Saturday, February 22, 2020

ಮಹಾ ಮೃತ್ಯುಂಜಯ ಮಂತ್ರ: ಏನಿದರ ಅರ್ಥ?

ಮಹಾ ಮೃತ್ಯುಂಜಯ ಮಂತ್ರ: ಏನಿದರ ಅರ್ಥ?
ಶಿವರಾತ್ರಿಗೆ ಒಂದು ಜಿಜ್ಞಾಸೆ
2020 ಫೆಬ್ರುವರಿ 21ರ ಶುಕ್ರವಾರದ ಈದಿನ ಮಹಾಶಿವರಾತ್ರಿ.  ಶಿವನ ಆರಾಧನೆ ಮಾಡುತ್ತಾ ಜಾಗರಣೆ ಮಾಡುವ ದಿನ. ಬಹುತೇಕರು  ಈ ಸಂದರ್ಭದಲ್ಲಿ ಮೃತ್ಯುಂಜಯ ಮಹಾ ಮಂತ್ರವೂ ಸೇರಿದಂತೆ ವಿವಿಧ ಮಂತ್ರ, ಸ್ತ್ರೋತ್ರಗಳ ಸಹಿತವಾಗಿ ಶಿವನ ಜಪ ಮಾಡುತ್ತಾ ಇಡೀ ರಾತ್ರಿ ಕಳೆಯುತ್ತಾರೆ.

ಇಂತಹ ಸಂದರ್ಭದಲ್ಲಿ ವಾಟ್ಸಪ್ಪಿನಲ್ಲಿ ಮಹಾಮೃತ್ಯುಂಜಯ ಮಂತ್ರದ ಬಗ್ಗೆ  ವಿ.ಎಸ್. ಮಣಿ ಎಂಬವರು ಆಸಕ್ತಿದಾಯಕವಾದ ಬರಹವೊಂದನ್ನು ಬರೆದುದು ಗಮನ ಸೆಳೆಯಿತು.

ಮಹಾಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಪಠನೆ ಮಾಡುವ ಅಭ್ಯಾಸವನ್ನು ಹಲವರು  ರೂಢಿಸಿಕೊಂಡಿದ್ದಾರೆ. ಅದನ್ನು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ.

ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ ಎನ್ನಲಾಗುತ್ತದೆ.

ಅದರ ಅರ್ಥ ಏನು ಎಂಬುದನ್ನು ಬರಹದಲ್ಲಿ  ಮಣಿಯವರು ವಿವರಿಸಿದ್ದಾರೆ. ಅದು ಅರ್ಥಪೂರ್ಣ ಎನಿಸಿದ್ದರಿಂದ ಇಲ್ಲಿ ಅದನ್ನು ಪುನರಾವರ್ತನೆ ಮಾಡಲಾಗಿದೆ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|
ಊರ್ವಾರು ಕಮಿವ ಬಂಧನಾತ್ಮೃತ್ಯೋಮೃಕ್ಷೀಯ ಮಾಮೃತಾತ್‌||

||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಬಂಧ  ಹೇಗೆ ಎಂಬುದನ್ನು ತಿಳಿಯೋಣ.||

ಓಂ = ಪ್ರಣವ 🕉
ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ...
ಯಜಾಮಹೇ = ಪೂಜನೀಯನೇ....
ಸುಗಂಧಿಂ = ಸುಗಂಧದಿಂದ ಕೂಡಿದ,
ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ
ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ರೀತಿಯಲ್ಲಿ.....
ಇಲ್ಲಿ ಸ್ವಲ್ಪ ಹೆಚ್ಚಿನ ವಿವರಣೆಯು ಅಗತ್ಯವಿದೆ. ವಿವರಣೆಯಂತು ಅದ್ಭುತ.

ಪರಶಿವನೇ......
ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಲೌಕಿಕ ಜಗತ್ತಿನೊಂದಿಗಿನ ಬಂಧನವು ಸಾಕು ಎಂಬ ಅಧ್ಬುತ  ಅರ್ಥ ಇಲ್ಲಿದೆ.
| ಅದು ಹೇಗೆಂಬುದನ್ನು ನೋಡೋಣ |

ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ  ಸೌತೆಕಾಯಿಗೂ  ಕಾಣುವ ವ್ಯತ್ಯಾಸ ಬಗ್ಗೆ ಅದೂ ಸೂಕ್ಷ್ಮವಾಗಿ ಗಮನಿಸಿದಾಗ......!

ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಬರುವುದಿಲ್ಲ, ಅದು ಗಿಡ(ಬಳ್ಳಿ)ಯೊಂದಿಗೆ ಗಿಡದಲ್ಲೇ ಉಳಿಯುತ್ತದೆ. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿಸಿದ್ದೇವೆ. ಗಿಡದ ಬಳ್ಳಿಯಿಂದ ಉತ್ಪತ್ತಿಯಾದ ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ..!

ಕಾರಣ....!  ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ  ಸಂಬಂಧ  ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸು ಸಮಯದಲ್ಲಿ, ಕಾಯಿಯೊಂದಿಗೆ  ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ಅಧ್ಬುತವಾದ ವಿವರಣೆ.
ಮೃತ್ಯುಂಜಯ ಮಂತ್ರವನ್ನು ಪ್ರತಿದಿನವೂ ಹೇಳುವುದು ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಕಾರಣಕ್ಕಾಗಿ ಎಂಬುದು ಇದರ ಅರ್ಥ.

ಇದನ್ನೇ ಗುರು ದ್ರೋಣಾಚಾರ್ಯರೂ ಸಹಾ....
"ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ, ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಲಂ "  ಎಂದು ತಿಳಿಸಿದ್ದು.

ಮಾನವರಾಗಿ ಜನಿಸಿದ ನಾವು ಲೌಕಿಕ ಜಗತ್ತಿನೊಂದಿಗೆ ಅತಿ ಸೂಕ್ಷ್ಮವಾದ, ಕನಿಷ್ಠ ಮೋಹದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಗಟ್ಟಿಯಾದ ಬಂಧನಗಳಿಗೆ ಅಂಟಿಕೊಂಡಾಗ, ಅನುಭವಿಸುವ ನೋವೇ ಹೆಚ್ಚು,

The less attached YOU are, the more peaceful YOU are ಎನ್ನುವುದನ್ನು  ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಸರಳವಾಗಿ ವಿವರಿಸಿದೆ.
ಇಂದು ಮಹಾಶಿವರಾತ್ರಿ, ಪರಶಿವನನ್ನು ನೆನೆಯಲು ಸೂಕ್ತವಾದ ದಿನ..

"ಹರ ಹರ ಮಹಾದೇವ, ಶಂಭೋ ಶಂಕರ."

ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

2 comments:

Unknown said...

ಉತ್ತಮ ವಿವರಣೆ

Unknown said...

ಇದನ್ನು ಓದಿದಾಗ ನನ್ನಲ್ಲಿ ಮೂಡಿಬಂದ ವಿಚಾರ ಹೀಗಿದೆ.
Soutekaiyalli ನೀರಿನಾಂಶ ಜಾಸ್ತಿ ಇರವುದರಿಂದ ತೊಟ್ಟು ಗಿಡದಲ್ಲಿ ಒಲಿಯುತ್ತದೆ. ನಿಮ್ಹ ವಿವರಣೆಯು ತುಂಬಾ ಸಹಾಯವಾಯಿತು. ಧನ್ಯವಾದಗಳು.

Advertisement