Friday, December 27, 2019

ಆಂಧ್ರಪ್ರದೇಶ: ತೆಲುಗುದೇಶಂ ನಾಯಕರಿಗೆ ಗೃಹ ಬಂಧನ

ಆಂಧ್ರಪ್ರದೇಶ: ತೆಲುಗುದೇಶಂ ನಾಯಕರಿಗೆ ಗೃಹ ಬಂಧನ
ಮೂರು ರಾಜಧಾನಿ ಸೃಷ್ಟಿ: ಇಂದು ಜಗನ್ ಸಂಪುಟ ಸಭೆ
ಹೈದರಾಬಾದ್:  ರಾಜ್ಯದ ಆಡಳಿತಾತ್ಮಕ (ಕಾರ್ಯಾಂಗ) ರಾಜಧಾನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ಅನುಮೋದನೆ ನೀಡುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು 2019 ಡಿಸೆಂಬರ್ 27ರ ಶುಕ್ರವಾರ ಸಚಿವ ಸಂಪುಟ ಸಭೆ ಕರೆದಿದ್ದು, ಮುಂಜಾಗರೂಕತಾ ಕ್ರಮವಾಗಿ ಹಿರಿಯ ತೆಲುಗುದೇಶಂ ಪಕ್ಷದ (ಟಿಡಿಪಿ) ನಾಯಕರನ್ನು 2019 ಡಿಸೆಂಬರ್ 26ರ ಗುರುವಾರ  ಗೃಹ ಬಂಧನದಲ್ಲಿ ಇರಿಸಲಾಯಿತು ಮತ್ತು ಅಮರಾವತಿಯಲ್ಲಿ ಯಾವುದೇ ಪ್ರತಿಭಟನೆ ನಿಯಂತ್ರಿಸಲು ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.

ಆಡಳಿತಾತ್ಮಕ ರಾಜಧಾನಿಯನ್ನು ವಿಶಾಖಪಟ್ಟಣ, ಶಾಸಕಾಂಗ ರಾಜಧಾನಿಯನ್ನು ಅಮರಾವತಿ ಮತ್ತು ನ್ಯಾಯಾಂಗ ರಾಜಧಾನಿಯನ್ನು ಕರ್ನೂಲಿನಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿಯವರು ಕಳೆದ ವಾರ ವಿಧಾನಸಭೆಯಲ್ಲಿ ಘೋಷಿಸಿದಂದಿನಿಂದ ಇಡೀ ರಾಜಧಾನಿ ಪ್ರದೇಶ ಅಸಮಾಧಾನದಿಂದ ಕುದಿಯುತ್ತಿತ್ತು.

 ಹಿರಿಯ ಟಿಡಿಪಿ ನಾಯಕರಾದ ವಿಜಯವಾಡದ ಸಂಸತ್ ಸದಸ್ಯ ಕೇಸಿನೇನಿ ಶ್ರೀನಿವಾಸ್ ಯಾನೆ ನಾನಿ ಮತ್ತು ವಿಧಾನಪರಿಷತ್ ಸದಸ್ಯ ಬುದ್ಧ ವೆಂಕಣ್ಣ ಅವರು ರಾಜಧಾನಿ ಸ್ಥಳಾಂತರದ ವಿರುದ್ಧ ೨೯ ಗ್ರಾಮಗಳ ರೈತರು ಸಂಘಟಿಸಿರುವಮಹಾ ಧರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುರುವಾರ ಅಮರಾವತಿಗೆ ಹೊರಟಿದ್ದಾಗ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಯಿತು.

ತೆಲುಗುದೇಶಂ ಸಂಸತ್ ಸದಸ್ಯರು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಲು ಕೋರಲಿದ್ದಾರೆ ಎಂದು ಕೇಸಿನೇನಿ ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಸಚಿವ ಸಂಪುಟವು ಪ್ರಸ್ತುತ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಕೈಗೊಂಡರೆ ಡಿಸೆಂಬರ್ ೨೮ರಂದು ರಾಜ್ಯವ್ಯಾಪಿ ಬಂದ್ ಆಚರಿಸಲು ಕೂಡಾ ತೆಲುಗುದೇಶಂ ಪಕ್ಷವು ಕರೆ ಕೊಟ್ಟಿದೆ. ತಜ್ಞರ ಸಮಿತಿಯೊಂದು ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಸೃಷ್ಟಿಸುವ ಬಗ್ಗೆ ಶಿಫಾರಸು ಮಾಡಿದೆ.

ನಾವು ಸಚಿವ ಸಂಪುಟದ ನಿರ್ಧಾರಕ್ಕಾಗಿ ಕಾಯುತ್ತೇವೆ. ಆಡಳಿತ ಅಥವಾ ಕಾರ್ಯಾಂಗ ರಾಜಧಾನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವ ತನ್ನ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪುಟ ನಿರ್ಧರಿಸಿದರೆ, ನಾವು ಶನಿವಾರ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ಕೊಡಬೇಕಾಗುತ್ತದೆಎಂದು ಹಿರಿಯ ತೆಲುಗುದೇಶಂ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಪ್ರತಿಪತಿ ಪುಲ್ಲ ರಾವ್ ಹೇಳಿದರು.

ಮುಂಜಾಗರೂಕತಾ ಕ್ರಮವಾಗಿ ಇಡೀ ರಾಜಧಾನಿ ಪ್ರದೇಶದಲ್ಲಿ ಗುರುವಾರ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಪೊಲೀಸರು ಹೊರಗಿನವರಿಗೆ ಅಮರಾವತಿ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ.

ಥುಲ್ಲೂರು ಪೊಲೀಸರು  ಯಾರೇ ಹೊಸ ವ್ಯಕ್ತಿಗಳಿಗೆ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡದಂತೆ ಎಲ್ಲ ಗ್ರಾಮಸ್ಥರಿಗೂ ಸುತ್ತೋಲೆ ಕಳುಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಧಕ್ಕೆಯಾಗುವಂತಹ ಯಾವುದೇ ಹಿಂಸಾತ್ಮಕ ಚಳವಳಿಗೆ ಇಳಿಯದಂತೆಯೂ ಪೊಲೀಸರು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

ಅಮರಾವತಿ ಪರಿರಕ್ಷಣಾ ಸಮಿತಿ ಹೆಸರಿನಲ್ಲಿ ಜಂಟಿ ಕ್ರಿಯಾ ಸಮಿತಿಯೊಂದನ್ನು ರಚಿಸಿರುವ ರಾಜಧಾನಿ ಪ್ರದೇಶದ ರೈತರು ತಮ್ಮ ಧರಣಿಯನ್ನು ಸಚಿವಾಲಯದ ಸಮೀಪದ ಮಂಡಪಂ ಗ್ರಾಮದಿಂದ ಉದ್ದಂಡರಾಯುನಿಪಾಲೆಮ್ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ. ಗ್ರಾಮದಲ್ಲಿಯೇ ೨೦೧೫ರ ಅಕ್ಟೋಬರ್ ೨೩ರಂದು ಪ್ರಧಾನಿಯವರು ನೂತನ ರಾಜಧಾನಿಗಾಗಿ ಶಂಕುಸ್ಥಾಪನೆ ನೆರವೇರಿಸಿದ್ದರು.

ನಾವು ಯಾವುದೇ ಹಿಂಸಾಕೃತ್ಯ ಎಸಗುವುದಿಲ್ಲ, ಶಾಂತಿಯುತವಾಗಿ ಪ್ರದರ್ಶನ ನಡೆಸುತ್ತೇವೆ. ಆದರೆ ಸಂಪಟವು ಮೂರು ರಾಜಧಾನಿಗಳ ಸೃಷ್ಟಿಗೆ ನಿರ್ಧಾರ ಕೈಗೊಂಡರೆ ನಾವು ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಾಗುತ್ತದೆ   ಎಂದು ಜಂಟಿ ಕ್ರಿಯಾ ಸಮಿತಿ ನಾಯಕ ಕೆ ಅನಿಲ್ ಕುಮಾರ್ ಹೇಳಿದರು.

ಜಂಟಿ ಕ್ರಿಯಾ ಸಮಿತಿ ನಾಯಕರು ರಾಜ್ಯ ಗೃಹ ಸಚಿವ ಎಂ. ಸುಚರಿತ ಮತ್ತು ರಾಜ್ಯಪಾಲ ಬಿಸ್ವಾಸಭೂಷಣ್ ಹರಿಚಂದನ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕಾರ್ಯಾಂಗ ರಾಜಧಾನಿಯನ್ನು ಅಮರವತಿಯಲ್ಲಿಯೇ ಉಳಿಸಬೇಕು ಎಂದು ಕೋರಿದ್ದಾರೆ.

ಮಧ್ಯೆ ವೈಎಸ್ಆರ್ಸಿಪಿ ಪ್ರಧಾನ  ಕಾರ್ಯದರ್ಶಿ ಮತ್ತು ಸಂಸದೀಯ ಪಕ್ಷದ ನಾಯಕ ವಿ. ವಿಜಯ ಸಾಯಿ ರೆಡ್ಡಿ ಅವರು ವರದಿಗಾರರ ಜೊತೆ ಮಾತನಾಡುತ್ತಾ ರಾಜಧಾನಿಯನ್ನು ಅಮರಾವತಿಯಿಂದ ವಿಜಯವಾಡಕ್ಕೆ ಸ್ಥಳಾಂತರಿಸುವುದು ಅಂತಿಮವಾಗಿದ್ದು ಸಂಪುಟವು ಶುಕ್ರವಾರವೇ ಅದಕ್ಕೆ ಅನುಮೋದನೆ ನೀಡಲಿದೆ ಎಂದು ಹೇಳಿದ್ದಾರೆ.

ಮುಂಬರುವ
ದಿನಗಳಲ್ಲಿ ಎಲ್ಲ ಆಡಳಿತಾತ್ಮಕ ಕೆಲಸಗಳು ವಿಶಾಖಪಟ್ಟಣದಿಂದಲೇ ಆರಂಭವಾಗುವುವು ಎಂದು ಅವರು ನುಡಿದರು.

ವಿಶಾಖಪಟ್ಟಣದಲ್ಲಿ
ಡಿಸೆಂಬರ್ ೨೮ರಂದು ಮುಖ್ಯಮಂತ್ರಿಯವರಿಗೆ ವಿಜೃಂಭಣೆಯ ಸ್ವಾಗತ ನೀಡಲು ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಯವರು ವಿಶಾಖ ಉತ್ಸವದಲ್ಲಿ ಪಾಲ್ಗೊಳ್ಳಲು ಮತ್ತು ೧೨೯೦ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸುವ ಸಲುವಾಗಿ ವಿಶಾಖಪಟ್ಟಣಕ್ಕೆ ಬರುತ್ತಿದ್ದಾರೆ ಎಂದು ರೆಡ್ಡಿ ಹೇಳಿದರು.

No comments:

Advertisement