My Blog List

Tuesday, June 15, 2010

ಇಂದಿನ ಇತಿಹಾಸ History Today ಜೂನ್ 09

ಇಂದಿನ ಇತಿಹಾಸ

ಜೂನ್ 09

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ 'ಧ್ಯಾನ' ಒಂದು ಅತ್ಯುತ್ತಮ ಔಷಧವಾಗಲಿದೆ ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗ ಪಡಿಸಿತು. ಇಲಿನಾಯ್ ಈಶಾನ್ಯ ಮೆಮೋರಿಯಲ್ ಆಸ್ಪತ್ರೆ ಪ್ರಾಯೋಜಿತ  'ನಿದ್ರಾಹೀನತೆ ನಿವಾರಣೆ' ಕಾರ್ಯಕ್ರಮದ ನಿರ್ದೇಶಕಿ ಭಾರತೀಯ ಮೂಲದ ರಮಾದೇವಿ ಗೌರಿನೇನಿ ಅವರು ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದ 25 ಮತ್ತು 45 ವಯೋಮಾನದ ಹನ್ನೊಂದು ಮಂದಿಯನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದರು.

2009:  ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು 'ಬೆಂಗಳೂರು ಬೇಡ, ಬಫೆಲೊ ಬೇಕು' ಎನ್ನುವ ಮಂತ್ರ ಜಪಿಸಿದ್ದಕ್ಕೆ ಅಮೆರಿಕದಲ್ಲಿಯೇ ಅಪಸ್ವರ ವ್ಯಕ್ತವಾಯಿತು. ಭಾರತವೂ ಸೇರಿದಂತೆ ವಿದೇಶಗಳಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವ ಅಮೆರಿಕದ ಸಂಸ್ಥೆಗಳಿಗೆ ನೀಡುತ್ತಿರುವ ತೆರಿಗೆ ಉತ್ತೇಜನ ಕ್ರಮಗಳಿಗೆ ಕೊನೆ ಹಾಡುವ ಒಬಾಮ ಕ್ರಮದ ವಿರುದ್ಧ ಅಮೆರಿಕದ ಕಾರ್ಪೋರೇಟ್ ವಲಯ ಪ್ರಚಾರ ಅಭಿಯಾನ ಆರಂಭಿಸಿತು. ವಾಷಿಂಗ್ಟನ್ ಮೂಲದ ತಂತ್ರಜ್ಞಾನ ಮುಖ್ಯಸ್ಥರ (ಸಿಇಒ) ಮಂಡಳಿಯು ಬಿಡುಗಡೆ ಮಾಡಿರುವ ವರದಿಯಲ್ಲಿ, ಒಬಾಮ ಪ್ರಕಟಿಸಿದ ತೆರಿಗೆ ಉತ್ತೇಜನಾ ಕ್ರಮಗಳನ್ನು ರದ್ದುಪಡಿಸುವ ಕ್ರಮಗಳಿಂದ ಅಮೆರಿಕದಲ್ಲಿನ 22 ಲಕ್ಷ ಉದ್ಯೋಗ ಅವಕಾಶಗಳು ಇಲ್ಲದಂತಾಗಲಿವೆ ಎಂದು ಅಭಿಪ್ರಾಯ  ಪಡಲಾಯಿತು. 'ಬೆಂಗಳೂರು ಬೇಕು' ಎನ್ನುವುದೇ ಈ ವರದಿಯ ತಿರುಳು. ಒಬಾಮ ಜಪಿಸಿದ 'ಬೆಂಗಳೂರು ಬಿಡಿ ಬಫೆಲೊ ಬಯಸಿ' ನಿಲುವಿನಿಂದಾಗಿ ಅಮೆರಿಕದಲ್ಲಿ ಉದ್ದಿಮೆಗಳ ಸ್ಥಾಪನೆ, ಸಲಕರಣೆ ಖರೀದಿ ಮಾರಾಟ ಮತ್ತು ಆಸ್ತಿ ನಷ್ಟದ ಪ್ರಮಾಣವು 85 ಶತಕೋಟಿ ಡಾಲರ್‌ಗಳಷ್ಟು ಆಗಲಿದೆ ಎಂದೂ ವರದಿ ಅಂದಾಜು ಮಾಡಿತು.

2009: ಬಿದಿರು ಮತ್ತು ದಾಲ್ಚಿನ್ನಿ ಜಾತಿಗೆ ಸೇರಿದ ತಲಾ ಎರಡೆರಡು ಸಸ್ಯ ಪ್ರಬೇಧಗಳು ಮತ್ತು ಶುಂಠಿ ಜಾತಿಗೆ ಸೇರಿದ ಮೂರು ಪ್ರಬೇಧಗಳು ಸೇರಿದಂತೆ ದೇಶದಲ್ಲಿ ಒಟ್ಟು 167 ಬಗೆಯ ಹೊಸ ಸಸ್ಯಗಳನ್ನು 2008ರಲ್ಲಿ ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ನವದೆಹಲಿಯಲ್ಲಿ ಪ್ರಕಟಿಸಿದರು. ಬಟಾನಿಕಲ್ ಸರ್ವೆ ಆಫ್ ಇಂಡಿಯಾ ಹೊರತಂದಿರುವ 'ಸಸ್ಯ ಅನ್ವೇಷಣೆ 2008' ಪುಸ್ತಕದಲ್ಲಿ ಈ ಬಗ್ಗೆ ಮಾಹಿತಿಯಿದೆ. 137 ಬಗೆಯ ಸಸ್ಯಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿ ಇದ್ದರೆ, ಉಳಿದ 30 ಸಸ್ಯಗಳನ್ನು ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಬಿಎಸ್‌ಐ ನಿರ್ದೇಶಕ ಎಂ.ಸಂಜಪ್ಪ ತಿಳಿಸಿದರು. ಅಧ್ಯಯನವನ್ನು ಇನ್ನೂ ವಿಸ್ತಾರಗೊಳಿಸುವ ಉದ್ದೇಶದಿಂದ ದೇಶದ ವಿಜ್ಞಾನಿಗಳು ಮಾತ್ರವಲ್ಲದೇ ಟ್ಯಾಕ್ಸಾನಮಿ ತಜ್ಞರನ್ನು ಶೋಧನೆಗೆ ಆಹ್ವಾನಿಸಲಾಗಿತ್ತು ಹಿಮಾಲಯ, ಪಶ್ಚಿಮಘಟ್ಟ, ಮತ್ತು ಅಂಡಮಾನ್ ನಿಕೋಬಾರ್‌ಗಳಲ್ಲಿ ಭಾರತೀಯ ಸಸ್ಯ ಜಗತ್ತು ಹರಡಿಕೊಂಡಿದೆ. ಅನ್ವೇಷಣೆಯಿಂದ  ಸಸ್ಯಲೋಕದ ಸಾಮರ್ಥ್ಯ ತಿಳಿದುಬಂತು. ಹೊಸ ಬಿದಿರು ತಳಿ 'ಮುನ್ರೋಕ್ಲೋವಾ' ಪಶ್ಚಿಮ ಘಟ್ಟಗಳಲ್ಲಿ  ಪತ್ತೆಯಾಗಿದ್ದರೆ, 'ಕಲಾಮಸ್ ರೇಣುಕೆ' ಕೇರಳದ 'ಮೌನ ಕಣಿವೆ'ಯ ನಿತ್ಯಹರಿದ್ವರ್ಣ ಕಾಡಿನಲ್ಲಿ ಕಂಡುಬಂದಿದೆ. ಗಡ್ಡೆ ಜಾತಿಗೆ ಸೇರಿದ 'ಅಕೋನಿಟಮ್ ಬಟಾನಿಕಮ್' ಹಿಮಾಚಲ ಪ್ರದೇಶದ ಪಿನ್ ವ್ಯಾಲಿಯಲ್ಲಿ ಪ್ರಥಮ ಬಾರಿಗೆ ಗೋಚರಿಸಿದೆ. ಚೀನಾ, ಶ್ರೀಲಂಕಾ, ಮ್ಯಾನ್ಮಾರಿಗೆ ಸೇರಿದ ವಿವಿಧ ಸಸ್ಯಗಳು ಕೂಡ ಹಿಮಾಚಲ ಪ್ರದೇಶದಲ್ಲಿ ಕಂಡುಬಂದಿವೆ. ವಿಶ್ವದ ಸಸ್ಯ ಸಂಪತ್ತಿನಲ್ಲಿ ಶೇ 11ರಷ್ಟು ಭಾಗ ಭಾರತದಲ್ಲಿದೆ. ಭಾರತದಲ್ಲಿ ಆಂಜಿಯೋಸ್ಪರ್ಮ್ ಪ್ರಬೇಧಕ್ಕೆ ಸೇರಿದ 45,968 ಸಸ್ಯಗಳಿವೆ ಎಂದರು ಸಂಜಪ್ಪ.

2009: ಅಟ್ಲಾಂಟಿಕ್ ಸಾಗರಕ್ಕೆ ಬಿದ್ದ ಏರ್ ಫ್ರಾನ್ಸ್ ವಿಮಾನದ ಬಾಲದಲ್ಲಿದ್ದ (ಹಿಂಭಾಗ) ಲಂಬಾಕೃತ ಸ್ಟೆಬಿಲೈಜರನ್ನು ರಕ್ಷಣಾ ತಂಡ ಪತ್ತೆ ಹಚ್ಚಿತು. ಇದು ಬ್ಲ್ಯಾಕ್ ಬಾಕ್ಸ್ ಹುಡುಕಲು ಮತ್ತು ಜೆಟ್ ವಿಮಾನ ಹೇಗೆ ಅಪಘಾತಕ್ಕೀಡಾಯಿತು ಎಂಬುದನ್ನು ತಿಳಿಯಲು ನೆರವಾಗುತ್ತದೆ ಎಂದು ಬ್ರೆಜಿಲ್ ನೌಕಾ ಮತ್ತು ವಾಯುಪಡೆ ತಿಳಿಸಿತು. ಈದಿನ ಎಂಟು ಮೃತದೇಹ ಪತ್ತೆಯಾಗುವುದರೊಂದಿಗೆ ಒಟ್ಟು 24 ಮೃತದೇಹಗಳನ್ನು ಹೊರತೆಗೆಯಲಾಯಿತು.

2009: 2008ರಲ್ಲಿ ಕಂಧಮಲ್‌ನಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ದಂಪತಿ ತಮ್ಮ ಎರಡೂವರೆ ವರ್ಷದ ಪುತ್ರಿಯ ಉತ್ತಮ ಭವಿಷ್ಯಕ್ಕಾಗಿ ಪೊಲೀಸರಿಗೆ ಶರಣಾದರು. ನಿಷೇಧಿತ ಸಿಪಿಐ ಮಾವೋ ಸಂಘಟನೆಯ ಬನಸಾಧರ ವಿಭಾಗದ ಸ್ಥಾಪಕ ಸದಸ್ಯರಾದ ಘಾಸಿರಾಂ ಮುಜ್ಹಿ ಅಲಿಯಾಸ್ ಆಕಾಶ್ ಹಾಗೂ ಈತನ ಪತ್ನಿ ಜಾರನಾ ರಾಯಗಡ ಜಿಲ್ಲೆಯಲ್ಲಿ ಶರಣಾದರು ಎಂದು ಪೊಲೀಸರು ತಿಳಿಸಿದರು.

2009:  ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ 'ಧ್ಯಾನ' ಒಂದು ಅತ್ಯುತ್ತಮ ಔಷಧವಾಗಲಿದೆ ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗ ಪಡಿಸಿತು. ಇಲಿನಾಯ್ ಈಶಾನ್ಯ ಮೆಮೋರಿಯಲ್ ಆಸ್ಪತ್ರೆ ಪ್ರಾಯೋಜಿತ  'ನಿದ್ರಾಹೀನತೆ ನಿವಾರಣೆ' ಕಾರ್ಯಕ್ರಮದ ನಿರ್ದೇಶಕಿ ಭಾರತೀಯ ಮೂಲದ ರಮಾದೇವಿ ಗೌರಿನೇನಿ ಅವರು ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದ 25 ಮತ್ತು 45 ವಯೋಮಾನದ ಹನ್ನೊಂದು ಮಂದಿಯನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಹನ್ನೊಂದು ಮಂದಿಯನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಮಾಹಿತಿ ಸಂಗ್ರಹಿಸಲಾಗಿತ್ತು. ಮೊದಲ ಗುಂಪನ್ನು ಕ್ರಿಯಾ ಯೋಗಕ್ಕೆ (ಧ್ಯಾನ) ಅಳವಡಿಸಲಾಗಿತ್ತು. ಆಂತರಿಕ ಗಮನದ ಮೇಲೆ ಕೇಂದ್ರೀಕರಿಸಿ ಮನಸ್ಸಿನ ಒತ್ತಡವನ್ನು ಕಡಿತಗೊಳಿಸುವ ಪ್ರಯತ್ನ ಮಾಡಲಾಯಿತು. ಇನ್ನೊಂದು ಗುಂಪಿಗೆ ಆರೋಗ್ಯ ಶಿಕ್ಷಣ ನೀಡಲಾಯಿತು. ಈ ವಿಭಾಗದಲ್ಲಿ ತಮ್ಮ ಆರೋಗ್ಯವನ್ನು ವ್ಯಾಯಾಮದ ಮೂಲಕ ಹೇಗೆ ಸರಿಪಡಿಸಿಕೊಳ್ಳಬೇಕು, ದೇಹದ ತೂಕ ಇಳಿಸಿಕೊಳ್ಳುವುದು, ಒತ್ತಡ ನಿರ್ವಹಣೆ ಮಾಡಿಕೊಳ್ಳಬಹುದು ಎಂಬ ಕುರಿತು ಮಾಹಿತಿ ನೀಡಲಾಯಿತು. ಪ್ರಯೋಗದ ನಂತರ ಎರಡೂ ವಿಭಾಗಗಳಲ್ಲಿನ ವ್ಯಕ್ತಿಗಳಲ್ಲಿ ಉಂಟಾದ ಪರಿಣಾಮಗಳನ್ನು ದಾಖಲಿಸಲಾಯಿತು. ಕೆಲವು ಮಾನದಂಡಗಳ ಪ್ರಕಾರ (ನಿದ್ರೆ ಮಾಡುವ ಸಮಯ, ಎಚ್ಚರವಾಗುವ ಸಮಯ ಹಾಗೂ ಸಾಮರ್ಥ್ಯ) ಪರಾಮರ್ಶಿಸಿದಾಗ ಕ್ರಿಯಾ ಯೋಗಕ್ಕೆ ಒಳಪಟ್ಟ ಗುಂಪಿನವರಲ್ಲಿ ನಿದ್ರಾ ಸಾಮರ್ಥ್ಯ ಹಾಗೂ ಗುಣಮಟ್ಟ ಸುಧಾರಣೆಯಾಗಿರುವುದು ಕಂಡುಬಂದಿತು. ಎಂದು ಆಂಧ್ರಪ್ರದೇಶದ ಕರ್ನೂಲ್ ಮೆಡಿಕಲ್ ಕಾಲೇಜಿನಲ್ಲಿ ಓದಿ ಅಮೆರಿಕಾದಲ್ಲಿ ನೆಲೆಸಿರುವ ಡಾ.ರಮಾದೇವಿ ಗೌರಿನೇನಿ ತಿಳಿಸಿದರು.

