ಗ್ರಾಹಕರ ಸುಖ-ದುಃಖ

My Blog List

Thursday, November 14, 2019

ಮಹಾರಾಷ್ಟ್ರ ಬಿಕ್ಕಟ್ಟು: ಮೌನ ಮುರಿದ ಅಮಿತ್ ಶಾ

ಮಹಾರಾಷ್ಟ್ರ ಬಿಕ್ಕಟ್ಟು: ಮೌನ ಮುರಿದ ಅಮಿತ್ ಶಾ
ಸಂಖ್ಯಾಬಲ ಉಳ್ಳ ಪಕ್ಷ ಈಗಲೂ ರಾಜ್ಯಪಾಲರನ್ನು ಭೇಟಿ ಮಾಡಬಹುದು
ನವದೆಹಲಿ: ಮಹಾರಾಷ್ಟ್ರದ ಸರ್ಕಾರ ರಚನೆ ಬಿಕ್ಕಟ್ಟಿನ ಬಗ್ಗೆ 2019 ನವೆಂಬರ್ 13ರ ಬುಧವಾರ ಇದೇ ಮೊದಲ ಬಾರಿಗೆ ತಮ್ಮ ಮೌನವನ್ನು ಮುರಿದ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ’ಸಂಖ್ಯಾ ಬಲವುಳ್ಳ ಯಾವುದೇ ಪಕ್ಷ ಈಗಲೂ ರಾಜ್ಯಪಾಲರನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ಇದಕ್ಕೆ ಮುನ್ನ, ಯಾವುದೇ ರಾಜ್ಯವೂ ಸರ್ಕಾರ ರಚನೆಗೆ ಇಷ್ಟೊಂದು ಕಾಲಾವಕಾಶ ನೀಡಿರಲಿಲ್ಲ. ಮಹಾರಾಷ್ಟ್ರದಲ್ಲಿ ೧೮ ದಿನಗಳನ್ನು ನೀಡಲಾಯಿತು. ವಿಧಾನಸಭೆಯ ಅವಧಿ ಮುಗಿದ ಬಳಿಕ ಮಾತ್ರವೇ ರಾಜ್ಯಪಾಲರು ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಶಿವಸೇನೆ, ಇಲ್ಲವೇ ಕಾಂಗ್ರೆಸ್-ಎನ್‌ಸಿಪಿ ಅಥವಾ ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ ಎಂದು ಗೃಹ ಸಚಿವರು ನುಡಿದರು.

ತಮ್ಮ ಪಕ್ಷ ಮತ್ತು ಶಿವಸೇನೆಯ ಮಧ್ಯೆ ಉಂಟಾದ ಬಿರುಕು ರಾಜ್ಯದಲ್ಲಿ 2019 ನವೆಂಬರ್ 12ರ ಮಂಗಳವಾರ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಕಾರಣವಾಯಿತು ಎಂದು ಬಿಜೆಪಿ ನಾಯಕ ಹೇಳಿದರು.
ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬುದು ಶಿವಸೇನೆಯ ಹೊಸ ಬೇಡಿಕೆಯಾಗಿದ್ದು ಅದು ಭಾರತೀಯ ಜನತಾ ಪಕ್ಷಕ್ಕೆ ಸ್ವೀಕಾರಾರ್ಹವಾಗಿರಲಿಲ್ಲ ಎಂದು ಅಮಿತ್ ಶಾ ಸ್ಪಷ್ಟ ಪಡಿಸಿದರು.

ಶಿವಸೇನೆಯು ಈ ವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಿಂದ ತನ್ನ ಏಕೈಕ ಸಚಿವ ಅರವಿಂದ ಸಾವಂತ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಮಹಾರಾಷ್ಟ್ರದಲ್ಲಿ ಉಭಯ ಪಕ್ಷಗಳ ಮೈತ್ರಿ ಮುರಿದುದರ ಸೂಚನೆ ನೀಡಿತ್ತು.

ಆ ಬಳಿಕ ಶಿವಸೇನೆಯು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಜೊತೆಗೆ ಸರ್ಕಾರ ರಚನೆಯ ನಿಟ್ಟಿನಲ್ಲಿ ಮೈತ್ರಿಕೂಟ ರಚಿಸಲು ತೀವ್ರ ಮಾತುಕತೆಗಳನ್ನು ನಡೆಸುತ್ತಿದೆ. ಆದಾಗ್ಯೂ ತನ್ನ ಮಾಜಿ ಮಿತ್ರ ಪಕ್ಷ ಬಿಜೆಪಿಯತ್ತ ವಾಗ್ಬಾಣಗಳನ್ನು ಬಿಡುವುದನ್ನು ಶಿವಸೇನೆ ನಿಲ್ಲಿಸಿಲ್ಲ.

ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಉದ್ಧವ್ ಠಾಕ್ರೆ ಅವರು ’ಮುಖ್ಯಮಂತ್ರಿ ಸ್ಥಾನವನ್ನು  ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು ಎಂಬುದಾಗಿ ತಾವು ಪ್ರತಿಪಾದಿಸುತ್ತಿರುವುದಕ್ಕಾಗಿ ತಮ್ಮನ್ನು ಸುಳ್ಳುಗಾರ ಎಂಬುದಾಗಿ ಬಿಂಬಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ
ಎಂದು ದೂರುವ ಮೂಲಕ ವಿಷಯವನ್ನು ಪುನಃ ಪ್ರಸ್ತಾಪಿಸಿದ್ದರು.

ಠಾಕ್ರೆ ಅವರ ಮಾತಿಗೆ ಬುಧವಾರ ಎದಿರೇಟು ನೀಡಿದ ಅಮಿತ್ ಶಾ ’ಇದು ಸತ್ಯವಾಗಿದ್ದರೆ ಚುನಾವಣಾ ಪ್ರಚಾರ ಕಾಲದಲ್ಲಿ ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿದಾಗ ಶಿವಸೇನೆ ಎಂದೂ ಏಕೆ ಆಕ್ಷೇಪಿಸಲಿಲ್ಲ?’ ಎಂದು ಪ್ರಶ್ನಿಸಿದರು.

ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಹಲವಾರು ಬಾರಿ ಬಹಿರಂಗವಾಗಿ ನಮ್ಮ ಮೈತ್ರಿಕೂಟ ಗೆದ್ದರೆ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೆವು. ಯಾರೂ ಆಗ ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಲಿಲ್ಲ ಎಂದು ಶಾ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಹೇಳಿದರು.

ಈಗ ಅವರು ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಇದು ನಮಗೆ ಸ್ವೀಕಾರಾರ್ಹ ಅಲ್ಲ ಎಂದು ಶಾ ನುಡಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ’ಈಗ ಕೂಡಾ ಸಂಖ್ಯಾ ಬಲ ಇರುವವರು ರಾಜ್ಯಪಾಲರನ್ನು ಸಂಪರ್ಕಿಸಬಹುದು. ರಾಜ್ಯಪಾಲರು ಯಾರಿಗೂ ಅವಕಾಶ ನಿರಾಕರಿಸಿಲ್ಲ. ಅಪಾರ ಪ್ರತಿಭಾವಂತ ವಕೀಲರಾದ ಕಪಿಲ್ ಸಿಬಲ್‌ರಂತಹವರು ನಮಗೆ ಸರ್ಕಾರ ರಚಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಬಾಲಿಶ ವಾದಗಳನ್ನು ಮುಂದಿಡುತ್ತಿದ್ದಾರೆ
ಎಂದು ಅಮಿತ್ ಶಾ ನುಡಿದರು.

ನಾವು ಶಿವಸೇನೆಗೆ ದ್ರೋಹ ಬಗೆದಿಲ್ಲ ಎಂದು ಹೇಳಿದ ಕೇಂದ್ರ ಗೃಹ ಸಚಿವರು ’ಬಿಜೆಪಿಯು ತನ್ನ ಮಿತ್ರ ಪಕ್ಷಗಳ ಜೊತೆಗೆ ಸರ್ಕಾರ ರಚಿಸಲು ಬಯಸಿದೆ ಎಂದು ಹೇಳಿದರು. ನಮ್ಮ ಪಕ್ಷವು ಮಧ್ಯಂತರ ಚುನಾವಣೆಗೆ ಒಲವು ಹೊಂದಿಲ್ಲ ಎಂದು ಅವರು ನುಡಿದರು.

ಚುನಾವಣೆಗೆ ಮುನ್ನ ಅಧಿಕಾರದ ಸಮಾನ ಹಂಚಿಕೆ ಸೂತ್ರಕ್ಕೆ ಬಿಜೆಪಿ ಒಪ್ಪಿತ್ತು, ಆದರೆ ಬಳಿಕ ಬಿಜೆಪಿ ಅದರಿಂದ ಹಿಂದೆ ಸರಿಯಿತು ಎಂದು ಶಿವಸೇನೆ ಆಪಾದಿಸಿತ್ತು.

ಪ್ರತಿಕ್ರಿಯೆಗೆ ಶಿವಸೇನೆ ನಕಾರ: ಈ ಮಧ್ಯೆ, ಅಮಿತ್ ಶಾ ಅವರ ಹೇಳಿಕೆಗೆ ಈ ಹಂತದಲ್ಲಿ ಪ್ರತಿಕ್ರಿಯಿಸಲು ಶಿವಸೇನೆ ನಿರಾಕರಿಸಿದೆ. ’ತತ್ ಕ್ಷಣಕ್ಕೆ ಹೇಳಲು ಏನೂ ಇಲ್ಲ ಎಂದು ಶಿವಸೇನೆ ಮೂಲಗಳು ಹೇಳಿವೆ.

No comments:

Advertisement