ಗ್ರಾಹಕರ ಸುಖ-ದುಃಖ

My Blog List

Monday, June 21, 2010

ಇಂದಿನ ಇತಿಹಾಸ History Today ಜೂನ್ 15

ಇಂದಿನ ಇತಿಹಾಸ

ಜೂನ್ 15
ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ ಏಕೈಕ ಉಗ್ರ ಮೊಹ್ಮಮದ್ ಅಜ್ಮಲ್ ಕಸಾಬ್‌ನನ್ನು ಮುಂಬೈಯ ಪತ್ರಿಕೆಯೊಂದರ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು.

2009: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹಲವು ಸಲ ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ಹಾಗೂ ಚಿತ್ರನಟಿ ಶ್ರುತಿ ಅವರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಯಿತು. ಶ್ರುತಿ ಅವರ ಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಡಿ.ಎಸ್.ಅಶ್ವತ್ಥ್ ಅವರನ್ನು ನೇಮಿಸಲಾಯಿತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ದವೆ ಅವರಿಗೆ ಹೆಚ್ಚುವರಿಯಾಗಿ ಅಧ್ಯಕ್ಷ ಸ್ಥಾನ ಕೂಡ ನೀಡಲಾಯಿತು. ತಮ್ಮ ಪತಿ, ಚಿತ್ರ ನಿರ್ದೇಶಕ ಮಹೇಂದರ್ ಅವರಿಂದ ಶ್ರುತಿ ವಿವಾಹ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತು.

2009: ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ ಏಕೈಕ ಉಗ್ರ ಮೊಹ್ಮಮದ್ ಅಜ್ಮಲ್ ಕಸಾಬ್‌ನನ್ನು ಮುಂಬೈಯ ಪತ್ರಿಕೆಯೊಂದರ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು. ನವೆಂಬರ್ 26ರ ರಾತ್ರಿ ನಡೆದ ದಾಳಿ ಸಮಯದಲ್ಲಿ ಬಂದೂಕು ಹಿಡಿದು ಉಗ್ರರು ಜನರತ್ತ ಮನಬಂದಂತೆ ಗುಂಡಿನ ಮಳೆಗರೆದಿದ್ದ ದೃಶ್ಯಗಳನ್ನು ಸೆರೆಹಿಡಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳನ್ನೂ ನ್ಯಾಯಾಲಯದ ಮುಂದೆ  ಅವರು ಹಾಜರುಪಡಿಸಿದರು. ಇವರು ಕೇವಲ ಪ್ರತ್ಯಕ್ಷ ಸಾಕ್ಷಿ ಮಾತ್ರವಲ್ಲದೇ, ಉಗ್ರರ ದಾಳಿಯ ದೃಶ್ಯಗಳನ್ನು ಸೆರೆಹಿಡಿದು ದಾಖಲೆ ಸಹಿತ ಪುರಾವೆಗಳನ್ನು ಒದಗಿಸಿದ ಮೊದಲ ಸಾಕ್ಷಿ ಕೂಡಾ. ಹೀಗಾಗಿ ಇವರ ಹೇಳಿಕೆ ಹಾಗೂ ಛಾಯಾಚಿತ್ರಗಳನ್ನು ಮಹತ್ವದ್ದು ಎಂದು ಪರಿಗಣಿಸಲಾಯಿತು.

2009: ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆಮುಂದುವರೆಯಿತು. ಮೆಲ್ಬರ್ನ್ ಪೂರ್ವದಲ್ಲಿನ ಉಪನಗರದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ, 20ರ ಹರೆಯದ, ದೆಹಲಿ ಮೂಲದ ಸನ್ನಿ ಬಜಾಜ್ ಮೇಲೆ ಹಲ್ಲೆ ನಡೆಯಿತು. ಈತ ರಾತ್ರಿ ಬರೊನಿಯಾದಲ್ಲಿ ತನ್ನ ಕಾರೊಳಗೆ ಕುಳಿತುಕೊಳ್ಳುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಈತನನ್ನು ವಾಚಾಮಗೋಚರವಾಗಿ ಬೈದು ಮುಷ್ಟಿಯಿಂದ ಗುದ್ದಿದರು ಎಂದು 'ದಿ ಏಜ್' ಪತ್ರಿಕೆ ವರದಿ ಮಾಡಿತು.

2009: ಹಂದಿಜ್ವರ ಹಾಗೂ ಅದರ ವೈರಾಣು ಮೆಕ್ಸಿಕೊದಲ್ಲಿ ಪತ್ತೆಯಾಗುವ ಹಲವು ತಿಂಗಳ ಮೊದಲೇ ಮನುಷ್ಯರಲ್ಲಿ ಗುಪ್ತವಾಗಿ ಹಬ್ಬಿತ್ತು. ಅದಕ್ಕೂ ಹಲವು ವರ್ಷಗಳ ಮೊದಲೇ ಈ ವೈರಸ್ ಹಂದಿಗಳಲ್ಲಿ ಜೀವ ತಳೆದಿತ್ತು ಎಂದು ಬ್ರಿಟನ್ನಿನ ಸಂಶೋಧಕರು ಅಭಿಪ್ರಾಯ ಪಟ್ಟರು. ಆಕ್ಸ್‌ಫರ್ಡ್ ವಿವಿಯ ವಿಜ್ಞಾನಿಗಳ ತಂಡ ಸಂಶೋಧನೆ ಕೈಗೊಂಡು ಈ ಅಂಶ ಬಹಿರಂಗಪಡಿಸಿತು. ವಿಜ್ಞಾನಿಗಳ ಪ್ರಕಾರ ಹಂದಿಗಳಲ್ಲಿ ವಿವಿಧ ಸೋಂಕುಗಳಿಗೆ ಕಾರಣವಾಗುವ ಹಲವು ಬಗೆಯ ವೈರಸ್‌ಗಳು ಸೇರಿಕೊಂಡು ಈ ಹೊಸ ವೈರಸ್ ಹಲವು ವರ್ಷಗಳ ಹಿಂದೆಯೇ ಜೀವ ತಳೆದಿತ್ತು. ಹಂದಿಗಳ ಮೂಲಕ ವಿವಿಧ ಖಂಡಗಳಿಗೂ ಪ್ರಸಾರವಾಗಿತ್ತು.

2009: ಸೇನೆಯಲ್ಲಿ ಸೇವೆ ಸಲ್ಲಿಸಲು ತಮ್ಮ ಪೇಟ ಮತ್ತು  ಗಡ್ಡ ತೆಗೆಯಬೇಕು ಎಂಬುದಾಗಿ  ಅಮೆರಿಕದ ಸೇನೆಯಲ್ಲಿರುವ ಮೂರು ದಶಕಗಳಷ್ಟು ಹಳೆಯದಾದ ನಿಯಮವನ್ನು ಇಬ್ಬರು ಸಿಖ್ ಸೇನಾ ಅಧಿಕಾರಿಗಳು ಪ್ರಶ್ನಿಸಿದರು. ತಮ್ಮ ಕುಟುಂಬದಲ್ಲಿ  ನಾಲ್ಕನೇ ತಲೆಮಾರಿನ ವ್ಯಕ್ತಿಯಾಗಿ  ಸೇನೆಯಲ್ಲಿ ಸೇವೆ ಸಲ್ಲಿಸುವ ನಿರೀಕ್ಷೆಯಲ್ಲಿರುವ  ಕ್ಯಾಪ್ಟನ್ ಕಮಲಜಿತ್ ಕಲ್ಸಿ ಮತ್ತು ಇನ್ನೊಬ್ಬ ಸಿಖ್ ಕ್ಯಾಪ್ಟನ್ ತೇಜ್‌ದೀಪ್ ಸಿಂಗ್ ರತ್ತನ್ ಅವರು ಧಾರ್ಮಿಕ ವಸ್ತುಗಳ ಉಡುಗೆ ತೊಡುಗೆಗೆ ಸಂಬಂಧಿಸಿದ ನಿಯಮಗಳು ಬದಲಾಗಬೇಕು ಎಂದು ಕೋರಿದರು.

2008: ಉಡುಪಿಯ ಬಿಜೆಪಿ ಶಾಸಕ ಬಿ.ರಘುಪತಿಭಟ್ ಅವರ ಪತ್ನಿ ಪದ್ಮಪ್ರಿಯಾ (35) ಅವರ ಮೃತದೇಹ ನವದೆಹಲಿಯ ಅಪಾರ್ಟ್ ಮೆಂಟೊಂದರಲ್ಲಿ ಪತ್ತೆಯಾಯಿತು. ಸುಳಿವು ಆಧರಿಸಿ ನವದೆಹಲಿಯ ದ್ವಾರಕಾನಗರದ ಶಮಾ ಅಪಾರ್ಟ್ ಮೆಂಟಿನ 20 ನೇ ನಂಬರ್ ಕೊಠಡಿಗೆ ಕರ್ನಾಟಕದ ಪೊಲೀಸರು ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆದು  ಬಾಗಿಲು ಮುರಿದು ಒಳಗೆ ನುಗ್ಗಿದಾಗ ಪದ್ಮಪ್ರಿಯಾ ದೇಹ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ  ಪತ್ತೆಯಾಯಿತು. ಐದು ದಿನಗಳಿಂದ ಆಕೆ ನಾಪತ್ತೆಯಾಗಿದ್ದರು.

2007: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎ.ವಿ. ಶೇಷಗಿರಿರಾವ್ (80) ಅವರು ಚೆನ್ನೈಯಲ್ಲಿ ನಿಧನರಾದರು. ಕನ್ನಡ ಹಾಗೂ ತೆಲುಗಿನಲ್ಲಿ ಸುಮಾರು 30 ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ `ಸೊಸೆ ತಂದ ಸೌಭಾಗ್ಯ' ನಿರ್ದೇಶಿಸಿದ ಹೆಗ್ಗಳಿಕೆ ಇವರದು. ವರನಟ ರಾಜಕುಮಾರ್ ಅಭಿನಯದ `ಬೆಟ್ಟದ ಹುಲಿ' `ಸಂಪತ್ತಿಗೆ ಸವಾಲ್' `ಬಹದ್ದೂರ್ ಗಂಡು', `ರಾಜ ನನ್ನ ರಾಜ' ಇತ್ಯಾದಿ ಅವರು ನಿರ್ದೇಶಿಸಿದ ಕೆಲವು ಜನಪ್ರಿಯ ಸಿನಿಮಾಗಳು.

2007: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಂದಗುಡಿಯಲ್ಲಿ 12,350 ಎಕರೆ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಸ್ಥಾಪನೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ವರ್ಗದ ಒಳ ಮೀಸಲಾತಿಗೆ ಸಚಿವ ಸಂಪುಟ ಉಪ ಸಮಿತಿ ರಚಿಸಲೂ ಸಂಪುಟ ಒಪ್ಪಿತು.

2007: ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕ ಏಜೆನ್ಸಿಯಲ್ಲಿ ಹಿರಿಯ ಇಂಧನ ಸಲಹೆಗಾರರಾದ ಶ್ರಿನಿವಾಸನ್ ಪದ್ಮನಾಭನ್ ಅವರಿಗೆ `ವರ್ಲ್ಡ್ ಕ್ಲೀನ್ ಎನರ್ಜಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವದೆಹಲಿಯಲ್ಲಿ ವಾಸಿಸಿರುವ ಪದ್ಮನಾಭನ್ ಅವರಿಗೆ ಸ್ವಿಟ್ಜರ್ಲೆಂಡಿನ ಬೇಸಲ್ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2007: ದಕ್ಷಿಣ ಭಾರತದ ಸಿನಿಮಾ ಪ್ರಿಯರ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ `ಶಿವಾಜಿ- ದಿ ಬಾಸ್' ದೇಶ- ವಿದೇಶಗಳಲ್ಲಿ ಈದಿನ ಏಕಕಾಲದಲ್ಲಿ ಬಿಡುಗಡೆಯಾಯಿತು. ತಂಜಾವೂರಿನಲ್ಲಿ ಬೆಳಗಿನ ಜಾವ 3 ಗಂಟೆಗೇ ಈ ಚಿತ್ರ ಪ್ರದರ್ಶನ ಕಂಡಿತು.

2007: ಪ್ಯಾಲೆಸ್ಟೈನ್ ಮೇಲೆ ನಿಯಂತ್ರಣ ಸಾಧಿಸಿದ ಹಮಾಸ್ ಸಂಘಟನೆ ಸದಸ್ಯರು ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರಿಗೆ ದಿಗ್ಬಂಧನ ವಿಧಿಸಿ ಇಡೀದಿನ ಅವರ ಕಚೇರಿಯಲ್ಲಿ ನಿರಾತಂಕವಾಗಿ ಕಾಲ ಕಳೆದರು.

2007: ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2 ದಿನವನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿತು. ವಿಶ್ವದಾದ್ಯಂತ ಶಾಂತಿಯ ಸಂದೇಶವನ್ನು ಸಾರಲು ಗಾಂಧೀಜಿ ವಹಿಸಿದ ಪಾತ್ರವನ್ನು ಪರಿಗಣಿಸಿ ಸಾಮಾನ್ಯ ಸಭೆ ಈ ತೀರ್ಮಾನ ಕೈಗೊಂಡಿತು.

2007: ಮುಂಬೈಯಲ್ಲಿ ಜನಿಸಿ ಸ್ವೀಡನ್ ನಿವಾಸಿಯಾಗಿರುವ ಭಾರತೀಯ ನಾವಿಕ ಭಾವಿಕ್ ಗಾಂಧಿ (30) ಅವರು ಯಾರ ನೆರವನ್ನೂ ಆಶ್ರಯಿಸದೆ ಅಟ್ಲಾಂಟಿಕ್ ಸಾಗರದುದ್ದಕ್ಕೂ ದೋಣಿ ಹುಟ್ಟು ಹಾಕಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದರು. ಹಾಯಿ, ಮೋಟಾರ್, ಸಹಾಯಕ ಹಡಗು ಇತ್ಯಾದಿ ಯಾವುದರ ನೆರವೂ ಇಲ್ಲದೆ ಕೇವಲ ದೋಣಿಯಲ್ಲಿ ಹುಟ್ಟು ಹಾಕುತ್ತಾ 106 ದಿನಗಳಲ್ಲಿ ಅವರು ತಮ್ಮ ಪಯಣ ಪೂರ್ಣಗೊಳಿಸಿದರು. ಕ್ರಿಸ್ಟೋಫರ್ ಕೊಲಂಬಸ್ ಸಾಗಿದ ಹಾದಿಯಲ್ಲಿ ದೋಣಿಗೆ ಹುಟ್ಟು ಹಾಕಿದ ಭಾವಿಕ್ ಗಾಂಧಿ ಈ ಮಹಾಸಾಗರದಲ್ಲಿ ಇಂತಹ ಸಾಧನೆಗೈದ 33ನೇ ವ್ಯಕ್ತಿ. ಇಂತಹ ಏಕವ್ಯಕ್ತಿ ಸಾಹಸ ಗೈದ ಏಷ್ಯಾದ ಮೊದಲಿಗ. ತಮ್ಮ ದೋಣಿ `ಮಿಸ್ ಒಲಿವ್' ನಲ್ಲಿ ಅಂಟಿಗುವಾದ ಕೆನರಿ ದ್ವೀಪದ ಲಾ ರೆಸ್ಟಿಂಗಾದಿಂದ ಸಾಗರ ಪ್ರಯಾಣ ಆರಂಭಿಸಿದ್ದರು.

2007: ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯ ದುರಸ್ತಿಗಾಗಿ ಇಬ್ಬರು ತಂತ್ರಜ್ಞರು ಮೂರನೇ ಬಾಹ್ಯಾಕಾಶ ನಡಿಗೆ ಆರಂಭಿಸಿದರು.

2007: ನೈಜೀರಿಯಾದ ದಕ್ಷಿಣ ಭಾಗದ ತೈಲ ಕ್ಷೇತ್ರದಲ್ಲಿ ಬಂದೂಕುಧಾರಿಗಳು ಇಬ್ಬರು ಭಾರತೀಯರು ಸೇರಿದಂತೆ ಐವರು ವಿದೇಶಿ ಪ್ರಜೆಗಳನ್ನು ಅಪಹರಿಸಿದರು.

2006: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಭಿಕ್ಷಾಟನೆಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಯಿತು.

2006: ಡಿಸೆಂಬರ್ 21ರಂದು ಕೋಫಿ ಅನ್ನಾನ್ ನಿವೃತ್ತಿಯಿಂದ ತೆರವಾಗುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಶಿ ತರೂರ್ ಅವರನ್ನು ಭಾರತದ ಅಭ್ಯರ್ಥಿ ಎಂದು ಸರ್ಕಾರ ಪ್ರಕಟಿಸಿತು. 1978ರಿಂದಲೇ ವಿಶ್ವಸಂಸ್ಥೆಯಲ್ಲಿ ಸೇವೆಯಲ್ಲಿರುವ ತರೂರ್ ಈ ವೇಳೆಯಲ್ಲಿ ಅಲ್ಲಿ ಸಂಪರ್ಕ ಮತ್ತು ಮಾಹಿತಿ ವಿಭಾಗದ ಆಧೀನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

2006: ಶಂಕಿತ ತಮಿಳು ಉಗ್ರಗಾಮಿಗಳು ಅಡಗಿಸಿ ಇಟ್ಟ್ದಿದ ನೆಲಬಾಂಬ್ ಸ್ಫೋಟಕ್ಕೆ ಬಸ್ಸಿನಲ್ಲಿದ್ದ 64 ಪ್ರಯಾಣಿಕರು ಸತ್ತು 39 ಮಂದಿ ಗಾಯಗೊಂಡ ಘಟನೆ ಉತ್ತರ ಶ್ರೀಲಂಕಾದಲ್ಲಿ ಘಟಿಸಿತು. ಬೆನ್ನಲ್ಲೇ ಶ್ರೀಲಂಕಾ ಸೇನೆ ಎಲ್ಟಿಟಿಇ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿತು.

2006: ವಿಜಯಾನಂದ ಪ್ರಿಂಟರ್ಸ್ ಲಿಮಿಟೆಡ್ ನ ವಿಜಯ ಕನರ್ಾಟಕ, ವಿಜಯ ಟೈಮ್ಸ್ ಮತ್ತು ಉಷಾಕಿರಣ ಪತ್ರಿಕೆಗಳ ಮಾಲೀಕತ್ವವನ್ನು ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ವಹಿಸಿಕೊಂಡಿತು.

2006: ಎನ್ ಸಿಪಿ, ಬಿಜೆಪಿ, ಮತ್ತು ಶಿವಸೇನೆಯ ಬೆಂಬಲದೊಂದಿಗೆ ಮಹಾರಾಷ್ಟ್ರದಿಂದ ಕಣಕ್ಕೆ ಇಳಿದಿದ್ದ ಉದ್ಯಮಿ ರಾಹುಲ್ ಬಜಾಜ್ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ಸಿನ ಅವಿನಾಶ ಪಾಂಡೆ ಅವರನ್ನು ರಾಹುಲ್ ಬಜಾಜ್ ಪರಾಭವಗೊಳಿಸಿದರು.

1993: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ್ಪ ಈದಿನ ನಿಧನರಾದರು.

1990: ಸ್ವರ್ಣಮಂದಿರದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಕಾಲದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನ ಮತ್ತು ಇತರ ಮೌಲ್ಯಯುಕ್ತ ವಸ್ತುಗಳನ್ನು ಪಂಜಾಬ್ ಸರ್ಕಾರ ಹಿಂದಕ್ಕೆ ನೀಡಿತು.

1986: ಕ್ರಿಕೆಟ್ ಪಟು ಕೆ.ಕೆ. ತಾರಾಪೂರ್ ಅವರು ಈದಿನ ನಿಧನರಾದರು.

1956: ಕಲಾವಿದೆ ಕನಕತಾರಾ ಜನನ.

1947: ಭಾರತವನ್ನು ವಿಭಜಿಸುವ ಬ್ರಿಟಿಷ್ ಇಂಡಿಯಾದ ಆಲೋಚನೆಯನ್ನು ಆಲ್ ಇಂಡಿಯಾ ಕಾಂಗ್ರೆಸ್ ಒಪ್ಪಿಕೊಂಡಿತು.

1942: ಸಾಹಿತಿ ಚಿದಾನಂದ ಗೌಡ ಜನನ.

1940: ಕಲಾವಿದ ಭೀಮಪ್ಪ ಸನದಿ ಜನನ.

1932: ಸಾಹಿತಿ ರಸಿಕ ಪುತ್ತಿಗೆ ಜನನ.

1931: ಗೀತಪ್ರಿಯ ಜನನ.

1929: ಕಲಾವಿದ ಸಿ.ಪಿ. ಪರಮೇಶ್ವರಪ್ಪ ಜನನ.

1928: ಕಲಾವಿದ ಪಿ.ಬಿ. ಧುತ್ತರಗಿ ಜನನ.

1924: ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಗುರುರಾಜ ಭಟ್ (15-6-1924ರಿಂದ 27-8-1978) ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ ಈದಿನ ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ದೇವಸ್ಥಾನಗಳ ಸಂಶೋಧನೆ, ಶಿಲಾಗೋರಿ, ತಾಮ್ರಶಾಸನಗಳು, ಅಪೂರ್ವ ಶಾಸನಗಳ ಸಂಶೋಧನೆ ನಡೆಸಿದ ಇವರು 700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಒಳಗೊಂಡ `ತುಳುನಾಡು' ಗ್ರಂಥ ರಚಿಸಿದರು. ಅವರ ಈ ಮೊದಲ ಗ್ರಂಥಕ್ಕೇ ದೇವರಾಜ ಬಹದ್ದೂರ್ ಪ್ರಶಸ್ತಿ, ಎರಡನೆಯ ಕೃತಿ `ತುಳುನಾಡಿನ ಸ್ಥಾನಿಕರು' ಗ್ರಂಥಕ್ಕೆ ಉತ್ತಮ ಸಂಶೋಧನಾ ಕೃತಿ ಎಂಬ ಪ್ರಶಂಸೆ ಲಭಿಸಿತು.

1924: ಸಾಹಿತಿ ನಿರಂಜನ ಜನನ.

1920: ಸಾಹಿತಿ ಮಲ್ಲಿಕಾ ಕಡಿದಾಳ್ ಮಂಜಪ್ಪ ಜನನ.

1919: ಬ್ರಿಟಿಷ್ ವಿಮಾನ ಹಾರಾಟಗಾರರಾದ ಜಾನ್ ಅಲ್ ಕಾಕ್ ಮತ್ತು ಆರ್ಥರ್ ಬ್ರೌನ್ ನ್ಯೂ ಫೌಂಡ್ ಲ್ಯಾಂಡ್ ನಿಂದ ಐರ್ಲೆಂಡ್ ವರೆಗಿನ ಮೊತ್ತ ಮೊದಲ ನಿಲುಗಡೆ ರಹಿತ ಟ್ರಾನ್ಸ್ ಅಟ್ಲಾಂಟಿಕ್ ಹಾರಾಟವನ್ನು ಪೂರ್ಣಗೊಳಿಸಿದರು. 1890 ಮೈಲು ದೂರದ ಈ ಹಾರಾಟವನ್ನು ಅವರು ವಿಕರ್ಸ್ ವಿಮಿ ಬಾಂಬರ್ ವಿಮಾನದಲ್ಲಿ ಕೇವಲ 16 ಗಂಟೆಗಳಲ್ಲಿ ಮುಗಿಸಿದರು. ಈ ವಿಮಾನವನ್ನು ಲಂಡನ್ನಿನ ಸೈನ್ಸ್ ಮ್ಯೂಸಿಯಂಮ್ಮಿನಲ್ಲಿ ಇಡಲಾಗಿದೆ.

1915: ಅಮೆರಿಕದ ವೈದ್ಯ ಥಾಮಸ್ ಎಚ್. ವೆಲ್ಲರ್ ಜನ್ಮದಿನ. ಪೋಲಿಯೋ ವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು.

1911: ಖ್ಯಾತ ಚಿಂತನಶೀಲ ಕಲಾವಿದ ಕೆ. ಕೃಷ್ಣ ಹೆಬ್ಬಾರ (15-6-1911ರಿಂದ 26-3-1996) ಅವರು ನಾರಾಯಣ ಹೆಬ್ಬಾರ- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಬಳಿಯ ಕಟ್ಟಂಗೇರಿಯಲ್ಲಿ ಜನಿಸಿದರು.

1907: ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಗಣೇಶ ಗೋರೆ ನಿಧನ.

1869: ಅಮೆರಿಕನ್ ಸಂಶೋಧಕ ಜಾನ್ ವೆಸ್ಲೆ ಹ್ಯಾಟ್ ಸೆಲ್ಯುಲಾಯ್ಡ್ ನ್ನು (ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ವಸ್ತು) ಕಂಡುಹಿಡಿದ.

1762: ಮಿಂಚು ಅಂದರೆ ವಿದ್ಯುತ್ ಎಂಬುದಾಗಿ ಸಾಬೀತುಪಡಿಸುವಂತಹ ಪ್ರಯೋಗವನ್ನು ಬೆಂಜಮಿನ್ ಫ್ರಾಂಕ್ಲಿನ್ ಕೈಗೊಂಡ. ನಂತರ  ಅದೇ ವರ್ಷ ಈತ ತನ್ನ ಮನೆಯಲ್ಲಿ ಮಿಂಚುವ ಸಲಾಕೆಯನ್ನು ಇರಿಸಿ ಅದಕ್ಕೆ ಗಂಟೆಯ ಸಂಪರ್ಕ ಕಲ್ಪಿಸಿದ. ಈ ಮಿಂಚುವ ಸಲಾಕೆಗೆ ವಿದ್ಯುತ್ ಸಂಪರ್ಕ ನೀಡಿದಾಗ ಅದು ಮಿಂಚುವುದರೊಂದಿಗೆ ಅದರ ಸಂಪರ್ಕದಲ್ಲಿದ್ದ ಗಂಟೆ ಸದ್ದು ಮಾಡಿತು. ಮುಂದೆ ಈತ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದ.

1659: ಮೊಘಲ್ ದೊರೆ ಔರಂಗಜೇಬ್ ಸಿಂಹಾಸನವನ್ನು ಏರಿದ. ಆತ 1659ರ ಮೇ ತಿಂಗಳಲ್ಲಿ ದೆಹಲಿ ಪ್ರವೇಶಿಸಿದ. ಆತನ ದೆಹಲಿ ಪ್ರವೇಶದ ಸಂಭ್ರಮಾಚರಣೆ ಮೇ 22ರಂದು ಆರಂಭವಾಗಿ ಆಗಸ್ಟ್ 29ರವರೆಗೆ 14 ವಾರಗಳ ಕಾಲ ನಡೆಯಿತು.
1215: ಸರ್ರೆಯ ರನ್ನಿಮೇಡ್ ನಲ್ಲಿ ದೊರೆ ಕಾನ್ `ಮ್ಯಾಗ್ನಕಾರ್ಟ'ಕ್ಕೆ ಸಹಿ ಮಾಡಿದ. ಇದು ರಾಜಕೀಯ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಸ್ಥಾಪನೆಗೆ ನಾಂದಿ ಹಾಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement