ಗ್ರಾಹಕರ ಸುಖ-ದುಃಖ

My Blog List

Monday, June 14, 2010

ಇಂದಿನ ಇತಿಹಾಸ History Today ಜೂನ್ 08

ಇಂದಿನ ಇತಿಹಾಸ

ಜೂನ್ 08
ಲೋಕಸಭೆಯ ಉಪ ಸಭಾಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸಂಸದ, ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ನಾಯಕ ಕರಿಯಾ ಮುಂಡಾ ಅವಿರೋಧವಾಗಿ ಆಯ್ಕೆಯಾದರು. ಏಳನೇ ಬಾರಿಗೆ ಸಂಸತ್ ಸದಸ್ಯರಾಗಿರುವ 72 ವರ್ಷದ ಮುಂಡಾ ಅವರ ಹೆಸರನ್ನು ಉಪ ಸಭಾಧ್ಯಕ್ಷ ಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಸೂಚಿಸಿದರು.

2009:  ಲೋಕಸಭೆಯ ಉಪ ಸಭಾಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸಂಸದ, ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ನಾಯಕ ಕರಿಯಾ ಮುಂಡಾ ಅವಿರೋಧವಾಗಿ ಆಯ್ಕೆಯಾದರು. ಏಳನೇ ಬಾರಿಗೆ ಸಂಸತ್ ಸದಸ್ಯರಾಗಿರುವ 72 ವರ್ಷದ ಮುಂಡಾ ಅವರ ಹೆಸರನ್ನು ಉಪ ಸಭಾಧ್ಯಕ್ಷ ಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಸೂಚಿಸಿದರು. ಇದನ್ನು ರಾಜನಾಥ್ ಸಿಂಗ್ ಅನುಮೋದಿಸಿದರು. ನಂತರ ಅವರನ್ನು ಧ್ವನಿಮತದ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2009: ಪ್ರಖ್ಯಾತ ನಾಟಕ ರಚನಾಕಾರ ಹಾಗೂ ರಂಗಭೂಮಿ ನಿರ್ದೇಶಕ ಹಬೀಬ್ ನ್ವೀರ್ (85) ಭೋಪಾಲ್‌ನಲ್ಲಿ ನಿಧನರಾದರು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಇಲ್ಲಿನ ನ್ಯಾಷನಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. 1923ರ ಸೆಪ್ಟೆಂಬರ್ 1ರಂದು ರಾಜ್‌ಪುರದಲ್ಲಿ ಜನಿಸಿದ್ದ ಹಬೀಬ್ ಮೊದಲಿಗೆ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ದೇಶದ ಪ್ರಖ್ಯಾತ ನಾಟಕ ರಚನಾಕಾರನಾಗಿ ಹಾಗೂ ರಂಗಭೂಮಿ ನಿರ್ದೇಶಕನಾಗಿ ಅಪಾರ ಖ್ಯಾತಿ, ಜನಮನ್ನಣೆ ಗಳಿಸಿದ್ದರು. ಹಬೀಬ್ ಅವರ ಆಗ್ರಾ ಬಜಾರ್, ಚರಣ್‌ದಾಸ್ ಚೋರ್ ಅತ್ಯಂತ ಜನಪ್ರಿಯ ಹಾಗೂ ಉತೃಷ್ಟ ನಾಟಕಗಳಾಗಿವೆ. ಹಲವಾರು ಸಿನಿಮಾಗಳಿಗೆ ಕಥೆ, ಸಂಭಾಷಣೆ ಬರೆದಿದ್ದ ಇವರು ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. 1959ರಲ್ಲಿ ಇವರು ನವ್ಯ ರಂಗಭೂಮಿ ಕಂಪೆನಿ ಹುಟ್ಟುಹಾಕಿದರು. 1969ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 1983ರಲ್ಲಿ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದರು. 1996ರಲ್ಲಿ ಸಂಗೀತ ನಾಟಕ ಅಕಾಡೆಮಿ ಫೆಲೊಷಿಪ್ ಪಡೆದಿದ್ದ ಇವರು 2002ರಲ್ಲಿ ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು. ಜನಪದೀಯ ಹಾಗೂ ಕಾವ್ಯ ಪ್ರಕಾರಗಳ ರಸಮಯ ಸಮ್ಮಿಶ್ರದೊಂದಿಗೆ ಭಾರತಿಯ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಬಹುಮುಖ ಪ್ರತಿಭೆ ಹಬೀಬ್ ಹುಟ್ಟಿದ್ದು 1923ರಲ್ಲಿ ಮಧ್ಯಪ್ರದೇಶದಲ್ಲಿ ರಾಜ್‌ಪುರದಲ್ಲಿ. ಇವರು ಚಿಕ್ಕಂದಿನಲ್ಲಿ ಕವಿತೆ ಬರೆಯಲು ಆರಂಭಿಸಿದಾಗ 'ತನ್ವೀರ್' ಎಂಬ ನಾಮಾಂಕಿತದೊಂದಿಗೆ ಬೆಳಕಿಗೆ ಬಂದರು. ಸ್ವಾತಂತ್ರ್ಯಪೂರ್ವ ಮತ್ತು ನಂತರದ ರಂಗಭೂಮಿಯನ್ನು ಅರಗಿಸಿಕೊಂಡು ಕುಡಿದ ಭಾರತದ ಹಿರಿಯ ರಂಗಕರ್ಮಿ ಅವರಾಗಿದ್ದರು. ಪದವಿ ಶಿಕ್ಷಣವನ್ನು ನಾಗಪುರದಲ್ಲಿ ಪೂರೈಸಿದ ಬಳಿಕ ಲಖನೌಗೆ ತೆರಳಿದ ಅವರು ಅಲ್ಲಿನ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ 1945ರಲ್ಲಿ ಮುಂಬೈಗೆ ಬಂದು ವೃತ್ತಿ ಜೀವನ ಆರಂಭಿಸಿದಾಗ ಮೊದಲಿಗೆ ಕೈಗೊಂಡಿದ್ದು ಬಾಂಬೆ ಆಲ್ ಇಂಡಿಯಾ ರೇಡಿಯೊದಲ್ಲಿ ನಿರ್ಮಾಪಕನ ಜವಾಬ್ದಾರಿ. ಈ ಸಮಯದಲ್ಲಿ ಹಿಂದಿ ಸಿನಿಮಾಗಳಿಗೆ ಚಿತ್ರಗೀತೆಗಳನ್ನೂ ಬರೆದರಲ್ಲದೆ ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದರು. ಇವರು ಒಟ್ಟು ಒಂಬತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1982ರಲ್ಲಿ ರಿಚರ್ಡ್ ಆಟಿನ್‌ಬರೋ ನಿರ್ದೇಶಿಸಿದ ಗಾಂಧಿ ಚಲನಚಿತ್ರದಲ್ಲೂ ಪಾತ್ರ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಮುಂಬೈನಲ್ಲಿದ್ದ ವೇಳೆ ತನ್ವೀರ್ ಅಂದಿನ ದಿನಗಳಲ್ಲಿ ಪ್ರಮುಖವಾಗಿದ್ದ 'ಪ್ರಗತಿಪರ ಬರಹಗಾರರ ಸಂಘ'ವನ್ನು ಸೇರಿದರು. ಇದು ಕ್ರಮೇಣ 'ಇಂಟೆಗ್ರಲ್ ಪಾರ್ಟ್ ಆಫ್ ಇಂಡಿಯನ್ ಪೀಪಲ್ಸ್ ಥಿಯೇಟರ್ ಸಂಘ' 'ಇಪ್ಟಾ' ಆಗಿ ಪರಿವರ್ತಿತವಾಯಿತು. ಬ್ರಿಟಿಷ್ ವಸಾಹತು ಆಡಳಿತವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಈ ಸಂಘದ ಪ್ರಮುಖ ಸದಸ್ಯರನ್ನು ಜೈಲಿಗೆ ತಳ್ಳಿದ ನಂತರ ತನ್ವೀರ್ ಅವರೇ ಇದರ ಸಾರಥ್ಯ ವಹಿಸಿದರು. 1954ರಲ್ಲಿ ದೆಹಲಿಗೆ ಬಂದು ನೆಲೆಯೂರಿದ ತನ್ವೀರ್, ಖುದ್ಸಿಯಾ ಜಿಯಾದಿಸ್ ಅವರ ಹಿಂದೂಸ್ಥಾನಿ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿದರು. ಅಂತೆಯೇ ಈ ಸಮಯದಲ್ಲಿ ಅವರು ಹಲವಾರು ಮಕ್ಕಳ ನಾಟಕಗಳನ್ನೂ ರಚಿಸಿದರು. ಈ ದಿನಗಳಲ್ಲಿ ಅವರು ತಮ್ಮ ಸಂಪರ್ಕಕ್ಕೆ ಬಂದ ನಟಿ-ನಿರ್ದೇಶಕಿ ಮೊನಿಕಾ ಮಿಶ್ರಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು. 18ನೇ ಶತಮಾನದ ಪ್ರಖ್ಯಾತ ಭಾರತೀಯ ಉರ್ದು ಕವಿ ಮಿರ್ಜಾ ಗಾಲಿಬ್‌ನ ಸಮಕಾಲೀನ ಕವಿ ನಜೀರ್ ಅಕ್ಬರ್‌ಬಾದಿ ಕುರಿತು ತನ್ವೀರ್ ನಿರ್ಮಿಸಿದ 'ಆಗ್ರಾ ಬಜಾರ್' ಭಾರಿ ಜನಮನ್ನಣೆ ಗಳಿಸಿದ ನಾಟಕ. ಭಾರತೀಯ ರಂಗಭೂಮಿ ಹಿಂದೆಂದೂ ಕಾಣದ ಹೊಸ ಸ್ಪರ್ಶವನ್ನು ಅವರು ಈ ನಾಟಕದಲ್ಲಿ ಉಣಬಡಿಸಿದರು. ಸ್ಥಳೀಯ ಜನಪದ, ಕಾವ್ಯ ಮತ್ತು ರಂಗಭೂಮಿಯ ನವೀನ ಕಲ್ಪನೆಯನ್ನು ಈ ನಾಟಕ ಮೇಳೈಸಿಕೊಂಡಿತ್ತು. 1975ರಲ್ಲಿ ಇವರು ತಮ್ಮ ಮತ್ತೊಂದು ಜನಪ್ರಿಯ ನಾಟಕ 'ಚರಣದಾಸ್ ಚೋರ್' ಅನ್ನು ನಿರ್ಮಿಸಿದರು. ಇದು 1982ರಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ತನ್ವೀರ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಶೂದ್ರಕನ  ಸಂಸ್ಕೃತ ನಾಟಕ 'ಮೃಚ್ಛಕಟಿಕಮ್' ಆಧಾರಿತ 'ಮಿಠ್ಠಿ ಕಾ ಗಾದಿ' ನಿರ್ಮಿಸಿದರು. ಇದು ಛತ್ತೀಸ್‌ಗಢದ ನಾಟಕ ಇತಿಹಾಸದಲ್ಲೇ ಹೊಸ ಮೈಲುಗಲ್ಲಾಯಿತು. ಛತ್ತೀಸ್‌ಗಢದ ಸಾಂಪ್ರದಾಯಿಕ ಕಲೆ, ಸಂಸ್ಕೃತಿಗಳನ್ನು ಹಾಸು ಹೊಕ್ಕಾಗಿಸಿಕೊಂಡು ಇವರು ನಿರ್ಮಿಸಿ, ನಿರ್ದೇಶಿಸಿದ ಹಲವು ನಾಟಕಗಳು ನಂತರ ಇಡೀ ಭಾರತೀಯ ರಂಗಭೂಮಿಗೆ ಹೊಸದೊಂದು ದಿಕ್ಕನ್ನು ತೆರೆದವು. ಅಂತೆಯೇ ತನ್ವೀರ್ ಕೂಡಾ ಕಾಲಕ್ರಮೇಣ ಹಿಂದಿ ನಾಟಕಗಳ ರಚನೆಯತ್ತಲೇ ಹೆಚ್ಚಿನ ಗಮನ ಹರಿಸಿದರು. 1955ರಲ್ಲಿ ಇಂಗ್ಲೆಂಡಿಗೆ ತೆರಳಿದ ಇವರು ಅಲ್ಲಿನ 'ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್'ನಲ್ಲಿ (ಆರ್‌ಎಡಿಎ) ನಟನೆ ಮತ್ತು ಬ್ರಿಸ್ಟಾಲ್‌ನ ಓಲ್ಡ್ ವಿಕ್ ರಂಗಭೂಮಿ ಶಾಲೆ (1956)ಯಲ್ಲಿ ನಿರ್ದೇಶನ ಶಿಕ್ಷಣವನ್ನು ಪೂರೈಸಿದರು. ಮುಂದಿನ ಎರಡು ವರ್ಷಗಳ ಕಾಲ ಅವರು ಇಡೀ ಯೂರೋಪಿನಲ್ಲಿ ಸುತ್ತುವ ಮೂಲಕ ತಮ್ಮ ರಂಗಭೂಮಿಯ ಜ್ಞಾನವನ್ನು ವಿಸ್ತರಿಸಿಕೊಂಡರು. ಈ ಸಮಯದಲ್ಲಿ ಯೂರೋಪ್‌ನ ಖ್ಯಾತ ನಾಟಕಕಾರ ಬರ್ಟ್ರೊಲ್ಡ್ ಬ್ರೆಕ್ಟ್‌ನ ನಾಟಕಗಳು ಇವರ ಮೇಲೆ ಭಾರಿ ಪ್ರಭಾವ ಬೀರಿದವು. ಇದರಿಂದಾಗಿಯೇ ಅವರು ಭಾರತೀಯ ರಂಗಭೂಮಿಗೆ ಹೊಸ ನುಡಿಕಟ್ಟು, ಸಂಸ್ಕೃತಿ, ಸಿದ್ಧಾಂತಗಳ ಮಿಶ್ರಣದ ಹದವಾದ ಹೊಸ ಪರಂಪರೆಯನ್ನು ಪರಿಚಯಿಸುವಂತಾಯಿತು. 1958ರಲ್ಲಿ ಭಾರತಕ್ಕೆ ಮರಳಿದ ನಂತರ ಅವರು ಸಂಪೂರ್ಣ ನಿರ್ದೇಶನದತ್ತಲೇ ವಾಲಿದರು. ಬದುಕಿನುದ್ದಕ್ಕೂ ತನ್ವೀರ್ ಕಿರೀಟದಲ್ಲಿ ಸೇರಿದ ಪ್ರಶಸ್ತಿಗಳ ಗರಿಗಳಿಗೆ ಲೆಕ್ಕವಿಲ್ಲ. 1972ರಿಂದ 78ರವರೆಗೆ ರಾಜ್ಯಸಭಾ ಸದಸ್ಯರೂ ಆಗಿದ್ದ ಅವರು 1959ರಲ್ಲಿ ತಮ್ಮ ಪತ್ನಿಯೊಡಗೂಡಿ ಭೋಪಾಲ್‌ನಲ್ಲಿ ಹುಟ್ಟುಹಾಕಿದ 'ನವ್ಯ ರಂಗಭೂಮಿ' ಈ ವರ್ಷ ತನ್ನ 50 ವಸಂತಗಳನ್ನು ಪೂರೈಸಿತು.

2009: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಎಸ್.ಸುಬ್ರಹ್ಮಣ್ಯ ಅವರು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿರುದ್ಧ ದಾಖಲಿಸಿದ್ದ ಮಾನಹಾನಿ ಮೊಕದ್ದಮೆಯನ್ನು ಹಿಂದಕ್ಕೆ ಪಡೆದರು. ಲೋಕಾಯುಕ್ತ ಸಂಸ್ಥೆಯ ಘನತೆ, ಸ್ಥಾನಮಾನದ ಹಿನ್ನೆಲೆಯಲ್ಲಿ ಮೊಕ್ದದಮೆ ಹಿಂದಕ್ಕೆ ಪಡೆಯಬೇಕು. ಸರ್ಕಾರದ ವಿವಿಧ ಸಂಸ್ಥೆಗಳ ನಡುವೆ ಸೌಹಾರ್ದಯುತ ಸಂಬಂಧ ಇರಬೇಕು ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಸುಬ್ರಹ್ಮಣ್ಯ ಅವರಿಗೆ ಪತ್ರ ಬರೆದಿದ್ದೇನೆ' ಎಂದು ಇದಕ್ಕೂ ಮುನ್ನ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದರು. ಮಳೆ ನೀರಿನಲ್ಲಿ ಕೊಚ್ಚಿಹೋದ ನಗರದ ಲಿಂಗರಾಜಪುರ ಬಾಲಕ ಅಭಿಷೇಕನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲಿಲ್ಲ ಎಂದು ತಮ್ಮ ವಿರುದ್ಧ ಲೋಕಾಯುಕ್ತರು ವಿನಾಕಾರಣ ಆರೋಪ ಮಾಡಿರುವುದಾಗಿ ದೂರಿ, ಸುಬ್ರಹ್ಮಣ್ಯ ಎಸಿಎಂಎಂ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ವಿಚಾರಣೆಯನ್ನು ನಡೆಸಿದ್ದ ಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿತ್ತು. ಆದರೆ ವಿಚಾರಣೆಗೆ ನಿಗದಿಯಾದ ದಿನಕ್ಕಿಂತ ಒಂದು ದಿನ ಮುಂಚಿತವಾಗಿಯೇ ಕೋರ್ಟ್‌ಗೆ ಮನವಿ ಸಲ್ಲಿಸಿದ ಸುಬ್ರಹ್ಮಣ್ಯ ಪ್ರಕರಣ ಮುಂದುವರಿಸಲು ಇಷ್ಟ ಇಲ್ಲದ ಕಾರಣ, ಅದನ್ನು ಹಿಂದಕ್ಕೆ  ಪಡೆಯುವುದಾಗಿ ಮನವಿ ಸಲ್ಲಿಸಿದ್ದರು.

2009: ಈಶಾನ್ಯ ಮೆಕ್ಸಿಕೋದ ಸೊನೊರಾದ ಮಕ್ಕಳ ಕೇಂದ್ರವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 42 ಮಕ್ಕಳು ಮೃತರಾದರು.

2008:  ನಗಾರಿಯ ಸದ್ದು ಹಾಗೂ ವೇದ ಮಂತ್ರ ಘೋಷಗಳ ಮಧ್ಯೆ ಬ್ರಿಟನ್ನ ಪ್ರಪ್ರಥಮ ಹಿಂದೂ ಶಾಲೆಗೆ ಉತ್ತರ ಲಂಡನ್ನಿನ ಹ್ಯಾರೋದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.`ಕೃಷ್ಣ-ಅವಂತಿ'  ಹೆಸರಿನ ಈ ಪ್ರಾಥಮಿಕ ಶಾಲೆಯಲ್ಲಿ ಯೋಗ ಹಾಗೂ ಸಂಸ್ಕೃತ ಪಾಠ ಕಲಿಸಲಾಗುತ್ತದೆ. ಕಟ್ಟುನಿಟ್ಟಾಗಿ ಸಸ್ಯಾಹಾರಿ ನಿಯಮವನ್ನು ಜಾರಿಗೆ  ತರಲು ಇಲ್ಲಿ ತರಕಾರಿಯನ್ನೂ ಬೆಳೆಯಲಾಗುತ್ತದೆ.

2007: `ಏರಿಯಾನ್-5' ರಾಕೆಟ್ ಮೂಲಕ ಹಾರಿಬಿಡಲಾದ ಉಪಗ್ರಹ  ಅಪ್ಪಟ ದೇಶೀ ತಂತ್ರಜ್ಞಾನದ ಇನ್ಸಾಟ್ 4 ಬಿ ಉಪಗ್ರಹವನ್ನು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹಾಸನದ ಎಂ.ಸಿ.ಎಫ್. ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ದೇಶಕ್ಕೆ ಅರ್ಪಿಸಿದರು. ಇನ್ಸಾಟ್-4 ಬಿ ಉಪಗ್ರಹವು ಒಟ್ಟು 12 ಟ್ರಾನ್ಸ್ ಪಾಂಡರ್ ಮತ್ತು 12 ಕೆಯು ಬ್ಯಾಂಡುಗಳನ್ನು ಒಳಗೊಂಡಿದೆ. ದೇಶದ ದೂರಸಂಪರ್ಕ, ಡಿಟಿಎಚ್, ಟೆಲಿ ಎಜುಕೇಷನ್, ಟೆಲಿ ಮೆಡಿಸಿನ್ ಮೊದಲಾದ 10 ಕಾರ್ಯಕ್ರಮಗಳಿಗೆ ಇದರಂದ ಪ್ರಯೋಜನವಾಗುವುದು.

2007: ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ' ಹೆಸರಿನಲ್ಲಿ ಬಾಹ್ಯಾಕಾಶ ವಿಜ್ಞಾನಿ ಯು.ಆರ್. ರಾವ್ ಅವರಿಗೆ `ಜೀವಮಾನದ ಸಾಧನೆ' ಪ್ರಶಸ್ತಿಯನ್ನು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರದಾನ ಮಾಡಿದರು.

2007: ಮನೋಹರ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರವನ್ನು 2005ರಲ್ಲಿ ಪದಚ್ಯುತಿಗೊಳಿಸಲು ಪ್ರಮುಖ ಪಾತ್ರ ವಹಿಸಿ ನಂತರ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದ ದಿಗಂಬರ ಕಾಮತ್ ಅವರು ಗೋವಾದ 19ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

2007: ಬಾರಾಬಂಕಿ ಜಿಲ್ಲೆಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹೆಸರಿನಲ್ಲಿದ್ದ ಕೃಷಿ ಭೂಮಿಯನ್ನು ರದ್ದು ಪಡಿಸಿರುವ ವಿಭಾಗಾಧಿಕಾರಿ ನ್ಯಾಯಾಲಯದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠವು ತಡೆಯಾಜ್ಞೆ ನೀಡಿತು.

2007: ಅಧಿಸೂಚಿತ ಧಾರ್ಮಿಕ ಪ್ರದೇಶದ ವ್ಯಾಪ್ತಿಯಲ್ಲಿ ಅನ್ಯಧರ್ಮದ ಪ್ರಚಾರ ನಿಷೇಧಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶ ಸರ್ಕಾರ ಹೊರಡಿಸಿತು. ಈ ಸುಗ್ರೀವಾಜ್ಞೆ ತಿರುಪತಿಗೂ ಅನ್ವಯಿಸುವುದು. ತಿರುಪತಿ, ತಿರುಮಲೆ ಪ್ರದೇಶದಲ್ಲಿ ಹಿಂದೂಗಳು ಹೊರತು ಪಡಿಸಿ ಬೇರೆ ಯಾವುದೇ ಧರ್ಮದವರು ಧಾರ್ಮಿಕ ಪ್ರಚಾರ ಮಾಡುವುದನ್ನು ಈ ಸುಗ್ರೀವಾಜ್ಞೆಯು ನಿಷೇಧಿಸುತ್ತದೆ. ಕ್ರೈಸ್ತರ ಮತ ಪ್ರಚಾರದ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆ ಭಾರಿ ಮಹತ್ವ ಪಡೆಯಿತು.

2007: ವಿಶ್ವಸಂಸ್ಥೆಯ 10 ಕೋಟಿ ಡಾಲರ್ ಮೊತ್ತದ ಗುತ್ತಿಗೆ ವ್ಯವಹಾರವನ್ನು ತಮ್ಮ ಸ್ನೇಹಿತನ ಕಂಪೆನಿಗೆ ದೊರಕಿಸಿಕೊಡಲು ಲಂಚ ಪಡೆದು ಪ್ರಭಾವ ಬೀರಿದ ಭಾರತೀಯ ಮೂಲದ ವಿಶ್ವಸಂಸ್ಥೆ ಮಾಜಿ ಅಧಿಕಾರಿ ಸಂಜಯ ಬಹೆಲ್ ಅವರಿಗೆ ಅಮೆರಿಕದ ನ್ಯಾಯಾಲಯವೊಂದು 30 ವರ್ಷಗಳ ಸೆರೆವಾಸ ವಿಧಿಸಿತು.

2007: ಇಂದೋರಿನ ಖ್ಯಾತ ಪ್ರಸೂತಿ ಹಾಗೂ ಉದರ ದರ್ಶಕ ತಜ್ಞೆ ಅರ್ಚನಾ ಬಾಸೆರ್ ಅವರು ಮಹಿಳೆಯೊಬ್ಬಳ ದೇಹದಿಂದ 10 ಕಿ.ಗ್ರಾಂ.ಗೂ ಹೆಚ್ಚು ಭಾರವಿದ್ದ ಗಡ್ಡೆಯನ್ನು ತೆಗೆದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದರು. ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕವು ಈ ಬಗ್ಗೆ ಪ್ರಮಾಣ ಪತ್ರ ನೀಡಿತು.

2006: ಸೂಪರ್ ಸಾನಿಕ್ ಯುದ್ಧ ವಿಮಾನ ಸುಖೋಯ್-30 ಎಂಕೆಐಯನ್ನು ಗಗನದಲ್ಲಿ ಹಾರಿಸುವ ಮೂಲಕ ಕೇವಲ ಹಾರುವುದಷ್ಟೇ ಅಲ್ಲ, ಪೈಲಟ್ ಆಗಿ ಅದನ್ನು ನಡೆಸಿದ ಭಾರತದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಭಾಜನರಾದರು. ಜಲಾಂತರ್ಗಾಮಿಯಲ್ಲಿ ಪಯಣಿಸಿದ ಹಾಗೂ ಅತೀ ಎತ್ತರದಲ್ಲಿರುವ ಸಿಯಾಚಿನ್ನಿಗೆ ತೆರಳಿ ಸೈನಿಕರ ಜೊತೆಗೆ ಮಾತನಾಡಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಈಗಾಗಲೇ ಅವರಿಗೆ ಇತ್ತು. 75 ವರ್ಷ ವಯಸ್ಸಿನ  ರಾಷ್ಟ್ರಪತಿ ಕಲಾಂ ಗಂಟೆಗೆ 1500 ಕಿ.ಮೀ. ವೇಗದಲ್ಲಿ 40 ನಿಮಿಷಗಳ ಕಾಲ ಸಮರ ವಿಮಾನದ ಹಾರಾಟ ನಡೆಸಿದರು.

2006: ಇರಾಕಿನಲ್ಲಿ ಹಲವು ಆತ್ಮಹತ್ಯಾ ದಾಳಿ ನಡೆಸಿ ರಕ್ತ ಸಿಕ್ತ ಅಧ್ಯಾಯಕ್ಕೆ ಕಾರಣನಾಗಿದ್ದ ಅಲ್ ಖೈದಾ ಬೆಂಬಲಿತ ಉಗ್ರಗಾಮಿ ಅಬು ಮಸಬ್ ಅಲ್ ಜರ್ಕಾವಿಯನ್ನು ಅಮೆರಿಕ ಮತ್ತು ಇರಾಕ್ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಗೈದವು.

2001: ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ದಾಖಲೆ ಮತಗಳ ಅಂತರದೊಂದಿಗೆ ಗೆದ್ದು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದರು.

1999: ಲಿಯಾಂಡರ್ ಪೇಸ್ ಮತ್ತು ಮಹೇಶ ಭೂಪತಿ ಅವರದ್ದು ಜಗತ್ತಿನಲ್ಲಿ ನಂಬರ್ 1 ಡಬಲ್ಸ್ ಟೀಮ್ ಎಂಬುದಾಗಿ ಎಟಿಪಿ (ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಷನಲ್ಸ್) ಪ್ರಕಟಿಸಿತು.

1968: ಕರ್ನಾಟಕ ಘರಾಣಾದ ಖ್ಯಾತ ಗಾಯಕ ಮಧುರೆ ಮಣಿ ಅಯ್ಯರ್ ನಿಧನರಾದರು.

1957: ಅಮೆರಿಕದ ಕಾರ್ಟೂನಿಸ್ಟ್ ಸ್ಕಾಟ್ ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ಜನ್ಮದಿನ. `ಡಿಲ್ ಬರ್ಟ್' ಎಂಬ ಕಾರ್ಟೂನ್ ಸ್ಟ್ರಿಪ್ ಮೂಲಕ ಇವರು ಖ್ಯಾತರಾಗಿದ್ದಾರೆ.

1955: ಟಿಮ್ ಬೆರ್ನರ್ಸ್ ಲೀ ಜನ್ಮದಿನ. ಇವರು ಈಗ ಡಬ್ಲ್ಯುಡಬ್ಲ್ಯುಡಬ್ಲ್ಯು ಎಂದು ಪರಿಚಿತವಾಗಿರುವ `ವರ್ಲ್ಡ್ ವೈಡ್ ವೆಬ್' ನ್ನು ವಿನ್ಯಾಸ ಮಾಡಿದ ವ್ಯಕ್ತಿ. ಈತನಿಗೆ ಈಚೆಗೆ `ಮಿಲೆನಿಯಂ ಪ್ರಶಸ್ತಿ' ಲಭಿಸಿದೆ.

1948: ಏರ್ ಇಂಡಿಯಾದ `ಮಲಬಾರ್ ಪ್ರಿನ್ಸೆಸ್' ಹೆಸರಿನ ಅಂತಾರಾಷ್ಟ್ರೀಯ ವಿಮಾನ ಮೊದಲ ಬಾರಿಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಟಿತು. ಕೈರೋ ಮತ್ತು ಜಿನೀವಾ ಮೂಲಕ ಲಂಡನ್ನಿಗೆ ಹೋಗುತ್ತಿದ್ದ ಈ ವಿಮಾನ ವಾರಕ್ಕೊಮ್ಮೆ ಹಾರಾಟ ನಡೆಸುತ್ತಿತ್ತು.

1946: ರವೀಂದ್ರ ಕರ್ಜಗಿ ಜನನ.

1943: ಸಾಹಿತಿ ವಿಷ್ಣುಮೂರ್ತಿ ಜನನ.

1938: ಸಾಹಿತಿ ದಯಾನಂದ ತೊರ್ಕೆ ಜನನ.

1936: ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ ತನ್ನ ಹೆಸರನ್ನು `ಆಲ್ ಇಂಡಿಯಾ ರೇಡಿಯೋ' ಎಂಬುದಾಗಿ ಬದಲಾಯಿಸಿತು.

1918: ತಂದೆ ಬರೆದ ಕಾವ್ಯಗಳಿಗೆ ದೃಶ್ಯ ರೂಪ ನೀಡಿದ ಕಲಾವಿದ ಎಸ್. ಶ್ರೀಕಂಠ ಶಾಸ್ತ್ರಿ ಅವರು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು - ಸಂಕಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1915: ಸಾಹಿತಿ ಕಯ್ಯಾರ ಕಿಂಞಣ್ಣ ರೈ ಜನನ.

1902: ಸಂಶೋಧಕ, ಛಂದಸ್ಸು, ನಿಘಂಟು ಕ್ಷೇತ್ರದ ವಿದ್ವಾಂಸ ಸೇಡಿಯಾಪು ಕೃಷ್ಣಭಟ್ಟ ಅವರು ರಾಮಭಟ್ಟ- ಮೂಕಾಂಬಿಕೆ ದಂಪತಿಯ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಸೇಡಿಯಾಪು ಗ್ರಾಮದಲ್ಲಿ ಜನಿಸಿದರು.

1625: ಗಿಯಾನ್ ಡೊಮಿನಿಕೊ ಕ್ಯಾಸಿನಿ (1625-1712) ಜನ್ಮದಿನ. ಇಟಲಿ ಸಂಜಾತ ಫ್ರೆಂಚ್ ಖಗೋಳತಜ್ಞನಾದ ಈತ ಶನಿಗ್ರಹದ `ಎ' ಮತ್ತು `ಬಿ' ಬಳೆಗಳ ಮಧ್ಯೆ  ಭಾರೀ ಪ್ರಮಾಣದಲ್ಲಿ ಕಪ್ಪು ಬಳೆಗಳು ಇರುವುದು ಸೇರಿದಂತೆ ಅನೇಕ ಖಗೋಳ ಸಂಶೋಧನೆಗಳನ್ನು ನಡೆಸಿದ ವ್ಯಕ್ತಿ. ಕ್ಯಾಸಿನಿ ಹೆಸರಿನ ನೌಕೆಯೊಂದು ಈಗ ಶನಿಯ ಒಂದು ಉಪಗ್ರಹ `ಟೈಟಾನ್' ನನ್ನು ಸುತ್ತುತ್ತಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement