'ಅಣ್ಣ
ಸಾಯುತ್ತಿದ್ದೇನೆ...’ ದೆಹಲಿ ಅಗ್ನಿದುರಂತ
ಸಂತ್ರಸ್ಥನ ಕೊನೆಯ ಫೋನ್...
ಸಂತ್ರಸ್ಥನ ಕೊನೆಯ ಫೋನ್...
ನವದೆಹಲಿ: ದೆಹಲಿಯ ಕಾರ್ಖಾನೆಯಲ್ಲಿ ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರಿಗೆ ತಪ್ಪಿಸಿಕೊಳ್ಳಲು ಅವಕಾಶವನ್ನೇ ನೀಡದ, 2019 ಡಿಸೆಂಬರ್ 08ರ ಭಾನುವಾರ ನಸುಕಿನ ಭಾರೀ ಅಗ್ನಿ ದುರಂತದಲ್ಲಿ ಸಿಕ್ಕಿಹಾಕಿಕೊಂಡ ೩೦ರ ಹರೆಯದ ಉತ್ತರ ಪ್ರದೇಶದ ಕಾರ್ಮಿಕನೊಬ್ಬ ತನ್ನ ಸಹೋದರನಿಗೆ ಕೊನೆಯ ದೂರವಾಣಿ ಕರೆ ಮಾಡಿ ’ಮನೆಯ ಬಗ್ಗೆ ಕಾಳಜಿ ವಹಿಸು’ ಎಂಬುದಾಗಿ ಮನವಿ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿತು.
ಮನ
ಕಲಕುವ ಈ ಆಡಿಯೋದಲ್ಲಿ ಉತ್ತರ
ಪ್ರದೇಶದ ಬಿಜ್ನೋರಿನ ಮುಷರಫ್ ಅಲಿ ಎಂಬುದಾಗಿ ಗುರುತಿಸಲಾಗಿರುವ ವ್ಯಕ್ತಿ ತನ್ನ ಸಹೋದರನಿಗೆ ತನ್ನ ಸಾವಿನ ಬಳಿಕ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾನೆ.
ದೆಹಲಿಯ
ಅನಾಜ್ ಮಂಡಿ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಈ ಅಗ್ನಿ ದುರಂತದಲ್ಲಿ
೪೩ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
‘ಅಣ್ಣ,
ನಾನು ಸಾಯುತ್ತಾ ಇದ್ದೇನೆ. ಸುತ್ತ ಮುತ್ತ ಬೆಂಕಿ ಹಬ್ಬಿಕೊಂಡಿದೆ. ಅಣ್ಣ, ದಯಮಾಡಿ ನಾಳೆ ದೆಹಲಿಗೆ ಬಂದು ನನ್ನನ್ನು ತೆಗೆದುಕೊಂಡು ಹೋಗು. ಇಲ್ಲಿ ಎಲ್ಲೆಲ್ಲೂ ಬೆಂಕಿ ತುಂಬಿಕೊಂಡಿದೆ. ತಪ್ಪಿಸಿಕೊಳ್ಳಲು ದಾರಿಯೇ ಇಲ್ಲ’ ಎಂದು ಅಲಿ ತನ್ನ ಸಹೋದರಿಗೆ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.
‘ನಾನು
ಇನ್ನು ಬದುಕುವುದಿಲ್ಲ. ದಯಮಾಡಿ ನನ್ನ ಕುಟುಂಬದ ಬಗ್ಗೆ ಕಾಳಜಿ ವಹಿಸು ಅಣ್ಣ... ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ.. ನಾಳೆ ಬಾ ಮತ್ತು ನನ್ನನ್ನು
ನಿನ್ನ ಜೊತೆಗೆ ತೆಗೆದುಕೊಂಡು ಹೋಗು, ಕುಟುಂಬದ ಬಗ್ಗೆ ಕಾಳಜಿ ವಹಿಸು’ ಎಂದು ಆತ ಮತ್ತೆ ಮತ್ತೆ
ಹೇಳಿದ್ದಾನೆ.
ಈ
ಸುದ್ದಿಯನ್ನು ಮೊದಲು ಮನೆಯಲ್ಲಿನ ಹಿರಿಯರಿಗೆ ತಿಳಿಸು ಎಂದೂ ಅಲಿ ತನ್ನ ಸಹೋದರನಿಗೆ ಹೇಳಿದ್ದಾನೆ.
ಆತನ
ಸಹೋದರ ’ಹೇಗಾದರೂ ಮಾಡಿ ಪಾರಾಗು’ ಎಂದು ಆತನಿಗೆ ಸೂಚಿಸಿದಾಗ ’ಅಬ್ ಕೋಯಿ ರಾಸ್ತಾ ನಹೀ ಬಚಾ’
(ಈಗ ಯಾವ ದಾರಿಯೂ ಉಳಿದಿಲ್ಲ)’ ಎಂದು ಅಲಿ ಹೇಳಿದ್ದೂ ಆಡಿಯೋದಲ್ಲಿ ದಾಖಲಾಗಿದೆ.
‘ನಾನು
ಸಾಯುತ್ತಿದ್ದೇನೆ ಅಣ್ಣ, ಕೇವಲ ಮೂರ್ನಾಲ್ಕು ನಿಮಿಷಗಳು ಉಳಿದಿವೆ... ನಾನು ಸತ್ತರೂ, ನಿನ್ನ ಜೊತೆಗೇ ಇರುತ್ತೇನೆ’
ಎಂದೂ ಆತ ಹೇಳಿದ್ದಾನೆ.
ಬೆಂಕಿಯ
ಕೆನ್ನಾಲಗೆಗಳ ಮಧ್ಯೆ ಸಿಕ್ಕಿಹಾಕಿಕೊಂಡ ಅಲಿ, ತನ್ನ ಪತ್ನಿ, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾನೆ. ಆತ ಕಳೆದ ನಾಲ್ಕು
ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ನಸುಕಿನ
೫.೨೨ ಗಂಟೆಗೆ ವ್ಯಾಪಿಸಿಕೊಂಡ ಕಿಚ್ಚಿನ
ಮಧ್ಯೆ ಸಿಕ್ಕಿ ಹಾಕಿಕೊಂಡ ಬಹುತೇಕ ಮಂದಿ ಹೊಗೆಯಿಂದಾಗಿ ಉಸಿರುಕಟ್ಟಿ ಅಸು ನೀಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದರು.
No comments:
Post a Comment