2009: ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಪ್ರವಾಸ ಹೊರಟ್ದಿದ ಕನಿಷ್ಠ ಹತ್ತು ಭಾರತೀಯ ಯಾತ್ರಾತ್ರಿಗಳು ಮೃತರಾದರು.

2009: ಉಭಯಗಾನ ವಿಶಾರದ, ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾಗಿದ್ದ ಸೊರಬ ಪಟ್ಟಣದ ಪಂಡಿತ್ ಬಿ. ನಾರಾಯಣಪ್ಪ (78) ಹೃದಯಾಘಾತದಿಂದ ನಿಧನರಾದರು. ಗಾನ ವಿಶಾರದ ಗುರುಶಾಂತ ಗವಾಯಿಗಳಿಂದ ಸಂಗೀತ ಕಲಿತಿದ್ದ  ನಾರಾಯಣಪ್ಪ ಬಹುಮುಖ ಪ್ರತಿಭೆಯ ವ್ಯಕ್ತಿ. ಗಿಟಾರ್, ವಯೋಲಿನ್, ವಿಚಿತ್ರ ವೀಣೆ, ತಬಲಾ, ಹಾರ್ಮೋನಿಯಂ ಹಾಗೂ ಜಲತರಂಗ ವಾದನದಲ್ಲೂ ಪರಿಣತರಾಗಿದ್ದರು. ಕಲಿತದ್ದು ಕೇವಲ 10ನೇ ತರಗತಿಯಾದರೂ, ರಾಜ್ಯಾದ್ಯಂತ ನೂರಾರು ಕಾರ್ಯಕ್ರಮ ನೀಡಿದ್ದರು. ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯಿಂದ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಒಳಗೊಂಡಂತೆ ಸಂಗೀತ ಸುಧಾಕರ, ಗಾನ ಕೋಗಿಲೆ, ಗಾನ ವಿಶಾರದ, ಸಂಗೀತ ಕಲಾನಿಧಿ ಮೊದಲಾದ ಬಿರುದುಗಳನ್ನು ಪಡೆದಿದ್ದರು. ಸೊರಬ ಸಂಗೀತ ಸೇವಾ ಸಮಿತಿಯ ಸ್ಥಾಪಕರೂ ಆಗಿದ್ದ ಅವರು, 1964ರಿಂದ ಪ್ರತಿವರ್ಷ ಪಟ್ಟಣದಲ್ಲಿ ಗುರುವಿನ ಸ್ಮರಣಾರ್ಥ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿದ್ದರು. 2006ರಲ್ಲಿ ತಮ್ಮ ಮನೆಯಲ್ಲಿಯೇ 'ನಾದ ನಿಧಿ' ಸಂಸ್ಥೆ ಸ್ಥಾಪಿಸಿ ಉಚಿತ ಗಾಯನ, ವಾದನ ತರಬೇತಿ ಆರಂಭಿಸಿದ್ದರು. ಅಪೂರ್ವ ಸಂಗೀತ ವಾದ್ಯ, ಗ್ರಂಥಗಳನ್ನು ಸಂಗ್ರಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು..

2009: ಉತ್ತರ ಶ್ರೀಲಂಕಾದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರ ಶಿಬಿರದಲ್ಲಿ ನೆಲೆಸಿದ ತಮಿಳರು ಹಾಗೂ ಮುಸ್ಲಿಮ್ ನಾಗರಿಕರಿಗೆ ಆಗಸ್ಟಿನಲ್ಲಿ ಜಾಫ್ನಾ ಹಾಗೂ ವಾವುನಿಯಾದಲ್ಲಿ ನಡೆಯುವ ಸ್ಥಳೀಯ ಚುನಾವಣೆಗಳಲ್ಲಿ ಮತದಾನ ಮಾಡಲು ಶ್ರೀಲಂಕಾ ಸರ್ಕಾರ ಅವಕಾಶ ನೀಡಿತು. ಮೂರು ದಶಕಗಳ ಎಲ್‌ಟಿಟಿಇ ಹಾಗೂ ಲಂಕಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸ್ಥಳಾಂತರಗೊಂಡಿದ್ದ ನಾಗರಿಕರು ಈ ಬಾರಿ ನಡೆಯುವ ಸ್ಥಳೀಯ ಚುನಾವಣೆಗಳಲ್ಲಿ ಮತಚಲಾಯಿಸುವ ಹಕ್ಕನ್ನು ಪಡೆದರು. ಈ ಮೊದಲು ಇವರಿಗೆ ಸಂಸತ್ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು ಮಾತ್ರ ನೀಡಲಾಗಿತ್ತು.

2009: ಕಡಿಮೆ ವೆಚ್ಚದ ಶೌಚಾಲಯ ತಂತ್ರಜ್ಞಾನವನ್ನು ಜನಪ್ರಿಯಗೊಳಿಸಿದ ಭಾರತದ ಮೂಲದ 'ಸುಲಭ್ ಇಂಟರ್ನ್ಯಾಷನಲ್' ಸಂಸ್ಥೆಯನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ನವೀಕರಿಸುವ ಇಂಧನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. 'ಅಂತರ್‌ಸರ್ಕಾರಿ ನವೀಕರಿಸುವ ಇಂಧನ ಸಂಸ್ಥೆ (ಐಆರ್‌ಇಒ)'ಯು ಇಲ್ಲಿನ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 'ಸುಲಭ್ ಇಂಟರ್‌ನ್ಯಾಷನಲ್' ಸಂಸ್ಥೆಯ ಅಧ್ಯಕ್ಷ ಡಾ.ಬಿಂದೇಶ್ವರ ಪಾಠಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದು. ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂಲಕ ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ನೈರ್ಮಲ್ಯ ಸುಧಾರಣೆಗೆ ಒತ್ತು ನೀಡಿದ್ದಕ್ಕಾಗಿ ಪಾಠಕ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು 'ಐಆರ್‌ಇಒ'ದ ಪ್ರಧಾನ ಕಾರ್ಯದರ್ಶಿ ರಾಬಿನ್‌ ಸನ್ ಮೆಲೊ ಅವರು ಹೇಳಿದರು. ಪಾಠಕ್ ಅವರ ತಂಡ ಎರಡು ಗುಂಡಿಗಳಲ್ಲಿ  ಶೌಚಾಲಯದ ಮಾನವ ತ್ಯಾಜ್ಯವನ್ನು ಸಂಗ್ರಹಿಸಿ ಅದರಿಂದ ಬಯೋಗ್ಯಾಸ್ ಉತ್ಪಾದಿಸುವ ಕಡಿಮೆ ವೆಚ್ಚದ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿತ್ತು. ಆರೋಗ್ಯಕ್ಕೆ ಮಾರಕವಾದ 'ಮಾನವ ತಾಜ್ಯ'ವನ್ನು ಬಳಸಿ ಬಯೋ ಗ್ಯಾಸ್ ಉತ್ಪಾದಿಸುವ ತಂತ್ರಜ್ಞಾನ ನೈರ್ಮಲ್ಯದ ಕ್ಷೇತ್ರದಲ್ಲಿನ ಪ್ರಮುಖ ಹೆಜ್ಜೆ ಎಂದು ಗುರುತಿಸಲಾಯಿತು.

2009: ನೈಋತ್ಯ ಪಾಕಿಸ್ಥಾನದ ಪೇಷಾವರದ ಜನಪ್ರಿಯ ಫೈವ್ ಸ್ಟಾರ್ ಹೋಟೆಲಿನ ಕುಸಿದ ಕಟ್ಟಡದ ವಸ್ತುಗಳ ಅಡಿಯಲ್ಲಿ ಸಿಲುಕಿದ್ದ  ಐದು ಶವಗಳು  ಪತ್ತೆಯಾಗುವುದರೊಂದಿಗೆ ಹೋಟೆಲಿನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸತ್ತವರ ಒಟ್ಟು ಸಂಖ್ಯೆ 16ಕ್ಕೆ ಏರಿತು.

2008: ಬ್ಯಾಂಕಾಕಿನಲ್ಲಿ ಹಿಂದಿನ ರಾತ್ರಿ ನಡೆದ ಒಂಬತ್ತನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟಿಸಿರುವ `ಚಕ್ ದೆ ಇಂಡಿಯಾ' ಚಿತ್ರ 9 ಪ್ರಶಸ್ತಿಗಳನ್ನು ಬಾಚಿಕೊಂಡಿತು. ಧರ್ಮ ಮತ್ತು ವರ್ಗ ಸಂಘರ್ಷದ ಕಥಾವಸ್ತುವನ್ನು ಹೊಂದಿದ ಕ್ರೀಡಾಚಿತ್ರದಲ್ಲಿ ಹಾಕಿ ತರಬೇತುದಾರನ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಶಾರುಖ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರನ್ನು ಮರಳಿ ಭೂಮಿಗೆ ಕರೆತರುವ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಗಗನಕ್ಕೆ ನೆಗೆಯಿತು. ಇದರೊಂದಿಗೆ ಆರು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣವಾಸಿಯಾದ ಸುನೀತಾ ವಿಲಿಯಮ್ಸ್ ಮತ್ತು ಇತರ ಗಗನಯಾನಿಗಳ ಮರುಪಯಣಕ್ಕೆ ದಿನಗಣನೆ ಆರಂಭವಾಯಿತು.

2007: ವಿಮಾನ ಪ್ರಯಾಣದ ಕಾಲದಲ್ಲಿ ಸಸ್ಯಾಹಾರದ ಬದಲು ಮಾಂಸಾಹಾರ (ಕೋಳಿಮಾಂಸ) ನೀಡಿ ಮಾನಸಿಕ ಯಾತನೆ, ಆಘಾತ ಮತ್ತು ಖಿನ್ನತೆಗೆ ಒಳಗಾಗುವಂತೆ ಮಾಡಿದ್ದಕ್ಕಾಗಿ ಬ್ರಾಹ್ಮಣ ಪ್ರಯಾಣಿಕ ಅರವಿಂದ ಶರ್ಮಾ ಅವರಿಗೆ 20 ಸಾವಿರ ರಿಂಗಿಟ್ (ಸುಮಾರು 2.35 ಲಕ್ಷ ರೂಪಾಯಿ) ಪರಿಹಾರ ನೀಡುವಂತೆ ಕ್ವಾಲಾಲಂಪುರದ ನ್ಯಾಯಾಲಯವು ಮಲೇಷಿಯಾ ಏರ್ ಲೈನ್ಸ್ ಕಂಪೆನಿಗೆ ಆದೇಶ ನೀಡಿತು.

2007: ಬುದ್ಧ ಜಯಂತಿ ಅಂಗವಾಗಿ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ `ಬುದ್ಧನೆಡೆಗೆ ಮರಳಿ ಮನೆಗೆ' ಧಮ್ಮ ದೀಕ್ಷಾ ಸಮಾವೇಶದಲ್ಲಿ ಸಹಸ್ರಾರು ದಲಿತರು ಬೌದ್ಧ ಧರ್ಮ ಸ್ವೀಕರಿಸಿದರು.

2007: ಬೊಪೋರ್ಸ್ ಫಿರಂಗಿ ಖರೀದಿ ವಹಿವಾಟಿನಲ್ಲಿ ಬಹುಕೋಟಿ ಲಂಚ ಪಡೆದ ಆರೋಪಕ್ಕೆ ಒಳಗಾದ ಇಟಲಿ ವ್ಯಾಪಾರಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅರ್ಜೆಂಟೀನಾದ ಎಲ್ವೊರಡೊ ನ್ಯಾಯಾಲಯ ನಿರಾಕರಿಸಿತು.

2007 ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟ್ ಟೆಸ್ಟ್ ಆಟಗಾರ ಮಣಿಂದರ್ ಸಿಂಗ್ ಅವರು ಎರಡೂ ಕೈಗಳ ಮಣಿಕಟ್ಟುಗಳನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ಘಟಿಸಿತು. 1.5 ಗ್ರಾಂ ಕೊಕೇನ್ ಹೊಂದಿದ್ದ ಆರೋಪದಲ್ಲಿ ಅವರನ್ನು ಮಾದಕ ವಸ್ತು ವಿರೋಧಿ ಪೊಲೀಸರು ಮೇ 22ರಂದು ಬಂಧಿಸಿದ್ದರು.

2007: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಬಾನಾ ಆಜ್ಮಿ ಹಾಗೂ ಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರಿಗೆ ಯಾರ್ಕ್ ಶೈರಿನ ಲೀಡ್ಸ್ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

2007: ಗಣ್ಯ ಸಂಸ್ಕೃತ ವಿದ್ವಾಂಸರಲ್ಲಿ ಒಬ್ಬರಾದ ಮೈಸೂರಿನ ಜಿ.ಎನ್. ಚಕ್ರವರ್ತಿ ಅವರನ್ನು 2006-07ನೇ ಸಾಲಿನ ಸೇಡಿಯಾಪು ಕೃಷ್ಣಭಟ್ಟ ಸ್ಮಾರಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣಭಟ್ಟ ಉಡುಪಿಯಲ್ಲಿ ಪ್ರಕಟಿಸಿದರು.

2006: ಅಸ್ವಸ್ಥರಾಗಿ ಬೆಂಗಳೂರಿನ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಜನಪದ ಕಲಾವಿದ ಡಾ. ಎಸ್.ಕೆ. ಕರೀಂಖಾನ್ (84) ಅವರಿಗೆ ಬೆಂಗಳೂರಿನ ಮೇಯರ್ ಮಮ್ತಾಜ್ ಬೇಗಂ ಅವರು ಆಸ್ಪತ್ರೆಯಲ್ಲೇ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.

2006: ಜರ್ಮನಿಯ ಮ್ಯೂನಿಕ್ಕಿನಲ್ಲಿ ಸಾಂಪ್ರದಾಯಿಕ ವಾದ್ಯ, ಜನಪದ ಹಾಡು ಮತ್ತು ನೃತ್ಯಗಳ ಮನಸೂರೆಗೊಳ್ಳುವ ಸಂಭ್ರಮದ ನಡುವೆ 18ನೇ ಫುಟ್ಬಾಲ್ ವಿಶ್ವಕಪ್ ಆರಂಭವಾಯಿತು. 32 ದೇಶಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡವು.

2006: ಐಜೆಟಿ ವಿಮಾನ ಅತಿ ಹೆಚ್ಚಿನ ಉಷ್ಣಾಂಶದಲ್ಲಿ ಸುಸೂತ್ರವಾಗಿ ಹಾರಾಟ ನಡೆಸುವ ಮೂಲಕ ವಿಮಾನಯಾನ ದಾಖಲೆ ನಿರ್ಮಾಣ ಮಾಡಿತು. ಎಚ್.ಎ.ಎಲ್. ತಯಾರಿಸಿರುವ ಎರಡು ಮಾದರಿಯ ಈ  ವಿಮಾನಗಳು ಎಲ್ಲ ವಾತಾವರಣದಲ್ಲೂ ಪರೀಕ್ಷಾರ್ಥ ಹಾರಾಟ ನಡೆಸಿ ಮನ್ನಣೆ ಪಡೆದವು. ನಾಗಪುರದಲ್ಲಿ ಈ ವಿಮಾನಗಳನ್ನು ಮೂರು ಗಂಟೆ ಕಾಲ 13 ರೀತಿಯ ಪರೀಕ್ಷೆಗೆ ಒಳಪಡಿಸಲಾಯಿತು. 2003ರಲ್ಲಿ ಹಾರಾಟ ಆರಂಭಿಸಿದ ಐಜೆಟಿ 2008ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆ ಆಗಲಿದೆ.

2001: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಿಗೆ ಮೂರು ವರ್ಷದ ಸೆರೆವಾಸ ಶಿಕ್ಷೆ ವಿಧಿಸಿತು.

1982: ಹಠಾತ್ತನೆ ಬಂದ ಭಾರಿ ಮಳೆಯಿಂದಾಗಿ ಉಡುಪಿಯ ತಗ್ಗು ಪ್ರದೇಶಗಳಲ್ಲಿ ಜಲ ಪ್ರಳಯವಾಗಿ ನೂರಾರು ಮನೆಗಳು ಕುಸಿದು 15 ಜನ ಮೃತರಾದರು.

1959: ಅಣ್ವಸ್ತ್ರ ಹೊತ್ತ ಅಮೆರಿಕದ ಮೊತ್ತ ಮೊದಲ ಪೋಲಾರಿಸ್ ಜಲಾಂತರ್ಗಾಮಿಯು ಜಾರ್ಜ್ ವಾಷಿಂಗ್ಟನ್ ನೌಕಾಪಡೆಗೆ ಸೇರ್ಪಡೆಯಾಯಿತು.

1954: ಸಾಹಿತಿ ರೇಖಾ ಕಾಕಂಡಕಿ ಜನನ.

1954: ಶಾಂತಾ ಇಮ್ರಾಪುರ ಜನನ.

1950: ಸಾಹಿತಿ ಅರುಂಧತಿ ರಮೇಶ್ ಜನನ.

1950: ವೃತ್ತಿ ರಂಗಭೂಮಿಯಿಂದ ಟಿ.ವಿ. ಧಾರಾವಾಹಿಯವರೆಗೆ ಅಭಿನಯದಲ್ಲಿ ವಿಶಿಷ್ಟ ಸಾಧನೆ ಮಾಡಿದ ಬಿ. ಜಯಶ್ರೀ ಅವರು ಬಸವರಾಜ್ - ಜಿ.ವಿ. ಮಾಲತಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1949: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತೆ ಕಿರಣ್ ಬೇಡಿ ಜನ್ಮದಿನ. ಭಾರತೀಯ ಪೊಲೀಸ್ ಸೇವೆಯನ್ನು ಸೇರಿದ ಮೊತ್ತ ಮೊದಲ ಮಹಿಳೆ ಈಕೆ.

1946: ಸಿಯಾಮಿನ ಚಕ್ರಿ ರಾಜವಂಶದ ದೊರೆ `8ನೇ ರಾಮ' ಎಂದೇ ಖ್ಯಾತರಾದ ಆನಂದ ಮಹಿದೋಲ್ (1925-46) ತಮ್ಮ ಹಾಸಿಗೆಯಲ್ಲಿ ಗುಂಡೇಟಿನಿಂದ ಮೃತರಾಗಿ ಬಿದ್ದಿದ್ದುದು ಪತ್ತೆಯಾಯಿತು. ಅವರ ನಿಗೂಢ ಮರಣಕ್ಕೆ ಕಾರಣ ಏನೆಂಬುದು ಪತ್ತೆಯಾಗಲೇ ಇಲ್ಲ. ಈ ಕೊಲೆಯ ವಿವಾದ ಥೈಲ್ಯಾಂಡಿನ  ಸಾಂವಿಧಾನಿಕ ಸರ್ಕಾರವನ್ನು ದುರ್ಬಲಗೊಳಿಸಿ, ಸೇನಾ ಆಡಳಿತದ ಪುನರಾಗಮನಕ್ಕೆ ನೆರವಾಯಿತು.

1942: ಸಾಹಿತಿ ಕೆ.ಎನ್. ಭಗವಾನ್ ಜನನ.

1938: ಸಾಹಿತಿ ಗುರುಮೂರ್ತಿ ಪೆಂಡಕೂರು ಅವರು ವಿರೂಪಣ್ಣ- ರಾಮಕ್ಕ ದಂಪತಿಯ ಪುತ್ರನಾಗಿ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯದ ಮುಳುಗಡೆಯಾದ ದೇವರ ಕೆರೆಯಲ್ಲಿ ಜನಿಸಿದರು.

1936: ಸಾಹಿತಿ ಎಸ್. ಕೆ. ಜೋಶಿ ಜನನ.

1934: ವಾಲ್ಟ್ ಡಿಸ್ನಿ ಅವರ `ದಿ ವೈಸ್ ಲಿಟ್ಲ್ ಹೆನ್' ನಲ್ಲಿ `ಡೊನಾಲ್ಡ್ ಡಕ್' ಜನ್ಮ ತಳೆಯಿತು.

1931: ನಂದಿನಿ ಸತ್ಪತಿ ಜನ್ಮದಿನ. ಇವರು ರಾಜಕಾರಣಿ ಹಾಗೂ ಒರಿಸ್ಸಾದ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ.

1898: ಬ್ರಿಟನ್ ಚೀನಾದಿಂದ ಹಾಂಕಾಂಗನ್ನು 99 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆಯಿತು. 1997ರಲ್ಲಿ ಅದನ್ನು ಚೀನಾಕ್ಕೆ ಹಿಂದಿರುಗಿಸಲಾಯಿತು.

1812: ಜೊಹಾನ್ ಗೊಟ್ ಫ್ರೀಡ್ ಗ್ಯಾಲೆ (1812-1910) ಜನ್ಮದಿನ. ಜರ್ಮನ್ ಖಗೋಳ ತಜ್ಞನಾದ ಈತ  ನೆಪ್ಚೂನ್ ಗ್ರಹವನ್ನು ಮೊತ್ತ ಮೊದಲಿಗೆ ಪತ್ತೆ ಹಚ್ಚಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement