌ಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೀಡಲಾಗಿದ್ದ ಹಳೆಯ ಬಟ್ಟೆಗಳನ್ನು ತುಂಬಿಸಿದ್ದ 100 ವರ್ಷದ ಸೂಟ್‌ಕೇಸನ್ನು ಅವರು ನಿವಾರ್ಯವಾಗಿ ಮಾರಬೇಕಾಯಿತು. ಹಡಗಿನಲ್ಲಿದ್ದ ಅಪರೂಪದ ಕಲಾಕೃತಿಗಳನ್ನು ಹಾಗೂ ಟೈಟಾನಿಕ್ ಪರಿಹಾರ ನಿಧಿಯಿಂದ ಅವರ ತಾಯಿಗೆ ಕಳುಹಿಸಿದ್ದ ಪತ್ರಗಳನ್ನು ಕೂಡ ಇಂಗ್ಲೆಂಡಿನ ನೈಋತ್ಯಕ್ಕಿರುವ ಡಿವೈಜ್‌ನಲ್ಲಿ ನಡೆದ ಹರಾಜಿನಲ್ಲಿ ಬಳಸಲಾಗಿತ್ತು. ದುರಂತದಲ್ಲಿ ಬದುಕುಳಿದಿದ್ದ ಅಮೆರಿಕದ ಕೊನೆಯ ವ್ಯಕ್ತಿ ಲಿಲ್ಲಿಯನ್ ಅಸ್ಟ್ಲುಂಡ್ 2006ರ ಮೇ ತಿಂಗಳಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಟೈಟಾನಿಕ್ ದುರಂತದ ಸಂದರ್ಭದಲ್ಲಿ ಅವರಿಗೆ ಐದು ವರ್ಷ ವಯಸ್ಸಾಗಿತ್ತು.

2009: ಕನಿಷ್ಠ ವಾರಕ್ಕೊಮ್ಮೆ ಹಸಿರು ಚಹಾ ಸೇವಿಸಿ ಪಾರ್ಶ್ವವಾಯು ಭೀತಿಯಿಂದ ದೂರವಿರಿ. ಆಸ್ಟ್ರೇಲಿಯಾದ ಕರ್ಟಿನ್ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಸಂಶೋಧನಾ ವರದಿ ಮೆಲ್ಬೋರ್ನಿನಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿತು. ಸಂಶೋಧನೆ ವೇಳೆ ಚೀನಾದಲ್ಲಿ ಹಸಿರು ಚಹಾ ಸೇವಿಸುತ್ತಿದ್ದ 374 ಪಾರ್ಶ್ವವಾಯು ಪೀಡಿತ ರೋಗಿಗಳನ್ನು ಪರೀಕ್ಷೆಗೊಳಪಡಿಸಲಾಯಿತು. ಅವರು ದಿನಕ್ಕೆ ಎಷ್ಟು ಬಾರಿ ಹಸಿರು ಚಹಾ ಸೇವಿಸುತ್ತಾರೆ ಎಂಬುದನ್ನು ಲೆಕ್ಕಹಾಕಲಾಯಿತು. ಚಹಾಪುಡಿ ಬಳಕೆದಾರರ ಬಗ್ಗೆಯೂ ಅನಿಯಮಿತವಾಗಿ ಮತ್ತು ಚಹಾ ಸೇವಿಸದವರ ಬಗ್ಗೆಯೂ ಸಂಶೋಧನೆ ನಡೆಸಲಾಯಿತು. ಚಹಾಪುಡಿ ಬಳಸಿ ತಯಾರಿಸುವ ಚಹಾ ಸೇವಿಸುವ ರೋಗಿಗಳಿಗಿಂತ ವಾರಕ್ಕೊಮ್ಮೆ ನಿರಂತರವಾಗಿ ಹಸಿರು ಚಹಾ ಸೇವಿಸುವ ರೋಗಿಗಳು ಬೇಗ ಗುಣಮುಖರಾಗುವರೆಂದು ವರದಿ ತಿಳಿಸಿತು. ಸ್ಟ್ರೋಕ್ ಎಂಬ ಆರೋಗ್ಯ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಯಿತು.

2009: ವಿಶ್ವದ ಹಲವು ರಾಷ್ಟ್ರಗಳನ್ನು ನಡುಗಿಸಿದ 'ಹಂದಿ ಜ್ವರ'ಕ್ಕೆ ಪವಿತ್ರ ತುಳಸಿ ಉತ್ತಮ ಔಷಧ ಎಂದು ಆಯುರ್ವೇದ ವೈದ್ಯರು ಲಖನೌ ನಗರದಲ್ಲಿ ಅಭಿಪ್ರಾಯಪಟ್ಟರು. ತುಳಸಿ ರಸ, ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅಂಟಿದ ರೋಗವನ್ನೂ ಗುಣಪಡಿಸುತ್ತದೆ ಎಂದು ಅವರು ತಿಳಿಸಿದರು. 'ತುಳಸಿ, ವೈರಾಣು ಬಾಧಿತ ರೋಗಗಳ ವಿರುದ್ಧ ಯಶಸ್ವಿಯಾಗಿ ಹೋರಾಡುವ ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಾತ್ರವಲ್ಲ, ವಿಷಮ ಶೀತ ಜ್ವರ ನಿಗ್ರಹಿಸುವ ಗುಣ ಹೊಂದಿರುವುದಾಗಿ ವಿಶ್ವದಾದ್ಯಂತ ವೈದ್ಯಕೀಯ ಪರಿಣತರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ತುಳಸಿಯನ್ನು ಜಪಾನಿನಲ್ಲಿ ಕಂಡುಬಂದು ವಿಚಿತ್ರ ಜ್ವರವೊಂದಕ್ಕೆ ಔಷಧಿಯಾಗಿ ಬಳಸಲಾಗಿದ್ದು, ಇದೇ ಸಿದ್ಧಾಂತವನ್ನು ಹಂದಿ ಜ್ವರ ನಿವಾರಣೆಗೂ ಬಳಸಬಹುದು' ಎಂದು ಆಯುರ್ವೇದ ವೈದ್ಯ ಡಾ.ಯು.ಕೆ.ತಿವಾರಿ ತಿಳಿಸಿದರು.

2009: ಕೇವಲ 30 ನಿಮಿಷಗಳಲ್ಲಿ ಫಲಿತಾಂಶ ನೀಡುವ ಜಗತ್ತಿನ ಅತಿ ಕಡಿಮೆ ಬೆಲೆಯ ಎಚ್‌ಐವಿ ಸೋಂಕು ಪರೀಕ್ಷಾ ವಿಧಾನವನ್ನು ಕಂಡು ಹಿಡಿದಿರುವುದಗಿ ವಾಷಿಂಗ್ಟನ್‌ನಲ್ಲಿ ವಿಜ್ಞಾನಿಗಳು ಬಹಿರಂಗ ಪಡಿಸಿದರು. ಇದಕ್ಕಾಗಿ ಯಾವುದೇ ಪ್ರಯೋಗಾಲಯದ ಅವಶ್ಯಕತೆ ಇಲ್ಲ ಎಂಬುದು ವಿಶೇಷ. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಇದನ್ನು 'ಸಿಡಿ4 ಕ್ಷಿಪ್ರ ಪರೀಕ್ಷೆ' ಎಂದು ಹೆಸರಿಸಿತು. ಇದು ಗರ್ಭಿಣಿಯರ ಪರೀಕ್ಷಾ ವಿಧಾನದಂತೆಯೇ ಇರುತ್ತದೆ. ಯಾವುದೇ ಪ್ರಯೋಗಾಲಯದ ಅವಶ್ಯಕತೆ ಇಲ್ಲದೇ ಎಚ್‌ಐವಿ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುಟ್ಟಾಗಿ ವ್ಯಕ್ತಿಗಳೇ ಪರೀಕ್ಷಿಸಿಕೊಳ್ಳಬಹುದು ಎಂದು ತಂಡದ ನೇತೃತ್ವ ವಹಿಸಿದ ಖ್ಯಾತ ವಿಜ್ಞಾನಿ ಪ್ರೊ. ಸುಜಾನೆ ಕ್ರೋವ್ ತಿಳಿಸಿದರು. ಬಡ ರೋಗಿಗಳು ಮತ್ತು ರೋಗದ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಈ ವಿಧಾನ ಹೆಚ್ಚು ಸಹಕಾರಿಯಾಗಲಿದೆ. ವಿಶ್ವದ 33 ಕೋಟಿ ಮಂದಿ ಪ್ರಸ್ತುತ ಎಚ್‌ಐವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ನುಡಿದರು.

2008: ಬಕ್ಕತಲೆಯವವರಿಗೆ ಇಲ್ಲೊಂದು ಸಂತಸದ ಸುದ್ದಿ. `ಕ್ಲೋನ್' ಮೂಲಕ ಪ್ರಾಣಿಗಳ ಪ್ರತಿರೂಪದ ಜೀವಿಗಳನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಕೂದಲನ್ನೂ ಕ್ಲೋನ್ ಮಾಡಲು ಮುಂದಾದರು. ಈ ಹೊಸ ತಂತ್ರಜ್ಞಾನದಲ್ಲಿ ಬಕ್ಕತಲೆಯವರು ತಲೆಯಲ್ಲಿ ಸಮೃದ್ಧ ಕೂದಲು ಬೆಳೆಯುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿರುವುದಾಗಿ `ದಿ.ಡೇಲಿ ಟೆಲಿಗ್ರಾಫ್ ` ಪತ್ರಿಕೆ ವರದಿ ಮಾಡಿತು. ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲಿ, ಸುಟ್ಟು ಕೂದಲು ಕಳೆದುಕೊಂಡವರಿಗೆ, ಅಕಾಲದಲ್ಲಿ ಬಕ್ಕತಲೆಯಾದವರಿಗೆ ಇದು ತುಂಬ ಉಪಯುಕ್ತ ಎಂಬುದು ವಿಜ್ಞಾನಿಗಳ ಅಭಿಮತ. ಆದರೆ ಈ ತಂತ್ರಜ್ಞಾನದ ಚಿಕಿತ್ಸೆ ಪಡೆಯುವಾಗ 1000 ಸಂಖ್ಯೆಯಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳಬೇಕಾಗುತ್ತದೆ. ಇಷ್ಟಾದರೂ ಸದ್ಯದ ಹೊಸ ಕೂದಲು ಬರಿಸುವ ಚಿಕಿತ್ಸೆಗಿಂತ ಇದು ಪರಿಣಾಮಕಾರಿ ಚಿಕಿತ್ಸೆ ಎಂಬುದು ಅವರ ವಾದ.

2008: ಮುಂಬೈಯಲ್ಲಿ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ- 20 ಕ್ರಿಕೆಟ್ ಟೂರ್ನಿಯ ಫೈನಲ್ಲಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

2008: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ತಮ್ಮ ಜೀವಿತಾವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ತಂಗಿದ್ದ ಹಾಗೂ ಐತಿಹಾಸಿಕ ಮಹತ್ವವಿರುವ ಮನೆಯೊಂದು ಅಗ್ನಿ ಆಕಸ್ಮಿಕದಿಂದ ನಾಶವಾದ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿತು. ಮಹಾತ್ಮಗಾಂಧಿಯವರ ಮೊಮ್ಮಗ ಪಶ್ಚಿಮ ಬಂಗಾಳದ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರು ಹಿಮಾಚಲ ಪ್ರದೇಶ ಸರ್ಕಾರದಿಂದ ಐತಿಹಾಸಿಕ ದಾಖಲೆಗಳಿಗಾಗಿ ಆಗ್ರಹಿಸಿದರು. ಆದರೆ ಗಾಂಧೀಜಿ ಅಂದು (1921) ನೆಲೆಸಿದ್ದ ಪಂಡಿತ್ ಮದನ ಮೋಹನ ಮಾಲವೀಯ ಅವರ ಮನೆ ಅಗ್ನಿಸ್ಪರ್ಶದಿಂದ ನಾಶವಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿತು. ಮಾಹಿತಿ ಆಗ್ರಹಿಸಿ ಪಶ್ಚಿಮ ಬಂಗಾಲದ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶದ ಸಂಸ್ಕೃತಿ ಹಾಗೂ ಭಾಷಾ ನಿರ್ದೇಶನಾಲಯದ ಇತಿಹಾಸ ವಿಭಾಗವು ಗಾಂಧೀಜಿಯವರು 1921 ರಿಂದ 1945ರ ಅವಧಿಯಲ್ಲಿ ಆ ರಾಜ್ಯದಲ್ಲಿ ನೆಲೆಸಿದ ಹಾಗೂ ಪಾಲ್ಗೊಂಡ ಕಾರ್ಯಕ್ರಮಗಳ ಸಮಗ್ರ ಸಮೀಕ್ಷೆಗೆ ಆದೇಶಿಸಿತ್ತು. ಸಮೀಕ್ಷೆಯಲ್ಲಿ ತಿಳಿದು ಬಂದಂತೆ 'ನಿಖರ ಮಾಹಿತಿ ನೀಡುವ ದಾಖಲೆಗಳು ಲಭ್ಯವಾಗುತ್ತಿಲ್ಲ. ಆದರೆ ಲಭಿಸಿರುವ ಪುರಾವೆಗಳ ಆಧಾರದಲ್ಲಿ ಗಾಂಧೀಜಿ 19 21ರಲ್ಲಿ ನೆಲೆಸಿದ್ದ ಪಂಡಿತ ಮಾಲವೀಯ ಮನೆಯನ್ನು ಅಂದು `ಕರ್ಟನ್ ಗ್ರೋವ್' ಎಂದು ಗುರುತಿಸಲಾಗಿದ್ದು, ಅದು ಬೆಂಕಿ ಅನಾಹುತದಲ್ಲಿ ನಾಶವಾಗಿದೆ, ಅದು ಇಂದಿನ ರಾಜ್ಯ ವಿಧಾನ ಸಭಾ ಕಟ್ಟಡದ ಹಿಂಭಾಗದಲ್ಲಿತ್ತು' ಎಂದು ತಿಳಿಸಲಾಯಿತು. ಹಳೆಮನೆಯ ಕುರಿತಾದ ಯಾವ ಪುರಾವೆಯೂ ಈಗಿಲ್ಲ. ಆ ಜಾಗದಲ್ಲಿ ದೀಪಕ್ ಸೂದ್ ಎಂಬವರಿಗೆ ಸೇರಿದ ಹೊಸ ಕಟ್ಟಡ ನಿರ್ಮಾಣವಾಗಿರುವುದೂ ಬೆಳಕಿಗೆ ಬಂತು. ಇದೇ ರೀತಿ 1931ರಲ್ಲಿ ಮಹಾತ್ಮಾ ಭೇಟಿಯ ವೇಳೆ ಅವರು ನೆಲೆಸಿದ್ದ ಮನೆಯು ಸ್ವಾತಂತ್ರ್ಯ ಹೋರಾಟಗಾರ ರಾಯ್ ಬಹದ್ದೂರ್ ಮೋಹನ್ ಲಾಲ್ ಅವರ ಹೆಸರಲ್ಲಿ ಇತ್ತು. ಆದರೆ ಈಗ ಅದು ನವದೆಹಲಿಯ ಪಂಚಶೀಲ ಪಾರ್ಕ್ ಬಳಿಯ ನಿವಾಸಿ ಮೊಹೀಂದರ್ ಲಾಲ್ ಅವರಿಗೆ ಸೇರಿದ್ದು, ಫಾಗ್ರೋರ್ವ್ ಭವನ್ , ಥಾಕು ಎಂಬ ಹೆಸರಲ್ಲಿ ನೋಂದಾಯಿಸಲ್ಪಟ್ಟಿದೆ. ಗಾಂಧೀಜಿಯವರು 1930, 1940 ಹಾಗೂ 1945ರ ಭೇಟಿಯ ವೇಳೆ ನೆಲೆಸಿದ್ದ ಮನೆಗಳ ಕುರಿತಾದ ಯಾವುದೇ ನಿಖರ ದಾಖಲೆಗಳು ಈಗ ಸಿಗುತ್ತಿಲ್ಲ ಎಂದೂ ಇಲಾಖೆಗಳು ಒಪ್ಪಿಕೊಂಡವು. ಹಿಮಾಚಲ ಪ್ರದೇಶದ ರಾಜಕುಮಾರಿ ಅಮೃತಾ ಕೌರ್ ಅವರ ಬೇಸಿಗೆಯ ನಿವಾಸ `ಮನವರ್ ವಿಲ್ಲಾ' ಕೂಡಾ ಅಸ್ಪಷ್ಟತೆಯ ಪಟ್ಟಿಗೆ ಸೇರಿದೆ. ಮುನ್ಸಿಪಾಲಿಟಿ ದಾಖಲೆಯಂತೆ ಈ ಮನೆಯ ಜಾಗದಲ್ಲಿರುವ ಹಾಲಿ ಕಟ್ಟಡವು ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯ ಸ್ವಾಧೀನಕ್ಕೆ ಸೇರಿದೆ.

2008: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಭಾರಿ ಗಾಳಿಯಿಂದ ಕೂಡಿದ ಮಳೆ ಮುಂದುವರೆದು, ಬಾಗಲಕೋಟೆ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ತಲಾ ಇಬ್ಬರು, ಹಾವೇರಿ ಜಿಲ್ಲೆಯಲ್ಲಿ ಒಬ್ಬರು ಸೇರಿ ಐವರು ಮೃತರಾದರು.

2008: ರಾಜಸ್ಥಾನದಲ್ಲಿ ಹತ್ತು ದಿನಗಳ ಹಿಂದೆ ಪೊಲೀಸರ ಗೋಲಿಬಾರಿಗೆ ಸಾವನ್ನಪ್ಪಿದ ಹನ್ನೆರಡು ಮಂದಿಯ ಮೃತದೇಹವನ್ನು ತಮ್ಮ ಸಮುದಾಯ ಸೂಚಿಸಿದ ವೈದ್ಯರಿಂದ ಶವಪರೀಕ್ಷೆ ನಡೆಸಲು ಗುರ್ಜರ್ ಸಮುದಾಯ ಒಪ್ಪಿಗೆ ನೀಡಿತು. ಗುರ್ಜರ್ ಪ್ರತಿಭಟನೆಯ ನೇತೃತ್ವ ವಹಿಸಿರುವ 70 ವರ್ಷದ ಕಿರೋರಿ ಸಿಂಗ್ ಬೈನ್ ಸ್ಲಾ ಅವರು `ಶವಪರೀಕ್ಷೆ' ಕುರಿತು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದ ಷರತ್ತಿನ ಪ್ರಕಾರವೇ ದೇಹಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು. ರಾಜಸ್ಥಾನದಲ್ಲಿ ಪ್ರಸ್ತುತ ಗುರ್ಜರರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಇರುವಂತೆ ತಮ್ಮ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬುದು ಗುರ್ಜರರ ಪಟ್ಟು.

2008: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಜಪಾನಿನ ಬೃಹತ್ ವೈಜ್ಞಾನಿಕ ಪ್ರಯೋಗಾಲಯ ಮತ್ತು ಟಾಯ್ಲೆಟ್ ಪಂಪ್ ಒಂದನ್ನು ಅಳವಡಿಸುವ ಸಲುವಾಗಿ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಏಳು ಮಂದಿ ವ್ಯೋಮಯಾನಿಗಳನ್ನು ಹೊತ್ತ ಡಿಸ್ಕವರಿ ಗಗನನೌಕೆಯನ್ನು ಹಾರಿಬಿಡಲಾಯಿತು. 14 ದಿನಗಳ ಅವಧಿಯಲ್ಲಿ ವ್ಯೋಮಯಾನಿಗಳು `ಕಿಬೊ' ಹೆಸರಿನ ಒಂದು ಶತಕೋಟಿ ಡಾಲರ್ ಮೌಲ್ಯದ ಪ್ರಯೋಗಾಲಯವನ್ನು ಅಳವಡಿಸುವರು. 32 ಸಾವಿರ ಪೌಂಡ್ ತೂಕದ ಈ ಪ್ರಯೋಗಾಲಯವನ್ನು ಅಳವಡಿಸಿದಾಗ ನಿಲ್ದಾಣದ ಮೂರನೇ ಒಂದು ಭಾಗದ ನಿರ್ಮಾಣಪೂರ್ಣಗೊಂಡಂತಾಗುವುದು. ಪ್ರಯೋಗಾಲಯದ ಕೊನೆಯ ಭಾಗವನ್ನು ಮುಂದಿನ ವರ್ಷ ಜೋಡಿಸಲಾಗುವುದು. ಕಮಾಂಡರ್ ಮಾರ್ಕ್ ಕೆಲ್ಲಿ ಅವರು ಡಿಸ್ಕವರಿ ನೌಕೆಯ ನೇತೃತ್ವ ವಹಿಸಿದವರು.

2008: ಮಂಗಳೂರಿನ ಯುವ ಜಾದೂಗಾರ ಸಾಗರ್ ಅವರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಸಮುದ್ರದಂಡೆಯಲ್ಲಿ ಮೈ ಜುಮ್ಮೆನಿಸುವ `ಗ್ಲಾಸ್ ಸ್ಟಂಟ್' ಗಾಜಿನ ಸಾಹಸ ಪ್ರದರ್ಶನ ನಡೆಯಿತು. ಸಮುದ್ರದಲ್ಲಿ ನೀರು ಅಲೆ ಅಲೆಯಾಗಿ ದಂಡೆಯತ್ತ ಬರುತ್ತಿದ್ದರೆ, ಇತ್ತ ಸಮುದ್ರ ದಡದಲ್ಲಿ ಸಾಗರ್ ಗಾಜುಗಳ ಚೂರುಗಳ ಮೇಲೆ ಮಲಗಿ ವಿಶಿಷ್ಟ ಸಾಹಸದ ಸಂತಸದ ಅಲೆಯಲ್ಲಿ ತೇಲಿದರು. ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸುವ ವೇಳೆಗಾಗಲೇ ಬೀದಿ ಜಾದೂ ಮೂಲಕ ಜನಮನ ಗೆದ್ದ ಸಾಗರ್ ಸಾಗರದ ತಡಿಯಲ್ಲೇ ಸಾಹಸ ಮೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದರು. ಗಾಜಿನ ಜೂರುಗಳ ಹಾಸಿಗೆಯ ಮೇಲೆ ಮಲಗಿದ ಸಾಗರ್ ಅವರ ಮೇಲೆ ಮತ್ತಷ್ಟು ಗಾಜು ಚೂರುಗಳನ್ನು ಸುರಿಯಲಾಯಿತು. ಕೆಳಗೂ ಗಾಜು ಜೂರುಗಳು, ಮೇಲೂ ಗಾಜು ಚೂರುಗಳು. ಇಂಥ ಸನ್ನಿವೇಶದಲ್ಲಿ ಸತತ ಮೂರು ಗಂಟೆಗಳ ಕಾಲ ಮಲಗುವ ಮೂಲಕ ಸಾಗರ್ ಜನರಲ್ಲಿ ಅಚ್ಚರಿ ಮೂಡಿಸಿದರು. ಗಾಜಿನ ಚೂರುಗಳ ಮೇಲೆ ಕೆಲವು ಹೆಜ್ಜೆಗಳನ್ನು ಇಟ್ಟ ನಂತರ ಅವರು ಅದರ ಮೇಲೆಯೇ ಮಲಗಿದರು. ಸಾಗರ್ ತಾತ ಸದಾಶಿವ ಅಮೀನ್, ಸಾಗರ್ ಅವರ ತಾಯಿ ಸುನಿತಾ, ಅಕ್ಕ ಶಿಲ್ಪಾ ಹಾಗೂ ಸ್ನೇಹಿತರು ಸಾಗರ್ ಅವರ ಈ ವಿಶೇಷ ಸಾಹಸದ ಸಂತಸದಲ್ಲಿ ಭಾಗಿಯಾದರು.

2008: 2008ರ ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನದಿಂದ ಸಾರ್ವಜನಿಕ ಸ್ಥಳದಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಪ್ರಕಟಿಸಿದರು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮೇ 30 ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ-2008ನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು. ಪರಿಷ್ಕರಿಸಿದ ಕಾಯ್ದೆ ಪ್ರಕಾರ ಉದ್ಯೋಗ ಸ್ಥಳ, ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್, ಬೋರ್ಡಿಂಗ್ ಹೌಸ್, ಡಿಸ್ಕೊಥೆಕ್, ಔತಣ ಕೂಟ ನಡೆಯುವ ಸಭಾಂಗಣ, ಕ್ಯಾಂಟೀನ್, ಕಾಫಿ ಹೌಸ್, ಪಬ್, ಬಾರ್ ಹಾಗೂ ವಿಮಾನ ನಿಲ್ದಾಣದ ಮೊಗಸಾಲೆಗಳು `ಸಾರ್ವಜನಿಕ ಸ್ಥಳ' ವ್ಯಾಪ್ತಿಗೆ ಸೇರುತ್ತವೆ. ಕರಡು ನಿಯಮದ ಪ್ರಕಾರ ಇವುಗಳ ಮಾಲೀಕರು ತಮ್ಮ ಅಧೀನಕ್ಕೊಳಪಟ್ಟ ಪ್ರದೇಶದಲ್ಲಿ ಯಾರೂ ಧೂಮಪಾನ ಮಾಡದಂತೆ ನೋಡಿಕೊಳ್ಳಬೇಕು.

2008: ಆಂಧ್ರ ಪ್ರದೇಶದಲ್ಲಿ ಮೇ 29 ರಂದು ನಡೆದ ಲೋಕಸಭೆ ಹಾಗೂ ವಿಧಾನ ಸಭೆ ಉಪಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿಯು (ಟಿಆರ್ಎಸ್) ಹೀನಾಯ ಸೋಲು ಅನುಭವಿಸಿತು.

2008: ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದ ರಾಜಮನೆತನ ನಶಿಸಿ ಹೋಗಿ ಗಣರಾಜ್ಯವೆಂದು ಘೋಷಿಸಿಕೊಂಡ ಬಳಿಕ ನೇಪಾಳವು ತನ್ನ ಪ್ರಥಮ ದಿನವನ್ನು ಚಟುವಟಿಕೆಗಳಿಂದ ಕಳೆಯಿತು. ಆದರೆ ಅರಮನೆ ಸಿಬ್ಬಂದಿ ಮಾತ್ರ ಗೊಂದಲದಲ್ಲೇ ಇದ್ದರು. ರಾಜಮನೆತನವನ್ನು ಹತ್ತಿಕ್ಕುವ ಐತಿಹಾಸಿಕ ನಿರ್ಧಾರವನ್ನು ಸಂವಿಧಾನ ರಚನಾ ಸಭೆಯು ಕೈಗೊಂಡಿತ್ತು ಹಾಗೂ ದೊರೆ ಜ್ಞಾನೇಂದ್ರ ಅವರಿಗೆ ಅರಮನೆ ತೊರೆಯಲು 15 ದಿನಗಳ ಗಡುವು ನೀಡಿತ್ತು. ನೇಪಾಳವು ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಕುರುಹಾಗಿ ಮೂರು ದಿನಗಳ ರಾಷ್ಟ್ರೀಯ ರಜಾ ಘೋಷಿಸಲಾಗಿತ್ತು. ಭಾನುವಾರ ಕೂಡಾ ಎಲಾ ಸರ್ಕಾರಿ ಕಚೇರಿಗಳು, ಶಾಲೆಗಳು ತೆರೆದು ದೇಶದಲ್ಲಿ ಲವಲವಿಕೆ ಮೂಡಿದ ದೃಶ್ಯ ಕಂಡುಬಂತು. 2006ರಲ್ಲಿ ಮಾವೋವಾದಿಗಳನ್ನೊಳಗೊಂಡ ಮಾಜಿ ಬಂಡುಕೋರರ ಜತೆಗೆ ಆದ ಒಪ್ಪಂದದಂತೆ ಚುನಾವಣೆಯ ಬಳಿಕ ರಾಜಮನೆತನ ಪತನಗೊಳ್ಳುವುದು ಅನಿವಾರ್ಯವಾಗಿತ್ತು. ದೇಶದಲ್ಲಿ ಭುಗಿಲೆದ್ದಿದ್ದ ಅಶಾಂತಿ 13 ಸಾವಿರಕ್ಕೂ ಅಧಿಕ ಜನರನ್ನು ಬಲಿ ತೆಗೆದು ಕೊಂಡಿತ್ತು.

2008: ತಾನು ಬರೆದ ಪುಸ್ತಕವೊಂದರ ಪ್ರಚಾರದ ಸಲುವಾಗಿ 100 ದಶಲಕ್ಷ ರೂಪಿಯಾ (10,700 ಡಾಲರ್) ನೋಟುಗಳನ್ನು ವಿಮಾನದ ಮೂಲಕ ಹೊರ ಚೆಲ್ಲಿದ ವಿಲಕ್ಷಣ ಘಟನೆ ನಡೆಯಿತು. ಇಂಡೋನೇಷ್ಯದ ಉದ್ಯಮಿ ತಂಗ್ ದೆಸೆಮ್ ವರಿಂಗಿನ್ ಅವರು ತಮ್ಮ ಹೊಸ ಪುಸ್ತಕದ ಪ್ರಚಾರದ ಸಲುವಾಗಿ ಜಕಾರ್ತದಿಂದ 40 ಕಿ.ಮೀ. ಪಶ್ಚಿಮಕ್ಕೆ ಇರುವ ಸೆರಂಗ್ ಪ್ರದೇಶದಲ್ಲಿ ಫುಟ್ಬಾಲ್ ಮೈದಾನವೊಂದರ ಮೇಲ್ಭಾಗ ವಿಮಾನವೊಂದರಿಂದ 100 ದಶಲಕ್ಷ ರೂಪಿಯಾ ನೋಟುಗಳು ಮತ್ತು ಸೆಮಿನಾರ್ ಟಿಕೆಟುಗಳನ್ನು ಹೊರಕ್ಕೆ ಚೆಲ್ಲಿದರು.

2007: ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರು ರೈತರಲ್ಲ ಎಂದು ತೀರ್ಪು ನೀಡಿದ ಫೈಜಾಬಾದ್ ನ್ಯಾಯಾಲಯವೊಂದು ರೈತನೆಂದು ಘೋಷಿಸಿ ಬಾರಾಬಂಕಿಯಲ್ಲಿ ಖರೀದಿಸಿದ್ದ ಎರಡು ಎಕರೆ ಜಮೀನಿನ ಒಡೆತನಕ್ಕೆ ಅಮಿತಾಭ್ ಅವರು ಮಂಡಿಸಿದ್ದ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿತು.

2007: ನಟ ಸಂಜಯದತ್ ಅವರಿಗೆ ಎಕೆ-56 ರೈಫಲ್ ಪೂರೈಸಿದ್ದ ಸಮೀರ್ ಹೀಂಗೋರಾಗೆ ಟಾಡಾ ನ್ಯಾಯಾಲಯವು 8 ವರ್ಷಗಳ ಕಠಿಣ ಸಜೆ ವಿಧಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯವು ಹಿಂಗೋರಾಗೆ 2 ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತು.

2007: `ಆಶಾಪೂರ ಗೌಡ' ಎಂದೇ ಖ್ಯಾತರಾಗಿದ್ದ ಹಿರಿಯ ರಂಗಕರ್ಮಿ ಬಸವರಾಜ ಪಾಟೀಲ (60) ರಾಯಚೂರಿನಲ್ಲಿ ನಿಧನರಾದರು. ಕೃಷಿಕ, ರಂಗಭೂಮಿ ಕಲಾವಿದರಾಗಿದ್ದ ಬಸವರಾಜ ಪಾಟೀಲ ಅವರು ಸ್ಥಾಪಿಸಿದ ಶ್ರೀಸಂಗಮೇಶ್ವರ ನಾಟ್ಯಸಂಘ ಆಶಾಪೂರ' ಇಂದಿಗೂ ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.

2007: ಎನ್ ಸಿಪಿ ಖಜಾಂಚಿ ರಾಮ್ ಅವತಾರ್ ಜಗ್ಗಿ ಕೊಲೆ ಪ್ರಕರಣದ ಆರೋಪಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ರಾಯಪುರದ ವಿಶೇಷ ನ್ಯಾಯಾಲಯವು ಈದಿನ ಖುಲಾಸೆ ಗೊಳಿಸಿತು.

2007: ಭಾಷಾ ಮಾಧ್ಯಮ ನೀತಿ ಉಲ್ಲಂಘಿಸಿದ ಸುಮಾರು 400 ಶಾಲೆಗಳು ಸಕಾಲದಲ್ಲಿ ಪ್ರಮಾಣಪತ್ರ ಸಲ್ಲಿಸದ ಕಾರಣ ಅವುಗಳ ಮಾನ್ಯತೆ ರದ್ದು ಮಾಡುವ ಸರ್ಕಾರದ ನಿರ್ಧಾರಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿತು.

2006: ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿ ಧ್ವಂಸಗೊಳಿಸುವ ಉಗ್ರಗಾಮಿಗಳ ಸಂಚು ವಿಫಲಗೊಳಿಸಲಾಯಿತು. ಕಚೇರಿ ಮೇಲೆ ನುಗ್ಗಲು ಯತ್ನಿಸಿದ ಮೂವರು ಸಶಸ್ತ್ರ ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. ನಸುಕಿನ 4 ಗಂಟೆ ಸುಮಾರಿಗೆ ಸಬ್ ಇನ್ ಸ್ಪೆಕ್ಟರ್ ದಿರಿಸಿನಲ್ಲಿ ಕೆಂಪು ಗೂಟದ ಅಂಬಾಸಿಡರ್ ಕಾರಿನಲ್ಲಿ ಬಂದು ಉಗ್ರಗಾಮಿಗಳು ಪ್ರಧಾನ ಕಚೇರಿ ಬಳಿಯ ಅಡೆತಡೆ ಉಲ್ಲಂಘಿಸಲು ಯತ್ನಿಸಿದಾಗ ಚಕಮಕಿ ಹಾಗೂ ಗುಂಡಿನ ಘರ್ಷಣೆ ನಡೆದು, ಪೊಲೀಸರು ಕಾರಿನಲ್ಲಿದ್ದ ಮೂರೂ ಮಂದಿ ಉಗ್ರಗಾಮಿಗಳನ್ನು ಕೊಂದು ಹಾಕಿದರು.

2006: ರಾಜ್ಯಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಯಾಬಚ್ಚನ್ ಅವರು ತಮ್ಮ ಹೆಸರನ್ನು ಬಚ್ಚನ್ ಜಯಾ ಅಮಿತಾಭ್ ಎಂದು ಬದಲಾಯಿಸಿಕೊಂಡರು.

2001: ನೇಪಾಳದ ಕಠ್ಮಂಡುವಿನಲ್ಲಿ ದೊರೆ ಬೀರೇಂದ್ರ, ರಾಣಿ ಐಶ್ವರ್ಯ ಮತ್ತು ರಾಜಕುಟುಂಬದ 8 ಮಂದಿ ಸದಸ್ಯರನ್ನು ರಾಜಕುಮಾರ ದೀಪೇಂದ್ರ ಗುಂಡು ಹೊಡೆದು ಕೊಂದು ಹಾಕಿದ. ನಂತರ ತನಗೂ ಗುಂಡು ಹಾರಿಸಿಕೊಂಡ ದೀಪೇಂದ್ರ ಮೂರು ದಿನಗಳ ಬಳಿಕ ಮೃತನಾದ.

1975: ಕರಣಂ ಮಲ್ಲೇಶ್ವರಿ ಹುಟ್ಟಿದ ದಿನ. ಭಾರತದ ವೇಯ್ಟ್ ಲಿಫ್ಟರ್ ಆದ ಈಕೆ ಸಿಡ್ನಿಯಲ್ಲಿ 2000ದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967: ಕಲಾವಿದ ರವೀಂದ್ರ ಸೋರೆಗಾಂವಿ ಜನನ.

1951: ಕಲಾವಿದ ಬಸವರಾಜ ಹಿರೇಮಠ ಜನನ.

1951: ಕಲಾವಿದ ನೀರ್ನಳ್ಳಿ ಗಣಪತಿ ಜನನ.

1950: ಹೊನ್ನಾವರ ಕರ್ಕಿಕೋಡಿಯ ಕವಿ, ವಿಮರ್ಶಕ, ಜಾನಪದ ವಿದ್ವಾಂಸ ವಿ.ಗ. ನಾಯಕ್ ಅವರು ಗಣಪತಿ ನಾಯಕ್- ಸೀತಾದೇವಿ ದಂಪತಿಯ ಮಗನಾಗಿ ಜನಿಸಿದರು.

1939: ಕಲಾವಿದ ಎನ್.ವಿ. ಗೋಪೀನಾಥ ಜನನ.

1933: ಸಂವೇದನಾಶೀಲ ಪಾತ್ರಗಳಿಗೆ ತಮ್ಮದೇ ಆದ ವಿಶಿಷ್ಟ ರೂಪ ನೀಡಿ ನಟನೆಯಲ್ಲಿ ವಿಶೇಷ ಛಾಪು ಮೂಡಿಸಿಕೊಂಡ ಖ್ಯಾತ ನಟಿ ಯಮುನಾ ಮೂರ್ತಿ ಅವರು ಎಸ್.ಪಿ. ರಂಗರಾವ್- ಸಂಗೀತಗಾರ್ತಿ ವೆಂಕಟಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1926: ಅಮೆರಿಕದ ಖ್ಯಾತ ಚಿತ್ರನಟಿ ಮರ್ಲಿನ್ ಮನ್ರೋ ಹುಟ್ಟಿದ್ದು ಇದೇ ದಿನ.

1892: ಆಫ್ಘಾನಿಸ್ಥಾನದ ಆಡಳಿತಗಾರ ಅಮಾನೊಲ್ಲಾ ಖಾನ್ (1892-1960) ಜನ್ಮದಿನ. ಆಫ್ಘಾನಿಸ್ಥಾನವನ್ನು ಬ್ರಿಟಿಷರ ಪ್ರಭಾವದಿಂದ ಹೊರತಂದು ಪೂರ್ಣ ಸ್ವಾತಂತ್ರ್ಯದತ್ತ ಮುನ್ನಡೆಸಿದ ಆಡಳಿತಗಾರ ಈತ.

1889: ಚಾರ್ಸ್ ಕೆ. ಆಗ್ಡನ್ (1889-1957) ಜನ್ಮದಿನ. ಬ್ರಿಟಿಷ್ ಬರಹಗಾರ ಹಾಗೂ ಭಾಷಾ ತಜ್ಞನಾದ ಈತ ಇಂಗ್ಲಿಷ್ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಮಾಧ್ಯಮವಾಗಿ ಬಳಸಲು ಸಾಧ್ಯವಾಗುವಂತೆ ಸರಳಗೊಳಿಸಿದ. ಈತ ಸರಳಗೊಳಿಸಿದ ಏಕರೂಪದ ಇಂಗ್ಲಿಷ್ ಭಾಷೆಯೇ `ಮೂಲ ಇಂಗ್ಲಿಷ್' (ಬೇಸಿಕ್ ಇಂಗ್ಲಿಷ್) ಎಂದು ಪರಿಗಣಿತವಾಗಿದೆ.

No comments:

Advertisement